ತೇರೆ ಬಿನ್ ಲಾದೆನ್…

ಲಾದೆನ್, ನೀನಿಲ್ಲದೆ… ಸಿನೆಮಾ ದೊಡ್ಡ ಸುದ್ದಿ ಮಾಡಿತು ನಮ್ಮ ದೇಶದಲ್ಲಿ. ಲಾದೆನ್ ಬಗೆಗೆ ಅಮೆರಿಕೆಯ ಅತಿ ಆಸಕ್ತಿಯ ಕುರಿತು ರಚಿಸಿದ ಈ ಚಿತ್ರ ವೀಕ್ಷಕರನ್ನು ರಂಜಿಸಿತು. ಲಾದೆನ್ ನ         enigma ರಾಜಕಾರಣಿ, ಸುದ್ದಿ ಪಂಡಿತರನ್ನು ಮಾತ್ರವಲ್ಲ ಚಿತ್ರರಂಗವನ್ನೂ ಬಾಧಿಸಿತು. ಹತ್ತು ಹಲವು ವರ್ಷಗಳಿಂದ ಒಂದೇ ಸಮನೆ ಅಮೇರಿಕಾ ಲಾದೆನ್ ಗಾಗಿ ಪ್ರಪಂಚ ಜಾಲಾಡಿದರೂ ಸಿಗದೇ ಹತಾಶವಾಗಿದ್ದಾಗ ಇದ್ದಕ್ಕಿದ್ದಂತೆ, ಯಾವ ಸುಳಿವೂ, ಮುನ್ಸೂಚನೆಯೂ ಇಲ್ಲದೆ justice is done, Laden is gone ಎಂದು ಬೆಳ್ಳಂ ಬೆಳಗ್ಗೆ  ಕೇಳಿ ತಬ್ಬಿಬ್ಬಾದ ನಮಗೆ ಲಾದೆನ್ ಸಾವು ಸಿನಿಮೀಯ ರೀತಿ ಎಂದು ಅನ್ನಿಸಿದರೆ ತಪ್ಪಾಗಲಾರದು. ಹತ್ತು ವರ್ಷಗಳಿಂದ ಅತ್ಯಾಧುನಿಕ ಉಪಗ್ರಹಗಳಿಂದ ಹಿಡಿದು ಅಮೇರಿಕನ್ ಸೈನಿಕರ high tech binocular ಗಳಿಗೂ ಸಿಗದೇ ತಪ್ಪಿಸಿಕೊಳ್ಳುತ್ತಿದ್ದ ಬಿನ್ ಲಾದೆನ್ ದಿಢೀರನೆ ಕೊಲ್ಲಲ್ಪಟ್ಟ ಎಂದರೆ ಒಂದು ರೀತಿಯ ಸಿನಿಮೀಯ ತಾನೇ?  

ಲಾದೆನ್ ಬರೀ ಅಮೆರಿಕೆಗೆ ಮಾತ್ರವಲ್ಲ, ನಮ್ಮ ದೇಶದಲ್ಲೂ ಕುತೂಹಲ, ಭಯ, ಆಕ್ರೋಶ ಬರಿಸಿದ ಹೆಸರು. ಅಮೆರಿಕೆಯ ಮೇಲೆ ಮತ್ತು ವಿಶ್ವದ ಇತರೆ ನಗರಗಳಲ್ಲಿ ತನ್ನ ಸಾವಿನ ಏಜೆಂಟರನ್ನು ಹರಿಬಿಟ್ಟ ಲಾದೆನ್ ಕೊನೆಗೂ ಸೆಣೆಸುತ್ತಾ  ಉರುಳಿ ಬಿದ್ದ ಅಮೆರಿಕೆಯ ನಾವಿಕ ದಳದ ಯೋಧರ ಗುಂಡುಗಳಿಗೆ,  ಪಾಕಿಸ್ತಾನದ “ಅಬೋಟ್ಟಾಬಾದ್” ನಗರದಲ್ಲಿ.

ಅಬೋಟ್ಟಾಬಾದ್, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ ೩೫ ಮೈಲು ದೂರ ಇರುವ, ಪ್ರತಿಷ್ಠಿತ ಸೈನಿಕ ತರಬೇತಿ ಕಾಲೇಜು ಹೊಂದಿದ ಈ ನಗರದಲ್ಲಿ ಬಿನ್ ಲಾದೆನ್ ಸುಮಾರು ಐದು ವರ್ಷಗಳಿಗೂ ಹೆಚ್ಚು ಕಾಲ ಅವಿತು ಕೊಂಡಿದ್ದ ಎಂದರೆ ಯಾರೂ ದಂಗಾಗುವರು. ಅಮೆರಿಕೆಯಂತೂ ಮೂರ್ಛೆ ಬೀಳುವುದೊಂದು ಬಾಕಿ. ಭಯೋತ್ಪಾದನೆ ತಡೆಯಲು, ಲಾದೆನ್ ಕ್ರುತ್ಯಗಳನ್ನು ತಡೆಯಲು ಪಾಕಿಸ್ತಾನದ ಬೆಂಬಲ ಪಡೆದಿದ್ದ ಅಮೇರಿಕಾ ಈ ಸಹಾಯಕ್ಕೆ ಕೊಡುತ್ತಿದ್ದ ಫೀಸು ವರ್ಷಕ್ಕೆ ೩ ಬಿಲ್ಲಿಯನ್ ಡಾಲರ್. ಯಾಚಕ ದೇಶ. ಇಂಥದ್ದೇ ಮತ್ತೊಂದು ಯಾಚಕ ದೇಶ ಇಸ್ರೇಲ್. ಬಿನ್ ಲಾದೆನ್ ನನ್ನು ಹುಡುಕುತ್ತಿದ್ದೇವೆ, ತಾಲಿಬಾನಿ ಗಳನ್ನು ಸದೆ ಬಡಿಯುತ್ತಿದ್ದೇವೆ ಎಂದು ಸುಳ್ಳು ಸುಳ್ಳೇ ಭರವಸೆ ನೀಡುತ್ತಾ ಅಮೆರಿಕೆಯ ಡಾಲರುಗಳ ಲಂಚವನ್ನು ಲಜ್ಜೆಯಿಲ್ಲದೆ ಸ್ವೀಕರಿಸಿದ ಪಾಕ್ ಅಮೆರಿಕೆಗೆ ಮೋಸ ಮಾಡಿತೆಂದೇ ವಿಶ್ವದ, ಅಮೆರಿಕನ್ನರ ನಂಬಿಕೆ. ಈ ರೀತಿ ಪುಕ್ಕಟೆ ಯಾಗಿ ಸಿಗುತ್ತಿದ್ದ ಸಂಪತ್ತನ್ನು ನುಂಗುತ್ತಿದ್ದ ಪಾಕಿಗೆ ಲಾದೆನ್ ಚಿನ್ನದ ತತ್ತಿ ಇಡುವ ಕೋಳಿ. main source of income. ಪಾಪ, ಲಾದೆನ್ ಸಾವಿನಿಂದ ದೊಡ್ಡ, ಭರಿಸಲಾರದ ನಷ್ಟ ಪಾಕಿಗೆ.  

ಪಾಕಿಸ್ತಾನ ಮಾತ್ರ ತನಗೆ ಲಾದೆನ್ ನ ಇರುವಿನ ಬಗ್ಗೆ ಗೊತ್ತೇ ಇಲ್ಲ ಎಂದು ಆಣೆ ಹಾಕಿ ಹೇಳಿದರೂ circumstantial evidence ಇದಕ್ಕೆ ವ್ಯತಿರಿಕ್ತ. ಈ ವಿವಾದದಲ್ಲಿ ಮತ್ತೊಂದು ಸಮಸ್ಯೆ ಇದೆ. ಅಮೇರಿಕಾ ಮತ್ತು ಪಾಕಿಸ್ತಾನ chronic liars. ಶುದ್ಧ ಸುಳ್ಳರು. ಈ ಇಬ್ಬರ ತಗಾದೆ ಬಗೆಹರಿಸಲು ಇಲ್ಲಿದೆ ಲಿಟ್ಮಸ್ ಟೆಸ್ಟ್. ಲಾದೆನ್ ಎಲ್ಲಿದ್ದಾನೆ ಎನ್ನುವುದು ಪಾಕಿಗೆ ತಿಳಿದಿತ್ತೆ? ಪಾಕಿನ ಸಹಾಯವಿಲ್ಲದೆ ಅಮೆರಿಕೆಯ ಬ್ಲಾಕ್ ಹಾಕ ಹೆಲಿಕಾಪ್ಟರ್ ಗಳು ಹೇಗೆ ತಾನೇ ಲಾದೆನ್ ಇರುವಲ್ಲಿಗೆ ಬರಲು ಸಾಧ್ಯ? ಅಲ್ಕೈದಾ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಬಹುದು ಎನ್ನುವ ಭೀತಿ ಪಾಕಿಗೆ ತಾನು ಈ ಸಾಹಸದಲ್ಲಿ ಪಾಲು ಗೊಂಡಿಲ್ಲ ಎಂದು ಹೇಳಲು ಪ್ರೇರೇಪಿಸುತ್ತಿರಬಹುದೇ? ಪಾಕಿಸ್ತಾನದ ಪರಿಸ್ಥತಿ ಅಡಕ್ಕೊತ್ತರಿ ಯಲ್ಲಿ ಸಿಕ್ಕ ಅಡಿಕೆಯಂತೆ. ಲಾದೆನ್ ಇರುವ ಸ್ಥಳ ತೋರಿಸಿ ಅಮೆರಿಕೆಗೆ ಸಹಕಾರ ನೀಡಿದೆ ಎಂದರೆ ಅಲ್ ಕೈದಾ ಬಿಡೋಲ್ಲ, ಲಾದೆನ್ ಎಲ್ಲಿದ್ದಾನೆ ಎಂದು ತನಗೆ ತಿಳಿದಿಲ್ಲ ಎಂದರೆ ಅಮೇರಿಕಾ ಬಿಡೋಲ್ಲ. ಸುಮಾರು  ಐದು ವರ್ಷಗಳ ಕಾಲ ದೊಡ್ಡ ಪಾಕಿಸ್ತಾನದ ರಾಜಧಾನಿಯ ಹಿತ್ತಲಿನಲ್ಲಿ,  ಬಂಗಲೆಯೊಂದರಲ್ಲಿ ವಾಸಿಸುತ್ತಿದ್ದ ಲಾದೆನ್ ಬಗ್ಗೆ ಪಾಕ್ ಸೈನ್ಯಕ್ಕೆ, ಸರಕಾರಕ್ಕೆ ತಿಳಿದಿಲ್ಲ ಎಂದರೆ ದೊಡ್ಡ ಆಶ್ಚರ್ಯವೇ. ಒಂದು ವೇಳೆ ಪಾಕಿಗೆ ಲಾದೆನ್ ಪಾಕಿನಲ್ಲಿ ಇರುವ ಅರಿವು ಇಲ್ಲದಿದ್ದರೆ ಅಮೇರಿಕಾ ತಾನು ನೀಡುವ ಉದಾರ ಧನ ಸಹಾಯ ಮುಂದುವರೆಸಬಹುದು. ಅಥವಾ ಲಾದೆನ್ ಪಾಕಿಸ್ತಾನದಲ್ಲಿ ಇರುವುದನ್ನು ಅಮೆರಿಕೆಗೆ ತಿಳಿಸದೇ ಡಬಲ್ ಗೇಂ ಆಡಿದ್ದರೆ ಪಾಕಿಸ್ತಾನವನ್ನು ದಾರಿಗೆ ತರುವ ಕೆಲಸ ಅಮೇರಿಕಾ ಶೀಘ್ರ ಶುರು ಮಾಡಬೇಕು. ಇದೇ ಟೆಸ್ಟು. Litmus ಟೆಸ್ಟು.    

ಬಿನ್ ಲಾದೆನ್ ಇಲ್ಲದೆ ಪಾಕ್ ಹೇಗೆ ತಾನೇ ಜೀವಿಸೀತು ಎನ್ನುವುದೀಗ ಆಸಕ್ತಿಕರ ಪ್ರಶ್ನೆ. ಪ್ರೀತೀ,  ನೀನಿಲ್ಲದೆ ನಾ ಹೇಗಿರಲಿ… ಎಂದು ಶೋಕ ಗೀತೆ ಹಾಡುತ್ತಿರಬಹುದೇ ಪಾಕಿಗಳು?

೨೦೦೧ ರ ಅಮೆರಿಕೆಯ ವಿರುದ್ಧದ ಧಾಳಿಗೆ ಬಿನ್ ಲಾದೆನ್ ನನ್ನು ನೇರ ಹೊಣೆಯಾಗಿರಿಸಿದ ಜಾರ್ಜ್ ಬುಶ್, ಬಿನ್ ಲಾದೆನ್ wanted, dead or alive ಎಂದು ಘೋಷಿಸಿದ. ಅಮೆರಿಕೆಯ ಮೇಲೆ ನಿರ್ದಯೀ, ಭೀಕರ ಧಾಳಿ ಮಾಡಿ ತಾನು ಒಂದು ದಿನ ಪೂರ್ತಿ ರಹಸ್ಯ ಅಡಗು ತಾಣವೊಂದರಲ್ಲಿ ದಿನ ಕಳೆಯುವಂತೆ ಮಾಡಿದ ಬಿನ್ ಲಾದೆನ್ ನ ತಲೆಗೆ ೨೫ ಮಿಲ್ಲಿಯನ್ ಡಾಲರ್ ಮೊತ್ತದ ಬೆಲೆಯನ್ನೂ ಕಟ್ಟಿದ ಬುಶ್.  ಹೊಗೆಯುಗುಳುತ್ತಾ ನೆಲಕ್ಕುರುಳಿದ ನ್ಯೂಯಾರ್ಕ್ ನ ಗಗನ ಚುಂಬಿ ಕಟ್ಟಡಗಳು ಅಮೆರಿಕನ್ನರ ಚಿತ್ತ ಕಲಕಿದವು. ಕ್ರುದ್ಧ ಅಮೇರಿಕಾ ಬಿನ್ ಲಾದೆನ್ ಅಡಗಿದ್ದ ಆಫ್ಘಾನಿಸ್ತಾನ ವನ್ನು ಆಕ್ರಮಣ ಮಾಡಿತು. ಬಿನ್ ಲಾದೆನ್ ಎಲ್ಲಿದ್ದರೂ ಹೊಗೆ ಹಾಕಿ ಹೊರತೆಗೆಯುತ್ತೇನೆ ಎಂದು ಘರ್ಜಿಸಿದ ಬುಶ್ ಆಫ್ಘಾನಿಸ್ತಾನದ ಗುಡ್ಡಗಾಡು ಗಳನ್ನು ಮಾತ್ರವಲ್ಲ ಅಲ್ಲಿನ ತೋರಾ ಬೋರಾ ಗವಿ ಸಮುಚ್ಛಯಗಳನ್ನು ಜಾಲಾಡಿದ. ಸೋವಿಯೆಟ್ ಸೇನೆಗೆ ಚಳ್ಳೆ ಹಣ್ಣು ತಿನ್ನಿಸಿದ್ದ, ಸ್ವತಃ ಅಮೆರಿಕನ್ನರಿಂದಲೇ ತರಬೇತಿ ಪಡೆದ, ಸ್ವಾತಂತ್ರ್ಯ ಹೋರಾಟಗಾರ ಎಂದು ರೋನಾಲ್ಡ್ ರೇಗನ್ನರಿಂದ ಹೊಗಳಿಸಿಕೊಂಡಿದ್ದ  ಬಿನ್ ಲಾದೆನ್ ರಂಗೋಲಿ ಕೆಳಗೆ ತೂರಿಕೊಳ್ಳುವುದನ್ನು ಕರಗತ ಮಾಡಿಕೊಂಡ.  

ಬಿನ್ ಲಾದೆನ್,  wanted, dead or alive ಎಂದ ಅಮೇರಿಕಾ ಲಾದೆನ್ ಇರುವ ಮನೆಯ ಮೇಲೆ ಧಾಳಿ ಮಾಡಿ, ೪೦ ನಿಮಿಷಗಳ ಕಾಳಗದಲ್ಲಿ ಎರಡು ಗುಂಡುಗಳನ್ನು ಲಾದೆನ್ ತಲೆಗೆ ಸಿಡಿಸಿ ಕೊಂದಿದ್ದಾರೂ ಏಕೆ? ಅವನನ್ನು ಜೀವಂತ ಸೆರೆ ಹಿಡಿದು, ಅಮೆರಿಕೆಯ USS COLE , ಆಫ್ರಿಕಾದ ದಾರುಸ್ಸಲಾಮ್, ಸ್ಪೇನ್ ನ MADRID, ಲಂಡನ್, ಸೌದಿ ಅರೇಬಿಯಾದ ದಹರಾನ್, ಇರಾಕ್, ಸೋಮಾಲಿಯಾ, ಇಂಡೋನೇಷ್ಯಾದ ಬಾಲಿ ಮುಂತಾದ ನಗರಗಳ ಮೇಲೆ ಧಾಳಿ ಮಾಡಿದ ಈತನನ್ನು ವಿಚಾರಣೆ ಮಾಡಬಹುದಿತ್ತಲ್ಲ. ಅಮೆರಿಕೆಯ ಕಾರ್ಯ ವೈಖರಿ ಆ ದೇಶದಷ್ಟೇ ನಿಗೂಢ. ಕ್ರಿಸ್ಟಫರ್ ಕೊಲಂಬಸ್ ಕಂಡು ಹಿಡಿಯುವವರೆಗೂ ನಿಗೂಢವಾಗಿದ್ದ ದೇಶವಲ್ಲವೇ ಅಮೇರಿಕಾ? ಈತನನ್ನು ಸೆರೆ ಹಿಡಿದು ಅಮೇರಿಕಾ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿ ಕೊಳ್ಳಲು ಇಷ್ಟ ಪಡಲಿಲ್ಲ. ವಿಚಾರಣೆ ವೇಳೆ ಬಿನ್ ಲಾದೆನ್ ಬಾಯಿ ಬಿಟ್ಟರೆ ತಾವು ಕೇಳಲು ಇಚ್ಛಿಸುವುದಕ್ಕಿಂತ ಸ್ವಲ್ಪ ಹೆಚ್ಚನ್ನೇ ಬಡಬಡಿಸಬಹುದು. ಈ ಕಸಿವಿಸಿಯಿಂದ ಪಾರಾಗಲು ಇರುವ ಒಂದೇ ದಾರಿ ಎಂದರೆ ನೇರ ಆಕ್ರಮಣ. ಈ ಆಕ್ರಮಣದಲ್ಲಿ ಅಮೇರಿಕಾ ಯಶಸ್ಸನ್ನು ಕಂಡಿತು.         

ತಾನು ಕರಿಯನಾದ ಒಂದೇ ಕಾರಣಕ್ಕೆ ದಿನವೂ ಬಿಳಿ ಅಮೆರಿಕನ್ನರ ಕುಹಕಕ್ಕೆ, ಅವಹೇಳನಕ್ಕೆ  ಗುರಿಯಾಗುತ್ತಿದ್ದ ಒಬಾಮ ಕೊನೆಗೆ ತನ್ನ ಜೀವನದ ಅತಿ ದೊಡ್ಡ ಅವಮಾನವನ್ನು ಎದುರಿಸಬೇಕಾಯಿತು. ಒಬಾಮಾರ ಜನನ ಪ್ರಮಾಣ ಪತ್ರವನ್ನು ಬಲ ಪಂಥೀಯ ರಿಪಬ್ಲಿಕನ್ ಪಕ್ಷ ಕೇಳಿತು. ಒಬಾಮಾ ತನ್ನ ಜನನ ಪ್ರಮಾಣ ಪತ್ರದ ಜೊತೆ ಜೊತೆಗೇ ಅಮೆರಿಕನ್ನರ ಸಿಂಹಸ್ವಪ್ನನಾಗಿದ್ದ ಲಾದೆನ್ ನ ಸಾವಿನ ಪ್ರಮಾಣ ಪತ್ರವನ್ನೂ ಅಮೆರಿಕನ್ನರಿಗೆ ನೀಡಿ ತಾನು ಕಾರ್ಯಕ್ಷಮತೆಯಲ್ಲಿ ಯಾವ ಬಿಳಿ ಅಧ್ಯಕ್ಷನಿಗೂ ಕಡಿಮೆಯಲ್ಲ ಎನ್ನುವುದನ್ನು ತೋರಿಸಿ ಕೊಟ್ಟರು.   

ಒಸಾಮಾ ಬಿನ್ ಮುಹಮ್ಮದ್ ಬಿನ್ ಅವಾದ್ ಬಿನ್ ಲಾದೆನ್.  ೫೪ ವರ್ಷ ಪ್ರಾಯದ, ಆರಡಿ ಮೂರಿಂಚು ಎತ್ತರದ ಸ್ಫುರದ್ರೂಪಿ ಮತ್ತು ಆಗರ್ಭ ಶ್ರೀಮಂತ ಆಫ್ಘನ್ ಗುಡ್ಡ ಗಾಡಿನ ಜನರ ವಿಶ್ವಾಸ, ಪ್ರೀತಿ, ಅಭಿಮಾನ ಗಳಿಸಲು ಕಾರಣವಾಗಿದ್ದಾದರೂ ಏನು? ಜನರೊಂದಿಗೆ ಸುಲಭವಾಗಿ, ಆತ್ಮೀಯತೆಯಿಂದ ಬೆರೆಯುತ್ತಿದ್ದ ಈತ ಸೌಮ್ಯ ಮಾತುಗಾರಿಕೆಯಿಂದ, ತನ್ನ ಉದಾರ ಸ್ವಭಾವದಿಂದ ಅಲ್ಲಿನ ಯುವಜನರ ಮನ ಗೆದ್ದಿದ್ದ. ಕೋಟ್ಯಾಧೀಶ ಮನೆತನದಿಂದ ಬಂದ ಈತ ಐಶಾರಾಮದ ಬದುಕನ್ನು ಬಿಟ್ಟು ಆಫ್ಘನ್ ಗುಡ್ಡಗಾಡಿನಲ್ಲಿ ಒಣಗಿದ ಚಪಾತಿ ತಿನ್ನುತ್ತಾ ತಮ್ಮೊಂದಿಗೆ ಇರುತಿದ್ದ ಈತನನ್ನು ಕಂಡು ಜನ ಮಾರುಹೋದರು. ಸೋವಿಯೆಟ್ ಸೈನ್ಯದೊಂದಿಗೆ ಹೋರಾಡಿದ ಈತ ಓರ್ವ ಸೈನಿಕನೊಂದಿಗೆ hand to hand combat ನಲ್ಲಿ ಸೈನಿಕನ್ನು ಕೊಂದು ಅವನ kalashnikov ಬಂದೂಕನ್ನು ವಶಪಡಿಸಿ ಕೊಂಡಿದ್ದ. ಈ ಬಂದೂಕು ಅವನ ಅಭಿಮಾನದ ಸ್ವತ್ತಾಗಿತ್ತು.

ಈತ ಆರಂಭಿಸಿದ ಅಲ್ ಕೈದಾ ಒಂದು ಸಂಘಟನೆಯೋ ಆಗಿರದೆ ಒಂದು ತೆರನಾದ ideology ಆಗಿತ್ತು. ಸದಸ್ಯ ಶುಲ್ಕವಾಗಲೀ, ಯಾವುದೇ formal induction ಆಗಲಿ ಬೇಕಿಲ್ಲದ ಈ ವಿಚಾರಧಾರೆಗೆ ಮೂರು ಅಂಶಗಳೇ ಉರುವಲಾಗಿ ಕೆಲಸ ಮಾಡುತ್ತಿದ್ದವು. ಆಕ್ರೋಶ, ನಿರಾಶೆ, ನಿಸ್ಸಹಾಯಕತೆ (anger, frustration, desperation).  ಒಂದು ಕಡೆ ಮುಸ್ಲಿಂ ದೇಶಗಳಲ್ಲಿನ ಆಳುವವರ ಭ್ರಷ್ಟಾಚಾರ ಸಾಲದು ಎಂಬಂತೆ ಅಮೆರಿಕೆಯ ಮೇಲಿನ ವಿಪರೀತ ಅವಲಂಬನೆ ಮತ್ತು ಅರಬ್ಬರ ಸಂಪತ್ತನ್ನು ಲೂಟಿ ಹೊಡೆಯುತ್ತಾ ಇಸ್ರೇಲ್ ದೇಶವನ್ನು ಸಾಕುತ್ತಿದ್ದ ಅಮೆರಿಕೆಯ ಆಟ ಈತನಲ್ಲಿ ಆಕ್ರೋಶ ಹುಟ್ಟಿಸಿತ್ತು. ಸೌದಿ ದೊರೆಗಳ ವಿರುದ್ಧವೂ ಈತ ಸಮರ ಸಾರಿದ ನಂತರ ಇವನ ವಿರೋಧಿಗಳ ಪಟ್ಟಿ ದೊಡ್ಡದಾಗುತ್ತಾ ಹೋಯಿತು. ಈತನ ನೂರಾರು ಹಿಂಬಾಲಕರಲ್ಲಿ ಹಲವರನ್ನು ಕೊಂದು, ನೂರಾರು ಜನರನ್ನು ಜೈಲಿಗೆ ತಳ್ಳಿ ಅಲ್ ಕೈದಾ ಪಿಡುಗನ್ನು ಕೊನೆಗಾಣಿಸಿದ ಸೌದಿ ಸರಕಾರ ಭಯೋತ್ಪಾದನೆ ತಡೆಯುವಲ್ಲಿ ಯಾವ ಕ್ರಮ ತೆಗೆದು ಕೊಳ್ಳುವುದಕ್ಕೂ ತಾನು ಹೇಸುವುದಿಲ್ಲ ಎಂದು ವಿಶ್ವಕ್ಕೆ ತೋರಿಸಿ ಕೊಟ್ಟಿತು.   

ಯಹೂದಿಗಳ ಕೈಯ್ಯಲ್ಲೂ, ಅಮೆರಿಕೆಯ ಕೈಯ್ಯಲ್ಲೂ ಮುಸ್ಲಿಮರ ಮಾರಣ ಹೋಮ ನೋಡಿದ ಬಿನ್ ಲಾದೆನ್ ಪ್ರತಿಕ್ರಯಿಸಿದ್ದು ಹಿಂಸಾ ಮಾರ್ಗದಿಂದ. ಸುಮಾರು ೧೫೦೦ ವರ್ಷಗಳ ಚರಿತ್ರೆ ಇರುವ ಇಸ್ಲಾಂ ಧರ್ಮಕ್ಕೆ ಬಹುಶಃ ಸ್ವತಃ ಮುಸ್ಲಿಂ ಆದ ಬಿನ್ ಲಾದೆನ್ ಮಾಡಿದಷ್ಟು ಅಪಕಾರ ಬೇರಾರೂ ಮಾಡಿರಲಾರ ರೇನೋ? ತನ್ನ ಕುಕೃತ್ಯಗಳಿಂದ ಎರಡು ಯುದ್ಧಗಳಿಗೆ ಕಾರಣನಾದ, ಎರಡು ದಶಲಕ್ಷಕ್ಕೂ ಅಧಿಕ ಮುಸ್ಲಿಮರ ಸಾವಿಗೆ ಸಾಕ್ಷಿ ನಿಂತ ಬಿನ್ ಲಾದೆನ್ ಅದ್ಯಾವ ರೀತಿ ತಾನು ನಂಬಿದ ಧರ್ಮದ ಸೇವೆ ಮಾಡಿದನೋ ಅವನೇ ಬಲ್ಲ.  ವಿಶ್ವದ ಡಜನ್ ಗಟ್ಟಲೆ ಹೆಚ್ಚು ನಗರಗಳಲ್ಲಿ ಸಾವು ನೋವನ್ನು ತಂದು ನಿಲ್ಲಿಸಿದ ಬಿನ್ ಲಾದೆನ್ ಕೊನೆಗೂ ಹಿಂಸೆಯ ಮೂಲಕವೇ ತನ್ನ ಜೀವ ಕಳೆದುಕೊಂಡ. ಇಂಡೋನೇಷ್ಯಾದ “ಬಾಲಿ” ಯಿಂದ ಹಿಡಿದು ಆಫ್ರಿಕಾದ  ನೈರೋಬಿ ವರೆಗೆ ಸಾವು ನೋವಿನ ಕರಾಳ ಕಂಬಳಿಯನ್ನು ಹರಡಿದ ಬಿನ್ ಲಾದೆನ್ “ವಿನಾಕಾರಣ ಒಬ್ಬನನ್ನು ಕೊಂದರೆ ಇಡೀ ಮನುಕುಲವನ್ನು ಕೊಂದಂತೆ” ಎಂದ ಹೇಳಿದ ತನ್ನ ಭಗವಂತನ ಮುಂದೆ ನಿಂತು ಯಾವ ಸಮಜಾಯಿಷಿ ನೀಡುವನೋ?

ಬಿನ್ ಲಾದೆನ್ ನಿರ್ಗಮನದಿಂದ ನಮ್ಮೀ ವಿಶ್ವ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಗೆ ಕಾಲಗರ್ಭದಲ್ಲಿ ಅಡಗಿದೆ  ಉತ್ತರ.

ಟ್ವಿಟ್ಟರ್ ನಲ್ಲಿ ಸಿಕ್ಕಿದ್ದು:

Kentucky Fried Chicken ಶುರು ಮಾಡಿದ “ಕರ್ನಲ್ ಸ್ಯಾಂಡರ್ಸ್” ನ ನಿಧನದೊಂದಿಗೆ KFC ಯ franchising ನಿಲ್ಲಲಿಲ್ಲ. ಅದೇ ರೀತಿ ಅಲ್ ಕೈದಾ ಸ್ಥಾಪಕನ ಸಾವಿನಿಂದ ಅಲ್ ಕೈದಾ ಸಹ ಮುಗಿಯೋದಿಲ್ಲ.  ಆದರೆ ಇದೇ ವೇಳೆ, ಅಂತರಾಷ್ಟ್ರೀಯ ಖ್ಯಾತಿಯ, ಸಂಪಾದಕ ಭಾರತೀಯ ಮೂಲದ ಫರೀದ್ ಜಕರಿಯಾ ಹೇಳಿದ್ದು, loss of a symbol can end a movement.  

ವಿ. ಸೂ: ನನ್ನ ಈ ಲೇಖನ ಬಿನ್ ಲಾದೆನ್ ನ ಅವಸಾನ ಮತ್ತು ಅವಸಾನದ ಕ್ಷಣಗಳನ್ನು ಅಮೆರಿಕೆಯ ವೃತ್ತಾಂತವನ್ನು ಆಧರಿಸಿದ್ದು. ಯಾವುದೇ independent confirmation ಯಾರಿಗೂ ಲಭ್ಯವಾಗಿಲ್ಲ.      

 

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ

 

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಯಮಾಡಿ ಈ ವ್ಯಕ್ತಿಯನ್ನು ಭೆಟ್ಟಿಯಾಗಿ

ಬದುಕಿನಲ್ಲಿ ಸೋಲು, ಜೀವನದಲ್ಲಿ ಜಿಗುಪ್ಸೆ, ನಿರಾಸೆ, ಮೂಡಿದಾಗ ಬಹಳಷ್ಟು ಜನ ಸಾವಿನ ಮೊರೆ ಹೋಗುತ್ತಾರೆ. ಯಾವ ಧರ್ಮವೂ ಆತ್ಮಹತ್ಯಗೆ ಬೆಂಬಲ ನೀಡದೆ ಇದ್ದರೂ ಬದುಕು ದುಸ್ತರ, ದುರ್ಭರವಾದಾಗ ಯಾವ ಉಪದೇಶವೂ ಕೆಲಸಕ್ಕೆ ಬಾರದು. ಕೆಲವರು ವಿಷ ಸೇವಿಸಿ ಬದುಕಿಗೆ ಬೈ ಹೇಳಿದರೆ ಇನ್ನೂ ಕೆಲವರು ರೈಲು, ಹಗ್ಗ ಹೀಗೆ ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಕೆಲವರು ಎತ್ತರದ ಬಂಡೆ ಅಥವಾ ಕಣಿವೆಯ ತುದಿಯ ಮೇಲಿನಿಂದ ಜಿಗಿದು ಪ್ರಾಣ ಕಳೆದು ಕೊಳ್ಳುತ್ತಾರೆ. ಇಂಥ “ಸಾವಿನ  ತಾಣ” ಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ನಿರೀಕ್ಷೆಯಲ್ಲಿ ಒಬ್ಬ ವ್ಯಕ್ತಿ ಹತ್ತಾರು ವರ್ಷಗಳಿಂದ ದಿನ ಕಳೆಯುತ್ತಾನೆ. ಜನ ಕೆಳಕ್ಕೆ ಜಿಗಿದು ತಲೆ ಒಡೆದುಕೊಂಡು ಚೀರಿಡುತ್ತಾ ಸಾಯುವುದನ್ನು ನೋಡಿ ಆಸ್ವಾದಿಸಲು ಅಲ್ಲ. ಆತನ ಉದ್ದೇಶ ಬೇರೆಯೇ.

೮೪ ವರ್ಷ ಪ್ರಾಯದ ರಿಚೀ ಯಮನಿಗೆ ಪ್ರಿಯವಾದ ತಾಣಗಳಲ್ಲಿ ಕಾಲ ಕಳೆಯುತ್ತಾ ಯಮನ ಗಿರಾಕಿಗಳನ್ನು ತನ್ನೆಡೆ ಎಳೆದುಕೊಂಡು ಜೀವ ಉಳಿಸಿದ್ದು ಇದುವರೆಗೂ ಹೆಚ್ಚೂ ಕಡಿಮೆ ೧೬೦ ಜನರನ್ನು. ಯಮಧರ್ಮ ರಾಯನ ವ್ಯಾಪಾರ ಸಾವಾದರೆ ಈತನ ವ್ಯಾಪಾರ ಬದುಕಿನತ್ತ ಮತ್ತೊಂದು ನೋಟ ಹರಿಸಿ ಎರಡನೇ ಇನ್ನಿಂಗ್ಸ್ ಗೆ ಅವಕಾಶ ಮಾಡಿ ಕೊಡುವುದು. ಆಸ್ಟ್ರೇಲಿಯಾದ ಈ ಮಹಾತ್ಮ ತನ್ನ ೫೦ ವರ್ಷಗಳ ಈ “ಆತ್ಮ” ಸೇವೆಗೆ ತನ್ನನ್ನು ಮುಡಿಪಾಗಿರಿಸಿಕೊಂಡು ಸಮಾಜದ ಪ್ರಶಂಸೆಗೆ ಕಾರಣವಾಗಿರುವುದು ಅಚ್ಚರಿಯೇನಲ್ಲ ಅಲ್ಲವೇ? “the gap” ಎಂದು ಕರೆಯಲ್ಪಡುವ ಈ ಆತ್ಮಹತ್ಯೆಯ ಸ್ಪಾಟ್ ಇರುವುದು ಸಿಡ್ನಿ ಬಂದರು ಪ್ರದೇಶದಲ್ಲಿ. ಈ ಇಳಿ ಪ್ರಾಯದವನಿಗಾಗಿ ಯಮ ಅವನ ಮನೆ ತಡಕಾಡುತ್ತಿ ದ್ದರೆ ಈತ ಈ ದುರ್ಗಮ ಸ್ಥಳಕ್ಕೆ ಬಂದು ಜೀವನ ಶೂನ್ಯ ಎನ್ನುವವರಿಗೆ ಊರುಗೋಲಾಗಿ ನಿಲ್ಲುತ್ತಾನೆ. ಮೇಲೆ ಹೇಳಿದ ಕಣಿವೆಯ ತುದಿಗೆ ಬಂದು ಇನ್ನೇನು ಕೆಳಕ್ಕೆ ಹಾರಿ  ಪ್ರಾಣ ಕಳೆದುಕೊಳ್ಳ ಬೇಕು ಎನ್ನುವವರಿಗೆ ಇದ್ದಕ್ಕಿದ್ದಂತೆ ಅಶರೀರ ವಾಣಿಯಂತೆ ಸೌಮ್ಯವಾದ, ಸ್ನೇಹಮಯವಾದ ಸ್ವರ ಕೇಳಿಬರುತ್ತದೆ; “ಒಂದು ಲೋಟ ಚಹಾ ಗಾಗಿ ನನ್ನಲ್ಲಿಗೆ ಬರಬಾರದೇ?” ಇದೇ ಆ ವಾಣಿ. ಪಕ್ಕದ ಸಾಗರದ ಸೌಮ್ಯ ಅಲೆಗಳು ರಿಚಿ ಯ ಸೌಮ್ಯವಾದ ಮಾತುಗಳನ್ನ ಸಾಯ ಬೇಕೆನ್ನುವವರ ಕಿವಿಗಳನ್ನು ತಲುಪಿಸಿ ಒಂದು ಕ್ಷಣ ತಬ್ಬಿಬ್ಬಾಗಿಸುತ್ತದೆ.  ಸಾವಿನಂಗಡಿಯ ಹೊಸ್ತಿಲಿನಲ್ಲಿ ನಿಂತ ವ್ಯಕ್ತಿಗೆ ಮತ್ತೊಮ್ಮೆ ಇದೇ ವಾಣಿ ಕೇಳಿಬರುತ್ತದೆ. why dont you come and have a cup of tea? ಓಹ್, ಇದುವರೆಗೂ ಯಾರೂ ಕೇಳಿರಲಿಲ್ಲ ಹೀಗೆ. ರೈಲು ನಿಲ್ದಾಣಗಳಲ್ಲೂ, ಇತರೆ ಸಾರ್ವಜನಿಕ ಸ್ಥಳಗಳಲ್ಲೂ ತಲೆಯನ್ನು ಕೈಯ್ಯಲ್ಲಿ ಹೊತ್ತು ಗಳಗಳ ಅಳುತ್ತಾ ಕೂತರೂ, ವ್ಯವಹಾರದ ಮತ್ತು ಇನ್ನಿತರ ಕೆಲಸ ನಿಮಿತ್ತ ಗಡಿ ಬಿಡಿಯಲ್ಲಿ ಓಡಾಡುವ ಸಾವಿರಾರು ಜನರನ್ನು ತಾನು ದೀನ ನೋಟದಿಂದ ನೋಡಿದರೂ ಅಲಕ್ಷಿಸಿ ಮುನ್ನಡೆವ ಈ ಜಗತ್ತಿನಲ್ಲಿ ಈ ತೆರನಾದ ಕೋರಿಕೆ? why dont you come and have a cup of tea? ಒಂದು ಕಪ್ ಚಹಾಕ್ಕೆ ಯಾಕೆ ಬರಬಾರದು? ಈ ವಾಣಿ ಬಂದ ಕಡೆ ತಿರುಗಿ ನೋಡಿದಾಗ ಸ್ನೇಹಮಯಿ ನಿಂತಿದ್ದಾನೆ, ತನ್ನ ಸುಕ್ಕುಗಟ್ಟಿದ ಕೈಗಳ ತುಂಬಾ ಬದುಕಿನ ಭರವಸೆಗಳನ್ನು ಇಟ್ಟುಕೊಂಡು. ರಿಚಿಯ ನಿಷ್ಕಳಂಕ ಸುಕ್ಕಿಲ್ಲದ ನಗು ಅವರ ಕೈಗಳಿಂದ ಸಾವಿನ ಅಸ್ತ್ರ ಕಳೆದು ಕೊಳ್ಳುವಂತೆ ಮಾಡುತ್ತದೆ. ಹೌದು ಕೆಲವೊಮ್ಮೆ ಒಂದು ಸರಳ, ಸ್ವಚ್ಚ ನಗು ಮಾಂತ್ರಿಕ ಶಕ್ತಿಯನ್ನೂ ಹೊಂದಿರುತ್ತದೆ. ಎಮ್ಮೆಯ ಮೇಲೆ ಕೂತು ಮೀಸೆ ತಿರುವುತ್ತಾ ಆಸೆಗಣ್ಣುಗಳಿಂದ ಗಿರಾಕಿಯ ನಿರೀಕ್ಷೆಯಲ್ಲಿ ಜವರಾಯ ಕೂತಿದ್ದರೆ ತನ್ನ ಹಸಿರು ಬಣ್ಣದ ತೊಗಲು ಕುರ್ಚಿಯಲ್ಲಿ ರಿಚಿ ಕೂತಿರುತ್ತಾನೆ, ಗಾಳ ಹಿಡಿದು. ಬದುಕಿನ, ಭರವಸೆಯ, ನಿರೀಕ್ಷೆಗಳ, ಹೊಂಗನುಸುಗಳ ಗಾಳ ಹಿಡಿದು. ಆತ ಹೇಳುವುದು, “ಅವರನ್ನು ಉಳಿಸಲೇಬೇಕು, ಇದು ಸುಲಭ ಸಾಧ್ಯ” ಎಂದು.its pretty simple ಈತನ ಪಾಲಿಗೆ. ಅದು ನಿಜವೂ ಕೂಡಾ.

೧೮ ನೇ ಶತಮಾನದಿಂದ ಇಲ್ಲಿಗೆ ಬರುತ್ತಿದ್ದಾರಂತೆ ಜನರು ಸಾವನ್ನು ಅರಸುತ್ತಾ. ವಾರಕ್ಕೊಂದರಂತೆ ಸಾವನ್ನು ಕಾಣುತ್ತಿರುವ ಈ ಸ್ಥಳವನ್ನು ಜನರಿಂದ ದೂರ ಇಡಲು ಸರಕಾರ ದೊಡ್ಡ ಮೊತ್ತದ ಹಣವನ್ನೂ ವ್ಯಯಿಸುತ್ತಿದೆಯಂತೆ.

ಯಾರಾದರೂ ಈ ಸಾವಿನ ಕಣಿವೆಯ ತುದಿಗೆ ಬಂದು ನಿಂತರೂ ಹತ್ತಿರದಲ್ಲೇ ಇರುವ ತನ್ನ ಮನೆಯಿಂದ ಧಾವಿಸುವ ಈತ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಕೆಲವೊಮ್ಮೆ ಈತನ ನಯವಾದ ಮಾತಿಗೆ ಮರುಳಾಗಿ ತಮ್ಮ ಬದುಕಿಗೆ ಮತ್ತೊಮ್ಮೆ “ಹಾಯ್” ಹೇಳಲು ಮರಳಿದವರೂ ಇದ್ದಾರೆ. ಒಮ್ಮೆ ಊರುಗೋಲಿನ (crutches) ಸಹಾಯದಿಂದ ಬಂದ ವ್ಯಕ್ತಿ ಯೊಬ್ಬ ತುದಿಯಲ್ಲಿ ನಿಂತಿದ್ದನ್ನು ಕಂಡ ರಿಚಿ ಅಲ್ಲಿಗೆ ಧಾವಿಸುತ್ತಾನೆ, ಆದರೆ ಅವನು ಅಲ್ಲಿಗೆ ತಲುಪುವಷ್ಟರಲ್ಲಿ ಆ ವ್ಯಕ್ತಿ ತನ್ನ ಊರುಗೋಲನ್ನು ತನ್ನ ಬದುಕನ್ನು ದುಸ್ತರವಾಗಿಸಿದ ಲೋಕಕ್ಕೆ ಕಾಣಿಕೆಯಾಗಿ ಬಿಟ್ಟು ಪ್ರಪಾತಕ್ಕೆ ಜಿಗಿದಿರುತ್ತಾನೆ.        

ಈ ರೀತಿಯ ಸೇವೆ ರಿಚಿಗೆ ಇಳಿ ವಯಸ್ಸಿನಲ್ಲಿ ಸಿಕ್ಕಿದ್ದಲ್ಲ. ಯೌವ್ವನದಿಂದಲೇ ಈತ ಜನರನ್ನು ಸಾವಿನಂಚಿನಿಂದ ದೂರ ಇಡಲು ಪ್ರಯತ್ನಿಸುತ್ತಿದ್ದ. ಕೆಲವೊಮ್ಮೆ ಜನರನ್ನು ಅವರ ಅಂತ್ಯದಿಂದ ರಕ್ಷಿಸಲು ಹೋಗಿ ತನ್ನ ಜೀವವನ್ನೂ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದಾನೆ ಸಹ ಈ ಮಹಾತ್ಮ. ನೋವು, ಹಿಂಸೆ, ಅಸಮಾನತೆ ಕಂಡು ರೋಸಿದ ವಿಶ್ವಕ್ಕೆ ರಿಚಿ ಯಂಥ ವ್ಯಕ್ತಿಗಳು ಹೊಂಗಿರಣದಂತೆ ಕಂಗೊಳಿಸುತ್ತಾರೆ.

ಬ್ರಿಟಿಷ್ ಏಕಲವ್ಯ

brian31ಬ್ರಿಟಿಷ್ ರಾಜಧಾನಿ ಲಂಡನ್ನಿನಲ್ಲಿ ಒಬ್ಬ ಪ್ರತಿಭಟನಾಕಾರನ ಕತೆ ಕೇಳಿ. ಯಾರ ಸಹಾಯವೂ ಇಲ್ಲದೆ ಶಸ್ತ್ರಾಸ್ತ್ರ ವಿದ್ಯೆ ಕಲಿತ  ಏಕಲವ್ಯನಂತೆ ಈತ ಒಂಟಿಯಾಗಿ ಬ್ರಿಟಿಷ್ ಸರಕಾರದ ವಿದೇಶಾಂಗ ನೀತಿಯ ವಿರುದ್ಧ ಸಮರ ಸಾರಿದ್ದಾನೆ. ಸುಮಾರು ಎಂಟು ವರ್ಷಗಳಿಂದ ಬ್ರಿಟಿಷ್ ಸಂಸತ್ತಿನ ಎದುರು ಡೇರೆ ಹಾಕಿ ಕುಳಿತಿರುವ ಈತ ಮಾಜಿ ಪ್ರಧಾನಿ ಬ್ಲೇರ್ಗಿಂತ ಹೆಚ್ಚು ಜನಪ್ರಿಯ ವ್ಯಕ್ತಿ. ಈ ಆದುನಿಕ ಏಕಲವ್ಯನ ಹೆಸರು ಬ್ರಯನ್ ಹಾವ್,ಬಡಗಿ ಮತ್ತು ೭ ಮಕ್ಕಳ ತಂದೆ. ಅಮೇರಿಕೆಯಲ್ಲಿ ನಡೆದ ಸೆಪ್ಟೆಂಬರ್ ೧೧,೨೦೦೧ ಧಾಳಿಯ ೩ ತಿಂಗಳ ಮೊದಲೇ ಈತ ಇರಾಕಿನ ವಿರುದ್ಧದ ಆರ್ಥಿಕ ದಿಗ್ಬಂಧನದ ವಿರುದ್ಧ ಹೋರಾಟಕ್ಕಿಳಿದ. “Stop Killing Kids”, “Make Peace Not War”,“Let Iraqi Infants Live”,ಮುಂತಾದ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಜನರ ಗಮನ ತನ್ನೆಡೆ ಸೆಳೆದ. ವಿಶೇಷವಾಗಿ “Baby killers” and “Tony B Liar”ಎನ್ನೋ ಭಿತ್ತಿಚಿತ್ರ ಪ್ರದರ್ಶಿಸಿದ ಈತ ಇಷ್ಟು ವರ್ಷಗಳ ಕಾಲ ಈ ರೀತಿ ಪ್ರತಿಭಟನೆಗೆ ಇಳಿಯುತ್ತಾನೆಂದು ಯಾರೂ ಭಾವಿಸಿರಲಿಲ್ಲ. brian-hawe3

ಬ್ರಿಟಿಷ್ ಸಂಸತ್ತಿನ ಚೌಕದ ಮುಂದೆ ಮತ್ತು ಪ್ರಧಾನಿ ಅಧಿಕೃತ ನಿವಾಸ 10,Downing streetನ ಬಹು ಸಮೀಪ ಡೇರೆ ಹಾಕಿರುವ ಈತನನ್ನು ಒಮ್ಮೆ ಡಜನ್ಗಟ್ಟಲೆ ಪೊಲೀಸರು ಬಂದು ಓಡಿಸಲು ಪ್ರಯತ್ನ ಪಟ್ಟರೂ ಜುಮ್ಮೆನ್ನದೆ ಅಲ್ಲೇ ಬೀಡು ಬಿಟ್ಟಿದ್ದಾನೆ. ಈ ಪೋಲಿಸ್ ಕ್ರಮದ ಬಗ್ಗೆ ಅಲ್ಲಿನ ಪ್ರಸಿದ್ದ ಪತ್ರಿಕೆಗಳು ( The DailyTelegraph ran the story with a headline: “Police sent 78 to quell loneprotester.” )ವರದಿ ಮತ್ತು ಲೇವಡಿ ಮಾಡಿ ಬರೆದಾಗ ಸರಕಾರಕ್ಕೆ ಕಸಿವಿಸಿ ಆಗಿ ಆತನನ್ನು ಅವನ ಪಾಡಿಗೆ ಬಿಡಲು ನಿರ್ಧರಿಸಿತು.ಇಂಗ್ಲೆಂಡಿನ ಕ್ರೂರ ಚಳಿಗೂ ಸೊಪ್ಪು ಹಾಕದೆ ತನ್ನ ಡೇರೆಯಲ್ಲೇ  ಕಳೆಯುವ ಈತ ಚಳಿ ಬಗ್ಗೆ ಕೇಳಿದರೆ ಆಫ್ಘಾನಿಸ್ತಾನದಲ್ಲಿ ಭೂಕಂಪದ ನಂತರ ಬೆಟ್ಟ ಗುಡ್ಡ ಮೇಲಿರುವ ಎಲ್ಲವನ್ನೂ ಕಳೆದುಕೊಂಡ ಪುಟ್ಟ ಬಾಲಕಿಯರ ಬಗ್ಗೆ ಮಾತನಾಡಿ ಈ ಚಳಿ ಅದಕ್ಕೆ ಹೋಲಿಸಿದರೆ ದೊಡ್ಡದೇನೂ ಅಲ್ಲ ಎನ್ನುತ್ತಾನೆ. ಹೀಗೆ ನಿಷ್ಠುರವಾಗಿ ತನ್ನ ಮತ್ತು ಅಮೆರಿಕೆಯ ಸರಕಾರಗಳನ್ನು ತರಾಟೆಗೆ ತೆಗೆದುಕೊಳ್ಳುವ ಬ್ರಯನ್ ಹಾವ್ ಎಷ್ಟು ದಯಾಮಯಿ ಎಂದು ಅನ್ನಿಸದಿರದೆ?

ಲಂಡನ್ನಿನ ಆಕರ್ಷಣೆಗಳಲ್ಲಿ ಬ್ರಯನ್ ಹಾವ್ ಒಬ್ಬ ಎಂದರೂ ಸರಿಯೇ.