ಕುಹೂ ಕುಹೂ ಕೋಗಿಲೆ ಮತ್ತು ಮೆದುಳಿಲ್ಲದ ಮೀನು

ಕಾಂಗೋ ದೇಶದ ನಿತ್ಯಹರಿದ್ವರ್ಣ (rain forest) ಕಾಡಿನಲ್ಲಿ ಕುಹೂ ಕುಹೂ ಎಂದು ಹಾಡುತ್ತಾ ತಿಂದುಂಡು ಸುಖವಾಗಿರುವ ಕೋಗಿಲೆಗಳ ಆಶ್ಚರ್ಯದಾಯಕ ಪರ್ಯಟನದ ಬಗೆಗಿನ ಲೇಖನಕ್ಕೆ ಕೆಳಗೆ ಕೊಟ್ಟ ಲಿಂಕನ್ನು ಕ್ಲಿಕ್ಕಿಸಿ ಓದಿ. ಪರಿಸರ, ಪಕ್ಷಿಪ್ರಿಯರಾದ ಓದುಗರು ಖಂಡಿತ ಇದನ್ನು ಓದಿ ಕುಹೂ ಕುಹೂ ಎನ್ನದಿರಲಾರರು. ಬ್ರಿಟನ್ ದೇಶ ಬಿಟ್ಟ ಐದು ಕೋಗಿಲೆಗಳು – ಕ್ಲೆಮೆಂಟ್, ಮಾರ್ಟಿನ್, ಲಿಸ್ಟರ್, ಕ್ಯಾಸ್ಪರ್ ಮತ್ತು ಕ್ರಿಸ್ ಇವರ ಹೆಸರುಗಳು – ದೂರದ ಕಾಂಗೋ ದೇಶಕ್ಕೆ ತಲುಪಿದ್ದನ್ನು extraordinary rendezvous ಎಂದು ಬಣ್ಣಿಸಿ ಪ್ರಕಟವಾದ ಲೇಖನ ಇಂಗ್ಲೆಂಡಿನ independent ಪತ್ರಿಕೆಯಲ್ಲಿ ಕಾಣಲು ಸಿಕ್ಕಿತು. ಕಿರುರೂಪದ ಉಪಗ್ರಹ ಪ್ರಸಾರ ಯಂತ್ರ ( miniature satellite transmitter ) ಗಳನ್ನು ಕಾಲಿಗೆ ಕಟ್ಟಿಸಿಕೊಂಡು ಹಾರಿದ ಈ ಕೋಗಿಲೆಗಳ ಪ್ರಯಾಣ ನಿಜಕ್ಕೂ ವಿಸ್ಮಯಕಾರಿಯೇ. ಪ್ರಕೃತಿ ಮತ್ತು ಅದರ ಹೆಮ್ಮೆಯ ಮಕ್ಕಳು (ಮನುಷ್ಯರನ್ನು ಬಿಟ್ಟು) ಒಂದು ವಿಸ್ಮಯವೇ ಸರಿ ಅಲ್ಲವೇ? ವಸಂತ ಋತುವಿನ ಆಗಮನವನ್ನು ನಮಗೆ ಸಂಭ್ರಮದಿಂದ ಘೋಷಿಸುವ ಈ ಕೋಗಿಲೆಗಳ ಸುದೀರ್ಘ ಪಯಣ ಮತ್ತು ವಲಸೆ ದಿನೇ ದಿನೇ ಸಂಖ್ಯೆಯಲ್ಲಿ ಕ್ಷೀಣಿಸುತ್ತಿರುವ ಪಕ್ಷಿ ಸಮುದಾಯದ ಕುರಿತು ಮಾಹಿತಿ ನೀಡುತ್ತದಂತೆ. http://www.independent.co.uk/environment/nature/extraordinary-rendezvous-of-the-migrating-cuckoos-6281525.html

ಇತ್ತೀಚೆಗೆ ಅಪೂರ್ವ ಜಾತಿಯ ಮೀನಿನ ಪತ್ತೆ ಹಚ್ಚಿದ್ದಾರೆ ವಿಜ್ಞಾನಿಗಳು. ಈ ಮೀನಿಗೆ ಮೆದುಳೂ ಇಲ್ಲ, ಮುಖವೂ ಇಲ್ಲ. ಈ brainless and faceless ಮೀನಿನ ಜೊತೆ ಇನ್ನೂ ೧೫ ಜಾತಿಗಳ ಮೀನುಗಳನ್ನೂ ಕಂಡು ಹಿಡಿದ್ದಾರೆ. ಸಮುದ್ರದಲ್ಲಿ ಸಿಕ್ಕ ಮೆದುಳೂ ಇಲ್ಲದ, ಮುಖವೂ ಇಲ್ಲದ ಜಾತಿಯ ಜೀವಿ ಭೂಮಿಯ ಮೇಲೂ ನಡೆದಾಡುತ್ತಿವೆ ಅಲ್ಲವೇ? ರಾಜಕಾರಣಿಗಳಾಗಿ. ಈ ಪತ್ತೆ ಹಚ್ಚುವಿಕೆ ಕುರಿತ ಲಿಂಕು ಕೆಳಗಿದೆ ನೋಡಿ. http://www.independent.co.uk/environment/nature/rare-species-discovered-under-water-6282617.html

ಬಿಡುವು ಮತ್ತು ನಿಸರ್ಗದ ನಂಟು

ಮನುಷ್ಯನ ಮನಸ್ಸುಹಾಗು ದೇಹ  ದೈನಂದಿನ ದಿನಚರಿ ಯಿಂದ, ಕೆಲಸ ಕಾರ್ಯಗಳ ಒತ್ತಡದಿಂದ , ಪಟ್ಟಣದ ಗದ್ದಲದ ಜಂಜಾಟದ  ವಾತಾವರಣದಿಂದ , ಬಿಡುವಿಲ್ಲದ ದಣಿವಿನಿಂದ  ಮುಕ್ತಿ  ಪಡೆಯಲು  ವಿಶ್ರಾಂತಿ ಪಡೆಯಲು ಬಯಸುತ್ತದೆ. ಸ್ವಲ್ಪ ದಿನ ಈ ಜಂಜಾಟ ಗಳನ್ನು ಮರೆತು ಹಾಯಾಗಿ  ಹೊರಗಡೆ ಎಲ್ಲಾದ್ರೂ ಕುಟುಂಬದೊಡನೆ / ಸ್ನೇಹಿತರೊಡನೆ / ಅಥವಾ ಒಬ್ಬರೇ  ನೆಮ್ಮದಿಯಾಗಿ ಹೋಗಬೇಕೆನ್ನಿಸುತ್ತದೆ, ನಿಮಗೆ ಇಷ್ಟವಾದ ಸ್ಥಳಗಳು, ಸೌಕರ್ಯಗಳು ಇವುಗಳ ಬಗ್ಗೆ ಹೇಳಿ ಎಂದು ವೆಬ್ ತಾಣವೊಂದರಲ್ಲಿ ಒಬ್ಬರು ಕೇಳಿದ್ದರು. ನಮ್ಮ ಮನಸ್ಸಿನಲ್ಲಿ ಎಲ್ಲಾದರೂ ಹೊರಗೆ ಹೋಗೋದು ಎಂದರೆ ನಮ್ಮ ಪಾಕೀಟ್ ಖಾಲಿ ಎಂದು ಭಾವನೆ. ಆದರೆ ವಾಸ್ತವ ಬೇರೆಯೇ. ಹೆಚ್ಚು ಖರ್ಚಿಲ್ಲದೆ ಹೆಚ್ಚು ಆನಂದ ಪಡೆಯುವ ಮಾರ್ಗಗಳಿವೆ.

ನಮ್ಮ ದೇಶದಲ್ಲಿ ಕುಟುಂಬ ಸಹಿತ ಔಟಿಂಗ್ ಹೋಗುವ ಪರಿಪಾಠ ದೊಡ್ಡ ರೀತಿಯಲ್ಲಿ ಬೆಳೆದಿಲ್ಲ ಎನ್ನಬಹುದು. ದೊಡ್ಡ ಸಂಬಳ, ಇನ್ನಷ್ಟು ದೊಡ್ಡ ಗಿಂಬಳದ ಸೌಲಭ್ಯ ಇರುವವರು ರಿಸಾರ್ಟ್ ಮುಂತಾದ ಕಡೆ ಹೋಗಬಹುದು. ಔಟಿಂಗ್ ಹೋಗಲು ದೊಡ್ಡ ಸಂಬಳದ ಅವಶ್ಯಕತೆ ಇಲ್ಲ ಎಂದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಗೊತ್ತಿದ್ದರೂ ಅಯ್ಯೋ ಜನ ಏನೆಂದು ಕೊಳ್ಳುತ್ತಾರೋ ಎಂದು ಮುಜುಗರ ಪಟ್ಟು ಕೊಳ್ಳುತ್ತಾರೆ. ನನ್ನ ಮಿತ್ರನೊಬ್ಬ ಆಗಾಗ ತನ್ನ ಪರಿವಾರದೊದಿಗೆ ಬುತ್ತಿ ಕಟ್ಟಿ ಕೊಂಡು ಊರ ಹೊರಗೆ, ಪ್ರಶಾಂತ ಬಯಲಿನಲ್ಲಿ, ಅಡಿಕೆ ತೋಟದಲ್ಲಿ ಯಜಮಾನನ ಅನುಮತಿ ಪಡೆದು ಒಂದಿಷ್ಟು ಸಮಯ ಕಳೆಯುತ್ತಾನೆ. ನಾನಿರುವ ಜೆಡ್ಡಾ ನಗರದಲ್ಲಿ ಸಮಯ ಕಳೆಯಲು ನಾವು ವಿಶಾಲವಾಗಿ ಹರಡಿ ಕೊಂಡ ಮರುಭೂಮಿಯಲ್ಲಿ ಒಳ್ಳೆ ಜಾಗ ನೋಡಿ ಕೊಂಡು ಒಂದಿಷ್ಟು ಸಮಯ ಕಳೆಯುತ್ತೇವೆ. ಇದಕ್ಕೆ ಚಿಕ್ಕಾಸಿನ ಖರ್ಚೂ ಬರದು. ಇಲ್ಲಿನ ಜನ ಡೇರೆ ಹಾಕಿಕೊಂಡು ಮರು ಭೂಮಿಯಲ್ಲಿ ವೀಕೆಂಡ್ ಕಳೆಯುತ್ತಾರೆ. ಅಥವಾ ಸಮುದ್ರ ತೀರದಲ್ಲಿ ಕಂಬಳಿ ಹಾಸಿ, barbecue ಮಾಡಿ ಕೊಂಡು ಮೋಜಾಗಿ ಕಳೆಯುತ್ತಾರೆ. ನಮ್ಮ ದೇಶದಲ್ಲಿ ಹೋದ ಹೋದಲ್ಲೆಡೆ ನದೀ ತೀರಗಳು, ಹಸಿರು ಬಯಲು, ಕಣಿವೆ, ಬೆಟ್ಟ ಗುಡ್ಡ ಗಳಿದ್ದರೂ ಎಷ್ಟು ಜನ ಟೆಂಟ್ ಹಾಕಿ ದಿನ ಕಳೆಯುವುದನ್ನು ನೋಡಿದ್ದೇವೆ? ನಿಸರ್ಗದೊಂದಿಗೆ ನಾವು ನಂಟು ಇಟ್ಟುಕೊಂಡಾಗ ಆ ಅಭ್ಯಾಸ ನಮ್ಮ ಮಕ್ಕಳಿಗೂ ಬರುತ್ತದೆ. ಅಂಥ ಔಟಿಂಗ್ ಸಮಯ ಮಕ್ಕಳಿಗೆ ನಿಸರ್ಗದಲ್ಲಿ ಕಾಣಸಿಗುವ ವಸ್ತುಗಳನ್ನು ಸಂಗ್ರಹಿಸಲು, ಅವುಗಳ ಬಗ್ಗೆ ಅಧ್ಯಯನ ಮಾಡಲು ಸಹ ಪ್ರೋತ್ಸಾಹಿಸಬಹುದು.
ನನ್ನ ಪಾಲಕರು ಇರುವ ಮನೆಯ ಹತ್ತಿರವೇ ನದಿಯೊಂದಕ್ಕೆ ಸುಂದರವಾದ ತೂಗು ಸೇತುವೆ ಕಟ್ಟಿದ್ದಾರೆ. ನದಿಯ ಸುತ್ತ ಮುತ್ತಲಿನ ಸೌಂದರ್ಯದ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ಅಲ್ಲಿಗೆ ಹೋಗಿ, ಒಂದರ್ಧ ದಿನ barbecu ಮಾಡಿಕೊಂಡು ಕಳೆಯೋಣ ಅಂದರೆ, ಅಯ್ಯೋ, ಜನ ನಗುತ್ತಾರೆ ಅಷ್ಟೇ ಎನ್ನುತ್ತಾರೆ ಮನೆಯವರು. ಈ ರೀತಿಯ ಮನೋಭಾವನೆ ಇದ್ದಾರೆ ಔಟಿಂಗ್ ಸಾಧ್ಯವೇ?

ದೈನಂದಿನ ಜಂಜಾಟದಿಂದ, ನೂಕು ನುಗ್ಗಲಿನಿಂದ ದೂರವಾಗಿ ಎಲ್ಲಾದರೂ ಡೇರೆ ಹಾಕಿಯೋ, ಮತ್ತೇನಾದರೂ ವ್ಯವಸ್ಥೆ ಮಾಡಿಕೊಂಡೋ ದಿನ ಕಳೆಯುವುದು ಎಷ್ಟು ಮಜಾ? ರಜೆಯ, ವೀಕೆಂಡಿನ ಆನಂದ ಪಡೆಯಲು ರೆಸಾರ್ಟ್ ಗಳಿಗೆ ಹೋಗಬೇಕೆಂದಿಲ್ಲ. ರಿಸಾರ್ಟ್ ನಮಗೆ ಬೇಕಾದ ಸ್ಥಳದಲ್ಲಿ ಸೃಷ್ಟಿಸಿಕೊಳ್ಳಬಹುದು ಮನಸ್ಸೊಂದಿದ್ದರೆ.
ನಮ್ಮ ಇಡೀ ದೇಶವೇ ಒಂದು ಅದ್ಭುತ ರೆಸಾರ್ಟ್, ಏನಂತೀರಾ?

ತೇರೆ ಬಿನ್ ಲಾದೆನ್…

ಲಾದೆನ್, ನೀನಿಲ್ಲದೆ… ಸಿನೆಮಾ ದೊಡ್ಡ ಸುದ್ದಿ ಮಾಡಿತು ನಮ್ಮ ದೇಶದಲ್ಲಿ. ಲಾದೆನ್ ಬಗೆಗೆ ಅಮೆರಿಕೆಯ ಅತಿ ಆಸಕ್ತಿಯ ಕುರಿತು ರಚಿಸಿದ ಈ ಚಿತ್ರ ವೀಕ್ಷಕರನ್ನು ರಂಜಿಸಿತು. ಲಾದೆನ್ ನ         enigma ರಾಜಕಾರಣಿ, ಸುದ್ದಿ ಪಂಡಿತರನ್ನು ಮಾತ್ರವಲ್ಲ ಚಿತ್ರರಂಗವನ್ನೂ ಬಾಧಿಸಿತು. ಹತ್ತು ಹಲವು ವರ್ಷಗಳಿಂದ ಒಂದೇ ಸಮನೆ ಅಮೇರಿಕಾ ಲಾದೆನ್ ಗಾಗಿ ಪ್ರಪಂಚ ಜಾಲಾಡಿದರೂ ಸಿಗದೇ ಹತಾಶವಾಗಿದ್ದಾಗ ಇದ್ದಕ್ಕಿದ್ದಂತೆ, ಯಾವ ಸುಳಿವೂ, ಮುನ್ಸೂಚನೆಯೂ ಇಲ್ಲದೆ justice is done, Laden is gone ಎಂದು ಬೆಳ್ಳಂ ಬೆಳಗ್ಗೆ  ಕೇಳಿ ತಬ್ಬಿಬ್ಬಾದ ನಮಗೆ ಲಾದೆನ್ ಸಾವು ಸಿನಿಮೀಯ ರೀತಿ ಎಂದು ಅನ್ನಿಸಿದರೆ ತಪ್ಪಾಗಲಾರದು. ಹತ್ತು ವರ್ಷಗಳಿಂದ ಅತ್ಯಾಧುನಿಕ ಉಪಗ್ರಹಗಳಿಂದ ಹಿಡಿದು ಅಮೇರಿಕನ್ ಸೈನಿಕರ high tech binocular ಗಳಿಗೂ ಸಿಗದೇ ತಪ್ಪಿಸಿಕೊಳ್ಳುತ್ತಿದ್ದ ಬಿನ್ ಲಾದೆನ್ ದಿಢೀರನೆ ಕೊಲ್ಲಲ್ಪಟ್ಟ ಎಂದರೆ ಒಂದು ರೀತಿಯ ಸಿನಿಮೀಯ ತಾನೇ?  

ಲಾದೆನ್ ಬರೀ ಅಮೆರಿಕೆಗೆ ಮಾತ್ರವಲ್ಲ, ನಮ್ಮ ದೇಶದಲ್ಲೂ ಕುತೂಹಲ, ಭಯ, ಆಕ್ರೋಶ ಬರಿಸಿದ ಹೆಸರು. ಅಮೆರಿಕೆಯ ಮೇಲೆ ಮತ್ತು ವಿಶ್ವದ ಇತರೆ ನಗರಗಳಲ್ಲಿ ತನ್ನ ಸಾವಿನ ಏಜೆಂಟರನ್ನು ಹರಿಬಿಟ್ಟ ಲಾದೆನ್ ಕೊನೆಗೂ ಸೆಣೆಸುತ್ತಾ  ಉರುಳಿ ಬಿದ್ದ ಅಮೆರಿಕೆಯ ನಾವಿಕ ದಳದ ಯೋಧರ ಗುಂಡುಗಳಿಗೆ,  ಪಾಕಿಸ್ತಾನದ “ಅಬೋಟ್ಟಾಬಾದ್” ನಗರದಲ್ಲಿ.

ಅಬೋಟ್ಟಾಬಾದ್, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ ೩೫ ಮೈಲು ದೂರ ಇರುವ, ಪ್ರತಿಷ್ಠಿತ ಸೈನಿಕ ತರಬೇತಿ ಕಾಲೇಜು ಹೊಂದಿದ ಈ ನಗರದಲ್ಲಿ ಬಿನ್ ಲಾದೆನ್ ಸುಮಾರು ಐದು ವರ್ಷಗಳಿಗೂ ಹೆಚ್ಚು ಕಾಲ ಅವಿತು ಕೊಂಡಿದ್ದ ಎಂದರೆ ಯಾರೂ ದಂಗಾಗುವರು. ಅಮೆರಿಕೆಯಂತೂ ಮೂರ್ಛೆ ಬೀಳುವುದೊಂದು ಬಾಕಿ. ಭಯೋತ್ಪಾದನೆ ತಡೆಯಲು, ಲಾದೆನ್ ಕ್ರುತ್ಯಗಳನ್ನು ತಡೆಯಲು ಪಾಕಿಸ್ತಾನದ ಬೆಂಬಲ ಪಡೆದಿದ್ದ ಅಮೇರಿಕಾ ಈ ಸಹಾಯಕ್ಕೆ ಕೊಡುತ್ತಿದ್ದ ಫೀಸು ವರ್ಷಕ್ಕೆ ೩ ಬಿಲ್ಲಿಯನ್ ಡಾಲರ್. ಯಾಚಕ ದೇಶ. ಇಂಥದ್ದೇ ಮತ್ತೊಂದು ಯಾಚಕ ದೇಶ ಇಸ್ರೇಲ್. ಬಿನ್ ಲಾದೆನ್ ನನ್ನು ಹುಡುಕುತ್ತಿದ್ದೇವೆ, ತಾಲಿಬಾನಿ ಗಳನ್ನು ಸದೆ ಬಡಿಯುತ್ತಿದ್ದೇವೆ ಎಂದು ಸುಳ್ಳು ಸುಳ್ಳೇ ಭರವಸೆ ನೀಡುತ್ತಾ ಅಮೆರಿಕೆಯ ಡಾಲರುಗಳ ಲಂಚವನ್ನು ಲಜ್ಜೆಯಿಲ್ಲದೆ ಸ್ವೀಕರಿಸಿದ ಪಾಕ್ ಅಮೆರಿಕೆಗೆ ಮೋಸ ಮಾಡಿತೆಂದೇ ವಿಶ್ವದ, ಅಮೆರಿಕನ್ನರ ನಂಬಿಕೆ. ಈ ರೀತಿ ಪುಕ್ಕಟೆ ಯಾಗಿ ಸಿಗುತ್ತಿದ್ದ ಸಂಪತ್ತನ್ನು ನುಂಗುತ್ತಿದ್ದ ಪಾಕಿಗೆ ಲಾದೆನ್ ಚಿನ್ನದ ತತ್ತಿ ಇಡುವ ಕೋಳಿ. main source of income. ಪಾಪ, ಲಾದೆನ್ ಸಾವಿನಿಂದ ದೊಡ್ಡ, ಭರಿಸಲಾರದ ನಷ್ಟ ಪಾಕಿಗೆ.  

ಪಾಕಿಸ್ತಾನ ಮಾತ್ರ ತನಗೆ ಲಾದೆನ್ ನ ಇರುವಿನ ಬಗ್ಗೆ ಗೊತ್ತೇ ಇಲ್ಲ ಎಂದು ಆಣೆ ಹಾಕಿ ಹೇಳಿದರೂ circumstantial evidence ಇದಕ್ಕೆ ವ್ಯತಿರಿಕ್ತ. ಈ ವಿವಾದದಲ್ಲಿ ಮತ್ತೊಂದು ಸಮಸ್ಯೆ ಇದೆ. ಅಮೇರಿಕಾ ಮತ್ತು ಪಾಕಿಸ್ತಾನ chronic liars. ಶುದ್ಧ ಸುಳ್ಳರು. ಈ ಇಬ್ಬರ ತಗಾದೆ ಬಗೆಹರಿಸಲು ಇಲ್ಲಿದೆ ಲಿಟ್ಮಸ್ ಟೆಸ್ಟ್. ಲಾದೆನ್ ಎಲ್ಲಿದ್ದಾನೆ ಎನ್ನುವುದು ಪಾಕಿಗೆ ತಿಳಿದಿತ್ತೆ? ಪಾಕಿನ ಸಹಾಯವಿಲ್ಲದೆ ಅಮೆರಿಕೆಯ ಬ್ಲಾಕ್ ಹಾಕ ಹೆಲಿಕಾಪ್ಟರ್ ಗಳು ಹೇಗೆ ತಾನೇ ಲಾದೆನ್ ಇರುವಲ್ಲಿಗೆ ಬರಲು ಸಾಧ್ಯ? ಅಲ್ಕೈದಾ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಬಹುದು ಎನ್ನುವ ಭೀತಿ ಪಾಕಿಗೆ ತಾನು ಈ ಸಾಹಸದಲ್ಲಿ ಪಾಲು ಗೊಂಡಿಲ್ಲ ಎಂದು ಹೇಳಲು ಪ್ರೇರೇಪಿಸುತ್ತಿರಬಹುದೇ? ಪಾಕಿಸ್ತಾನದ ಪರಿಸ್ಥತಿ ಅಡಕ್ಕೊತ್ತರಿ ಯಲ್ಲಿ ಸಿಕ್ಕ ಅಡಿಕೆಯಂತೆ. ಲಾದೆನ್ ಇರುವ ಸ್ಥಳ ತೋರಿಸಿ ಅಮೆರಿಕೆಗೆ ಸಹಕಾರ ನೀಡಿದೆ ಎಂದರೆ ಅಲ್ ಕೈದಾ ಬಿಡೋಲ್ಲ, ಲಾದೆನ್ ಎಲ್ಲಿದ್ದಾನೆ ಎಂದು ತನಗೆ ತಿಳಿದಿಲ್ಲ ಎಂದರೆ ಅಮೇರಿಕಾ ಬಿಡೋಲ್ಲ. ಸುಮಾರು  ಐದು ವರ್ಷಗಳ ಕಾಲ ದೊಡ್ಡ ಪಾಕಿಸ್ತಾನದ ರಾಜಧಾನಿಯ ಹಿತ್ತಲಿನಲ್ಲಿ,  ಬಂಗಲೆಯೊಂದರಲ್ಲಿ ವಾಸಿಸುತ್ತಿದ್ದ ಲಾದೆನ್ ಬಗ್ಗೆ ಪಾಕ್ ಸೈನ್ಯಕ್ಕೆ, ಸರಕಾರಕ್ಕೆ ತಿಳಿದಿಲ್ಲ ಎಂದರೆ ದೊಡ್ಡ ಆಶ್ಚರ್ಯವೇ. ಒಂದು ವೇಳೆ ಪಾಕಿಗೆ ಲಾದೆನ್ ಪಾಕಿನಲ್ಲಿ ಇರುವ ಅರಿವು ಇಲ್ಲದಿದ್ದರೆ ಅಮೇರಿಕಾ ತಾನು ನೀಡುವ ಉದಾರ ಧನ ಸಹಾಯ ಮುಂದುವರೆಸಬಹುದು. ಅಥವಾ ಲಾದೆನ್ ಪಾಕಿಸ್ತಾನದಲ್ಲಿ ಇರುವುದನ್ನು ಅಮೆರಿಕೆಗೆ ತಿಳಿಸದೇ ಡಬಲ್ ಗೇಂ ಆಡಿದ್ದರೆ ಪಾಕಿಸ್ತಾನವನ್ನು ದಾರಿಗೆ ತರುವ ಕೆಲಸ ಅಮೇರಿಕಾ ಶೀಘ್ರ ಶುರು ಮಾಡಬೇಕು. ಇದೇ ಟೆಸ್ಟು. Litmus ಟೆಸ್ಟು.    

ಬಿನ್ ಲಾದೆನ್ ಇಲ್ಲದೆ ಪಾಕ್ ಹೇಗೆ ತಾನೇ ಜೀವಿಸೀತು ಎನ್ನುವುದೀಗ ಆಸಕ್ತಿಕರ ಪ್ರಶ್ನೆ. ಪ್ರೀತೀ,  ನೀನಿಲ್ಲದೆ ನಾ ಹೇಗಿರಲಿ… ಎಂದು ಶೋಕ ಗೀತೆ ಹಾಡುತ್ತಿರಬಹುದೇ ಪಾಕಿಗಳು?

೨೦೦೧ ರ ಅಮೆರಿಕೆಯ ವಿರುದ್ಧದ ಧಾಳಿಗೆ ಬಿನ್ ಲಾದೆನ್ ನನ್ನು ನೇರ ಹೊಣೆಯಾಗಿರಿಸಿದ ಜಾರ್ಜ್ ಬುಶ್, ಬಿನ್ ಲಾದೆನ್ wanted, dead or alive ಎಂದು ಘೋಷಿಸಿದ. ಅಮೆರಿಕೆಯ ಮೇಲೆ ನಿರ್ದಯೀ, ಭೀಕರ ಧಾಳಿ ಮಾಡಿ ತಾನು ಒಂದು ದಿನ ಪೂರ್ತಿ ರಹಸ್ಯ ಅಡಗು ತಾಣವೊಂದರಲ್ಲಿ ದಿನ ಕಳೆಯುವಂತೆ ಮಾಡಿದ ಬಿನ್ ಲಾದೆನ್ ನ ತಲೆಗೆ ೨೫ ಮಿಲ್ಲಿಯನ್ ಡಾಲರ್ ಮೊತ್ತದ ಬೆಲೆಯನ್ನೂ ಕಟ್ಟಿದ ಬುಶ್.  ಹೊಗೆಯುಗುಳುತ್ತಾ ನೆಲಕ್ಕುರುಳಿದ ನ್ಯೂಯಾರ್ಕ್ ನ ಗಗನ ಚುಂಬಿ ಕಟ್ಟಡಗಳು ಅಮೆರಿಕನ್ನರ ಚಿತ್ತ ಕಲಕಿದವು. ಕ್ರುದ್ಧ ಅಮೇರಿಕಾ ಬಿನ್ ಲಾದೆನ್ ಅಡಗಿದ್ದ ಆಫ್ಘಾನಿಸ್ತಾನ ವನ್ನು ಆಕ್ರಮಣ ಮಾಡಿತು. ಬಿನ್ ಲಾದೆನ್ ಎಲ್ಲಿದ್ದರೂ ಹೊಗೆ ಹಾಕಿ ಹೊರತೆಗೆಯುತ್ತೇನೆ ಎಂದು ಘರ್ಜಿಸಿದ ಬುಶ್ ಆಫ್ಘಾನಿಸ್ತಾನದ ಗುಡ್ಡಗಾಡು ಗಳನ್ನು ಮಾತ್ರವಲ್ಲ ಅಲ್ಲಿನ ತೋರಾ ಬೋರಾ ಗವಿ ಸಮುಚ್ಛಯಗಳನ್ನು ಜಾಲಾಡಿದ. ಸೋವಿಯೆಟ್ ಸೇನೆಗೆ ಚಳ್ಳೆ ಹಣ್ಣು ತಿನ್ನಿಸಿದ್ದ, ಸ್ವತಃ ಅಮೆರಿಕನ್ನರಿಂದಲೇ ತರಬೇತಿ ಪಡೆದ, ಸ್ವಾತಂತ್ರ್ಯ ಹೋರಾಟಗಾರ ಎಂದು ರೋನಾಲ್ಡ್ ರೇಗನ್ನರಿಂದ ಹೊಗಳಿಸಿಕೊಂಡಿದ್ದ  ಬಿನ್ ಲಾದೆನ್ ರಂಗೋಲಿ ಕೆಳಗೆ ತೂರಿಕೊಳ್ಳುವುದನ್ನು ಕರಗತ ಮಾಡಿಕೊಂಡ.  

ಬಿನ್ ಲಾದೆನ್,  wanted, dead or alive ಎಂದ ಅಮೇರಿಕಾ ಲಾದೆನ್ ಇರುವ ಮನೆಯ ಮೇಲೆ ಧಾಳಿ ಮಾಡಿ, ೪೦ ನಿಮಿಷಗಳ ಕಾಳಗದಲ್ಲಿ ಎರಡು ಗುಂಡುಗಳನ್ನು ಲಾದೆನ್ ತಲೆಗೆ ಸಿಡಿಸಿ ಕೊಂದಿದ್ದಾರೂ ಏಕೆ? ಅವನನ್ನು ಜೀವಂತ ಸೆರೆ ಹಿಡಿದು, ಅಮೆರಿಕೆಯ USS COLE , ಆಫ್ರಿಕಾದ ದಾರುಸ್ಸಲಾಮ್, ಸ್ಪೇನ್ ನ MADRID, ಲಂಡನ್, ಸೌದಿ ಅರೇಬಿಯಾದ ದಹರಾನ್, ಇರಾಕ್, ಸೋಮಾಲಿಯಾ, ಇಂಡೋನೇಷ್ಯಾದ ಬಾಲಿ ಮುಂತಾದ ನಗರಗಳ ಮೇಲೆ ಧಾಳಿ ಮಾಡಿದ ಈತನನ್ನು ವಿಚಾರಣೆ ಮಾಡಬಹುದಿತ್ತಲ್ಲ. ಅಮೆರಿಕೆಯ ಕಾರ್ಯ ವೈಖರಿ ಆ ದೇಶದಷ್ಟೇ ನಿಗೂಢ. ಕ್ರಿಸ್ಟಫರ್ ಕೊಲಂಬಸ್ ಕಂಡು ಹಿಡಿಯುವವರೆಗೂ ನಿಗೂಢವಾಗಿದ್ದ ದೇಶವಲ್ಲವೇ ಅಮೇರಿಕಾ? ಈತನನ್ನು ಸೆರೆ ಹಿಡಿದು ಅಮೇರಿಕಾ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿ ಕೊಳ್ಳಲು ಇಷ್ಟ ಪಡಲಿಲ್ಲ. ವಿಚಾರಣೆ ವೇಳೆ ಬಿನ್ ಲಾದೆನ್ ಬಾಯಿ ಬಿಟ್ಟರೆ ತಾವು ಕೇಳಲು ಇಚ್ಛಿಸುವುದಕ್ಕಿಂತ ಸ್ವಲ್ಪ ಹೆಚ್ಚನ್ನೇ ಬಡಬಡಿಸಬಹುದು. ಈ ಕಸಿವಿಸಿಯಿಂದ ಪಾರಾಗಲು ಇರುವ ಒಂದೇ ದಾರಿ ಎಂದರೆ ನೇರ ಆಕ್ರಮಣ. ಈ ಆಕ್ರಮಣದಲ್ಲಿ ಅಮೇರಿಕಾ ಯಶಸ್ಸನ್ನು ಕಂಡಿತು.         

ತಾನು ಕರಿಯನಾದ ಒಂದೇ ಕಾರಣಕ್ಕೆ ದಿನವೂ ಬಿಳಿ ಅಮೆರಿಕನ್ನರ ಕುಹಕಕ್ಕೆ, ಅವಹೇಳನಕ್ಕೆ  ಗುರಿಯಾಗುತ್ತಿದ್ದ ಒಬಾಮ ಕೊನೆಗೆ ತನ್ನ ಜೀವನದ ಅತಿ ದೊಡ್ಡ ಅವಮಾನವನ್ನು ಎದುರಿಸಬೇಕಾಯಿತು. ಒಬಾಮಾರ ಜನನ ಪ್ರಮಾಣ ಪತ್ರವನ್ನು ಬಲ ಪಂಥೀಯ ರಿಪಬ್ಲಿಕನ್ ಪಕ್ಷ ಕೇಳಿತು. ಒಬಾಮಾ ತನ್ನ ಜನನ ಪ್ರಮಾಣ ಪತ್ರದ ಜೊತೆ ಜೊತೆಗೇ ಅಮೆರಿಕನ್ನರ ಸಿಂಹಸ್ವಪ್ನನಾಗಿದ್ದ ಲಾದೆನ್ ನ ಸಾವಿನ ಪ್ರಮಾಣ ಪತ್ರವನ್ನೂ ಅಮೆರಿಕನ್ನರಿಗೆ ನೀಡಿ ತಾನು ಕಾರ್ಯಕ್ಷಮತೆಯಲ್ಲಿ ಯಾವ ಬಿಳಿ ಅಧ್ಯಕ್ಷನಿಗೂ ಕಡಿಮೆಯಲ್ಲ ಎನ್ನುವುದನ್ನು ತೋರಿಸಿ ಕೊಟ್ಟರು.   

ಒಸಾಮಾ ಬಿನ್ ಮುಹಮ್ಮದ್ ಬಿನ್ ಅವಾದ್ ಬಿನ್ ಲಾದೆನ್.  ೫೪ ವರ್ಷ ಪ್ರಾಯದ, ಆರಡಿ ಮೂರಿಂಚು ಎತ್ತರದ ಸ್ಫುರದ್ರೂಪಿ ಮತ್ತು ಆಗರ್ಭ ಶ್ರೀಮಂತ ಆಫ್ಘನ್ ಗುಡ್ಡ ಗಾಡಿನ ಜನರ ವಿಶ್ವಾಸ, ಪ್ರೀತಿ, ಅಭಿಮಾನ ಗಳಿಸಲು ಕಾರಣವಾಗಿದ್ದಾದರೂ ಏನು? ಜನರೊಂದಿಗೆ ಸುಲಭವಾಗಿ, ಆತ್ಮೀಯತೆಯಿಂದ ಬೆರೆಯುತ್ತಿದ್ದ ಈತ ಸೌಮ್ಯ ಮಾತುಗಾರಿಕೆಯಿಂದ, ತನ್ನ ಉದಾರ ಸ್ವಭಾವದಿಂದ ಅಲ್ಲಿನ ಯುವಜನರ ಮನ ಗೆದ್ದಿದ್ದ. ಕೋಟ್ಯಾಧೀಶ ಮನೆತನದಿಂದ ಬಂದ ಈತ ಐಶಾರಾಮದ ಬದುಕನ್ನು ಬಿಟ್ಟು ಆಫ್ಘನ್ ಗುಡ್ಡಗಾಡಿನಲ್ಲಿ ಒಣಗಿದ ಚಪಾತಿ ತಿನ್ನುತ್ತಾ ತಮ್ಮೊಂದಿಗೆ ಇರುತಿದ್ದ ಈತನನ್ನು ಕಂಡು ಜನ ಮಾರುಹೋದರು. ಸೋವಿಯೆಟ್ ಸೈನ್ಯದೊಂದಿಗೆ ಹೋರಾಡಿದ ಈತ ಓರ್ವ ಸೈನಿಕನೊಂದಿಗೆ hand to hand combat ನಲ್ಲಿ ಸೈನಿಕನ್ನು ಕೊಂದು ಅವನ kalashnikov ಬಂದೂಕನ್ನು ವಶಪಡಿಸಿ ಕೊಂಡಿದ್ದ. ಈ ಬಂದೂಕು ಅವನ ಅಭಿಮಾನದ ಸ್ವತ್ತಾಗಿತ್ತು.

ಈತ ಆರಂಭಿಸಿದ ಅಲ್ ಕೈದಾ ಒಂದು ಸಂಘಟನೆಯೋ ಆಗಿರದೆ ಒಂದು ತೆರನಾದ ideology ಆಗಿತ್ತು. ಸದಸ್ಯ ಶುಲ್ಕವಾಗಲೀ, ಯಾವುದೇ formal induction ಆಗಲಿ ಬೇಕಿಲ್ಲದ ಈ ವಿಚಾರಧಾರೆಗೆ ಮೂರು ಅಂಶಗಳೇ ಉರುವಲಾಗಿ ಕೆಲಸ ಮಾಡುತ್ತಿದ್ದವು. ಆಕ್ರೋಶ, ನಿರಾಶೆ, ನಿಸ್ಸಹಾಯಕತೆ (anger, frustration, desperation).  ಒಂದು ಕಡೆ ಮುಸ್ಲಿಂ ದೇಶಗಳಲ್ಲಿನ ಆಳುವವರ ಭ್ರಷ್ಟಾಚಾರ ಸಾಲದು ಎಂಬಂತೆ ಅಮೆರಿಕೆಯ ಮೇಲಿನ ವಿಪರೀತ ಅವಲಂಬನೆ ಮತ್ತು ಅರಬ್ಬರ ಸಂಪತ್ತನ್ನು ಲೂಟಿ ಹೊಡೆಯುತ್ತಾ ಇಸ್ರೇಲ್ ದೇಶವನ್ನು ಸಾಕುತ್ತಿದ್ದ ಅಮೆರಿಕೆಯ ಆಟ ಈತನಲ್ಲಿ ಆಕ್ರೋಶ ಹುಟ್ಟಿಸಿತ್ತು. ಸೌದಿ ದೊರೆಗಳ ವಿರುದ್ಧವೂ ಈತ ಸಮರ ಸಾರಿದ ನಂತರ ಇವನ ವಿರೋಧಿಗಳ ಪಟ್ಟಿ ದೊಡ್ಡದಾಗುತ್ತಾ ಹೋಯಿತು. ಈತನ ನೂರಾರು ಹಿಂಬಾಲಕರಲ್ಲಿ ಹಲವರನ್ನು ಕೊಂದು, ನೂರಾರು ಜನರನ್ನು ಜೈಲಿಗೆ ತಳ್ಳಿ ಅಲ್ ಕೈದಾ ಪಿಡುಗನ್ನು ಕೊನೆಗಾಣಿಸಿದ ಸೌದಿ ಸರಕಾರ ಭಯೋತ್ಪಾದನೆ ತಡೆಯುವಲ್ಲಿ ಯಾವ ಕ್ರಮ ತೆಗೆದು ಕೊಳ್ಳುವುದಕ್ಕೂ ತಾನು ಹೇಸುವುದಿಲ್ಲ ಎಂದು ವಿಶ್ವಕ್ಕೆ ತೋರಿಸಿ ಕೊಟ್ಟಿತು.   

ಯಹೂದಿಗಳ ಕೈಯ್ಯಲ್ಲೂ, ಅಮೆರಿಕೆಯ ಕೈಯ್ಯಲ್ಲೂ ಮುಸ್ಲಿಮರ ಮಾರಣ ಹೋಮ ನೋಡಿದ ಬಿನ್ ಲಾದೆನ್ ಪ್ರತಿಕ್ರಯಿಸಿದ್ದು ಹಿಂಸಾ ಮಾರ್ಗದಿಂದ. ಸುಮಾರು ೧೫೦೦ ವರ್ಷಗಳ ಚರಿತ್ರೆ ಇರುವ ಇಸ್ಲಾಂ ಧರ್ಮಕ್ಕೆ ಬಹುಶಃ ಸ್ವತಃ ಮುಸ್ಲಿಂ ಆದ ಬಿನ್ ಲಾದೆನ್ ಮಾಡಿದಷ್ಟು ಅಪಕಾರ ಬೇರಾರೂ ಮಾಡಿರಲಾರ ರೇನೋ? ತನ್ನ ಕುಕೃತ್ಯಗಳಿಂದ ಎರಡು ಯುದ್ಧಗಳಿಗೆ ಕಾರಣನಾದ, ಎರಡು ದಶಲಕ್ಷಕ್ಕೂ ಅಧಿಕ ಮುಸ್ಲಿಮರ ಸಾವಿಗೆ ಸಾಕ್ಷಿ ನಿಂತ ಬಿನ್ ಲಾದೆನ್ ಅದ್ಯಾವ ರೀತಿ ತಾನು ನಂಬಿದ ಧರ್ಮದ ಸೇವೆ ಮಾಡಿದನೋ ಅವನೇ ಬಲ್ಲ.  ವಿಶ್ವದ ಡಜನ್ ಗಟ್ಟಲೆ ಹೆಚ್ಚು ನಗರಗಳಲ್ಲಿ ಸಾವು ನೋವನ್ನು ತಂದು ನಿಲ್ಲಿಸಿದ ಬಿನ್ ಲಾದೆನ್ ಕೊನೆಗೂ ಹಿಂಸೆಯ ಮೂಲಕವೇ ತನ್ನ ಜೀವ ಕಳೆದುಕೊಂಡ. ಇಂಡೋನೇಷ್ಯಾದ “ಬಾಲಿ” ಯಿಂದ ಹಿಡಿದು ಆಫ್ರಿಕಾದ  ನೈರೋಬಿ ವರೆಗೆ ಸಾವು ನೋವಿನ ಕರಾಳ ಕಂಬಳಿಯನ್ನು ಹರಡಿದ ಬಿನ್ ಲಾದೆನ್ “ವಿನಾಕಾರಣ ಒಬ್ಬನನ್ನು ಕೊಂದರೆ ಇಡೀ ಮನುಕುಲವನ್ನು ಕೊಂದಂತೆ” ಎಂದ ಹೇಳಿದ ತನ್ನ ಭಗವಂತನ ಮುಂದೆ ನಿಂತು ಯಾವ ಸಮಜಾಯಿಷಿ ನೀಡುವನೋ?

ಬಿನ್ ಲಾದೆನ್ ನಿರ್ಗಮನದಿಂದ ನಮ್ಮೀ ವಿಶ್ವ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಗೆ ಕಾಲಗರ್ಭದಲ್ಲಿ ಅಡಗಿದೆ  ಉತ್ತರ.

ಟ್ವಿಟ್ಟರ್ ನಲ್ಲಿ ಸಿಕ್ಕಿದ್ದು:

Kentucky Fried Chicken ಶುರು ಮಾಡಿದ “ಕರ್ನಲ್ ಸ್ಯಾಂಡರ್ಸ್” ನ ನಿಧನದೊಂದಿಗೆ KFC ಯ franchising ನಿಲ್ಲಲಿಲ್ಲ. ಅದೇ ರೀತಿ ಅಲ್ ಕೈದಾ ಸ್ಥಾಪಕನ ಸಾವಿನಿಂದ ಅಲ್ ಕೈದಾ ಸಹ ಮುಗಿಯೋದಿಲ್ಲ.  ಆದರೆ ಇದೇ ವೇಳೆ, ಅಂತರಾಷ್ಟ್ರೀಯ ಖ್ಯಾತಿಯ, ಸಂಪಾದಕ ಭಾರತೀಯ ಮೂಲದ ಫರೀದ್ ಜಕರಿಯಾ ಹೇಳಿದ್ದು, loss of a symbol can end a movement.  

ವಿ. ಸೂ: ನನ್ನ ಈ ಲೇಖನ ಬಿನ್ ಲಾದೆನ್ ನ ಅವಸಾನ ಮತ್ತು ಅವಸಾನದ ಕ್ಷಣಗಳನ್ನು ಅಮೆರಿಕೆಯ ವೃತ್ತಾಂತವನ್ನು ಆಧರಿಸಿದ್ದು. ಯಾವುದೇ independent confirmation ಯಾರಿಗೂ ಲಭ್ಯವಾಗಿಲ್ಲ.      

 

ಚಂದ್ರ ಮತ್ತಷ್ಟು ಹತ್ತಿರ, ಆಪ್ತ

ಚಂದ್ರ ಮತ್ತಷ್ಟು ಹತ್ತಿರ, ಆಪ್ತ. ೧೯ ವರ್ಷಗಳ ನಂತರ ಇಂದು ಚಂದ್ರ ನಮಗೆ ಹತ್ತಿರ ಬಂದಿದ್ದಾನಂತೆ. ಭೂವಾಸಿಗಳಲ್ಲಿ ಅದ್ಯಾವ ಹೆಗ್ಗಳಿಕೆ ನೋಡಿ ಬಂದನೋ ಇನ್ನಷ್ಟು ಸಮೀಪ ನನಗೆ ತಿಳೀದು, ಆದರೆ ಸೂಪರ್ ಮೂನ್, ಮೆಗಾ ಮೂನ್, ಡಬ್ಬಲ್ ಮೂನ್ ಹಾಗೆ ಹೀಗೆ ಎಂದು ಕೆಲದಿನಗಳಿಂದ ಕೇಳುತ್ತಾ ಇದ್ದುದರಿಂದ ಸಂಜೆಯ ದೂರದ ನೆಂಟನಿಗಾಗಿ ಕಾದು ಕೂತೆ. ಮಧ್ಯಾಹ್ನದ ಉರಿ ಸೂರ್ಯ, ಸಂಜೆಯಾಗುತ್ತಾ ಬೆಳ್ಳಿ ಬಣ್ಣ ಪಡೆದುಕೊಂಡು, ಸ್ವಲ್ಪ ನಂತರ ತನ್ನ ಮೈಯ್ಯನ್ನು ಕಿತ್ತಳೆ ಬಣ್ಣಕ್ಕೆ ಬದಲಿಸಿಕೊಂಡು ತನ್ನ ವಧು ಕೆಂಪು ಸಮುದ್ರದ ತೆಕ್ಕೆಗೆ ಜಾರಿದ ಕೆಲ ಹೊತ್ತಿನಲ್ಲೇ ಕಳ್ಳ ನಗೆ ಬೀರುತ್ತಾ ಬಂದ ನಮ್ಮ ಮಾಮ. ಚಂದಾಮಾಮ. ಅರೆ, ಇದೇನಿದು,  ೧೯ ವರ್ಷಗಳ ನಂತರ ಹತ್ತಿರ ಬಂದ ಈ ಮಾಮ ಥೇಟ್ ಹಿಂದಿನ ಮಾಮನ ಥರವೇ ಇದ್ದ. ಮುಖದಲ್ಲಿ ಸ್ವಲ್ಪ ಹೆಚ್ಚು ಮಾಂಸ ತುಂಬಿಕೊಂಡು ನಳನಳಿಸುತ್ತಾ ಬರಬಹುದು ಎಂದೆಣಿಸಿದ್ದ ನನಗೆ ಕಾಣಲು ಸಿಕ್ಕಿದ್ದು ಅದೇ age old ಮಾಮ. (ಅಂಕಲ್ ಅಂತ ಅವನನ್ನು ಕರೆಯಲು ನನಗೆ ಇಷ್ಟವಿಲ್ಲ. ಬಸ್ ಸ್ಟಾಂಡ್ ನಲ್ಲಿ ಕೈ ಚಾಚಿ ಬೇಡುವವನೂ, ಬಸ್ಸಿನ ಸೀಟಿಗಾಗಿ ಜಗಳ ಕಾಯುವವರೆಲ್ಲಾ ಅಂಕಲ್ ಗಳೇ ಆದ್ದರಿಂದ ನಮ್ಮ ಚಂದಾ ಮಾಮನಿಗೆ ಆಂಗ್ಲ ಪ್ರಯೋಗ ಬೇಡ.). ನನ್ನ ಬರಿಗಣ್ಣಿಗೆ ಇವನು ಅದೇ ಗಾತ್ರದ ಮಾಮ. ಮುಖದ ತುಂಬಾ freckles ಇದ್ದರೂ ತನ್ನ ಕಾಂತಿಯನ್ನು ತನ್ನನ್ನು ಸುತ್ತುವರೆದ ಮೋಡಗಳಿಗೂ ನೀಡುತ್ತಾ aloof ಆಗಿ ಆಗಸಕ್ಕೆ ಅಂಟಿ ಕೊಂಡ ಮಾಮ. ಬಹುಶಃ ಇವನ ನಿಖರವಾದ ಅಳತೆಗೆ ಸ್ಟೆತಾಸ್ಕೋಪು, ಪೆರಿಸ್ಕೋಪು, ಟೆಲಿಸ್ಕೋಪು ಇವ್ಯಾವುದೂ ನನ್ನಲ್ಲಿಲ್ಲದೆ ಇರೋದ್ರಿಂದ ನನಗೆ ಹಳೇ ಮಾಮನ ದರ್ಶನದ ಭಾಗ್ಯ ಮಾತ್ರಾ.  ಸೂಪರ್ ಮೂನ್ ವಿದ್ಯಮಾನದಲ್ಲಿ ಸೂರ್ಯ , ಭೂಮಿ ಮತ್ತು ಚಂದಿರರು ಒಂದೇ ರೇಖೆಯಲ್ಲಿ ಇದ್ದು ಚಂದ್ರ ಮತ್ತು ಭೂಮಿಗಳು ಸ್ವಲ್ಪ ಸಮೀಪಕ್ಕೆ ಬರುತ್ತವಂತೆ. ಸೂಪರ್ ಮೂನ್ ಕಾರಣ, ಪ್ರವಾಹ, ಭೂಕಂಪ, ಜ್ವಾಲಾ ಮುಖಿ, ಬಿರುಗಾಳಿಗಳೂ ಸಂಭವಿಸಬಹುದಂತೆ. ಬ್ರೇಕಿಂಗ್ ನ್ಯೂಸ್ ನಲ್ಲಿ ಇದುವರೆಗೂ ಯಾವುದೇ ಅಹಿತಕರ ನೈಸರ್ಗಿಕ ಅವಘಡ ಸಂಭವಿಸಿಲ್ಲ.

ಒಂದೇ ಒಂದು ಅವಘಡ ಏನೆಂದರೆ ಕಳೆದ ಹಲವು “ವಿಶ್ವಕಪ್ ಪಂದ್ಯಾವಳಿ” ಯ ೩೫ ಪಂದ್ಯಗಳಲ್ಲಿ ಮೊಟ್ಟ ಮೊದಲ ಬಾರಿಗೆ ಆಸ್ಟ್ರೇಲಿಯಾ ಸೋಲನ್ನು ಕಂಡಿದ್ದು ಅದೂ ದುರ್ಬಲ, ಪಾಕ್ ತಂಡದ ಕೈಯ್ಯಲ್ಲಿ.     

ಹೀಗೇ ಸುಮ್ಮನೆ: ಸೂಪರ್ ಮೂನ್ ಎನ್ನುವ ಪದವನ್ನು ಶುರು ಮಾಡಿದ್ದು HOROSCOPE ಪತ್ರಿಕೆಯ ಜ್ಯೋತಿಷ್ಯಕಾರ Richard Nolle.