ವ್ಯಾಟಿಕನ್ ನಿಯಮ

ಇತ್ತೀಚೆಗೆ ಕ್ರೈಸ್ತ ಧರ್ಮದ ಜಗದ್ಗುರು ಪೋಪ್ ರವರನ್ನು ಭೇಟಿಯಾಗಲು ಬ್ರಿಟನ್ ದೇಶದ ಕೆಲವು ಮಂತ್ರಿಗಳು ಹೋಗಿದ್ದರು. ಪೋಪ್ ಒಬ್ಬ ವಿಶ್ವದ ಗೌರವಾನ್ವಿತ ಮತ್ತು ಆದರಿಸಲ್ಪಡುವ ಧರ್ಮಗುರುಗಳು, ಹಾಗೆಯೇ head of state ಸ್ಥಾನ ಮಾನವನ್ನು ಹೊಂದಿರುವವರು ಸಹ. ಇವರನ್ನು ಭೇಟಿಯಾಗಲು ಮಂತ್ರಿ ಮಹೋದಯರು, ಗಣ್ಯರು ಹೋಗುವುದು ಸಹಜವೇ. contraception (ಗರ್ಭನಿರೋಧಕ) ಬಳಕೆಯಿಂದ ಹಿಡಿದು climate change ವರೆಗೆ ಚರ್ಚಿಸಲು ಪೋಪ್ ರನ್ನು ಭೇಟಿಯಾಗುತ್ತಾರೆ ಜನ. ಪೋಪ್ ರನ್ನು ಭೇಟಿಯಾದ ಬ್ರಿಟಿಷ ತಂಡದ ಕುರಿತು ನನ್ನ ಆಸಕ್ತಿ ಏನೆಂದರೆ, ತಂಡದಲ್ಲಿ ‘ಸಯೀದ ಹುಸೇನ್ ವಾರ್ಸಿ’ ಎನ್ನುವ ಮುಸ್ಲಿಂ ಮಹಿಳೆ ಸಹ ಇದ್ದರು. ಈಕೆ ಬ್ರಿಟಿಷ್ ಮಂತ್ರಿಮಂಡಲದ ಏಕೈಕ ಮುಸ್ಲಿಂ ಮಹಿಳಾ ಸಚಿವೆ. ವಾರ್ಸಿ ಪೋಪ್ ರನ್ನು ಕಾಣಲು ಹೋಗುವಾಗ vatican protocol ಪ್ರಕಾರ ಕಪ್ಪು ವಸ್ತ್ರ ಮತ್ತು ಸ್ಕಾರ್ಫ್ ಧರಿಸಿದ್ದರು. ಇದು ವಿಶ್ವದ ಅತಿ ಚಿಕ್ಕ ದೇಶವಾದ ಸುಮಾರು ೧೧೦ ಎಕರೆ ವಿಸ್ತೀರ್ಣದ ವ್ಯಾಟಿಕನ್ ನ ನಿಯಮ.

ವ್ಯಾಟಿಕನ್ ಕ್ರೈಸ್ತರ ಅತ್ಯಂತ ಪವಿತ್ರ ಕ್ಷೇತ್ರ. ತೋಚಿದ ರೀತಿಯ ಉಡುಗೆ ತೊಡುಗೆ ಸಲ್ಲದು. ಶಿಷ್ಟಾಚಾರಗಳು ಎಲ್ಲೆಲ್ಲಿ ಅವಶ್ಯಕವೋ ಅವುಗಳನ್ನ ಗೌರವಿಸಿ, ಅನುಸರಿಸಬೇಕು. ಈ ತೆರನಾದ ನಿಯಮಗಳು ಯಾವುದೇ ಸಮಾಜ ಅಥವಾ ಸಂಸ್ಕೃತಿಗಳಲ್ಲಿದ್ದರೆ ಅವುಗಳಿಗೆ ಬೇರೆಯೇ ತೆರನಾದ ಅರ್ಥ ಕೊಟ್ಟು ಟೀಕಿಸಬಾರದು. ನಮಗೊಂದು ನ್ಯಾಯ, ಪರರಿಗೊಂದು ನ್ಯಾಯ, ಈ ಬೇಧ ಭಾವ ಉದ್ಭವಿಸಿದಾಗ ಸಹಜವಾಗಿಯೇ ಸಂಘರ್ಷಕ್ಕೆ ಹಾದಿ ಮಾಡಿ ಕೊಡುತ್ತದೆ.

ಕ್ರೈಸ್ತರ ಪವಿತ್ರ ಕ್ಷೇತ್ರ ದಂತೆಯೇ ಇಸ್ಲಾಮಿನ ಎರಡು ಪವಿತ್ರ ಕ್ಷೇತ್ರ ಗಳಾದ ಮಕ್ಕಾ ಮತ್ತು ಮದೀನಾ ನಗರಗಳು ಸೌದಿ ಅರೇಬಿಯಾದಲ್ಲಿವೆ. ವಿಶೇಷವೇನೆಂದರೆ ಕೇವಲ ಮಕ್ಕಾ, ಮದೀನ ಮಾತ್ರ ಪವಿತ್ರ ನಗರಗಳಲ್ಲ, ಬದಲಿಗೆ ಇಡೀ ಸೌದಿ ಅರೇಬಿಯಾ ದೇಶವೇ ಇಸ್ಲಾಮಿನ ಪುಣ್ಯ ಭೂಮಿ. ಹಾಗೆಂದು ಮುಸ್ಲಿಂ ವಿಧ್ವಾಂಸರ ಅಭಿಪ್ರಾಯವೂ ಹೌದು. ಮಕ್ಕಾ, ಮದೀನ ನಗರಗಳಿಗೆ ಮುಸ್ಲಿಮೇತರರು ಬರುವ ಹಾಗಿಲ್ಲ, ಹಾಗೆಯೇ ಸೌದಿ ಅರೇಬಿಯಾ ದೇಶಕ್ಕೆ ಬರುವವರೂ ವಸ್ತ್ರದ ವಿಷಯದಲ್ಲಿ modesty ತೋರಿಸಬೇಕು. ಮಹಿಳೆಯರು ನೀಳ, ಕಪ್ಪು ಬಟ್ಟೆ ಧರಿಸಬೇಕು. ಇದಕ್ಕೆ ಹಿಜಾಬ್ ಎನ್ನುತ್ತಾರೆ. ಸ್ವಾರಸ್ಯವೇನೆಂದರೆ ವ್ಯಾಟಿಕನ್ ವಿಷಯದಲ್ಲಿ ತೋರಿಸುವ ಸಜ್ಜನಿಕೆ ಮುಸ್ಲಿಂ ಧರ್ಮೀಯ ಆಚರಣೆಗೆ ಇಲ್ಲದಿರುವುದು. ಸೌದಿ ಅರೇಬಿಯಾದ ಉಡುಗೆ ಮತ್ತು ಇತರೆ ನಿಯಮಗಳ ಬಗ್ಗೆ ಟೀಕೆಗಳು ಕೇಳಿ ಬರುತ್ತಲೇ ಇರುತ್ತವೆ.

ಭಾವನೆಗಳನ್ನು ಮನ್ನಿಸುವ ಔದಾರ್ಯ ಎಲ್ಲರಿಗೂ ಏಕೆ ಲಭ್ಯವಲ್ಲ ಎನ್ನುವುದು ಒಂದು ದೊಡ್ಡ ಪ್ರಶ್ನೆ.

ತಿಂಗಳ ತುಣುಕು

ಇಂದು ಆಗಸ್ಟ್ ತಿಂಗಳ ಆರಂಭ. ನಮಗೆ ಸ್ವಾತಂತ್ರ್ಯ ಸಿಕ್ಕಿದ, ಬಿಳಿಯರಿಂದ ಮುಕ್ತಿ ಸಿಕ್ಕಿದ ಮಾಸ. ಅಷ್ಟೇ ಅಲ್ಲ ನಾನು ಹುಟ್ಟಿದ ತಿಂಗಳೂ ಹೌದು. ಹಾಗಾಗಿ ಈ ತಿಂಗಳಿಗೆ ವಿಶೇಷ ಪ್ರಾಶಸ್ತ್ಯ. ಆಗಸ್ಟ್ ತಿಂಗಳಲ್ಲೇ ಇಂಗ್ಲೆಂಡಿನ ಜನರ ಅಚ್ಚುಮೆಚ್ಚಿನ ರಾಜಕುಮಾರಿ, ರಾಜಕುಮಾರ ಚಾರ್ಲ್ಸ್ ರವರ ಪತ್ನಿ ಡಯಾನ ಅಪಘಾತವೊಂದರಲ್ಲಿ  ನಿಧನ (ಆಗಸ್ಟ್ ೩೧, ೧೯೯೭) ಹೊಂದಿದ ದಿನ.  

ರೋಮ್ ಚಕ್ರವರ್ತಿ “ಆಗಸ್ಟಸ್ ಕಸೆಸರ್” ಸ್ಮರಣಾರ್ಥ ಸೆಕ್ಸ್ಟಿಲಿಸ್ ಎಂದು ಇದ್ದ ಹೆಸರನ್ನು ಆಗಸ್ಟ್ ಎಂದು ನಾಮಕರಣ ಮಾಡಲಾಯಿತು. ಈ ಚಕ್ರವರ್ತಿ ಆಳುವಾಗ ಎಂಟನೆ ತಿಂಗಳಿನಲ್ಲಿ ಮಹತ್ವ ಪೂರ್ಣ ಘಟನೆಗಳು ಜರುಗಿದ್ದರಿಂದ ಆತನ ಗೌರವಾರ್ಥ ಆಗಸ್ಟ್ ಎಂದು ಹೆಸರು ಬಂದಿದ್ದು.

ಆಗಸ್ಟ್ ತಿಂಗಳಿನಲ್ಲೇ ಅಮೆರಿಕೆಯ ಕರಿಯರ ನಾಯಕ ಮಾರ್ಟಿನ್ ಲೂಥರ್ ಕಿಂಗ್ i have a dream ಎನ್ನುವ ಅದ್ಭುತ ಭಾಷಣ ಮಾಡಿ ಅಮೇರಿಕ ಕರಿಯರನ್ನು ನಡೆಸಿಕೊಂಡ ಬಗೆಯನ್ನು ಜನಸ್ತೋಮಕ್ಕೆ ವಿವರಿಸಿದರು.

ಆಗಸ್ಟ್ ತಿಂಗಳಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆ ಮತ್ತು ಜಮೈಕಾ ದೇಶಕ್ಕೂ ಆಗಸ್ಟ್ ತಿಂಗಳಿನಲ್ಲೇ ಬ್ರಿಟಿಷರ ದಾಸ್ಯದಿಂದ ಮುಕ್ತಿ ಸಿಕ್ಕಿದ್ದು.

ಜೋಸೆಫ್ ಪ್ರೀಸ್ಟ್ಲಿ ಆಮ್ಲಜನಕ ವನ್ನ ಕಂಡು ಹಿಡಿದಿದ್ದು ೧೭೭೪, ಆಗಸ್ಟ್ ತಿಂಗಳಿನಲ್ಲಿ.