ಭಾಷೆಗಳ ಅಧ್ಯಯನ ಒಂದು ಸೊಗಸಾದ ಹವ್ಯಾಸ. ತುಂಬಾ ಆಳವಾಗಿ ಹೋಗದೆ ಮೇಲ್ಮೆಯಲ್ಲೇ ಒಂದೊಂದು ಭಾಷೆಗಳ ವೈವಿಧ್ಯತೆ ನೋಡಿದಾಗ ವಿಸ್ಮಯದೊಂದಿಗೆ ಒಂದಿಷ್ಟು ನಗಲು ಮೆಟೀರಿಯಲ್ ಸಹ ಸಿಗುತ್ತದೆ. ಹಾಗೊಂದು ಭಾಷೆಯ ನಂಟು ಬೆಳೆಯಿತು ನನ್ನ ಮರಳುಗಾಡಿನ ಬದುಕಿನಲ್ಲಿ. ಅದೇ ಅರಬ್ಬೀ ಭಾಷೆ. ಶತಮಾನಗಳ ಇತಹಾಸ ಇರುವ, ವಿಶ್ವದ ೨೨ ಕೋಟಿಗೂ ಹೆಚ್ಚು ಜನರು ಮಾತನಾಡುವ ಅರಬ್ಬೀ ಭಾಷೆಯ ಲಿಪಿ “ಬಲದಿಂದ ಎಡಕ್ಕೆ” ಬರೆಯಲ್ಪಡುತ್ತದೆ. ಈ ರೀತಿ ಬರೆಯಲ್ಪಡುವ ಮತ್ತೊಂದು ಭಾಷೆ ಎಂದರೆ ಯಹೂದಿಗಳ “ಹೀಬ್ರೂ”.
ಅರಬ್ಬೀ ಭಾಷೆಯಲ್ಲಿ “ಪ” ಅಥವಾ “P” ಅಕ್ಷರ ಇಲ್ಲ. ಆಂಗ್ಲ ಭಾಷೆಯಲ್ಲಿ ಒಂದು ಗಾದೆ ಇದೆ. ” mind your p’s and q’s” ಅಂತ. ಹಾಗೆಯೇ ಅರಬ್ಬೀ ಮಾತನಾಡುವಾಗ “mind your p’s and b’s ಎಂದು ಹೇಳಬಹುದು. ಈ “p” ಮತ್ತು “b” conundrum ನ ಸ್ವಾರಸ್ಯ ಕೇಳಿ. p ಬದಲಿಗೆ b ಬಳಸಿದಾಗ ಆಗುವ ಅನಾಹುತ; “Ahmad put his car in the parking area” will become “ahmad put his car in the “barking area”. ಅಹಮದ್ ತನ್ನ ಕಾರನ್ನು ಬೊಗಳುವ ಸ್ಥಳದಲ್ಲಿ ನಿಲ್ಲಿಸಿದ ಅಂತ. ಪಾರ್ಕಿಂಗ್ ಏರಿಯ, ಬಾರ್ಕಿಂಗ್ ಏರಿಯ ಆಯಿತು. go and pray ಎಂದು ಹೇಳುವ ಬದಲು go and “bray” ಎಂದು ಹೇಳಿದಂತೆ. bray ಪದದ ಅರ್ಥ ಗೊತ್ತಲ್ಲ? ಗಾರ್ದಭ ಸ್ವರ, ಮಾರಾಯ್ರೇ.