ವಯಸ್ಸೇ, ರಿಲಾಕ್ಸ್ ಪ್ಲೀಸ್

ಕಲಿಕೆಗೆ ವಯಸ್ಸೆನ್ನುವ ಕಾಲಮಾಪನ ಬೇಡ. ನಮಗೆ ಬೇಕಿರುವುದು ಕಲಿಯಲು ಬೇಕಾದ ಉತ್ಕರ್ಷೆ ಮಾತ್ರ. ಕೆಲವರಿಗೆ ಅದೇನೋ ಒಂದು ರೀತಿಯ ಸಂಶಯ, ನಾನಗೆ ಮೂವತ್ತಯ್ದಾಯ್ತು, ಐವತ್ತಾಯ್ತು, ನನ್ನಿಂದ ಇದು ಮಾಡಲು ಸಾಧ್ಯವೇ, ಜನ ಏನೆಂದು ಕೊಂಡಾರು…ಹೀಗೆ ಹತ್ತು ಹಲವು ನಮ್ಮನ್ನು ಹಿಂದಕ್ಕಟ್ಟುವ ವಿಚಾರಗಳು ಹಿಂಬಾಲಿಸುತ್ತವೆ ನಮ್ಮ ಮನಸ್ಸಿನ ಆಸೆಗಳಿಗೆ ತಣ್ಣೀರೆರೆಚಲು. ಜನ ಏನನ್ನಾದರೂ ಅಂದು ಕೊಳ್ಳಲಿ, ನೀವು ಮಾಡೋದು ನಿಮ್ಮ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ತಾನೇ? ಮತ್ತೇಕೆ ಜಗದ ಹಂಗು? ಕೆಳಗಿನ ಕೊಂಡಿಗಳನ್ನು ನೋಡಿ ಮತ್ತು ಸಿದ್ಧರಾಗಿ ಕಲಿಯಬೇಕಾದ್ದನ್ನು ಕಲಿಯಲೂ, ಹಿಮಾಲಯವನ್ನು ಮಣಿಸಲೂ.

http://www.dailymail.co.uk/news/article-1036526/91-year-old-war-veteran-oldest-person-collect-PhD-Cambridge-University.html

http://ibnlive.in.com/news/100yearold-indian-freedom-fighter-pursues-phd/133246-3.html

ಓಹ್, ನಿನ್ನ ಛಲವೇ

                                                      

ದಕ್ಷಿಣ ಕೊರಿಯಾದ ಮಹಿಳೆ ವಿಶ್ವದ ೧೪ ಶಿಖರಗಳನ್ನು ಮಣಿಸಿದ ಪರ್ವತ ನಾರಿ. 

ಧರೆಯ ಮೇಲಿನ ಹುಲು ಮಾನವರನ್ನು ಅಣಕಿಸುತ್ತಾ ಆಗಸಕ್ಕೂ ಸವಾಲಾದ ಗಿರಿ ಶಿಖರಗಳು ಈ ಮಹಿಳೆಯ ಅಸಾಧಾರಣ ವಿಶ್ವಾಸ, ಧೈರ್ಯಕ್ಕೆ ಮರುತ್ತರ ನೀಡದೆ ಶರಣಾದವು.  ೧೩ ಶಿಖರಗಳನ್ನು ಗೆದ್ದ ಈ ಮಹಿಳೆ ಕೊನೆಯದಾದ ೨೬,೨೪೭ ಅಡಿ ಎತ್ತರದ ಅನ್ನಪೂರ್ಣ ಶಿಖರವನ್ನು ಮೊಣಕಾಲೂರಿ ಜಯಿಸಿದಳು. ಮೊಣ ಕಾಲೂರಿದ್ದು ಈ ಕೆಚ್ಚ್ಚೆದೆಯ ನಾರಿಯಾದರೂ ವಾಸ್ತವವಾಗಿ ಮೊಣಕಾಲೂರಿ ಶರಣಾಗಿದ್ದು ಅನ್ನಪೂರ್ಣೆಯೇ.

ಓಹ್. ನಮ್ಮ ತೆಂಡೂಲ್ಕರ್ ಒಂದೊಂದೇ ದಾಖಲೆಗಳನ್ನ ಬೆನ್ನತ್ತುವಂತೆ 14 ಶಿಖರಗಳ ಮಣಿಸಿದ ಈಕೆಯ ಹೆಸರು “ಓಹ್ ಯೂನ್ ಸುನ್”. ಬಹುಶಃ ಅತ್ಯುತ್ಸಾಹದ, ಚಿಮ್ಮುವ ಹದಿಹರೆಯದ ಹೆಣ್ಣೋ, ಇಪ್ಪತ್ತರ ತಾರುಣ್ಯವೋ, ಮೂವತ್ತರ ಯೌವ್ವನವೋ ಅಲ್ಲ ಈಕೆಗೆ. ೪೪ ವರ್ಷ ವಯಸ್ಸಿನ ಕೊರಿಯಾದ ಈ ಮಹಿಳೆ ಇದೆ ಆಸುಪಾಸಿನ ವಯಸ್ಸಿನ ಜನರು ನಾಚುವಂಥ ಸಾಧನೆ ಮಾಡಿದಳು. ನಮ್ಮಲ್ಲಿ ೪೦ ಅಂದರೆ ಮುಗಿಯಿತು, ಅದರಲ್ಲೂ ನಮ್ಮ ಹೆಣ್ಣು ಮಕ್ಕಳಿಗಂತೂ ಮದುವೆಯಾಗಿ ಒಂದೆರಡು ಮಕ್ಕಳಾದ ಕೂಡಲೇ ವೈರಾಗ್ಯ ಆವರಿಸಿ ಬಿಡುತ್ತದೆ. ಇನ್ನು ಏನಾದರೂ ಧೈರ್ಯ ಮಾಡಿ ಮನಸ್ಸಿನ ಆಸೆಗಳನ್ನು ಪೂರೈಸುವತ್ತ ಯಾವುದಾದರೂ ಹೊಸ ಚಟುವಟಿಕೆ  ಆರಂಭಿಸಿದರಂತೂ ನೋಡುವವರಿಗೆ ಹೆಚ್ಚು ಕನಿಕರ. ಈ ವಯಸ್ಸಿನಲ್ಲಿ ಇದೆಲ್ಲಾ ಯಾಕೆ ಎಂದು ಉತ್ಸಾಹಕ್ಕೆ ತಣ್ಣೀರೆರೆಚಿ ಮೂಲೆ ತೋರಿಸುತ್ತಾರೆ ಕೂರಲು. ಆದರೆ ಈ ಡಬ್ಬಲ್ ನಾಲ್ಕು (೪೪) ಸಂಖ್ಯೆ ಈಕೆಯ ಉತ್ಸಾಹವನ್ನು ಕುಗ್ಗಿಸುವ ಬದಲು ಎತ್ತರ ಏರಲು ಪ್ರೇರೇಪಿಸಿತು. ಎತ್ತರ ಎಂದರೆ ಸಾವಿರಾರು ಅಡಿಗಳ ಎತ್ತರ. ಹಿಮಾಲಯ ಪರ್ವತ ಶ್ರೇಣಿ ಎಂಥವರ ಎದೆಯನ್ನೂ ನಡುಗಿಸುವಂಥದ್ದು. ಸಾವಿರಾರು ಜನ ಶಿಖರ ಏರಲು ಹೋಗಿ ಪ್ರಾಣ ಕಳೆದುಕೊಂಡವರು. ಅದರ ಮೇಲೆ ಏತಿ ಇದೆ, ಗೀತಿ ಇದೆ ಎಂದು ಭಯ ಹುಟ್ಟಿಸುವವರು ಬೇರೆ. ಆದರೆ ಸಾಧಿದಬೇಕು ಎಂದು ಛಲವಿರುವವರಿಗೆ ಛಲವೇ ಅವರ ಸಂಗಾತಿ, ನೆರಳಿನಂತೆ ಹಿಂಬಾಲಿಸುತ್ತದೆ.

ಆರೋಹಣ ಮಾಡಿದ ಕೂಡಲೇ ತನ್ನ ದೇಶದ ಬಾವುಟವನ್ನು ಬೀಸಿ ಹಿಡಿದ ಈಕೆಗೆ ದಕ್ಷಿಣ ಕೊರಿಯಾದ ಅಧ್ಯಕ್ಷರು ಅಭಿನಂದಿಸುತ್ತಾ ಹೇಳಿದ್ದು,

“She is really great and I’m proud of her,”  

ಈ ಮಹಿಳೆ ೨೦೦೪ ರಲ್ಲಿ ಎವೆರೆಸ್ಟ್ ಪರ್ವತವನ್ನು ಆರೋಹಣ ಮಾಡಿದ್ದಳು.  

ಚಿತ್ರ ಕೃಪೆ: ಯಾಹೂ