ಜೈಪುರ ಸಾಹಿತ್ಯ ಮೇಳ

• ಜೈಪುರ ಸಾಹಿತ್ಯ ಮೇಳ ಪ್ರಸಿದ್ಧಿ ಪಡೆದ ಸಾಹಿತ್ಯಾಸಕ್ತರ ಕೂಟ. ಇಲ್ಲಿ ವಿಶ್ವಾದಾದ್ಯಂತ ಪ್ರಕಾಶಿತವಾದ ಪುಸ್ತಕಗಳ ಅಮೋಘ ಸುಗ್ಗಿ ಮತ್ತು ಹೆಸರಾಂತ ಲೇಖಕರ ಸಮ್ಮಿಲನ. ಪುಸ್ತಕಗಳ Cannes ಎಂದು ಹೇಳಬಹುದು. ಸಾಮಾನ್ಯವಾಗಿ ಇಂಥ ಪುಸ್ತಕ ಮೇಳಗಳು ನೀರಸವಾಗಿ ಶುರುವಾಗಿ ಅಷ್ಟೇ ನೀರಸವಾಗಿ ಮುಗಿದು ಬಿಡುತ್ತವೆ ಕೂಡಾ. ಯಾರೋ ಸಾಹಿತ್ಯ ಪ್ರೇಮಿಗಳು, ಡಿಸ್ಕೌಂಟ್ ಪುಸ್ತಕಕ್ಕಾಗಿ ಆಸೆಯಿಂದ ಬರುವ ಒಂದಿಷ್ಟು ಜನರನ್ನು ಬಿಟ್ಟರೆ ಈ ಉತ್ಸವದ ಮೇಲಿನ ಆಸಕ್ತಿ ಗೌಣ. ಆದರೆ ಈ ಬಾರಿಯ ಮೇಳ ಸ್ವಲ್ಪ ವಿಭಿನ್ನವಾಗಿ ಆರಂಭವಾಗಿ ವಿವಾದದ ಸುಳಿಯಲ್ಲಿ ಸಿಕ್ಕಿ ಕೊಂಡಿತು. ಕಾರಣ ವಿಶ್ವ ಪ್ರಸಿದ್ಧ ಲೇಖಕ, ಕಾದಂಬರಿಕಾರ ಸಲ್ಮಾನ್ ರುಷ್ಡಿ ಈ ಮೇಳಕ್ಕೆ ಆಗಮಿಸುವ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ರುಶ್ಡಿ ಬರಕೂಡದು ಎಂದು ಕೆಲವು ಮುಸ್ಲಿಂ ಸಂಘಟನೆಗಳು ಹೇಳಿದ್ದೆ ತಡ ರಾಜ್ಯ ಸರಕಾರಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಭೂಗತ ಲೋಕದ ಬಾಡಿಗೆ ಹಂತಕರಿಂದ ರುಶ್ಡಿ ಜೀವಕ್ಕೆ ಅಪಾಯವಿದೆ ಎಂದು ರುಶ್ಡಿ ತನ್ನ ಭಾರತ ಪ್ರಯಾಣದ ಟಿಕೆಟ್ ಗಳನ್ನು ಹರಿದು ಹಾಕುವಂತೆ ಮಾಡಿದವು. ಮಾರನೆ ದಿನ ಮತ್ತೊಂದು ಸುದ್ದಿ, ಈ ವಿಷಯ ಮುಂಬೈ ಪೊಲೀಸರಿಗೆ ತಿಳಿದೇ ಇಲ್ಲ. ಎರ್ಡೆಡ್ಲೆ ನಾಕು, ಸಲ್ಮಾನ್ ರುಶ್ಡಿ ಗೆ ಮನವರಿಕೆ ಆಯಿತು ಈ ಸುದ್ದಿ ಸುಳ್ಳೆಂದು, ತನ್ನನ್ನು ಉತ್ಸವದ ಹೊರಗಿಡಲು ಸರಕಾರ ಮಾಡಿದ ಹುನ್ನಾರ ಎಂದು.

ಭಾವನೆಗಳನ್ನ ಘಾಸಿಗೊಳಿಸುವ ಅಧಿಕಾರ ಯಾವ ಲೇಖಕನಿಗೂ ಇರಕೂಡದು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ವೈಚಾರಿಕ ಸ್ವೇಚ್ಚಾಚಾರಕ್ಕಿರುವ ಮುಕ್ತ ಪರವಾನಗಿ ಅಲ್ಲ. ಕ್ರಿಯಾಶೀಲತೆಯ ಹೆಸರಿನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಸೋಗಿನಲ್ಲಿ ಜನರನ್ನು ಕೆರಳಿಸುವ ಪರಿಪಾಠಕ್ಕೆ ನಾಗರೀಕ ಸಮಾಜ ಮಣೆ ಹಾಕಬಾರದು. ಸ್ವೇಚ್ಚಾಚಾರ ಅರಗಿಸಿಕೊಳ್ಳುವ ಗುಣ ನಮ್ಮ ಉಪಖಂಡದ ಜನತೆಗೆ ಇನ್ನೂ ಬಂದಿಲ್ಲ. ಕಾಲ ಬದಲಾದಾಗ ರುಶ್ಡಿ ಯಂಥವರಿಗೆ ಮನ್ನಣೆ ನೀಡೋಣ, ಅಲ್ಲಿಯತನಕ ಸಂಯಮದಿಂದ ಕಾಲದೊಂದಿಗೆ ಹೆಜ್ಜೆ ಹಾಕೋಣ.

ಹಾಗೆಯೇ ಸಲ್ಮಾನ್ ರುಶ್ಡಿ ಪ್ರಕರಣ ಪ್ರಪಂಚದ ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ.

ಕೆಳಗಿನ ಲಿಂಕ್ ಕ್ಲಿಕ್ಕಿಸಿದರೆ ಪ್ರಪಂಚದಲ್ಲಿ ಇದುವರೆಗೆ ಬಹಿಷ್ಕರಿಸಲ್ಪಟ್ಟ ಕೆಲವು ಪುಸ್ತಕಗಳ ಮಾಹಿತಿ ಇದೆ. • http://www.ala.org/advocacy/banned/frequentlychallenged/challengedclassics/reasonsbanned

ಹಂದಿಯೊಂದಿಗೆ ಸೆಣಸಬಾರದು

“ಹಂದಿಯೊಂದಿಗೆ ಸೆಣಸಬಾರದು, ನೀವು ಕೊಳಕಾಗುವುದು ಮಾತ್ರವಲ್ಲ, ಹಂದಿಗೆ ಇದು ಖುಷಿಯನ್ನೂ ಕೊಡುತ್ತದೆ”.

ವಾದ ವಿವಾದ, ಕಲಹ, ವೈಮನಸ್ಸು ಅತಿಯಾಗಿ ವಾದಿಸುವವರು ಎಷ್ಟೇ ತಪ್ಪಿದ್ದರೂ ತಮ್ಮ ಪಟ್ಟನ್ನು ಬಿಡದೆ ವಿತಂಡವಾದಕ್ಕೂ, ತಾವೇ ಸರಿ ಎಂದು ತೋರಿಸುವ ಉತ್ಸುಕತೆಯಲ್ಲಿ ಮೊಂಡುತನ ತೋರಿಸಿ ಕತ್ತೆಯನ್ನು ಕುದುರೆಯಾಗಿಸುವ ಪರಿಶ್ರಮ ಪಟ್ಟಾಗ ಮೇಲಿನ ಗಾದೆ ಅನ್ವಯವಾಗುತ್ತದೋ ಏನೋ? ಮೊಂಡು ತನದಿಂದ  ಚರ್ಚೆಯ ಧಾಟಿ ತಪ್ಪುತ್ತದೆ, ಮತ್ತೊಬ್ಬನ ವಿಚಾರಗಳನ್ನ ಒಪ್ಪಿ ಬಿಟ್ಟರೆ ತಮ್ಮ ಅಹಂ ಗೆ ಆಗುವ ಪೆಟ್ಟನ್ನು ನೆನೆದು ತಾವೇ ಸರಿ ಎಂದು ಕೊನೆಯವರೆಗೂ ಸಾಧಿಸಲು ವ್ಯರ್ಥ ಪ್ರಯತ್ನ ಮಾಡುವ ಜನರನ್ನು ನಾವು ಕಂಡೇ ಇರುತ್ತೇವೆ. ಆಂಗ್ಲ ಭಾಷೆಯಲ್ಲಿ live with the difference ಎನ್ನುತ್ತಾರೆ ಮತ್ತು agreeing to disagree ಎಂದೂ ಹೇಳುತ್ತಾ ವಾದ ವಿವಾದಗಳು ಮಾತುಕತೆಯ ರೂಪ ತಾಳಿದಾಗ ಈರ್ವರೂ ಯಾವ ರೀತಿ ನಡೆದು ಕೊಳ್ಳಬೇಕು ಎನ್ನುವತ್ತ ಮೇಲಿನ ಎರಡು ಮಾತುಗಳು ಮಾರ್ಗದರ್ಶನವೀಯುತ್ತವೆ. ಆದರೆ ಸುಶಿಕ್ಷಿತರಲ್ಲೇ ಅಸಹನೆ ಮನೆ ಮಾಡಿದರೆ ಚರ್ಚೆ ಬೀದಿ ಜಗಳದ ರೀತಿ acrimonious ಆಗುತ್ತದೆಯೇ ಹೊರತು ಏನನ್ನೂ ಕಲಿಯಲು ಸಾಧ್ಯವಾಗುವುದಿಲ್ಲ.

ಬರದಿರಿ ನಮ್ಮ ದೇಶಕ್ಕೆ

ಒಂದು ಕಡೆ ವಿಶ್ವ ನಮ್ಮ ಪ್ರಗತಿಯ ಬಗ್ಗೆ ಮೆಚ್ಚುಗೆ ತೋರಿದರೆ ಮತ್ತೊಂದೆಡೆ ನಮ್ಮ ಅಧಿಕಾರಿ, ರಾಜ ಕಾರಣಿಗಳಿಗೆ ತಮ್ಮ ದೇಶಗಳಿಗೆ ಬರದಂತೆ ವಿಸಾ ನೀಡದೆ ಅಪಮಾನ ಮಾಡುತ್ತಿದೆ. ವಿಶ್ವ ರಾಜಕಾರಣದಲ್ಲಿ ನಮ್ಮದೇ ಆದ ಛಾಪು ಮೂಡಿಸಲು ಯತ್ನಿಸುತ್ತಿರುವ ನಮಗೆ ವಿವಿಧೆಡೆಗಳಿಂದ ಊಹಿಸಲಾಗದ ತೊಡಕುಗಳು ಎದುರಾಗುತ್ತಿವೆ. ನಮ್ಮ ಮೇಲೆ ಹಗೆ ಸಾಧಿಸುವುದೇ ತಮ್ಮ ಕಸುಬು ಎಂದುಕೊಂಡಿರುವ ನೆರೆಯ ದೇಶಕ್ಕೆ ಅದರ ಎಲ್ಲಾ ರೀತಿಯ ಹುನ್ನಾರಗಳ ಅರಿವಿದ್ದೂ ಪಾಶ್ಚಾತ್ಯ ರಾಷ್ಟ್ರಗಳು ತಮ್ಮದೃಷ್ಟಿಯನ್ನು ಮತ್ತೆಲ್ಲೋ ಬೀರಿ ಪರೋಕ್ಷ ಬೆಂಬಲವನ್ನು ನೀಡುತ್ತಿವೆ. ಅವರ ಪ್ರಕಾರ ಪಾಕ್ ನಿಜವಾಗಿಯೂ “ಪಾಕ್” (ಶುದ್ಧ). ನಮ್ಮ ವಿದೇಶಾಂಗ ಇಲಾಖೆಯನ್ನು ನಿರ್ವಹಿಸುತ್ತಿರುವವರಿಗೆ ತಮ್ಮ ಸೂಟು, ಗರಿಗರಿಯಾದ ರೇಷ್ಮೆ ಸೀರೆ ಪ್ರದರ್ಶಿಸುವುದೇ ತಮ್ಮ ಪ್ರತಿಭೆ ಎಂದು ಬಗೆದು ನಡೆಯುತ್ತಿರುವುದು ಖೇದಕರ.

ಉತ್ತರ ಅಮೇರಿಕಾ ಖಂಡದ ಕೆನಡಾ ದೇಶ ಅಂತರ ರಾಷ್ಟ್ರೀಯ ರಾಜಕಾರಣದಲ್ಲಿ ಅಷ್ಟೇನೂ ದೊಡ್ಡ ಪಾತ್ರ ವಹಿಸದ ದೇಶ. ಈ ದೇಶಕ್ಕೆ ಹೋಗಲು ಗಡಿ ಭದ್ರತಾ ಪಡೆಗೆ ಸೇರಿದ ನಿವೃತ್ತ ಪೇದೆ ವಿಸಾ ಕೇಳಿದಾಗ ಸಿಕ್ಕ ಉತ್ತರ  “ಕುಪ್ರಸಿದ್ಧ ಹಿಂಸಾತ್ಮಕ ಪಡೆ” (notoriously violent force) ಗೆ ಸೇರಿದವರಿಗೆ ಕೆನಡಾ ಒಂದು ಕನಸು ಎಂದು. ನಮ್ಮ ಅರೆ ಸೈನಿಕ ಪದೆಯನ್ನು “ಕುಪ್ರಸಿದ್ಧ” ಎನ್ನುವ ಮಟ್ಟಿಗೆ ಬೆಳೆಯಿತು ದಾರ್ಷ್ಟ್ಯತನ ಈ ಸದಾ ಮಗುಮ್ಮಾಗಿ ಇರುವ ದೇಶಕ್ಕೆ.  ಇನ್ನಿತರ ಸೈನಿಕ ಅಧಿಕಾರಿಗಳಿಗೂ ಇದೇ ರೀತಿ ಒಂದಲ್ಲ ಒಂದು ರೀತಿಯ “ನೀವು ನಮ್ಮ ದೇಶಕ್ಕೆ ಬರಲು ಅರ್ಹರಲ್ಲ” ಎಂದು ಹಣೆ ಪಟ್ಟಿ. ಈಗ ಒಂದು ಪ್ರಶ್ನೆ. ಪಕ್ಕದ ಪಾಕಿಸ್ತಾನದ ಅಧಿಕಾರಿಗಳಿಗೂ ಇದೇ ರೀತಿಯ ಉಪಚಾರ ಸಿಕ್ಕಿದೆಯೇ? ಸಿಕ್ಕಿರಲಿಕ್ಕಿಲ್ಲ. ಏಕೆಂದರೆ ಅಲ್ಲಿನ ಅಧಿಕಾರಿ, ರಾಜಕಾರಣಿಗಳು ಸಮಯ ಸಾಧಕರು, ಅವರಿಗೆ ರೊಟ್ಟಿಯ ಯಾವ ಮಗ್ಗುಲಿಗೆ ಬೆಣ್ಣೆ ತಗುಲಿದೆ ಎಂದು ಚೆನ್ನಾಗಿ ಗೊತ್ತು, ಅದರ ಪ್ರಕಾರವೇ ನಡೆದುಕೊಂಡು ತಮ್ಮ ಕಾರ್ಯ ಸಾಧಿಸಿ ಕೊಳ್ಳುತ್ತಾರೆ. ನಾವಾದರೋ, ಬೆಳ್ಳಗಿರುವುದೆಲ್ಲಾ ಹಾಲು ಎನ್ನುವ ಸಮೂಹ. ಅಷ್ಟು ಮಾತ್ರವಲ್ಲ, ಬಿಳಿಯರ ಯುದ್ಧವನ್ನು ಪಾಕಿ ಸೈನಿಕರು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೂ ಅವರ ತಂಟೆಗೆ ಯಾರೂ ಹೋಗುವುದಿಲ್ಲ.  

ಇಂಥ ಕಸಿವಿಸಿಯುಂಟು ಮಾಡುವ ಘಟನೆಗಳಿಂದ ನಮಗೆ ಮುಕ್ತಿ ಕೊಡಿಸಲು ಚಾಣಕ್ಯ ಪುರಿಯ ಸಾಹೇಬರುಗಳಿಂದ (ಅಲ್ಲಿ ಈಗ ಮಹಿಳಾ ಸಾಹೇಬರೂ ಇದ್ದಾರೆ) ಸಾಧ್ಯವೇ? ಕೇವಲ ಕೋಪದಿಂದ ಒಂದು ಪತ್ರ ಬರೆದು ಸ್ಪಷ್ಟೀಕರಣ ಕೇಳಿ, ಸಂಜೆಯಾದ ಕೂಡಲೇ ಇದೇ ಬಿಳಿಯರ ಜೊತೆ ಸೇರಿಕೊಂಡು ಪಂಚತಾರಾ ಹೋಟೆಲುಗಳಲ್ಲಿ ಮಜಾ ಉಡಾಯಿಸುವವರಿಂದ ದೇಶ ತನಗೆ ಸಲ್ಲಬೇಕಾದ ಮಾನವನ್ನು ನಿರೀಕ್ಷಿಸ ಬಹುದೇ?

ಈ ತೆರನಾದ ಘಟನೆಗಳಿಗೆ ಬಿಳಿಯರ ದೃಷ್ಟಿದೋಷ ಕಾರಣವೋ ಅಥವಾ ನಮ್ಮಲ್ಲೇ ಏನಾದರೂ ನಮಗೇ ಕಾಣದ ಐಬಿದೆಯೋ ತಿಳಿಯದು. ಹೌದು ಕೆಲವೊಮ್ಮೆ ಪ್ರಮಾದಗಳು ಸಂಭವಿಸಿರಬಹುದು, ಅಂಥ ಘಟನೆಗಳನ್ನ ಆಧಾರವಾಗಿಟ್ಟು ಕೊಂಡು ನಮ್ಮನ್ನು ಈ ರೀತಿ ಹೀನಾಯವಾಗಿ ನಡೆಸಿಕೊಂಡರೆ ಅದಕ್ಕೆ ನಮ್ಮ ಉತ್ತರ ಹೇಗಿರಬೇಕು? ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಅಲಿಪ್ತ ನೀತಿಯ ಮೇಲೆ ವಿಪರೀತ ಅವಲಂಬನೆ ಮಾಡಿದ್ದರಿಂದ ನಮ್ಮಲ್ಲಿನ ರೋಷ ಮಾಯವಾಗಿ ಎಲ್ಲವನ್ನೂ ಸೈರಿಸಿಕೊಂಡು ಸೋತ ನಗೆಯೊಂದಿಗೆ ನಮ್ಮ ದಾರಿ ನೋಡಿ ಕೊಳ್ಳುವ ನಮ್ಮ ಜಾಯಮಾನ ನಮಗೇ ಮುಳು ವಾಗುತ್ತಿದೆ. ವಿದೇಶಾಂಗ ಇಲಾಖೆಗೆ ಹೊಸರಕ್ತ ತುಂಬಿ, ಈ ಇಲಾಖೆ ನಡೆಸಲು ವಯಸ್ಸಾದವರ ಅಗತ್ಯವಿಲ್ಲ, ಯುವ ಅಧಿಕಾರಿಗಳಿಗೆ ಸಿಗಲಿ ಚುಕ್ಕಾಣಿ.

* ಫೇಸ್ ಬುಕ್ ಮುಸ್ಲಿಂ ವಿರೋಧಿ ?

ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಇದು. ಈಜಿಪ್ಟ್ ದೇಶದ ಮುಸ್ಲಿಂ ಧರ್ಮ ಗುರು ನೀಡಿದ “ಫತ್ವ” ವನ್ನು ತಪ್ಪಾಗಿ  (ಉದ್ದೇಶಪೂರ್ವಕ?) ಅರ್ಥೈಸಿ ಬರೆದಾಗ ಮೇಲೆ ತೋರಿಸಿದ ತಲೆ ಬರಹ ಎಲ್ಲರ ಗಮನ ಸೆಳೆಯುತ್ತದೆ. ಮೈಸೂರು ಪ್ರಕಾಶನದ ಈ ಪತ್ರಿಕೆ ಸಾಧಾರಣವಾಗಿ ಯಾರಿಗೂ ನೋವಾಗದಂಥ, ಅನಾವಶ್ಯಕ ಕುತೂಹಲ ಕೆರಳಿಸದಂಥ ಸುದ್ದಿಗಳನ್ನು ಪ್ರಕಟಿಸುತ್ತದೆ. ಆದರೆ ಕೆಲವೊಮ್ಮೆ “ಫ್ಯಾಷೆನ್ ಟ್ರೆಂಡ್” ಅನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ನೋಡಿ. ಆದರೆ ಇಂಥ ವರದಿಗಳನ್ನು ಮುದ್ರಿಸಿ ಪತ್ರಿಕೆ ತನ್ನ ಆತ್ಮವನ್ನು ಕಳೆದುಕೊಳ್ಳಬಹುದು ಎನ್ನುವ ಸಾಮಾನ್ಯ ಜ್ಞಾನ ಸಂಪಾದಕನಿಗೆ ಇದ್ದರೆ ಆತ ಜಾಗರೂಕತೆ ತೋರಿಸುತ್ತಾನೆ. 

ಈಜಿಪ್ಟ್ ದೇಶದ ಈ ಧರ್ಮ ಗುರು ಫೇಸ್ ಬುಕ್ ಮುಸ್ಲಿಂ ವಿರೋಧಿ ಅಂದ ಕೂಡಲೇ ನಾನಾಗಲಿ, ಲಕ್ಷಾಂತರ ಮುಸ್ಲಿಮರಾಗಲಿ ಫೇಸ್ ಬುಕ್ ನಿಂದ ಹೊರನಡೆಯುವಷ್ಟು ಬಾಲಿಶರಲ್ಲ. ಅಷ್ಟಕ್ಕೂ ಆ ಧರ್ಮ ಗುರು ನೀಡಿದ ವಿವರಣೆ ಸ್ವಲ್ಪ ನೋಡೋಣ. ಫೇಸ್ ಬುಕ್ ಮೂಲಕ ಅನೈತಿಕ ಸಂಬಂಧ ಅರಸಿ ವೈವಾಹಿಕ ಸಂಬಂಧವನ್ನು ಹಾಳುಗೆಡವುವರ ಬಗ್ಗೆ ಮಾತ್ರ ಈ ಎಚ್ಚರಿಕೆ. ಧರ್ಮ ಸಂದೇಶಗಳನ್ನೂ ಸಾರಲೂ, ವ್ಯಾವಹಾರಿಕವಾಗಿಯೋ, ಬರೀ ಸ್ನೇಹಕ್ಕಾಗಿಯೋ ಉಪಯೋಗಿಸುವವರ ವಿರುದ್ಧ ಅಲ್ಲ ಈ  “ಫತ್ವ”. 

ಇಸ್ಲಾಂ ಧರ್ಮದಲ್ಲಿ ಶೋಷಣೆಗೆ ಎಡೆ ಮಾಡುವ ಪುರೋಹಿತಶಾಹಿ ಇಲ್ಲ. ಹಾಗೂ  ಫತ್ವ ಹೊರಡಿಸುವ ಅಧಿಕಾರ ಪ್ರತಿ ಮುಲ್ಲಾಗೂ ಇಲ್ಲ. ಪ್ರಪಂಚದ ಯಾವುದಾದರೂ ಮೂಲೆಯಲ್ಲಿ ಕೂತು ಯಾರಾದರೂ ತಮಗಿಷ್ಟ ಬಂದಂತೆ ಧರ್ಮದ ಬಗ್ಗೆ ಹೇಳಿಕೆ ನೀಡಿದ ಕೂಡಲೇ ಅದನ್ನು ವಿಶೇಷ ವರದಿಯನ್ನಾಗಿ ಪ್ರಕಟಿಸಿ ಬೊಬ್ಬೆ ಹೊಡೆಯುವ ಪತ್ರಿಕೆಗಳಿಗೆ ಮಾಡಲು ಬೇಕಷ್ಟು ಕೆಲಸಗಳಿವೆ. ಸಾಮಾಜಿಕ ಸಂಪರ್ಕ ಮಾಧ್ಯಮಗಳ ಸಂಕೀರ್ಣ ವ್ಯವಸ್ಥೆಗೆ ಬಳಿ ಬಿದ್ದು ತಮ್ಮ ವೈಯಕ್ತಿಕ ಜೀವನವನ್ನು ಹಾಳು  ಮಾಡಿಕೊಂಡವರು ಹಲವರು. ವಿವಾಹಿತರಾಗಿಯೂ ಸಂಬಂಧಗಳನ್ನು ಹುಡುಕಿಕೊಂಡು ನಡೆಯುವ, ಸುಳ್ಳು ಪ್ರೊಫೈಲ್ ಗಳನ್ನು ನಂಬಿ ತಮ್ಮ ಬದುಕನ್ನು ಕೆಡಿಸಿ ಕೊಂಡವರೂ ಇದ್ದಾರೆ. ಟೀವೀ ಬಂದ ಹೊಸತರಲ್ಲೂ ಕೆಲವು ಧರ್ಮ ಗುರುಗಳು ಈ “ಶನಿ ಪೆಟ್ಟಿಗೆ” ಸಮಾಜವನ್ನು ಕಲುಷಿತಗೊಳಿಸಬಹುದು ಎಂದು ಎಚ್ಚರಿಸಿದ್ದರು. ಹಾಗೆ ಸಂಭವಿಸಿತೂ ಕೂಡಾ. ೮ – ೧೦ ವರ್ಷದ ಮಕ್ಕಳು ಅಶ್ಲೀಲ ಸೀರ್ಯಲ್ಲುಗಳನ್ನು, ಮೂವಿಗಳನ್ನು ನೋಡಿ ಪ್ರೇಮ ಪತ್ರ ಬರೆಯಲು ತೊಡಗಿದರು.  ಹದಿಹರೆಯದ ಹೊತ್ತಿಗೆ ಎಲ್ಲ ರೀತಿಯ ಅನುಭವಗಳನ್ನು ಪಡೆಯಲು ತೊಡಗಿದರು. ಹಿಂಸಾಪ್ರಿಯರೂ ಆದರು. 

ಹಾಗೆಂದು ತಂತ್ರ ಜ್ಞಾನಕ್ಕೆ ಬೆನ್ನು ತಿರುಗಿಸಿ ಬದುಕಬೇಕೆಂದಲ್ಲ. ಮಿತಿಯನ್ನು ಅರಿತು ಪ್ರಜ್ಞಾ ಶೀಲತೆ ಮೆರೆದರೆ ಅದೇ ಚೆಂದ.