ಬುರ್ಖಾ ನಿಷೇಧ

ಯೂರೋಪಿನಲ್ಲಿ ಈಗ ಬುರ್ಖಾ ನಿಷೇಧಿಸುವ ಕುರಿತ ಚರ್ಚೆ. ಇನ್ನು ಕೆಲವೇ ದಿನಗಳಲ್ಲಿ ಫ್ರಾನ್ಸ್ ಸಂಸತ್ತು ಬುರ್ಖಾವನ್ನು ನಿಷೇಧಿಸಲಿದೆ. ಎಂಥ ವೈಚಿತ್ರ್ಯ ಇದು. ಒಂದು ಕಡೆ ಮಹಿಳೆಯ ಜನ್ಮಸಿದ್ಧ ಹಕ್ಕುಗಳ ಬಗ್ಗೆ ದೊಡ್ಡ ದೊಡ್ಡ ಭಾಷಣಗಳು, ಚಟುವಟಿಕೆಗಳು ಜರಗುತ್ತಿದ್ದರೆ ಮತ್ತೊಂದು ಕಡೆ ತಾನು ಮಾನವಾಗಿ ತನ್ನ ಶರೀರವನ್ನು ಮುಚ್ಚಿಕೊಂಡು ಓಡಾಡುತ್ತೇನೆ ಎಂದು ಹೇಳುವ ಮಹಿಳೆಯರ ಮೇಲೆ ಸಮಾಜದ ದಿಗ್ಬಂಧನ, ಕಾನೂನು. ಫ್ರಾನ್ಸ್ ನ ಅಧ್ಯಕ್ಷ ಮಹಾಶಯನ ಲೈಂಗಿಕ ಚಟುವಟಿಕೆ ತಿಳಿದವರಿಗೆ ಅಲ್ಲಿನ ಸಂಸತ್ತಿನಲ್ಲಿ ಅವನಂಥ ಎಷ್ಟು ಸದಸ್ಯರು ತಮ್ಮ ಅಧ್ಯಕ್ಷನ ರೀತಿ ಹೆಣ್ಣನ್ನು ತಮ್ಮ ತೃಷೆಗಾಗಿ ಉಪಯೋಗಿಸಿಕೊಳ್ಳುತ್ತಿರಬಹುದು ಎಂದು ಯೋಚಿಸಿದರೆ ತಪ್ಪಿಲ್ಲ. ಇದೇ ನಡತೆಗೆಟ್ಟ ಗಂಡಸರು ಹೆಣ್ಣು ವಿವಸ್ತ್ರಳಾಗೋದನ್ನು ಬಯಸುತ್ತಾ ಮಾನವಾಗಿ ನಡೆಯಲಿಚ್ಚಿಸುವ ಮಹಿಳೆಯರ ಮೇಲೆ ಕಾನೂನಿನ ತೂಗುಗತ್ತಿಯನ್ನು ಇಳಿ ಬಿಡುತ್ತಾರೆ. ಇವರಿಗೆ ಮಹಿಳೆ ಮೈತುಂಬಾ ಹೊದ್ದು ಕೊಳ್ಳುವುದು ಗುಲಾಮಗಿರಿಯ ಸಂಕೇತ. ಶೋಷಣೆಯ ಹೆಗ್ಗುರುತು. ಹೆಣ್ಣು ಕನಿಷ್ಠ ಉಡುಗೆ ತೊಡುವುದು ultimate civilization.     

ಬೆತ್ತಲೆ, ಕನಿಷ್ಠ ಉಡುಗೆ ಇಷ್ಟ ಪಡುವ ವಿಶ್ವ. ದೊಡ್ಡ ಕೋಲಾಹಲವನ್ನೇ ಸೃಷ್ಟಿಸುತ್ತಿದೆ ಈ ಸುಮಾರು ಐದು ಮೀಟರು ಬಟ್ಟೆ. ಮೂರೂ ಬಿಟ್ಟು, ಕನಿಷ್ಠ ಉಡುಗೆ ತೊಟ್ಟು ತಮ್ಮ ಶರೀರ ದಾರಿಹೋಕರ ಕಣ್ಣುಗಳಿಗೆ ಎಂದು ಬಿಂಕದಿಂದ ನಡೆಯುವ ಉದಾರವಾದಿ ಮಹಿಳೆ ಮತ್ತು ಇಂಥ ಉಡುಗೆಗಳಲ್ಲಿ ಪರಸ್ತ್ರೀಯರನ್ನು ನೋಡಿ ನಾಲಗೆ ಚಪ್ಪರಿಸಿ ಸವಿಯುವ  ಪುರುಷರಿಗೆ ಈ ಬುರ್ಖಾ ಎನ್ನುವ ವಸ್ತ್ರ ಸಹ್ಯವಾದರೂ ಹೇಗಾದೀತು? ಸೌಂದರ್ಯ ಸ್ಪರ್ದೆಯ ಹೆಸರಿನಲ್ಲಿ ಹೆಣ್ಣನ್ನು ನಾನಾ ಬಗೆಯ  ಉಡುಗೆಗಳಲ್ಲಿ ಅತ್ತಿಂದಿತ್ತ ಓಡಾಡಿಸಿ ಕ್ಯಾಮೆರಾ ಕಣ್ಣುಗಳಿಂದ ಅವಳ ಉಬ್ಬು ತಗ್ಗುಗಳನ್ನು ವಿವಿಧ ಕೊನಗಳಲ್ಲಿ ಸೆರೆಹಿಡಿದು, ಅವಳ ಅಂಗ ಸೌಷ್ಟವದ ಅಳತೆ ತೆಗೆದು ತಾವು ಕಲ್ಪಿಸಿಕೊಂಡ ಮಾನ ದಂಡಕ್ಕೆ ಅವಳ ಅಳತೆಯಿದ್ದರೆ ಅವಳನ್ನು ವಿಶ್ವ ಸುಂದರಿ, ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್, ಮಿಸ್ ದ್ಯಾಟ್, ಮಿಸ್ ದಿಸ್ ಎಂದು ಪ್ರಶಸ್ತಿ ಕೊಟ್ಟು ನಗ್ನತೆಯನ್ನು, ಬಹಿರಂಗ ಸೌಂದರ್ಯವನ್ನು ಸನ್ಮಾನಿಸುವ, ಆದರಿಸುವ ಸಮಾಜಕ್ಕೆ ಖಂಡಿತವಾಗಿಯೂ ಪಥ್ಯವಲ್ಲ ಬುರ್ಖಾ. ಈ ರೀತಿಯ ಅಳತೆಗೆ ನಿಲುಕದ ಬಹುಪಾಲು ಮಹಿಳೆಯರು  ಕೀಳರಿಮೆಯಿಂದ ಬಳಲುತ್ತಿದ್ದರೆ ಅದೊಂದು ಸಮಸ್ಯೆ ಅಲ್ಲ ಇವರಿಗೆ. size and beauty obssessed ಸಮೂಹಕ್ಕೆ.

ಬುರ್ಖಾ ನಿಷೇಧಿಸುವಲ್ಲಿ  ಫ್ರಾನ್ಸ್ ಕಾನೂನನನ್ನು ಜಾರಿ ಗೊಳಿಸಿದಂತೆ ಇಂಗ್ಲೆಂಡ್ ಸಹಾ ಬುರ್ಖಾ ನಿಷೇಧ ಕಾನೂನನ್ನು ತರಬೇಕೆಂದು ಒತ್ತಾಯಿಸುತ್ತಿರುವ ಜನರು ಹೆಣ್ಣನ್ನು ಸೌಂದರ್ಯ  ಪ್ರಸಾಧನ ಉತ್ಪಾದಿಸುವವರ, ಕಾಮ ಪಿಪಾಸುಗಳ ಆಟಿಕೆಯಾಗಿ ಬಳಸಿಕೊಳ್ಳುತ್ತಾ ತಮ್ಮನ್ನು ತಾವು ನಾಗರೀಕರು ಎಂದು ಬೆನ್ನು ತಟ್ಟಿ ಕೊಳ್ಳುವವರ ದಾರ್ಷ್ಟ್ಯತನವನ್ನು ಮೆಚ್ಚಲೇ ಬೇಕು. ಬುರ್ಖಾ ಗುಲಾಮಗಿರಿಯ ಸಂಕೇತ, ಪುರುಷರ ಒತ್ತಾಯಕ್ಕೆ ಮಣಿದು ಮಹಿಳೆಯರು ಧರಿಸುತ್ತಾರೆ ಎಂದು ವಾದಿಸುವ ಸಮೂಹಕ್ಕೆ ಈ ಸತ್ಯದ ಅರಿವಾದದ್ದು ಯಾವಾಗಲೋ ಏನೋ? ಅವರಿಗೆ ಹೇಗೆ ಗೊತ್ತು ಇದು ಪುರುಷ ಹೇರಿದ ಕಟ್ಟಳೆ ಎಂದು? ಸ್ವಂತ ಇಷ್ಟದಿಂದ ಹಿಜಾಬ್ ಧರಿಸುವ ಮಹಿಳೆಯರನ್ನು ನಾನು ನೋಡಿದ್ದೇನೆ. ತನ್ನ ತಾಯಿ ಧರಿಸುವ ಹಿಜಾಬನ್ನು ನೋಡಿ ಪುಟ್ಟ ಮಗುವೂ ತಾಯಿಯನ್ನು ಅನುಕರಿಸಲು ನೋಡುತ್ತದೆ. ಹೊರಗೆ ಮಹಿಳೆಯರು ತಮಗಿಷ್ಟದ, ನವೀನ ಶೈಲಿಯ ಬಟ್ಟೆ ಧರಿಸಿ ಹೋಗುವುದನ್ನು ಕಂಡರೂ ಆ ಪುಟ್ಟ ಮಗುವಿಗೆ ತನ್ನ ತಾಯಿ ಧರಿಸುವ ಕಪ್ಪು ಬಣ್ಣದ ಬುರ್ಖಾ ಕರಾಳವಾಗಿ ಕಾಣೋದಿಲ್ಲ. ಇಲ್ಲಿ ಆ ಮುಗ್ಧ ಮಗು ಕಾಣೋದು ತನ್ನ ತಾಯಿಯ ನಾರ್ಮಲ್ ಉಡುಗೆ ಮಾತ್ರ. ಬುರ್ಖಾ ಪದ್ಧತಿ ಇಸ್ಲಾಮಿನ ನಿಯಮವೋ, ಕಟ್ಟಳೆಯೋ ಅಲ್ಲ. ಪವಿತ್ರ ಕುರಾನಿನಲ್ಲಿ ದೇವರು ನಿರ್ದೇಶಿಸಿದ್ದು ಹೆಣ್ಣು ಮತ್ತು ಗಂಡು ಮೈ ತುಂಬಾ ಉಡಲು. ಅಂಗ ಸೌಷ್ಟವ ಪ್ರದರ್ಶಿಸದಂತೆ ತಾಕೀತು. ಹೆಣ್ಣು ಗಂಡು ಇಬ್ಬರೂ ತಮ್ಮ ದೃಷ್ಟಿಗಳನ್ನು ಅನಾವಶ್ಯವಾಗಿ ಬೇಕೆಂದಲ್ಲಿ ಹರಿಬಿಡದೆ ನಡೆಯಲು ಅಪೇಕ್ಷೆ, ನೆಲ ನೋಡಿ ವಿನೀತರಾಗಿ ನಡೆಯಲು ಸೂಚನೆ. ಇವು ಮಾತ್ರ ಇರುವುದು ಕುರಾನಿನಲ್ಲಿ. ಬಟ್ಟೆ ಹೀಗೆ ಇರಬೇಕು, ಇಂಥ ಬಣ್ಣದ್ದೇ ಆಗಿರಬೇಕು ಎಂದು ಎಲ್ಲೂ ಹೇಳಿಲ್ಲ. ಹಾಗಿದ್ದರೆ ಬುರ್ಖಾ ಸಾರ್ವತ್ರಿಕವಾಗಿರುತ್ತಿತ್ತು. ವಿಶ್ವದ ಬಹುಪಾಲು ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದಿಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದಲ್ಲವೇ? ದೂರದ ದೇಶಗಳ ಮಾತೇಕೆ ನಮ್ಮ ಪಕ್ಕದ ಕೇರಳದಲ್ಲೂ ಬಹುಪಾಲು ಮಹಿಳೆಯರು ಬುರ್ಖಾ ಧರಿಸುವುದಿಲ್ಲ. ಉದ್ದದ ತೋಳಿನ ರವಿಕೆ, ಮೈ ತುಂಬಾ ಸೀರೆ ಉಟ್ಟು ಕೊಳ್ಳುತ್ತಾರೆ. ಅಲ್ಲಿ ಯಾವ ಮುಲ್ಲಾ ಮಹಾಶಯರೂ ಫತ್ವಾ ಹೊರಡಿಸಲಿಲ್ಲ, ಕಪ್ಪು ಬಟ್ಟೆಯಿಂದ ಬಿಗಿದು ಕೊಳ್ಳಿ ನಿಮ್ಮ ಶರೀರವನ್ನು ಎಂದು. ಬುರ್ಖಾ ಒಂದು ಸಾಮಾಜಿಕ, ಸಾಂಸ್ಕೃತಿಕ ಉಡುಗೆ. ಸುಡಾನಿನ ಮಹಿಳೆಯರು ಸೀರೆ ಥರಾ ಕಾಣುವ  ಬಟ್ಟೆಯನ್ನು ಮೈ ತುಂಬಾ ಹೊದ್ದು ಕೊಳ್ಳುತ್ತಾರೆ. ಇರಾನಿನಲ್ಲಿ ಎಲ್ಲಾ  ಮಹಿಳೆಯರೂ ಧರಿಸುವುದಿಲ್ಲ. ಶೇಕಡಾ ೯೮ ಮುಸ್ಲಿಮರಿರುವ ತುರ್ಕಿ, ಟುನೀಸಿಯಾ ದೇಶಗಳ ಮಹಿಳೆಯರೂ ಸಹ ಬುರ್ಖಾ ಧಾರಿಗಳಲ್ಲ. ಅಲ್ಲಿ ಮುಲ್ಲಾಗಳ ಹಾವಳಿ ಇಲ್ಲ ಎಂದಲ್ಲ, ಆದರೆ ಇದೊಂದು ಧಾರ್ಮಿಕ ಉಡುಗೆ ಯಲ್ಲ ಎನ್ನುವ ಅರಿವಿರುವುದರಿಂದಲೇ ಅವರು ಅಲ್ಲಿನ ಮಹಿಳೆಯರ ಮೇಲೆ ಈ ವಸ್ತ್ರವನ್ನು ಹೇರದಿರುವುದು.

ಈ ಮೇಲಿನ ಮಾತಿಗೆ ಪುಷ್ಟಿಯಾಗಿ ಇತ್ತೀಚೆಗೆ ನಡೆದ ಘಟನೆಯೊಂದನ್ನು ನಿಮ್ಮ ಅವಗಾಹನೆಗೆ ತರಲು ಇಚ್ಛಿ ಸುತ್ತೇನೆ. ಪುರಾತನ ನಾಗರೀಕತೆಯ ತವರಾದ ಈಜಿಪ್ಟ್ ದೇಶ ಇಸ್ಲಾಂ ಧರ್ಮವನ್ನ ಅನುಸರಿಸುವ ದೇಶ. ಅಲ್ಲಿನ ವಿಶ್ವವಿಖ್ಯಾತ ವಿಶ್ವ ವಿದ್ಯಾಲಯ ಅಲ್- ಅಜ್ಹರ್ ಸ್ಥಾಪಿತ ವಾಗಿದ್ದು ಕ್ರಿ. ಷ ೯೫೦ ರಲ್ಲಿ. ಅಲ್ಲಿನ “ರೆಕ್ಟರ್” ಆಗಿದ್ದ ಇತ್ತೀಚೆಗೆ ದಿವಂಗತರಾದ ಶೇಖ್ ತಂತಾವೀ. ಇವರು ಜಗದ್ವಿಖ್ಯಾತ ಮುಸ್ಲಿಂ ವಿಧ್ವಾಂಸ. ಅತ್ಯಂತ ಕ್ಲಿಷ್ಟ ಶರಿಯಾ ದ ಸಮಸ್ಯೆಗಳಿಗೆ ಮುಸ್ಲಿಂ ವಿಶ್ವ ಉತ್ತರ ಅರಸೋದು ಇವರಲ್ಲಿ. ಆರು ತಿಂಗಳ ಹಿಂದೆ ನಡೆದ ವಿಶ್ವ ವಿದ್ಯಾಲಯದ ಸಮಾರಂಭವೊಂದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಸಭಿಕರಲ್ಲಿ ಒಬ್ಬ ಹದಿ ಹರೆಯದ ಯುವತಿಯೊಬ್ಬಳು ಹಿಜಾಬ್ ಮಾತ್ರವಲ್ಲದೆ ಕಣ್ಣು ಮಾತ್ರ ಕಾಣುವಂಥ “ನಿಕಾಬ್” ಸಹ ಧರಿಸಿದ್ದಳು. ಭಾಷಣ ಮಾಡುತ್ತಿದ್ದ ತಂತಾವೀ ಯುವತಿಗೆ ಹೇಳಿದರು ಮುಖದ ಮೇಲಿನ ನಿಕಾಬ್ ತೆಗೆಯುವಂತೆ. ಆಕೆ ಒಪ್ಪಲಿಲ್ಲ. ಒತ್ತಾಯಿಸಿದಾಗ ಆಕೆ ಹೇಳಿದಳು ಇದು ನನ್ನ ಧಾರ್ಮಿಕ ಉಡುಗೆ, ನನ್ನ ಸ್ವಂತ ಇಷ್ಟದಿಂದ ಧರಿಸಿದ್ದು ಎಂದು. ಇದನ್ನು ಕೇಳಿ ಕುಪಿತರಾದ ತಂತಾವೀ ಹೇಳದರು, ಸಾವಿರಕ್ಕೂ ಹೆಚ್ಚು ವರ್ಷಗಳ ಚರಿತ್ರೆಯಿರುವ ಈ ಸುಪ್ರಸಿದ್ಧ ವಿದ್ಯಾಲಯದ ಕುಲಪತಿಯಾದ ನನಗಿಂತ ನಿನಗೆ ಗೊತ್ತೋ ಇಸ್ಲಾಮಿನ ಉಡುಗೆ ಬಗ್ಗೆ? ನೀನು ಧರಿಸುತ್ತಿರುವ ಮುಖ ಮುಚ್ಚಿ ಕೊಳ್ಳುವ ನಿಕಾಬ್ ಇಸ್ಲಾಮಿನ ಕಾನೂನಲ್ಲ, ಅದೊಂದು ಸಾಮಾಜಿಕ ಉಡುಗೆ ಎಂದು ಹೇಳಿ ಆಕೆಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು. ಅದೊಂದು ದೊಡ್ಡ ವಿವಾದವನ್ನೇ ಸೃಷ್ಟಿಸಿತು ಮುಸ್ಲಿಂ ಜಗತ್ತಿನಲ್ಲಿ, ವಿಶೇಷವಾಗಿ ಅರಬ್ ವಲಯಗಳಲ್ಲಿ. ಆಕೆ ಯಾರ ಬಲವಂತವೂ ಇಲ್ಲದೆ ತನ್ನ ಇಷ್ಟಾನುಸಾರ ಧರಿಸಿದ ವಸ್ತ್ರಕ್ಕೆ ಈ ವಿಧ್ವಾಂಸರ  ಆಕ್ಷೇಪವೇಕೆ ಎಂದು ಅವರನ್ನು ಟೀಕಿಸಲಾಯಿತು.

ಕುವೈತ್ ಅರಬ್ ಮುಸ್ಲಿಂ ರಾಷ್ಟ್ರ. ಅಲ್ಲಿನ ಸಂಸತ್ತಿನಲ್ಲಿ ಕೆಲವರು ಮಹಿಳಾ ಸದಸ್ಯೆಯರೂ ಇದ್ದಾರೆ. ಅವರಲ್ಲಿ ಇಬ್ಬರು ಸಂಸದೆಯರು ಹಿಜಾಬ್ ಧರಿಸುವುದಿಲ್ಲ. ಅರಬ್ ರಾಷ್ಟ್ರವಾದ ಮೇಲೆ ಧರ್ಮಗುರುಗಳ ವರ್ಚಸ್ಸು ಇಲ್ಲದ್ದಿಲ್ಲ, ಆದರೂ ಯಾವುದೇ ಧರ್ಮ ಗುರುವೂ ಇದುವರೆಗೆ ಆ ಸಂಸದೆಯರ ವಿರುದ್ಧ ಫತ್ವ ಹೊರಡಿಸಲಿಲ್ಲ.

ಮಧ್ಯ ಪ್ರಾಚ್ಯದ “ಜೋರ್ಡನ್” ದೇಶ ಪುರಾತನ ವಂಶಸ್ಥರ ರಾಜಮನೆತನ ಆಳುವ ದೇಶ. ಇಲ್ಲಿನ ರಾಜ ಅಬ್ದುಲ್ಲಾ ರ ಪತ್ನಿ “ರಾನಿಯಾ” ಹಿಜಾಬ ಧರಿಸುವುದಿಲ್ಲ. ಜೋರ್ಡನ್ ದೇಶದ ಧರ್ಮಗುರುಗಳು ಆಕೆಯ ವಿರುದ್ಧ ಫತ್ವ ಹೊರಡಿಸಲಿಲ್ಲ. ಜೋರ್ಡನ್ ದೇಶದ ರಾಣಿ ಮಾತು ದಿವಂಗತ ಬೆನಜೀರ್ ಭುಟ್ಟೋ ಹಿಜಾಬ್ ಧರಿಸದೆಯೂ ಮುಸ್ಲಿಮರಾಗಿರಲು ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟು ಇಸ್ಲಾಂ ಯಾವ ರೀತಿ ಶಿಷ್ಟಾಚಾರ ಮತ್ತು ಆಧುನಿಕತೆಯೊಂದಿಗೆ ಹೆಜ್ಜೆ ಹಾಕಬಲ್ಲದು ಎಂದು ತೋರಿಸಿ ಕೊಟ್ಟ ಮುಸ್ಲಿಂ ಮಹಿಳೆಯರು.    

ಒಬ್ಬ ಮಹಿಳೆ ಹಿಜಾಬ್ ಧರಿಸಿದ ಮಾತ್ರಕ್ಕೆ ಪರಿಪೂರ್ಣ ಮುಸ್ಲಿಮಳಾಗುವುದಿಲ್ಲ. ಹಿಜಾಬ್ ಧರಿಸದೆಯೂ ಮುಸ್ಲಿಂ ಮಹಿಳೆ ತನ್ನ ಇಸ್ಲಾಮೀ ಸಂಸ್ಕೃತಿಯನ್ನು ಹೆಮ್ಮೆಯಿಂದ ಕೊಂಡಾಡಬಹುದು. ಆದರೆ ಆಕೆ ಏನನ್ನು ಧರಿಸಬೇಕು ಏನನ್ನು ಧರಿಸಬಾರದು ಎಂದು ನಿರ್ಧರಿಸುವ ಸಮಾಜ ಅವಳಿಗೂ ಅವಳದೇ ಆದ ಹಕ್ಕುಗಳಿವೆ, ಆ ಹಕ್ಕನ್ನು ಚಲಾಯಿಸಿಕೊಳ್ಳುವ ಅವಕಾಶವನ್ನೂ ಆಕೆಗೆ ನೀಡಬೇಕು ಎನ್ನುವುದನ್ನು ಮರೆಯಬಾರದು.    

ಇನ್ನು ಓರ್ವ ಮಹಿಳೆ ತನಗಿಷ್ಟವಾದ ಬಟ್ಟೆ ತೊಟ್ಟರೆ ಅವಳ ಸ್ವಾತಂತ್ರ್ಯಕ್ಕೆ ಹೇಗೆ ಅವಳು ಧರಿಸುವ ವಸ್ತ್ರ ಮುಳುವಾಗುತ್ತದೆ ಅನ್ನೋದೇ ಒಂದು ದೊಡ್ಡ ಒಗಟು.        

ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ಅತೀವ ಕಾಳಜಿ ತೋರಿಸುವ ಸಮಾಜ ಗಲಭೆ, ಜನಾಂಗ ಧ್ವೇಷ ಗಳಂಥ ಸಂದರ್ಭಗಳಲ್ಲಿ ಹೆಣ್ಣಿನ ಮೇಲೆ ನಡೆಯುವ ರಾಜಾರೋಷ ಅತ್ಯಾಚಾರ ಕಣ್ಣಿಗೆ ಗೋಚರಿಸೋಲ್ಲ ಏಕೆಂದರೆ ತಮಗೆ ಎಲ್ಲಿ ಬೇಕು ಅಲ್ಲಿ ಮಾತ್ರ  ಕಣ್ಣುಗಳನ್ನು ತೆರೆಯುತ್ತಾರೆ, ಬೇಡದೆಡೆ ತಾತ್ಕಾಲಿಕ, ಕುರುಡನ್ನು ಪ್ರದರ್ಶಿಸುತ್ತಾರೆ.   

ಸ್ವಾತಂತ್ರ್ಯದ ಹರಣದ ಬಗ್ಗೆ ಮಾತನಾಡುವ ಜನರಿಗೆ ಈವಾನ್ ಗೊಎಥ್ ಹೇಳಿದ ಮಾತು ನೆನಪಿಗೆ ತರಬೇಕು; “ತಾವು ಎಲ್ಲರಿಗಿಂತ ಸ್ವತಂತ್ರರು ಎಂದು ಭಾವಿಸಿ ನಡೆಯುವ ಜನರಷ್ಟು ಗುಲಾಮಗಿರಿಯಲ್ಲಿ ಬಂಧಿಸಲ್ಪಟ್ಟವರು  ಬೇರಾರಿಲ್ಲ”.

“None are more hopelessly enslaved than those who falsely believe they are free.”
von Goethe

 

ಹಿಜಾಬ್ ವಿವಿಧ ಧರ್ಮಗಳಲ್ಲಿ: ಯಹೂದ್ಯರು ತಮ್ಮ ಮಹಿಳೆಯರು ಶರೀರವನ್ನು ಸಂಪೂರ್ಣವಾಗಿ ಮುಚ್ಚುವಂಥ ವಸ್ತ್ರ ಧರಿಸಲು ಉತ್ತೆಜಿಸುತ್ತಿದ್ದರು. ಕೂದಲನ್ನು ಪ್ರದರ್ಶಿಸಿ ನಡೆಯುವುದು ಅಪರಾಧ. ಉಚ್ಚ ಕುಲೀನ ಸ್ತ್ರೀಯರು ತಲೆಯ ಮೇಲೆ ಬಟ್ಟೆ ಧರಿಸುತ್ತಿದ್ದರು ಮತ್ತು ಸಮಾಜದ ಕೆಳಸ್ತರದ ಮಹಿಳೆಯರು ಪ್ರತಿಷ್ಠೆ ಗಾಗಿ ತಲೆ ಕೂದಲನ್ನು ಮುಚ್ಚುತ್ತಿದ್ದರು. ಯಹೂದ್ಯ ಸಮಾಜದಲ್ಲಿ ವೇಶ್ಯೆಯರು ತಲೆ ಕೂದಲನ್ನು ಮರೆ ಮಾಚುವಂತಿಲ್ಲ.

ಕ್ರೈಸ್ತ ಧರ್ಮದಲ್ಲಿ: ಸಂತ “ಪಾಲ್” ಹೊಸ ಒಡಂಬಡಿಕೆಯಲ್ಲಿ ಹೇಳಿದ್ದು ಹೀಗೆ: ಪ್ರತೀ ಗಂಡಿನ ತಲೆಯೂ ಕ್ರೈಸ್ತನದು ಮತ್ತು ಪ್ರತೀ ಹೆಣ್ಣಿನ ತಲೆ ಗಂಡಿನದು ಮತ್ತು ಕ್ರಿಸ್ತನ ತಲೆ ದೇವರದು. ಪ್ರತೀ ಹೆಣ್ಣು ತಲೆ ಕೂದಲನ್ನು ಮರೆ ಮಾಚಲೇ ಬೇಕು ಇಲ್ಲಾ ತಲೆ ಬೋಳಿಸಿ ಕೊಳ್ಳಬೇಕು. ಗಂಡು ತಲೆ ಕೂದಲನ್ನು ಮರೆಮಾಚೋ ಅಗತ್ಯ ಇಲ್ಲ ಏಕೆಂದರೆ ಗಂಡು ದೇವರ ಪ್ರತಿ ರೂಪ. ಆದರೆ ಹೆಣ್ಣು ಗಂಡಿನ ಗೌರವ, ಘನತೆ. ಕ್ರೈಸ್ತ ಧರ್ಮ ಗುರುಗಳ ಪ್ರಕಾರ ಹೆಣ್ಣು ತಲೆ ಕೂದಲನ್ನು ಮರೆಮಾಚುವುದು ಆಕೆ ಗಂಡಿಗೆ ಮತ್ತು ದೇವರಿಗೆ ವಿಧೇಯಳಾಗಿರಬೇಕಾದ ಕುರುಹು.  ಯಹೂದ್ಯ ಮತ್ತು ಕ್ರೈಸ್ತ ಧರ್ಮದಲ್ಲಿ ಹಿಜಾಬ್ ಗಂಡಿಗೆ ಮತ್ತು ಸಮಾಜಕ್ಕೆ ಹೆಣ್ಣು ವಿಧೇಯಳಾಗುವ ನಿಟ್ಟಿನಲ್ಲಿ ಆಗ್ರಹಿಸಿದರೆ, ಬಯಸಿದರೆ ಇಸ್ಲಾಮ್ ಹಿಜಾಬನ್ನು ಬಯಸಿದ್ದು ಹೆಣ್ಣಿನ ನಮ್ರ ನಡತೆಯನ್ನು ಉತ್ತೇಜಿಸಲು ಮತ್ತು ಪರಪುರುಷರ ಆಸಕ್ತ ಕಣ್ಣುಗಳಿಂದ ರಕ್ಷಿಸಿಕೊಳ್ಳಲು.      

 

ಕೆನಡಾದ ಕ್ವೀನ್ಸ್ ವಿಶ್ವ ವಿದ್ಯಾಲಯ ಹೊರಡಿಸಿದ ಒಂದು ಪತ್ರದಲ್ಲಿ ಈ ಆಘಾತಕಾರಿ ಅಂಶಗಳು ಒಳಗೊಂಡಿದ್ದವು.  ಪ್ರತೀ ೬ ನಿಮಿಷ ಗಳಿಗೊಮ್ಮೆ ಹೆಣ್ಣಿನ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತದೆ;

ಪ್ರತೀ ಮೂರು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಜೀವಿತ ಕಾಲದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುತ್ತಾಳೆ.

ಪ್ರತೀ ನಾಲ್ವರು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಜೀವಿತ ಕಾಲದಲ್ಲಿ ಬಲಾತ್ಕಾರದ ಅಪಾಯಕ್ಕೆ ಸಿಲುಕಿರುತ್ತಾಳೆ.

ಪ್ರತೀ ಎಂಟು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಕಾಲೇಜು ವ್ಯಾಸಂಗದ ವೇಳೆ ಲೈಂಗಿಕ ಶೋಷಣೆಗೆ ಒಳಪತ್ತಿರುತ್ತಾಳೆ.

ಆಧುನಿಕ ವಿಶ್ವದಲ್ಲಿ ಆಧುನಿಕ ಮನೋಭಾವದ ವ್ಯಕ್ತಿಗಳು ತಮ್ಮ ಆಧುನಿಕತೆಗೆ ವಸ್ತ್ರ ವನ್ನು ಮಾನದಂಡ ವಾಗಿರಿಸ ಕೂಡದು. ಗಂಡು ಮುಚ್ಚಿದಷ್ಟೂ gentleman ಮತ್ತು ಹೆಣ್ಣು ತೆರೆದಷ್ಟೂ cultured lady. ಈ ಮಾನ ದಂಡವನ್ನು ಎಲ್ಲರ ಮೇಲೂ ಹೇರಕೂಡದು.

ವೈಯಕ್ತಿವಾಗಿ ನಾನು ನಿಕಾಬ್ ಅಭಿಮಾನಿಯಲ್ಲ. ಬುರ್ಖಾ ಧರಿಸದೆಯೂ ಹೆಣ್ಣು ತನ್ನ ಅಂಗ ಸೌಷ್ಠವ ಪ್ರದರ್ಶಿಸದೆ ಬದುಕಬಹುದು. ಇತ್ತೀಚೆಗೆ ವಿವಾಹಿತರಾದ ಮಹೇಂದ್ರ ಸಿಂಗ್ ಧೋನಿ ಯವರ ಪತ್ನಿ ತುಂಬು ತೋಳಿನ ( full sleeved) ಚೂಡಿದಾರ್ ಧರಿಸಿ ತಲೆಯ ಮೇಲೆ ದುಪಟ್ಟಾ ಹಾಕಿಕೊಂಡು ಅಭಿನಂದಿಸಲು ಬಂದ ಜನರನ್ನು ಸ್ವೀಕರಿಸಿದರು ಎಂದು ಯಾರೋ ಹೇಳಿದರು. ಇಲ್ಲಿ ಈ ನವವಿವಾಹಿತೆ ತನಗರಿವಿಲ್ಲದೆಯೇ ಇಸ್ಲಾಮೀ ಸಂಸ್ಕೃತಿಯ ಉಡುಗೆಗೆ ಮಾರು ಹೋಗಿರಬೇಕು.       

ಈ ಲೇಖನ ಬರೆಯುತ್ತಿರುವಾಗ ನನ್ನ ಪತ್ನಿ ಕೇಳಿದಳು ಯಾವುದರ ಬಗ್ಗೆ ಬರೆಯುತ್ತಿದ್ದೀರಿ ಎಂದು. ಯೂರೋಪಿನಲ್ಲಿ ಬುರ್ಖಾ ಬ್ಯಾನ್ ಮಾಡ್ತಾರಂತೆ, ಅದರ ಬಗ್ಗೆ ಬರೆಯುತ್ತಿದ್ದೇನೆ ಎಂದೆ. ಅರ್ಥವಾಗದೆ ಕೇಳಿದಳು, ಬುರ್ಖಾ ಬ್ಯಾನ್ ಮಾಡ್ತಾರ? ಏಕೆ? ಕಾರಣ ಏನು?

ಕಾರಣ ನನಗೂ ಗೊತ್ತಿಲ್ಲ. ಕೆಲವೊಮ್ಮೆ  ಸಿಂಪಲ್ ಪ್ರಶ್ನೆಗಳಿಗೆ ಸಿಂಪಲ್ ಉತ್ತರ not so simple.

ನಾ ಕಂಡುಕೊಂಡ ಇಸ್ಲಾಂ

ಇಸ್ಲಾಂ ಧರ್ಮದ ಬಗೆಗಿನ ಸಂಶಯ, ಅಪನಂಬಿಕೆಗಳು, ತಾರಕಕ್ಕೇರಿದ್ದು ನಮ್ಮೆಲ್ಲರ ಮಧ್ಯೆ ಇರುವ, ನಾವು ದಿನವೂ ಕಾಣುವ ಇಸ್ಲಾಮಿನ ಆಚಾರ ವಿಚಾರಗಳು ಇದ್ದಕ್ಕಿದ್ದಂತೆ ಅಪರಿಚಿತವಾಗಿ ಇದೀಗ ತಾನೇ ಭೂಲೋಕಕ್ಕೆ ಅವತರಿಸಿದ ಅನರ್ಥದಂತೆ ಚಿತ್ರಿಸಲಾಗುತ್ತಿದೆ ಮುಸ್ಲಿಮರನ್ನು ಮತ್ತು ಅವರು ನಂಬಿಕೊಂಡು ಬಂದ ಧರ್ಮವನ್ನು. ಸೆಪ್ಟಂಬರ್ ೧೧, ೨೦೦೧ ರಲ್ಲಿ ಅಮೆರಿಕೆಯ ಗಗನಚುಂಬಿ ಕಟ್ಟಡಗಳನ್ನು ೧೯ ಜನ ಅರಬ್ ಮೂಲದ ಯುವಕರು ಕದ್ದೊಯ್ದ ವಿಮಾನಗಳನ್ನು ಕ್ಷಿಪಣಿಗಳಂತೆ ಉಪಯೋಗಿಸಿ ನೆಲಸಮಗೊಳಿಸಿದ್ದು, ಸಾವಿರಾರು ಜನರ ಸಾವು ನೋವುಗಳಿಗೆ ಕಾರಣವಾಗಿದ್ದು ಇಸ್ಲಾಮಿನ ಬಗ್ಗೆ ಭಯ ಜನರ ಮನಸ್ಸಿನಲ್ಲಿ ಬೇರೂರಲು ಸಹಾಯಮಾಡಿತು. ತಮ್ಮ ಸ್ವಾರ್ಥ, ಕ್ಷುಲ್ಲಕ, “ಅಡಗಿರಿಸಿದ ಕಾರ್ಯತಂತ್ರ” ಸಾಧಿಸುವ ನಿಟ್ಟಿನಲ್ಲಿ ಇಸ್ಲಾಂ ವಿರೋಧಿಗಳು ಮಾಧ್ಯಮಗಳ ಸಹಾಯದಿಂದ ಈ ಭಯ ಜನರ ಮನಸ್ಸಿನಲ್ಲಿ ಮತ್ತಷ್ಟು ಬೇರೂರಿಸಿ ಒಬ್ಬ ಮುಸ್ಲಿಮನ ದರ್ಶನವಾದರೂ ಮುಗಿಬೀಳುವಂತೆ ಅಥವಾ ವಿಷ ಜಂತುವನ್ನು  ಕಂಡಂತೆ ಆಡಲು ಕಾರಣಕರ್ತರಾದರು.

ಇಷ್ಟೊಂದು ನಿರ್ಭೀತಿಯಿಂದ, ಅಸಾಧಾರಣ ದೈರ್ಯದಿಂದ, ಸ್ವಂತ ಜೀವವನ್ನೂ ಲೆಕ್ಕಿಸದೆ ಆಕ್ರಮಣ ಮಾಡಿದವರ  ideology ಯಾವುದು, ಅದರ ಉದ್ದೇಶವೇನು ಹೀಗೆ ಕುತೂಹಲ ಮುಗಿಲು ಮುಟ್ಟಿ ಇಸ್ಲಾಮಿನ ಬಗ್ಗೆ ಅಲ್ಪ ಸ್ವಲ್ಪ ಜ್ಞಾನವಿದ್ದವರೆಲ್ಲಾ ಏಕಾಏಕಿ ಇಸ್ಲಾಮಿನ ಪಂಡಿತರಾಗಿ ಪುಸ್ತಕಗಳನ್ನೂ, ಲೇಖನಗಳನ್ನೂ ಬರೆದರು. ತನಗೆ ಅರ್ಥವಾಗದ ಖಾಯಿಲೆ ತಗುಲಿ ಕೊಂಡಾಗ ಖೊಟ್ಟಿ ವೈದ್ಯರ ಮೊರೆ ಹೋಗುವ ವ್ಯಕ್ತಿಯ ಹಾಗೆ ಜನರು ಅರೆ ಬುದ್ಧಿವಂತ ಪಂಡಿತರ ಮೊರೆ ಹೋದರು ಇಸ್ಲಾಮನ್ನು ಅರಿಯಲು. ಆದರೆ ಅವರಿಗೇ ಸಿಕ್ಕಿದ್ದು ಅರೆಬೆಂದ, ಕಪೋಲಕಲ್ಪಿತ ವಿಚಾರಗಳು. ಈ ಬೆಳವಣಿಗೆ ಪಾಶ್ಚಾತ್ಯ ದೇಶಗಳಿಗೆ ಮಾತ್ರ ಸೀಮಿತವಾಗಲಿಲ್ಲ. ಸಾಗರ ದಾಟಿ ನಮ್ಮ ತೀರಕ್ಕೂ ಬಂದವು ಸಂಶಯಗಳು, ಕಪೋಲಕಲ್ಪಿತ ವಿಚಾರಗಳು. ೮೦೦ ವರ್ಷಗಳಿಗೂ ಮಿಕ್ಕು ಆಳಿದ ಒಂದು ಸಂಸ್ಕೃತಿ, ತಮ್ಮ ಭಾಷೆ, ಉಡುಗೆ, ತೊಡುಗೆ, ವಾಸ್ತು ಶಿಲ್ಪಿ, ಸಂಗೀತ ಹೀಗೆ ಬದುಕಿನ ಸಂಸ್ಕೃತಿಯ ಎಲ್ಲಾ ಮಜಲುಗಳಲ್ಲಿ ತನ್ನದೇ ಆದ, ಎಂದಿಗೂ ಅಳಿಸಲಾಗದ, ಛಾಪನ್ನು ಒತ್ತಿದ ಧರ್ಮವನ್ನು ಮತ್ತೊಮ್ಮೆ ನಾಡಿನವರಿಗೆ ಪರಿಚಯಮಾಡಿ ಕೊಡಬೇಕಾದ ಅವಶ್ಯಕತೆ ಬಗ್ಗೆ  ದುಃಖ ತೋರಿದರೂ ನಾನು ನಂಬಿದ ಮತ್ತು ೧೬ ಕೋಟಿಗೂ ಮಿಕ್ಕು ಭಾರತೀಯರು ಕೊಂಡಾಡುವ ಒಂದು ಸಂಸ್ಕೃತಿಯ ಬಗ್ಗೆ ಬರೆಯೋಣ ಎನ್ನಿಸಿತು. ಭಾರತವನು ಆಳಿದ ಮುಸ್ಲಿಮ ಅರಸರು, ಚಕ್ರವರ್ತಿಗಳು ಆಳಬೇಕಾದ ರೀತಿಯಲ್ಲಿ ಆಳಿದ್ದರೆ ಈ ಲೇಖನ ಬರೆಯುವ ಅವಶ್ಯಕತೆ ಇರುತ್ತಿರಲಿಲ್ಲವೇನೋ. ನಾನು ಇಸ್ಲಾಂ ಪಂಡಿತನಲ್ಲ. ನನ್ನ ದೈನಂದಿನ ಬದುಕಿನ ಇಸ್ಲಾಮನ್ನು ನಿಮಗೆ ಪರಿಚಯ ಮಾಡಿಸುವತ್ತ ನನ್ನ ಪ್ರಯತ್ನ ಮಾಡುತ್ತೇನೆ. ಸಂದು ಹೋದ ಕಾಲದ, ವೈಭವದ ಬಗ್ಗೆ ಪ್ರಲಾಪಿಸದೆ, ಹಲುಬದೆ, ನನ್ನ ಸಂಸ್ಕೃತಿ ಮಾತ್ರ ಮೇಲು ಎನ್ನುವ ಉಡಾಫೆತನ ತೋರಿಸದೆ, ನಿಮ್ಮ ಮುಂದೆ ಇಟ್ಟಿದ್ದೇನೆ ನಾನು ನಂಬಿದ ನಂಬಿಕೆ, ಧರ್ಮ, ಮತ್ತು ಜೀವನ ರೀತಿಯ ಒಂದು ತುಣುಕನ್ನು.   

ಇಸ್ಲಾಂ ಅಂದರೇನು:  ಇಸ್ಲಾಂ ಅಂದರೆ ಶರಣಾಗುವುದು, ನಿರಾಕಾರನಾದ ಪ್ರಭುವಿನ ಆಜ್ಞೆಗಳಿಗೆ ಶರಣಾಗುವುದು ಎಂದು. ಸಲಾಂ ಎಂದರೆ ಶಾಂತಿ ಎನ್ನುವ ಪದದ ಮೂಲವೂ ಇದೇ ಆದ್ದರಿಂದ ಇಸ್ಲಾಂ ಶಾಂತಿಯ ಧರ್ಮವೂ ಹೌದು. ಆದರೆ characteristically ಇಸ್ಲಾಮನ್ನು ಶಾಂತಿಯ ಧರ್ಮ ಮಾತ್ರ ಎಂದು ವಿವರಿಸಲಾಗದು. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಬೇಕೆನ್ನುವ ಅಸ್ವಾಭಾವಿಕ impractical ನಡವಳಿಕೆಗೆ ಇಸ್ಲಾಂ ಒಪ್ಪದೇ ಸಾಮಾಜಿಕ ನ್ಯಾಯಕ್ಕಾಗಿ, ಮನುಷ್ಯನ ಸ್ವಾಭಾವಿಕ ಆತ್ಮ ಗೌರವಕ್ಕಾಗಿ, ಕುಟುಂಬ,ಜೀವ, ಸೊತ್ತುಗಳ ರಕ್ಷಣೆಗಾಗಿ ಸಿದ್ಧರಾಗಲು ಕರೆ ನೀಡುತ್ತದೆ. ಆದರೆ ಯಾವುದೇ ರೀತಿಯ ಹೋರಾಟವೂ ದೇವಾಜ್ಞೆಗಳ ಚೌಕಟ್ಟಿನಲ್ಲಿ, ನ್ಯಾಯ ಸಮ್ಮತ ರೀತಿಯಲ್ಲಿ ನಡೆಯಬೇಕೆನ್ನುವ ಇಸ್ಲಾಂ ಅದೇ ಉಸಿರಿನಲ್ಲಿ ಎದುರಾಳಿಯನ್ನು ಕ್ಷಮಿಸಿ, ಹೃದಯ ವೈಶಾಲ್ಯತೆ ತೋರಿ ದೈವಸಂಪ್ರೀತಿಗಳಿಸಿಕೊಳ್ಳಲು ಕರೆ ನೀಡುತ್ತದೆ ತನ್ನ ಅನುಯಾಯಿಗಳಿಗೆ.  

ಇಸ್ಲಾಮಿನ ಮೂಲಭೂತ ನಂಬಿಕೆ ಮತ್ತು ಅಡಿಗಲ್ಲೆಂದರೆ ಏಕದೇವೋಪಾಸನೆ. ಈ ವಿಷಯದ ಬಗ್ಗೆ ಇಸ್ಲಾಂ ನ ನಿಲುವು uncompromising. ಏಕದೇವೋಪಾಸನೆಯ ಈ ವೈಶಿಷ್ಟ್ಯ ಕ್ರೈಸ್ತ ಧರ್ಮಕ್ಕೆ ಸೇರಿದ ಇಸ್ಲಾಂ ಟೀಕಾಕಾರರ ಮತ್ತು ಹಿಂದೂ ಧಾರ್ಮಿಕ ಗುರುಗಳ ಮೆಚ್ಚುಗೆಯನ್ನೂ ಗಳಿಸಿತು. ಈ ನಿಲುವನ್ನು ಯಾವುದೇ ಕಾರಣಕ್ಕೂ ಸಡಿಲಿಸದೆ ಇದ್ದ ಕಾರಣ ಪ್ರವಾದಿಗಳು ತಮ್ಮ ಹುಟ್ಟೂರಾದ ಮಕ್ಕಾ ಪಟ್ಟಣದಿಂದ ಹೊರಗಟ್ಟಲ್ಪಟ್ಟರು.

“ಕಾಬಾ” ಇರುವುದು ಮಕ್ಕಾ ನಗರದಲ್ಲಿ. ಚೌಕಾಕಾರದ, ಕಪ್ಪು ವಸ್ತ್ರದಿಂದ ಹೊದೆಯಲ್ಪಟ್ಟ ಈ ಕಟ್ಟಡದ ಸುತ್ತಾ ಆಗಿನ ಕಾಲದ ಮಕ್ಕಾ ಮತ್ತು ಅರೇಬಿಯಾದ ನಿವಾಸಿಗಳು ಪ್ರದಕ್ಷಣೆ ಹಾಕುತ್ತಿದ್ದರು. ೩೬೦ ಕ್ಕೂ ಹೆಚ್ಚು ವಿಗ್ರಹಗಳಿದ್ದ ಈ ಭವನಕ್ಕೆ ಸ್ತ್ರೀಯರು ನಗ್ನರಾಗಿ ಪ್ರದಕ್ಷಿಣೆ ಮಾಡುತ್ತಿದ್ದರು. ಸಾಮಾಜಿಕವಾಗಿ ಅಲ್ಲಿನ ಜನರು ಕುಡಿತ, ಜೂಜು, ಪರಸ್ತ್ರೀ ಸಂಗ, ಬಡ್ಡಿ ವ್ಯವಾಹಾರ, ವ್ಯಾಪಾರದಲ್ಲಿ ಮೋಸ, ತೂಕದಲ್ಲಿ ಮೋಸ, ಕಾಳ ಧಂಧೆ, ಹುಟ್ಟಿದ ಮಗು ಹೆಣ್ಣಾದರೆ ಜೀವಂತವಾಗಿ ಹೂಳುವುದು ಹೀಗೆ ನೂರಾರು ಅನಿಷ್ಟಗಳಿಂದ ತಮ್ಮ ಜೀವನ ಶೈಲಿಯನ್ನಾಗಿ ಮಾಡಿ ಕೊಂಡಿದ್ದರು. ಈ ದುರ್ವರ್ತನೆಗಳು ಕೂಡದು, ನಮ್ಮ ಪ್ರತೀ ಕ್ರಿಯೆಗಳು ದೇವನನ್ನು ಸಾಕ್ಷಿಯನ್ನಾಗಿ ಇಟ್ಟುಕೊಂಡು, ಅವನ ಸಂಪ್ರೀತಿಗಾಗಿ ನಮ್ಮ ಬದುಕನ್ನು ಮುಡಿಪಿಡಬೇಕು ಎಂದ ಪ್ರವಾದಿಗಳ ಮಾತು ಅಲ್ಲಿನ ಜನರಿಗೆ ಹಿಡಿಸಲಿಲ್ಲ. ನಮ್ಮ ಆರಾಧನಾ ಕ್ರಮಗಳು ಮತ್ತು ಜೀವನ ರೀತಿಯನ್ನು ವಿರೋಧಿಸದೆ ಇದ್ದರೆ ನಿನ್ನ ಕಾಲಿನ ಬುಡಕ್ಕೆ ನಮ್ಮ ಸಂಪತ್ತನ್ನೆಲ್ಲಾ ಸುರಿಯುತ್ತೇವೆ, ನಿನ್ನನ್ನು ನಮ್ಮ ನಾಯಕನನ್ನಾಗಿ ಮಾಡುತ್ತೇವೆ, ರಾಜನನ್ನಾಗಿ ಅಂಗೀಕರಿಸುತ್ತೇವೆ ಎಂದು ಆಮಿಷ ತೋರಿಸಿದ ಬುಡಕಟ್ಟಿನ ಜನರ ಮಾತಿಗೆ ಒಪ್ಪದೇ ಆರಾಧನೆ ಸೃಷ್ಟಿ ಕರ್ತನಿಗೆ ಮಾತ್ರ, ನಮ್ಮ ಕೈಯ್ಯಾರೆ ಸೃಷ್ಟಿಸಿದ ಸೃಷ್ಟಿಗಳಿಗಲ್ಲ ಎಂದು ಸೊಲ್ಪವೂ ವಿಚಲಿತರಾಗದೆ ಧೃಢ ಸ್ವರದಲ್ಲಿ ಪ್ರವಾದಿಗಳು ಹೇಳಿದಾಗ ಅವರನ್ನು ಮಕ್ಕಾ ನಗರದಿಂದ ಹೊರಗಟ್ಟಿದರು ಅಲ್ಲಿನ ನಿವಾಸಿಗಳು.  ಪ್ರವಾದಿಗಳು ತಮ್ಮ ಅನುಚರರೊಂದಿಗೆ ಭಾರವಾದ ಹೃದಯದಿಂದ ತಮ್ಮ ಪ್ರೀತಿಯ ಮಕ್ಕಾ ಪಟ್ಟಣ ಬಿಟ್ಟು ಮದೀನಾ ನಗರಕ್ಕೆ ಬಂದರು. ಇದನ್ನು “ಹಿಜರಿ” ಎಂದು ಕರೆಯುತ್ತಾರೆ. ಹಿಜರಿ ಎಂದರೆ ವಲಸೆ ಎಂದರ್ಥ. ಏಕದೇವೋಪಾಸನೆಯ ವಿಷಯದಲ್ಲಿ ಮಕ್ಕಾ ಜನರೊಂದಿಗೆ ರಾಜಿ ಮಾಡಿ ಕೊಂಡಿದ್ದರೆ ಪ್ರವಾದಿಗಳು ಕಷ್ಟ ಕಾರ್ಪಣ್ಯ, ಸಾಮಾಜಿಕ ಬಹಿಷ್ಕಾರಗಳನ್ನು ಎದುರಿಸ ಬೇಕಿರಲಿಲ್ಲ. ಪ್ರವಾದಿಗಳ ಈ ನಿಲುವು ಅವರಿಗೆ ಹೊಸ ಬೆಂಬಲಿಗರನ್ನು ಗಳಿಸಿ ಕೊಟ್ಟಿತು.  

ಮಾನವರೆಲ್ಲಾ ಸಮಾನರು, “ಸನ್ನಡತೆಯ ಗಂಡು” ಮತ್ತು “ಸನ್ನಡತೆಯ ಹೆಣ್ಣು” ಇವೆರಡೇ ಜಾತಿಗಳು ಎಂದು ಸಾರಿದ ಪ್ರವಾದಿಗಳಿಗೆ ಮದೀನಾ ನಗರದಲ್ಲಿ ಅಭೂತಪೂರ್ವವಾದ ಸ್ವಾಗತ ಸಿಕ್ಕಿತು. ಕಡು ಕಪ್ಪ್ಪು ತ್ವಚೆಯ ಗುಲಾಮರು ಸಮಾಜದ ಕುಲೀನ ವರ್ಗದವರೊಂದಿಗೆ ಬೆರೆತು ಸರಿ ಸಮಾನರಾಗಿ ಬಾಳುತ್ತಿದ್ದರು. ನಮಾಜಿನ ಸಮಯ ನೀಡುವ ಕರೆ “ಅದಾನ್” ಪ್ರಪ್ರಥಮವಾಗಿ ಕಾಬಾ ಭವನದ ಮೇಲೆ ನಿಂತು ನೀಡಿದ್ದು ಇಥಿಯೋಪಿಯಾ ದೇಶದ ಗುಲಾಮ “ಬಿಲಾಲ್”. ಈ ಸಮಾನತೆಯ ಮೋಹಕ ಆದರ್ಶ ವಿಶ್ವದಾದ್ಯಂತ ದಂಡು ದಂಡಾಗಿ ಜನ ಇಸ್ಲಾಮಿಗೆ ಶರಣಾಗುವಂತೆ ಮಾಡಿತು.         

ಆರಾಧನೆ:  ದಿನದಲ್ಲಿ ಐದು ಹೊತ್ತು ಯಾವುದೇ ಸಮಜಾಯಿಷಿ ಇಲ್ಲದೆ ನಮಾಜ್ ನಿರ್ವಹಿಸುವುದು ಇಸ್ಲಾಮಿನ ಮತ್ತೊಂದು ಅಡಿಗಲ್ಲು. ಹೆಣ್ಣಿಗೆ ಶಾರೀರಿಕ ತೊಡಕು ಹೊರತು ಪಡಿಸಿ, ಮತ್ತು ಗಂಡು ತನ್ನ ಕೊನೆಯುಸಿರಿರುವವರೆಗೂ ನಮಾಜನ್ನು ನಿರ್ವಹಿಸಲೇಬೇಕು. ಪ್ರಯಾಣದಲ್ಲೂ, ಶಾರೀರಿಕ ಅಸ್ವಸ್ಥ ಸ್ಥಿತಿಯಲ್ಲೂ, ರಣರಂಗದಲ್ಲೂ, ಯಾವುದೇ ವಿನಾಯಿತಿ ಇಲ್ಲದೆ ಕ್ಲಪ್ತ ಸಮಯಕ್ಕೆ ಸೃಷ್ಟಿ ಕರ್ತನ ಆರಾಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಅರುಣೋದಯ ದ ಪ್ರಾರ್ಥನೆ, ಸೂರ್ಯ ನೆತ್ತಿಗೆ ಬಂದಾಗಿನ ಹೊತ್ತು, ಅಪರಾಹ್ನ, ಸಂಜೆ, ಮತ್ತು ರಾತ್ರಿ ಇವು ನಮಾಜ್ ಗೆಂದು ನಿಯುಕ್ತ ಗೊಂಡ ಸಮಯಗಳು. ಸಮಯ ತಪ್ಪಿಸಿದರೆ ಆ ಆರಾಧನೆ  ಚಲಾವಣೆ ಕಳೆದು ಕೊಂಡ ಕಾಸಿನಂತೆ. ನಿರರ್ಥಕ. ಸಮಯ ತಪ್ಪಿಸಿದ ಆರಾಧನೆ ನನಗೆ ಬೇಡ ಎನ್ನುತ್ತಾನೆ ಪರಮಾತ್ಮ. ಈ ನಿಯಮದಲ್ಲಿ ಬದುಕಿನಲ್ಲಿ ಯಶಸ್ಸಿಗೊಂದು ಪಾಠ ಇಲ್ಲಿದೆ ನೋಡಿ. ನಮಾಜ್ ಸಮಯಪ್ರಜ್ಞೆಯನ್ನು ಜನರಲ್ಲಿ ಬೆಳೆಸುತ್ತದೆ, ಸಮಯದ ಮಹತ್ವದ ಬಗ್ಗೆ ನಿಷ್ಠುರತೆ ತೋರಿಸುತ್ತದೆ. ಆದರೆ ಈ ಸಾರವನ್ನು ಮುಸ್ಲಿಮ್ ಜನಾಂಗ ಅರಿಯದೆ ಇರುವುದು ಖೇದಕರ.

ಇಸ್ಲಾಮಿನಲ್ಲಿ ಸ್ತ್ರೀ:  ಮನೋಹರವಾದ, ವಿಶ್ವ ಕೊಂಡಾಡಿದ ಆದರ್ಶಗಳಾದ ಏಕ ದೇವೋಪಾಸನೆ, ಮನುಷ್ಯರಲ್ಲಿ ಸಮಾನತೆ, ಯಾವುದೇ ಪರಿಸ್ಥಿತಿಯಲ್ಲೂ ದೇವರ ಆರಾಧನೆಯಂಥ ವಿಚಾರಗಳು ಮಾತ್ರವಲ್ಲ ಹೆಣ್ಣಿನ ಸ್ವಾತಂತ್ರ್ಯದ ಕಡೆಗೂ ಇಸ್ಲಾಂ ಗಮನ ಹರಿಸಿತು. ಆಗಿನ ಕಾಲದಲ್ಲಿ ಹೆಣ್ಣಿಗೆ ಆಸ್ತಿಯಲ್ಲಿ ಹಕ್ಕು ಯಾರೂ ಕೇಳಿರದ, ಕಂಡಿಲ್ಲದ ಒಂದು ಬೆಳವಣಿಗೆ. ಪ್ರಪ್ರಥಮವಾಗಿ ಹೆಣ್ಣಿಗೆ ತನ್ನ ತಂದೆಯ ಆಸ್ತಿಯಲ್ಲಿ ಹಕ್ಕನ್ನು ನೀಡುವ ಮೂಲಕ ಒಂದು ಕ್ರಾಂತಿ ಕಾರೀ ಬೆಳವಣಿಗೆಗೆ ಇಸ್ಲಾಂ ನಾಂದಿ ಹಾಡಿತು. ಇಸ್ಲಾಂ ಅನುಷ್ಠಾನಕ್ಕೆ ತಂದ ೮೦೦  ವರುಷಗಳ ತರುವಾಯ ಇಂಗ್ಲೆಂಡ್ ಈ ಕಾನೂನನ್ನು ಅನುಷ್ಠಾನಕ್ಕೆ ತಂದಿತು. ಹೆಣ್ಣಿಗೆ ಆತ್ಮವಿಲ್ಲ ಮತ್ತು ಸ್ವರ್ಗ ಲೋಕದಿಂದ ಮನುಷ್ಯ ಹೊರ ಹಾಕಲ್ಪಟ್ಟಿದ್ದು ಹೆಣ್ಣಿನ ತಪ್ಪಿನಿಂದ, ಪ್ರಪಂಚದ ಎಲ್ಲಾ ಕೋಲಾಹ, ಕಲಹಗಳಿಗೆ ಹೆಣ್ಣೇ ಕಾರಣ ಎಂದು ಮಹಿಳೆಯನ್ನು ಪಾಶ್ಚಾತ್ಯರಂತೆ ಜರಿಯದೆ ದೇವರಿಗೆ ಭಯ ಪಟ್ಟು ಬದುಕುವ ಗಂಡು ಮತ್ತು ಹೆಣ್ಣು ಹೇಗೆ ಸಮಾನರು ಎಂದು ಕುರಾನಿನ ಸೂಕ್ತದಲ್ಲಿ ವಿವರವಾಗಿ ಹೇಳಲಾಗಿದೆ. ಈಗಿನ ಹೆಣ್ಣಿನ ಶೋಷಣೆಗೆ, ದುರ್ಗತಿಗೆ ಮನುಷ್ಯನ ಅತಿಯಾಸೆ ಮತ್ತು ದಬ್ಬಾಳಿಕೆ ಕಾರಣವೇ ಹೊರತು ಧರ್ಮವಲ್ಲ ಎನ್ನುವುದನ್ನು ಇಸ್ಲಾಮಿನ ಆದರ್ಶಗಳನ್ನು ಅರಿತವರಿಗೆ ಅರಿವಾಗುವುದು.   ವಿಧವೆಯರಿಗೆ ಅವರ ಉಡುಗೆ ತೊಡುಗೆಗಳಲ್ಲಿ ಯಾವುದೇ ನಿರ್ದಿಷ್ಟ ನಿರ್ಬಂಧ ಹೇರದೆ ಅವರ ಮರು ವಿವಾಹಕ್ಕೆ ಅನುವು ಮಾಡಿಕೊಡಲು ಸಮಾಜದಿಂದ ಇಸ್ಲಾಂ ಬಯಸುತ್ತದೆ.

ಸ್ತ್ರೀಯರಿಗೆ ಯಾವುದೇ ಸ್ವಾತಂತ್ರ್ಯವಿಲ್ಲ ಎಂದು ಹೇಳುವ ಟೀಕಾಕಾರರಿಗೆ ಮುಸ್ಲಿಮ್ ಸಮಾಜ ಉತ್ತರ ನೀಡಿದೆ. ವಿಶ್ವದಲ್ಲಿ ಇದುವರೆಗೂ ಐದು (ತುರ್ಕಿ, ಪಾಕಿಸ್ತಾನ, ಬಾಂಗ್ಲ ದೇಶ, ಕಿರ್ಗಿಸ್ತಾನ್) ಮುಸ್ಲಿಂ ಮಹಿಳಾ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದು ಅವರನ್ನು ಆರಿಸಿದ ಮತದಾರರಲ್ಲಿ ಪುರುಷರೂ ದೊಡ್ಡ ಸಂಖ್ಯೆಯಲ್ಲಿ ಇದ್ದರು ಎನ್ನುವುದನ್ನು ಮನಗಾಣಬೇಕು. ಅಷ್ಟೇ ಅಲ್ಲದೆ ಜೋರ್ಡನ್, ಮತ್ತು ಕತಾರ್ ದೇಶಗಳ ರಾಣಿಯರು ಮತ್ತು ಸಿರಿಯಾ ದೇಶದ ಅಧ್ಯಕ್ಷರ ಪತ್ನಿ ಆ ದೇಶಗಳ ರಾಜಕಾರಣಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಿರುವರು. ಪಾಕಿಸ್ತಾನದಲ್ಲಿ ಮೊಟ್ಟ ಮೊದಲ  ಮಹಿಳಾ ಬ್ಯಾಂಕನ್ನು ಸಂಸ್ಥಾಪನೆ ಮಾಡಿದ್ದು ಓರ್ವ ಮಹಿಳೆ.  

ಬಹು ಪತ್ನಿತ್ವ:  ಕೆಲವೊಂದು ಸನ್ನಿವೇಶಗಳಲ್ಲಿ, ಕಟ್ಟುನಿಟ್ಟಾದ ಷರತ್ತುಗಳೊಂದಿಗೆ ಪುರುಷ ಬಹು ಪತ್ನಿತ್ವ ಪಾಲಿಸಬಹುದು. ಆದರೆ ಪತ್ನಿಯರ ನಡುವೆ ನ್ಯಾಯ ಪಾಲಿಸುವಂತೆ ಇಸ್ಲಾಂ ಕಠಿಣ ಶರತ್ತುಗಳನ್ನು ಒಡ್ಡಿದ್ದರಿಂದ ಬಹುಸಂಖ್ಯಾತ ಮುಸ್ಲಿಮರು ಏಕ ಪತ್ನೀವ್ರತಸ್ಥರಾಗಿದ್ದಾರೆ ಎಂದು ನಾವು ಕಾಣಬಹುದು. ಈ ತೆರನಾದ ಒಂದಕ್ಕಿಂತ ಹೆಚ್ಚು ಹೆಂಡಿರನ್ನು ಹೊಂದುವ ಸೌಲಭ್ಯವಿದ್ದರೂ ವಿಶ್ವದ ಶೇಕಡಾ ೯೫ ಕ್ಕೂ ಅಧಿಕ ಮುಸ್ಲಿಂ ಪುರುಷರು ಓರ್ವ ಪತ್ನಿಯಿಂದಲೇ ಸಂತೃಪ್ತರಾಗಬೇಕಾದರೆ ಮುಸ್ಲಿಮರಲ್ಲಿರುವ ಆಳವಾದ ಧಾರ್ಮಿಕ ಪ್ರಜ್ಞೆ ಮತ್ತು ದೈವ ಭಯ ಇರುವುದರಿಂದಲೇ ಸಾಧ್ಯ ಎಂದು ಮನಗಾಣಬಹುದು.  

ಮುಸ್ಲಿಮೇತರರೊಂದಿಗೆ ಇಸ್ಲಾಂ:  ಸಂಪೂರ್ಣ ಅರೇಬಿಯಾ ತನ್ನ ಉನ್ನತ ಆದರ್ಶಗಳಿಗೆ ತಲೆ ಬಾಗಿ ನಡೆಯುತ್ತಿದ್ದರೂ ಪ್ರವಾದಿಗಳು ಯಹೂದ್ಯರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು.

ಪ್ರವಾದಿಗಳ ನಂತರ ಖಲೀಫಾ ಆಳ್ವಿಕೆಯ ಪರಂಪರೆ ಆರಂಭವಾಯಿತು. ಪ್ರವಾದಿಗಳ ನಂತರದ ಸುಮಾರು ೫೦೦ -೬೦೦ ವರ್ಷಗಳನ್ನು ಇಸ್ಲಾಮಿನ ಸುವರ್ಣ ಯುಗ ಎಂದು ಇತಿಹಾಸಕಾರರು ಬಣ್ಣಿಸುತ್ತಾರೆ.

ಮುಸ್ಲಿಂ ಆಳ್ವಿಕೆಯಲ್ಲಿ ಮುಸ್ಲಿಮೇತರರ ಮೇಲೆ “ಜೆಜಿಯಾ” ತಲೆಗಂದಾಯ ವಿಧಿಸಿದ ಕಾರಣ ನೋಡೋಣ. ಎಲ್ಲಾ ಮುಸ್ಲಿಂ ರಾಜರುಗಳು ಈ ಪದ್ಧತಿಯನ್ನು ಅನುಸರಿಸಲಿಲ್ಲ. ಮುಸ್ಲಿಂ ಆಳ್ವಿಕೆಯಲ್ಲಿ, ಮುಸ್ಲಿಂ ದೇಶದಲ್ಲಿ ನೆಲೆಸುವ ಮುಸ್ಲಿಮೇತರರಿಗೆ ಕೆಲವು ಸೌಲಭ್ಯ ಕೊಡುವ ಕಾರಣ ಈ ತೆರಿಗೆ ವಿಧಿಸಲಾಯಿತು. ಮುಸ್ಲಿಮೇತರರು ಸೈನ್ಯದಲ್ಲಿ ಭಾಗವಹಿಸುವ ಅವಶ್ಯಕತೆಯಿಲ್ಲ, ಮತ್ತು ಪ್ರತೀ ಮುಸ್ಲಿಮನೂ ಪಾವತಿಸಲೇ ಬೇಕಾದ “zakah” ಎನ್ನುವ ತೆರಿಗೆಯಿಂದಲೂ ಮುಸ್ಲಿಮೇತರರಿಗೆ ವಿನಾಯಿತಿ ನೀಡಲಾಯಿತು. ಹಾಗೆಯೇ ಅವರ ಪ್ರಾಣ, ಆಸ್ತಿ ರಕ್ಷಣೆ ಸಹ ಮುಸ್ಲಿಂ ದೇಶದ ಹೊಣೆಯಾಗಿತ್ತು.  

ಯಾವ ಧರ್ಮಕ್ಕೆ ಸೇರಿದವನಾದರೂ ನೆರೆ ಹೊರೆಯವನೊಂದಿಗೆ ಸ್ನೇಹದಿಂದ  ಇರಲೂ, ನೆರೆಯವನ ಎಲ್ಲಾ ಅವಶ್ಯಕತೆ ಪೂರೈಸಲು ಮುಸ್ಲಿಮರನ್ನು ಇಸ್ಲಾಂ ಉತ್ತೇಜಿಸುತ್ತದೆ. ಇಸ್ಲಾಮಿನ ಎರಡನೇ ಖಲೀಫಾ (ಧರ್ಮಾಧಿಕಾರಿ, ಇಸ್ಲಾಮಿನಲ್ಲಿ “ರಾಜ” ಎನ್ನುವ ಪದ್ಧತಿಯಿಲ್ಲ, ಅದು ನವೀನ ಅವಿಷ್ಕಾರ) ಉಮರ್ ಅವರ ಕಾಲದಲ್ಲಿ ಒಬ್ಬ ಯಹೂದ್ಯ ವ್ಯಕ್ತಿ ತನ್ನ ಮನೆ ಪಕ್ಕದ ಖಾಲಿ ಜಾಗವನ್ನ ಮಾರುವಾಗ ದೊಡ್ಡ ಮೊತ್ತದ ಹಣ ಕೇಳುತ್ತಾನೆ. ಕಾರಣ ಕೇಳಿದಾಗ ಖಾಲಿ ಜಾಗದ ಪಕ್ಕದಲ್ಲಿ ಧರ್ಮ ನಿಷ್ಠ ಮುಸ್ಲಿಂ ವ್ಯಕ್ತಿ ವಾಸವಿರುವುದರಿಂದ ಆ ವ್ಯಕ್ತಿಯಿಂದ ಯಾವುದೇ ತಕರಾರು, ಸಮಸ್ಯೆಗಳು ಬರಲು ಸಾಧ್ಯವಿಲ್ಲದೆ ಇರುವುದರಿಂದ ಆ ಖಾಲಿ ಸ್ಥಳಕ್ಕೆ ಹೆಚ್ಚು ಹಣ ಎಂದು ವಿವರಣೆ ನೀಡುವ ಯಹೂದಿ ಪರೋಕ್ಷವಾಗಿ ಇಸ್ಲಾಮಿನ ಆದರ್ಶಗಳನ್ನು ಕೊಂಡಾಡುತ್ತಾನೆ.  

ಕೊನೆಯದಾಗಿ ಇಸ್ಲಾಮಿನ ಹೆಸರಿನಲ್ಲಿ ಹಿಂಸೆ, ರಕ್ತ ಪಾತ ಹರಿಸುತ್ತಿರುವವರು ತಾವು ನಂಬಿದ ಧರ್ಮದ ಆದರ್ಶಗಳಿಗೆ ದ್ರೋಹ ಬಗೆಯುತ್ತಿದ್ದು ಅವರ ಕುಕೃತ್ಯಗಳಿಗೆ ಇಸ್ಲಾಂನ  ಮೇಲೆ ಹೊಣೆ ಹೊರಿಸುವುದು ತಪ್ಪು.  ವಿನಾಕಾರಣ ಯಾವುದೇ ನಿರಪರಾಧಿ, ಮುಗ್ಧ ವ್ಯಕ್ತಿಯನ್ನು ಕೊಂದರೆ ಇಡೀ ಮಾನವಕುಲವನ್ನೇ ಕೊಂದಂತೆ ಎಂದು ಸಾರುವ ಇಸ್ಲಾಂ ಒಬ್ಬ ವ್ಯಕ್ತಿಯ ಜೀವ ಉಳಿಸಿದರೂ ಜೀವ ಉಳಿಸಿದ ವ್ಯಕ್ತಿ ಮಾನವ ಕುಲವನ್ನೇ ಉಳಿಸಿದ ಕೀರ್ತಿಗೆ ಪಾತ್ರನಾಗುತ್ತಾನೆ ಎಂದು ಹೇಳಿದ್ದರೆ ಭಯೋತ್ಪಾದನೆಯ ಬಗೆಗಿನ ಇಸ್ಲಾಮ್ ನ ನಿಲುವು ಏನು ಎಂದು ತಿಳಿಯುತ್ತದೆ.  ರಾಜಕೀಯ ಕಾರಣಗಳಿಗಾಗಿ ಹಿಂಸೆಯ ಮಾರ್ಗ ಹಿಡಿರುವ ದುರುಳರಿಗೆ ಅವರು ಮಾಡುತ್ತಿರುವುದು “ಪ್ರತಿಕ್ರಿಯಾತ್ಮಕ” ಹಿಂಸೆ ಎಂತಲೋ, “ಧರ್ಮಕ್ಕಾಗಿ ಕಯ್ಯೆತ್ತುವುದು” ಎಂತಲೂ ಮುಸ್ಲಿಮರು ಸಮರ್ಥಿಸದೆ ಒಕ್ಕೊರಲಿನಿಂದ ಖಂಡಿಸಿದ್ದಾರೆ. ರಕ್ತಪಾತ, ಸಾಮೂಹಿಕ ಕೊಲೆಯಂಥ ಕೃತ್ಯ ಎಸಗುವ ಜನರು ಇಸ್ಲಾಂ ಧರ್ಮಕ್ಕೆ ಸೇರಿದವರಲ್ಲ ಎಂದು ಕಳೆದವರ್ಷ ಹೈದರಾಬಾದಿನಲ್ಲಿ ಸೇರಿದ್ದ ದೇಶದ ಮುಸ್ಲಿಂ ಪಂಡಿತರುಗಳು ಇಸ್ಲಾಂ ವಿಶ್ವ ಶಾಂತಿ ಬಯಸುತ್ತದೆ ಎಂದು ಸಾರಿದ್ದರು.

ಮುಸ್ಲಿಮರಲ್ಲಿರುವ ಅನಕ್ಷರತೆ, ಮತ್ತಿತರ ನ್ಯೂನತೆಗಳಿಗೆ ಮುಸ್ಲಿಮರು ಹೊಣೆಯೇ ಹೊರತು ಅವರು ನಂಬುವ ಇಸ್ಲಾಂ ಧರ್ಮವಲ್ಲ. ಪವಿತ್ರ ಗ್ರಂಥ ಕುರಾನ್ ನ ಮೊದಲ ಸೂಕ್ತಗಳು ಆರಂಭಗೊಂಡಿದ್ದು ಈ ವಾಕ್ಯದಿಂದ; “ಓದು, ನಿನ್ನನ್ನು ಸೃಷ್ಟಿಸಿದ ಪ್ರಭುವಿನ ನಾಮದಿಂದ” ಎಂದು. ಇಸ್ಲಾಂ ಜ್ಞಾನಕ್ಕೆ ಎಷ್ಟು ಮಹತ್ವ ನೀಡಿದೆ ಎಂದು ಈ ಸೂಕ್ತದಿಂದ ತಿಳಿಯಬಹುದು. ಇಸ್ಲಾಂ ಧರ್ಮವನ್ನ ಅರಿಯಬೇಕೆಂದರೆ ನೇರವಾಗಿ ಧರ್ಮಗ್ರಂಥಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕೆ ವಿನಃ  ಮುಸ್ಲಿಮರ ನಡವಳಿಕೆ ನೋಡಿ ಇವರ ಧರ್ಮ ಹೀಗೆ ಎಂದು ತೀರ್ಪು ನೀಡುವುದು ತಪ್ಪು.      

ಪ್ರವಾದಿಗಳ ಬಗ್ಗೆ ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ರಾಮಕೃಷ್ಣ ರಾವ್ ಸುಂದರವಾದ ಪುಸ್ತಿಕೆ ಬರೆದಿದ್ದಾರೆ. ಆಂಗ್ಲ ಭಾಷೆಯಲ್ಲಿ ಇರುವ ಆ ಪುಸ್ತಿಕೆ ಸೌದಿ ಅರೇಬಿಯಾದ ಮಸೀದಿಗಳಲ್ಲೂ ಕಾಣಬಹುದು. ಪುಸ್ತಿಕೆಯ ಹೆಸರು Muhammad, the prophet of Islam.

ಬ್ಲಾಗಿಗೊಂದು ಎಲ್ಲೆ ಎಲ್ಲಿದೇ…

ಬ್ಲಾಗಿಗೊಂದು ಎಲ್ಲೆ ಎಲ್ಲಿದೇ, ನಿರಾಸೆಗಿಲ್ಲಿ ಕೊನೆಯಿದೇ,

ಏನೇನು ಕನಸು ಕಾಣುವೇ,

ಬ್ಲಾಗಿಸು ನೀ ಬ್ಲಾಗಿಸೂ…

ನನ್ ಫ್ರೆಂಡ್ ಕೇಳ್ದ, ಏನಮ್ಮಾ ತುಂಬಾ ಬ್ಲಾಗ್ತಾ ಇದ್ದೀಯಾ, ಏನ್ಸಮಾಚಾರ ಅಂತ. ಏನಮ್ಮಾ ತುಂಬಾ ಬೊಗುಳ್ತಾ ಇದ್ದೀಯಾ ಅಂತ ಮಾತ್ರ ಕೇಳಿಲ್ಲ ಪುಣ್ಯಾತ್ಮ. ಈ ಬ್ಲಾಗ್ ಅಲೆ ಅಥವಾ ಶೋಕಿ ಬಂದ ಮೇಲಂತೂ ಎಲ್ಲರೂ ಬೊಗಳುವವರೇ, ಊಪ್ಸ್ ಬ್ಲಾಗುವವರೇ. ಒಂದಲ್ಲ ಒಂದು ವಿಷಯವಂತೂ ಇದ್ದೇ ಇರುತ್ತಲ್ಲ ಹೇಳೋದಕ್ಕೆ, ಬರೆಯೋದಕ್ಕೆ. ನಲ್ಲಿ ಜಗಳದಿಂದ ಹಿಡಿದು, ನಮ್ಮನ್ನು ಆಳುವವರ ಲೈಂಗಿಕ ಬದುಕಿನವರೆಗೂ ವಿಷಯಗಳೋ ವಿಷಯಗಳು. ಇವನ್ನೆಲ್ಲಾ ಬರೆದರೆ ಪ್ರಕಟಿಸಲು ಪತ್ರಿಕೆಗಳು ಬೇಕಲ್ಲ. ಮೊದಲೇ ಎರವಲು ಪಡೆದು ಓದುವ ಸಮಾಜ. ಇನ್ನು ಅಂಡೇ ಪಿರ್ಕಿಗಳು ಬರೆದದ್ದನ್ನೆಲ್ಲಾ ಕೊಂಡು ಓದುವುದೂ ಇಲ್ಲ, ಅದಕ್ಕೆ ಬಿಡುವೂ ಇಲ್ಲ. ಇಂಥ ಸನ್ನಿವೇಶದಲ್ಲಿ ಬ್ಲಾಗ್ ವಿಶ್ವ ತನ್ನ ಬಾಗಿಲು ತೆರೆದು ಎಲ್ಲರಿಗೂ ಒಂದು ವೇದಿಕೆ ಒದಗಿಸಿತು, ಒದರಲು. ಸಮಾನತೆಯ ಮೋಹಕ ಕಹಳೆ. blogging is a great liberator and equalizer. ಚಿರಪರಿಚಿತ ಲೇಖಕರಿಂದ ಹಿಡಿದು ಅಂಡೇ ಪಿರ್ಕಿ (ಈ ಪದ ಎರಡು ಸಲ ಬರೆದಿದ್ದು ಏಕೆಂದರೆ ಇದು ನನಗಿಷ್ಟವಾದ ಪದ, ಕನ್ನಡದವರಿಗೆ ಕ್ರಿಯಾ ಶೀಲತೆ ಇಲ್ಲ ಎನ್ನುವವರಿಗೆ ಈ ಪದ ಒಂದು ಉತ್ತರ) ಗಳವರೆಗೆ. ಬರೆಯಿರಪ್ಪಾ/ಮ್ಮಾ ಎಂದು ಮುಕ್ತ ಆಹ್ವಾನ.

ವಿ.ಸೂ : ಅಂಡೇ ಪಿರ್ಕಿ ಎನ್ನುವ ಪದ ಸಭ್ಯವೋ, ಸಂಸದೀಯವೋ (parliamentary) ಎನ್ನುವುದರ ಬಗ್ಗೆ ಯಾರಾದರೂ ಬರೆದರೆ ಚೆನ್ನಿತ್ತು.

ಹಾಗೆಯೇ, ತಲೆ ಸರಿಯಿಲ್ಲದವನಿಗೆ, ಪೆಕರು ಪಕರು ಥರಾ ಆಡುವವನಿಗೆ “ಮಂಡೆ ಪಿರ್ಕಿ” (ಮಂಡೆ, ಅಂದ್ರೆ ತಲೆ) ಅಂತ ಕರೆದರೆ ಹೇಗೆ? ನಮ್ಮ ಕನ್ನಡ ಶಬ್ದ ಭಂಡಾರವನ್ನು ಇನ್ನಷ್ಟು ಶ್ರೀಮಂತಗೊಳಿಸಿದಂತಾಗದೇ?