ಯಾರ ಸೋಲು, ಯಾರ ಗೆಲುವು

ಬೆಂಗಳೂರು ನಗರ ಕಾತುರದಿಂದ ಕಾಯುತ್ತಿದ್ದ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿಯ ಭಾರತ ಇಂಗ್ಲೆಂಡ್ ನಡುವಿನ ಹಣಾಹಣಿ ರೋಮಾಂಚಕಾರಿಯಾಗಿ ಕೊನೆಗೊಂಡಿತು. ಗೆಲ್ಲಲು ೩೩೮ ರ ಗುರಿಯನ್ನು ಕೆಚ್ಚೆಯಿಂದ ಸ್ವೀಕರಿಸಿದ ಅಂಡ್ರೂ ಸ್ಟ್ರಾಸ್ ನ ಬಂಟರು ಗೆಲುವಿನ ಹೊಸ್ತಿಲಿನವರೆಗೂ ಬಂದು ಬರಿಗೈಲಿ ಹೋದರು. ಬರಿಗೈಲಿ ಹೋದರು ಆದ್ರೆ  ಹೋಗಿದ್ದು ಮಾತ್ರ ಹಿಗ್ಗುತ್ತಾ, ಮುಗುಳ್ನಗುತ್ತಾ. ಭಾರತೀಯರ ಹೃದಯಗಳು ಅವರ ಬಾಯಿಗಳಿಗೆ ಬರುವಂತೆ ಮಾಡಿದ ನಮ್ಮ ಮಾಜಿ ಯಜಮಾನರುಗಳು ತಾವೆಂಥಾ ಆಟಗಾರರೆಂದು ವಿಸ್ಮಯಕಾರಕವಾಗಿ ತೋರಿಸಿದರು. ವಿಪರೀತ ಕೇಕೆ ಹಾಕುವ ಬೆಂಗಳೂರಿನ ಜನರ  ಸದ್ದಡಗಿಸುತ್ತೇವೆ ಎನ್ನುವಂಥ ಸ್ಪಿನ್ನೆರ್ “ಸ್ವಾನ್” ನ ಹೇಳಿಕೆಗೆ ನ್ಯಾಯ ಒದಗಿಸುವಂತೆ ಆಡಿದ ಇಂಗ್ಲೆಂಡ್ ನಾಯಕ ತನ್ನ ಜೀವನದ ಅತ್ಯುತ್ತಮ ಇನ್ನಿಂಗ್ಸ್ ಅನ್ನು ಬೆಂಗಳೂರಿಗರಿಗೆ ಉಣಬಡಿಸಿದ.

ಆದರೆ ೩೩೯ ಮಾಡಿದ್ದು ನಮ್ಮ ಸಾಹಸವಲ್ಲವೇ? ಅಷ್ಟೇ ಅಲ್ಲ ಆ ಗುರಿ ಮುಟ್ಟದಂತೆ ತಡೆಯುವಲ್ಲಿ ನಾವು ಯಶಸ್ವಿಯಾಗಲಿಲ್ಲವೇ? no. a resounding NO. ೩೩೯ ಮಾಡಿ ಮುನ್ನೂರರ ಒಳಗೆ ಅವರ ಇನ್ನಿಂಗ್ಸ್ ಅನ್ನು ಕವುಚಿ ಬಿಟ್ಟಿದ್ದರೆ ನಾವು ಹೆಮ್ಮೆ ಪಡಬಹುದಿತ್ತು. ಆ ರೀತಿ ಮಾಡದೆ ಶತ್ರು ನಮ್ಮ ಅಡುಗೆ ಮನೆ ತನಕ ನುಸುಳಲು ಬಿಟ್ಟಿದ್ದು ನಮ್ಮ ಸೋಲು. ಇಲ್ಲಿ ನಮ್ಮ ಬೌಲಿಂಗ್ ನ ಬಂಡವಾಳ ಬಟಾ ಬಯಲಾಯಿತು. mediocre bowling ಎನ್ನುವ ಹಣೆ ಪಟ್ಟಿ ಸಿಗುವಂತೆ ಮಾಡಿತು. ಹೌದು ಜಹೀರ್ ಖಾನ್ ಆಟದ ಗತಿಯನ್ನೇ ಬದಲಿಸಿದ ಆ ಅದ್ಭುತ ಓವರ್ ಅನ್ನು unleash ಮಾಡದೆ ಇದ್ದಿದ್ದರೆ ಇಂಗ್ಲೆಂಡ್ ಆಟಗಾರರು ಚಿನ್ನಸ್ವಾಮಿ ಮೈದಾನದ ಪ್ರದಕ್ಷಿಣೆ ಹಾಕುತ್ತಿದ್ದರು ಕೇಕೆ ಹಾಕುತ್ತಾ.  ತನ್ನ ವಯಸ್ಸು ನಾಚುವಂತೆ ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ತೆಂಡೂಲ್ಕರ್ ಅವರ ಈ ಶತಕವೂ ಮತ್ತೊಂದು ಅಂಕಿ ಅಂಶವಾಗಿ ಉಳಿಯಿತೇ ವಿನಃ “ಅಂತಿಮ ನಗು” ವಿನ ರೋಮಾಂಚನವನ್ನು ನೀಡಲಿಲ್ಲ.

ಮದುವೆಯ ಈ ಬಂಧಾ…..

ವಿವಾಹದ ದಿನ ಎಂದರೆ ಪ್ರತಿ ಹೆಣ್ಣು ಗಂಡಿನ ಬದುಕಿನ ಅತ್ಯಂತ ಮಹತ್ತರವಾದ, ಎಂದೆಂದೂ ನೆನಪಿನಲ್ಲುಳಿಯುವ ದಿನ. ರೋಮಾಂಚನ, ದುಗುಡ, ಕಾತುರ, ಸಂತಸ, ಹೆಮ್ಮೆ ಹೀಗೆ ನೂರೊಂದು ಭಾವನೆಗಳು ವಿವಾಹದಂದು. ಆ ವಿಶೇಷ ದಿನಕ್ಕಾಗಿಯೇ ವಧೂ ವರರು ತಿಂಗಳುಗಟ್ಟಲೆ ತಯಾರಿ ನಡೆಸಿರುತ್ತಾರೆ. ವರ ಅಷ್ಟೊಂದು ತಲೆ ಕೆಡಿಸಿಕೊಳ್ಳದಿದ್ದರೂ ವಧುವಿಗಂತೂ ತನ್ನ ವಿವಾಹದ ದಿನ ಹೀಗೆಯೇ ಇರಬೇಕೆನ್ನುವ ಸ್ಪಷ್ಟ ಕಲ್ಪನೆ ಇರುತ್ತದೆ.

ನಮ್ಮ ದೇಶದಲ್ಲಿ ಯಾವ ಧರ್ಮೀಯರೇ ಆಗಲಿ ವಿವಾಹದ ದಿನ ತಮ್ಮ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಡುಗೆ ಇಷ್ಟಪಟ್ಟರೆ ಪಾಶ್ಚಾತ್ಯರದು ಬೇರೆಯೇ ಆದ ದೃಷ್ಟಿಕೋನ. ಉಡುಗೆ ಮಾತ್ರವಲ್ಲ ಮದುವೆ ಆಗುವ ಸ್ಥಳಗಳೂ ಸಹ ವಿಚಿತ್ರವೇ. ಕೆಲವರು ನೀರಿನೊಳಕ್ಕೆ ಇಳಿದು ವಿವಾಹಿತರಾದರೆ ಇನ್ನೂ ಕೆಲವರು ಪ್ಯಾರಾಶೂಟ್ ನಲ್ಲಿ ಕೂತು ಮದುವೆ ಆಗುತ್ತಾರೆ.

ಹೀಗೆ ವಿವಿಧ ರೀತಿಯಲ್ಲಿ ಜನರ ಗಮನವನ್ನ ಸೆಳೆಯುವ ಉದ್ದೇಶದೊಂದಿಗೆ ವಿಶಿಷ್ಟ ವಾದ ರೀತಿಯಲ್ಲಿ ಮದುವೆಯಾಗುತ್ತಾರೆ.  ಕೆಲವು ಉಡುಗೆಗಳ ದೃಶ್ಯಗಳಿವೆ ಪಾಶ್ಚಾತ್ಯರದು. ನೋಡಿ ಆನಂದಿಸಿ.

 

ಮೇಲಿನ ಬಲ ಬದಿಯ ಎರಡು ಚಿತ್ರಗಳನ್ನೂ ನೋಡಿ ಮೂರ್ಛೆ ಹೋಗಿಲ್ಲ ತಾನೇ? ಹೋದರೂ ಅಚ್ಚರಿಯಿಲ್ಲ. ಸತ್ತ ಹೆಣವೂ ಶವ ಪೆಟ್ಟಿಗೆಯೊಳಕ್ಕೆ ಮಲಗಲು ಹೆದರುತ್ತದೆ, ಆದರೆ ಈ ಲಲನಾಮಣಿ ವಧು ಆರಿಸಿಕೊಂಡ ಜಾಗ ಶವಪೆಟ್ಟಿಗೆ. ಅವಳ ಗುಂಡಿಗೆಗೆ ಕೊಡಬೇಕು ನೋಡಿ ಬಹುಮಾನ. ತಾನು ಪ್ರೀತಿಸಿದ ವನನ್ನು ವಿವಾಹವಾಗಲು ೨೭ ವರ್ಷ ತಗುಲಿತಂತೆ. ಅಷ್ಟರಲ್ಲಿ ಇಬ್ಬರಿಗೂ ಬೇರೆಯವರೊಂದಿಗೆ ಮದುವೆಯಾಗಿ ಮಕ್ಕಲ್ಲೂ ಇದ್ದವು. ಕೊನೆಗೆ ಈ ಪ್ರೇಮಿಗಳು ಮದುವೆಯಾಗುವ ಕಾಲ ಕೂಡಿ ಬಂತು ತಮ್ಮ ತಮ್ಮ ಬಾಳ ಸಂಗಾತಿಗಳು ಬೇರೆಯಾದಾಗ. ಇನ್ನೆಂದೂ ತನ್ನ ಇನಿಯ ತನ್ನಿಂದ ಬೇರೆಯಾಗ ಕೂಡದೆಂದು ಅವನ ಕೊರಳಿಗೆ ನಾಯಿಗೆ ಕಟ್ಟುವ ಪಟ್ಟಿ ಕಟ್ಟಿದ್ದಾಳೆ ಸಹ. ನಮ್ಮಲ್ಲಿ ಹೆಣ್ಣಿಗೆ ತಾಳಿ ಕಟ್ಟುವುದಿಲ್ಲವೆ ಹಾಗೆ.