ಅರ್ಜೆಂಟೀನ ವಿಶ್ವಕಪ್ ನಿಂದ ಹೊರಕ್ಕೆ, ಅದೂ ಹೀನಾಯ ಸೋಲಿನೊಂದಿಗೆ. ೪-೦ ಎಂದರೆ ಸಾಧಾರಣ ಸೋಲಲ್ಲ ಫುಟ್ ಬಾಲ್ ಕ್ರೀಡೆಯಲ್ಲಿ. ತಮ್ಮ ಆಟವನ್ನು ಅತ್ಯಂತ ಸಾಂಪ್ರದಾಯಿಕ ಮತ್ತು ಕಾಪಿ ಬುಕ್ ಶೈಲಿಯಲ್ಲಿ ಅರ್ಜೆಂಟಿನ ತಂಡ ತಮ್ಮ brute muscle power ತೋರಿಸಿ ಒರಟಾಗಿ ಆಡುವ ಜರ್ಮನಿ ಎದುರು ಯಾವುದೇ ಉತ್ತರವಿಲ್ಲದೆ ಬರಿಗೈಲಿ ಮರಳ ಬೇಕಾಯಿತು ಡ್ರೆಸ್ಸಿಂಗ್ ಕೋಣೆಗೆ, ತದನಂತರ ತಮ್ಮ ದೇಶಕ್ಕೆ. ೧೯೮೬ ವಿಶ್ವಕಪ್ ನಲ್ಲಿ ಸಂಭವಿಸಿದ ಹಾಗೆ ಈ ಸಲ ದೇವರು ಬರಲಿಲ್ಲ ಸಹಾಯಕ್ಕೆ ಅರ್ಜೆಂಟಿನ ತಂಡವನ್ನು ಜರ್ಮನಿ ನುಂಗುವಾಗ. ವಿಶ್ವಕಪ್ ೧೯೮೬, ಮೆಕ್ಸಿಕೋ: ಜಗತ್ತಿನ ಬಲಿಷ್ಠ ಫುಟ್ಬಾಲ್ ಆಡುವ ದೇಶಗಳು ಬಂದಿಳಿದವು ಮೆಕ್ಸಿಕೋ ದೇಶಕ್ಕೆ ವಿಶ್ವಕಪ್ ತಮ್ಮದಾಗಿಸಿಕೊಳ್ಳಲು. ಆದರೆ ಬೇರೆಲ್ಲಾ ಪಂದ್ಯಗಳಿಗಿಂತ ಖ್ಯಾತಿ ಪಡೆದ ಪಂದ್ಯ ಇಂಗ್ಲೆಂಡ್, ಅರ್ಜೆಂಟಿನ ನಡುವಿನದು. ಕ್ವಾರ್ಟರ್ ಫೈನಲ್ ಎಂದರೆ ಫೈನಲ್ ನಿಂದ ಕೇವಲ ಎರಡು ಗಜ ದೂರ. ಎದುರಾಲಿಯನ್ನು ಮಣಿಸಿ ಸೆಮಿ ತಲುಪಲು ಆತುರ, ಉತ್ಸಾಹ ಈ ಎರಡು ತಂಗಳಲ್ಲಿ. ಅತ್ಯಂತ ಪ್ರತಿಭಾವಂತ ತಂಡಗಳು ಬೇರೆ, ಇನ್ನು ಸ್ಪರ್ದೆಯ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ತಮ್ಮ ಕ್ರೀಡಾ ಪ್ರತಿಭೆಯ ನ್ನು ವಿಶ್ವದ ಪ್ರದರ್ಶನಕ್ಕಿಟ್ಟ ಈ ಎರಡೂ ತಂಡಗಳು ಹೇಗೇ ಸೆಣಸಿದರೂ ಪೂರ್ವಾರ್ಧದ ಸ್ಕೋರು ಎಲ್ಲಾ ಸೊನ್ನೆ. ಪಾನೀಯದ ನಂತರ ಹೊಸ ರಣ ನೀತಿಯೊಂದಿಗೆ ಮೈದಾನ ಪ್ರವೆಶಿಸಿದ ತಂಡಗಳು ಮೇಲುಗೈ ಸಾಧಿಸುವತ್ತ ತಮ್ಮ ಗಮನ ಕೇಂದ್ರೀಕರಿಸಿದವು. ಈಗ ಬಂತು ಉತ್ತರಾರ್ಧದ ಆರನೇ ನಿಮಿಷದಲ್ಲಿ ವಿಶ್ವ ದಂಗಾದ ಒಂದು ದೃಶ್ಯ. ಗೋಲ್ ಪೋಸ್ಟ್ ನ ಹತ್ತಿರ ಚೆಂಡನ್ನು ತಂದ ಮೆರಡೋನ ಮತ್ತು ವಲ್ದಾನೋ ಇಂಗ್ಲೆಂಡಿನ ರಕ್ಷಣೆಯನ್ನು ಭೇಧಿಸಲು ಹೆಣಗಿದರು. ಇಂಗ್ಲೆಂಡಿನ ರಕ್ಷಣಾ ಆಟಗಾರ ಸ್ಟೀವ್ ಹಾಡ್ಜ್ ಚೆಂಡನ್ನು ತನ್ನ ನಿಯಂತ್ರಣಕ್ಕೆ ತರುವ ಗಡಿಬಿಡಿಯಲ್ಲಿ ಒಂದು ರೀತಿಯ ಅನಿಶ್ಚಿತ ಸ್ಥಿತಿ, ಈ ವೇಳೆಗೆ ನುಗ್ಗಿದ ಮೆರಡೋನ ಚೆಂಡನ್ನು ತನ್ನ ನಿಯಂತ್ರಣಕ್ಕೆ ತೆಗೆದು ಕೊಳ್ಳಲು ಶ್ರಮ ಪಡುತ್ತಿದ್ದಂತೆ ಹಾಡ್ಜ್ ಸಹ ಅಲ್ಲಿಗೆ ಬಂದು ಮೆರಡೋನ ರನ್ನು ತಡೆಯುವಷ್ಟರಲ್ಲಿ ಮೆರಡೋನ ತಲೆಯಿಂದ ಚಿಮ್ಮಿದ ಚೆಂಡು ಗೋಲ್ ಪೋಸ್ಟಿನೊಳಕ್ಕೆ ಸೇರಿಕೊಂಡಿತು. ಆದರೆ ನಿಜವಾಗಿಯೂ ಚೆಂಡು ಮೆರಡೋನ ರ ತಲೆಯ ಹೊಡೆತದಿಂದ ಮಾತ್ರವಲ್ಲ ಅವರ ಎಡಗೈಯ ಸಹಾಯದಿಂದ ಗೋಲ್ ಪೋಸ್ಟಿಗೆ ಸೇರಿಕೊಂಡಿತು. ಟುನೀಸಿಯ ದೇಶದ ರೆಫೆರಿ “ಅಲಿ ಬಿನ್ ನಾಸರ್” ಈ ವಿವಾದಾತ್ಮಕ ಗೋಲನ್ನು ಸಕ್ರಮ ಎಂದು ಘೋಷಿಸಿದರು. ಈ ಚಮತ್ಕಾರದ ಗೋಲು ಇಂಗ್ಲೆಂಡ್ ತಂಡಕ್ಕೆ “ಗೋಳಾಗಿ” ಪರಿಣಮಿಸಿತು. ಪಂದ್ಯ ಗೆದ್ದ ನಂತರ ಮೆರಡೋನ ಪತ್ರಿಕಾ ಗೋಷ್ಠಿಯಲ್ಲಿ ಗೋಲಿನ ಬಗ್ಗೆ ವಿವರಿಸುತ್ತಾ ಈ ಚಮತ್ಕಾರದ ಗೋಲ್ ನಲ್ಲಿ “ದೇವರ ಕೈ” ಇತ್ತು ಎಂದು. ಸ್ವಲ್ಪ ನನ್ನ ತಲೆಯಿಂದಲೂ, ಸ್ವಲ್ಪ ದೇವರ ಕೈ ಯಿಂದಲೂ ಬಂದ ಗೋಲಿದು ಎಂದು ವರ್ಣಿಸಿದ ಮೆರಡೋನ “hand of god” ಅಪರೂಪದ ಪದ ಪ್ರಯೋಗವನ್ನು ಫುಟ್ ಬಾಲ್ ಕ್ರೀಡೆಗೆ ನೀಡಿದರು. ಆದರೆ ಅಂದು ೧೯೮೬ ರಲ್ಲಿ ಅರ್ಜೆಂಟಿನ ದ ನೆರವಿಗೆ ಬಂದ ದೇವರು ೨೦೧೦ ರಲ್ಲಿ ಬರಲಿಲ್ಲ. ಒಂದು ಸಲ ಬಂದು ತನ್ನ ಕೀರ್ತಿ ಹಾಳಾಗಿದ್ದು ಸಾಕು ಎಂದೆನ್ನಿಸಿರಬೇಕು ಆ ಪರಮಾತ್ಮನಿಗೆ.
ವಿಶ್ವಕಪ್
ಲಂಕಾ ದಹನ
twenty20 ವಿಶ್ವಕಪ್ ಸರಣಿಯಲ್ಲಿ ಲಂಕೆಗೆ ಸೋಲು. ಆಡಿದ ಎಲ್ಲ ಪಂದ್ಯಗಳನ್ನೂ ಗೆದ್ದು ಬೀಗುತಿದ್ದ ಲಂಕೆಗೆ ಅಂತಿಮ ಪಂದ್ಯದಲ್ಲಿ ಪಾಕ್ ಪೆಡಂಭೂತ ನುಂಗಿ ಹಾಕಿತು. “ವಾಟರ್ ಲೂ” ಆಗಿ ಪರಿಣಮಿಸಿತು ಲಂಕೆಗೆ Lord’s ಮೈದಾನ. ತನ್ನ ದಾರಿಗೆ ಅಡ್ಡ ನಿಂತ ಒಂದೊಂದೇ ತಂಡಗಳನ್ನು ಮಣಿಸುತ್ತಾ ಬಂದ ಲಂಕಾ ಕಪ್ ತನ್ನದೇ ಎಂದು ಭಾವಿಸಿದ್ದರೆ ತಪ್ಪಿಲ್ಲ. ಆದರೆ ಎಂದಿನಂತೆ ಅನಿಶ್ಚಿತತೆಯೇ ತನ್ನ ಪ್ರಕೃತಿ ಎಂದು ಆಡುವ ಪಾಕಿಸ್ತಾನ ಸರಿಯಾದ ಆಘಾತವನ್ನೇ ಲಂಕೆಗೆ ನೀಡಿತು. ಬೂಂ ಬೂಂ ಎಂದು ವರ್ಣಿಸಲ್ಪಡುವ ಶಾಹಿದ್ ಆಫ್ರಿದಿ ತನ್ನ ನೈಸರ್ಗಿಕ ಆಟಕ್ಕೆ ಅತ್ಯಂತ ವಿರುದ್ಧವಾಗಿ ಜಾಗರೂಕನಾಗಿ ಆಡಿ ಪಂದ್ಯ ಪಾಕ್ ಕೈ ತಪ್ಪದಂತೆ ನೋಡಿಕೊಂಡಿದ್ದು ವಿಶೇಷ.
ಎಂಟು ವಿಕೆಟುಗಳು, ಎಂಟು ಚೆಂಡುಗಳು ಬಾಕಿ ಇರುವಂತೆ ಪಾಕ್ ವಿಜಯ ಕಹಳೆ ಮೊಳಗಿತು.
ಲಂಕಾ ಆಟಗಾರರ ಮೇಲೆ ಪಾಕ್ ನೆಲದ ಮೇಲೆ ನಡೆದ ಆಕ್ರಮಣದಿಂದ ಪಾಕ್ ಕ್ರಿಕೆಟ್ ತತ್ತರಿಸಿತ್ತು. ಯಾವುದೇ ತಂಡಗಳೂ ಪಾಕಿಗೆ ಹೋಗಲು ತಯಾರಿಲ್ಲ. ಸ್ಥಳೀಯ ಕ್ರಿಕೆಟ್ ಸಹ ಹಲವು ಕಾರಣಗಳಿಗೆ ಸೊರಗಿತ್ತು. ಆಂತರಿಕ ಕ್ಷೋಭೆಗಳಿಂದ ಬಳಲುತ್ತಿದ್ದ ಪಾಕಿಗೆ ಭಯೋತ್ಪಾದಕ ರಾಷ್ಟ್ರ ಎನ್ನುವ ಪಟ್ಟ. ಇಂಥ ಹೆನ್ನೆಲೆಯ ನಡುವೆಯೂ ಪಾಕ್ ಆಟಗಾರರು ಮೋಹಕ ಪ್ರದರ್ಶನ ನೀಡಿ ವಿಶ್ವಕಪ್ ಗೆದ್ದರು. ಈ ಗೆಲುವಿನಿಂದ ಪಾಕಿಸ್ತಾನಕ್ಕೆ ವಿಶ್ವ ಸ್ಥರದಲ್ಲಿ ಒಂದಿಷ್ಟು ಮಾನ. ಪಾಕ್ ಬರೀ ಭಯೋತ್ಪಾದಕರ ಸಂತೆಯಲ್ಲ ಎಂದು ತೋರಬಹುದು ವಿಶ್ವಕ್ಕೆ.
ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ದ್ರೋಹಿಗಳನ್ನು ಸದೆಬಡಿಯುತ್ತಿರುವ ಪಾಕ್ ಸೈನಿಕರಿಗೆ ಇನ್ನಷ್ಟು ಹುಮ್ಮಸ್ಸು ಬಂದು ಸಂಪೂರ್ಣವಾಗಿ ತಾಲಿಬಾನ್ ಎಂಬ ವಿಷ ಕಳೆಯನ್ನು ಕಿತ್ತು ಹಾಕಲು ಈ ಗೆಲುವು ಸಹಾಯಕವಾಗಬಹುದು. ಹೀಗಾದರೆ ಅದು ಪಾಕಿಗೂ ಒಳ್ಳೆಯದು ನಮಗೂ ಒಳ್ಳೆಯದು.