ಹೀಗೊಂದು ಕಾನೂನಿನ ಲೈಂಗಿ’ಕಥೆ’

ಜೂಲಿಯಾನ್ ಅಸಾಂಜ್ ಹೆಸರು ಸಾಮಾನ್ಯ ವಿದ್ಯಾವಂತರು ಕೇಳಿರಲೇ ಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಹಿತಿ ಹಕ್ಕು ಮುಂತಾದ ಹಕ್ಕುಗಳ ಪ್ರತಿಪಾದಕ ಅಸಾಂಜ್. ಈತ ವಿಶ್ವದ ಸರಕಾರಗಳು ತೆರೆಮರೆಯಲ್ಲಿ ನಡೆಸಿ ಮಗುಮ್ಮಾಗಿ ಇದ್ದು ಬಿಡುವ ವಿಷಯಗಳ ಬಗ್ಗೆ ವಿಶ್ವಕ್ಕೆ ಡಂಗುರ ಬಾರಿಸಿ ಹೇಳುತ್ತಿದ್ದ ತನ್ನದೇ ಆದ ವೆಬ್ ತಾಣ “ವಿಕಿಲೀಕ್” ಮೂಲಕ. ಈ ವಿಕಿಲೀಕ್ ಎನ್ನುವ ನಲ್ಲಿ ತೊಟ ತೊಟ ತೊಟ ತೊಟ ಎಂದು ಉದುರಿಸ ಬೇಕಾದ್ದನ್ನೂ, ಉದುರಿಸಬಾರದ್ದನ್ನೂ ಉದುರಿಸಿ ಸರಕಾರಗಳ ಕೆಂಗಣ್ಣಿಗೆ ಕಾರಣವಾಯಿತು. ಈ ನಲ್ಲಿಯ ಬಾಯಿ ಮುಚ್ಚಿಸಲು ಸರಕಾರಗಳು ಎಲ್ಲಾ ಕಸರತ್ತುಗಳನ್ನೂ ಮಾಡಿದವು. ಅದರಲ್ಲಿನ ಒಂದು ಕಸರತ್ತು ಲೈಂಗಿಕ ದೌರ್ಜನ್ಯದ ಅಥವಾ ಅತ್ಯಾಚಾರದ ಆರೋಪ ಜೂಲಿಯಾನ್ ಅಸಾಂಜ್ ವಿರುದ್ಧ.

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಜೂಲಿಯಾನ್ ಅಸಾಂಜ್ ನಿಗೆ ಇಬ್ಬರು ಮಹಿಳೆಯರ ಪರಿಚಯ ವಾಯಿತು; ಆನ್ನಾ ಆರ್ಡಿನ್ ಮತ್ತು ಸೋಫಿಯಾ ವಿಲೆನ್ ಇವರೇ ಆ ಮಹಿಳೆಯರು.

ಈ ಮಹಿಳೆಯರು ಯಾರು, ಅವರು ಹೇಗೆ ಜೂಲಿಯಾನ್ ಅಸಾಂಜ್ ನಿಗೆ ಹತ್ತಿರವಾದರು ಎನ್ನುವುದು ದೊಡ್ಡ ಕತೆ. ಆನ್ನಾ ಆರ್ಡಿನ್ ಜೂಲಿಯಾನ್ ಒಂದಿಗೆ ಲೈಂಗಿಕ ಚಟುವಟಿಕೆ ನಡೆಸುವಾಗ ಅರ್ಧ ದಾರಿಯಲ್ಲಿ ಕಾಂಡೋಂ ಹರಿದು ಹೋಯಿತು. ಈಗ ಆನ್ನಾ ಗೆ ಶಂಕೆ ತನಗೆ ಲೈಂಗಿಕ ರೋಗ ತಗುಲಿರಬಹುದೋ ಅಥವಾ ಗರ್ಭಧಾರಣೆಯಾಗಿರಬಹುದೋ ಎಂದು. ಆದರೆ ಆಕೆ ಪೊಲೀಸರಿಗೆ ದೂರು ನೀಡಿದ್ದು ಅಸಾಂಜ್ ಉದ್ದೇಶಪೂರ್ವಕ ಕಾಂಡೋಂ ಹರಿದ ಎಂದು.

ಈಗ ಎರಡನೇ ಪಾತ್ರದ ಆಗಮನ, ಸೋಫಿಯಾ ವಿಲೆನ್. ಈಕೆ ಸಹ ಒಂದೆರಡು ದಿನಗಳ ನಂತರ ಅಸಾಂಜ್ ನೊಂದಿಗೆ ಕೂಡಿದಳು. ಮೊದಲ ಸಲ ಕೂಡುವಾಗ ಅಸಾಂಜ್ ಕಾಂಡೋಂ ಧರಿಸಿದ್ದ, ಮರುದಿನ ಬೆಳಿಗ್ಗೆ ಮತ್ತೊಮ್ಮೆ ಕೂಡುವಾಗ ಅಸಾಂಜ್ ಕಾಂಡೋಂ ಅನ್ನು ಧರಿಸಿರಲಿಲ್ಲ ಎಂದು ಸೋಫಿಯಾ ಪೊಲೀಸ್ ಠಾಣೆ ಗೆ ಹೋದಳು ದೂರಲು. ಇಬ್ಬರೂ ಸಮ್ಮತಿಯುಕ್ತ ಸಂಭೋಗಕ್ಕೆ ಒಪ್ಪಿಗೆ ನೀಡಿದ್ದರು ಎಂದು ಅಸಾಂಜ್ ಹೇಳಿದರೆ ಈ ಮಹಿಳೆಯರ ದೂರು ಬೇರೆಯೇ. ಸಮ್ಮತಿ ನೀಡಿದ್ದು ಕಾಂಡೋಂ ರಹಿತ ಸೆಕ್ಸ್ ಗಾಗಿ ಅಲ್ಲ ಎಂದು. ಈಗ ಆಗಮನ ಸೆಕ ನಷ್ಟೇ ರೋಮಾಂಚನ ಕೊಡುವ ಸ್ವಿಸ್ ಕಾನೂನಿಗೆ.

ಸುಸ್ವಾಗತ ಸ್ವಿಟ್ಸರ್ಲೆಂಡ್. ಈ ದೇಶದಲ್ಲಿ ಕಾನೂನು ಸ್ವಿಸ್ ವಾಚಿನಷ್ಟೇ ಸಂಕೀರ್ಣ. ಸುಲಭವಾಗಿ ಅರ್ಥವಾಗೋಲ್ಲ. ಇಲ್ಲಿನ ಕಾನೂನಿನಲ್ಲಿ “ಸರ್ಪ್ರೈಸ್ ಸೆಕ್ಸ್” ಎನ್ನುವ ಕಾಯಿದೆ ಇದೆ. ಈ ನಿಯಮದಡಿ ಲೈಂಗಿಕ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಮಹಿಳೆ ಸಾಕು ಎಂದರೂ ಕೇಳದೆ ಮುಂದುವರಿದರೆ ಅದು ಅತ್ಯಾಚಾರ. ಸಂಭೋಗ ನಿರತರಾಗಿರುವಾಗಲೇ ಮಹಿಳೆ ಸಮ್ಮತಿಯನ್ನು ಹಿಂದಕ್ಕೆ ಪಡೆಯಬಹುದಂತೆ. ಸಮ್ಮಿಶ್ರ ಸರಕಾರ ಉರುಳಿಸಲು ಪಕ್ಷವೊಂದು ಸರಕಾರಕ್ಕೆ ಬೆಂಬಲ ಹಿಂದಕ್ಕೆ ಪಡೆಯುವ ಹಾಗೆ. ಹಾಗೇನಾದರೂ ಸಮ್ಮತಿಯನ್ನು ಹಿಂದಕ್ಕೆ ಪಡೆದೂ ಗಂಡು ಮುಂದುವರಿದರೆ ಅದು ಅತ್ಯಾಚಾರ. (ಒಂದು ಸಂಶಯ; ಸಂಭೋಗ ನಿರತ ಗಂಡು ಕಿವುಡನಾದರೆ?) ಕಿವುಡನಾದರೆ ಸಂವಿಧಾನಕ್ಕೆ ತರುವ ತಿದ್ದುಪಡಿ ಯಂತೆ ಈ ಹಾಸ್ಯಾಸ್ಪದ ಸ್ವಿಸ್ law (lessness) ಗೂ ತರಬೇಕು ತಿದ್ದು ಪಡಿಯೊಂದ. ಮಹಿಳೆ ಉಪಯೋಗಿಸುವ withdrawal method ಇದು. withdrawal method ಏನು ಎಂದು ವಿವರಿಸಲು ಇದು ಸೆಕ್ಸ್ ಲೇಖನ ಅಲ್ಲ.

ಮೇಲಿನ ಈ ಕಾನೂನಿನ ಅಡಿ ಅಸಾಂಜ್ ನನ್ನು ಕಟಕಟೆಯಲ್ಲಿ ನಿಲ್ಲಿಸುವ, ತದನಂತರ ಜೈಲಿಗೆ ಅಟ್ಟುವ ಪ್ರಯತ್ನ ಸ್ವಿಸ್ ಸರಕಾರದ್ದು.

ಪರೋಪಕಾರಿ ವೃಕ್ಷ

ಪಡ್ಡೆ ಹುಡುಗ ಹುಡುಗಿಯರು ಸೀಬೆ, ಮಾವಿನ ಮರ ಹತ್ತಿ ಟೊಂಗೆಗಳನ್ನು ತಮ್ಮತ್ತ ಎಳೆದು ಮರದ ಕೈಕಾಲುಗಳ ನ್ನು ಘಾಸಿ ಮಾಡುವುದನ್ನು ಕಂಡ ಒಂದು ಮರ ತನ್ನದೇ ಆದ ವಿಶಿಷ್ಟ ವಿಧಾನದಲ್ಲಿ ಕಳ್ಳ ಕಳ್ಳಿಯರಿಗೆ ಅನುಕೂಲವಾಗುವಂತೆ ಹಣ್ಣುಗಳನ್ನು ತನ್ನ ಮೈಮೇಲೆ ಬೆಳೆಸಿಕೊಂಡು ಮುಕ್ತ ಆಹ್ವಾನವೀಯುತ್ತದೆ ಲೂಟಿ ಮಾಡಿ ಕೊಳ್ಳಿ ಎಂದು. ಎಂಥ samaritan ಮರ ನೋಡಿ. ಎಲ್ಲಿದೆ ಆ ಮರ, ಎಂದು ಆಸೆ ಬುರುಕತನದಿಂದ ಕೇಳಬೇಡಿ. ಈ ಮರದ ತವರು ಸಾಗರದಾಚೆ. ಹಾಂ, ಸಾಗರದಾಚೆಯೋ? ಹಾಗಾದರೆ ಸಂಜೀವಿನಿಗಾಗಿ ಸಾಗರೋಲ್ಲಂಘನ ಮಾಡಿದ ಹನುಮಂತನ ಒಂದು ಟ್ರಿಕ್ ಪ್ರಯೋಗಿಸಿದರೆ ಹೇಗೆ? ಯಾವ ಉಲ್ಲಂಘನ ಬೇಕಾದರೂ ಮಾಡಿಕೊಳ್ಳಿ, ನನ್ನ ಕೈ ಕಾಲಿಗಲ್ಲವಲ್ಲಾ ಆಗೋದು ಬ್ಯಾನೆ.

ಹುಲು ಮನುಜರಿಗೆ ಒಂದು ತವರಾದರೆ ಈ ಪರೋಪಕಾರಿ ಮರಕ್ಕೆ ಹಲವು ತವರುಗಳು. ಪೆರಗ್ವೆ, ಅರ್ಜೆಂಟೀನ, ಬ್ರೆಜಿಲ್ ದೇಶಗಳಲ್ಲಿ ಕಾಣಸಿಗುವ ಈ ಮರ ಬರೀ ಪೋಕರಿಯರಿಗೆ ಮಾತ್ರ ಉಪಕಾರಿಯಲ್ಲ, ಔಷಧೀ ಗುಣಗಳನ್ನೂ ಸಹ ಹೊಂದಿದೆ. ಅಸ್ತಮಾ, ಆಮಶಂಕೆ ಮುಂತಾದ ರೋಗಗಳಿಗೆ ಇವು ರಾಮಬಾಣವಂತೆ. ಕ್ಯಾನ್ಸರ್ ರೋಗಕ್ಕೂ ಇದರ ಟೊಂಗೆಯಲ್ಲಿ ಉತ್ತರ ಇರಬಹುದು ಎಂದು ಲೆಕ್ಕಾಚಾರ. ಪುಕ್ಕಟೆ ಏನಾದರೂ ಸಿಗುತ್ತೆ ಎಂದರೆ ಜೋರಾಗಿಯೇ ಸಾಗುತ್ತದೆ ಲೆಕ್ಕಾಚಾರ, ಅಲ್ಲವೇ?

ಇನ್ನಷ್ಟು ಚಿತ್ರಗಳಿಗೆ ಕೆಳಗೆ ತೋರಿಸಿದ ತಾಣಕ್ಕೆ ಯಾತ್ರೆ ಬೆಳೆಸಿ:

http://www.kuriositas.com/2010/04/jabuticaba-tree-that-fruits-on-its.html