ಇನ್ನೂರು ರೂಪಾಯಿಗೆ ಒಂದು ವರ್ಷ

ಇನ್ನೂರು ರೂಪಾಯಿ ಕದ್ದ ಆರೋಪಕ್ಕೆ ಹದಿ ಹರೆಯದ ಹುಡುಗನಿಗೆ ನ್ಯಾಯಾಲಯ ವಿಧಿಸಿದ ಶಿಕ್ಷೆ ಒಂದು ವರ್ಷದ ಕಾರಾಗೃಹ ವಾಸ. ಸಾವಿರಾರು ಕೋಟಿ ನುಂಗಿದ, ತೆರಿಗೆ ಪಾವತಿಸದೆ ಮೆರ್ಸಿ ಡೀಸ್, BMW ಕಾರುಗಳಲ್ಲಿ ರಾಜಾರೋಷವಾಗಿ ಓಡಾಡುವ ಕಳ್ಳರಿಗೆ ಹೋದಲ್ಲೆಲ್ಲಾ ಮಣೆ, ಆದರ, ಅಭಿಮಾನ, ಸನ್ಮಾನ. ಭಾರತ ಕೇವಲ ಶ್ರೀಮಂತರ, ಲೂಟಿಕೋರರ, ಬಾಲಿವುಡ್, ಕ್ರಿಕೆಟ್ ತಾರೆಯರ, ಅಧಿಕಾರವಿರುವವರ ಉಲ್ಲಾಸಕ್ಕಾಗಿ ಇರುವ  ನಾಡೇ? ಹುಡುಗ ಜೈಲಿನಿಂದ ಹೊರ ಹೋಗುವಾಗ ಇಂಥಾ ಕೆಲಸ ಇನ್ನೊಮ್ಮೆ ಮಾಡಬೇಡ ಎಂದು ಪೋಲೀಸಪ್ಪನೊಬ್ಬ ಹೇಳುತ್ತಾನಂತೆ. ಈ ಮಾತನ್ನು ಕಿನ್ನಿಮೋಳಿಗೋ, ಕಲ್ಮಾಡಿಗೋ, ರಾಜಾಗೋ ಹೇಳಲು ಪೇದೆಯೊಬ್ಬನಿಂದ  ಸಾಧ್ಯವೇ?

ಸಮಾಜದ ಗಣ್ಯ ವ್ಯಕ್ತಿಗಳು ಮಾಡಿದ ಪಾಪಗಳು ಸೆಷನ್ಸ್ ಕೋರ್ಟು, ಹೈ ಕೋರ್ಟು, ಸುಪ್ರೀಂ ಕೋರ್ಟು, ಸುಳ್ಳು ಸುಳ್ಳೇ ಮಾತನಾಡುವ ಕರಿ ಕೋಟುಗಳನ್ನೆಲ್ಲಾ ಸುತ್ತಿ ಸುತ್ತಿ ಬಸವಳಿದು ಕೊನೆಗೆ ಮರೆಯಾಗಿ ಹೋಗುತ್ತವೆಯೇ ವಿನಃ ಮಹನೀಯರುಗಳು ಅನುಭವಿಸಿದ ಜೈಲು ಶಿಕ್ಷೆ ಬಗ್ಗೆ ಓದಿದ ನೆನಪಿದೆಯೇ?