ಭೌತ ಶಾಸ್ತ್ರದಷ್ಟೇ ಕಠಿಣ, ಹೆಣ್ಣು

ವಿಶ್ವವಿಖ್ಯಾತ ಭೌತಶಾಸ್ತ್ರಜ್ಞ, ಮತ್ತು cosmologist ಸ್ಟೀಫನ್ ಹಾಕಿಂಗ್, ಮೊನ್ನೆಯ ಭಾನುವಾರ ೭೦ನೆ ಜನ್ಮ ದಿನಾಚರಣೆ ಆಚರಿಸಿದರು. ಸರ್ ಐಸಾಕ್ ನ್ಯೂಟನ್ ನಂತರದ ಅತ್ಯಂತ ಪ್ರತಿಭಾವಂತ ವಿಜಾನಿ ಎಂದು ಪರಿಗಣಿಸಲ್ಪಡುವ ಸ್ಟೀಫನ್ ಹಾಕಿಂಗ್ ಬ್ರಿಟಿಶ್ ಪ್ರಜೆ.

ಭೌತಶಾಸ್ತ್ರ ಅಥವಾ ಬ್ರಹ್ಮಾಂಡ ಶಾಸ್ತ್ರ ನನ್ನ ಕೈಗೆಟುಕುವ ಮಾತಲ್ಲ. ಇವೆರಡೂ ಇಮಾಂ ಸಾಹೇಬರಿಗೂ, ಜನ್ಮಾಷ್ಠಮಿ ಗೂ ಇರುವ ಸಂಬಂಧ ಹೇಗೋ ಹಾಗೆ. ೧೯೮೮ ರಲ್ಲಿ ಪ್ರಕಟವಾದ ಸ್ಟೀಫನ್ ಹಾಕಿಂಗ್ ರ brief history of time ಪುಸ್ತಕ ಒಂದು ಕೋಟಿಗೂ ಹೆಚ್ಚು ಪ್ರತಿಗಳ ಮುದ್ರಣ ಕಂಡಿತು. ಇಷ್ಟು ಜನಪ್ರಿಯವಾದ ಪುಸ್ತಕದಲ್ಲಿ ಏನಿರಬಹುದು ಎಂದು ಆಸಕ್ತಿ ಕುದುರಿದ್ದರಿಂದಲೂ, ಮತ್ತು  ಈ ಪುಸ್ತಕದಲ್ಲಿ ಹಾಕಿಂಗ್ ದೇವರ ಅಸ್ತಿತ್ವದ ಸಾಧ್ಯತೆ ಬಗ್ಗೆ ಬರೆದಿದ್ದರು ಎಂದು ಕೇಳಿದ್ದರಿಂದಲೂ ಪುಸ್ತಕ ಕೊಂಡೆ. ಓದಿದ ನಂತರ ಅರ್ಥವಾಗಿದ್ದು ಅಷ್ಟಕ್ಕಷ್ಟೇ, ಆದರೆ ಈ ವಿಜ್ಞಾನಿಯ ಬಗ್ಗೆ ಆಸಕ್ತಿ ಮಾತ್ರ ನನ್ನಲ್ಲಿ ಉಳಿದುಕೊಂಡಿತು.

೧೯೪೨ ರಲ್ಲಿ ಜನಿಸಿದ ಸ್ಟೀಫನ್ ಹಾಕಿಂಗ್ ಗೆ ೨೧ ನೇ ವಯಸ್ಸಿನಲ್ಲಿ ALS (Amyotrophic lateral sclerosis) ಅಥವಾ ಲೂ ಗೆಹ್ರಿಗ್ ಎಂದೂ ಕರೆಯಲ್ಪಡುವ, ಮೆದುಳನ್ನು ಮತ್ತು ಬೆನ್ನ ಹುರಿಯನ್ನು ಬಾಧಿಸುವ ವಾಸಿಯಾಗದ ನರರೋಗ ಇದೆ ದೃಢ ಪಟ್ಟ ನಂತರ ವೈದ್ಯರು ಇವರ ಬದುಕುವ ಕಾಲ ಕೇವಲ ಇನ್ನೆರಡು ವರ್ಷ ಎಂದಿದ್ದರು. ೨೩ ನೇ ವಯಸ್ಸಿನಲ್ಲಿ ಅಂತ್ಯ ಕಾಣಬೇಕಿದ್ದ ಈ ವಿಜ್ಞಾನಿ ಕಾಯಿಲೆ ವಾಸಿಯಾಗದಿದ್ದರೂ ೭೦ ನೇ ಜನ್ಮ ದಿನ ಆಚರಿಸುತ್ತಿದ್ದಾರೆ. ಉಲ್ಬಣಗೊಳ್ಳುತ್ತಾ (debilitating and degenerative disease) ಹೋಗುವ ಈ ಕಾಯಿಲೆ ಸ್ಟೀಫನ್ ರನ್ನು ಮಾತನಾಡಲೂ, ಬರೆಯಲೂ ಸಾಧ್ಯವಾಗದಂತೆ ಮಾಡಿತು. ಜನರೊಂದಿಗೆ ಸಂವಾದಿಸಲು ಅವರಿಗಾಗಿ ಪ್ರತ್ಯೇಕ ಯಂತ್ರವನ್ನ ಕಂಡು ಹಿಡಿಯಲಾಯಿತು. ಶರೀರದ ಕೆಲವೇ ಕೆಲವು ಸ್ನಾಯುಗಳನ್ನು ಉಪಯೋಗಿಸಿ ಗಣಕ ಯಂತ್ರದ ಕೀಲಿಮಣೆ ಮೂಲಕ ಸಂವಾದ ನಡೆಸುತ್ತಿದ್ದರು ಹಾಕಿಂಗ್. ಈಗ ಅದೂ ಕಷ್ಟವಾಗಿ ಕೇವಲ ಕೆನ್ನೆಗಳ ಸ್ನಾಯುಗಳ ಸಹಾಯದಿಂದ ಸಂವಾದ ನಡೆಸುತ್ತಿದ್ದಾರೆ.

ಮೆದುಳು ಮತ್ತು ಶರೀರ tandem ಆಗಿ ಕೆಲಸ ಮಾಡುತ್ತವೆ. ಶರೀರದ ಸ್ನಾಯುಗಳು ಕೆಲಸ ಮಾಡಲು ಸಹಾಯ ಮಾಡುವುದು ಮೆದುಳಿನಿಂದ ಹೊರಡುವ ಆಜ್ಞೆಗಳು. ಆದರೆ ALS ಖಾಯಿಲೆಯಲ್ಲಿ ಸ್ನಾಯುಗಳು ಕೆಲಸ ಮಾಡದಿದ್ದರೂ ಮೆದುಳು ಮಾತ್ರ pristine ಆಗಿಯೇ ಉಳಿಯುತ್ತದೆ. ಈ ಬೆಳವಣಿಗೆ ALS ಖಾಯಿಲೆಗೆ ಸೀಮಿತವಲ್ಲದಿದ್ದರೂ ಹಾಕಿಂಗ್ ವಿಷಯದಲ್ಲಿ ಮಾತ್ರ ಅನ್ವಯವಾಗುತ್ತಿದೆ. ಹಾಕಿನ್ ರ ಮೆದುಳು ಬುದ್ದಿ ಮತ್ತೆಯಲ್ಲಿ ಇಷ್ಟೊಂದು ಪ್ರಖರವಾಗಿದ್ದರೂ ಯಾವುದೇ ಶಾರೀರಿಕ ನ್ಯೂನತೆಯಿಲ್ಲದ ಹಾಕಿಂಗ್ ಶರೀರ ಮಾತ್ರ ಏಕೆ ಈ ರೀತಿ ವರ್ತಿಸುತ್ತಿರಬಹುದು? ಒಂದು ಲೋಟ ನೀರು ಬೇಕು ಎಂದು ಕೇಳಲೂ ಸಾಧ್ಯವಾಗದ ರೀತಿಯಲ್ಲಿ ಅವರ ಶಾರೀರಿಕ ಸಾಮರ್ಥ್ಯ ಕುಗ್ಗಲು ದೇವರಿಲ್ಲ ಎಂದು ಶತಸ್ಸಿದ್ಧ ಸಾಧಿಸಲು ಹೊರಟ ಅವರಿಗೆ ಪರಮಾತ್ಮ ಕೊಡಮಾಡಿದ ಶಿಕ್ಷೆ ಇರಬಹುದೋ ಎಂದು ಕೆಲವು ಸಂದೇಹ ವ್ಯಕ್ತಪಡಿಸುತ್ತಾರೆ.  

ಭೌತ ಶಾಸ್ತ್ರಕ್ಕಿಂತಲೂ ಇವರ ಅಧ್ಯಯನ ಮತ್ತು ಸಂಶೋಧನೆ ನಭೋ ಮಂಡಲದ ಬಗ್ಗೆ. expanding universe, black hole ಹೀಗೆ ಮಾನವನ ಕುತೂಹಲ ಮತ್ತು ಅಚ್ಚರಿಯನ್ನು ಹಿಡಿದಿಟ್ಟ,  ನಮ್ಮ ಭೂಮಿ ಮತ್ತು ಬ್ರಹ್ಮಾಂಡ ಹೇಗೆ ಅಸ್ತಿತ್ವಕ್ಕೆ ಬಂದಿರಬಹುದು ಎನ್ನುವ ಶಂಶೋಧನೆಯಲ್ಲಿ ಇವರ ಆಸಕ್ತಿ. ಒಂದೊಮ್ಮೆ ದೇವರ ಅಸ್ತಿತ್ವದ ಬಗ್ಗೆ ಸಕಾರಾತ್ಮಕ ವಾಗಿದ್ದ ಅವರ ನಿಲುವು ನಂತರ ಬದಲಾಯಿತು. ಸ್ವರ್ಗ ಎನ್ನುವುದು ಒಂದು fairy story ಮಾತ್ರ ಎಂದು ಹಾಕಿಂಗ್ ರ ಅಭಿಪ್ರಾಯ.

 

ವಿಸ್ತಾರ ಗೊಳ್ಳುತ್ತಿರುವ ಬ್ರಹ್ಮಾಂಡದ ಬಗ್ಗೆ ಚಿಂತಿಸುವ, black hole ಗಳ ನಿಗೂಢತೆ ಬಗ್ಗೆ ಬಗ್ಗೆ ಅಭ್ಯಸಿಸುವ, ಈ ವಿಜ್ಞಾನಿಗೆ ಭೌತಶಾಸ್ತ್ರದಷ್ಟೇ ಕಠಿಣ ಎಂದು ತೋರಿದ ಮತ್ತೊಂದು ವಿಷಯ ಹೆಣ್ಣು. women. they are a complete mystery. ದಾರ್ಶನಿಕರು, ಕವಿಗಳು, ಭಗ್ನ ಹೃದಯೀ ಪುರುಷರು ಹಳಿದ, ಹಲುಬಿದ, ಹೆಣ್ಣು ಸ್ಟೀಫನ್ ರಿಗೂ enigma ಆದಳು. black hole ಥರ.

ಸ್ಟೀಫನ್ ಹಾಕಿಂಗ್ ರಿಗೆ ಹುಟ್ಟು ಹಬ್ಬದ ಶುಭಾಶಯಗಳೊಂದಿಗೆ……

ಕತ್ತೆ ಕಲಿಸಿದ ಪಾಠ

ಕತ್ತೆ ಎಂದ ಕೂಡಲೇ ಸೋಮಾರಿ, ಹೆಡ್ಡ, ಪೆದ್ದ ಎಂದೇ ನಮ್ಮ ಭಾವನೆ. ಯಾರಾದರೂ ಕರ್ಕಶವಾಗಿ ಹಾಡಿದರೆ ಆಹಾ, ಎಂಥ ಗಾರ್ದಭ ಸ್ವರ ಎಂದು ಗೇಲಿ. ಬಾಲ್ಯದ ನೆನಪು. ಐದನೇ ಕ್ಲಾಸಿನಲ್ಲಿ ಗಣಿತದಲ್ಲಿ ನಾನು ಹಿಂದೆ ಇದ್ದಿದ್ದರಿಂದ ಸುಶೀಲಮ್ಮ ಟೀಚರ್ ಬೆನ್ನಿಗೆ ಒಂದು ಏಟು ಹಾಕುತ್ತಾ ಹೇಳಿದ್ದು ‘ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯಿತು” ಅಂತ. ಇಷ್ಟಕ್ಕೇ ಸೀಮಿತ ಕತ್ತೆಯ ಬಗೆಗಿನ ನಮ್ಮ ಜ್ಞಾನ. ಕೆಳಗಿದೆ ನೋಡಿ ಕತ್ತೆ ನಮಗೆ ಕಲಿಸುವ ಬದುಕಿನ ಪಾಠ. ಯಶಸ್ವೀ ಬದುಕಿಗೆ ಬೇಕಾದ ಸೂತ್ರ ಕಲಿಸಲು ಸ್ಟೀಫನ್ ಕವೇ, ದೀಪಕ್ ಚೋಪ್ರ ಅಥವಾ “ಎಕ್ಹಾರ್ಟ್ ತೂಲೇ” ಯಂಥ ಮಾಡರ್ನ್ “ಗುರು” ಗಳೇ ಆಗಬೇಕೆಂದಿಲ್ಲ. ಕತ್ತೆಯೂ ಸಹ ಆಗಬಹುದು ಗುರುವರ್ಯ.

ಒಂದು ದಿನ ಓರ್ವ ರೈತನ ಕತ್ತೆ ಹಾಳು ಬಾವಿಯೊಳಕ್ಕೆ ಬಿದ್ದು ಬಿಡುತ್ತದೆ. ಕತ್ತೆಯ ಆಕ್ರಂದನ ಕೇಳಿ ರೈತ ಅಲ್ಲಿಗೆ ಧಾವಿಸಿ ಬಂದು ನೋಡುತ್ತಾನೆ. ಸ್ವಲ್ಪ ಹೊತ್ತು ಯೋಚಿಸಿ, ಏನು ಮಾಡಬೇಕೆಂದು ಹೊಳೆಯದೆ ಹೇಗೂ ಈ ಕತ್ತೆಗೆ ವಯಸ್ಸಾಗಿ ಬಿಟ್ಟಿದೆ, ಅಲ್ಲಿಗೇ ಮಣ್ಣು ಹಾಕಿ ಸಮಾಧಿ ಮಾಡಿದರಾಯಿತು ಎಂದು ತನ್ನ ಪರಿಚಿತರನ್ನು ಕರೆಯುತ್ತಾನೆ ಸಹಾಯಕ್ಕೆಂದು. ಎಲ್ಲರೂ ಸೇರಿ ಕತ್ತೆಯ ಮೇಲೆ ಮಣ್ಣನ್ನು ಅಗೆದು ಹಾಕಲು ಆರಂಭಿಸುತ್ತಾರೆ. ಮೊದಮೊದಲಿಗೆ ಸುಮ್ಮನಿದ್ದ ಕತ್ತೆಗೆ ಕೊನೆಗೆ ಹೊಳೆಯುತ್ತದೆ ಇವರು ನನ್ನನ್ನು ಉಳಿಸಲು ಅಲ್ಲ ಬಂದಿದ್ದು, ಬದಲಿಗೆ ಜೀವಂತ ಸಮಾಧಿ ಮಾಡಲು ಎಂದು ದೈನ್ಯತೆಯಿಂದ ಅಳಲು ಆರಂಭಿಸುತ್ತದೆ. ಕತ್ತೆಯ ಅಳು ಯಾರಿಗೂ ಕೇಳಿಸುವುದಿಲ್ಲ. ಸ್ವಲ್ಪ ಹೊತ್ತಿನ ನಂತರ ಕತ್ತೆ ತನ್ನ ಆಕ್ರಂದನ ನಿಲ್ಲಿಸಿ ತನ್ನ ಮೇಲೆ ಬೀಳುತ್ತಿದ್ದ ಮಣ್ಣನ್ನು ಕೊಡವಿ ಒಂದು ಹೆಜ್ಜೆ ಮೇಲೆ ಇಡುತ್ತದೆ. ಹೀಗೆ ಒಂದೇ ಸಮನೆ ತನ್ನ ಮೇಲೆ ಮಣ್ಣು ಬೀಳುತ್ತಿದ್ದರೂ ಕತ್ತೆ ಮಾತ್ರ ಸಾವಧಾನದಿಂದ ಮೈ ಕೊಡವುತ್ತಾ ಒಂದೊಂದೇ ಹೆಜ್ಜೆ ಗಳನ್ನು ಮೇಲಕ್ಕೆ ಇಡುತ್ತಾ ಹೋಗುತ್ತದೆ. ಇದನ್ನು ಗಮನಿಸಿದ ಜನರಿಗೆ ಆಶ್ಚರ್ಯ ಮತ್ತು ಸ್ವಲ್ಪ ಹೊತ್ತಿನಲ್ಲಿ ಕತ್ತೆ ಬಾವಿಯಿಂದ ಹೊರಕ್ಕೆ ಬಂದಿರುತ್ತದೆ. ಈ ವಿಸ್ಮಯದ ಬಗ್ಗೆ, ಕತ್ತೆಯ ಜಾಣ್ಮೆಯ ಬಗ್ಗ್ಗೆ ಜನ ತಮ್ಮ ತಮ್ಮಲ್ಲೇ ಮಾತನಾಡುತ್ತಿದ್ದರೆ ಕತ್ತೆ ಮಾತ್ರ ಅಳಿದುಳಿದ ಧೂಳನ್ನು ತನ್ನ ಮೈ ಮೇಲಿಂದ ಕೊಡವಿ ಗಾಂಭೀರ್ಯದಿಂದ ತನ್ನ ದಾರಿ ಹಿಡಿಯುತ್ತದೆ.

ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ರಾಶಿ, ಹೆಜ್ಜೆ ಮೇಲೆ ಹೆಜ್ಜೆ ಇಟ್ಟಾಗ ಗುರಿಯ ಸಾಫಲ್ಯ.

ಈ ಕತೆ ಕಲಿಸುವ ನೀತಿ ಏನೆಂದರೆ, ಬದುಕು ನಿಮ್ಮ ಮೇಲೆ ಮಣ್ಣನ್ನು ಎರಚುತ್ತಿರುತ್ತದೆ. ಎಲ್ಲಾ ರೀತಿಯ ಮಣ್ಣನ್ನು.

ಉಪಾಯವೇನೆಂದರೆ ಮೇಲೆ ಬಿದ್ದ ಮಣ್ಣನ್ನು ಕೊಡವಿ ಮೆಲಕ್ಕೆಳಲು ಶ್ರಮಿಸುವುದು.

ನಮ್ಮ ಪ್ರತೀ ಹೆಜ್ಜೆಯೂ ಉನ್ನತಿ ಕಡೆಗಿನ ಯಾತ್ರೆ. ಎಷ್ಟೇ ಆಳವಾದ ಬಾವಿಯಿಂದಲಾದರೂ ಸರಿ ನಾವು ಹೊರಕ್ಕೆ ಬರಬಹುದು ತಾಳ್ಮೆ, ಛಲವೊಂದಿದ್ದರೆ.

ಕೊಡವಿ ಮತ್ತು ಎದ್ದೇಳಿ.

ಮೇಲಿನ ನೀತಿ ಪಾಠಕ್ಕೆ ಮತ್ತೈದು ಸೂತ್ರಗಳನ್ನು ಸೇರಿಸಿಕೊಳ್ಳಿ.

ಹಗೆಯಿಂದ ದೂರವಿರಿ. ಕ್ಷಮಾಶೀಲರಾಗಿ. ಯಾರದೋ ತಾತ ಮುತ್ತಾತ ಮಾಡಿದ ಪಾಪಕ್ಕೆ ಅವರ ಮಕ್ಕಳ ಬದುಕು ಅಸಹನೀಯವಾಗಿಸಬೇಡಿ.

ಚಿಂತೆಯಿಂದ ದೂರವಿರಿ. ನಾವು ಊಹಿಸಿಕೊಳ್ಳುವ ಬಹುತೇಕ ಚಿಂತೆಗಳು ಬಹುಮಟ್ಟಿಗೆ ಎದುರಾಗಲಾರವು.

ಸರಳವಾಗಿ ಬದುಕಿ. ಇರುವುದರಲ್ಲೇ ತೃಪ್ತಿಯನ್ನು ಕಾಣಿರಿ.

ನಿಮ್ಮಲ್ಲಿ ಇರುವುದರಲ್ಲಿ ಸ್ವಲ್ಪ ಇಲ್ಲದವರಿಗೂ ಕೊಡಿ. ನಿಮ್ಮಿಂದ ಪಡೆದುಕೊಂಡವನ ಮುಖದ ಮೇಲೆ ನೀವು ಕಾಣುವ ಧನ್ಯತಾ ಭಾವ ಯಾವ ಸ್ವರ್ಗಕ್ಕೂ ಕಡಿಮೆಯಲ್ಲ. ಕೊನೆಯದಾಗಿ, ಜನರಿಂದ ಅತಿ ಕಡಿಮೆಯನ್ನೇ ಬಯಸಿರಿ. ಆದರೆ ನಮ್ಮೆಲ್ಲರನ್ನೂ ಸೃಷ್ಟಿಸಿದ ಭಗವಂತನಿಂದ ಮಾತ್ರ ಅತಿ ಹೆಚ್ಚಿನದನ್ನು ನಿರೀಕ್ಷಿಸಿ. ಏಕೆಂದರೆ ಎಂದಿಗೂ ಬರಿದಾಗದ ಖಜಾನೆ ಅವನಲ್ಲಿದೆ.