ಮದುವೆಯ ಈ ಬಂಧಾ…..

ವಿವಾಹದ ದಿನ ಎಂದರೆ ಪ್ರತಿ ಹೆಣ್ಣು ಗಂಡಿನ ಬದುಕಿನ ಅತ್ಯಂತ ಮಹತ್ತರವಾದ, ಎಂದೆಂದೂ ನೆನಪಿನಲ್ಲುಳಿಯುವ ದಿನ. ರೋಮಾಂಚನ, ದುಗುಡ, ಕಾತುರ, ಸಂತಸ, ಹೆಮ್ಮೆ ಹೀಗೆ ನೂರೊಂದು ಭಾವನೆಗಳು ವಿವಾಹದಂದು. ಆ ವಿಶೇಷ ದಿನಕ್ಕಾಗಿಯೇ ವಧೂ ವರರು ತಿಂಗಳುಗಟ್ಟಲೆ ತಯಾರಿ ನಡೆಸಿರುತ್ತಾರೆ. ವರ ಅಷ್ಟೊಂದು ತಲೆ ಕೆಡಿಸಿಕೊಳ್ಳದಿದ್ದರೂ ವಧುವಿಗಂತೂ ತನ್ನ ವಿವಾಹದ ದಿನ ಹೀಗೆಯೇ ಇರಬೇಕೆನ್ನುವ ಸ್ಪಷ್ಟ ಕಲ್ಪನೆ ಇರುತ್ತದೆ.

ನಮ್ಮ ದೇಶದಲ್ಲಿ ಯಾವ ಧರ್ಮೀಯರೇ ಆಗಲಿ ವಿವಾಹದ ದಿನ ತಮ್ಮ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಡುಗೆ ಇಷ್ಟಪಟ್ಟರೆ ಪಾಶ್ಚಾತ್ಯರದು ಬೇರೆಯೇ ಆದ ದೃಷ್ಟಿಕೋನ. ಉಡುಗೆ ಮಾತ್ರವಲ್ಲ ಮದುವೆ ಆಗುವ ಸ್ಥಳಗಳೂ ಸಹ ವಿಚಿತ್ರವೇ. ಕೆಲವರು ನೀರಿನೊಳಕ್ಕೆ ಇಳಿದು ವಿವಾಹಿತರಾದರೆ ಇನ್ನೂ ಕೆಲವರು ಪ್ಯಾರಾಶೂಟ್ ನಲ್ಲಿ ಕೂತು ಮದುವೆ ಆಗುತ್ತಾರೆ.

ಹೀಗೆ ವಿವಿಧ ರೀತಿಯಲ್ಲಿ ಜನರ ಗಮನವನ್ನ ಸೆಳೆಯುವ ಉದ್ದೇಶದೊಂದಿಗೆ ವಿಶಿಷ್ಟ ವಾದ ರೀತಿಯಲ್ಲಿ ಮದುವೆಯಾಗುತ್ತಾರೆ.  ಕೆಲವು ಉಡುಗೆಗಳ ದೃಶ್ಯಗಳಿವೆ ಪಾಶ್ಚಾತ್ಯರದು. ನೋಡಿ ಆನಂದಿಸಿ.

 

ಮೇಲಿನ ಬಲ ಬದಿಯ ಎರಡು ಚಿತ್ರಗಳನ್ನೂ ನೋಡಿ ಮೂರ್ಛೆ ಹೋಗಿಲ್ಲ ತಾನೇ? ಹೋದರೂ ಅಚ್ಚರಿಯಿಲ್ಲ. ಸತ್ತ ಹೆಣವೂ ಶವ ಪೆಟ್ಟಿಗೆಯೊಳಕ್ಕೆ ಮಲಗಲು ಹೆದರುತ್ತದೆ, ಆದರೆ ಈ ಲಲನಾಮಣಿ ವಧು ಆರಿಸಿಕೊಂಡ ಜಾಗ ಶವಪೆಟ್ಟಿಗೆ. ಅವಳ ಗುಂಡಿಗೆಗೆ ಕೊಡಬೇಕು ನೋಡಿ ಬಹುಮಾನ. ತಾನು ಪ್ರೀತಿಸಿದ ವನನ್ನು ವಿವಾಹವಾಗಲು ೨೭ ವರ್ಷ ತಗುಲಿತಂತೆ. ಅಷ್ಟರಲ್ಲಿ ಇಬ್ಬರಿಗೂ ಬೇರೆಯವರೊಂದಿಗೆ ಮದುವೆಯಾಗಿ ಮಕ್ಕಲ್ಲೂ ಇದ್ದವು. ಕೊನೆಗೆ ಈ ಪ್ರೇಮಿಗಳು ಮದುವೆಯಾಗುವ ಕಾಲ ಕೂಡಿ ಬಂತು ತಮ್ಮ ತಮ್ಮ ಬಾಳ ಸಂಗಾತಿಗಳು ಬೇರೆಯಾದಾಗ. ಇನ್ನೆಂದೂ ತನ್ನ ಇನಿಯ ತನ್ನಿಂದ ಬೇರೆಯಾಗ ಕೂಡದೆಂದು ಅವನ ಕೊರಳಿಗೆ ನಾಯಿಗೆ ಕಟ್ಟುವ ಪಟ್ಟಿ ಕಟ್ಟಿದ್ದಾಳೆ ಸಹ. ನಮ್ಮಲ್ಲಿ ಹೆಣ್ಣಿಗೆ ತಾಳಿ ಕಟ್ಟುವುದಿಲ್ಲವೆ ಹಾಗೆ.

* ಭಾವೀ ವರರೇ, ಎಚ್ಚರ!

ಮದುವೆ ಆಗಲು ಬಯಸುವ ಭಾವೀ ವರರೇ ಎಚ್ಚರ. ಭಾರತೀಯ ನಾರಿ ಎಚ್ಚೆತ್ತು ಕೊಂಡಿದ್ದಾಳೆ. ಕಳೆದ ಗುರುವಾರ ಬಿಹಾರದ ಸರಾಯಿರಂಜನ್ ಗ್ರಾಮದಲ್ಲಿ ಒಂದು ಮದುವೆ. ಪಾನ ಮತ್ತನಾಗಿ ತನ್ನ ಭಾವೀ ಪತಿ ಮದುವೆ ದಿಬ್ಬಣದೊಂದಿಗೆ ಬಂದವರೊಂದಿಗೆ ಅಶ್ಲೀಲವಾಗಿ ಕುಣಿದ ಎಂದು ವಧು ಅವನನ್ನು ವರಿಸಲು ನಿರಾಕರಿಸಿದಳು. ಬೆಚ್ಚಿ ಬಿದ್ದ ವರ ರವಿ ಕುಮಾರ್ ಚೌಧುರಿ ದಾರಿ ಕಾಣದೆ ಪೋಲೀಸರ ಮೊರೆ ಹೊಕ್ಕ. 

ಜಪ್ಪಯ್ಯ ಅನ್ನಲಿಲ್ಲ ಮದುವೆ ಮಂಟಪಕ್ಕೆ ಆಗಮಿಸಿದ್ದ ಸಾಲಂಕೃತ ವಧು. ವಧುವಿನ ತಂದೆ ತನ್ನ ಮಗಳ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ಸೂಚಿಸಿ ವರ ಗಂಟು ಮೂಟೆ ಕಟ್ಟುವಂತೆ ಮಾಡಿದ. ಪಾಪ ಬಾಸಿಂಗ ಕಟ್ಟಿಕೊಂಡು ಏನೇನೋ ಆಸೆಗಳನ್ನು ಇಟ್ಟುಕೊಂಡು ಹಸೆ ಮಣೆ ಏರಲು ಬಂದಿದ್ದ ರವಿ ಕುಮಾರನಿಗೆ ಕಾಲಿಗೆ ಬುದ್ಧಿ ಹೇಳುವುದೊಂದೇ ಬಾಕಿ ಉಳಿದಿದ್ದು.   

 

ಈ ರೀತಿಯ ಅಪೂರ್ವ ಧೈರ್ಯ ಪ್ರದರ್ಶಿಸಿದ ಮದುಮಗಳು ಇತರರಿಗೂ ಮಾದರಿ ಆಗಬೇಕು. ತನ್ನನ್ನು ವರಿಸುವವನಲ್ಲಿ ಸದ್ಗುಣಗಳನ್ನು ಬಯಸುವುದು ಪ್ರತೀ ವಧುವಿನ ಹಕ್ಕು. ಆ ಹಕ್ಕನ್ನು ಈ ಹೆಣ್ಣುಮಗಳು ಮನೋಹರವಾಗಿ ಚಲಾಯಿಸಿದಳು. ಆಕೆಯ ತೀರ್ಮಾನಕ್ಕೆ ಬೆಂಬಲ ಸೂಚಿಸಿದ ಆಕೆಯ ತಂದೆಯೂ ಅಭಿನಂದನಾರ್ಹ. ಇದೇ ರೀತಿ ವಧುಗಳು ಲಜ್ಜೆ ಬಿಟ್ಟು ಹೆಣ್ಣಿನ ಮನೆಯವರಿಂದ ವರ ದಕ್ಷಿಣೆ ಬಯಸುವ ಗಂಡುಗಳನ್ನೂ ಎಡಗಾಲಿಂದ ಒದ್ದು ಸಮಾಜವನ್ನು ಈ ವರದಕ್ಷಿಣೆ ಎಂಬ ಅನಿಷ್ಟ ಪೀಡೆಯಿಂದ ಬಿಡುಗಡೆಗೊಳಿಸಬೇಕು.