- ಕನಿಷ್ಠ ದಿನಕ್ಕೊಮ್ಮೆ ಪೋಸ್ಟು ಪೋಸ್ಟು ಎಂದು ಹೇಗ್ರೀ ಕೂಗೋದು? ಈಗ ಎಲ್ಲಿದೆ ಪೋಸ್ಟು ಗೀಸ್ಟು, ಈಗ ಎಲ್ಲಾ ಮೇಲು ಗೀಲು ಎಂದಿರಾ? ಪೋಸ್ಟ್ ಅಂದಿದ್ದು ವರ್ಡ್ ಪ್ರೆಸ್ ಬ್ಲಾಗ್ ತಾಣಕ್ಕೆ ನಾವು ಬರೆದು ಪ್ರಕಟಿಸುವ ಬರಹದ ಬಗ್ಗೆ. ವರ್ಡ್ ಪ್ರೆಸ್ ತಾಣವನ್ನು ಹೊಕ್ಕ ಕೂಡಲೇ freshly pressed ವಿಭಾಗದಲ್ಲಿ ಇರುವ ಲೇಖನದ ಮೇಲೆ ಕಣ್ಣಾಡಿಸಿ ಪ್ರಕಟವಾದ ಲೇಖನಗಳಿಗೆ ಬರುವ ಸ್ವಾರಸ್ಯಕರ ಪ್ರತಿಕ್ರಿಯೆ ಓದುವುದು ನನ್ನ ಅಭ್ಯಾಸ. ಕೇಕ್ ಹೇಗೇ ಮಾಡೋದು ಎನ್ನುವುದರಿಂದ ಹಿಡಿದು ವಾಕ್ ಹೇಗೇ ಮಾಡೋದು, ಪೇರೆಂಟಲ್ (ಪಾಲಕತ್ವ?) ಬಗ್ಗೆ, ಪ್ರವಾಸದ ಬಗ್ಗೆ, ಬರೆಯಲು ಏನೂ ಹೊಳೆಯದಾದಾಗ ವಿಷಯ ಕಂಡು ಕೊಳ್ಳುವುದು ಹೇಗೆ………ಹೀಗೆ ಬ್ಲಾಗ್ ಪೋಸ್ಟ್ ಗಳ ಸುಗ್ಗಿ ಕಾಣಲು ಸಿಗುತ್ತದೆ. ಒಂದೊಂದು ಪೋಸ್ಟ್ ಗೂ ನೂರಾರು ಪ್ರತಿಕ್ರಿಯೆಗಳು. ವಿಷಯ ಎಷ್ಟೇ trivial ಆಗಿರಲಿ ಆಸ್ಥೆಯಿಂದ ತಮ್ಮ ಅಭಿಪ್ರಾಯ ಪ್ರಕಟಿಸುತ್ತಾರೆ ಓದುಗರು. ಅದೇ ವೇಳೆ ನಮ್ಮ ಕನ್ನಡ ತಾಣಗಳಲ್ಲಿ ಬರುವ ಪ್ರತಿಕ್ರಿಯೆಗಳ ಕಡೆ ಸ್ವಲ್ಪ ನೋಡಿ. ಪ್ರತಿಕ್ರಿಯೆ ಗಳಿಲ್ಲದೆ ಆಹಾರ, ಪೋಷಕಾಂಶ ಇಲ್ಲದೆ, ಕೃಶರಾಗಿ ನರಳುವ ಸೊಮಾಲಿಯಾ ದೇಶದ ಮಕ್ಕಳ ಥರ ಕಾಣುತ್ತದೆ ಬ್ಲಾಗ್ ಪೋಸ್ಟು. ಈ ಅಸಡ್ಡೆಗೆ, indifference ಗೆ ಕಾರಣವಾದರೂ ಏನಿರಬಹುದು? ಥಟ್ಟನೆ ಸೋಮಾರಿತನ ಕಾರಣ ಎಂದು ತೋರಿದರೂ ಕೆಲವೊಮ್ಮೆ ಮತ್ತೊಂದು ಕಾರಣ ತಲೆಗೆ ತೂರಿ ಕೊಳ್ಳುತ್ತದೆ. ಅದೇನೆಂದರೆ ಓದಿದ ಬರಹಕ್ಕೆ ಪ್ರತಿಕ್ರಯಿಸಬೇಕೆಂದರೆ ಕೀಲಿ ಮಣೆ ಕುಟ್ಟಲೇ ಬೇಕಲ್ಲವೇ? ಹೀಗೆ ಪ್ರತೀ ಬರಹಕ್ಕೂ ಕೀಲಿಗಳನ್ನು ಕುಟ್ಟುತ್ತಾ ಕೂತರೆ ಕೀಲಿಗಳು ಕೀಲು ಬಿಟ್ಟುಕೊಂಡು ಉದುರಿದರೆ? ಕಂಪ್ಯೂಟರ್ ಹತ್ತಾರು ಸಾವಿರ ಬೆಲೆಬಾಳುವ ಉಪಕರಣ ತಾನೇ? ಸುಮ್ಮ ಸುಮ್ಮನೆ ಅದನ್ನು ಹಾಳುಗೆಡವಲು ಸಾಧ್ಯವೇ? ನಿಮಗೆ ಗೊತ್ತೇ ಇರಬಹುದು, ಟೀವೀ ಬಂದಾಗ ಅದರೊಂದಿಗೆ ಬರುವ ರಿಮೋಟ್ ಕಂಟ್ರೋಲ್ ಉಪಕರಣವನ್ನು ನಾವು ಜೋಪಾನ ಮಾಡೋ ರೀತಿ. ಕೆಲವರು ಪ್ಲಾಸ್ಟಿಕ್ ಕವರ್ ಹೊದಿಸಿದರೆ ಮತ್ತೆ ಕೆಲವರು ಪ್ಲಾಸ್ಟಿಕ್ ಕವಚ ಹಾಕುತ್ತಾರೆ, ಒತ್ತಿ ಒತ್ತಿ ಎಲ್ಲಿ ಬಟನ್ನುಗಳು ಕಿತ್ತು ಬರುತ್ತೋ ಎಂದು. ಈ ತೆರನಾದ ಕಾರಣವೇನಾದರೂ ಇರಬಹುದೇ ಪ್ರತಿಕ್ರಿಯೆಗಳ ಬರಗಾಲಕ್ಕೆ? ಕೆಲಸವಿಲ್ಲದವನು ಏನೋ ಬರೆದು ಹಾಕಿದ್ದಕ್ಕೆ ನಾವೇಕೆ ಪ್ರತಿಕ್ರಯಿಸಿ ನಮ್ಮ ಕೀ ಬೋರ್ಡ್ ಹಾಳುಗೆಡವ ಬೇಕು ಎನ್ನುವ ಧೋರಣೆಯೋ? ಹೊಸತಾಗಿ ಬರಹ ಕೈಗೆತ್ತಿ ಕೊಂಡು ಈ ರೀತಿಯ ಓದುಗ ಸಮೂಹದ ಅಸಡ್ಡೆಗೆ expose ಆದನೋ, ಅವನ ಗತಿ ದೇವರಿಗೇ ಪ್ರೀತಿ. ಬರಹ ನೂ ಬೇಡ ಏನೂ ಬೇಡ, ಇದು ನನ್ನ ಕೈಗೆ ಹೇಳಿಸಿದ ಕೆಲಸ ಅಲ್ಲ ಎಂದು ಮುದುಡಿ ಕೊಳ್ಳುತ್ತಾನೆ. ಆದರೆ ನನ್ನಂಥ ದಪ್ಪ ಚರ್ಮದ ಜನರಿಗೆ ಓದುಗರ “ಅಸಡ್ಡೆ” ಯೇ ಒಂದು ರೀತಿಯ ಮೂಕಿ (ಮೂಕಿ ಟಾಕಿ ಗೊತ್ತಲ್ಲ?) ಪ್ರತಿಕ್ರಿಯೆ.
- ನನ್ನ “ಹಳೇ ಸೇತುವೆ” ಬ್ಲಾಗ್ ಗೆ ಇದುವರೆಗೆ ಭೇಟಿ ಕೊಟ್ಟವರ ಸಂಖ್ಯೆ ೨೦,೦೦೦ ದಾಟಿದ “ಅವಿಸ್ಮರಣೀಯ ಅನುಭವ” ಕ್ಕೆ ಅರ್ಪಣೆ ಈ ಲಘು ಬರಹ. ಎಲ್ಲರಿಗೂ ವಂದನೆಗಳು.
- ಸೂಚನೆ: ಬೇಡ, ಬೇಡ, ಪ್ರತಿಕ್ರಿಯೆ ಬೇಡ, ನೀವು ಓದುವಾಗ ನಿಮ್ಮ ಕಣ್ಣುಗಳಲ್ಲೇ ನನಗೆ ಕಾಣುತ್ತಿದೆ ಶುಭಾಶಯಗಳು ಎನ್ನುವ ಹಾರೈಕೆ.
ಲೇಖನ
ವ್ರತಾಚರಣೆಯ ಮಾಸ
ರಮದಾನ್, (ರಂಜಾನ್ ಎಂದೂ ಕರೆಯಲ್ಪಡುತ್ತದೆ, ramzan) ಇಸ್ಲಾಮೀ ಪಂಚಾಂಗದ ಒಂಭತ್ತನೆ ತಿಂಗಳು ಮತ್ತು ಇಸ್ಲಾಮಿನ ಐದು ಸ್ಥಂಭಗಳಲ್ಲಿ ಮೂರನೆಯ ಸ್ಥಂಭವಾದ ರಮದಾನ್ ತಿಂಗಳಿನಲ್ಲಿ ಜಗತ್ತಿನ ಮುಸ್ಲಿಮರು ದಿನವಿಡೀ ಉಪವಾಸವಿದ್ದು ವಿಶೇಷ ಆರಾಧನೆಯಲ್ಲೂ, ಪವಿತ್ರ ಕುರಾನ್ ಪಾರಾಯಣದಲ್ಲೂ ತಮ್ಮ ಸಮಯ ಕಳೆಯುತ್ತಾರೆ. ಈ ಕಾರಣಕ್ಕಾಗಿ ಈ ಮಾಸವನ್ನು ದಾನದ, ಧ್ಯಾನದ ಮತ್ತು ಚಿಂತನೆಯ ಮಾಸವೆಂದು ಕರೆಯುತ್ತಾರೆ (month of charity, contemplation, and reflection). ಚಂದ್ರ ದರ್ಶನದೊಂದಿಗೆ ಆರಂಭವಾಗುವ ೩೦ ದಿನಗಳ ಈ ಉಪವಾಸ ವ್ರತ ಮುಸ್ಲಿಮ್ ಜಗತ್ತಿಗೆ ಹೊಸ ಚೈತನ್ಯವನ್ನೂ, ಧಾರ್ಮಿಕತೆಯನ್ನೂ ತುಂಬುತ್ತದೆ.
ನಮ್ಮನ್ನು ಸೃಷ್ಟಿಸಿದ ದೇವರಿಗೆ ಆರಾಧನೆ ಸಲ್ಲಿಸುವುದಕ್ಕೆ, ಪ್ರಾಮುಖ್ಯತೆ ಹೆಚ್ಚು. ಯಾವುದೇ ಪರಿಸ್ಥಿತಿಯಲ್ಲೂ ಐದು ಹೊತ್ತಿನ ನಮಾಜನ್ನು ನಿರ್ವಹಿಸಲೇಬೇಕು. ನಮಾಜ್ ಜೊತೆಗೆ ಕುರಾನ್ ಸೂಕ್ತಗಳನ್ನು ಪಠಿಸುವುದು, ಹಜ್ ಯಾತ್ರೆ, ಇವೂ ಸಹ ಆರಾಧನೆಯಲ್ಲೇ ಒಳಗೊಳ್ಳುತ್ತದೆ. ಆದರೆ ನಮಾಜ್, ಕುರಾನ್ ಪಠಣ, ಹಜ್ ಇತ್ಯಾದಿಗಳು ತೋರಿಕೆಯ ಆರಾಧನೆಯಾಗಿಯೂ ಮಾರ್ಪಡಬಹುದು. ನಾನು ಧರ್ಮಿಷ್ಠ ಎಂದು ತೋರಿಸಲು ಎಲ್ಲರಿಗೂ ಕಾಣುವಂತೆ ಮಸ್ಜಿದ್ ಗೆ ಹೋಗುವುದು, ಹಜ್ ಯಾತ್ರೆ ಮಾಡುವುದು ಹೀಗೆ. ಆದರೆ ವ್ರತಾಚಾರಣೆ ಹಾಗಲ್ಲ. ಇದೊಂದು ರಹಸ್ಯ ಆರಾಧನೆ. ಉಪವಾಸವಿರುವವನ ಮತ್ತು ಅವನ ಪ್ರಭುವಿಗೆ ಮಾತ್ರ ತಿಳಿಯುವ ಆರಾಧನೆ. ಮೂರನೆಯ ವ್ಯಕ್ತಿಗೆ ಇದರ ಅರಿವಿರುವುದಿಲ್ಲ; ಹಾಗಾಗಿ ವ್ರತಾಚರಣೆಗೆ ಹೆಚ್ಚು ಮಹತ್ವ.
ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗೆ ಉಪವಾಸದ ಅವಧಿ. ಅರುಣೋದಯದ “ಪ್ರಾರ್ಥನೆಯ ಕರೆ” ( “ಅದಾನ್” ) ಕಿವಿಗೆ ಬಿದ್ದ ಕೂಡಲೇ ಆಹಾರ, ಪಾನೀಯಗಳು ನಿಷಿದ್ಧವಾಗುತ್ತವೆ. ಅದೇ ರೀತಿ ಸೂರ್ಯಾಸ್ತದ ಪ್ರಾರ್ಥನೆಯ ಕರೆ ಕೇಳಿದ ಕೂಡಲೇ ಸ್ವಲ್ಪ ನೀರು ಮತ್ತು ಖರ್ಜೂರದ ಸಹಾಯದಿಂದ ಉಪವಾಸವನ್ನು ಕೊನೆಗೊಳಿಸಲಾಗುತ್ತದೆ. ಇಡೀ ದಿನದ ಉಪವಾಸದಿಂದ ಶರೀರದ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಆಗಬಾರದು ಎಂದು ಮಧ್ಯ ರಾತ್ರಿಯ ನಂತರ ಅಥವಾ ಅರುಣೋದಯದ ಸ್ವಲ್ಪ ಮೊದಲು ಸ್ವಲ್ಪವಾದರೂ ಆಹಾರ (ಇದಕ್ಕೆ “ಸುಹೂರ್” ಎಂದು ಕರೆಯುತ್ತಾರೆ) ತೆಗೆದು ಕೊಳ್ಳಲೇಬೇಕು. ಅದೇ ರೀತಿ ದಿನವಿಡೀ ಒಂದು ತೊಟ್ಟೂ ನೀರಿಲ್ಲದೆ, ತಮ್ಮ ದಿನಚರಿಗೆ ಯಾವುದೇ ಧಕ್ಕೆ ಬಾರದಂತೆ ತಮ್ಮ ಕೆಲಸ, ಧಂಧೆ ಮಾಡುತ್ತಾ ಉಪವಾಸವಿದ್ದು ಸೂರ್ಯಾಸ್ತಕ್ಕೆ ಒಂದು ಗುಟುಕು ನೀರು ಮತ್ತು ಒಂದು ತುಂಡು ಖರ್ಜೂರದ ಸಹಾಯದಿಂದ ಉಪವಾಸ ಕೊನೆಗೊಳಿಸುವುದಕ್ಕೆ “ಇಫ್ತಾರ್” ಎಂದು ಕರೆಯುತ್ತಾರೆ. ಇಫ್ತಾರ್ ಪದವನ್ನು ತಾವು ಕೇಳಿರಲೇಬೇಕು, ನಮ್ಮ ರಾಜಕಾರಣಿಗಳು ಮುಸ್ಲಿಂ ಗೆಳೆಯರಿಗೆ ಏರ್ಪಡಿಸುವ ಔತಣ. ಪ್ರಾಯಕ್ಕೆ ಬಂದ ಪ್ರತೀ ಮುಸ್ಲಿಮ್ ಉಪವಾಸ ವ್ರತ ಆಚರಿಸಲೇಬೇಕು ಎಂದು ಕಡ್ಡಾಯವಾದ ನಿಯಮ. ಖಾಯಿಲೆಯಿಂದ ಬಳಲುವವರಿಗೆ ಮತ್ತು ಯಾತ್ರಿಗಳಿಗೆ ಇದರಿಂದ ವಿನಾಯಿತಿ ಇದ್ದು ಯಾತ್ರೆ ಮುಗಿದ ನಂತರ, ಮತ್ತು ಖಾಯಿಲೆಯಿಂದ ಗುಣಮಮುಖರಾದ ನಂತರ ತಪ್ಪಿಹೋದ ಉಪವಾಸ ದಿನಗಳನ್ನು ಉಪವಾಸ ಇರುವ ಮೂಲಕ ತೀರಿಸಬೇಕು,ಅದೂ ಸಾಧ್ಯವಾಗದಿದ್ದರೆ ತಪ್ಪಿ ಹೋದ ದಿನಗಳಿಗೆ ಪ್ರಾಯಶ್ಚಿತ್ತವಾಗಿ ಬಡ ಬಗ್ಗರಿಗೆ ಅನ್ನದಾನ ಮಾಡಬೇಕು.
ರಮದಾನ್ ಮಾಸದ ಮಹತ್ವದ ಬಗ್ಗೆ ಹೇಳುತ್ತಾ ಪ್ರವಾದಿಗಳು ಹೇಳಿದ್ದು, ರಮದಾನ್ ಮಾಸ ೭೦,೦೦೦ ತಿಂಗಳು ಗಳಿಗೆ ಸಮಾನ ಎಂದು. ಅದೂ ಅಲ್ಲದೆ ಇದೇ ತಿಂಗಳಿನಲ್ಲಿ ಪವಿತ್ರ ಕುರಾನ್ ನ ಸೂಕ್ತಗಳು ಅವತೀರ್ಣವಾಗಿದ್ದು. ಈ ಕಾರಣಕ್ಕಾಗಿ ಜಗದಾದ್ಯಂತ ಮುಸ್ಲಿಮರು ಈ ತಿಂಗಳ ತಮ್ಮ ಬಿಡುವಿನ ವೇಳೆಯಲ್ಲಿ ಮತ್ತು ಹೆಚ್ಚು ಸಮಯ ಕುರಾನ್ ಪಾರಾಯಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹಾಗೆಯೆ ಈ ತಿಂಗಳಿನಲ್ಲಿ ರಾತ್ರಿಯಲ್ಲಿ “ತರಾವೀಹ್” ಎಂದು ಕರೆಯಲ್ಪಡುವ ವಿಶೇಷ ಪ್ರಾರ್ಥನೆಗಳು ಸಹ ನಡೆಯುತ್ತವೆ. ಪ್ರತೀ ಆರಾಧನೆ, ದಾನ, ಒಳ್ಳೆಯ ಮಾತು, ಕೃತಿ ಇವುಗಳಿಗೆ ಪ್ರತಿಫಲ ಸಹ ೭೦,೦೦೦ ಪ್ರತಿಫಲದ ರೀತಿಯಲ್ಲಿ ದೇವರು ಕೊಡುವನೆಂದೂ ಮುಸ್ಲಿಮ್ ವಿಧ್ವಾಂಸರು ಹೇಳುತ್ತಾರೆ.
ರಮದಾನ್ ತಿಂಗಳಿನಲ್ಲಿ ನಾವು ಮಾಡುವ ಪ್ರತೀ ಕೆಲಸವೂ ಇಸ್ಲಾಮೀ ಆದರ್ಶಗಳಿಗೆ ಪೂರಕವಾಗಿರಬೇಕೆಂದು ವಿಧ್ವಾಂಸರುಗಳು ಎಚ್ಚರಿಸುತ್ತಾರೆ. ಈ ಮಾಸದಲ್ಲಿ ಉದ್ರೇಕ ಪಡುವುದಾಗಲೀ,ಕೆರಳುವುದಾಗಲೀ ಮಾಡಬಾರದು. ಹಾಗೇನಾದರೂ ಯಾರಾದರೂ ಉದ್ರೇಕಿಸಿದರೆ “ನಾನು ವ್ರತಾಚರಣೆ ಮಾಡುತ್ತಿದ್ದೇನೆ” ಎಂದು ಹೇಳಿ ಮೌನವಾಗಿರಬೇಕು ಎಂದು ಸಲಹೆ ನೀಡುತ್ತಾರೆ. ಜ್ಞಾನಾರ್ಜನೆ, ಮತ್ತು ಸಂಯಮ ಪಾಲನೆ ರಮದಾನ್ ತಿಂಗಳ ವೈಶಿಷ್ಟ್ಯ ಎನ್ನಬಹುದು. ವ್ರತಾಚರಣೆಯ ಮೂಲಕ ರಮದಾನ್ ತಿಂಗಳು ನಮಗೆ “ಸ್ವ ನಿಗ್ರಹ” ದ ಗುಣವನ್ನೂ, ಸಂಯಮ ಶೀಲತೆಯನ್ನೂ ಕಲಿಸುತ್ತದೆ. ಈ ತೆರನಾದ ನಡವಳಿಕೆ ಮುಸ್ಲಿಮರು ಬರೀ ರಮದಾನ್ ಮಾಸಕ್ಕೆ ಸೀಮಿತಗೊಳಿಸದೆ ತಮ್ಮ ಬದುಕಿನ ಪ್ರತೀ ಘಳಿಗೆಯಲ್ಲೂ ಪಾಲಿಸಿದರೆ ದೇವರು ಯಶಸ್ಸನ್ನು ದಯಪಾಲಿಸುತ್ತಾನೆ ಸಮಾಜಕ್ಕೆ ಆದರ್ಶಪ್ರಾಯನಾಗಿ ಬದುಕುತ್ತಾನೆ.
ಪ್ರತೀ ಮುಸ್ಲಿಂ ಮನೆಯಲ್ಲೂ ರಮದಾನ್ ಒಂದು ವಿಶೇಷ ತಿಂಗಳಾಗಿರುತ್ತದೆ. ಅದರಲ್ಲೂ ಮಕ್ಕಳಿಗೆ ಒಂದು ರೀತಿಯ ಸಂತಸ. ಐದು ವರ್ಷದ ಮೇಲ್ಪಟ್ಟ ಮಕ್ಕಳೂ ಸಹ ಪೂರ್ತಿ ತಿಂಗಳಲ್ಲದಿದ್ದರೂ ಸಾಧ್ಯವಾದಷ್ಟು ದಿಂದ ಉಪವಾಸ ಆಚರಿಸಲು ಯತ್ನಿಸುತ್ತಾರೆ. ನನ್ನ ಆರು ವರ್ಷದ ಮಗ ಕಳೆದ ಎರಡು ವರ್ಷಗಳಿಂದ ೮ – ೧೦ ದಿನ ಉಪವಾಸವಿದ್ದನು. ಸಂಜೆಯಾಗುತ್ತಿದ್ದಂತೆ ಮಕ್ಕಳು ಕಾತುರದಿಂದ ಮಸ್ಜಿದ್ ಗಳ ಗೋಪುರಗಳು ಹೊರಡಿಸುವ ಅದಾನ್ ಗಾಗಿ ಕಾದು ನಿಂತು “ಅಲಾಹು ಅಕ್ಬರ್” (ದೇವರು ಸರ್ವಶ್ರೇಷ್ಠ ) ಎನ್ನುವುದನ್ನು ಕೇಳುತ್ತಲೇ ಓಡಿ ಬಂದು ಅಮ್ಮಾ, ಅಪ್ಪಾ, ಅದಾನ್ ಆಗುತ್ತಿದೆ, ಬೇಗ ನೀರು ಕುಡಿಯಿರಿ ಎಂದು ಉತ್ತೇಜಿಸುತ್ತಾರೆ.
೩೦ ದಿನಗಳ ಉಪವಾಸ ಮುಗಿದ ನಂತರ ಚಂದ್ರ ದರ್ಶನ ವಾಗುತ್ತಲೇ “ಈದ್” ಸಂಭ್ರಮ ಎಲ್ಲೆಡೆ. ಚಂದ್ರ ದರ್ಶನ ಆಗುತ್ತಲೇ ಮಾರನೆ ದಿನದ ಈದ್ ನಂದು ಯಾರೂ ತಿನ್ನಲು ಇಲ್ಲದೆ ಬಳಲಬಾರದು ಎಂದು ಬಡಬಗ್ಗರಿಗೆ ಅಕ್ಕಿ ದಾನ ಮಾಡುತ್ತಾರೆ. ಈ ದಾನದಿಂದಾಗಿಯೇ ಈದ್ ಹಬ್ಬಕ್ಕೆ “ಈದ್ ಅಲ್ ಫಿತ್ರ್” ಎಂದು ಹೆಸರು.
ಸೌದಿ ಅರೇಬಿಯಾದಲ್ಲಿ ರಮದಾನ್ ತುಂಬಾ ಸೊಗಸು. ಇಡೀ ತಿಂಗಳು ಮತ್ತು ಅದರ ನಂತರ ಬರುವ ಸುಮಾರು ಹತ್ತು ದಿನಗಳ ಈದ್ ಸಂಭ್ರಮ. ಇಡೀ ನಗರವೇ ಅಲಂಕಾರದಲ್ಲಿ ಮುಳುಗಿರುತ್ತದೆ. ಎಲ್ಲೆಲ್ಲೂ ವಿಶೇಷ offer ಗಳು, ಬಹುಮಾನಗಳು, ರಸ್ತೆ ಬದಿಯಲ್ಲಿ ಉಪವಾಸವಿಟ್ಟುಕೊಂಡು ಪ್ರಯಾಣ ಮಾಡುವವರಿಗೆ ಪುಕ್ಕಟೆ ತಿಂಡಿ ತೀರ್ಥಗಳ ವಿತರಣೆ, ನಿರ್ಗತಿಕರಿಗೆ, ಕೆಳಸ್ತರದ ಉದ್ಯೋಗ ಮಾಡುವವರಿಗೆ ದಾನ ಮಾಡುವಲ್ಲಿ ಪೈಪೋಟಿ, ಹೀಗೆ ನಾನಾ ರೀತಿಯ ಚಟುವಟಿಕೆಗಳನ್ನು ಕಾಣಬಹುದು. ಕೆಲಸದ ಸಮಯವೂ ನಾಲ್ಕು ಅಥವಾ ಐದು ಘಂಟೆಗಳು. ಹಾಗಾಗಿ ಉಪವಾಸವಿರುವುದು ಬಹಳ ಸುಲಭ ಅರೇಬಿಯಾದಲ್ಲಿ.
(ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು
ಬರಹದಲ್ಲಿ ಯಶಸ್ವಿಯಾಗಲು ಮೂರು ಸೂತ್ರಗಳಿವೆ.ಅವುಗಳ ಬಗ್ಗೆ ತಿಳಿಯುವ ಮೊದಲು ಒಂದು ನೋಟ ಬೀರೋಣ ನಮ್ಮ ಆಕಾಂಕ್ಷೆಯ ಬಗ್ಗೆ.
ಬರೆಯಬೇಕು ಎನ್ನುವ ಹಂಬಲ, ಚಪಲ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದಿದ್ದೇ. ಆದರೆ ಕೆಲವರು ಬರವಣಿಗೆಯನ್ನು ಎಲ್ಲಿಂದ ಆರಂಭಿಸಬೇಕು ಎಂದು ತಿಳಿಯದೆ ಭಾವನೆಗಳನ್ನು ತಮ್ಮಲ್ಲೇ ಇಟ್ಟು ಕೊಂಡಿರುತ್ತಾರೆ. ತಾವು ಬರೆದದ್ದನ್ನೆಲ್ಲಾ ಪತ್ರಿಕೆಗಳು ಪ್ರಕಟಿಸಬೇಕೆಂದೇನೂ ಇಲ್ಲವಲ್ಲ. ಆದರೆ ಅಂತರ್ಜಾಲದ ಉಗಮದೊಂದಿಗೆ ಬರೆಯುವವರಿಗೆ ಒಂದು ವೇದಿಕೆಯಾಗಿ, ವರವಾಗಿ ಬಂದವು ಬ್ಲಾಗ್ ಗಳು. ಚಿಕ್ಕಾಸಿನ ಖರ್ಚಿಲ್ಲದೆ ತಮಗೆ ಇಷ್ಟವಾದ ಹೆಸರಿನಲ್ಲಿ ಬ್ಲಾಗೊಂದನ್ನು ಆರಂಭಿಸಿಕೊಂಡು ನಮಗೆ ತೋಚಿದ್ದನ್ನು ಬರೆಯಬಹುದು. ಅಥವಾ ತಾವು ಬರೆದದ್ದು ಸಾರ್ವಜನಿಕರಿಗೆ ಕಾಣಿಸಬಾರದು ಎಂದೇನಾದರೂ ಆಸೆಯಿದ್ದರೆ ಅದಕ್ಕೂ ಹಾಕಬಹುದು ಕಡಿವಾಣವ ಸೆಟ್ಟಿಂಗ್ಸ್ ಮೂಲಕ.
ಸರಿ ಬ್ಲಾಗ್ ಏನೋ ತೆರೆದಾಯಿತು. ಬರೆಯಲು ಈಗ ಲಾಂಚಿಂಗ್ ಪ್ಯಾಡ್ ಆಗಿ ಬ್ಲಾಗ್ ಒಂದನ್ನು ತೆರೆದಾಯಿತು. ಜಿಗಿಯೋದು ಹೇಗೆ?
ಈಜಲು ಕಲಿಯಬೇಕೆಂದರೆ ಧುಮುಕಬೇಕು ನೀರಿಗೆ. ಬರೆಯಬೇಕು ಎಂದೆನ್ನಿಸಿದರೆ ಕೂಡಲೇ ಒಂದು ಪ್ರಶಸ್ತವಾದ ಸ್ಥಳವನ್ನ ಆರಿಸಿಕೊಂಡು ತೊಡಗಬೇಕು ಪೋಣಿಸಲು ಅಕ್ಷರಗಳನ್ನು. ಆದರೆ ಈ ಕೆಲಸ ಹೇಳಿದಷ್ಟು ಸುಲಭವಲ್ಲದಿದ್ದರೂ ಬರೆಯುವ ಹಂಬಲವಿದ್ದರೆ ಬರೆಯಲೇಬೇಕು. we do not write because we want to; we write because we have to ಸುಪ್ರಸಿದ್ಧ ಸಾಹಿತಿ “ಸಾಮರ್ಸೆಟ್ ಮಾಹಂ” (somerset maugham) ಅವರ ಮಾತುಗಳಿವು.
ಇನ್ನು ಬರೆಯಲು ನಮ್ಮನ್ನು ನಾವು ತೊಡಗಿಸಿಕೊಂಡರೆ ಬೇಕಾಗುವ ಅವಶ್ಯಕತೆಗಳಲ್ಲಿ “ಓದು” ಮೊಟ್ಟ ಮೊದಲನೆಯದು. ನಮಗಿಷ್ಟವಾದ ಲೇಖಕರ ಲೇಖನ, ಬರಹಗಳನ್ನ ಓದಿ ಅವರು ಬರೆಯುವ ಶೈಲಿ, ಪದ ಪ್ರಯೋಗ ಮುಂತಾದುವುಗಳನ್ನು ಗಮನಿಸಿ ನಮ್ಮ ಬರಹಗಳಲ್ಲಿ ಅವನ್ನು ಅಳವಡಿಸಿಕೊಂಡರೆ ನಮ್ಮ ಬರಹದ ಕಡೆಗಿನ ಪ್ರಯಾಣ ಸುಖಕರ. ಆಂಗ್ಲ ಸಾಹಿತ್ಯದಲ್ಲಿ ಆಸಕ್ತಿಯುಳ್ಳವರು ಮೇಲೆ ಹೇಳಿದ Somerset Maugham ಅವರ ಕಥೆಗಳನ್ನ ಓದಿದರೆ ಬಹಳಷ್ಟನ್ನು ಕಲಿಯಬಹುದು. ಮಾಹಂ ಅವರ of human bondage ನನ್ನನ್ನು ಕಾಡಿದ, ಮನ ಕರಗಿಸಿದ ಪುಸ್ತಕಗಳಲ್ಲೊಂದು. ಮತ್ತೊಂದು Wilkie Collins ಅವರ woman in white.
ಮೊನ್ನೆ ದುಬೈ ನಗರದ ಕಂಪೆನಿಯೊಂದು ಜೆಡ್ಡಾದಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಿತ್ತು. ಅಲ್ಲಿ ಪುಸ್ತಕವೊಂದನ್ನು ಕೊಂಡೆ. “chicken soup for writer’s soul”. ಈ ಪುಸ್ತಕ ನೂರಾರು ಉದಾಹರಣೆಗಳ ಸಮೇತ ಹಲವು ಬರಹಗಾರರ ಅನುಭವಗಳನ್ನ ಕೊಟ್ಟು ಎಂಥ ನಕಾರಾತ್ಮಕ ಪ್ರತಿಕ್ರಿಯೆಗಳಿಗೂ ಸೊಪ್ಪು ಹಾಕದೆ ಮುನ್ನಡೆಯಲು ಪ್ರೋತ್ಸಾಹಿಸುತ್ತದೆ. ನನ್ನ ಪ್ರಕಾರ ನವ ಬರಹಗಾರರಿಗೆ ಇದಕ್ಕಿಂತ ಉತ್ತಮ ಪುಸ್ತಕ ಬೇರೊಂದಿಲ್ಲ. ಆ ಪುಸ್ತಕದಲ್ಲಿ ನ ಸ್ವಾರಸ್ಯಕರವಾದ ತುಣುಕುಗಳನ್ನು ವೈಯಕ್ತಿಕ ಬ್ಲಾಗ್ ನಲ್ಲಿ ಬರೆಯುತ್ತೇನೆ.
ಒಹ್, ಈ ಪುರಾಣ ಎಲ್ಲಾ ಬಿಟ್ಟು ಆ ಮಾಂತ್ರಿಕ “ಸೂತ್ರ” ಗಳ ಬಗ್ಗೆ ಹೇಳಬಾರದೇ ಎಂದು ಹಲ್ಲನ್ನು ಕಟ ಕಟಾಯಿಸಬೇಡಿ. ಬರುತ್ತೇನೆ, ಸೂತ್ರಕ್ಕೆ ಶೀಘ್ರದಲ್ಲೇ.
ಹಾಂ, ನೋಡಿ. ಸೂತ್ರಗಳು ಎಂದಾಗ ಮತ್ತೊಂದು ಮಾತು ನೆನಪಾಯಿತು. ಸುಖ ಸಂಸಾರಕ್ಕೆ ಹತ್ತು ಸೂತ್ರಗಳು. ಅವುಗಳಲ್ಲಿ ಒಂದು, ಯಾವುದೇ ಕಾರಣಕ್ಕೂ ರಾತ್ರಿ ತರಗತಿಗಳಿಗೆ ಹೋಗಬಾರದು. (ಈ ರಾತ್ರಿ ತರಗತಿ ಬಗ್ಗೆ ಬ್ಲಾಗ್ ಬರೆದಿದ್ದೇನೆ ಸಂಪದದಲ್ಲಿ). ಮೂಗಿಗೆ ತುಪ್ಪ ಸವರೋದನ್ನು ನಿಲ್ಲಿಸಿ ಸೂತ್ರ ಅನಾವರಣ ಮಾಡ್ತೀಯೋ ಇಲ್ವೋ ಎಂದು ಧಮಕಿ ಕೊಡಬೇಡಿ. ತಾಳಿದವನು ಬಾಳಿಯಾನು. ಬರಹಕ್ಕೆ ಈ attitude ಅತ್ಯವಶ್ಯಕ. ಸುಖೀ ಸಂಸಾರಕ್ಕೂ ಅಷ್ಟೇ. ಸಂಯಮ ಬೆಳೆಸಿಕೊಳ್ಳಬೇಕು. ಲೇಖನ ವಾಪಸು ಮಾಡಿದ ಸಂಪಾದಕನ ಮೇಲೆ ಹರಿಹಾಯ್ದರೆ ಕೆಲಸ ನಡೆಯೋಲ್ಲ. chicken soup for soul ಎನ್ನುವ ಮತ್ತೊಂದು ಪುಸ್ತಕ ಡಜನ್ಗಟ್ಟಲೆ ಒಂದು ಪ್ರಕಾಶಕರಿಂದ ಮತ್ತೊಂದು ಪ್ರಕಾಶಕರವರೆಗೆ ಗಡಿಯಾರದ pendulum ನಂತೆ ಲಾಳಿ ಹೊಡೆದ ನಂತರವೇ ಕ್ಲಿಕ್ ಆಗಿದ್ದು. ಹಾಗಾಗಿ ತಾಳ್ಮೆ ಇರಲಿ. perseverance and patience. ಇವೆರಡು ಬರೀ ಬರಹಕ್ಕೆ ಮಾತ್ರವಲ್ಲ ಬದುಕಿನ ಎಲ್ಲಾ ಮಜಲುಗಳಿಗೂ ಹರಡಲಿ ಈ ಕಂಪು. perseverance and patience ನ ಕಂಪು.
ಮತ್ತೊಂದು ವಿಷಯ. ಬರೆಯಿರಿ, ಆದರೆ ಯಾರನ್ನೂ ಇಂಪ್ರೆಸ್ ಮಾಡಲು ಬೇಡ. ಏನಿಲ್ಲವೆಂದರೂ ನಿಮ್ಮ ತುಡಿತ, ತುರಿಕೆ ತೀರಿಸಿಕೊಳ್ಳಲಾದರೂ ಬರೆಯಿರಿ. ಅಬ್ದುಲ್, ಆ ಮೂರು ಸೂತ್ರ ಗಳು ಎಲ್ಲಯ್ಯ….. ಇಗೋ ಬಂದೆ ಮೂರು ಸೂತ್ರಗಳೊಂದಿಗೆ.
ಸಾಮರ್ಸೆಟ್ ಮಾಹಂ ಹೇಳುತ್ತಾರೆ, “ಬರೆಯಲು ಮೂರು ಸೂತ್ರಗಳು. ಆದರೆ ಅವು ಯಾವುವು ಎಂದು ದುರದೃಷ್ಟವಶಾತ್ ಯಾರಿಗೂ ಗೊತ್ತಿಲ್ಲ”.
ಹೌದು, ಮಾಹಂ ಹೇಳಿದ್ದು ಸರಿ. ಮಂತ್ರಕ್ಕೆ ಮಾವಿನ ಕಾಯಿ ಉದುರಿದ್ದನ್ನು ಕಂಡಿದ್ದೀರಾ?
ನನ್ನ ತಲೆ ಚಚ್ಚಲು ಇಟ್ಟಿಗೆ ಚೂರನ್ನು ಯಾಕೆ ಹುಡುಕುತ್ತಿದ್ದೀರಾ, ಅಲ್ಲೇ ಪಕ್ಕದಲ್ಲೇ ಇರುವ ಕೀ ಬೋರ್ಡಿನಿಂದ ಟ್ವೀಕಿಸಬಾರದೇ ನಿಮ್ಮ ಮನದೊಳಗಿನ ಮಾತುಗಳನ್ನು, ಮೌನಗಳನ್ನು?
ಚಿತ್ರ: ನನ್ನ “ನಡೆಯುಲಿ”ಯಿಂದ

