ಈ ಬಾಡಿ ಬಿಲ್ಡರ್ ಗೆ ಬರೀ ೯೩ ವರ್ಷ ಕಣ್ರೀ…

ಹೌದು ಲೆಕ್ಕ ತಪ್ಪಿಲ್ಲ, ೩೯ ಅಲ್ಲ, ಪೂರ್ತಿ ೯೩.  ನೈನ್ಟೀ ತ್ರೀ. ೯೩ ರ ಡಾಕ್ಟರ್ ಚಾರ್ಲ್ಸ್ ಯುಗ್ಸ್ಟರ್ ಇಳಿ   ವಯಸ್ಸಾದರೂ ಸ್ಫೂರ್ತಿ ಮತ್ತು ಆರೋಗ್ಯದ ಚಿಲುಮೆ. ‘ಜಿಮ್’ ಒಳಕ್ಕೆ ಹೊಕ್ಕರೆ ೨೧ ವರ್ಷದ ಪೋರರೂ ಸದ್ದಿಲ್ಲದೇ ಗಂಟು ಕಟ್ಟಬೇಕು ಇವರ ವರ್ಕ್ ಔಟ್ ನೋಡಿ. ಸಾಧಾರಣವಾಗಿ ೭೦ ದಾಟುತ್ತಿದ್ದಂತೆ ಜನ ಕೋಲು ಹಿಡಿಯುತ್ತಾರೆ, ಗೋಡೆ ಸವರುತ್ತಾ ನಡೆಯುತ್ತಾರೆ, ವೀಲ್ ಚೇರ್ ಗುಲಾಮ ರಾಗುತ್ತಾರೆ ಇಲ್ಲಾ ಹಾಸಿಗೆ ಹಿಡಿಯುತ್ತಾರೆ. ಅಪರೂಪಕ್ಕೆ ಎಂಭತ್ತು ತೊಂಭತ್ತು ದಾಟಿದವರು ಗಟ್ಟಿ ಮುಟ್ಟಾ ಗಿ ಇರೋದು ಕಾಣಲು ಸಿಗುತ್ತಾರೆ. ತೊಂಭತ್ತರ ಹತ್ತಿರ ಇರುವ ಕೇರಳದ ಮಾಜಿ ಮುಖ್ಯಮಂತ್ರಿ ವೀ. ಎಸ್. ಅಚ್ಯುತಾನಂದನ್, ಈಗ ವಿಪಕ್ಷ ನಾಯಕ. ಎಂ, ಎಫ್ ಹುಸೇನ್ ಸಹ ಇಳಿ ವಯಸ್ಸನ್ನು ಅಣಕಿಸಿದವರ ಸಾಲಿಗೆ ಸೇರಿದವರು. ರಾಜಕಾರಣಿಗಳು ದೀರ್ಘಾಯುಷಿಗಳು, ನನ್ನ ಪ್ರಕಾರ. ಕಣ್ಣಿಗೆ ಕಂಡವರದ್ದನ್ನೆಲ್ಲಾ ನುಂಗೀ, ನುಂಗೀ ಅದೂ ಒಂದು ರೀತಿಯ ವ್ಯಾಯಮವೇನೋ ಎಂದು ನಮಗೆ ತೋರ ಬೇಕು, ಆ ತೆರನಾದ ಆರೋಗ್ಯ. ಹಾಗಾದರೆ ನಾವೆಲ್ಲರೂ ಬಯಸುವ, ತಹ ತಹಿಸುವ ಚಿರ ಯೌವ್ವನ ಅನ್ನೋದು ಇದೆಯೇ? ಇಲ್ಲಾ ಎಂದೇ ವೈದಕೀಯ ವಲಯದ ತೀರ್ಪು. ಆದರೆ ಯಾವಾಗಲೂ ಚಟುವಟಿಕೆಯಿಂದ ಇರುತ್ತಾ, ಸಿಕ್ಕಿದ್ದನ್ನೆಲ್ಲಾ ಉದರಕ್ಕೆ ಇಳಿ ಬಿಡದೆ ಕೇರ್ಫುಲ್ ಆಗಿದ್ದರೆ ಊರ ಹೊರಗಿನ ಚಿರ ಯಾತ್ರೆ ಸ್ವಲ್ಪ ಮುಂದೂಡ ಬಹುದು ಅಷ್ಟೇ. ಈಗಿನ ಕಾಲದ ಈಟಿಂಗ್ ಹ್ಯಾಬಿಟ್ಸ್, sedantary lifestyle ಕಾರಣ ಹದಿಹರೆಯದ ಹುಡುಗರಿಂದ ಹಿಡಿದು, ೨೦, ಮೂವತ್ತು, ನಲವತ್ತರ ಯುವಕರು ದಿಢೀರ್ ಎಂದು ಕಾರ್ಡಿಯಾಕ್ ಖಾಯಿಲೆಗೆ ಬಲಿಯಾಗುತ್ತಿರುವುದು ದುರದೃಷ್ಟಕರ. ಹೃದ್ರೋಗಕ್ಕೆ ಬಲಿಯಾದ ನಮ್ಮ ಸ್ನೇಹಿತರ, ಪರಿಚಯಸ್ಥರ, ನೆಂಟರಿಷ್ಟರ ನ್ನು ನೋಡಿಯೂ ನಾವು ವ್ಯಾಯಾಮದ ಕಡೆ ಗಮನ ಹರಿಸುತ್ತಿಲ್ಲ.

ನನ್ನ ಕತೆಯಂತೂ ಇನ್ನಷ್ಟು ಶೋಚನೀಯ. ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಗೆ ಬೇಕಾದ ಎಲ್ಲಾ ‘ಗೇರ್’ ಗಳಿದ್ದಾಗ್ಯೂ ಒಂದು ದಿನ ಹೋದರೆ ಎರಡು ವಾರ ರೆಸ್ಟ್. ನನ್ನನು ಕಟ್ಟಿಕೊಂಡು ನಡೀ ಎಂದು ದುರುಗುಟ್ಟುವ  ನೈಕೀ ಶೂ ನೋಡಿದ ಕೂಡಲೇ ಕಟುಕನ ಕೈಯ ಕತ್ತಿ ನೆನಪಾಗುತ್ತದೆ ನನಗೆ.  ಮಡದಿ ಎಷ್ಟೇ ಗೋಗರೆದರೂ ಊಹೂಂ ಎನ್ನುವ ಮೊಂಡುತನ. ನಡಿಗೆ monotonous ಎಂದು ಹೇಳಿ ಸೈಕಲ್ ಕೊಂಡು ಕೊಂಡೆ. ಪರ್ಸ್ ನ ಭಾರ ಕಡಿಮೆಯಾಯಿತೇ ವಿನಃ ಬೊಜ್ಜಿನ ಪ್ರಮಾಣ ಇಳಿಯಲಿಲ್ಲ. ಸೈಕಲ್ ನ  ಗಾಳಿ ಹೋದಾಗ ಗಾಳಿ ತುಂಬಿಸೋದು ಮಗನ ರೂಮಿನ ಮೂಲೆಗೆ ಅದನ್ನು ವಾಲಿಸಿ ಇಡೋದು, ಈ ಕೆಲಸವನ್ನ ಆವರ್ತಿಸಿ, ಆವರ್ತಿಸಿ ಸಾಕಾಗಿ ಹೋದರೂ ಇದುವರೆಗೆ ಒಂದೈದು ಕಿ. ಮೀ ದೂರ ಕ್ರಮಿಸಿಲ್ಲ. ದಿನಕ್ಕೆ ಸುಮಾರು ನಾಲ್ಕರಿಂದ ಐದು ಕೀ. ಮೀ. ಸೈಕ್ಲಿಂಗ್ ಮಾಡಿದರೆ ಹೃದ್ರೋಗದಿಂದ ಗೊಟಕ್ ಆಗುವ ಚಾನ್ಸ್ ಸುಮಾರು ಶೇಕಡಾ ಐವತ್ತು ಕಡಿಮೆಯಂತೆ. ಜಾಗಿಂಗ್ ಮಾಡಲು ಆಗದಿದ್ದರೂ, ಬಿರುಸಾದ ನಡಿಗೆ ಜಾಗಿಂಗ್ ಗಿಂತ ಒಳ್ಳೆಯದಂತೆ. ಒಟ್ಟಿನಲ್ಲಿ ಸೋಫಾದ ಮೇಲೆ ಕುಕ್ಕರು ಬಡಿಯುವುದಕ್ಕಿಂತ ಸೊಂಟ ನೆಟ್ಟಗೆ ಮಾಡಿ ಕಾರು, ಬೈಕಿನ ಕೀಲಿ ಮನೆಯಲ್ಲಿ ಬಿಟ್ಟು  ಮನೆಯಿಂದ ಹೊರಹೋದರೆ ಅಷ್ಟೊಂದು ಲಾಭ ನಮ್ಮ ಶರೀರಕ್ಕೆ. ಮೇಲೆ ಹೇಳಿದ ೯೩ ವರ್ಷದ ಬ್ರಿಟಿಶ್ ಡಾಕ್ಟರ್ ಥರ ವಲ್ಲದಿದ್ದರೂ ನಮ್ಮ ಕೈಗೋ, ಕಾಲಿಗೋ ಆಗುವ ಅಷ್ಟಿಷ್ಟು ಸಾಹಸದಲ್ಲಿ ನಾವು ತೊಡಗಿಸಿ ಕೊಳ್ಳದಿದ್ದರೆ ನಷ್ಟ ಮಾತ್ರ  ತುಂಬಲಾರದ್ದು.

ನೈಕೀ ಶೂ ಗಳ ದುರುಗುಟ್ಟು ವಿಕೆಯಿಂದ ಮೆಲ್ಲಗೆ ಪಾರಾಗಿ  ಸೈಕಲ್ ಹತ್ತಿರ ಬಂದರೆ ಮತ್ತೊಮ್ಮೆ ಹೋಗಿದೆ ಅದರ ಗಾಳಿ. ಗಾಳಿ ತುಂಬಿಸಿ ಈ ಸಂಜೆಯಿಂದಲೇ ಶುರು ಮಾಡುತ್ತೇನೆ ನನ್ನ ಮನೆಯ ಹೊರಗಿನ ವರ್ಕ್ ಔಟ್ ಯಾತ್ರೆ. ನೀವೂ ರೆಡಿ ತಾನೇ?

ಚಿತ್ರ ಕೃಪೆ. yahoo.com

ಅಜ್ಜಿಯ ನೆನಪು

ಗೋರ್ಬಚೋಫ್ ೮೦ ನೆ ಜನ್ಮದಿನಾಚರಣೆಯ ಹುಮ್ಮಸ್ಸಿನಲ್ಲಿದ್ದಾರೆ. ವಿಶ್ವದ ಅತ್ಯಂತ VISIBLE LEADER ಗಳಲ್ಲಿ ಒಬ್ಬರಾಗಿದ್ದರು ಗೋರ್ಬಚೋಫ್. ೮೦ ರ ದಶಕದಲ್ಲಿ ಅಮೆರಿಕೆಯ ರೊನಾಲ್ಡ್ ರೇಗನ್, ರಷ್ಯದ ಗೋರ್ಬಚೋಫ್ ಸುದ್ದಿ ಮಾಡಿದ್ದೆ ಮಾಡಿದ್ದು. ರೊನಾಲ್ಡ್ ರೇಗನ್ ಒಬ್ಬ ಹಾಲಿವುಡ್ ನಟ. ಕೋಟಿಗಟ್ಟಲೆ ಜನರನ್ನು ತನ್ನ ಚಿತ್ರಗಳ ಮೂಲಕ ರಂಜಿಸಿದ ರೇಗನ್ ರಾಜಕಾರಣದಲ್ಲೂ ತಮ್ಮದೇ ಆದ ಛಾಪನ್ನು ಒತ್ತಿದ್ದರು. ರೇಗನ್ ಮತ್ತು ಗೋರ್ಬಚೋಫ್ ಮಧ್ಯೆ ಇದ್ದುದು ಒಂದು ಕಾಲದ ಧರ್ಮೇಂದ್ರ – ಹೇಮಾ ಮಾಲಿನಿ, ಸಲ್ಮಾನ್ – ಐಶ್ವರ್ಯ ನಡುವಿನ “ಕೆಮಿಸ್ಟ್ರಿ”. ಇವರುಗಳು ನಾಯಕರಾಗಿದ್ದ ಎರಡೂ ದೇಶಗಳೂ ಅಪನಂಬಿಕೆಯಿಂದ ತೊಳಲುತ್ತಿದ್ದರೆ ಇವರೀರ್ವರು ಮಾತ್ರ ಒಬ್ಬರನ್ನೊಬ್ಬರ ಕಾರ್ಯಶೈಲಿಯನ್ನು ಮೆಚ್ಚುತ್ತಾ ಒಂದು ಅಪೂರ್ವವಾದ ಸ್ನೇಹವನ್ನು ಹೆಣೆದಿದ್ದರು. ರೇಗನ್ ರವರು ಗೋರ್ಬಚೋಫ್ ರನ್ನು ಉದ್ದೇಶಿಸಿ Mr. Gorbachev, tear down this wall. ಬರ್ಲಿನ್ ಗೋಡೆ ಬಗ್ಗೆ ಅಮೆರಿಕೆಯ ಅಧ್ಯಕ್ಷ ನೊಬ್ಬ ಸೋವಿಯೆಟ್ ನಾಯಕನಿಗೆ ಈ ರೀತಿ ಸಂಬೋಧಿಸಿ ಹೇಳಬೇಕೆಂದರೆ ಮಾಮೂಲಿ ಕೆಲಸವಲ್ಲ. ಸಿನಿಮಾದ ಡಯಲಾಗ್ ಥರ ಹೊಡೆದೇ ಬಿಟ್ಟರು ರೇಗನ್ ವಿಶ್ವ ದಂಗಾಗುವಂತೆ.

ಗೋರ್ಬಚೋಫ್ ಮಾತು ಬಂತೆಂದರೆ ಗತಿಸಿಹೋದ ನನ್ನ ಪ್ರೀತಿಯ ಅಜ್ಜಿಯ ನೆನಪು ಬರುತ್ತದೆ. ಕನ್ನಡ ಭಾಷೆಯನ್ನ ಬಹು ಚೆನ್ನಾಗಿ ಮಾತನಾಡುತ್ತಿದ್ದ ಅವರು ತುಷಾರ, ಕಸ್ತೂರಿ, ಮಲ್ಲಿಗೆ, ಮಯೂರ, ಸುಧಾ ಮುಂತಾದ ಪತ್ರಿಕೆಗಳನ್ನು ತಪ್ಪದೆ ಓದುತ್ತಿದ್ದರು. ನನ್ನ ಅಜ್ಜಿಗೂ ನನ್ನ ಹಾಗೆಯೇ ವಿಶ್ವದ ಆಗುಹೋಗುಗಳ ಮೇಲೆ ಆಸಕ್ತಿ ಹೆಚ್ಚು. ಟೀವೀ ಪರದೆ ಮೇಲೆ ಗೋರ್ಬಚೋಫ್ ಕಾಣಿಸಿದ್ದೇ ತಡ ಕೇಳುತ್ತಿದ್ದರು, ಏನೋ ಅದು, ಅವನ ತಲೆ ಮೇಲೆ ಅದ್ಯಾವಾಗ ಕಾಗೆ ಕಕ್ಕ ಮಾಡಿತು ಎಂದು. ಗೋರ್ಬಚೋಫ್ ಅವರ ಕೂದಲಿಲ್ಲದ ನುಣ್ಣಗಿನ ತಲೆ ಮೇಲೆ ದೊಡ್ಡದಾದ ಮಚ್ಚೆ ಇತ್ತು. ಈ ಮಚ್ಚೆ world famous. ನೋಡಿದವರಿಗೆ ನನ್ನ ಅಜ್ಜಿಗೆ ತೋಚಿದಂತೆಯೇ ಕಾಗೆ ಕಕ್ಕ ಉದುರಿಸಿದ ಹಾಗೆ ಕಾಣುತ್ತಿತ್ತು. ಗೋರ್ಬಚೋಫ್ ರ ನೆನಪಾದಾಗ ಎರಡು ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಹೋದ ಅಜ್ಜಿಯ ನೆನಪೂ ಸಹ ಬರುತ್ತದೆ.

ವಯಸ್ಸೇ, ರಿಲಾಕ್ಸ್ ಪ್ಲೀಸ್

ಕಲಿಕೆಗೆ ವಯಸ್ಸೆನ್ನುವ ಕಾಲಮಾಪನ ಬೇಡ. ನಮಗೆ ಬೇಕಿರುವುದು ಕಲಿಯಲು ಬೇಕಾದ ಉತ್ಕರ್ಷೆ ಮಾತ್ರ. ಕೆಲವರಿಗೆ ಅದೇನೋ ಒಂದು ರೀತಿಯ ಸಂಶಯ, ನಾನಗೆ ಮೂವತ್ತಯ್ದಾಯ್ತು, ಐವತ್ತಾಯ್ತು, ನನ್ನಿಂದ ಇದು ಮಾಡಲು ಸಾಧ್ಯವೇ, ಜನ ಏನೆಂದು ಕೊಂಡಾರು…ಹೀಗೆ ಹತ್ತು ಹಲವು ನಮ್ಮನ್ನು ಹಿಂದಕ್ಕಟ್ಟುವ ವಿಚಾರಗಳು ಹಿಂಬಾಲಿಸುತ್ತವೆ ನಮ್ಮ ಮನಸ್ಸಿನ ಆಸೆಗಳಿಗೆ ತಣ್ಣೀರೆರೆಚಲು. ಜನ ಏನನ್ನಾದರೂ ಅಂದು ಕೊಳ್ಳಲಿ, ನೀವು ಮಾಡೋದು ನಿಮ್ಮ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ತಾನೇ? ಮತ್ತೇಕೆ ಜಗದ ಹಂಗು? ಕೆಳಗಿನ ಕೊಂಡಿಗಳನ್ನು ನೋಡಿ ಮತ್ತು ಸಿದ್ಧರಾಗಿ ಕಲಿಯಬೇಕಾದ್ದನ್ನು ಕಲಿಯಲೂ, ಹಿಮಾಲಯವನ್ನು ಮಣಿಸಲೂ.

http://www.dailymail.co.uk/news/article-1036526/91-year-old-war-veteran-oldest-person-collect-PhD-Cambridge-University.html

http://ibnlive.in.com/news/100yearold-indian-freedom-fighter-pursues-phd/133246-3.html

ನಿಮ್ಮ ವಯಸ್ಸೇನು?

How old is too old to wear a mini skirt? ಎನ್ನುವ ಒಂದು ಲೇಖನ ಕಣ್ಣಿಗೆ ಬಿತ್ತು. how old is too old to wear a mini skirt? ಅನ್ನೋ ಪ್ರಶ್ನೆಗೆ ನಿಖರವಾದ ಉತ್ತರ ಸಾಧ್ಯವಲ್ಲದಿದ್ದರೂ ಉಡುವವರ ಅಭಿರುಚಿ, ಅವರ ಸೆನ್ಸ್ ಆಫ್ ಫ್ಯಾಶನ್ ಮತ್ತು ಆಕರ್ಷಕ ಮೈ ಮಾಟ ತಮಗೆ ಬೇಕಾದ ಉಡುಗೆಯನ್ನು ತೊದಲು ಜನರನ್ನು ಪ್ರೇರೇರಿಪಿಸುತ್ತದೆ. ಇದೇನು ಬುರ್ಖಾದಿಂದ ಮಿನಿ ಸ್ಕರ್ಟ್ ಗೆ “ಕುಸಿಯಿತೆ”  ನಿನ್ನ ಅಭಿರುಚಿ ಎಂದು ಹುಬ್ಬೇರಿಸಬೇಡಿ. ಈ ಲೇಖನ ಯಾವುದೇ political statement ಮಾಡ್ತಾ ಇಲ್ಲ, ಬದಲಿಗೆ ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ಮನುಷ್ಯ ಯಾವ ಯಾವ ರೀತಿ ಬಟ್ಟೆ ತೊಡುತ್ತಾನೆ/ಳೆ ಎನ್ನುವ ಮೇಲೊಂದು ಪಕ್ಷಿ ನೋಟ. ಬಟ್ಟೆ ಧರಿಸುವಾಗ ವಯಸ್ಸನ್ನೂ ಗಮನಕ್ಕೆ ಇಟ್ಟು ಕೊಳ್ಳಬೇಕು ಎನ್ನುವುದು ಬಹುತೇಕ ಭಾರತೀಯರ ಅಭಿಪ್ರಾಯ. ಒಂದು ಲೆಕ್ಕದಲ್ಲಿ ಇದು ಸರಿಯೂ ಕೂಡಾ. ಮೇಲೆ ಹೇಳಿದಂತೆ ೭೦ ರ ಮಹಿಳೆ ಮಿನಿ ಸ್ಕರ್ಟ್ ತೊಟ್ಟರೆ ಒಂದು ರೀತಿಯ ಅಭಾಸವಾಗುತ್ತದೆ. ನಿಲ್ಲಿ, ನಿಲ್ಲಿ, ಅಭಾಸ ಏಕಾಗಬೇಕು? ನಿಕೃಷ್ಟ ಉಡುಗೆ ತೊಡುವುದನ್ನು ವಿರೋಧಿಸುವವರಿಗೆ ನಾವು ಹೇಳುವ ಕಿವಿ ಮಾತು ಉಟ್ಟ ಬಟ್ಟೆ ಮಾತ್ರ ನೋಡಿದರೆ ಸಾಕು, ಅದರೊಂದಿಗೇ ಬರುವ ಉಬ್ಬು ತಗ್ಗುಗಳನ್ನಲ್ಲ ಎಂದು. ಒಪ್ಪಿಕೊಂಡೆ. ಉಡುಗೆ ಬರೀ ಫ್ಯಾಶನ್ ಸೆನ್ಸ್ ನ ಮಾತ್ರ ಬಿಂಬಿಸಿದರೆ ೧೬ ರ ಪೋರಿಯ ಥರ ೭೦ ರ ಚೆಲುವೆ ಸಹ ಏಕೆ ಮಿನಿ ಸ್ಕರ್ಟ್ ಹಾಕಬಾರದು? ಒಹ್, ಎಪ್ಪತ್ತರ ಮಹಿಳೆಗೆ ೧೬ ರ ಅಂಗ ಸೌಷ್ಠವ ಇಲ್ಲ ಎಂದಿರಬೇಕು, ಹಾಗಾದರೆ ಎಲ್ಲಿ ಹೋಯಿತು ಫ್ಯಾಶನ್ ಸೆನ್ಸ್. ಇಲ್ಲಿರೋದು ಅಪ್ಪಟ ಲೈಂಗಿಕತೆ ಅಲ್ಲವೇ ನಮ್ಮ ನೋಟದಲ್ಲಿ? ವಾದ ವಿವಾದ ಬಂದಾಗ ಅಭಿರುಚಿ, ಫಾಶನ್ ಸೆನ್ಸ್, ಇಲ್ಲದಿದ್ದರೆ  ವಾರೆನೋಟ ಕನಿಷ್ಠ ಉಡುಗೆ ತೊಟ್ಟವರ ಕಡೆ. political statement ಬೇಡ ಎಂದು ಕೊಂಡರೂ ನುಸುಳಿಕೊಂಡಿತು ದರಿದ್ರ ರಾಜಕೀಯ. ವಿಷಯಕ್ಕೆ ಬರೋಣ…

ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದಾಗ (೯೦ ರ ದಶಕದಲ್ಲಿ) ಅವರಿಗೆ ಪ್ರಾಯ ಹೆಚ್ಚಿರಲಿಲ್ಲ. ೪೫-೫೦ ರ ಸಮೀಪ. ಆಗಾಗ ಜೀನ್ಸ್, ಟೀ ಶರ್ಟ್ ಗಳಲ್ಲಿ ಕಾಣಿಸಿ ಕೊಳ್ಳುತ್ತಿದ್ದರು. ಕ್ಲಿಂಟನ್ ಅವರದು ಆಕರ್ಷಕ ವ್ಯಕ್ತಿತ್ವ. ಬರೀ ಉಡುಗೆ ಯಲ್ಲಿ ಮಾತ್ರವಲ್ಲ, ಸಂಗೀತದಲ್ಲೂ ಆಸಕ್ತಿ. “ಸಾಕ್ಸೋ ಫೋನ್” ನುಡಿಸುವುದೆಂದರೆ ತುಂಬಾ ಇಷ್ಟ. ಕೆಲವೊಮ್ಮೆ ಸಾರ್ವಜನಿಕ ಸಭೆಗಳಲ್ಲಿ ನುಡಿಸುತ್ತಿದ್ದರು. ಅಧ್ಯಕ್ಷರ ಘನತೆಗೆ ಈ ವರ್ತನೆ ಕುಂದು ಎಂದು ಸಲಹೆಗಾರರು ಕಿವಿ ಮಾತನ್ನು ಹೇಳಿದಾಗ ನಿಲ್ಲಿಸಿದ್ದರು ಸಾಕ್ಸೋ ಫೋನ್ ಸಹವಾಸವನ್ನು. ಹೀಗೆ ಕ್ಲಿಂಟನ್ ಜೀನ್ಸ್ ತೊಟ್ಟಾಗ ಜನ ಹೇಳುತ್ತಿದ್ದದ್ದು ೪೦ ವಯಸ್ಸಿನ ನಂತರ ಜೀನ್ಸ್ ತೊಡುವುದಕ್ಕೆ you need to be brave ಎಂದು. ಅಂದರೆ ಜೀನ್ಸ್ ಅನ್ನು ಹದಿಹರೆಯದವರು, ಕಾಲೇಜಿಗೆ ಹೋಗುವವರು, ಹೀಗೇ ಯುವಜನರು ಮಾತ್ರ ತೊಡಬೇಕು ಎನ್ನುವ ಅಲಿಖಿತ ನಿಯಮ. ಆದರೆ ಈಗ ನೋಡಿ, ೯೦ ರ ತರುಣನೂ (ತರುಣ ಎಂದಾಗ ವ್ಯಂಗ್ಯ ಇಲ್ಲ, ಏಕೆಂದರೆ ವಯಸ್ಸು ೯೦ ಆದರೂ young at heart ಎಂದು ಕೊಳ್ಳುವ ಜನರಿದ್ದಾರೆ) ತೊಡುತ್ತಾನೆ ಜೀನ್ಸ್. ಸುಮಾರು ಐವತ್ತರ ಆಸುಪಾಸಿನ ನನಗೆ ಪರಿಚಯದ ವ್ಯಕ್ತಿಯೊಬ್ಬರು ಜೀನ್ಸ್ ಮಾತ್ರವಲ್ಲ ಕಾಲಿನ ತುಂಬಾ ಜೇಬುಗಳೇ ಇರುವ ಕಾರ್ಗೋ ಪ್ಯಾಂಟುಗಳನ್ನು ಧರಿಸುತ್ತಿದ್ದರು, ಆತ್ಮ ವಿಶ್ವಾಸದಿಂದ. ನೋಡಿ ಇಲ್ಲಿದೆ ಮಂತ್ರ. ಯಾವುದೇ ಉಡುಗೆ ತೊಡಬೇಕಾದರೂ ಆತ್ಮವಿಶ್ವಾಸ ಬೇಕು. ಅದು ನಮ್ಮ ಮುಖದ ಮೇಲೆ, ನಮ್ಮ ಮಾತು, ನಡಿಗೆಯ ಮೇಲೆ ಪ್ರಭಾವ ಬೀರುತ್ತದೆ. ಇನ್ಸ್ಟಂಟ್ ಆಗಿ ಯಂಗ್ ಆಗಿ ಬಿಡುತ್ತೇವೆ, ಆತ್ಮ ವಿಶ್ವಾಸ ಇದ್ದರೆ. ನೀವು ಏನು ತೊಡಬೇಕು ಎಂದು ನಿಮಗೇ ಅರಿವಿಲ್ಲದೆ ಬರೀ ಫ್ಯಾಶನ್ ಟ್ರೆಂಡ್ ಅನ್ನು ಹಿಂಬಾಲಿಸಿದರೆ ಕರೀ ಕಾಗೆ ಚೆಂದ ಕಾಣಲು ಸುಣ್ಣದ ಮೊರೆ ಹೊಕ್ಕ ಹಾಗಾಗಬಹುದು.

ನನ್ನ ಮರೆವು ನನಗೆ ಕೆಲವೊಮ್ಮೆ ಭಾರಿಯಾಗಿ ಕಾಣುತ್ತದೆ. ಮೊನ್ನೆ ಶಾಪ್ಪಿಂಗ್ ಮಾಡಲು ಹೋಗಿ ಎಲ್ಲೋ ನನ್ನ ಸನ್ ಗ್ಲಾಸನ್ನು ಬಿಟ್ಟು ಬಂದೆ. ಮರಳುಗಾಡಿನ ಬೇಗೆಯಲ್ಲಿ ಸನ್ ಗ್ಲಾಸಿಲ್ಲದೆ ಡ್ರೈವ್ ಮಾಡೋದು ಕಷ್ಟ. ಹತ್ತಿರದ ಆಪ್ಟಿಕಲ್ ಶಾಪಿಗೆ ಹೋಗಿ ಕೆಲವೊಂದು ಕನ್ನಡಕಗಳನ್ನು ನೋಡಿದೆ. ಸನ್ ಗ್ಲಾಸ್ ಬರೀ ಸೂರ್ಯ ಕಿರಣಗಳಿಗೆ ಮಾತ್ರವಲ್ಲ, ಅದೊಂದು fashion statement ಸಹ ಅಲ್ವರ? ಅಂಗಡಿಯವ ಸೊಗಸಾದ, ನವನವೀನ ಮಾಡೆಲ್ಲು ಗಳನ್ನು ತೋರಿಸಿದ. ನನಗೆ ಅನುಮಾನ, ಇಷ್ಟೊಂದು fashionable glasses ತೊಡುವ ವಯಸ್ಸಾ ನನ್ನದು ಎಂದು. ನೀವೆಷ್ಟೇ modern outlook ನವರಾದರೂ ದರಿದ್ರ ಸಮಾಜ ಯಾವ ರೀತಿ ನಮ್ಮ ಮತಿಯೊಳಕ್ಕೆ ಬೇಡದ್ದನ್ನು ತುರುಕಿರುತ್ತೋ ಅದು ತನ್ನ ತಲೆಯನ್ನ ಆಗಾಗ ಎತ್ತುತ್ತಿರುತ್ತಲೇ ಇರುತ್ತದೆ. ನನ್ನ ಈ ವಯಸ್ಸಿನ apprehension ಅನ್ನು ನನಗೆ ಗೊತ್ತಿಲ್ಲದೇ ಸೇಲ್ಸ್ ಮ್ಯಾನ್ ಗೆ ಆಡಿಯೂ ತೋರಿಸಿಬಿಟ್ಟೆ, i am not that young to wear those glasses ಎಂದು. lack of confidence? ಕೆಲವೊಮ್ಮೆ ಈ ಲ್ಯಾಕ್ ಆಫ್ ಕಾನ್ಫಿಡೆನ್ಸ್ ಸಹ ಕೆಲಸಕ್ಕೆ ಬರುತ್ತೆ ಅನ್ನಿ.  ಸಾಕಷ್ಟು ಕನ್ನಡಕಗಳನ್ನು ನೋಡಿದ ನಂತರ  ಅಲ್ಲಿ, ಇಲ್ಲಿ ಎಂದು ಚದುರಿ ಹೋಗಿದ್ದ ಕಾನ್ಫಿಡೆನ್ಸ್ ಅನ್ನು gather ಮಾಡಿ ನನಗಿಷ್ಟವಾದ, ಸ್ವಲ್ಪ ಮಾಡರ್ನೇ ಆದ “ತಂಪು ಕನ್ನಡಕ” ಕೊಂಡು ಅಂಗಡಿಯಿಂದ ಹೊರನಡೆದೆ ಹೋಡೀ, ವಯಸ್ಸಿಗೊಂದು ಗೋಲಿ ಎನ್ನುತ್ತಾ.