೬ ನೆ ಕ್ಲಾಸಿನಲ್ಲಿದ್ದಾಗ ನಡೆದದ್ದು. ಶಾಲೆಯಲ್ಲಿನ ಮೇಷ್ಟ್ರುಗಳಿಗೆ ಅಡ್ಡ ಹೆಸರಿಟ್ಟು ಖುಷಿ ಪಡುವುದು ನಮ್ಮ ಕೆಲಸ. ಒಂದು ದಿನ ಕನ್ನಡದ ಮೇಷ್ಟ್ರು ೧೦೦ ವಸ್ತುಗಳ ಹೆಸರನ್ನು ಬರೆಯಲು ಹೇಳಿದರು. ಬಾಯಿಗೆ ಬಂದದ್ದೆಲ್ಲಾ ಬರೆದಾಯಿತು. ನನ್ನ ಮಿತ್ರ ಕುಮಾರ ಕೇಳಿದ, ಲೇ, ಮೇಷ್ಟ್ರ ಹೆಸರು ” ಬ್ಯಾಟರಿ” ಎಂದು ಬರೆದರೆ ಹೇಗೆ? ಇದು ಕೇಳಿ ನಮಗೆ ಪುಳಕವಾಗಿ ಹೌದು ಕಣೋ ಅದನ್ನೂ ಸೇರಿಸು ಎಂದು ಪುಸಲಾಯಿಸಿ ಬರೆಸಿದೆವು. ಅವನ ಹೆಸರು ಬಂದಾಕ್ಷಣ ಎದ್ದು ಹೋದ ಕುಮಾರ ಕೆಲವು ಹೆಸರುಗಳನ್ನು ಓದಿ ನಂತರ ಬ್ಯಾಟರಿ ಎಂದ. ಬ್ಯಾಟರಿ ಎನ್ನುವಾಗ ಪಾಪ ಅವನಿಗೆ ನಗು ತಡೆಯಲಾಗಲಿಲ್ಲ. ಇದನ್ನು ಕೇಳಿದ ಮೇಷ್ಟ್ರಿಗೆ ಎಲ್ಲಿಲ್ಲದ ಕೋಪ ಬಂದು ರೂಲ್ ದೊಣ್ಣೆಯಿಂದ ಸರಿಯಾಗಿ ಕುಂಡೆ, ಬೆನ್ನಿನ ಮೇಲೆಲ್ಲಾ ಬ್ಯಾಟರಿ ಚಿತ್ರ ಮೂಡಿಸಿದ್ದು ನೋಡಿ ನಮಗೆ ನಗುವೋ ನಗು. ಉತ್ತೇಜಿಸಿ ನಾವೇ ಬ್ಯಾಟರಿ ಬರೆಸಿದ್ದು ಸಾಲದೇ ಅದರ ಮೇಲೆ ಅವನ ಬಾಸುಂಡೆಗಳನ್ನು ನೋಡಿ ಕುಪ್ಪಳಿಸಿ ನಕ್ಕಿದ್ದು ನೆನೆದು ಈಗ ( ೩೧ ವರ್ಷಗಳ ನಂತರ ) ಪಾಪ ಅನ್ನಿಸುತ್ತಿದೆ.