ಚಿಲಿಪಿಲಿಗುಟ್ಟುವಾ, ಬನ್ನಿ

twitter logo2twitter logo 1

ಹಕ್ಕಿಗಳು ನಿರಾಯಾಸವಾಗಿ, ನಿರಾತಂಕವಾಗಿ ಆಗಸದಲ್ಲಿ ಹಾರುವುದನ್ನು ಕಂಡ ದ್ವಿಚಕ್ರ ವಾಹನ ರೆಪೇರಿ ಮಾಡಿ ಬದುಕುತ್ತಿದ್ದ wright ಸೋದರರಿಗೆ ತಾವೂ ಅವುಗಳಂತೆ ಹಾರಬೇಕು ಸ್ವಚ್ಛಂದವಾಗಿ ಎಂದು ತೋರಿ ವಿಮಾನ ಕಂಡುಹಿಡಿದು ಇತಿಹಾಸ ನಿರ್ಮಿಸಿದರು. ವಿದ್ಯುತ್ ತಂತಿಗಳ ಮೇಲೂ, ಬೇಲಿಗಳ ಮೇಲೂ ಸಾಲಾಗಿ ಕೂತು, ಕಣ್ಣರಳಿಸಿ, ಪುಟ್ಟ ಕೊಕ್ಕು ತುಂಬಾ ಹರಟೆ ಕೊಚ್ಚುವ ಗುಬ್ಬಚ್ಚಿಗಳಿರಬೇಕು twitter ಎನ್ನುವ ಆಧುನಿಕ ಯುಗದ ಗೀಳಿಗೆ ನಾಂದಿ ಹಾಡಿದ್ದು. ಅತ್ಯಂತ ವೇಗವಾಗಿ ವಿಶ್ವವ್ಯಾಪಿಯಾಗಿ ಬೆಳೆಯುತ್ತಿರುವ ಈ twitter ಎನ್ನುವ ವಿದ್ಯಮಾನ ಹಿರಿಯರು ಕಿರಿಯರು, ಬಡವ ಬಲ್ಲಿದ, ರಾಜಕಾರಣಿ, ನಟ ನಟಿಯರು ಎನ್ನದೆ ಎಲ್ಲರನ್ನೂ ಮರುಳು ಮಾಡಿ ಒಂದು ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಸೊಲ್ಪವೇ ಸಮಯದಲ್ಲಿ ಈ ರೀತಿ ಅಗಾಧವಾಗಿ twitter ಬೆಳೆಯಲು ಕಾರಣವೇನಿರಬಹುದು?

ಕಾರಣ ಇಷ್ಟೇ… ease of use ಮತ್ತು ಮನುಷ್ಯನಲ್ಲಿಯ ಹರಟೆಯ ಚಾಳಿ. ಜೋಕೆ, ಹರಟೆಗೂ ಇದೆ ಕಡಿವಾಣ, twitter ನಲ್ಲಿ. ಅದೆಂದರೆ ಹೇಳಬೇಕಾದ್ದನ್ನು ಕೇವಲ ೧೪೦ ಅಕ್ಷರಗಳಲ್ಲಿ ಹೇಳಿ ಮುಗಿಸಬೇಕು. ಈ ಕಡಿವಾಣ ಪ್ರತಿ ಪೋಸ್ಟ್ ಗೆ ಅನ್ವಯ. ಎಷ್ಟು ಪೋಸ್ಟ್ ಗಳನ್ನಾದರೂ ಕಳುಹಿಸಬಹುದು.

ಅಮೆರಿಕೆಯ biz stone, jack dorsey ಮತ್ತು evan ವಿಲಿಯಂಸ್ ಇವರುಗಳು ಸ್ಥಾಪಕರು. ಮಾರ್ಚ್ ೨೧, ೨೦೦೬ ರಲ್ಲಿ ಆರಂಭಗೊಂಡ twitter ನ ಚೊಚ್ಚಲ ಮೆಸೇಜ್ ” “just setting up my twttr”. ಇದನ್ನು ಕಳಿಸಿದ್ದು Jack Dorsey. ಓದಿದ ಹೊಸ ಪುಸ್ತಕ ಬಗ್ಗೆಯೋ, ನೋಡಿದ ಸಿನಿಮಾದ ಬಗ್ಗೆಯೋ, ತಿಂದ ತಿಂಡಿಯ ಬಗ್ಗೆಯೋ, ನಿಮ್ಮ ಚಿಣ್ಣರ ತುಂಟತನದ ಮಾತುಗಳ ಬಗ್ಗೆಯೋ ನೀವು ಬರೆಯಬಹುದು. ಅಷ್ಟೇ ಅಲ್ಲ ನಿಮ್ಮ ಸುತ್ತ ಮುತ್ತ ನಡೆದ ರಾಜಕೀಯ ವಿದ್ಯಮಾನಗಳು, ಅನಾಹುತಗಳು ಹೀಗೆ ವಿಶ್ವಕ್ಕೆ ಹೇಳಬೇಕಾದ್ದನ್ನು twiiter ಮೂಲಕ ಹೇಳಿ. ಕಳೆದ ವರ್ಷದ ಅಮೆರಿಕೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ದಿಗಳು twitter ಅನ್ನು ಯಥೇಚ್ಚವಾಗಿ (ಪುಕ್ಕಟೆ ಅಲ್ವೇ, ಅದಕ್ಕೆ) ಬಳಸಿದರು. ಕ್ಯಾಲಿಫೋರ್ನಿಯಾ ದಲ್ಲಿ ಕಾಡ್ಗಿಚ್ಚು ಹಬ್ಬಿದಾಗ ವಿಶ್ವಕ್ಕೆ ಗೊತ್ತಾಗಿದ್ದು twitter ಮೂಲಕ. ಅನಾಹುತ ಸ್ಥಳಕ್ಕೆ ambulance ಮತ್ತು fire fighters ಗಳಿಗಿಂತಲೂ ಮೊದಲು ಆಗಮಿಸುವುದು twitter. new york ನಗರದ ಹಡ್ಸನ್ ನದಿಯ ಮೇಲೆ ವಿಮಾನ ಎರಗಿದಾಗಲೂ, ಮುಂಬೈ ನಗರದಲ್ಲಿ ಭಯೋತ್ಪಾದಕರು ರಕ್ತಪಾತ ಹರಿಸಿದಾಗಲೂ twitter ಸೊಗಸಾಗಿ ವರದಿ ಮಾಡಿ ವಿಶ್ವದ ಗಮನ ಸೆಳೆಯಿತು.

ಇತ್ತೀಚಿಗೆ ಇರಾನಿನ ಚುನಾವಣೆಯಲ್ಲಿ ಮೋಸ ನಡೆಯಿತೆಂದು ಅಲ್ಲಿನ ಜನ ಪ್ರತಿಭಟಿಸಿ ಬೀದಿಗಿಳಿದಾಗ twitter ಈ ವಿದ್ಯಮಾನವನ್ನು ಜಗಜ್ಜಾಹೀರು ಮಾಡಿತು. twitter ಬರವಣಿಗೆಯಲ್ಲಿ ಆಸಕ್ತಿ ಇರುವವರಿಗೆ ಒಂದು ವರದಾನ ಎಂದೂ ಹೇಳಬಹುದು. ಕೆಲವರಿಗೆ ಬರವಣಿಗೆಯನ್ನು ಹೇಗೆ ಆರಂಭಿಸಬೇಕು ಎಂದು ತಿಳಿದಿರುವುದಿಲ್ಲ. ಅಂಥವರು ಆರಂಭದ ಹೆಜ್ಜೆಯಂತೆ twitter ನಲ್ಲಿ ಬರೆದು ಮುಂದೆ ತಮ್ಮದೇ ಆದ ಬ್ಲಾಗ್ ಆರಂಭಿಸಿಕೊಳ್ಳಬಹುದು.

ಇಷ್ಟೆಲ್ಲಾ ಹೇಳಿಯೂ convince ಆಗ್ಲಿಲ್ವಾ? ಒಮ್ಮೆ ಪ್ರಯತ್ನಿಸಿ ನೋಡಿ. ಮಿತ್ರರೊಂದಿಗೆ, ನೆಂಟರೊಂದಿಗೆ ಅನುಭವ ಹಂಚಿಕೊಳ್ಳಲು twitter ಎಷ್ಟು ಸಹಕಾರಿ ಮತ್ತು ಮೋಜು ಎಂದು ತಿಳಿಯುತ್ತದೆ.