“ರಾಮ ಮಂದಿರದ ಬಗ್ಗೆ ಮುಸ್ಲಿಮರು ಹಿಂದೂಗಳ ಭಾವನೆಗಳನ್ನು ಗೌರವಿಸಬೇಕು” ಎಂದು ದ್ವಾರಕ ಪೀಠದ ಶಂಕರಾಚಾರ್ಯ ಶ್ರೀ ಸ್ವಾಮಿ ಸ್ವರೂಪಾನಂದ ಸರಸ್ವತಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು times of india ದಲ್ಲಿ ಸುದ್ದಿ. ಖಂಡಿತ. ವಿವಿಧ ಧರ್ಮಗಳ ಜನ ಬದುಕುತ್ತಿರುವ ಭಾರತದಲ್ಲಿ ಎಲ್ಲರೂ ಧರ್ಮ ಸಹಿಷ್ಣುತೆಯನ್ನು ಮೆರೆಯಬೇಕು. ಅಯೋಧ್ಯೆಯ ವಿವಾದವನ್ನು ಎಲ್ಲರೂ ಕುಳಿತು ದ್ವೇಷದ ಮನಸ್ಥಿತಿ ಬಿಟ್ಟು ಮಾತನಾಡಿದರೆ ಖಂಡಿತ ಅದಕ್ಕೆ ಪರಿಹಾರ ಸಿಗುವ ಸಾಧ್ಯತೆ ಇದೆ. “ಕ್ರೈಸ್ತರಿಗೆ ವ್ಯಾಟಿಕನ್ ಮತ್ತು ಮುಸ್ಲಿಮರಿಗೆ ಪವಿತ್ರ ಮಕ್ಕ ಇರುವಂತೆ ಹಿಂದೂಗಳಿಗೆ ರಾಮ ಜನ್ಮ ಭೂಮಿ ಪವಿತ್ರವಾದುದು” ಎಂದು ಸ್ವಾಮೀಜಿ ಹೇಳಿದರು. ಈ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಯಬೇಕು ಎಂದೂ ಅವರು ಒತ್ತಿ ಹೇಳಿದರು. ಆದರೆ ರಾಜಕಾರಣಿಗಳ ಕೈಯಲ್ಲಿ ಯಾವುದಾದರೂ ಸಮಸ್ಯೆ ನೀತಿಯುತವಾಗಿ, ಶಾಂತಿಯುತವಾಗಿ ಪರಿಹಾರವಾಗಿದ್ದಿದೆಯೇ? ಮುಸ್ಲಿಮರ ಮನ ಗೆದ್ದು ಮಂದಿರ ಕಟ್ಟುವ ಬದಲು ಕೆಲವು ಸಂಘಟನೆಗಳು ಮನಸ್ಸನ್ನು ಒಡೆಯುವ ಕೆಲಸ ಸೊಗಸಾಗಿ ಮಾಡಿದವು. ಸಾಕಷ್ಟು ರಕ್ತಪಾತವನ್ನೂ ಹರಿಸಿದವು. ಶತಮಾನಗಳಿಂದ ಶಾಂತವಾಗಿ ಬದುಕುತ್ತಿದ್ದ ಜನರ ನಡುವೆ ಹಗೆತನದ ಗೋಡೆ ಕಟ್ಟಿ ನಿಲ್ಲಿಸಿದವು. ಪೂರ್ವ ಪಶಿಮ ಜರ್ಮನಿಗಳ ನಡುವೆ ನಿಂತಿದ್ದ ಬರ್ಲಿನ್ ಗೋಡೆ ಜನರ ಪ್ರೀತಿ, ಒಟ್ಟಿಗೆ ಬಾಳುವ ಅದಮ್ಯ ಆಸೆಯ ಮುಂದೆ ನೆಲ ಕಚ್ಚಿತು. ಆದರೆ ಹಿಂದೂ ಮುಸ್ಲಿಮರ ನಡುವಿನ ದ್ವೇಷದ ಗೋಡೆ? ಆ ಗೋಡೆ ಕರಗಳು ಸಂಘಟನೆಗಳು ಮಾತ್ರವಲ್ ಮಾಧ್ಯಮಗಳೂ ಬಿಡುತ್ತಿಲ್ಲ.
ದೇವರಿಗೆ ಒಂದು ಮಂದಿರ ಕಟ್ಟಲು ಧರ್ಮ ಗುರುಗಳ ಅವಶ್ಯಕತೆ ಮಾತ್ರ ಇರುವುದು. ಅಲ್ಲಿ ಖಾದಿಗಳು ಬಂದು ತಿಳಿ ನೀರನ್ನು ರಾಡಿ ಎಬ್ಬಿಸುವುದು ಬೇಡ. ಆದರೆ ಈ ನೀತಿಯನ್ನು ಹೇಳುವವರಾದರೂ ಯಾರು? ಅಯೋಧ್ಯೆಯ ಬಗ್ಗೆ ನಿರ್ಭಿಡೆಯಿಂದ ಮಾತನಾಡಿದ ಗುರುಗಳೆಂದರೆ ಶೃಂಗೇರಿಯ ಶಾರದಾ ಪೀಠದ ಶ್ರೀ ಭಾರತಿ ತೀರ್ಥರು. ಸಮಾಜದ ಸಮಸ್ಯೆ ಪರಿಹಾರಕ್ಕೆ ಯಾವ ಧರ್ಮವೂ ರಕ್ತ ಪಾತವಾಗಲು ಅನುಮತಿಸದು,ಸಂಕುಚಿತ ಮತ್ತು ಹಗೆತನದ ಭಾವದಿಂದ ಕೆಲವರು ಈ ಸಮಸ್ಯೆಯನ್ನು ಇನ್ನಷ್ಟು ಜತಿಳಗೊಲಿಸುತ್ತಿದ್ದಾರೆ ಎಂದು ಸ್ವಾಮಿಗಳು ನೊಂದು ನುಡಿದಿದ್ದರು. ದ್ವಾರಕಾ ಪೀಠದ ಸ್ವರೂಪಾನಂದ ಸರಸ್ವತಿಗಳು ಮಸ್ಜಿದ್ ಧ್ವಂಸ ಮಾಡಿದ್ದನ್ನೂ, ವಿಹಿಂಪದ ರಾಜಕೀಯವನ್ನೂ ಟೀಕಿಸಿದ್ದರು.
೧೨೦೦ ವರ್ಷಗಳ ಇತಿಹಾಸ ಇರುವ ಚತುರ್ಪೀಠಗಳ ಶಂಕಾರಾಚಾರ್ಯರು ಮುಸ್ಲಿಂ ಗುರುಗಳೊಂದಿಗೆ ಕುಳಿತು ಮಾತನಾಡಲಿ. ೬೦ – ೭೦ ವರ್ಷಗಳ ಇತಿಹಾಸ ಇರುವ ಸಂಘಟನೆಗಳು ಅವರ ಮಾರ್ಗದರ್ಶನದಲ್ಲಿ ನಡೆಯಲಿ.
ಬಾಬ್ರಿ ಮಸ್ಜಿದ್ ಅನ್ನು ಧ್ವಂಸಗೊಳಿಸಿ ವಿಶ್ವದ ಎದುರಿಗೆ ನಾವು ನಮ್ಮ ಜಾತ್ಯಾತೀತ ಮೌಲ್ಯಗಳೊಂದಿಗೆ ನಗ್ನರಾಗಿ ನಗೆಪಾಟಲಿಗೀಡಾಗಿದ್ದು ಸಾಕು. ವಿಶಾಲ ಹೃದಯ ಮೆರೆಯಲು ಇದು ಸಕಾಲ. ನೆಲಕ್ಕುರುಳಿದ ಮಸೀದಿ ತಲೆಯೆತ್ತಲು ಸಾಧ್ಯವಿಲ್ಲ. ನಮಾಜ್ ಮಾಡಲು ನಾಲ್ಕು ಗೋಡೆಗಳ ಕಟ್ಟಡವೇ ಬೇಕೆಂದೇನಿಲ್ಲ. ಇಡೀ ವಿಶ್ವವನ್ನೇ ನನ್ನನ್ನು ಆರಾಧಿಸಲು ಹರಡಿ ಇಟ್ಟಿದ್ದೇನೆ ಎಂದು ಕರುಣಾಮಯನೂ ದಯಾಮಯನೂ ಆದ ಅಲ್ಲಾಹ್ ತನ್ನ ಪವಿತ್ರ ಗ್ರಂಥದಲ್ಲಿ ಹೇಳಿದ್ದಾನೆ. ಹಿಂದೂಗಳು ನಮ್ಮ ಹಿರಿಯ ಸೋದರರು. ಹಿಂದೂ ಅಂದರೆ ಬರೀ RSS, VHP ಮತ್ತು ಇತರೆ ಸಂಘಟನೆಗಳಿಗೆ ಸೇರಿದವರಲ್ಲ. ನಮ್ಮನ್ನು ಎಲ್ಲ ರೀತಿಯಲ್ಲಿ ಬೆಂಬಲಿಸುವ, ಸಹಕರಿಸುವ ಹಿಂದೂಗಳಿಂದ ನಮ್ಮ ಬದುಕು ಸರಾಗವಾಗಿ ನಡೆಯುತ್ತಿದೆ.
ಮಸೀದಿಯ ಸ್ಥಳ ತೆರವುಗೊಳಿಸಿ ಅಲ್ಲಿ ಒಂದು ಬೃಹತ್ತಾದ ಕಾಂಬೋಡಿಯಾ ದೇಶದಲ್ಲಿರುವ “ಅಂಗ್ಕೊರ್ ವಾತ್” (Angkor Vat ) ಮಾದರಿಯ ರಾಮ ಮಂದಿರ ನಿರ್ಮಾಣವಾಗಲು ನಾವು ಮುಸ್ಲಿಂ ಸಹೋದರರು ಅನುವು ಮಾಡಿಕೊಟ್ಟು ಹಿಂದೂ ಮುಸ್ಲಿಮರ ಮಧ್ಯೆ ಕಂದಕ ನಿರ್ಮಿಸಲು ಹೊರಟ ಶಕ್ತಿಗಳನ್ನು ಪರಾಭವಗೊಳಿಸೋಣ. ಮತ್ತು ಮುಂದೆ ಇಂಥ ಪರಿಸ್ಥಿತಿ ನಿರ್ಮಾಣವಾಗಲು ಯಾರಿಗೂ ಆಸ್ಪದ ಕೊಡದಿರುವಂತೆ ನಮ್ಮ ಹಿಂದೂ ಸಹೋದರರಲ್ಲಿ ಮನವಿ ಮಾಡಿಕೊಳ್ಳೋಣ.