ಮಿನಿ ಮಹಾ ಚುನಾವಣೆ ಎನ್ನಬಹುದಾದ ನಾಲ್ಕು ರಾಜ್ಯಗಳ ಚುನಾವಣೆಗಳಲ್ಲಿ ಮಹಿಳೆ ಅಭೂತ ಪೂರ್ವ ಯಶಸ್ಸನ್ನು ಸಾಧಿಸಿದ್ದಾಳೆ. ದಿಲ್ಲಿಯಿಂದ ಹಿಡಿದು ದಕ್ಷಿಣದ ತಮಿಳು ನಾಡಿನವರೆಗೆ ನಾರೀ ಮಣಿಗಳ ವಿಜೃಂಭಣೆ ಅಧಿಕಾರದ ಪಡಸಾಲೆಗಳಲ್ಲಿ. ಸ್ವ ಸಾಮರ್ಥ್ಯದಿಂದ ಮಮತಾ ಬ್ಯಾನರ್ಜಿ, ಶೀಲಾ ದೀಕ್ಷಿತ್ ರಾಜಕಾರಣದಲ್ಲಿ ಮಿಂಚಿದರೆ ಸೋನಿಯಾ, ಜಯಲಲಿತಾ ಮತ್ತು ಮಾಯಾವತಿ ಪುರುಷರ ನೆರಳಿನ ಸಹಾಯದಿಂದ ಮಿಂಚಿದವರು. ಹೆಣ್ಣಿನ ಹುಟ್ಟು ಹೇಸಿಗೆ ಮತ್ತು ತಾತ್ಸಾರ ಹುಟ್ಟಿಸುವ, ಗರ್ಭದಲ್ಲೇ ಅವಳನ್ನು ಹೊಸಕಿ ಹಾಕುವ ಅತ್ಯಂತ ತ ಕಳವಳಕಾರೀ ವಿದ್ಯಮಾನಗಳನ್ನು ನಾವು ದಿನವೂ ಕಾಣುತ್ತಿರುವಾಗ ರಾಜಕೀಯದಲ್ಲಿ ಸ್ತ್ರೀಯರ ಯಶಸ್ಸು ನಿಜಕ್ಕೂ ಸಂತಸವನ್ನು ಮೂಡಿಸುತ್ತದೆ. ಈ ಮಹಿಳಾ ಮಣಿಗಳು ಮಾಡಬೇಕಾದ ಮೊದಲ ಕೆಲಸವೆಂದರೆ ಮೇಲೆ ಹೇಳಿದ ಹೆಣ್ಣಿನ ಭ್ರೂಣ ಹತ್ಯೆ ಮತ್ತು ಹೆಣ್ಣಿನ ಮೇಲೆ ನಡೆಯುವ ಅವ್ಯಾಹತ ಶೋಷಣೆಯ ವಿರುದ್ಧ ಸಮರವನ್ನೇ ಸಾರಿ ಜನರಲ್ಲಿ ಹೆಣ್ಣು ನಿಕೃಷ್ಟಳಲ್ಲ, ಪುರುಷನಷ್ಟೇ ಬಲಿಷ್ಠಳು ಎನ್ನುವ ಸತ್ಯವನ್ನು ಮನಗಾಣಿಸುವುದು.