ಬಿಡುವು ಮತ್ತು ನಿಸರ್ಗದ ನಂಟು

ಮನುಷ್ಯನ ಮನಸ್ಸುಹಾಗು ದೇಹ  ದೈನಂದಿನ ದಿನಚರಿ ಯಿಂದ, ಕೆಲಸ ಕಾರ್ಯಗಳ ಒತ್ತಡದಿಂದ , ಪಟ್ಟಣದ ಗದ್ದಲದ ಜಂಜಾಟದ  ವಾತಾವರಣದಿಂದ , ಬಿಡುವಿಲ್ಲದ ದಣಿವಿನಿಂದ  ಮುಕ್ತಿ  ಪಡೆಯಲು  ವಿಶ್ರಾಂತಿ ಪಡೆಯಲು ಬಯಸುತ್ತದೆ. ಸ್ವಲ್ಪ ದಿನ ಈ ಜಂಜಾಟ ಗಳನ್ನು ಮರೆತು ಹಾಯಾಗಿ  ಹೊರಗಡೆ ಎಲ್ಲಾದ್ರೂ ಕುಟುಂಬದೊಡನೆ / ಸ್ನೇಹಿತರೊಡನೆ / ಅಥವಾ ಒಬ್ಬರೇ  ನೆಮ್ಮದಿಯಾಗಿ ಹೋಗಬೇಕೆನ್ನಿಸುತ್ತದೆ, ನಿಮಗೆ ಇಷ್ಟವಾದ ಸ್ಥಳಗಳು, ಸೌಕರ್ಯಗಳು ಇವುಗಳ ಬಗ್ಗೆ ಹೇಳಿ ಎಂದು ವೆಬ್ ತಾಣವೊಂದರಲ್ಲಿ ಒಬ್ಬರು ಕೇಳಿದ್ದರು. ನಮ್ಮ ಮನಸ್ಸಿನಲ್ಲಿ ಎಲ್ಲಾದರೂ ಹೊರಗೆ ಹೋಗೋದು ಎಂದರೆ ನಮ್ಮ ಪಾಕೀಟ್ ಖಾಲಿ ಎಂದು ಭಾವನೆ. ಆದರೆ ವಾಸ್ತವ ಬೇರೆಯೇ. ಹೆಚ್ಚು ಖರ್ಚಿಲ್ಲದೆ ಹೆಚ್ಚು ಆನಂದ ಪಡೆಯುವ ಮಾರ್ಗಗಳಿವೆ.

ನಮ್ಮ ದೇಶದಲ್ಲಿ ಕುಟುಂಬ ಸಹಿತ ಔಟಿಂಗ್ ಹೋಗುವ ಪರಿಪಾಠ ದೊಡ್ಡ ರೀತಿಯಲ್ಲಿ ಬೆಳೆದಿಲ್ಲ ಎನ್ನಬಹುದು. ದೊಡ್ಡ ಸಂಬಳ, ಇನ್ನಷ್ಟು ದೊಡ್ಡ ಗಿಂಬಳದ ಸೌಲಭ್ಯ ಇರುವವರು ರಿಸಾರ್ಟ್ ಮುಂತಾದ ಕಡೆ ಹೋಗಬಹುದು. ಔಟಿಂಗ್ ಹೋಗಲು ದೊಡ್ಡ ಸಂಬಳದ ಅವಶ್ಯಕತೆ ಇಲ್ಲ ಎಂದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಗೊತ್ತಿದ್ದರೂ ಅಯ್ಯೋ ಜನ ಏನೆಂದು ಕೊಳ್ಳುತ್ತಾರೋ ಎಂದು ಮುಜುಗರ ಪಟ್ಟು ಕೊಳ್ಳುತ್ತಾರೆ. ನನ್ನ ಮಿತ್ರನೊಬ್ಬ ಆಗಾಗ ತನ್ನ ಪರಿವಾರದೊದಿಗೆ ಬುತ್ತಿ ಕಟ್ಟಿ ಕೊಂಡು ಊರ ಹೊರಗೆ, ಪ್ರಶಾಂತ ಬಯಲಿನಲ್ಲಿ, ಅಡಿಕೆ ತೋಟದಲ್ಲಿ ಯಜಮಾನನ ಅನುಮತಿ ಪಡೆದು ಒಂದಿಷ್ಟು ಸಮಯ ಕಳೆಯುತ್ತಾನೆ. ನಾನಿರುವ ಜೆಡ್ಡಾ ನಗರದಲ್ಲಿ ಸಮಯ ಕಳೆಯಲು ನಾವು ವಿಶಾಲವಾಗಿ ಹರಡಿ ಕೊಂಡ ಮರುಭೂಮಿಯಲ್ಲಿ ಒಳ್ಳೆ ಜಾಗ ನೋಡಿ ಕೊಂಡು ಒಂದಿಷ್ಟು ಸಮಯ ಕಳೆಯುತ್ತೇವೆ. ಇದಕ್ಕೆ ಚಿಕ್ಕಾಸಿನ ಖರ್ಚೂ ಬರದು. ಇಲ್ಲಿನ ಜನ ಡೇರೆ ಹಾಕಿಕೊಂಡು ಮರು ಭೂಮಿಯಲ್ಲಿ ವೀಕೆಂಡ್ ಕಳೆಯುತ್ತಾರೆ. ಅಥವಾ ಸಮುದ್ರ ತೀರದಲ್ಲಿ ಕಂಬಳಿ ಹಾಸಿ, barbecue ಮಾಡಿ ಕೊಂಡು ಮೋಜಾಗಿ ಕಳೆಯುತ್ತಾರೆ. ನಮ್ಮ ದೇಶದಲ್ಲಿ ಹೋದ ಹೋದಲ್ಲೆಡೆ ನದೀ ತೀರಗಳು, ಹಸಿರು ಬಯಲು, ಕಣಿವೆ, ಬೆಟ್ಟ ಗುಡ್ಡ ಗಳಿದ್ದರೂ ಎಷ್ಟು ಜನ ಟೆಂಟ್ ಹಾಕಿ ದಿನ ಕಳೆಯುವುದನ್ನು ನೋಡಿದ್ದೇವೆ? ನಿಸರ್ಗದೊಂದಿಗೆ ನಾವು ನಂಟು ಇಟ್ಟುಕೊಂಡಾಗ ಆ ಅಭ್ಯಾಸ ನಮ್ಮ ಮಕ್ಕಳಿಗೂ ಬರುತ್ತದೆ. ಅಂಥ ಔಟಿಂಗ್ ಸಮಯ ಮಕ್ಕಳಿಗೆ ನಿಸರ್ಗದಲ್ಲಿ ಕಾಣಸಿಗುವ ವಸ್ತುಗಳನ್ನು ಸಂಗ್ರಹಿಸಲು, ಅವುಗಳ ಬಗ್ಗೆ ಅಧ್ಯಯನ ಮಾಡಲು ಸಹ ಪ್ರೋತ್ಸಾಹಿಸಬಹುದು.
ನನ್ನ ಪಾಲಕರು ಇರುವ ಮನೆಯ ಹತ್ತಿರವೇ ನದಿಯೊಂದಕ್ಕೆ ಸುಂದರವಾದ ತೂಗು ಸೇತುವೆ ಕಟ್ಟಿದ್ದಾರೆ. ನದಿಯ ಸುತ್ತ ಮುತ್ತಲಿನ ಸೌಂದರ್ಯದ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ಅಲ್ಲಿಗೆ ಹೋಗಿ, ಒಂದರ್ಧ ದಿನ barbecu ಮಾಡಿಕೊಂಡು ಕಳೆಯೋಣ ಅಂದರೆ, ಅಯ್ಯೋ, ಜನ ನಗುತ್ತಾರೆ ಅಷ್ಟೇ ಎನ್ನುತ್ತಾರೆ ಮನೆಯವರು. ಈ ರೀತಿಯ ಮನೋಭಾವನೆ ಇದ್ದಾರೆ ಔಟಿಂಗ್ ಸಾಧ್ಯವೇ?

ದೈನಂದಿನ ಜಂಜಾಟದಿಂದ, ನೂಕು ನುಗ್ಗಲಿನಿಂದ ದೂರವಾಗಿ ಎಲ್ಲಾದರೂ ಡೇರೆ ಹಾಕಿಯೋ, ಮತ್ತೇನಾದರೂ ವ್ಯವಸ್ಥೆ ಮಾಡಿಕೊಂಡೋ ದಿನ ಕಳೆಯುವುದು ಎಷ್ಟು ಮಜಾ? ರಜೆಯ, ವೀಕೆಂಡಿನ ಆನಂದ ಪಡೆಯಲು ರೆಸಾರ್ಟ್ ಗಳಿಗೆ ಹೋಗಬೇಕೆಂದಿಲ್ಲ. ರಿಸಾರ್ಟ್ ನಮಗೆ ಬೇಕಾದ ಸ್ಥಳದಲ್ಲಿ ಸೃಷ್ಟಿಸಿಕೊಳ್ಳಬಹುದು ಮನಸ್ಸೊಂದಿದ್ದರೆ.
ನಮ್ಮ ಇಡೀ ದೇಶವೇ ಒಂದು ಅದ್ಭುತ ರೆಸಾರ್ಟ್, ಏನಂತೀರಾ?