* ಕರಿಯರೇ, ಹೊರ ನಡೆಯುವಿರಾ?

ಅಮೆರಿಕೆಯ ನ್ಯೂ ಜೆರ್ಸಿ ರಾಜ್ಯದ ವಾಶಿಂಗ್ಟನ್ ಉಪನಗರದಲ್ಲಿ ಒಂದು “ವಾಲ್ ಮಾರ್ಟ್” ಮಳಿಗೆ. ೧೬ ವರ್ಷದ ಪೋರನೊಬ್ಬ ಮಳಿಗೆಗೆ ಹೋಗಿ ಅಲ್ಲಿಟ್ಟಿದ್ದ ಮೈಕನ್ನು ಹಿಡಿದು ಘೋಷಿಸಿದ, ಕರಿಯರೇ, ಮಳಿಗೆ ಬಿಟ್ಟು ಕೂಡಲೇ ಹೊರನಡೆಯಿರಿ ಎಂದು. ಈ ಒಂದು ಮಾತಿನಿಂದ ಇಡೀ ಮಳಿಗೆಯಲ್ಲಿದ್ದ ಗ್ರಾಹಕರು ಮಾತ್ರವಲ್ಲ, ಅದರೊಂದಿಗೆ ನಗರವೂ ದಿಗ್ಭ್ರಾಂತವಾಯಿತು. ಪೊಲೀಸರು ಬಂದರು ವಿಚಾರಿಸಲು, ಅಧಿಕಾರಿಗಳೂ ಬಂದರು, ಘಟನೆಯನ್ನು ಖಂಡಿಸಲು. ಇದು ವಿಶ್ವಕ್ಕೆ ಸಮಾನತೆಯನ್ನು ಬೋಧಿಸುವ ಹಿರಿಯಣ್ಣ ಅಮೆರಿಕೆಯ ಪರಿಸ್ಥಿತಿ. ಕರಿಯ ಅಧ್ಯಕ್ಷ ನಾದರೇನು, ಸೇನೆಯ ದಂಡನಾಯಕನಾದರೇನು, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾದರೇನು, ಹುಟ್ಟು ಗುಣ ಎಲ್ಲಿಂದ ಹೋಗಬೇಕು? ಈ ಹುಡುಗನ ಮಾತಿನಿಂದ ಹಿಟ್ಲರ್ ತನ್ನ ಸಮಾಧಿಯಲ್ಲಿ ಮಲಗಿ ಮುಸಿ ಮುಸಿ ನಗುತ್ತಿರಬೇಕು. ಅವನಿಗೂ ಕರಿಯರೆಂದರೆ ತಾತ್ಸಾರ ತಾನೇ? ಈ ಆಧುನಿಕ ಯುಗದಲ್ಲೂ ಬಿಳಿಯರಿಗೆ ಕರಿಯರನ್ನು ಸಮಾನತೆಯಿಂದ, ಗೌರವದಿಂದ ಕಾಣಲು ಕಷ್ಟವಾಗುತ್ತಿರುವುದು ವಿಪರ್ಯಾಸವೇ ಸರಿ.

ಸರಿ ಸುಮಾರು 1400 ವರ್ಷಗಳ ಹಿಂದಿನ ಮಾತು. ಬಿಲಾಲ್ ಇಥಿಯೋಪಿಯಾ ದೇಶದಿಂದ ಅರಬ್ ದೇಶಕ್ಕೆ ಬಂದ ಹದಿಹರೆಯದ ಜೀತದಾಳು. ಅಪ್ಪಟ ಕರಿಯ. ಪ್ರವಾದಿಗಳ ಸಮಾನತೆಯ ಸಂದೇಶ ಕೇಳಿ ಇಸ್ಲಾಂ ನ ದೀಕ್ಷೆ ಪಡೆಯುತ್ತಾನೆ. ಈ ಕಾರಣಕ್ಕಾಗಿ ಅವನ ಯಜಮಾನ ಬಹಳಷ್ಟು ಕಿರುಕುಳ ಕೊಡುತ್ತಾನೆ. ಇದ ನೋಡಿ ಪ್ರವಾದಿಗಳ ಸಹವರ್ತಿಯೊಬ್ಬರು ಬಿಲಾಲ್ ನನ್ನು ಖರೀದಿಸಿ ಜೀತದಿಂದ ವಿಮೋಚನೆಗೊಳಿಸುತ್ತಾರೆ. ಇದನ್ನು ಕಂಡ ಪ್ರವಾದಿಗಳ ಮತ್ತೊಬ್ಬ ಅನುಚರ ಉಮರ್ ಉದ್ಗರಿಸುತ್ತಾರೆ, “ನಮ್ಮ ಒಡೆಯ ಅಬು ಬಕರ್ ಮತ್ತೊಬ್ಬ “ಒಡೆಯ ಬಿಲಾಲ್” ನನ್ನು ವಿಮೋಚಿಸಿದರು” ಎಂದು. ಅಗರ್ಭ ಶ್ರೀಮಂತ, ಬಿಳಿ ವರ್ಣದ ಉಮರ್ ಕರಿಯ ಬಿಲಾಲ್ ರನ್ನು ಸಂಬೋಧಿಸಿದ್ದು “ಒಡೆಯ” ಎಂದು. ಇಸ್ಲಾಂ ಅರೇಬಿಯಾದಲ್ಲಿ ಸ್ಥಾಪಿತವಾದ ನಂತರ ಪವಿತ್ರ ಕಾಬಾ ಭವನದ ಮೇಲೆ ನಿಂತು ಪ್ರಾಥನೆಯ ಕರೆಯನ್ನು ನೀಡಲು ಬಿಲಾಲ್ ರನ್ನು ಪ್ರವಾದಿಗಳು ಆಮಂತ್ರಿಸಿದಾಗ ಇಡೀ ಅರೇಬಿಯಾ ಕೆಂಡಾ ಮಂಡಲ. ಒಬ್ಬ ಕರಿಯ, ಅದೂ ಮಾಜಿ ಜೀತದಾಳು ಪವಿತ್ರ ಕಾಬಾದ ಮೇಲೆ ನಿಲ್ಲುವುದು ಎಂದರೇನು ಎಂದು ಸಿಡುಕುತ್ತಾರೆ. ಆಗ ಪ್ರವಾದಿಗಳು ಹೇಳುತ್ತಾರೆ, ಈ ದಿನದೊಂದಿಗೆ ಹುಟ್ಟಿನಿಂದ ಬಂದ ಎಲ್ಲಾ ವಿಶೇಷ ಸವಲತ್ತುಗಳು, ಮರ್ಯಾದೆಗಳು, ಹಕ್ಕುಗಳು ನಿಂತವು, ಮಾನವರೆಲ್ಲರೂ ಸಮಾನರು ಮತ್ತು ಎಲ್ಲರೂ ಆ ಮಹಾ ಪ್ರಭು ಸೃಷ್ಟಿಸಿದ ಆದಮನ ಮಕ್ಕಳು ಎಂದು ಸಾರುತ್ತಾರೆ.

ಘಟನೆಯ ನಂತರ ಹುಡುಗ ಎಳೆ ಪ್ರಾಯದವನು ಎಂದು ಪೊಲೀಸರು ಅವನ ಹೆತ್ತವರಿಗೆ ಅವನನ್ನು ಒಪ್ಪಿಸಿ ಅವನನ್ನು ಇನ್ನೊಮ್ಮೆ juvenile court ಗೆ ಹಾಜರುಪಡಿಸಲು ನಿರ್ಧರಿಸಿದರು. ಎಳೆ ಪ್ರಾಯದ ಹುಡುಗನಿಗೆ ಇಂಥ ದೊಡ್ಡ ಮಾತನ್ನು ಹೇಳಿಕೊಟ್ಟವರಾರೋ? ಗೌಪ್ಯತೆ ಕಾಪಾಡುವ ಉದ್ದೇಶದಿಂದ ಹುಡಗನ ಹೆಸರನ್ನಾಗಲಿ, ಅವನು ಬಿಳಿಯನೆಂದಾಗಲಿ ಪೊಲೀಸರು ಮಾಹಿತಿ ನೀಡಲಿಲ್ಲ. ಒಟ್ಟಿನಲ್ಲಿ ಅಮೆರಿಕೆಯ ಬಿಳಿ ನಗುವಿನ ಬಹಿರಂಗದ ಹಿಂದೆ ಅಡಗಿದೆ ಕರಾಳ ಅಂತರಂಗ.

ಮೇಣದ ಲೋಕ

tussauds 008ಮೇಣ ಎಂದ ಕೂಡಲೇ ನಾವು ಹಿಡಿ ಹಿಡಿ ಶಾಪ ಹಾಕುವ ಪವರ್ ಔಟೇಜ್ ನೆನಪಿಗೆ ಬಂದು ಬಿಡುತ್ತದೆ. ಮೇಣದ ಉಪಯೋಗ ಹಲವೆಡೆಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಬಳಸುತ್ತೇವೆ. ಈ ಆಧುನಿಕ ಇಲೆಕ್ಟ್ರಾನಿಕ್ ಯುಗದಲ್ಲಿ ಇನ್ನೂ ತನ್ನ ಉಪಯುಕ್ತತೆಯನ್ನು ಬಿಟ್ಟು ಕೊಡದೆ ಸೆಣಸುತ್ತಿರುವ ಹಲವು ವಸ್ತುಗಳಲ್ಲಿ ಬಡ ಮೇಣವೂ ಒಂದು.

ಮೇಡಂ ಟುಸ್ಸೋ ( madam tussaud ) ಮೇಣದ ವಸ್ತು ಸಂಗ್ರಹಾಲಯ ಲಂಡನ್ನಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು.

ವಿವಿಧ ಕಾರ್ಯಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ ವ್ಯಕ್ತಿಗಳ ಮೇಣದ ಪ್ರತಿಮೆ ಈ ಸಂಗ್ರಹಾಲಯದಲ್ಲಿ. shakespeare ನಿಂದ ಹಿಡಿದು ಶಾರುಕ್ ಖಾನ್ ವರೆಗೆ ಸಾವಿರಾರು ಖ್ಯಾತ ವ್ಯಕ್ತಿಗಳು ಮೇಣದಲ್ಲಿ ಅಮರರು. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಬಚನ್, ಐಶ್ವರ್ಯ, ತೆಂಡೂಲ್ಕರ್, ಕಪಿಲ್ ದೇವ್ ಹೀಗೆ ಸಾಗುತ್ತದೆ ಭಾರತದ ಪಟ್ಟಿ. ಅಮೀರ್ ಖಾನ್ ಮಾತ್ರ ತನ್ನನ್ನು ಮೇಣದ ಮಟ್ಟಕ್ಕೆ ಇಳಿಸಿಕೊಳ್ಳುವುದು ತರವಲ್ಲ ಎಂದೋ ಏನೋ ಒಪ್ಪಲಿಲ್ಲ. ಯುದ್ಧಕೋರರಾದ ಹಿಟ್ಲರ್, ಸದ್ದಾಂ ಇಲ್ಲಿ ರಾರಾಜಿತ. ನಮ್ಮ ಆನೆ ಹಂತಕ ವೀರಪ್ಪನ್ ತನ್ನ ವಿಶಿಷ್ಟ ಮೀಸೆಯೊಂದಿಗೆ  ಇಲ್ಲದಿರುವುದು ಸ್ವಲ್ಪ ಬೇಸರವೇ.

ಮೇಡಂ ಟುಸ್ಸೋ (1761–1850), ಫ್ರಾನ್ಸ್ ದೇಶದವರಾದ ಈಕೆ ವೈದ್ಯರಾದ ತನ್ನ ತಂದೆಯಿಂದ ಕಲಿತರು ಮೇಣದ ಶಿಲ್ಪಕಲೆ.

ಈ ಸಂಗ್ರಹಾಲಯದಲ್ಲಿರುವ ಮೂರ್ತಿಗಳಲ್ಲಿ ಕಿಡಿಗೇಡಿಗಳಿಗೆ ಪ್ರೀತಿಯ ಪ್ರತಿಮೆ ಅಡಾಲ್ಫ್ ಹಿಟ್ಲರ್ ನದು. ಒಂದೆರಡು ಸಲ ಹಿಟ್ಲರ್ ನ ಮೇಲೆ ಧಾಳಿ ಮಾಡಿ ಅವನ ತಲೆಯನ್ನು ಬೇರ್ಪಡಿಸಿದ್ದರು ಪುಂಡರು. ಅವರ ಆಕ್ರೋಶವೂ ಅರ್ಹ್ತವಾಗುವನ್ಥದ್ದೆ. ವಿನಾಕಾರಣ ೬೦ ಲಕ್ಷ ಯಹೂದಿಯರನ್ನು ಸಾವಿನ ಕೂಪಕ್ಕೆ ನೂಕಿದವನಲ್ಲವೇ ಹಿಟ್ಲರ್?  

ನನ್ನ ತಂಗಿಯ ಮಗ ೯ ವರ್ಷದ ಅಯ್ಮನ್ ಲಂಡನ್ ಪ್ಯಾರಿಸ್ ಪ್ರವಾಸದ ವೇಳೆ ಈ ಸಂಗ್ರಹಾಲಯಕ್ಕೆ ಭೇಟಿ ನೀಡಿದಾಗ ತೆಗೆದ ಚಿತ್ರ ಲೇಖನದೊಂದಿಗಿರುವುದು. ಅವನ ಅಮ್ಮ ಫೋಟೋ ಕ್ಲಿಕ್ಕಿಸುವಾಗ ಹೇಳಿಸಿಕೊಳ್ಳದೆಯೇ ತನಗೆ ತಾನೇ ಕೈ ಮುಗಿದು ನಿಂತು ಬಿಟ್ಟ ನಮ್ಮನ್ನು ಪರಂಗಿ ದಾಸ್ಯದಿಂದ ಮುಕ್ತಿ ಗೊಳಿಸಿದ ಮಹಾ ಚೇತನದೆದುರು.

ಇನ್ನೂ ಬೇರೆ ಬೇರೆ ಮಹಾಮಹಿಮರೂ ಇದ್ದರು ಕರಗದ ಮೇಣವಾಗಿ.  ಇವರಾರಿಗೂ ಕೊಡದ ಮರ್ಯಾದೆ ಗಾಂಧೀಜಿಗೆ ಕೊಟ್ಟಿದ್ದು ನನಗೆ ತಿಳಿಯಲಿಲ್ಲ. ಏಕೆಂದರೆ ಅವನು ಕಲಿಯುತ್ತಿರುವುದು British ಶಾಲೆಯಲ್ಲಿ, ಚರ್ಚಿಲ್, ಥ್ಯಾಚರ್, ರಾಣಿ ವಿಕ್ಟೋರಿಯಾ, ಲೇಡಿ ಡಯಾನ ಇವರ ಬಗ್ಗೆಯೇ ಕೇಳಿದ್ದ ಇವನಿಗೆ ಭಾರತದ ನಾಯಕರ ಪರಿಚಯ ಕಡಿಮೆ. ವಿಚಾರಿಸಿದಾಗ ನನಗೆ ಹಾಗೆ ಕೈ ಮುಗಿಯಬೇಕೆಂದು ತೋಚಿತು ಮುಗಿದೆ ಅಷ್ಟೇ ಎಂದು ಭುಜ ಹಾರಿಸಿ ಹೇಳಿದ.

ಯಾರಲ್ಲೂ ಗೌರವ ಮನೋಭಾವ ಹುಟ್ಟಿಸುವಂಥ ವ್ಯಕ್ತಿತ್ವ ಗಾಂಧಿ ತಾತನದು. ಅದು ಅವರನ್ನು ಕೊಂದ ದುಷ್ಟನಿಗೆ ಹೊಳೆಯದೆ ಹೋಯಿತಲ್ಲ ಎಂದು ಕನಿಕರ ತೋರಿತು.