ನಾರ್ವೆ ದೇಶದಲ್ಲಿ ನಡೆದ ಸಾಮೂಹಿಕ ನರಸಂಹಾರಕ್ಕೆ ಒಂದು ವರ್ಷ

ನಾರ್ವೆ ದೇಶದಲ್ಲಿ ನಡೆದ ಸಾಮೂಹಿಕ ನರಸಂಹಾರಕ್ಕೆ ಒಂದು ವರ್ಷ ತುಂಬಿತು. ನಾರ್ವೆಯ ರಾಜಧಾನಿ ಮತ್ತು ಪಕ್ಕದ ದ್ವೀಪದ ಮೇಲೆ Anders Behring Breivik  ನಡೆಸಿದ ಭೀಕರ ಬಾಂಬ್ ಸ್ಫೋಟ ಮತ್ತು ಗುಂಡಿನ ಧಾಳಿಯಲ್ಲಿ ಸತ್ತವರು ೬೯ ಅಮಾಯಕ ಜನ. ಅದರಲ್ಲಿ ಬಹುತೇಕ ಹದಿಹರೆಯದ ಯುವಕ ಯುವತಿಯರು. ವಿಶ್ವವೇ ಬೆಚ್ಚಿ ಬೆರಗಾದ ಈ ನರಹತ್ಯೆ ನರಹನ್ತಕನಲ್ಲಿ ಯಾವುದೇ ಭಾವನೆಯನ್ನೂ ಹುಟ್ಟಿಸಲಿಲ್ಲ. ಮಂದಸ್ಮಿತನಾಗಿ, ಪೊಲೀಸರಿಗೆ ಶರಣಾದ, ಸಮಯ ಸಿಕ್ಕಿದ್ದಿದ್ದರೆ ಇನ್ನಷ್ಟು ಜನರನ್ನು ಕೊಲ್ಲುತ್ತಿದ್ದೆ ಎಂದೂ ಹೇಳಿದ ಈ ಕಟುಕ. ಇವನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗಳೂ ಈತನದು ಭಂಡ defiant  ನಿಲುವು. ಈತ white  supremacist . ಈ ಖಾಯಿಲೆಯೇ ೬೦ ರಿಂದ ೮೦ ಲಕ್ಷ ಯಹೂದ್ಯರನ್ನು ಮಾರಣ ಹೋಮ ಮಾಡಲು ಹಿಟ್ಲರ್ ನನ್ನು ಪ್ರಚೋದಿಸಿದ್ದು. anders ನ ಕ್ರೌರ್ಯಕ್ಕೆ ಬಲಿಯಾದ ಯುವಜನರ ಅಪರಾಧ ಏನೆಂದರೆ ಅವರು palestine ದೇಶದ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದ್ದು ಮತ್ತು ನಾರ್ವೆ ದೇಶಕ್ಕೆ ಬರುವ ವಲಸಿಗರನ್ನು ಬೆಂಬಲಿಸಿದ್ದು.

ಈ ತೆರನಾದ ನರಸಂಹಾರಕ್ಕೆ ಕಾರಣನಾದವನನ್ನು ಗಲ್ಲಿಗೆ ಏರಿಸೋಲ್ಲವಂತೆ ನಾರ್ವೆ ದೇಶ. ಗಲ್ಲು ಶಿಕ್ಷೆ ಈ ದೇಶದಲ್ಲಿ ಇಲ್ಲ. ಇವನಿಗೆ ಹೆಚ್ಚೆಂದರೆ ೨೧ ವರ್ಷ ಜೈಲು ಶಿಕ್ಷೆ. ಬಿಡುಗಡೆಯಾಗುವಾಗ ಅವನಿಗೆ ಇನ್ನೂ ಮಧ್ಯ ವಯಸ್ಸು ಆರಂಭ ವಾಗಿರುತ್ತದೆ ಅಷ್ಟೇ. ಈ ಹಿಂಸೆಯಲ್ಲಿ ಜೀವ ಕಳಕೊಂಡವರ ಹೆತ್ತವರು, ಸಂಬಂಧಿಕರು ಅಸಾಧಾರಣ ತಾಳ್ಮೆ ಪ್ರದರ್ಶಿಸಿದರು ಈ ಕಟುಕನನ್ನು ವಿಚಾರಣೆಗೆ ತಂದಾಗ. ಇವನ ಕಡೆ ಕಣ್ಣೆತ್ತಿ ಸಹ ನೋಡಲಿಲ್ಲ, ನೀನು ನಮ್ಮ ಪಾಲಿಗೆ ಅಸ್ತಿತ್ವದಲ್ಲಿಲ್ಲದ ಜೀವಿ ಅಷ್ಟೇ ಎಂದು ಪರೋಕ್ಷವಾಗಿ ಹೇಳಿದರು ಜನ. ಧ್ವೇಷಗ್ರಸ್ಥ, ಹಗೆ ವರ್ತಕ ಸಮೂಹಕ್ಕೆ ನಾಗರೀಕ ಸಮಾಜ ನಡೆಸಿಕೊಳ್ಳ ಬೇಕಾದ ತಕ್ಕುದಾದ ನಡವಳಿಕೆ. ಇನ್ನು ಈತ ತನ್ನ ದಿನಗಳನ್ನು ಕಳೆಯಬೇಕಾದ ಜೈಲಿನ ಕತೆ ಹೀಗೆ. ನಾರ್ವೆ ದೇಶದ ಜೈಲುಗಳು ಪ್ರಪಂಚದ ಲ್ಲೇ ಅತ್ಯಂತ ಸುಖಕರ ಜೈಲುಗಳಂತೆ. ಕೈದಿಗಳಿಗೆ ಬೇಸರವಾದಾಗ ಅಧಿಕಾರಿಗಳು ಹೊರಗಿನಿಂದ ಅವನಿಗೆ ಮಿತ್ರರನ್ನು ಹೊಂದಿಸುತ್ತಾರಂತೆ. ಎಂದಿಗೂ ಅಪರಾಧಿ ಏಕಾಂತದಲ್ಲಿ ಇದ್ದು ಬಳಲಬಾರದಂತೆ. ಏಕಾಂಗಿತನ ಕ್ರೌರ್ಯವಂತೆ.  ವಾಹ್, ಎಂಥಾ ವ್ಯವಸ್ಥೆ.  ಇಷ್ಟೆಲ್ಲಾ ಅನುಕೂಲ ನಮಗೆ ನಮ್ಮ ಮನೆಯೊಳಗೂ ಸಿಗಲಿಕ್ಕಿಲ್ಲ.

ಹೊಸ ವರ್ಷ, ಹೊಸ ಹರ್ಷ

ಮತ್ತೊಂದು ವರ್ಷ ನಮ್ಮೆಡೆಯಿಂದ ಮರೆಯಾಯಿತು. ಕಳೆದ ವರ್ಷದ ಸಾವು ನೋವುಗಳು ಅಸಂಖ್ಯ. ಅದರಲ್ಲಿ ಜಪಾನಿನ ಸುನಾಮಿಯ ಪಾತ್ರ ಹಿರಿದು. ತದನಂತರ ಬಿನ್ ಲಾದೆನ್ ನ ಹತ್ಯೆ ಮತ್ತು ಹಲವಾರು ಗಣ್ಯರ ಸಾವು. ಇವೆಲ್ಲದರ ಮಧ್ಯೆ ನಾವು ನಮಗೆ ಮೋಸಮಾಡಿ ಕೊಳ್ಳಲೆಂದೇ ಮಾಡಿಕೊಳ್ಳುವ “ರೆಸಲ್ಯೂಶನ್” ಗಳು ‘ಲೂಸ್ ಮೋಶನ್’ ಗಳಾಗಿ ಜನವರಿ ಮೂರನೇ ವಾರದಲ್ಲೇ ವಿಸರ್ಜಿತ. ಆದರೂ ನಾವು ಸೋಲನ್ನು ಒಪ್ಪಿಕೊಳ್ಳೊಲ್ಲ. ಆದರೆ ಒಂದು ಮಾತು ನೆನಪಿರಲಿ, ಚಿಕ್ಕ ಪುಟ್ಟ resolution ಗಳು ಇರಲಿ, ಅದರಲ್ಲೂ ಕೈಗೆಟುಕುವಂಥದ್ದಾದರೆ ಇನ್ನೂ ಚೆನ್ನು. ಮಕ್ಕಳು ಕೇಕ್ ಮೇಲಿನ icing ಮಾತ್ರ ಕೆರೆದು ತಿನ್ನುವಂತೆ. ೨೦೧೨ ಕ್ಕೆ ಹೊಸ ಭರವಸೆಯೊಂದಿಗೆ ಸುಸ್ವಾಗತ ಬಯಸೋಣ, “ಅವರೆಲ್ಲಾ ಭಿನ್ನ ಭಿನ್ನ ರಾಗಿರುತ್ತ್ತಾರೆ, ಒಬ್ಬರಾದ ಮೇಲೆ ಒಬ್ಬರಂತೆ ಬರುತ್ತಾರೆ. ನಮ್ಮ ಜೊತೆ ಜೊತೆಗೇ ಸಾಗುತ್ತಾ ಇರುತಾರೆ ಮತ್ತೆ ತಮ್ಮ ಕರ್ತವ್ಯ ಮುಗಿಸಿ ಮರೆಯಾಗುತ್ತಾರೆ” ಈ ಮಾತುಗಳು ನಮ್ಮ ಪ್ರೀತಿಯ ಸಂಪದ ವೆಬ್ ತಾಣಕ್ಕೆ ಬರೆಯುವ ಹಿರಿಯ ಲೇಖಕರದು. ಡಿಸೆಂಬರ್ ೩೧ ರ ಸೂರ್ಯಾಸ್ತದೊಂದಿಗೆ ಗಂಟು ಮೂಟೆ ಕಟ್ಟುವ “ವರುಷ” ಎನ್ನುವ ಅತಿಥಿಯ ‘ಬರು – ಹೋಗು’ವಿಕೆ ಗೆ ಹೋಲಿಸಿ ಬರೆದ ಸುಂದರ ಕವನದಿಂದ ಹೆಕ್ಕಿದ ಸಾಲುಗಳು. ೨೦೧೨ ಸಮಸ್ತ ಕನ್ನಡಿಗರಿಗೂ, ಭಾರತೀಯರಿಗೂ ಶುಭಕರವಾಗಲೀ, “ಕನ್ನಡ ನಾಡು ಗಂಧದ ಬೀಡು” ಎನ್ನುವ ಹೆಸರಿಗೆ ತಕ್ಕುದಾಗಿ ನಡೆದು ಕೊಳ್ಳುವ ಔದಾರ್ಯ, ಸನ್ಮನಸ್ಸು ನಮ್ಮೆಲ್ಲರದಾಗಲಿ, ಭಾರತವೆಂಬ ವೈಭವ ಮತ್ತಷ್ಟು ವೈಭವೀಕೃತಗೊಳಿಸುವತ್ತ ನಮ್ಮ ಪ್ರಯತ್ನ, ಶ್ರಮ ನಿರಂತರವಾಗಿರಲಿ ಎನ್ನುವ ಹಾರೈಕೆಯೊಂದಿಗೆ 2012 ಕ್ಕೆ ತಳಿರು ತೋರಣ ಕಟ್ಟೋಣ.

ಮೂರು ವರ್ಷಕ್ಕೇ ಮುಪ್ಪಾದ ‘ಬ್ಲ್ಯಾಕ್ ಬ್ಯೂಟಿ’

ನನ್ನ LG ಲ್ಯಾಪ್ ಟಾಪ್, a thing of beauty is a joy forever ಆಗಬಹುದು ಎನ್ನುವ ನಿರೀಕ್ಷೆಯೊಂದಿಗೆ ಸುಮಾರು ೪೨ ಸಾವಿರ ರೂಪಾಯಿ ಪೀಕಿ ಮೂರು ವರ್ಷಗಳ ಹಿಂದೆ ಕೊಂಡು ಕೊಂಡೆ. 13.3 ಇಂಚು ಪರದೆಯ (ನನಗೆ ಚಿಕ್ಕ ಸೈಜ್ ಇಷ್ಟ, ಕಡಿಮೆ ತೂಕ ವಾದ್ದರಿಂದ) ಕೋರ್ 2 DUO, ೨ GB RAM ೧೬೦ GB ಹಾರ್ಡ್ ಡಿಸ್ಕ್, ಅದೂ – ಇದೂ, ಹಾಳೂ – ಮೂಳೂ, ಇರೋ ಚೆಂದದ ಯಂತ್ರ. ಹಾಂ, ಇದಕ್ಕೆ ನೀಲಿ ಹಲ್ಲೂ (BLUE TOOTH) ಸಹ ಇತ್ತು. ಒಟ್ಟಿನಲ್ಲಿ OWNER’S PRIDE ಎಂದು ಸಲೀಸಾಗಿ ಹೇಳಬಹುದು. ಹೊಸತರಲ್ಲಿ ಅಗಸ ಎತ್ತೆತ್ತಿ ಒಗೆದ ಎನ್ನುವ ರೀತಿಯಲ್ಲಿ ತಂದ ಹೊಸತರಲ್ಲಿ ಜೋಪಾನವಾಗಿ ಇಟ್ಟುಕೊಂಡೆ. ಈ ಪಾಪಿ ಮೆಶೀನ್ ತರುವ ಬದಲಾವಣೆಯ ಅರಿವಿಲ್ಲದೆ ನನ್ನ ಮಡದಿಯೂ ಹುರುಪಿನಿಂದ ಸ್ವಾಗತಿಸಿದಳು. ಮೊಬೈಲ್ ನ ಹುಚ್ಚು ಅಂಟಿಸಿಕೊಂಡು ನನ್ನ ಬೆಲೆಬಾಳುವ N8 ಮೊಬೈಲ್ ನಲ್ಲಿ ಸಂಗೀತ ಕೇಳುತ್ತಾ ಫೋನನ್ನು TOILET ಗುಂಡಿಯಲ್ಲಿ ಸಮಾಧಿ ಮಾಡಿದ್ದ ನನ್ನ (ಆಗ ೪ ವರ್ಷ ಪ್ರಾಯದ) ಮಗನ ಕಣ್ಣಿನಿಂದ ದೂರ ಇಟ್ಟುಕೊಂಡು ಸಾಕುತ್ತಿದ್ದೆ. ಅವನ ಕಣ್ಣು ತಪ್ಪಿಸಿದರೂ ನನ್ನ ಪುಟ್ಟ ೯ ತಿಂಗಳ ಪೋ(ಕ)ರಿಯ ಕಿತಾಪತಿಯಿಂದ ನನ್ನ ಲ್ಯಾಪ್ ಟಾಪ್ ಅನ್ನು ಉಳಿಸಲು ಆಗಲಿಲ್ಲ ನನಗೆ. ಸೋಫಾದ ಮೇಲೆ ಇಟ್ಟು ಊಟಕ್ಕೆಂದು ಕೂತಾಗ ಯಾವಾಗ ಪ್ರತ್ಯಕ್ಷ ಳಾದಳೋ ಸೋಫಾದ ಹತ್ತಿರ, ಎಳೆದು ನೆಲದ ಮೇಲೆ ಕೆಡವಿದಳು. ಅಯ್ಯೋ ನನ್ನ ನಲವತ್ತೆರಡು ಸಾವಿರ ಭಸ್ಮ ಮಾಡಿದಳಲ್ಲಾ ಎಂದು ಹೋಗಿ ನೋಡಿದರೆ ಮೇಲಿನ ಎರಡು, ಕೆಳಗಿನ ಎರಡು ಹಲ್ಲುಗಳನ್ನು ಬಿಟ್ಟು ಸವಾಲೆಸೆಯುವಂತೆ ನನ್ನತ್ತ ನೋಡಿದಳು. ಲ್ಯಾಪ್ ಟಾಪ್ ನ ಸ್ಕ್ರೀನ್ ಸುತ್ತ ಇರುವ ಪ್ಲಾಸ್ಟಿಕ್ ಫ್ರೇಂ ಕ್ರ್ಯಾಕ್. ಇಷ್ಟು ಚಿಕ್ಕ ಪ್ರಾಣಿಯನ್ನು ಬಡಿಯುವುದಾದರೂ ಹೇಗೆ ಎಂದು ಬರೀ ಕೆಂಗಣ್ಣಿನಿಂದ ಅವಳತ್ತ ನೋಡಿ ಲ್ಯಾಪ್ಟಾಪ್ ಅವಳ ಕೈಗೆ ಸಿಗದ ರೀತಿಯಲ್ಲಿ ಇಟ್ಟು ಮರಳಿ ಡಿನ್ನರ್ ಟೇಬಲ್ ಗೆ ಬಂದಾಗ ಅರ್ಧಾಂಗಿನಿ ಗೆ ಸಂತೋಷವಾದ ಸುಳಿವು ಸಿಕ್ಕಿತು. ನಾನು ಲ್ಯಾಪ್ ಟಾಪ್ ಮೇಲೆ ಕುಳಿತು ಆನ್ ಮಾಡುವುದರ ಒಳಗೆ ಅವಳಲ್ಲಿ ಭೂತ ಆವರಿಸಿ ಬಿಡುತ್ತೆ. ಹಗಲಿಡೀ ಆಫೀಸು, ಸಂಜೆಯಾದರೆ ಲ್ಯಾಪ್ ಟಾಪ್ ಎಂದು ಗೊಣಗುತ್ತಿದ್ದಳು. ಈಗ ಲ್ಯಾಪ್ ಟಾಪ್ ಬಿದ್ದ ಸದ್ದು ಕೇಳಿದಾಗ ಅವಳಿಗೆ ಸಂತಸ, ಹಾಳಾಗಿ ಹೋಯಿತು ಎಂದು. ನನ್ನ ಲ್ಯಾಪ್ ಟಾಪ್ ಅವಳಿಗೆ ಸವತಿಯಂತೆ ಕಾಣಲು ಶುರು ಮಾಡಿತು.

 ಲ್ಯಾಪ್ ಟಾಪ್ ಕೊಂಡ ಈ ಮೂರು ವರ್ಷಗಳ ಅವಧಿಯಲ್ಲಿ ನನ್ನ ಮಗ ಅದರ ಮೇಲೆ ಪೂರ್ಣ ಅಧಿಕಾರ ಸ್ಥಾಪಿಸಿದ, ಮಗಳು ಅದರ ನಾಲ್ಕಾರು ಕೀಲಿಗಳನ್ನು ಕಿತ್ತು ಕೈಗೆ ಕೊಟ್ಟಳು,  ನಾನು ಸಾಕಷ್ಟು ಹುರುಪಿನಿಂದ ನನ್ನ  ಹಳೇ ಸೇತುವೆ ಬ್ಲಾಗಿನಲ್ಲಿ ಬ್ಲಾಗಿಸಿದೆ, ನನ್ನ literary sojourn ಗೆ ಸಂಗಾತಿಯಾಗಿ, ಪ್ರೋತ್ಸಾಹಿಸಿದ ನನ್ನ ಪ್ರೀತಿಯ ಆನ್ ಲೈನ್ ಸಾಹಿತಿಗಳ ತಾಣ ಸಂಪದ ದೊಂದಿಗಿನ ನಂಟು ಇನ್ನಷ್ಟು ಗಾಢವಾಯಿತು, ನನ್ನ ನಿರಂತರ ಟ್ವೀಟ್ಗಳಿಂದ twitter ಶ್ರೀಮಂತ ವಾಯಿತು, ನನ್ನ ಮಡದಿಯ ಕೆಂಗಣ್ಣಿಗೆ ತುತ್ತಾಗಿ ಮಿರ ಮಿರ ಮಿಂಚುತ್ತಿದ್ದ ಅದರ ಕಪ್ಪು ಬಣ್ಣದ ಹೊಳಪು ಕಾಂತಿ ಹೀನವಾಯಿತು…… ಇಷ್ಟೆಲ್ಲಾ ಆದ ನಂತರ ಸಿಸ್ಟಮ್ ಸಹ ೬೦ ರ ದಶಕದ ಅಂಬಾಸಿಡರ್ ಕಾರಿನ ರೀತಿ ವರ್ತಿಸಲು ಶುರು ಮಾಡಿತು. laptop ನ ಆಯುಷ್ಯ ಬರೀ ಮೂರು ಅಥವಾ ನಾಲ್ಕು ವರ್ಷ ಗಳೋ? ನಿಮಗೂ ಇದರ ಅನುಭವ ಆಗಿದೆಯೇ? ಪ್ರತೀ ಮೂರು ನಾಲ್ಕು ಅಥವಾ ಹೆಚ್ಚೆಂದರೆ ಐದು ವರ್ಷಗಳಿಗೊಮ್ಮೆ ಹತ್ತಾರು ಸಾವಿರ ರೂಪಾಯಿ ಹಾಕಿ ಲ್ಯಾಪ್ ಟಾಪ್ ಕೊಳ್ಳಲು ಸಾಧ್ಯವೋ?

ಮೂರು ವರ್ಷಗಳಲ್ಲೇ ಮುಪ್ಪಾದ ಯಂತ್ರವನ್ನು ನನ್ನ ಏಳು ವರ್ಷದ ಮಗನಿಗೆ ಕೊಟ್ಟು ಮ್ಯಾಕ್ ಅಥವಾ vaio ಕೊಳ್ಳುವ ಆಸೆ ಈಗ. ಮಡದಿ ಸಹ ಈಗ ಮತ್ತಷ್ಟು matured ಆಗಿರೋದ್ರಿಂದ ಹಳೇ ಲ್ಯಾಪ್ ಟಾಪ್ ಗೆ ಬಂದ ದುಃಸ್ಥಿತಿ ಹೊಸ ಮೆಶೀನಿಗೆ ಬರಲಾರದು ಎನ್ನೋ ಭರವಸೆ ಇದೆ. ರಾಜಕಾರಣಿಯ ಆಶ್ವಾಸನೆಯ ರೀತಿ ಹುಸಿಯಾಗದಿದ್ದರೆ ಸಾಕು ನನ್ನ ಭರವಸೆ.      

 

ತಿಂಗಳ ತುಣುಕು

ಇಂದು ಆಗಸ್ಟ್ ತಿಂಗಳ ಆರಂಭ. ನಮಗೆ ಸ್ವಾತಂತ್ರ್ಯ ಸಿಕ್ಕಿದ, ಬಿಳಿಯರಿಂದ ಮುಕ್ತಿ ಸಿಕ್ಕಿದ ಮಾಸ. ಅಷ್ಟೇ ಅಲ್ಲ ನಾನು ಹುಟ್ಟಿದ ತಿಂಗಳೂ ಹೌದು. ಹಾಗಾಗಿ ಈ ತಿಂಗಳಿಗೆ ವಿಶೇಷ ಪ್ರಾಶಸ್ತ್ಯ. ಆಗಸ್ಟ್ ತಿಂಗಳಲ್ಲೇ ಇಂಗ್ಲೆಂಡಿನ ಜನರ ಅಚ್ಚುಮೆಚ್ಚಿನ ರಾಜಕುಮಾರಿ, ರಾಜಕುಮಾರ ಚಾರ್ಲ್ಸ್ ರವರ ಪತ್ನಿ ಡಯಾನ ಅಪಘಾತವೊಂದರಲ್ಲಿ  ನಿಧನ (ಆಗಸ್ಟ್ ೩೧, ೧೯೯೭) ಹೊಂದಿದ ದಿನ.  

ರೋಮ್ ಚಕ್ರವರ್ತಿ “ಆಗಸ್ಟಸ್ ಕಸೆಸರ್” ಸ್ಮರಣಾರ್ಥ ಸೆಕ್ಸ್ಟಿಲಿಸ್ ಎಂದು ಇದ್ದ ಹೆಸರನ್ನು ಆಗಸ್ಟ್ ಎಂದು ನಾಮಕರಣ ಮಾಡಲಾಯಿತು. ಈ ಚಕ್ರವರ್ತಿ ಆಳುವಾಗ ಎಂಟನೆ ತಿಂಗಳಿನಲ್ಲಿ ಮಹತ್ವ ಪೂರ್ಣ ಘಟನೆಗಳು ಜರುಗಿದ್ದರಿಂದ ಆತನ ಗೌರವಾರ್ಥ ಆಗಸ್ಟ್ ಎಂದು ಹೆಸರು ಬಂದಿದ್ದು.

ಆಗಸ್ಟ್ ತಿಂಗಳಿನಲ್ಲೇ ಅಮೆರಿಕೆಯ ಕರಿಯರ ನಾಯಕ ಮಾರ್ಟಿನ್ ಲೂಥರ್ ಕಿಂಗ್ i have a dream ಎನ್ನುವ ಅದ್ಭುತ ಭಾಷಣ ಮಾಡಿ ಅಮೇರಿಕ ಕರಿಯರನ್ನು ನಡೆಸಿಕೊಂಡ ಬಗೆಯನ್ನು ಜನಸ್ತೋಮಕ್ಕೆ ವಿವರಿಸಿದರು.

ಆಗಸ್ಟ್ ತಿಂಗಳಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆ ಮತ್ತು ಜಮೈಕಾ ದೇಶಕ್ಕೂ ಆಗಸ್ಟ್ ತಿಂಗಳಿನಲ್ಲೇ ಬ್ರಿಟಿಷರ ದಾಸ್ಯದಿಂದ ಮುಕ್ತಿ ಸಿಕ್ಕಿದ್ದು.

ಜೋಸೆಫ್ ಪ್ರೀಸ್ಟ್ಲಿ ಆಮ್ಲಜನಕ ವನ್ನ ಕಂಡು ಹಿಡಿದಿದ್ದು ೧೭೭೪, ಆಗಸ್ಟ್ ತಿಂಗಳಿನಲ್ಲಿ.