ಜ್ಯೋತಿಷ್ಯ ವೈಜ್ಞಾನಿಕವೇ?

ಜ್ಯೋತಿಷ್ಯ ಶಾಸ್ತ್ರವನ್ನು “ಖೋಟಾ ಅಧ್ಯಯನ” (fake discipline) ಎಂದಿದ್ದಾರೆ ವಿಜ್ಞಾನಕ್ಕೆ ನೊಬೆಲ್ ಪ್ರಶಸ್ತಿ ವಿಜೇತರಾದ ವೆಂಕಟರಾಮನ್ ರಾಮಕೃಷ್ಣನ್ ಅವರು. ಚನ್ನೈ ನಗರದ ಭಾರತೀಯ ವಿದ್ಯಾ ಭವನದಲ್ಲಿ ಉಪನ್ಯಾಸ ನೀಡುತ್ತಿದ್ದ ಇವರು ಜ್ಯೋತಿಷ್ಯದೊಂದಿಗೆ ಹೋಮಿಯೋಪತಿ ವೈದ್ಯ ಶಾಸ್ತ್ರವನ್ನೂ ತರಾಟೆಗೆ ತೆಗೆದುಕೊಂಡರು. ಜ್ಯೋತಿಷ್ಯದ ಹೆಸರಿನಲ್ಲಿ ಜನರನ್ನು ವಂಚಿಸುವ ಪರಿಪಾಠ ಇಂದು ನಿನ್ನೆಯದಲ್ಲ. ನಮ್ಮ ದೇಶದಲ್ಲಿ ಜ್ಯೋತಿಷ್ಯ ಕ್ಷೇತ್ರ multi million dollar ಉದ್ದಿಮೆ ಎಂದು ಸುಲಭವಾಗಿ ಹೇಳಬಹುದು. unsuspecting ಜನರನ್ನು ಲೀಲಾ ಜಾಲವಾಗಿ ವಂಚಿಸಿ ಹಣ ಕೊಳ್ಳೆ ಹೊಡೆಯುವ ಇವರಿಗೆ ನಿಯಮದ ಯಾವ ತೊಡಕೂ ಇಲ್ಲ. ಭಾಜಪ ಸರಕಾರದಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವರಾಗಿದ್ದ ಮುರಳಿ ಮನೋಹರ್ ಜೋಶಿ ಜ್ಯೋತಿಷ್ಯವನ್ನು ವೈದಿಕ ವಿಜ್ಞಾನದ ಅಡಿಯಲ್ಲಿ ತಂದು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ವಸ್ತುವನ್ನಾಗಿಸಿದ್ದರು. ಭಾರತದಲ್ಲಿ ಎಲ್ಲ ಸಮಾಜದ ಬಹಳಷ್ಟು ಜನ ನಂಬುವ ಜ್ಯೋತಿಷ್ಯದ ಬಗ್ಗೆ ಇಸ್ಲಾಮಿನ ನಿಲುವು ಅತ್ಯಂತ ಕಟುವಾದುದು. ಯಾವುದಾದರೂ ಜ್ಯೋತಿಷಿಯನ್ನು ಒಬ್ಬ ಕಂಡರೆ ಅವನ ನಲವತ್ತು ದಿನಗಳ ಕಾಲದ ಆರಾಧನೆ ನಷ್ಟ ಪಡುವುದು ಮಾತ್ರವಲ್ಲ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣತಿ ಪಡೆದವನು ಪಾಪದ ಹೊರೆಯನ್ನು ಹೊರುತ್ತಾನೆ ಎನ್ನುತ್ತದೆ ಇಸ್ಲಾಂ. ಜ್ಯೋತಿಷ್ಯದ ಕುರಿತ ಪವಿತ್ರ ಕುರಾನಿನ ಹೇಳಿಕೆ ಹೀಗಿದೆ.

“With Him are the keys to the unseen and none knows it except Him”.The Holy Qur’an, Chapter 6, Verse 59

“Say: None in the heavens or earth knows the unseen except Allah.”The Holy Qur’an, Chapter 27, Verse 65

ಮತ್ತೊಂದೆಡೆ ಪ್ರವಾದಿಗಳನ್ನು ಸಂಬೋಧಿಸುತ್ತಾ ಪವಿತ್ರ ಕುರಾನ್ ಹೀಗೆ ಹೇಳುತ್ತದೆ: “ಹೇಳಿ ಪ್ರವಾದಿಗಳೇ, ನನಗೆ ಅಗೊಚರವಾದದ್ದು ಕಾಣುವಂತಾಗಿದ್ದಿದ್ದರೆ ನಾನು ಒಳ್ಳೆಯದನ್ನೇ ಬಯಸುತ್ತಿದ್ದೆ, ಆದರೆ ನಾನು ಒಬ್ಬ ಸಂದೇಶವಾಹಕ ಮತ್ತು ವಿಶಾಸಿಗಳಿಗೆ ಶುಭ ವಾರ್ತೆ ತರುವವ ಮಾತ್ರ”

ಈ ರೀತಿಯ ಹೇಳಿಕೆಗಳು ಮತ್ತು ವಿಧ್ವಾಂಸರ ಅಭಿಪ್ರಾಯಗಳು ವ್ಯತಿರಿಕ್ತ ವಾಗಿದ್ದೂ ಬಹಳಷ್ಟು ಮುಸ್ಲಿಮರು ಹಸ್ತ ಸಾಮುದ್ರಿಕೆ, ಅದೂ ಇದೂ ಎಂದು ಅಲೆಯುವುದನ್ನು ನಾನು ಕಂಡಿದ್ದೇನೆ.

ಒಬಾಮಾ ಬಂದ್ರು, ಹೋದ್ರು , period .

ಅಮೆರಿಕೆಯ ಅಧ್ಯಕ್ಷ ಮಹೋದಯರು ಭಾರತದಲ್ಲಿ. ಅವರು ನಿಜವಾಗಿಯೂ ಬಂದಿದ್ದು ಶಸ್ತ್ರೋಪಕರಣಗಳನ್ನು ಮಾರಲು. ಕೊಲ್ಲುವ ಯಂತ್ರಗಳನ್ನು ಮಾರಿ ತಮ್ಮ ಹೊಟ್ಟೆ ಹೊರೆದು ಕೊಳ್ಳಲು. ಆದರೆ ನಮ್ಮ ಮಂದ ಮತಿಗೆ ತೋರಿದ್ದು ಅವರು ಬಂದಿದ್ದು ನಮ್ಮ fly over ಗಳು, ಗಗನಚುಂಬಿ ಕಟ್ಟಡಗಳು ಮತ್ತು ಸಾಫ್ಟ್ವೇರ್ ಕ್ಷೇತ್ರದಲ್ಲಿ ನಾವು ಸಾಧಿಸಿದ ಅಭಿವೃದ್ಧಿಯನ್ನ ನೋಡಿ ಪ್ರಶಂಸಿಸಲು ಮತ್ತು ಮುಂಬೈಗೆ ಬಂದಿಳಿದ ಒಬಾಮ ಮುಂಬೈ ನರಹತ್ಯೆಯ ರೂವಾರಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ನಾಮಕರಣ ಮಾಡಬಹುದು ಎಂದು. ಆದರೆ ಒಬಾಮರಿಗೆ ಅಥವಾ ಅಮೆರಿಕನ್ನರಿಗೆ ಮುಂಬೈ ನರಹತ್ಯೆ ದೊಡ್ಡ ವಿಷಯವಲ್ಲ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮತ್ತು ರಾಷ್ಟ್ರರಾಷ್ಟ್ರ ಗಳ ನಡುವಿನ ಸಂಬಂಧದಲ್ಲಿ ಅನುಭವವಾಗುವ collateral damage ಅಷ್ಟೇ ಮುಂಬೈಯಲ್ಲಿ ನಡೆದ ನಗ್ನ ಹಿಂಸೆ. ಪಾಕಿಗಳನ್ನು ವಿಚಾರಿಸಿ ಕೊಳ್ಳಲು ನಾವು ಅಮೆರಿಕೆಯನ್ನಾಗಲೀ ಇನ್ಯಾವುದೇ ರಾಷ್ಟ್ರವನ್ನಾಗಲಿ ಅವಲಂಬಿಸಕೂಡದು ಎಂದು ಚಾಣಕ್ಯಪುರಿಗೆ ಯಾವಾಗ ಹೊಳೆಯುತ್ತದೋ ನೋಡೋಣ. ಹಾಗೇನಾದರೂ ಸುದೈವವಶಾತ್ ಹೊಳೆದಲ್ಲಿ ಅಷ್ಟು ಹೊತ್ತಿಗೆ ನಾವೆಲ್ಲಾ ಪಾಕಿ ಭಯೋತ್ಪಾದಕರಿಗೆ  ಬಲಿಯಾಗದೆ ಜೀವಂತವಾಗಿದ್ದರೆ ನಮ್ಮ ಪುಣ್ಯ ಸಹ ಹೌದು.

ಈ ಮಧ್ಯೆ ಪತ್ರಿಕೆಗಳು ಮತ್ತು ಟೀವೀ ಮಾಧ್ಯಮಗಳು ಒಬಾಮಾ ಪಾಕ್ ಬಗ್ಗೆ ಏನೂ ಹೇಳಲೇ ಇಲ್ಲ ಎಂದು ಮುನಿಸಿಕೊಂಡವು. ನಾವೆಲ್ಲಾ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ, ಭಾರತಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡಬೇಡಿ ಎಂದು ಪಾಕಿಗಳಿಗೆ ತಾಕೀತು ಮಾಡಬಹುದು ಎಂದು ಬಗೆದಿದ್ದೆವು ಆದರೆ ಅಮೇರಿಕಾ ಎಂದಿಗೂ ಪಾಕಿನ ಮಿತ್ರ ಎಂದು ಸಾಬೀತು ಪಡಿಸಿತು ಎಂದು ಹಲುಬಿದವು ಮಾಧ್ಯಮಗಳು. ಒಂದು ರೀತಿಯ ದೈನಂದಿನ ಬದುಕಿನ ದೃಶ್ಯದ ಥರ ಕಾಣುತ್ತಿಲ್ಲವೇ ಇದು? ಕಮಲಮ್ಮನ ಮನೆಗೆ ಪಕ್ಕದ ಮನೆಯ ಜಾನಕಮ್ಮ ಬಂದು ಸರಸಮ್ಮನ ಬಗ್ಗೆ ಏನೂ ಚಾಡಿ ಹೇಳಿಲ್ಲ ಎಂದು ದೂರುವ ಹಾಗೆ ವರ್ತಿಸಿದವು ಮಾಧ್ಯಮಗಳು ಮತ್ತು ಒಬಾಮಾರ ಭೇಟಿಯ ಬಗ್ಗೆ ಮಾತನಾಡಲು ಬಂದ ಪಂಡಿತರು. ಅಮೇರಿಕಾ ಪಾಕಿನ ಬಗ್ಗೆ ಅಷ್ಟು ಸುಲಭವಾಗಿ ದೂರಲು ಹೋಗೋದಿಲ್ಲ. ಕೆಲವಾರಗಳ ಹಿಂದೆ ಬ್ರಿಟಿಶ್ ಪ್ರಧಾನಿ ಕಮೆರೂನ್ ಬಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದು ಕೊಂಡಿದ್ದರು. ಭಯೋತ್ಪಾದಕತೆ ಶುರು ಆಗೋದೆ ಪಾಕಿನಿಂದ ಎನ್ನುವರ್ಥದ ಮಾತನ್ನು ಹೇಳಿದರು. ಹಾಗೆ ಹೇಳಿದ್ದಕ್ಕೆ ಪಾಕಿನಿಂದ ಉಗ್ರ ಪ್ರತಿಭಟನೆ ಬಂದರೂ ಕಮೆರೂನ್ ಜಗ್ಗಲಿಲ್ಲ. ಆದರೆ ಇದನ್ನು ವೀಕ್ಷಿಸಿದ್ದ ಅಮೆರಿಕೆಗೆ ಇದು ಎಚ್ಚರಿಕೆ ಗಂಟೆಯಾಯಿತು. ಕೆಮೆರೂನ್ ಏನೇ ಹೇಳಿದರೂ ಅವರಿಗೆ ನಷ್ಟವಿಲ್ಲ ಏಕೆಂದರೆ ಆಫ್ಘಾನಿಸ್ತಾನದಲ್ಲಿ ಅವರ ಪಾತ್ರ ದೊಡ್ಡದಲ್ಲ. ಆದರೆ ಅಮೆರಿಕೆಯ ವಿಷಯ ಹಾಗಲ್ಲ. ಕಂದಹಾರದ ಉಗ್ರರನ್ನು ಬಲಿ ಹಾಕಬೇಕೆಂದರೆ ಪಾಕಿನ ಸಹಕಾರ ಬೇಕೇ ಬೇಕು. ನಾವ್ಯಾಕೆ ಬೇಡದ ಉಸಾಬರಿಗೆ ಕೈ ಹಾಕಿ ಕಷ್ಟದಲ್ಲಿ ಸಿಕ್ಕಿ ಹಾಕಿ ಕೊಳ್ಳಬೇಕು. ನಾವು ಬಂದಿರೋದು ವ್ಯಾಪರಕ್ಕೊಸ್ಕರ. ವ್ಯಾಪಾರ ಕುದುರಿಸಿ ಒಂದಿಷ್ಟು ಡಾನ್ಸ್ ಮಾಡಿ ಭಾರತೀಯರನ್ನು ಮೋಡಿ ಮಾಡಿದರೆ ಸಾಕು ಎಂದು ಅಮೆರಿಕೆಯ ಎಣಿಕೆ. ಈ ಕಾರಣಕ್ಕಾಗಿಯೇ ಅಮೆರಿಕೆಯ ದಿವ್ಯ ಮೌನ ಪಾಕ್ ಭಯೋತ್ಪಾದಕತೆ ಬಗ್ಗೆ. ಒಬಾಮ ಬಂದ ಮೊದಲ ದಿನವೇ 10 billion ಡಾಲರ್ಗಳ ವ್ಯಾಪಾರ ಮಾಡಿತು ಅಮೇರಿಕ.

NPR ಅಮೆರಿಕೆಯ ಪ್ರಸಿದ್ಧ ರೇಡಿಯೋ ಮಾಧ್ಯಮ. ಒಬಾಮಾ ಜೊತೆಗೆ ಬಂದಿದ್ದ npr ವರದಿಗಾರ st. xaviers college ನಲ್ಲಿ ನಡೆದ ಅಧ್ಯಕ್ಷರ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ ದ ವೇಳೆ ೧೯ ರ ಓರ್ವ ತರುಣಿ ಪಾಕಿನ ಭಯೋತ್ಪಾದನೆ ಬಗ್ಗೆ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದರ ಬಗ್ಗೆ ಹೇಳುತ್ತಾ “ಭಾರತಕ್ಕೆ ಪಾಕಿಸ್ತಾನ ಎಂದರೆ ಒಂದು ರೀತಿಯ jealous and rivalry ಎಂದು ಹೇಳಿದ. rivalry ಏನೋ ಸರಿಯೇ. ಆದರೆ jealous ಯಾವುದರ ಬಗ್ಗೆಯೋ ತಿಳಿಯುತ್ತಿಲ್ಲ. ಎಲ್ಲಾ ತೀರ್ಮಾನಗಳಿಗೂ, ನಿರ್ಧಾರಗಳಿಗೂ ಇಸ್ಲಾಮಾಬಾದ್ ಅಮೆರಿಕೆಯ ವಾಷಿಂಗ್ಟನ್ ನಿಂದ dictation ತೆಗೆದು ಕೊಳ್ಳುತ್ತದಲ್ಲಾ, ಪಾಕಿಗಳ ಈ ಬೆನ್ನುಲುಬಿಲ್ಲದ ನಡವಳಿಕೆ ಬಗ್ಗೆ ಇರಬೇಕು ನಮಗೆ ಮತ್ಸರ, jealousy.           

ನಮ್ಮ ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಜಕಾರಣಿಗಳಂತೆಯೇ ಭರವಸೆಯನ್ನ ನೀಡಲು ಮರೆಯಲಿಲ್ಲ ಒಬಾಮಾ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಬೆಂಬಲ ಸೂಚಿಸಿದ ಒಬಾಮ ಬದಲಾಗುತ್ತಿರುವ ವಿಶ್ವ ರಾಜಕಾರಣದಲ್ಲಿ ಭಾರತ ಜಗಾರೂಕತೆಯಿಂದ ವರ್ತಿಸುವಂತೆ ಸೂಕ್ಷ್ಮವಾಗಿ ಸೂಚಿಸಿದರು. ಆದರೆ ಈ ಆಶ್ವಾಸನೆಯ ಬೆನ್ನಲ್ಲೇ ಬಂದವು ಅಪಸ್ವರಗಳು, ಜರ್ಮನಿ ಮತ್ತು ಜಪಾನ್ ದೇಶಗಳಿಂದ. ಒಬಾಮಾ ನೀಡಿದ್ದು ಆಶ್ವಾಸನೆ ಮಾತ್ರ, ಈ ಆಶ್ವಾಸನೆ ವಿರುದ್ಧವೇ ತಕರಾರು ಬಂದರೆ ಇನ್ನು ವಿಶ್ವಸಂಸ್ಥೆಯಲ್ಲಿ ನಮಗೆ ಯಾವ ರೀತಿಯ ಬೆಂಬಲ ಸಿಕ್ಕೀತು ಎಂದು ಊಹಿಸಲು ನಮಗೆ ರಾಜನೀತಿಯಲ್ಲಿ ಡಾಕ್ಟರೇಟ್ ಪದವಿಯ ಅವಶ್ಯಕತೆಯಿಲ್ಲ.  

ಒಟ್ಟಿನಲ್ಲಿ ಒಬಾಮ ಬಂದರು, ಮಾಧ್ಯಮಗಳಿಗೆ ಸುಗ್ಗಿಯೋ ಸುಗ್ಗಿ. ಒಬಾಮ ಎಲ್ಲಿಗೆಹೋದರು, ಏನನ್ನು ತಿಂದರು,  ಹೇಗೆ ಕುಣಿದರು ಇತ್ಯಾದಿ ಇತ್ಯಾದಿ ಪುಂಖಾನುಪುಂಖವಾಗಿ ವರದಿ ಮಾಡಿದವು. ನಮಗೂ ಒಂದು ರೀತಿಯ ಪುಳಕ. ಬಿಳಿಯರ ನಾಡಿನಿಂದ ಒಂದು ಕಾಗೆ ಬಂದಿಳಿದರೂ ನಮ್ಮ ಬದುಕು ಸಾರ್ಥಕವಾಗಿ “ಅತಿಥಿ ದೇವೋ ಭವನನ್ನು ಸಂತುಷ್ಟ ನನ್ನಾಗಿಸಿದ ಭಾವನೆಯಲ್ಲಿ ಧನ್ಯರಾಗಿ ಬಿಡುತ್ತೇವೆ.

ಕನ್ನಡ ಪುಸ್ತಕಗಳ ಪ್ರದರ್ಶನ

ಮಂಗಳೂರಿನಲ್ಲಿ ಇತ್ತೀಚೆಗೆ ಕನ್ನಡ ಪುಸ್ತಕಗಳ ಭಾರೀ ಪ್ರದರ್ಶನ ಏರ್ಪಟ್ಟಿತ್ತು. ಕನ್ಫ್ಯೂಸ್ ಮಾಡ್ಕೋಬೇಡಿ, ಭಾರೀ ಎಂದರೆ ಭಾರೀ ತಯಾರಿ ಮತ್ತು ಉತ್ಸಾಹ ಎಂದು. ಭಾರೀ ಯಶಸ್ಸಲ್ಲ. ಓದಿನ ಕಡೆ ಜನರ ಧೋರಣೆ ಏನು ಎಂದು ಖಾಲಿಯಾಗಿ ಭಣಗುಟ್ಟುತ್ತಿದ್ದ ಗಲ್ಲಾ ಪೆಟ್ಟಿಗೆಗಳೇ ಸಾಕ್ಷಿಯಾದವು. ನೆಹರೂ ಮೈದಾನದ ಮೂಲಕ ಹಾದು ಹೋಗುತ್ತಿದ್ದಾಗ ನನ್ನ ಭಾವನವರ ಕಣ್ಣಿಗೆ ಬಿತ್ತು ಪುಸ್ತಕ ಪ್ರದರ್ಶನ. ಕೂಡಲೇ ಅಲ್ಲಿಂದಲೇ ನನಗೆ ಫೋನಾಯಿಸಿ ಬನ್ನಿ, ನಿಮಗಿಷ್ಟವಾದ ಒಂದು ಪ್ರದರ್ಶನ ಏರ್ಪಟ್ಟಿದೆ ಎಂದು ಆಮಂತ್ರಿಸಿದ್ದೆ ತಡ ಅಲ್ಲಿಗೆ ದೌಡಾಯಿಸಿದೆ. ಸೊಗಸಾದ ವಿಶಾಲವಾದ ಸಾಲಕೃತ ಮಂಟಪದಲ್ಲಿ ಡಜನು ಗಟ್ಟಲೆ ಪ್ರಕಾಶಕರು ವಿದ್ಯಾ ದೇವತೆಯನ್ನು ಅಲಂಕರಿಸಿ ಕರೆದು ಕೊಂಡು ಬಂದಿದ್ದರು ನಾಡಿನ ಮೂಲೆ ಮೂಲೆಯಿಂದ. ತಮಿಳು ಚಿತ್ರ ರಜನಿ ನಟಿಸಿದ ಎನ್ಧಿರನ್ ನೋಡಲೆಂದು ಸೇರಿದ್ದ ಜನ ಜಮಾವಣೆ ಇರಬಹುದೆಂದು ಊಹಿಸಿ ಬಂದಿದ್ದ ನನಗೆ ನಿರಾಶೆ. ಸಾರ್ವಜನಿಕರಿಗಿಂತ ಹೆಚ್ಚಾಗಿ ಅಲ್ಲಿನ ಸಿಬ್ಬಂದಿಗಳೇ ತುಂಬಿದ್ದರು. ಒಂದೇ ಸೂರಿನಡಿ ಅಷ್ಟೊಂದು ಪುಸ್ತಕಗಳನ್ನು ಖುಷಿ ಯಿಂದ ನೋಡುತ್ತಾ ಒಂದೊಂದೇ ಮಳಿಗೆ ಕಡೆ ಕಣ್ಣು ಹಾಯಿಸುತ್ತಾ ಬೆಳಗೆರೆ ಕೃಷ್ಣ ಶಾಸ್ತ್ರಿಗಳ “ಮರೆಯಲಾದೀತೇ”, “ಸಾಹಿತಿಗಳ ಸ್ಮೃತಿ”, ಫಾಕೀರ್ ಮುಹಮ್ಮದ್ ಕಟ್ಪಾಡಿ ಯವರ “ಸೂಫಿ ಸಂತರು”, S.M. ಮುಶ್ರಿಫ್ ರವರ ಕನ್ನಡ ಅನುವಾದಿತ “ಕರ್ಕರೆಯನ್ನು ಕೊಂದವರು ಯಾರು”, ವೆಂಕಟ ಸುಬ್ಬಯ್ಯ ಅವರ “ಇಗೋ ಕನ್ನಡ”… ಮತ್ತು ಇನ್ನೂ ಕೆಲವು ಪುಸ್ತಕಗಳನ್ನೂ ಖರೀದಿಸಿ ಮರಳಿದೆ. ಹಿಂದೊಮ್ಮೆ ಸಂಪದದಲ್ಲೇ ಕರಾವಳಿಯಲ್ಲಿ ಕನ್ನಡಕ್ಕಿರುವ ಪ್ರಾಶಸ್ತ್ಯದ ಬಗ್ಗೆ ಬರೆದದ್ದಕ್ಕೆ ಅರಬ್ಬೀ ಸಮುದ್ರದ ಅಲೆಗಳಂತೆ ನನ್ನ ಮೇಲೆ ಕೆಲವರು ಹಾಯ್ದಿದ್ದರು. ಆ ಪ್ರದೇಶದಲ್ಲಿ ಕನ್ನಡ ಬಳಕೆ, ಅಷ್ಟಕ್ಕಷ್ಟೇ ಎಂದರೆ ಅದು ಒಂದು ದೂಷಣೆ ಯಾಗಿ ಮಾರ್ಪಡಬಾರದು. ಅಲ್ಲಿನ ಜನರಿಗೆ ಕೊಂಕಣಿ, ತುಳು ಭಾಷೆಗಳೊಂದಿಗೆ ನಂಟು ಹೆಚ್ಚು. ಹಾಗೆಂದು ಕನ್ನಡ ಬಗ್ಗೆ ಅಸಡ್ಡೆ ಇದೆಯೆಂದಲ್ಲ. ಆದರೆ ಈ ಪ್ರದರ್ಶನಕ್ಕೆ ಜನರ ಪ್ರತಿಕ್ರಿಯೆ ಮತ್ತು ಪ್ರಕಾಶಕರ ಅಳಲು ನೋಡಿದರೆ ಓದುಗರ ಸಂಖ್ಯೆ ದಿನೇ ದಿನೇ ಇಳಿ ಮುಖವಾಗುತ್ತಿದೆ ಎಂದೆನ್ನಿಸದಿರಲಾರದು. ಓದುಗ ಸಮೂಹ ಪುಸ್ತಕಗಳನ್ನ ಖರೀದಿ ಮಾಡಿ, ಹಲ್ಲು ಗಿಂಜುತ್ತಾ ಇನ್ನಷ್ಟು ಡಿಸ್ಕೌಂಟ್ ಕೊಡು ಎಂದು ಕೇಳೋದು, ಸಿನೆಮಾ ಟಿಕೆಟ್ಗಾದರೆ ಎಷ್ಟನ್ನಾದರೂ ಕೊಟ್ಟು ಬ್ಲಾಕ್ ಮಾರ್ಕೆಟ್ ನಲ್ಲಿ ಟಿಕೆಟ್ ಕೊಳ್ಳಲು ತಯಾರಾಗೋದು ನೋಡಿದಾಗ ಕನಿಕರ ತೋರದಿರದು. ಕನ್ನಡ ಪುಸ್ತಕಗಳ ಮಾರಾಟದ ಕಾರ್ಮೋಡದ ಪರಿಸ್ಥಿತಿಯಲ್ಲೂ ಒಂದು ಹೊಂಗಿರಣ ಏನೆಂದರೆ ಕನ್ನಡ ಪ್ರಕಾಶನ ಈಗ ಮೊದಲಿನಂತಲ್ಲ ಎನ್ನುವ ಸೂಚನೆ ಸಿಕ್ಕಿದ್ದು. ಮುದ್ರಣ, ಮುಖಪುಟದ ವಿನ್ಯಾಸ ಹೀಗೆ ಹಲವು ಪ್ರಾಕಾರಗಳಲ್ಲಿ ಸ್ವಾಗಾತಾರ್ಹ ಮತ್ತು ಪ್ರಶಂಸಾರ್ಹ ಸುಧಾರಣೆ ಕಂಡಿದೆ ಕನ್ನಡ ಪ್ರಕಾಶನ. ಆದರೆ ದುರದೃಷ್ಟವಶಾತ್ ಈ ಮಾತನ್ನು ಮೈಸೂರು ವಿಶ್ವ ವಿದ್ಯಾಲಯದ ಪ್ರಕಾಶನದ ಬಗ್ಗೆ ಹೇಳಲು ಬರುವುದಿಲ್ಲ. ಸರಕಾರೀ ಕೆಲಸದ ಹಾಗೆಯೇ ಒಂದು ನೀರಸ, ನಿಸ್ತೇಜ, ದಯನೀಯ ಪುಸ್ತಕಗಳು. ದಿನೇ ದಿನೇ ಅತ್ಯಾಧುನಿಕ ಮಾಲುಗಳ ಸಂಖ್ಯೆ, ಹೊಸ ಹೊಸ ಅಂತಾರಾಷ್ಟ್ರೀಯ ಬ್ರಾಂಡುಗಳ ಆಗಮನ ಮಂಗಳೂರಿನ ಜನರ ಕೊಳ್ಳುವ ಸಾಮಾರ್ಥ್ಯದ ಕಡೆ ಬೆಟ್ಟು ಮಾಡಿದರೆ ಮತ್ತೊಂದೆಡೆ ವೈಚಾರಿಕ ದಾರಿದ್ರ್ಯ ತನ್ನ ಕುತ್ತಿಗೆಯನ್ನು ನೀಳವಾಗಿಸುತ್ತಿರುವ ದೃಶ್ಯ ಮಂಗಳೂರಿಗೆ ಮಾತ್ರ ಸೀಮಿತ ಅಲ್ಲ ಎನ್ನುವುದನ್ನು ಸಾಕಷ್ಟು ಸುತ್ತಾಡಿದ ಜನರಿಗೆ ಮನವರಿಕೆ ಆಗಿರಲಿಕ್ಕೂ ಸಾಕು.