ಒಂದು “ಲಾ” ಪ್ರಹಸನ

ಏನ್ ಲಾ…. ಏನಿಲ್ಲ ಕಣ್ಲಾ ; ಇದು ಮೊನ್ನೆ ಮೊನ್ನೆ ನಮ್ಮ ರಾಜ್ಯದಲ್ಲಿ ನಡೆದ ಗದ್ದಲದ ವಿಶ್ಲೇಷಣೆ ಮತ್ತು ಫಲಿತಾಂಶ. ಪತ್ರಕರ್ತರ, ವಕೀಲರ, ಪೊಲೀಸರ ಮಧ್ಯೆ ಜಗಳ ಕಂಡ ನಮ್ಮ ರಾಜ್ಯ ತನ್ನ ಅಪಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿತು. ರಂ. ಶ್ರೀ. ಮುಗಳಿಯವರ “ಎಂಥ ನಾಡಿದು, ಎಂಥ ಕಾಡಾಯಿತೋ” ಪರಿತಾಪಕ್ಕೆ ತಕ್ಕಂತೆ ನಡೆದು ಕೊಂಡಿತು ನಮ್ಮ ಪ್ರೀತಿಯ ರಾಜ್ಯ. ಆದರೆ ಈ ಲೇಖನ ಆ ಜಗಳದ ಬಗ್ಗೆ ಅಲ್ಲ. ಇದು ಸ್ವಲ್ಪ ಬೇರೆ ತೆರನಾದುದು. ಮರುಭೂಮಿಯ ಈ “ಲಾ” ನಮ್ಮ ಮೈ ಪರಚಿಕೊಳ್ಳುವಂತೆ ಮಾಡುತ್ತದೆ. ಅಸಹಾಯಕೆಯಿಂದ ಬಸವಳಿಯುವಂತೆ ಮಾಡುತ್ತದೆ. ಯಾವುದೋ ಒಂದು ಹಿಂದಿ ಚಿತ್ರದಲ್ಲಿ ಯಕಃಶ್ಚಿತ್ ಸೊಳ್ಳೆ ನಟ ನಾನಾ ಪಾಟೇಕರ್ ನನ್ನು ನಪುಂಸಕನನ್ನಾಗಿಸಿದಂತೆ; ಸಾಲಾ, ಏಕ್ ಮಚ್ಛರ್, ಆದ್ಮಿ ಕೋ ಹಿಜಡಾ ಬನಾ ದೇತಾ ಹೈ.    

ಅರೇಬಿಕ್ ಭಾಷೆಯ “ಲಾ” ಪದದ ಅರ್ಥ “NO” ಎಂದು. ಈ ಮಾತು ಅರಬ್ ನ ಬಾಯಿಂದ ಬಿತ್ತು ಎಂದರೆ ಅದನ್ನು ಸರಿ ಪಡಿಸಲು ಯಾರಿಂದಲೂ ಸುಲಭ ಸಾಧ್ಯವಲ್ಲ. ನಮ್ಮ ಸಂವಿಧಾನಕ್ಕೆ ತಿದ್ದುಪಡಿ ಬೇಕಾದರೂ ತರಬಹುದು ಈ ಲಾ ಗೆ ತಿದ್ದುಪಡಿ ತರೋದು ಅಸಾಧ್ಯ. ಬ್ಯಾಂಕಿನಲ್ಲಿ, ಪೊಲೀಸ್ ಪೇದೆಯ ಕಯ್ಯಲ್ಲಿ, ಕಸ್ಟಮ್ಸ್ ನಲ್ಲಿ, ಕಚೇರಿಯಲ್ಲಿ, ಎಲ್ಲಿ ಹೋದರೂ ಈ ಪದದ ರುಚಿ ಆಗುತ್ತಲೇ ಇರುತ್ತದೆ. ಮೊನ್ನೆ ನನ್ನ ಮಿತ್ರರೊಬ್ಬರಿಗೆ ಆದ ಅನುಭವ ಇದು.

ದುಬೈ ನಿಂದ ರಿಯಾದ್ ವಿಮಾನ ನಿಲ್ದಾಣಕ್ಕೆ ಇಳಿದು ಕಸ್ಟಮ್ಸ್ ಚೆಕ್ ಗಾಗಿ ಸರತಿಯಲ್ಲಿ ನಿಂತರು ನನ್ನ ಮಿತ್ರರು. ಅವರ ಮುಂದೆ ಫ್ರಾನ್ಸ್ ದೇಶದ ಸೂಟು ಬೂಟು ಧರಿಸಿದ ಬಿಳಿಯ ನಿಂತಿದ್ದ. ದುಬೈ ನಿಂದ ರಿಯಾದ್ transit ಆಗಿ ಪ್ಯಾರಿಸ್ ಹೋಗುವವನಿದ್ದ ಈ ಫ್ರೆಂಚ್ ಪ್ರಜೆ. ಕಸ್ಟಮ್ಸ್ ನಲ್ಲಿ ಅವನ ಸೂಟ್ ಕೇಸನ್ನು ಪರಿಶೀಲಿಸಿದಾಗ ದೊಡ್ಡ ಬಾಟಲಿಯೊಂದು ಅಧಿಕಾರಿಯ ಕಣ್ಣಿಗೆ ಬಿತ್ತು. ಬೆಲೆಬಾಳುವ ಬ್ರಾಂಡಿ ಬಾಟಲಿ. ಬಾಟಲಿಯನ್ನು ಕೈಯ್ಯಲ್ಲಿ ಹಿಡಿದು ಹೊರಳಿಸುತ್ತಾ ಹುಬ್ಬೇರಿಸಿದ ಕಸ್ಟಮ್ಸ್ ಆಫೀಸರ್. ಬಿಳಿಯ ಕಣ್ಣುಗಳನ್ನು ರೋಲ್ ಮಾಡುತ್ತಾ nonchalant ಆಗಿ ಭುಜ ಹಾರಿಸಿದ. clash of culture. ಒಬ್ಬನಿಗೆ ಮದ್ಯ ನಿಷಿದ್ಧ, ಎದುರು ನಿಂತವನಿಗೆ way of life. ಮದ್ಯ ನಮ್ಮ ದೇಶದಲ್ಲಿ ನಿಷಿದ್ಧ ಎಂದು ಆಫೀಸರ್ ಹೇಳಿದಾಗ ಬಿಳಿಯ ಹೇಳಿದ, ನನಗೆ ಗೊತ್ತು, ಆದರೆ ನಾನು ದುಬೈ ನಿಂದ ಬರುತ್ತಿದ್ದೇನೆ, ನನ್ನ ದೇಶಕ್ಕೆ ಹೋಗುವ ದಾರಿಯಲ್ಲಿ ರಿಯಾದ್ ನಲ್ಲಿ ಇಳಿದಿದ್ದೇನೆ ನನ್ನ ವಿಮಾನ ಹೊರಡುವ ತನಕ ಎಂದ. ಆಫೀಸರ್ ಹೇಳಿದ “ಲಾ”. ಬಿಳಿಯ ಹೇಳಿದ ನಾನು ನಿನ್ನ ದೇಶದಲ್ಲಿ ವಾಸಿಸಲೋ, ನೌಕರಿ ಮಾಡಲೋ ಬಂದಿಲ್ಲ, ಟ್ರಾನ್ಸಿಟ್ ಮೇಲೆ ಬಂದಿದ್ದೇನೆ ಎಂದು ವಾದಿಸಿದ. ಆಫೀಸರ್ ಮತ್ತೊಮ್ಮೆ ಗಿಳಿಯಂತೆ ಉಲಿದ “ಲಾ”. ಸಹನೆಯ ಎಲ್ಲೆ ಪರೀಕ್ಷಿಸುತ್ತಿದ್ದ ಆಫೀಸರ್ ನನ್ನು ದುರುಗುಟ್ಟಿ ನೋಡಿದ ಬಿಳಿಯ ಸರಿ, ಅದನ್ನು ನೀನೇ ಇಟ್ಟು ಕೋ, ನನ್ನನ್ನು ಹೋಗಲು ಬಿಡು ಎಂದ. ಅದಕ್ಕೂ ಬಂತು ಉತ್ತರ ‘ಲಾ’. “ನನ್ನ ಧರ್ಮದಲ್ಲಿ ನಾನು ಕುಡಿಯುವಂತಿಲ್ಲ” ಎಂದ ಆಫೀಸರ್. ಅದಕ್ಕೆ ಬಿಳಿಯ ಹೇಳಿದ ನಿನಗೆ ಏನು ಬೇಕೋ ಅದು ಮಾಡು, ಗಾರ್ಬೇಜ್ ಗೆ ಬೇಕಾದರೂ ಎಸೆ, ನನ್ನನ್ನು ಹೋಗಲು ಕೊಡು ಎಂದ ಹತಾಶೆಯಿಂದ. ಆಫೀಸರ್ ಹೇಳಿದ ‘ಲಾ’…..ನಾನು ಈ ಬಾಟಲಿಯನ್ನು ನನ್ನ ಹತ್ತಿರ ಇಟ್ಟುಕೊಂಡು ನಿನ್ನನ್ನು ಕಳಿಸಿದರೆ ನಾನದನ್ನು ಕುಡಿಯುತ್ತೇನೆ ಎಂದು ನೀನು ತಿಳಿಯಬಹುದು. ಪರಚಿಕೊಳ್ಳುತ್ತಾ  ಬಿಳಿಯ ಕೇಳಿದ ನಾನೀಗ ಏನು ಮಾಡಬೇಕು…………? ಆಫೀಸರ್ ಹೇಳಿದ ನೀನು ನನ್ನ ಜೊತೆ ಬರಬೇಕು. ಎಲ್ಲಿಗೆ ಎಂದ ಬಿಳಿಯ. ಟಾಯ್ಲೆಟ್ಟಿಗೆ ಎಂದು ಹೇಳುತ್ತಾ ಟಾಯ್ಲೆಟ್ ಕಡೆ ನಡೆದ ಆಫೀಸರ್. ಬೇರೆ ದಾರಿ ಕಾಣದೇ ಬಿಳಿಯ ಅವನನ್ನು ಹಿಂಬಾಲಿಸಿದ. ಸಾರಾಯಿ ಬಾಟಲಿಯ ಕಾರ್ಕ್ ತೆಗೆದು ಗಟ ಗಟ, ಗಟ ಗಟ ಎಂದು ಆಫೀಸರ್ ಟಾಯ್ಲೆಟ್ ಗುಂಡಿಯ ಗಂಟಲಿಗೆ ಸುರಿದ ಮದ್ಯ. ಬರಿದಾದ ಬಾಟಲಿಯನ್ನು ನುಚ್ಚು ನೂರು ಮಾಡಿ ಅವನ ಕಡೆಗೆ ಒಂದು ಮಂದಹಾಸ ಬೀರಿ ನಡೆದ. ಕ್ಷಣ ಕಾಲ ದಂಗಾಗಿ ನಿಂತು, ಸಾವರಿಸಿಕೊಂಡು ತನ್ನ ಸಾಮಾನುಗಳನ್ನು ಸೂಟ್ ಕೇಸಿನಲ್ಲಿ ತುಂಬಿಸಿ ಕೊಂಡು ಜಾಗ ಖಾಲಿ ಮಾಡಿದ ನತದೃಷ್ಟ ಫ್ರೆಂಚ್ ಪ್ರಜೆ.

ಚಿತ್ರ ಏನು?: ಚಿತ್ರದಲ್ಲಿರುವುದು “ಲಾ” ಕಾರದ ಕಲಿಗ್ರಫಿ (caligraphy) ರೂಪ. ಕಲಿಗ್ರಫಿ ಎಂದರೆ ಸುಂದರ ಬರಹ ಅಂತ. ಅರೇಬಿಕ್ ಭಾಷೆ cursive ಆಗಿರುವುದರ ಕಾರಣ ಕಲಾತ್ಮಕವಾಗಿ  ಹೇಗೆ ಬೇಕಾದರೂ, ಯಾವ ರೂಪದಲ್ಲೂ ಬರೆಯಬಹುದು. ಇದೊಂದು ಜನಪ್ರಿಯ ಕಲೆ. ಕಲಿಗ್ರಫಿ ಗಾಗಿ ವಿಶೇಷ ಪೆನ್ನುಗಳು ಬೇಕಾಗುತ್ತವೆ, ಅದರೊಂದಿಗೆ ಕಲಾವಂತಿಕೆ ಮತ್ತು ಸಂಯಮ ಕೂಡಾ. 

ಚಿತ್ರ ಕೃಪೆ: http://www.oweis.com

ಹೀಗೊಂದು ಸಂಭಾಷಣೆ

ಫೋನಿನಲ್ಲಿ ಸಂಭಾಷಣಾ ನಿರತ ಜನ ತಮ್ಮ ಸುತ್ತ ಮುತ್ತ ಇತರೆ ಜನರಿರುತ್ತಾರೆ, ತಮ್ಮನ್ನು ಗಮನಿಸುತ್ತಿರುತ್ತಾರೆ, ನಮ್ಮ ಮಾತುಗಳನ್ನು ಕೇಳುತ್ತಿರುತ್ತಾರೆ ಎನ್ನುವ ಯಾವುದೇ ಪರಿವೆಯಿಲ್ಲದೆ ಸ್ವರ ಏರಿಸಿ ಬಡ ಬಡಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ಸೌಜನ್ಯಗಳ ಬಗ್ಗೆ ಜನರಿಗೆ ಅರಿವನ್ನು ಹೇಗೆ ಮೂಡಿಸ ಬಹುದೋ ಗೊತ್ತಿಲ್ಲ. ಮೊನ್ನೆ ಒಂದು ಚೆಕ್ಕಿನ ಬಗ್ಗೆ ವಿಚಾರಿಸಲು ಸೌದಿ ಅಮೇರಿಕನ್ ಬ್ಯಾಂಕ್ ಗೆ ಹೋದೆ. ಚೆಕ್ vip ವಿಭಾಗಕ್ಕೆ ಸೇರಿದ್ದರಿಂದ ವಿಶಾಲವಾದ, ಸುಸಜ್ಜಿತ vip lounge ನಲ್ಲಿ ಆಸೀನನಾದೆ. ನನ್ನ ಪಕ್ಕದಲ್ಲಿ ಸುಮಾರು ನಲವತ್ತು ನಲವತ್ತೈದರ ಸೌದಿ ಯೊಬ್ಬ ಬರ್ಮುಡಾ ಚಡ್ಡಿ, ಬೇಸ್ ಬಾಲ್ ಟೋಪಿ ಧರಿಸಿ ಫೋನಿನಲ್ಲಿ ಹರಟುತ್ತಿದ್ದ. ಆತನ ಮಾತಿನಿಂದ ತಿಳಿಯಿತು ಅವನೊಬ್ಬ ಅತ್ಯಾಧುನಿಕ, ಸ್ಪೋರ್ಟ್ಸ್ ಮಾಡೆಲ್ ಕಾರುಗಳ ಡೀಲರ್, ಮತ್ತು ಆತನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದವನು ಅಮೆರಿಕೆಯವನು ಎಂದು. ಸೌದಿ ಅವನಿಗೆ ಹೇಳಿದ ಹೌದು ನೀನು ಕೇಳುತ್ತಿರುವ ಕಾರು ನನ್ನ ಹತ್ತಿರ ಇದೆ, ನಾನು ನಾಳೆ ರಿಯಾಧ್ ಗೆ ಬರುತ್ತಿದ್ದೇನೆ, ಬರುವುದು ವಿಮಾನದಲ್ಲಲ್ಲ ನನ್ನ porsche ಕಾರಿನಲ್ಲಿ, ನನಗೆ ಸುಮಾರು ೧೦ ಘಂಟೆಗಳ ಸಮಯ ಹಿಡಿಯಬಹುದು ಎಂದು ಹೇಳುತ್ತಿದ್ದ. ಜೆಡ್ಡಾ ದಿಂದ ರಿಯಾಧ್ ಸುಮಾರು ೧೪೦೦ ಕಿ.ಮಿ. porsche (ಪೋರ್ಷೆ) ಅತಿ ವೇಗವಾಗಿ ಸರಾಗವಾಗಿ ಚಲಿಸಬಲ್ಲ ಕಾರು. ಈ ಸೌದಿ ೧೦ ಘಂಟೆಗಳು ಸಾಕು ರಿಯಾದ್ ತಲುಪಲು ಸಾಕು ಎಂದಾಗ ಅಮೆರಿಕೆಯವ ಹೇಳಿದ ನಿಧಾನವಾಗಿ ಓಡಿಸು ಕಾರನ್ನು, express way ರಸ್ತೆಯಲ್ಲಿ ಅಪಘಾತ ಹೆಚ್ಚು ಎಂದು ಎಚ್ಚರಿಸಿದ. ಅದಕ್ಕೆ ಸೌದಿ ಹೇಳಿದ, ಹೇಯ್ ನೀನೇನು ಭಯ ಪಡಬೇಡ. ನಾನು ಸಣಕಲು ವ್ಯಕ್ತಿ, ಅಪಘಾತವಾದರೂ ಎಲ್ಲಾದರೂ ಮರುಭೂಮಿಯಲ್ಲಿ ಹಾರಿ ಬಿದ್ದಿರುತ್ತೇನೆ, ಆದರೆ ದೊಡ್ಡ ಹೊಟ್ಟೆಯ ಸ್ಥೂಲಕಾಯದವರಾದರೆ ಚಿಂದಿ ಚಿಂದಿ ಆಗುತ್ತಾರೆ (they will go smithereens) ಅಪಘಾತವಾದಾಗ ಎಂದು ಹೇಳುತ್ತಿದ್ದ. ನಮ್ಮ ಮುಂದಿನ ಸೋಫಾದಲ್ಲಿ ಸೂಟು ಬೂಟು ತೊಟ್ಟ ಲೆಬನಾನ್ ದೇಶದವನ ಥರ ಕಾಣುತ್ತಿದ್ದ ಸ್ಥೂಲ ಕಾಯದ ವ್ಯಕ್ತಿಯೊಬ್ಬ ಕುಳಿತಿದ್ದ. ಈಗಾಗಲೇ ಈ ಜೋರಾದ ಸಂಭಾಷಣೆಯಿಂದ ಬೇಸತ್ತಿದ್ದ ಆ ವ್ಯಕ್ತಿ ಈ ಸ್ಥೂಲ ಕಾಯದವರ ಬಗ್ಗೆ ಸೌದಿ ಆಡಿದ ಮಾತಿನಿಂದ ಕುಳಿತಲ್ಲಿಂದಲೇ ಮಿಸುಕಾಡುತ್ತಿದ್ದ. ಹೀಗೆ ಹೇಳಿದ ವ್ಯಕ್ತಿ ಸೌದಿ ಅಲ್ಲದಿದ್ದರೆ ಸರಿಯಾದ ಉತ್ತರ ಕೊಡುತ್ತಿದ್ದನೇನೋ ಪಾಪ ಆ ಡುಮ್ಮ, ಆದರೆ ಈ ಮಾತುಗಳನ್ನ ಕೇಳಿ ಅವನಿಗೆ ಅಲ್ಲಿ ಕೂತಿರಲು ಆಗದೆ ನಿಧಾನವಾಗಿ ತನ್ನ ಶರೀರವನ್ನು ಸೋಫಾದಿಂದ ಆರೋಹಣ ಮಾಡಿ ಕಾಲ್ತೆಗೆದ. ಈ ಸನ್ನಿವೇಶ ನೋಡಿ ನನಗೆ ನಗು ತಡೆಯಲಾಗಲಿಲ್ಲ. ಇಲ್ಲಿಗೆ ನಿಲ್ಲಲಿಲ್ಲ ಪುಕ್ಕಟೆ ಮನರಂಜನೆ, ಸೌದಿಯ ಮಾತು ಇನ್ನೂ ಮುಂದುವರೆದಿತ್ತು. ಅಮೆರಿಕೆಯವ ಹೇಳಿದ ನಾನು feeling lonely in riyadh ಎಂದು, ಅದಕ್ಕೆ ಥಟ್ಟನೆ ಈ ಸೌದಿ ಅವನಿಗೆ ಹೇಳಿದ your lonliness and my kindness might prompt you to do something (ನಿನ್ನ ಒಂಟಿತನ ಮತ್ತು ನನ್ನ ಒಳ್ಳೆಯತನ “ಬೇಡದ್ದನ್ನು” ಮಾಡಲು ನಿನ್ನನ್ನು ಪ್ರೇರೇಪಿಸಬಹುದು) ಹ ಹ ಹಾ ಎಂದು ನಕ್ಕ.