ಬೇಡದ ಕಡೆ ತಲೆ ಹಾಕಿದ ಕರಡಿ

ನಮಗೆ ಅವಶ್ಯಕತೆ ಇರದ ಕಡೆ ತಲೆ ಹಾಕಬಾರದು ಎಂದು ಹಿರಿಯರ ಬುದ್ಧಿವಾದ. ಕಿತಾಪತಿ ಮಾಡುವವರನ್ನು ಕಂಡರೆ ಹೇಳುತ್ತಾರೆ ಬೇಡದೆ ಇರೋ ಜಾಗದಲ್ಲಿ ತಲೆ ಹಾಕೋದು ಅಂದ್ರೆ ಇವ್ನಿಗೆ ತುಂಬಾ ಇಷ್ಟ ಎಂದು ತೆಗಳೋದನ್ನೂ ನಾವು ಕೇಳಿದ್ದೇವೆ. ಆದರೆ ಇಲ್ಲಿ ಬೇಡ ಕಡೆ ತಲೆ ಹಾಕಿ ಮಂಗಳಾರತಿ ಮಾಡಿಸಿ ಕೊಂಡಿದ್ದು ಹುಲು ಮನುಜನಲ್ಲ. ಬದಲಿಗೆ ಮೈ ತುಂಬಾ ಕೇಶ ಇಟ್ಟುಕೊಂಡು ನಮ್ಮ ಮಕ್ಕಳಿಗೆ ಬೊಂಬೆ ರೂಪದಲ್ಲೂ, ನಿಜ ರೂದಲ್ಲೂ ಕಚಗುಳಿ ಇಡುವ ಜಾಂಬವ. ಕರಡಿ.

ಫ್ಲೋರಿಡಾ ರಾಜ್ಯದಲ್ಲಿರುವ “ಒಕಾಲಾ” ನಗರದಲ್ಲಿ ವಾಸಿಸುವ ಕರಡಿಯೊಂದು ತನ್ನ ತಲೆಯನ್ನು ಪ್ಲಾಸ್ಟಿಕ್ ಬಾಟಲಿ ಯೊಂದರಲ್ಲಿ ಸಿಕ್ಕಿಸಿಕೊಂಡು ಪರದಾಡಿತು. ಪೂರ್ತಿ ಹತ್ತು ದಿನ. ಓಹ್, ಹತ್ತು ದಿನಗಳ ಮನುಷ್ಯನ ನಿರ್ಲಕ್ಷ್ಯೆ ಕಾರಣ  ಕಾಲ ತಿನ್ನಲು, ಕುಡಿಯಲು ಆಗದೆ ಒದ್ದಾಡಿದ ಕರಡಿಗೆ ಕೊನೆಗೆ ಮುಕ್ತಿ ಸಿಕ್ಕಿದ್ದೂ ಭಾಗ್ಯಕ್ಕೆ ಮನುಷ್ಯನಿಂದಲೇ. ಪ್ರವಾಸದ ವೇಳೆ ಹೋದ ಹೋದೆಡೆ ನಮ್ಮ ಗಾರ್ಬೇಜ್ ಎಳೆ ದು ಕೊಂಡು ಹೋಗುವ ನಮಗೆ ನಿಸರ್ಗದ ಕಡೆ ನಮಗಿರುವ ಬೇಜವಾಬ್ದಾರಿತನಕ್ಕೆ ಪ್ರವಾಸ ಅಥವಾ ಪರ್ಯಟನ ಕಳೆದು ಬರುವಾಗ ನಮ್ಮ ಹಿಂದೆ ಬಿಟ್ಟು ಹೋಗುವ ತಿಪ್ಪೆಗಳೇ ಸಾಕ್ಷಿ.

ಜೆಡ್ಡಾ ದಿಂದ ಸುಮಾರು ೨೦೦ ಕಿ.ಮೀ ಇರುವ ನಮ್ಮ ಕೆಮ್ಮಣ್ಣು ಗುಂಡಿಯನ್ನು ಹೋಲುವ “ತಾಯಿಫ್” ಭೇಟಿಯ ವೇಳೆ ಬೆಟ್ಟದ ಕೆಳಗಿನ ದಾರಿಯಲ್ಲಿ ಒಂದು ಮರವನ್ನು ಕಂಡೆ. ಸಾಮಾನ್ಯವಾಗಿ ಮರ ಎಂದ ಮೇಲೆ ಎಲೆಗಳು ಇದ್ದೇ ಇರುತ್ತವೆ, ಅಲ್ಲವೇ? ಸಖೇದಾಶ್ಚರ್ಯ, ಇದೊಂದು ವಿಚಿತ್ರ ಮರವಾಗಿ ಕಂಡಿತು ನನಗೆ. ಮರದ ಟೊಂಗೆಯ ತುಂಬಾ ಬಣ್ಣ ಬಣ್ಣದ, ವಿವಿಧ ಆಕಾರದ, ಗಾತ್ರದ ಚೀಲಗಳು. ಪ್ಲಾಸ್ಟಿಕ್ ಚೀಲಗಳು. ಸಂಪೂರ್ಣ ಮರವನ್ನು ಆವರಿಸಿ ಬಿಟ್ಟಿತ್ತು. ಗಾಡಿಯಲ್ಲಿ ಹೋಗುವಾಗ ಮೇಯೋದು, ತದನಂತರ ಬಿಡೋದು ಗಾಳಿ ಪಟವ. ಅಲ್ಲಲ್ಲ, ಪ್ಲಾಸ್ಟಿಕ್ ಪಟವ. ಸ್ವಲ್ಪ ದೂರ ಹೋದ ನಂತರವೇ ನನ್ನ ಮಂದ ಮಾತಿಗೆ ತೋಚಿದ್ದು ಒಹ್, ಈ ಮರದ ಚಿತ್ರವೊಂದನ್ನು ಕ್ಲಿಕ್ಕಿಸಬೇಕಿತ್ತು ಎಂದು.       

ತನ್ನ ಸುಂದರ ಮೂತಿಯನ್ನು ಈ ಪ್ಲಾಸ್ಟಿಕ್ ಬಾಟಲಿಗೆ ಸಿಕ್ಕಿಸಿಕೊಂಡ ಕೇವಲ ಆರು ತಿಂಗಳ ಹಸುಳೆ ಕರಡಿಗೆ ವನ್ಯ ಜೀವಿ ಸಂರಕ್ಷಕರು ಬಂದು ಮೊದಲು ಪಕ್ಕದಲ್ಲೇ ಇದ್ದ ಅದರ ತಾಯಿಗೆ ಶಾಂತ ಗೊಳಿಸುವ ಚಚ್ಚು ಮದ್ದನ್ನು ನೀಡಿ ಪ್ಲಾಸ್ಟಿಕ್ ಮುಕ್ತ ಗೊಳಿಸಿದರು. ಅವರ ಪ್ರಕಾರ ಆ ಕರಡಿ ಒಂದೆರಡು ದಿನಗಳಲ್ಲಿ ಸಾಯುತ್ತಿತ್ತಂತೆ ಬಾಟಲಿ ಕಾರಣ  ತಿನ್ನಲು ಕುಡಿಯಲು ಆಗದೆ.     

ಚಿತ್ರ ಕೃಪೆ: http://www.newstimes.com/news/article/Plastic-jar-removed-from-Fla-bear-cub-s-head-615774.php#photo-3

ಚುಂಬನ ಸ್ಪರ್ದೆ

ಚುಂಬನ ಸ್ಪರ್ದೆ ಚೀನಾದಲ್ಲಿ. ಹಾಂ? ಚುಂಬನ?ಚೀನಾದಲ್ಲಿ? ಅದೂ ಸಾರ್ವಜನಿಕವಾಗಿ? ನಾವೆಲ್ಲಾ ತಿಳಿದಂತೆ ಚೀನೀಯರ ಕೆಲಸ ನಮ್ಮ ಅರುಣಾಚಲ ಪ್ರದೇಶವನ್ನು, ಮತ್ತು ಇತರೆ ಈಶಾನ್ಯ ರಾಜ್ಯಗಳತ್ತ ಆಸೆ ಗಣ್ಣು ಬೀರುವುದು ಎಂದು. ಊಹೂಂ, ಈ ಚಪ್ಪಟೆ ಮೂಗಿನವರಿಗೆ ಒಂದಿಷ್ಟು ಚುಂಬನದ ಕಲೆಯೂ ಗೊತ್ತು, ಯಾರಿಗೆ ಗೊತ್ತು ನಮ್ಮ ವಾತ್ಸ್ಯಾಯನ ಅಡ್ಡಾಡುತ್ತಾ ಚೀನದ ಕಡೆಗೂ ತಲೆ ಹಾಕಿರಬಹುದು. valentine ದಿನದಂದು ಚೀನಾ ದ ಸೂಪರ್ ಮಾರ್ಕೆಟ್ ಒಂದು ವಿವಿಧ ಭಂಗಿಯಲ್ಲಿ ದೀರ್ಘವಾಗಿ ಚುಂಬಿಸುವುದಕ್ಕೆ ಯುವ ಹೃದಯಿಗಳಿಗೆ ಮುಕ್ತ ಆಹ್ವಾನ ನೀಡಿದಾಗ ಸಿಕ್ಕ ಚಿತ್ರಗಳಿವು. ನೋಡಿ ಆನಂದಿಸಿ, ಪೂರ್ಣ ವಿರಾಮ. ಪ್ರಿಯ/ತಮೆ ಯರ ಮೇಲೆ ಪ್ರಯೋಗಿಸದಿರಿ.

ಪರೋಪಕಾರಿ ವೃಕ್ಷ

ಪಡ್ಡೆ ಹುಡುಗ ಹುಡುಗಿಯರು ಸೀಬೆ, ಮಾವಿನ ಮರ ಹತ್ತಿ ಟೊಂಗೆಗಳನ್ನು ತಮ್ಮತ್ತ ಎಳೆದು ಮರದ ಕೈಕಾಲುಗಳ ನ್ನು ಘಾಸಿ ಮಾಡುವುದನ್ನು ಕಂಡ ಒಂದು ಮರ ತನ್ನದೇ ಆದ ವಿಶಿಷ್ಟ ವಿಧಾನದಲ್ಲಿ ಕಳ್ಳ ಕಳ್ಳಿಯರಿಗೆ ಅನುಕೂಲವಾಗುವಂತೆ ಹಣ್ಣುಗಳನ್ನು ತನ್ನ ಮೈಮೇಲೆ ಬೆಳೆಸಿಕೊಂಡು ಮುಕ್ತ ಆಹ್ವಾನವೀಯುತ್ತದೆ ಲೂಟಿ ಮಾಡಿ ಕೊಳ್ಳಿ ಎಂದು. ಎಂಥ samaritan ಮರ ನೋಡಿ. ಎಲ್ಲಿದೆ ಆ ಮರ, ಎಂದು ಆಸೆ ಬುರುಕತನದಿಂದ ಕೇಳಬೇಡಿ. ಈ ಮರದ ತವರು ಸಾಗರದಾಚೆ. ಹಾಂ, ಸಾಗರದಾಚೆಯೋ? ಹಾಗಾದರೆ ಸಂಜೀವಿನಿಗಾಗಿ ಸಾಗರೋಲ್ಲಂಘನ ಮಾಡಿದ ಹನುಮಂತನ ಒಂದು ಟ್ರಿಕ್ ಪ್ರಯೋಗಿಸಿದರೆ ಹೇಗೆ? ಯಾವ ಉಲ್ಲಂಘನ ಬೇಕಾದರೂ ಮಾಡಿಕೊಳ್ಳಿ, ನನ್ನ ಕೈ ಕಾಲಿಗಲ್ಲವಲ್ಲಾ ಆಗೋದು ಬ್ಯಾನೆ.

ಹುಲು ಮನುಜರಿಗೆ ಒಂದು ತವರಾದರೆ ಈ ಪರೋಪಕಾರಿ ಮರಕ್ಕೆ ಹಲವು ತವರುಗಳು. ಪೆರಗ್ವೆ, ಅರ್ಜೆಂಟೀನ, ಬ್ರೆಜಿಲ್ ದೇಶಗಳಲ್ಲಿ ಕಾಣಸಿಗುವ ಈ ಮರ ಬರೀ ಪೋಕರಿಯರಿಗೆ ಮಾತ್ರ ಉಪಕಾರಿಯಲ್ಲ, ಔಷಧೀ ಗುಣಗಳನ್ನೂ ಸಹ ಹೊಂದಿದೆ. ಅಸ್ತಮಾ, ಆಮಶಂಕೆ ಮುಂತಾದ ರೋಗಗಳಿಗೆ ಇವು ರಾಮಬಾಣವಂತೆ. ಕ್ಯಾನ್ಸರ್ ರೋಗಕ್ಕೂ ಇದರ ಟೊಂಗೆಯಲ್ಲಿ ಉತ್ತರ ಇರಬಹುದು ಎಂದು ಲೆಕ್ಕಾಚಾರ. ಪುಕ್ಕಟೆ ಏನಾದರೂ ಸಿಗುತ್ತೆ ಎಂದರೆ ಜೋರಾಗಿಯೇ ಸಾಗುತ್ತದೆ ಲೆಕ್ಕಾಚಾರ, ಅಲ್ಲವೇ?

ಇನ್ನಷ್ಟು ಚಿತ್ರಗಳಿಗೆ ಕೆಳಗೆ ತೋರಿಸಿದ ತಾಣಕ್ಕೆ ಯಾತ್ರೆ ಬೆಳೆಸಿ:

http://www.kuriositas.com/2010/04/jabuticaba-tree-that-fruits-on-its.html

believe me, ನಾನು ಗಂಡಸೇ ಅಲ್ಲಾ…

“I am not a man, godman Nityananda told CID sleuths”. ಹಾಂ? ಮೂರ್ಛೆ ಹೋದಿರಾ ಇದನ್ನು ಕೇಳಿ? ಎಂಥ master stroke ನೋಡಿ ಈ ಯೋಗಿಯದು. ನೀವು ಕನಸಿನಲ್ಲಾದರೂ ನೆನೆಸಿದ್ದಿರೋ ಈ  flirting master ನಮ್ಮ ಕ್ರಿಕೆಟ್ನ ಮಾಸ್ಟರ್ ಬ್ಲಾಸ್ಟರ್ ರೀತಿ ಬಿಡು ಬೀಸಾಗಿ ಧಾಳಿ ಮಾಡುತ್ತಾನೆಂದು? ನಾನು ಗಂಡೇ ಅಲ್ಲ ! ಎಂಥ ಗಂಡೂ ನಿಜವಾಗಿಯೂ ಗಂಡೇ ಅಲ್ಲದಿದ್ದರೂ ಈ ಮಾತನ್ನು ಆಡಲು ಹಿಂಜರಿಯುತ್ತಾನೆ. ಯಾರೋ ಒಬ್ಬರು ಹೇಳಿದರು I am not a man, but Godman ಎಂದು ಆತ ಹೇಳಬೇಕಿತ್ತು ಎಂದು. ನನ್ನ ಪ್ರಕಾರ ಅವನು ಹೀಗೆ ಹೇಳಬೇಕಿತು, ನಾನು ಮನುಷ್ಯನಲ್ಲ, ಮನುಷ್ಯ ರೂಪದಲ್ಲಿರುವ ಮತ್ತೇನೋ, ನಾನು ನಿಮ್ಮ ಊಹೆಗೆ ನಿಲುಕದ ವ್ಯಕ್ತಿಯಲ್ಲ ವಗೈರೆ, ವಗೈರೆ. ನಾವು ಮೂಲತಃ ಇಂಥ ಕಪಟಿ ಗಳನ್ನು ನಂಬುವವರು, ನಮಗೆ ಮಂತ್ರವಾದಿಗಳು, ಮೋಸ ಮಾಡುವ ದೇವ ಮಾನವರು ಎಂದರೆ ಪಂಚ ಪ್ರಾಣ, ಈ ಜನ ನಮ್ಮ ಮೇಲೆ ಪಂಚ ಭೂತಗಳನ್ನು ಪ್ರಯೋಗ ಮಾಡಿದರೂ ನಮಗೆ ಅವರ ಮೇಲೆ ಅತೀವ ಭಕ್ತಿ, ವಿಶ್ವಾಸ. ಈ ನಮ್ಮ ದೌರ್ಬಲ್ಯವನ್ನು ಉಪಯೋಗಿಸಿ ಪೊಲೀಸರನ್ನೂ, ತನ್ನನ್ನು ತೆಗಳುವವರನ್ನೂ ಈ ನಿತ್ಯಾನಂದ ಕನ್ಫ್ಯೂಸ್ ಮಾಡಿದ್ದರೆ ಕಾನೂನಿನ ಕೋಳ ತಪ್ಪಿಸಿಕೊಂಡು ಮತ್ತೊಮ್ಮೆ ಬಳೆಗಳ ಹಿಂದೆ ಓಡಬಹುದಿತ್ತು.       

ಪುರುಷ ತನ್ನ erectile ಸಾಮರ್ಥ್ಯದ ಬಗ್ಗೆ ಅನುಮಾನ ಇದ್ದರೂ ದೊಡ್ಡ macho ರೀತಿಯ ಫೋಸ್ ಕೊಡುತ್ತಾನೆ. ಗಂಡ್ಸಾ ದರೆ ಬಾರೋ ಎಂದು ಚಾಲೆಂಜ್ ಮಾಡುವುದಿದೆ. ಆದರೆ ನಾನು ಗಂಡೇ ಅಲ್ಲ ಕಣೋ ಅಂದು ಬಿಟ್ಟರೆ? ಮರ್ಯಾದೆ ಬಿಟ್ಟು ಮಾನ ಸಂಪಾದಿಸುವ ಚಾಣಾಕ್ಷತನ. ನಾನು ಮಂತ್ರಮುಗ್ಧನಾದೆ ಈ ವ್ಯಕ್ತಿಯ ಚಾಣಾಕ್ಷತನಕ್ಕೆ. ನನ್ನ ಶುಕ್ರವಾರದ ಬೆಳಗಿನ ಮಂಪರು ಎಗರಿ ಹೋಯಿತು ನಿತ್ಯಾನಂದನ ಈ ಯಾರ್ಕರ್ ಗೆ. ಈಗ ನಮ್ಮ ಪೊಲೀಸರು ಏನು ಮಾಡಬಹುದು? doppler test ಅಂತೂ ಇದ್ದೇ ಇದೆ ಅನ್ನಿ. ಈ ಟೆಸ್ಟ್ ನಲ್ಲಿ ರಕ್ತ ಸಂಚಲನದ ತೀವ್ರತೆಯನ್ನು ಕಂಡು  ಹಿಡಿಯುತ್ತಾರೆ. ಬಹುಶಃ ಈ ಪರೀಕ್ಷೆಯಲ್ಲಿ ಗೊತ್ತಾಗಬಹುದು. ನಿತ್ಯಾನಂದನ ಈ ಸಮಸ್ಯೆಗೆ ಪೊಲೀಸರು ಕಚ್ಚೆ ಇಳಿಸಬಹುದು, ಆದರೂ ನಾನು ಗಂಡಲ್ಲ ಎಂದು ಅವನು ಹಠ ಹಿಡಿದು ಕೂತರೆ? ಅವನೊಂದಿಗೆ ಮರ, ಅಲ್ಲಲ್ಲ ಮಂಚ ಸುತ್ತಿದ ಲಲನಾ ಮಣಿಗಳನ್ನು ಪೊಲೀಸರು ಬುಲಾವ್ ಮಾಡಬಹುದೇ ನಿತ್ಯಾನಂದನನ performance evaluation ಮಾಡಲು?

ಭಾರತ ಒಂದು ದೊಡ್ಡ drama stage. ಯಾವ ಯಾವ ರೀತಿಯ, ವಿಶ್ವವೇ ಮೂಗಿನ ಮೇಲೆ ಬೆರಳಿಟ್ಟುಕೊಂಡು ಬೆರಗಾಗಿ ನೋಡುವ ಒಂದು ಡ್ರಾಮ ನಮ್ಮ ಭಾರತ.

ನೀವೇನಂತೀರಾ? ಏನಾದರೂ ಅನ್ನಿ, ತಮಾಷೆಗೆ ಕೂಡ ನಾನು ಗಂಡಲ್ಲ ಎನ್ನಬೇಡಿ ಮಾರಾಯ್ರೆ.