ಸೋನಿಯಾ ಅಮೇರಿಕೆಯಿಂದ ವಾಪಸಾಗಿ ಲೋಕಸಭೆಯ ಕಲಾಪಗಳಲ್ಲಿ ಮತ್ತು ತಮ್ಮ ಪಕ್ಷದ ಬೈಠಕ್ ವೊಂದರಲ್ಲಿ ಭಾಗಿಯಾದರು ಎಂದು ವರದಿ. ತಮ್ಮ ತಾಯಿಯವರ ಅನಾರೋಗ್ಯದ ಕಾರಣ ಅವರ ಶುಶ್ರೂಷೆಗೆಂದು ಅಮೆರಿಕೆಗೆ ಹೋಗಿದ್ದರು ಸೋನಿಯಾ ಗಾಂಧೀ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದಾಗ ಇಟಲಿ ದೇಶದ ಟೀವೀ ಚಾನಲ್ ನ ತಂಡ ಅವರ ಸಂದರ್ಶನಕ್ಕೆಂದು ದಿಲ್ಲಿಗೆ ಬಂದಿತ್ತು. ಸಂದರ್ಶಕ ಇಟಾಲಿಯನ್ ಭಾಷೆಯಲ್ಲಿ ಪ್ರಶ್ನೆ ಕೇಳಲು ಆರಂಭಿಸಿದಾಗ ಸೋನಿಯಾ ನನಗೆ ಇಟಾಲಿಯನ್ ಭಾಷೆ ಬರುವುದಿಲ್ಲ, ದಶಕಗಳ ಹಿಂದೆಯೇ ಬಳಸುವುದನ್ನು ನಿಲ್ಲಿಸಿದ್ದರಿಂದ ಇಟಾಲಿಯನ್ ಭಾಷೆಯಲ್ಲಿ ಮಾತನಾಡಲಾಗದು ಎಂದು ಹೇಳಿದ್ದರು. ಯಾರೇ ಆದರೂ, ಅದೆಷ್ಟೇ ದಶಕಗಳನ್ನು ತಮ್ಮ ಮಾತೃ ಭಾಷೆಯ ನಂಟಿನಿಂದ ದೂರ ಇದ್ದರೂ ತಮ್ಮ ಸ್ವಂತ ಭಾಷೆಯನ್ನೂ ಮರೆಯುವ ಪ್ರಶ್ನೆಯೇ ಇರುವುದಿಲ್ಲ. ಆದರೆ ತಮ್ಮನ್ನು ವಿದೇಶೀ ಮಹಿಳೆ ಎಂದು ಜರೆಯುತ್ತಿದ್ದ ವಿರೋಧ ಪಕ್ಷಗಳಿಗೆ ಹೆದರಿ ತಮ್ಮ ಮಾತೃ ಭಾಷೆಯನ್ನು ನಿರಾಕರಿಸುವಂತೆ ಅವರನ್ನು ಪ್ರೇರೇಪಿಸಿತು. ಹಾಗಾದರೆ ತಮ್ಮ ತಾಯಿಯ ಶುಶ್ರೂಷೆ ಗೆಂದು ಅಮೆರಿಕೆಗೆ ಹೋದ ಸೋನಿಯಾ ತಮ್ಮ ತಾಯಿಯೊಂದಿಗೆ ಯಾವ ಭಾಷೆಯಲ್ಲಿ ಮಾತನಾಡಿಸಿರಬೇಕು? ಏಕೆಂದರೆ ಬಹುತೇಕ ಇಟಾಲಿಯನ್ನರಿಗೆ ಆಂಗ್ಲ ಭಾಷೆ ಬರುವುದಿಲ್ಲ. ಆಂಗ್ಲ ಭಾಷೆಯೇ ಶ್ರೇಷ್ಠ ಎಂದು ತಮ್ಮ ತಮ್ಮ ಮಾತೃ ನುಡಿಗಳನ್ನು ಕಡೆಗಣಿಸಿ ತಮ್ಮ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡಲು ಪ್ರೋತ್ಸಾಹಿಸುವ ಪಾಲಕರಿಗೆ ಗೊತ್ತಿದೆಯೇ ಸಂಪೂರ್ಣ ಯೂರೋಪಿನಲ್ಲಿ ಆಂಗ್ಲ ಭಾಷೆಯಲ್ಲಿ ಮಾತನ್ನಾಡುವ, ವ್ಯವಹರಿಸುವ ದೇಶ ಒಂದೇ ಒಂದು ಎಂಬುದು?
ಒಬ್ಬ ಮಹಿಳೆ ಭಾರತೀಯ ಸಂಜಾತನನ್ನು ಪ್ರೀತಿಸಿ ಮದುವೆಯಾಗುತ್ತಾಳೆ, ಭಾರತೀಯ ಪೌರತ್ವ ಪಡೆದು ಇಲ್ಲಿನ ಸಂಸ್ಕೃತಿಗೆ ತಲೆಬಾಗಿ ಬದುಕನ್ನು ಸಾಗಿಸುತಾಳೆ. ಜನರ ಅಭೂತ ಪೂರ್ವ ಬೆಂಬಲದಿಂದ ಲಕ್ಷಾಂತರ ಮತಗಳಿಂದ ತನ್ನ ಪ್ರತಿಸ್ಪರ್ದಿಯನ್ನು ಪರಾಭವ ಗೊಳಿಸಿದ್ದು ಮಾತ್ರವಲ್ಲದೆ ತನ್ನ ನಾಯಕತ್ವದಲ್ಲಿ ಪಕ್ಷವೊಂದನ್ನು ಅಧಿಕಾರದ ಗದ್ದುಗೆಗೂ ಏರಿಸುತ್ತಾಳೆ. ಈ ರೀತಿಯ ಜನಮನ್ನಣೆ ಇದ್ದರೂ ಆಕೆ ದೇಶದ ಅತ್ಯುನ್ನತ ಹುದ್ದೆಗೆ ಅನರ್ಹಳಾಗುತ್ತಾಳೆ. ತನ್ನನ್ನು ಅತ್ಯುನ್ನತ ಸ್ಥಾನಕ್ಕೆ ಕೂರಲು ಬಿಡದ ಜನರಿಗೆ ಬೆದರಿ ತನ್ನ ಮಾತೃ ಭಾಷೆಯಲ್ಲಿ ತನಗೆ ಮಾತನಾಡಲು ಬರುವುದಿಲ್ಲ ಎಂದು ಹೇಳಿಕೆಯನ್ನು ಕೊಡುತ್ತಾಳೆ. ಒಬ್ಬ ವ್ಯಕ್ತಿಗೆ ತನ್ನ ಮಾತೃ ಭಾಷೆಯಲ್ಲಿ ಮಾತನಾಡಲು ಹೆದರುವಂಥ ಪರಿಸ್ಥಿತಿ ಸೃಷ್ಟಿಸುವ ವ್ಯವಸ್ಥೆ ಮತ್ತು ಅಸಹನೆಯಿಂದ ನಾವು ವಿಶ್ವಕ್ಕೆ ನೀಡುತ್ತಿರುವ ಸಂದೇಶವಾದರೂ ಏನು?
ಜಗತ್ತಿನ ಯಾವ ಯಾವ ದೇಶಗಳಲ್ಲಿ ವಿದೇಶೀ ಸಂಜಾತ ವ್ಯಕ್ತಿಯು ಆ ದೇಶದ ಅತ್ಯುನ್ನತ ಸ್ಥಾನವನ್ನು
ಪಡೆಯುವ ವ್ಯವಸ್ಥೆಯಿದೆ?
ನೀವೇ ಹೇಳಿದಂತೆ, ವ್ಯಕ್ತಿಯು ತನ್ನ ತಾಯ್ನುಡಿಯನ್ನು ಮರೆಯುವುದು ಅಸಾಧ್ಯ.
ಅದೇ ರೀತಿ, ಆತನಿಗೆ ತನ್ನ ತಾಯಿ ದೇಶದ ಮೇಲಿನ ಪ್ರೀತಿಯೂ ಕಡಿಮೆಯಾಗುವುದಿಲ್ಲ.
ಒಂದು ದೇಶದಲ್ಲಿದ್ದುಕೊಂಡು ಮತ್ತೊಂದು ದೇಶವನ್ನು ಪ್ರೀತಿಸುವುದು ಈ ದೇಶಕ್ಕೆ ಅಪಾಯ ಎನಿಸುವುದಿಲ್ಲವೇ?
ಅಕಸ್ಮಾತ್ ಆ ಇನ್ನೊಂದು ದೇಶ ಈ ದೇಶದ ಮೇಲೆ ಯುದ್ಧ ಮಾಡುವ ಪ್ರಸಂಗ ಬಂದರೆ,
ಈ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿ ತನ್ನ ಮಾತೃದೇಶಕ್ಕೇ ಒಳಗೊಳಗೇ ಬೆಂಬಲ ನೀಡುವುದಿಲ್ಲವೆಂಬುದಕ್ಕೆ ಏನು ಖಾತ್ರಿ?
1962ರಲ್ಲಿ ನಮ್ಮ ಮೇಲೆ ಚೀನಾ ಯುದ್ಧಕ್ಕೆ ಬಂದಾಗ, ಇಲ್ಲಿನ ಕಮ್ಯುನಿಸ್ಟರು ಚೀನಾ ಸೇನೆಯನ್ನು “ಮುಕ್ತಿ ಸೇನೆ” ಎಂದು ಕರೆದು ಸ್ವಾಗತಿಸಿದ್ದು ನಿಮಗೆ ತಿಳಿದಿದೆ ಎಂದು ಭಾವಿಸಿರುವೆ.
ಅಂದರೆ, ಹೊರ ದೇಶದ ಮೇಲೆ ಪ್ರೀತಿ, ಹೊರ ದೇಶದ ತತ್ವ-ಸಿದ್ಧಾಂತಗಳಿಗೆ ಬೆಂಬಲ, ಹೊರ ದೇಶದ ಪಕ್ಷಗಳಿಗೆ ಬೆಂಬಲ, ಇವೆಲ್ಲವೂ ಈ ದೇಶದ ಹಿತಕ್ಕೆ ಮುಳುವಾಗಬಹುದು……..
ಈ ದೇಶದ ಹಿತದ ದೃಷ್ಟಿಯಿಂದ “ವಿದೇಶೀ” ವ್ಯಕ್ತಿ ನಮ್ಮನ್ನಾಳುವುದು ಒಳ್ಳೆಯದಲ್ಲ.
ಇದೆಲ್ಲಾ ಪಕ್ಕಕ್ಕಿಡಿ. ಆ “ವಿದೇಶೀ” ವ್ಯಕ್ತಿಯೇ ಇಲ್ಲಿ ಆಳಬೇಕೆಂಬ ಹಟ ಏತಕ್ಕೆ?
ನಮ್ಮಲ್ಲಿರುವ ನೂರು ಕೋಟಿ ಜನರಲ್ಲಿ ಆ ಅರ್ಹತೆ ಇರುವ ಒಬ್ಬರೂ ಇಲ್ಲವೇ?
ಆ “ವಿದೇಶೀ” ವ್ಯಕ್ತಿಯನ್ನು ಆ ಸ್ಥಾನದಲ್ಲಿ ಕೂಡಿಸದಿರುವುದರಿಂದ ಆಗುವ ಹಾನಿಯಾದರೂ ಏನು?
ಒಂದು ಸಾವಿರ ವರ್ಷದ ವಿದೇಶೀ ಆಳ್ವಿಕೆಯಲ್ಲಿ ನಲುಗಿದ ನಂತರವೂ “ವಿದೇಶೀ” ವ್ಯಕ್ತಿಗಳನ್ನು ಕರೆದು ಆಳಲು
ಬಿಡುವುದು ನಾಚಿಕೆಯ ಸಂಗತಿ. ಅದರಲ್ಲೂ ವಿದ್ಯಾವಂತರಾದವರಿಗೂ ಈ ಅಪಾಯ ಅರಿವಾಗದಿರುವುದು ಈ ದೇಶದ ದೌರ್ಭಾಗ್ಯವಷ್ಟೇ!