ನಲವತ್ತು ಸಂವತ್ಸರಗಳು, ಒಂದು ವಿಚ್ಛೇದನ

ನಲವತ್ತು ವಸಂತಗಳು, ಎಂಥ ಮೊಂಡು ಮರವನ್ನೂ ಪಳಗಿಸಿ, ಆಳವಾಗಿ ಬೇರೂರಿ ಸುಲಭವಾಗಿ ಶಿಥಿಲವಾಗದಂತೆ ಮಾಡುತ್ತವೆ. ನಲವತ್ತು ಸಂವತ್ಸರಗಳು ಮನುಷ್ಯನನ್ನು ಎಷ್ಟೊಂದು ಪ್ರಬುದ್ಧವಾಗಿಸುತ್ತವೆ. ಅದೂ ನಲವತ್ತು ಸಂವತ್ಸರಗಳ ಅನುಭವ ಒಂದು ಹೊಸ ಅನುಭೂತಿಯನ್ನು ತರುತ್ತದೆ ಮನುಷ್ಯನಲ್ಲಿ. ನಲವತ್ತು ವರುಷಗಳ ಅನುಭವ ಮನುಷ್ಯನನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ. ನಾಲ್ಕು ದಶಕಗಳು….ಅವುಗಳ ಬಗ್ಗೆ ಊಹಿಸುವುದೂ ಕಷ್ಟ.

ನಲವತ್ತು ವರುಷಗಳ ಕಾಲ ತೀರಾ ಹತ್ತಿರವಾಗಿದ್ದವರು, ಸಾವಿರಾರು ಹಗಲನ್ನೂ, ಇರುಳನ್ನೂ ಕಂಡವರು ಏಕಾಏಕಿ ದೂರವಾದರು, ಅಮೆರಿಕೆಯಲ್ಲಿ.  

ಅಮೆರಿಕೆಯ ಮಾಜಿ ಅಧ್ಯಕ್ಷ ಅಲ್-ಗೋರ್ ತಮ್ಮ ಪತ್ನಿ ಮೇರಿ ಎಲಿಜಬೆತ್ ಟಿಪ್ಪರ್ ರಿಂದ  ವಿಚ್ಚೇದಿತರಾಗುತ್ತಿದ್ದಾರೆ.   ನಲವತ್ತು ವರ್ಷಗಳ ಬಾಳ ಸಂಗಾತಿಯನ್ನು ತೊರೆದು ನಿಸರ್ಗದ ಏಕಾಂತದ ಅನುಭವಕ್ಕಾಗೋ ಏನೋ. ವಿವಾಹ ಮತ್ತು ವಿಚ್ಚೇದನ ಜನರಿಗೆ ಅತಿ ವೈಯಕ್ತಿಕ ವಿಷಯ. ಅದರ ಚರ್ಚೆ ನಮಗೇಕೆ ಎಂದು ನಿಮಗೆ ಅನ್ನಿಸಬಹುದು. ಆದರೆ ಇಲ್ಲಿ ಕಾಣ ಸಿಕ್ಕಿರುವ ಪಾತ್ರಗಳು ಸಾರ್ವಜನಿಕ ಬದುಕಿನಲ್ಲಿರುವವರು. ಇಂಥವರ ಬೇರೆಲ್ಲಾ ಲೀಲೆಗಳನ್ನೂ ಚರ್ಚಿಸುವ ನಾವು ಅವರ ಸಂಕಷ್ಟಗಳ ಬಗ್ಗೆಯೂ ಯೋಚಿಸಿ ಅದರಲ್ಲಿ ನಮಗೇನಿದೆ ಕಲಿಯಲು ಎಂದು ಸೂಕ್ಷ್ಮವಾಗಿ ನೋಡಿದಾಗ ಅರಿವಾಗುತ್ತದೆ ಈ ವಿಷಯ ನಮಗೆ ಪ್ರಸ್ತುತ ಎಂದು.     

“Everyone you meet is fighting some kind of battle.” – ಎಷ್ಟು ಸತ್ಯ ನೋಡಿ ಈ ಮಾತು. “ನಾವು ಭೆಟ್ಟಿಯಾಗುವ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಧದ ಸೆಣಸಿನಲ್ಲಿರುತ್ತಾರೆ”- ಹೌದು ಒಂದಲ್ಲ ಒಂದು ರೀತಿಯ ಹೋರಾಟ ಪ್ರತಿಯೊಬ್ಬರದೂ. ನಲವತ್ತು ವರುಷಗಳ ಸಂಬಂಧ ಈ ರೀತಿ ಕಳಚಿ ಕೊಂಡು ಬಿದ್ದರೆ ಅನಂತತೆಯ ಮಾತು ದೂರ ಉಳಿಯಿತು. ಹಾಗಾದರೆ ವಿವಾಹ ಸಂಬಂಧ ನಿರಂತರ, ಶಾಶ್ವತ (ಸಾವನ್ನು ಬಿಟ್ಟು) ವಾಗಿರಿಸಲು ಸಾಧ್ಯವಿಲ್ಲವೇ? ಕೆಲವರು ಹೇಳ್ತಾರೆ time is a great healer ಅಂತ. ಆದರೆ ಇಲ್ಲಿ ಆ ಹೀಲಿಂಗ್ ಕಾಣ್ತಾ ಇಲ್ಲ. ಇಲ್ಲಿ ಕಾಣ್ತಾ ಇರೋದು drifting. ಅಬ್ಬರದ ಅಲೆಗೆ ನಲುಗುವ ದೋಣಿಯಂತೆ. ವೈಯಕ್ತಿಕ ಬದುಕಿನ ಚರ್ಚೆ ನಮಗೆ ಬೇಡವೆಂದರೂ ಈ ತೆರನಾದ ಸುದ್ದಿಗಳು ನಮ್ಮನ್ನು ಖಂಡಿತ ಗಲಿಬಿಲಿಗೊಳಿಸುತ್ತವೆ. ವಿಶ್ವದ ತಾಪ ಮಾನ ಹೆಚ್ಚಳದ ಬಗ್ಗೆ ಪುಸ್ತಕ ಬರೆದು, ನೊಬೆಲ್ ಗಿಟ್ಟಿಸಿಕೊಂಡ ವ್ಯಕ್ತಿ ತನ್ನ ಮಗ್ಗುಲಲ್ಲೇ ಇದ್ದ ವ್ಯಕ್ತಿಯನ್ನು ಅರಿಯದಾದನೆ? ಹವಾಮಾನ ಬಿಕ್ಕಟ್ಟು (climate crisis), ಅಲ್-ಗೋರ್ ಅವರ ಧ್ಯೇಯ, ಆದರೆ ಮನೆಯೊಳಗಿನ ಹವಾಮಾನ ತಣ್ಣಗೆ ಕೈ ಕೊಡುತ್ತಿದ್ದನ್ನು ಕಾಣದೆ ಎಡವಿದರು ಅಮೆರಿಕೆಯ  ಮಾಜಿ ಉಪಾಧ್ಯಕ್ಷರು. ಹವಾಮಾನದ ಏರು ಪೇರಿನ ಮೇಲೆ ಬಹಳಷ್ಟು ಅಧ್ಯಯನ ನಡೆಸಿದ್ದ ಅಲ್-ಗೋರ್ ಒಂದು ಪುಸ್ತಕ ಸಹ ಬರೆದಿದ್ದರು. ಅದರ ಹೆಸರು An Inconvenient Truth. ಈ ಶೀರ್ಷಿಕೆ ಹವಾಮಾನಕ್ಕೆ ಮಾತ್ರವಲ್ಲ ತಮ್ಮ ವೈಯಕ್ತಿಕ ಬದುಕಿಗೂ ಅನ್ವಯಿಸಬಹುದು ಎಂದು ಬಹುಶಃ ಅವರಿಗೆ ತಿಳಿದಿರಲಿಲ್ಲವೇನೋ? ಅವರ ಇತ್ತೀಚಿನ ಪುಸ್ತಕದ ಹೆಸರು The Assault on Reason. ಶೀರ್ಷಿಕೆಗಳನ್ನು ಗಮನಿಸಿದಿರಿ ತಾನೇ?    

Familiarity breeds contempt ಎನ್ನುತ್ತಾರೆ. ಆದರೆ ಈ ವಿವಾಹದ ಸಲುಗೆಯ ಬೆಸುಗೆ ಸಡಿಲವಾಗಿ ಕಳಚಿ ಬೀಳಲು ತೆಗೆದುಕೊಂಡವು ಪೂರ್ತಿ ನಲವತ್ತು ವರ್ಷಗಳು. ಅಷ್ಟಕ್ಕೂ ವಿವಾಹದಲ್ಲಿ ಇರಬಾರದ ಸಲುಗೆ ಬೇರೆಲ್ಲಿ ಸಿಗಬಹುದು ಹೇಳಿ? all is fair in love and war ಅಲ್ವಾ? ಒಂದು ಜೋಡಿ ಗೃಹಸ್ಥಾಶ್ರಮಕ್ಕೆ ಮಧುರ ಭಾವನೆಗಳನ್ನು, ಹೊಂಗನಸುಗಳನ್ನು ಇಟ್ಟುಕೊಂಡು ಪ್ರವೇಶಿಸುತ್ತದೆ. ತನ್ನ ಹಿರಿಯರು, ಪೂರ್ವಜರು ಆರಿಸಿಕೊಂಡ ದಾರಿಯನ್ನೇ ಕ್ರಮಿಸಲು ಹೊರಡುವ ಜೋಡಿಗೆ ಆರಂಭದ ಪ್ರೇಮದ ಹುಚ್ಚು ಹೊಳೆ ಈಜಿ ದಡ ಸೇರಿದ ನಂತರ ಒಂದೊಂದೇ ಮುಳ್ಳುಗಳು ಕಾಣಲು, ಪೀಡಿಸಲು ತೊಡಗುತ್ತವೆ. ಆದರೆ ತಮ್ಮ ಪೂರ್ವಜರ ನಿರೀಕ್ಷೆ, ಮಿತಿ ಅರಿತು ಕೊಂಡ, ಜೋಡಿ ಅವನ್ನು ಹೇಗೆ ತನ್ನ ಪೂರ್ವಜರು ನಿಭಾಯಿಸಿದರು ಕಂಡುಕೊಂಡ ಜೋಡಿಗೆ ಸಂಕಷ್ಟಗಳು ತೋರದು. ತೋರಿದರೂ ಅದೂ ಬದುಕಿನ ಅವಿಭಾಜ್ಯ ಅಂಗ ಎಂದು ಕೊಂಡು ತಮ್ಮ ಅಪ್ಪುಗೆಯಲ್ಲಿ ತೊಡಕುಗಳನ್ನೂ ಸೇರಿಸಿಕೊಂಡು ಮುನ್ನಡೆಯುತ್ತಾರೆ. ಅದರಲ್ಲೂ ಆ ವೈವಾಹಿಕ ಬದುಕು ಒಂದೆರಡು, ಮೂರು ಮೊಗ್ಗುಗಳನ್ನು ನೀಡಿದರಂತೂ ಅವರ ಲಾಲನೆ ಪಾಲನೆಯಲ್ಲೂ, ತಮಗಾಗಿ ಅಲ್ಲದಿದ್ದರೂ ತಮ್ಮ ಮಕ್ಕಳಿ ಗಾಗಿಯಾದರೂ ಸಂಬಂಧವನ್ನೂ ಖಾಯಂ ಆಗಿ ಇರಿಸಲು ಪಣ ತೊಡುತ್ತಾರೆ.      

ಅಲ್-ಗೋರ್ ಅವರದು ವಿಶಿಷ್ಟ ವ್ಯಕ್ತಿತ್ವ. ಅಲ್-ಗೋರ್ ಅವರಿಗೆ ಹಿನ್ನಡೆ ಮತ್ತು ಪೆಟ್ಟುಗಳು ಹೊಸತಲ್ಲ. ಇಂಥ ಮತ್ತೊಂದು ಮರ್ಮಾಘಾತ ಅವರಿಗೆ ರಾಜಕೀಯ ಜೀವನದಲ್ಲಿ ಸಿಕ್ಕಿತ್ತು. ೨೦೦೧, ಅಮೆರಿಕೆಯ ಅಧ್ಯಕ್ಷೀಯ ಚುನಾವಣೆ. ಜಾರ್ಜ್ ಬುಶ್ ಎದುರಿಗೆ ಸೆಣಸಲು ಡೆಮೊಕ್ರಾಟಿಕ್ ಪಕ್ಷ ಅಲ್-ಗೋರ್ ಅವರನ್ನು ಆರಿಸಿತು. ಪರಸ್ಪರ ಕೆಸರೆರೆಚಾಟ ಜೋರಾಗಿ ನಡೆದು ಅಲ್-ಗೋರ್ ಗೆಲ್ಲಬಹುದು ಎಂದು ಅಮೇರಿಕಾ ಮತ್ತು ವಿಶ್ವ ಭಾವಿಸಿತು. ಮತಗಣನೆ ಪೂರ್ತಿಯಾದ ಕೂಡಲೇ ನಾನು ಸೋತೆ, ಅಭಿನಂದನೆಗಳು ಎಂದು ಬುಶ್ ತನ್ನ ಪ್ರತಿಸ್ಪರ್ದಿ ಗೋರ್ ಅವರಿಗೆ ಫೋನಾಯಿಸಿ ಶುಭ ಕೋರುತ್ತಾರೆ. ಆದರೆ ಮಾರನೆ ದಿನ ಎಣಿಕೆಯಲ್ಲಿ ಎಡವತ್ತಾಗಿದ್ದನ್ನು ಅರಿತ ಬುಶ್ ಪ್ಲೇಟ್ ಬದಲಿಸಿ ಮರು ಎಣಿಕೆ ಆಗಬೇಕು ಎಂದು ಪಟ್ಟು ಹಿಡಿಯುತ್ತಾರೆ. ಸಾಂವಿಧಾನಿಕ ಬಿಕ್ಕಟ್ಟು ಅಮೆರಿಕೆಯನ್ನು ಆವರಿಸುತ್ತದೆ ಸುಮಾರು ಆರು ವಾರಗಳ ನಂತರ ಸರ್ವೋಚ್ಚ ನ್ಯಾಯಾಲಯದ ಸಹಾಯದಿಂದ ಬುಶ್ ಗದ್ದುಗೆಗೆ ಏರುತ್ತಾರೆ ತನ್ನ ಕಪಟ ತಂತ್ರ ತೋರಿಸಿ. Bush stole the election ಎಂದು ಹಲವರು ಬೊಬ್ಬೆ ಇಟ್ಟರೂ ಏನೂ ಫಲಿಸುವುದಿಲ್ಲ. ಈ ಆಘಾತದಿಂದ ಚೇತರಿಸಿಕೊಂಡ ಅಲ್-ಗೋರ್ ಗೆ ಸಾಂತ್ವನ ನೀಡಿ ತನ್ನ ಪರವಾಗಿ ಹೋರಾಡುವಂತೆ ಕೋರಿತು ನಿಸರ್ಗ ಅಲ್-ಗೋರ್ ಅವರಲ್ಲಿ.

ಅಲ್-ಗೋರ್ ಅಂತರ್ಜಾಲ ತಂತ್ರಜ್ಞಾನ ಅಮೆರಿಕೆಯ ಮೂಲೆ ಮೂಲೆ ತಲುಪುವಂತೆ ಮಾಡಿದ ವ್ಯಕ್ತಿ. ಹವಾಮಾನ, ನಿಸರ್ಗಕ್ಕಾಗಿ ಹೋರಾಡಿದ ಅಲ್-ಗೋರ್ ನೊಬೆಲ್ ಪ್ರಶಸ್ತಿ ವಿಜೇತರು. ಈ ವೈವಾಹಿಕ ಸಂಕಷ್ಟದಲ್ಲಿ ಸಿಲುಕಿರುವ ಈ ಲವಲವಿಕೆಯ ಜೋಡಿಗೆ ತಾವು ಆರಿಸಿಕೊಂಡ ದಾರಿ ಸುಗಮವಾಗಲೆಂದು ಹಾರೈಸೋಣವೇ?

ಒಬ್ಬ ಒಳ್ಳೆಯ, ಮನಸ್ಸಿಗೆ ಒಪ್ಪುವ ವ್ಯಕ್ತಿಯನ್ನು ನಾವು ಸ್ಮರಿಸಬೇಕಾದರೆ ಅವನು ಸಾಯಬೇಕು, ಅಥವಾ ಗೋರ್ ರೀತಿಯಲ್ಲಿ ಬದುಕಿನಲ್ಲಿ ದೊಡ್ಡ ಏಟನ್ನು ಅನುಭವಿಸಬೇಕು. ಅವರ ವ್ಯಕ್ತಿತ್ವದ ಬಗ್ಗೆ ಅರಿಯಲು ನಮಗೆ ತೋಚಿದ ಸಮಯ ಅವರು ನ್ಯಾಯಾಲಯದ ಮೆಟ್ಟಿಲು ಹತ್ತುವ ಸಮಯ, ತನ್ನ ವೈವಾಹಿಕ ಬದುಕನ್ನು (ವಿವಾಹಗಳು ಸ್ವರ್ಗದಲ್ಲಿ ಏರ್ಪಡುತ್ತವೆ, ಬಾಕಿ ಕಾರ್ಯಗಳು ಕೋರ್ಟ್ ಗಳಲ್ಲಿ ) dissolve  ಮಾಡಲು ನ್ಯಾಮೂರ್ತಿಯನ್ನು ಕೇಳುವ ಸಮಯ. ಸ್ವರ್ಗದಲ್ಲಿ ಶುಭ್ರ, ಶ್ವೇತ ದೇವದೂತರ ಸಮ್ಮುಖದಲ್ಲಿ ಜರುಗುವ ಮದುವೆ ಕಪ್ಪು ಕೋಟುಗಳನ್ನು ತೊಟ್ಟ ವಕೀಲರ ಮಧ್ಯೆ ಪರ್ಯವಸಾನ.   

ದಶಕಗಳ ಹಿಂದೆ ನನ್ನ ಶಾಲಾ ಮೇಷ್ಟರೊಬ್ಬರು ಹೇಳಿದ ಮಾತು. ವಿಚ್ಚೇದನ ಸರ್ವೇ ಸಾಮಾನ್ಯ ಪಾಶ್ಚಾತ್ಯರಲ್ಲಿ. ಒಬ್ಬಾಕೆ ತನ್ನ ಗಂಡನನ್ನು ತೊರೆದು ಇನ್ನೊಬ್ಬ ನನ್ನು ಮದುವೆಯಾಗುತ್ತಾಳೆ. ಆತನೂ ವಿಚ್ಛೇದಿತ. ಇಬ್ಬರಿಗೂ ತಮ್ಮ ಮಾಜಿ ಸಂಗಾತಿಗಳಿಂದ ಮಕ್ಕಳಿರುತ್ತವೆ. ಇವರು ಮದುವೆಯಾದ ನಂತರ ಇವರಿಗೂ ಮಕ್ಕಳಾಗುತ್ತವೆ. ಆಗ ಮಕ್ಕಳು ಜಗಳವಾಡುವಾಗ ಹೆಂಡತಿ ತನ್ನ ಗಂಡನನ್ನು ಉದ್ದೇಶಿಸಿ ಹೀಗೆ ಹೇಳುತ್ತಾಳೆ ” honey, my children and your children are fighting with “OUR” children” ಅಂತ.

* ತಿಳಿವಳಿಕೆಗೆ ತಿಳಿಸಾರು

ಬದುಕು ಎಷ್ಟು ಸುಲಭವೋ ಅಷ್ಟೇ ಸವಾಲುಗಳನ್ನು, ಸಂಕಷ್ಟಗಳನ್ನೂ ನಮ್ಮೆದುರು ತಂದು ನಿಲ್ಲಿಸುತ್ತದೆ.  ಮಹರ್ಷಿಗಳ, ಋಷಿಪುಂಗವರ, ಸಾಧಕರ ಮಾತುಗಳನ್ನು ನೆನೆದು, ಧೃತಿ ಗೆಡದೆ ಸಾಗಿದರೆ ಬಾಳು ಹಸನು, ಹಸನ್ಮುಖಿ. ಮಾನಸಿಕ ಕ್ಲೇಶಗಳು, ವಿಹ್ವಲತೆ, ನಿರಾಶೆ ಇವೆಲ್ಲಾ ಹೆಚ್ಚೂ ಕಡಿಮೆ ನಮ್ಮ ಸಂಪಾದನೆಯೇ. ಬಳುವಳಿಯಾಗಿ ಬಂದವೇನೂ ಅಲ್ಲ. ನಮ್ಮ ವಂಶವಾಹಿಯಲ್ಲೂ ಇಲ್ಲ. ಅತಿಯಾಸೆ, ಅನುಕಂಪವಿಲ್ಲದ ಬದುಕು, ನಮ್ಮದಾಗುವುದು ಬೇಡ.   

ಸುಪ್ರಸಿದ್ಧ ತತ್ವಜ್ಞಾನಿ ಕಾರ್ಲ್ ಜಂಗ್ ಹೇಳುತ್ತಾನೆ, ಹೃದಯದೊಳಕ್ಕೆ ನಾವು ಇಣುಕಿ ನೋಡಿಕೊಂಡಾಗಲೇ ನಮ್ಮ ದೃಷ್ಟಿ ತಿಳಿಯಾಗುವುದು ಎಂದು. ಯಾರು ತಮ್ಮ ಹೃದಯದ ಹೊರಕ್ಕೆ ನೋಡುತ್ತಾರೋ ಅವರು ಕನಸನ್ನು ಕಾಣುವರು, ಮತ್ತು ಯಾರು ತಮ್ಮ ಹೃದಯದೊಳಕ್ಕೆ ಇಣುಕಿ ನೋಡುತ್ತಾರೋ ಅವರು ಎಚ್ಚೆತ್ತುಕೊಳ್ಳುವರು. ಇಷ್ಟೆಲ್ಲಾ ಸರ್ಕಸ್ ಮಾಡಲು ನಮಗಿದೆಯೇ ವ್ಯವಧಾನ, ಸಮಯ? ದಿನವೂ ನಮ್ಮ ಚಟುವಟಿಕೆಗಳ ಬಗ್ಗೆ ನಾವು ತೆಗೆದುಕೊಳ್ಳಬೇಕು stock taking. taking stock of the situation ಅಂತಾರಲ್ಲ ಹಾಗೆ, ನಮ್ಮ ಅಂತರಂಗ ಬಹಿರಂಗದ stock taking.  ಸೂಫಿ ಸಂತ ರೊಬ್ಬರು ಈ ಮಾತನ್ನು ಹೇಳುತ್ತಾರೆ, ಎಂದಿಗೂ ಅಹಂಕಾರದಿಂದ ಬೇರೆಯವರ ಮೇಲೆ ಸವಾರಿ ಮಾಡಬೇಡ, ಹಾಗೂ ನಿನ್ನ ಅಡಿಯಾಳುಗಳ ಮೇಲಂತೂ ನಿನ್ನ ದರ್ಪ ಬೇಡವೇ ಬೇಡ. ನಿಮ್ಮಲ್ಲಿ ಅಂತರಂಗ, ಬಹಿರಂಗ ಶುದ್ಧಿಯಿಲ್ಲದಿದ್ದರೆ ಸೃಷ್ಟಿ ಕರ್ತನ ಬಳಿ ನೀವು ಸಲ್ಲುವುದಿಲ್ಲ.

ನಾವು ತಿಂಡಿಗೋ  ಊಟಕ್ಕೋ ಹೋಗುವ ರೆಸ್ಟುರಾಂಟ್ ನಲ್ಲಿ ಕೆಲಸಮಾಡುವ ಮಾಣಿ (ವೇಟರ್) ನ ಹತ್ತಿರದ ನಮ್ಮ ವರ್ತಿಸುವ ರೀತಿಯನ್ನು ನೋಡೋಣ. ಮುಖ ಸಿಂಡರಿಸಿಕೊಂಡು ಆರ್ಡರ್ ಕೊಡುವ ನಮಗೆ ಇಷ್ಟು ಜ್ಞಾನವೂ ಇರುವುದಿಲ್ಲ ಆರ್ಡರ್ ತೆಗೆದುಕೊಂಡು ಹೋಗಿ ಅಡುಗೆ ಮನೆಯಿಂದ ಆತ ನಮ್ಮ ಮುಂದೆ ತಂದಿಡುವುದು ನಾವು ಸೇವಿಸುವ ಆಹಾರವನ್ನು ಎಂದು. ಮಾಣಿ ಮಾಡುತ್ತಿರುವುದು ಅತ್ಯಂತ ಗೌರವಾರ್ಹವಾದ ಕೆಲಸ ಎಂದು ನಮಗೆಂದಾದರೂ ತೋಚಿದ್ದಿದೆಯೇ? ಅವನನ್ನು ಕೆಲಸಕ್ಕಿಟ್ಟ ಯಜಮಾನನಿಂದ ಹಿಡಿದು, ಅಡುಗೆ ಭಟ್ಟನವರೆಗೆ  ನಮ್ಮನೂ ಸೇರಿಸಿ ಅವನ ಪಾಡು ನೋಡಿ. ಹರಿದು ತಿನ್ನುವ ತೋಳಗಳು. ಮರುಕ ತೋರುವುದಿಲ್ಲವೇ? ಆದರೆ ಈ ರೀತಿಯ ನಡವಳಿಕೆ ನಮ್ಮ ದೇಶದಲ್ಲಿ ಅಥವಾ ದಕ್ಷಿಣ ಏಶಿಯಾದ ದೇಶಗಳಲ್ಲಿ ಮಾತ್ರ ಕಾಣಲು ಸಾಧ್ಯ. ಮುಂದುವರಿದ ದೇಶಗಳಲ್ಲಿ ಚೆನ್ನಾಗಿ ಕಲಿತವರು ಮಾಣಿಯ ಕೆಲಸ ಮಾಡುವುದರಲ್ಲಿ ಯಾವುದೇ ಅವಮಾನವನ್ನೂ ಕಾಣುವುದಿಲ್ಲ. ಏಕೆಂದರೆ ಮಾಣಿಯ ಕೆಲಸ ಹಲವು ಗುಣ ವೈಶಿಷ್ಟ್ಯ ಗಳನ್ನು ನಮಗೆ ಕಲಿಸುತ್ತದೆ. ಯಾವ ರೀತಿ ಅತಿಥಿಯನ್ನು ಬರಮಾಡಿಕೊಳ್ಳಬೇಕು, ಉಪಚರಿಸಬೇಕು, ಅವರಿಗಿಷ್ಟವಾದ ಆಹಾರದೊಂದಿಗೆ ಅವರನ್ನು ಹೇಗೆ  ಸತ್ಕರಿಸಬೇಕು, ಅವರೊಡನೆ ಯಾವ ರೀತಿ ವರ್ತಿಸಬೇಕು…..ಇತ್ಯಾದಿ. ಹೀಗಿರುವಾಗ ನಮಗೆ ಈ ಉದ್ಯೋಗದ ಬಗ್ಗೆ ತಾತ್ಸಾರ. ನಮ್ಮ ಸಂಸ್ಕಾರವೇ ಯಜಮಾನಿಕೆಯ ಸಂಸ್ಕಾರ ನೋಡಿ. ಕೈಯ್ಯಲ್ಲಿ ಒಂದಿಷ್ಟು ಕಾಸು ಓಡಾಡುತ್ತಿದ್ದರೆ ನೆಲ ಕಾಣುವುದಿಲ್ಲ ನಮಗೆ. ಯಜಮಾನ ಎಂದರೆ ಮುಖ ಗಂಟಿಕ್ಕಿಕೊಂಡಿರಬೇಕೆಂದು ಸಮಾಜದ ಅಲಿಖಿತ ನಿಯಮ. ನಾವು ಯಾವ ರೀತಿ ಇವರೊಂದಿಗೆ ವರ್ತಿಸುತ್ತೇವೆಯೋ ಅದೇ ರೀತಿಯೇ ನಮ್ಮ ಮಕ್ಕಳೂ ನಮ್ಮನ್ನು ಅನುಕರಿಸುವುದು.

ಸಂಪತ್ತು ಸ್ಥಿರವಲ್ಲ. ಅಗರ್ಭ ಶ್ರೀಮಂತರು ಯಾವುದಾದರೂ ಒಂದು ಕಾರಣಕ್ಕೆ ತಮ್ಮ ಸಂಪತ್ತನ್ನೆಲ್ಲಾ ಕಳೆದು ಕೊಂಡು ಬೀದಿಗೆ ಬಂದಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ. ೧೯೯೦ ರಲ್ಲಿ ಇರಾಕಿನ ಆಗಿನ ಅಧ್ಯಕ್ಷ ಸದ್ದಾಮ್ ಪಕ್ಕದ ಪುಟ್ಟ ರಾಷ್ಟ್ರ ಕುವಿತನ್ನು ಆಕ್ರಮಿಸಿ ಅದು ತನ್ನ ೧೯ ನೆ ಪ್ರಾಂತ್ಯ ವೆಂದು ಘೋಷಿಸಿ ವಿಶ್ವವನ್ನೇ ದಿಗಿಲುಗೊಳಿಸಿದ. ರಾತ್ರೋ ರಾತ್ರಿ ಕುವೈತ್ ನ ಅರಸ ದೇಶ ಬಿಟ್ಟು ಹೆಲಿಕಾಪ್ಟರ್ ನಲ್ಲಿ ಸೌದಿ ಗೆ ಬಂದಿಳಿದು ಆಶ್ರಯ ಬೇಡಿದ. ವಿಶ್ವದ ಅಗರ್ಭ ಶ್ರೀಮಂತ ರಲ್ಲಿ ಒಬ್ಬನಾಗಿದ್ದ ಅರಸ “ಅಲ್-ಸಬಾ” ಕೆಲವೇ ಘಂಟೆಗಳಲ್ಲಿ ಎಲ್ಲವನ್ನೂ ಕಳೆದು ಕೊಂಡ. ಅಲ್ಲಿಯವರೆಗೂ ಕುವೈತ್ ನ ಹಣ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ವಿದೇಶಿ ವಿನಮಯ ಹೊಂದಿತ್ತು. ಈ ಘಟನೆಯ ನಂತರ ಕುವೈತ್ ನ ಹಣಕ್ಕೆ ವಿಶ್ವದ ಅತ್ಯಂತ ಬಡ ರಾಷ್ಟ್ರದ ಹಣದ ಮುಂದೆ ಯಾವ ಬೆಲೆಗೂ ಬರದೇ ಹೋಯಿತು. ಕುವೈತಿ ನೋಟುಗಳು ಬೀದಿಗಳಲ್ಲಿ ಚೆಲ್ಲಾಟ, ಡ್ರಾ ಆದ ನಂತರ ಗೋತಾ ಹೊಡೆದ ಲಾಟರಿ ಟಿಕೆಟುಗಳು ರಸ್ತೆಯ ಮೇಲೆ ದಿಕ್ಕಾ ಪಾಲಾದಂತೆ. ತನ್ನ ದೇಶವನ್ನು ಮರಳಿ ಕೊಡಿಸುವಂತೆ ಸರಕಾರಗಳನ್ನು ಒತ್ತಾಯಿಸಲು ವಿಶ್ವದ ರಾಜಧಾನಿಗಳನ್ನು ಅಲೆದ, ಗೋಗರೆದ. ನೋಡಿ, ಕೇವಲ ಕೆಲವೇ ಘಂಟೆಗಳ ವಿದ್ಯಮಾನ ತಂದ ಅವಸ್ಥೆ.

ಈ ಅರಸ (ಮಧ್ಯ ಪ್ರಾಚ್ಯದ ಎಲ್ಲ ಅರಸರ ಕತೆಯೂ ಇದೇ) ತಾನು ಹೋಗುವ ಕಡೆಯೆಲ್ಲಾ ಅವನದೇ ಖಾಸಗಿ ಹೆಲಿ ಪ್ಯಾಡು, ಅರಮನೆಗಳು, ರೋಲ್ಲ್ಸ್ ರಾಯ್ಸ್ ಕಾರುಗಳು. ಧಿಡೀರನೇ ಎಲ್ಲವನ್ನೂ – ರಾಜ್ಯ, ಕೋಶ, ಪದವಿ, ಪೀಠ – ಕಳೆದುಕೊಂಡು ಬೀದಿಯಲ್ಲಿ ಅಸಹಾಯಕನಾಗಿ ತಲೆ ಮೇಲೆ ಕೈ ಹೊತ್ತು ಕೂರುವ ಬೇಡುವವನ ಪರಿಸ್ಥಿಗೆ ಬಂದು ಬಿಟ್ಟ. ಸಂಪತ್ತಿನ ಅಹಂಕಾರದಿಂದ ಕುವೈತಿ ಅರಸ ಒಂದು ಸಭೆಯಲ್ಲಿ ಸದ್ದಾಮನನ್ನು ಹೀನಾಯವಾಗಿ ನಡೆಸಿಕೊಂಡ, ಆದ್ದರಿಂದ ಸದ್ದಾಮ್ ಈ ಶಿಕ್ಷೆ ನೀಡಿದ ಎನ್ನುವವರೂ ಇದ್ದಾರೆ. ಅದೇನೇ ಇರಲಿ ಕೆಲ ತಿಂಗಳ ಕಾಲ ಅವನು ಬೀದಿ ಪಾಲಾದದ್ದು ವಾಸ್ತವವೇ.      

ಒಬ್ಬ ವ್ಯಕ್ತಿ ಅಸಹಾಯಕನಾಗಿ ಬೀದಿ ಬದಿಯ ಕಟ್ಟೆಯ ಮೇಲೆ ತಲೆಯನ್ನು ತನ್ನ ಕೈಗಳಲ್ಲಿ ಹೊತ್ತು ಅಳುತ್ತಾ ಕುಳಿತಿರುತ್ತಾನೆ. ದಾರಿ ಹೋಕನೊಬ್ಬ ಇದನ್ನು ಕಂಡು ಕನಿಕರ ಪಟ್ಟು ಅಲ್ಲೇ ಹತ್ತಿರದ ಹೂವಿನ ಅಂಗಡಿಗೆ ಹೋಗಿ ಒಂದು ಹೂವಿನ ಗುಚ್ಚವನ್ನು ಖರೀದಿಸಿ ಆ ವ್ಯಕ್ತಿಗೆ ಕೊಟ್ಟು, take heart my friend, life is still good, Lord will help you ಎಂದು ಸಾಂತ್ವನದ ಮಾತುಗಳನ್ನು ಆಡಿ ಹೋಗುತ್ತಾನೆ. ಈ spontaneous gesture ಆ ನೊಂದ ವ್ಯಕ್ತಿಗೆ ದೊಡ್ಡ ಅಸರೆಯನ್ನೇ ನೀಡುತ್ತದೆ. Dont sweat over small things (ಚಿಕ್ಕ ವಿಷಯಗಳ ದೊಡ್ಡದು ಮಾಡುವುದು ಬೇಡ) ಎಂದು ಹೇಳುವುದಿದೆ. ಆದರೆ ಇಂಥ ಸನ್ನಿವೇಶಗಳಲ್ಲಿ ಚಿಕ್ಕ- ಚಿಕ್ಕ, ಪುಟ್ಟ- ಪುಟ್ಟ, ಹೃದಯವನ್ನು ಅರಳಿಸುವ ಚಮತ್ಕಾರಗಳನ್ನು ನಾವು ಮಾಡಲು, ಪ್ರದರ್ಶಿಸಲು ತೊಡಗಿದರೆ ನಮ್ಮ worth ಕೂಡಾ ಚಮತ್ಕಾರಗಳನ್ನು ಸಾಧಿಸುತ್ತದೆ. ಈ ತೆರನಾದ ಚಮತ್ಕಾರಗಳನ್ನು ಅನಾವರಣ ಮಾಡಲು ನಮಗಿದೆಯೇ ವ್ಯವಧಾನ? where is time? we are in hurry. ಮೇಲೆ ಕೂತ, ನಮ್ಮ ನಾಗಾಲೋಟ ಗಮನಿಸುತ್ತಿರುವ ಆ “ಹರಿ” ನಮ್ಮ ಆಕಾಂಕ್ಷೆಗಳು ಪೂರ್ತಿಯಾಗುವ ಮುನ್ನ ನಮ್ಮನ್ನು ಕರೆಸಿಕೊಳ್ಳದಿರಲಿ.

ಒಬ್ಬ ವ್ಯಕ್ತಿ, ಒಬ್ಬನ ಬಳಿ ಹೋಗಿ ೧೦೦ ಡಾಲರ್ ನ ಚಿಲ್ಲರೆ ಕೇಳುತ್ತಾನೆ. ದೊಡ್ಡ ಮುಗುಳ್ನಗುವಿನೊಂದಿಗೆ ಓಹ್ ಸ್ಸಾರಿ, ನನ್ನಲ್ಲಿದ್ದಿದ್ದರೆ ಖಂಡಿತ ನಿನಗೆ ಕೊಡುತ್ತಿದ್ದೆ ಎಂದು ಹೇಳಿದಾಗ ಚಿಲ್ಲರೆಗೆ ಬಂದ ವ್ಯಕ್ತಿ ಅವನ ಮುಗುಳ್ನಗುವಿಗೆ ಮಾರು ಹೋಗಿ ನನಗಿನ್ನು ಚಿಲ್ಲರೆಯ ಅವಶ್ಯಕತೆಯಿಲ್ಲ ನಿನ್ನ ಆ ದೊಡ್ಡ, ಮನಃಪೂರ್ವಕವಾಗಿ ಬಂದ ಮುಗುಳ್ನಗುವೇ ನನಗೆ ಸಿಕ್ಕ ಚಿಲ್ಲರೆ, you made my day ಎಂದು ವಂದಿಸಿ ಹೋಗುತ್ತಾನೆ. ನೋಡಿ ಒಂದೇ ಒಂದು ನಗು, ಪುಕ್ಕಟೆಯಾಗಿ ದೈವದತ್ತವಾಗಿ, ulterior motive ಇಲ್ಲದೆ ಬಂದ, ಸೂರ್ಯನ ರಶ್ಮಿ ಗಳಂಥ ಬೆಚ್ಚಗಿನ ಮುಗುಳ್ನಗು. ಮುಖ ಸಿಂಡರಿಸಲು ನೂರಾರು ಸ್ನಾಯುಗಳು ಕೆಲಸ ಮಾಡುತ್ತವಂತೆ. ಮಂದಾಹಸಕ್ಕೆ ಕೆಲವೇ ಸ್ನಾಯುಗಳು.  

ಬಾಲಿವುಡ್ ತಾರೆಯೊಬ್ಬ (ಅಮೀರ್ ಖಾನ್ ಇರಬೇಕು) ಹೊರಗೆ ರೆಸ್ಟುರಾಂಟ್ ಗೆ ಹೋದರೆ ತಾನು  ಆರ್ಡರ್ ಮಾಡಿದ ಆಹಾರ ಹೆಚ್ಚು ಎಂದು ತೋರಿದರೆ ಅದನ್ನು ಹಾಳು ಮಾಡದೆ ಮನೆಗೆಂದು (take home) ಕಟ್ಟಿಸಿಕೊಂಡು ಹೊರಗೆಲ್ಲಾದರೂ ಕೂತು ಬೇಡುವವರಿಗೆ ಕೊಡುತ್ತಾನಂತೆ. ನಾವು? ಹೊಟ್ಟೆ ಬಿರಿಯುವ ಹಾಗೆ ತಿಂದು ಉಳಿದದ್ದನ್ನು ನಾಳೆ ಬೆಳಿಗ್ಗೆಗೋ, ಮಧ್ಯಾಹ್ನಕ್ಕೋ ಆಯಿತು ಎಂದು ಕಟ್ಟಿಸಿಕೊಂಡು ಹೋಗುತ್ತೇವೆ. ನಾಳೆಯ ಬಗ್ಗೆ ಅಷ್ಟೊಂದು ಖಾತರಿ. ಇಸ್ತ್ರಿ ಪೆಟ್ಟಿಗೆ ಒಂದು ವರ್ಷದ ಖಾತರಿಯೊಂದಿಗೆ ಬರುತ್ತದೆ, ಆದರೆ ಮನುಷ್ಯನ ಜೀವಕ್ಕೆ ಒಂದು ಸೆಕೆಂಡಿನ ಖಾತರಿಯೂ ಇಲ್ಲ ಎಂದು ಬಹುತೇಕ ಜನರಿಗೆ, ಬಹಳಷ್ಟು ಸಮಯ ಅರಿವೇ ಇರುವುದಿಲ್ಲ.     

ಮಾರುಕಟ್ಟೆಗಳ ತಿಕ್ಕಲುತನ ಮತ್ತು ಹೊಸ ಅಂತರ್ಜಾಲ ತಂತ್ರಜ್ಞಾನದ development ಗಳಿಂದ ಬಹಳಷ್ಟು ಜನ ಹಣ ಬಾಚಿಕೊಳ್ಳ ತೊಡಗಿದರು. ಸುಲಭವಾಗಿ ಬಂದ ಹಣವನ್ನು ಯಾವ ರೀತಿ ಬಳಸಬೇಕೆಂದು ಅರಿಯದೆ ಬೇಕಾ ಬಿಟ್ಟಿಯಾಗಿ ಖರ್ಚು ಮಾಡಿ, ಮಾರುಕಟ್ಟೆಯಲ್ಲಿ ಬೆಲೆಗಳು ಸಾಮಾನ್ಯ ಜನರಿಗೆ ಎಟುಕದಂತೆ ಮಾಡಿದರು. ಕಳೆದ ವರ್ಷದ ಆರ್ಥಿಕ ಸಂಕಷ್ಟದಲ್ಲಿ ಸಾಫ್ಟ್ ವೇರ್ ಕಂಪೆನಿಗಳು ಉದ್ಯೋಗಿಗಳಿಗೆ ಸೋಡಾ ಚೀಟಿ ಕೊಟ್ಟಾಗ ಸಂತಸ ಪಟ್ಟವರೂ ಇದ್ದಾರೆ. ದೊಡ್ಡ ದೊಡ್ಡ ಸಂಬಳ ತೆಗೆದು ಕೊಳ್ಳುವ ಈ ಉದ್ಯೋಗಿಗಳು ವರ್ತಕ ಹೇಳಿದ ಬೆಲೆ ಕೊಟ್ಟು ಸಾಮಾನು ಕೊಂಡರು. ಕಾಲದ ಸವಾಲನ್ನು ಎದುರಿಸಿದ “ಚೌಕಾಸಿ” ದೂರ ಉಳಿಯಿತು. what? haggling for bargain? NO!  ಪ್ರಳಯ ಡಿಕ್ಲೇರ್ ಆಯ್ತೇನೋ ಎನ್ನಬೇಕು, ಆ ತೆರನಾದ frantic shopping spree. baskin’ robbins, cafe coffee day, pub, pizza hut, glittering mall ಇವರ ತಾಣಗಳು.  ಇದು ಸಮಾಜದ ಕೆಲ ವರ್ಗಗಳ, ಕಡಿಮೆ ಸಂಬಳ ಪಡೆಯುವ, ಒಂದೊಂದು ರೂಪಾಯಿಯನ್ನೂ, ಪೈಸೆಯನ್ನೂ ಜೋಪಾನವಾಗಿ ಕಾಪಾಡಿ, ಬೇಕಿದ್ದ ಕಡೆ ಮಾತ್ರ ಖರ್ಚು ಮಾಡುವ ಜನರನ್ನು ಬಾಧಿಸಿ ಅವರು ಮನಸಾರೆ ಶಪಿಸುವಂತಾಯಿತು.

ಬದುಕಿನ ಪ್ರತಿ ಘಟ್ಟಗಳಲ್ಲೂ ನಮಗೆ ಸವಾಲುಗಳಿರುತ್ತವೆ. ಧನದಲ್ಲೂ, ಆರೋಗ್ಯದಲ್ಲೂ, ಅಧಿಕಾರದಲ್ಲೂ ಸವಾಲುಗಳಿರುತ್ತವೆ. ಇವನ್ನು ಸಮರ್ಥವಾಗಿ ಎದುರಿಸಲು ವಿಫಲರಾದಾಗ ಉಂಟಾಗುತ್ತದೆ ಕ್ಲೇಶ, ತರುತ್ತದೆ ಮತ್ಸರ. ಆದರೆ ಇಂಥ ಸಂಕೋಲೆಗಳಿಂದ ಬಿಡಿಸಿಕೊಳ್ಳಲು ಹೊರಬರಲು, ನಮಗೆ ವಿದೇಶೀ ಗುರುವಿನ ಅಗತ್ಯ ಬರಬಹುದೇ? ಬರಕೂಡದು. ಈ ವಿದೇಶಿ ಗುರು ಹೇಳಿಕೊಡುವುದು ಪೂರ್ವ ದಿಕ್ಕಿನ ಆದರ್ಶಗಳನ್ನು. ನಮ್ಮ ಅಜ್ಜ ಅಜ್ಜಿಯಂದಿರು ನಮಗೆ ಹೇಳಿ ಕೊಟ್ಟ ನೀತಿ ಕಥೆಗಳನ್ನು. ಸೂಫಿ ವರ್ಯರು, ಮುನಿಗಳು ಹೇಳಿದ ಸತ್ಯವನ್ನು. ನಮ್ಮ ಆದರ್ಶಗಳನ್ನು ನಮಗೆ ಹೇಳಿಕೊಡಲು ನಮ್ಮಿಂದ ಫೀಸನ್ನೂ ಪೀಕುತ್ತಾನೆ, ತನ್ನ ಮೂರನೇ ವಿವಾಹ ವಿಚ್ಛೇದನಕ್ಕಾಗಿ ಹೋರಾಡಿ ಬಂದ, ಸೂಟು ಬೂಟು ತೊಟ್ಟ, ತಲೆಗೆ ಫಳ, ಫಳ ಹೊಳೆಯುವ “ಜೆಲ್” ಹಚ್ಚಿಕೊಂಡ ವಿದೇಶೀ ಗುರು. ದೇಶೀ ಆದರ್ಶಗಳ ವಿದೇಶೀ ಗುರು.      

ಸರ್ವಿಸ್ ಗೆಂದು ಬಿಟ್ಟಿದ್ದ ನನ್ನ ಕಾರನ್ನು ತರಲು ಟ್ಯಾಕ್ಸಿ ಯಲ್ಲಿ ಹೋಗುವಾಗ ಚಾಲಕ ಹೇಳಿದ, ಈ ಅರಬರಿಗೆ ಹಣದ ಮದ ಸರಿಯಾಗಿ ಹತ್ತಿದೆ, ತಾವೇನು ಮಾಡುತ್ತಿದ್ದೇವೆ ಎಂದು ತಮಗೆ ಗೊತ್ತಿರುವುದಿಲ್ಲ. “ಕ್ಯಾಮೆಲ್ ಟು ಕ್ಯಾಮ್ರೀ” transformation ಕಣ್ಣಿವೆ ಇಕ್ಕುವಷ್ಟರಲ್ಲಿ ಆಯಿತು ಎಂದು. ಇದರರ್ಥ ಒಂಟೆ ಸವಾರಿ ಮಾತ್ರ ಮಾಡಿ ಗೊತ್ತಿದ್ದ ಅರಬ್ ಕ್ಯಾಮ್ರೀ (ದುಬಾರಿ ಕಾರು) ಕಾರಿನಲ್ಲಿ ಓಡಾಡ ತೊಡಗಿದಾಗ ಆದ confusion.

yes, money brings confusion, when priorities are lost. ಈ ಕಹಿ ಸತ್ಯ ನಮಗೆ ಅನ್ವಯಿಸದೆ ಇರಲಿ.