ಬಸವಣ್ಣ ಜಯಂತಿ ನಿಮಿತ್ತ ಹಿರಿಯ ಸಾಹಿತಿ ಆನಂದರಾಮ ಶಾಸ್ತ್ರಿಗಳು ಕೆಲವೊಂದು ಅನರ್ಘ್ಯ ವಚನಗಳನ್ನು ಸಂಪದ ಓದುಗರಿಗೆ ಪರಿಚಯಿಸಿದ್ದಾರೆ. ನನಗಿಷ್ಟವಾದ ವಚನಗಳು…
ಸರಿಯಿದ್ದವರಮೇಲೂ ಕೆಲವೊಮ್ಮೆ ಸುಳ್ಳು ಅಪವಾದ ಬಂದೆರಗಬಹುದು. ಕೊಳಕು ರಾಜಕಾರಣದ ಈ ದಿನಗಳಲ್ಲಿ ಇಂಥ ಚೋದ್ಯ ಸಾಮಾನ್ಯ. ಸುಳ್ಳು ಆರೋಪವನ್ನು ಸತ್ಯಸಂಗತಿಯೆಂಬಂತೆ ಬಿಂಬಿಸುವಲ್ಲಿ ಇಂದಿನ ತಂತ್ರಜ್ಞಾನ ನೆರವಿಗೆ ಬರುತ್ತಿದೆ. ಸನ್ನಿವೇಶದ ಲಾಭ ಪಡೆದು ಮತ್ತು ತಂತ್ರಜ್ಞಾನದ ನೆರವಿನಿಂದ ಸುಳ್ಳನ್ನು ಸತ್ಯವೆಂದು ಸಾರಬಹುದಾದ ದಿನಗಳಿವು. ಇಂಥ ಚೋದ್ಯದ ಬಗ್ಗೆ ದನಿಯೆತ್ತಿದೆ ಈ ವಚನ.
ತಾಳ ಮರದ ಕೆಳಗೆ
ಒಂದು ಹಾಲ ಹರವಿಯಿದ್ದೊಡೆ
ಅದ ಹಾಲ ಹರವಿಯೆನ್ನರು
ಸುರೆಯ ಹರವಿಯೆಂಬರು
ಈ ಭಾವನಿಂದೆಯ ಮಾಣಿಸಾ
ಕೂಡಲಸಂಗಮದೇವಾ.
(ಹರವಿ=ಗಡಿಗೆ; ಮಾಣಿಸು=ಇಲ್ಲವಾಗಿಸು)
ಒಂದೆ ಮನ ಮಾತ್ರವಲ್ಲ, ಮನದ ಶುದ್ಧಿಯೂ ಮನುಜನಿಗೆ ಅವಶ್ಯ. ಕಾಣುವವರ ಕಣ್ಣಿಗಷ್ಟೇ ಆತ ಶುದ್ಧನಾದರೆ ಸಾಲದು. ಶುದ್ಧಿಯೆಂಬುದು ಅಂತರಂಗದಲ್ಲೂ ಇರಬೇಕು. ಆತನ ಭಾವವು ಪರಿಶುದ್ಧವಾದುದಾಗಿರಬೇಕು.
ಕೆಲಕ್ಕೆ ಶುದ್ಧನಾದೆನಲ್ಲದೆ
ಎನ್ನ ಮನಕ್ಕೆ ಶುದ್ಧನಾಗೆನೇಕಯ್ಯಾ?
ಕೈಮುಟ್ಟಿ ಪೂಜಿಸುವೊಡೆ
ಎನ್ನ ಮನಶುದ್ಧವಲ್ಲವಯ್ಯಾ
ಭಾವ ಶುದ್ಧವಾದೊಡೆ ಕೂಡಲ ಸಂಗಯ್ಯನು
ಇತ್ತ ಬಾಯೆಂದೆತ್ತಿಕೊಳ್ಳನೇಕಯ್ಯಾ!
(ಕೆಲಕ್ಕೆ=ನೆರೆಹೊರೆಯವರ ಕಣ್ಣಿಗೆ)