“ತಾಯ್ ಚೀ” ಇರಲಿ…“ಎರ್ ನಾಯ್” ಬೇಡ

“ತಾಯ್ ಚೀ” ಬಗ್ಗೆ ಹೇಳುವುದೇನೂ ಬೇಡವಲ್ಲ? ಚೀನಾದ ಅಥವಾ ಇಂಪೋರ್ಟೆಡ್ ವ್ಯಾಮೋಹಕ್ಕೆ ಬಿದ್ದ ಭಾರತೀಯರು ನಮ್ಮದೇ ಆದ ಯೋಗಾಸನವನ್ನು ನಿರ್ಲಕ್ಷಿಸಿ ತಾಯ್ ಚೀ ಕಲಿಯುತ್ತಿದ್ದಾರಂತೆ. ಚೀನಾದ ಅಲಾರಂ ಗಡಿಯಾರ, ಮಕ್ಕಳ ಆಟಿಕೆ ಮಾತ್ರ ಏಕೆ ಅವರ ಸಾಮಾಜಿಕ ಅಭ್ಯಾಸಗಳೂ ಇರಲಿ ಎನ್ನುವ ಧೋರಣೆ ಇರಬಹುದು ಚೀನಾದ ಈ ವ್ಯಾಯಮದ ಕುರಿತ ಆಸಕ್ತಿಯ ಹಿಂದೆ. ಇರಲಿ ಬಿಡಿ, ‘ತಾಯ್ ಚಿ’ ಶರೀರದ ಆರೋಗ್ಯಕ್ಕೆ ಒಳ್ಳೆಯದೇ, ಆದರೆ, ಎರ್ ನಾಯ್ ಮಾತ್ರ ಶರೀರಕ್ಕೆ ಒಳ್ಳೆಯದಾದರೂ, ಮಾನಸಿಕ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ ಎನ್ನುವುದಂತೂ ನಿಜವೇ.

ಅಲ್ರೀ, ಏನೀ ‘ಎರ್ ನಾಯ್’?

‘ಎರ್ ನಾಯ್’ ಎಂದರೆ ಚೀನೀ ಭಾಷೆಯಲ್ಲಿ “ಎರಡನೇ ಹೆಂಡತಿ” ಅಂತ. ಚೀನೀ ಸಮಾಜ ಇದನ್ನು ಒಪ್ಪದಿದ್ದರೂ ಬಹುತೇಕ, ಮೊದಲ ಪತ್ನಿಯರೂ ಸೇರಿ, ಚೀನೀಯರು ಇದರ ವಿರುದ್ಧ ದೊಡ್ಡ ಸ್ವರ ಎತ್ತದೆ ಕಂಡೂ ಕಾಣದಂತೆ ತಮ್ಮ ದೃಷ್ಟಿಯನ್ನು ಬೇರೆಡೆ ನೆಡುತ್ತಾರೆ. “ಎರ್ ನಾಯ್” ಯನ್ನು ಸಾಕುವುದು ಒಂದು ರೀತಿಯ ಪ್ರತಿಷ್ಠೆ ಚೀನಾದಲ್ಲಿ. ಮೇಲ್ಮಧ್ಯಮ ವರ್ಗದ ಗಂಡಸರು ಕಾಸು ಹೆಚ್ಚಿದ್ದರೆ ಈ ಸೌಲಭ್ಯ ಹೊಂದಿರುತ್ತಾರೆ. “ಎರ್ ನಾಯ್” ಗಳು ಅವಸರದಿಂದ ಹೆಕ್ಕಲ್ಪಟ್ಟ ಅಂತಿಂಥ ಸ್ತ್ರೀಯರಲ್ಲ. ಇವರು ಸುಶಿಕ್ಷಿತರೂ, ಆಧುನಿಕ ಮನೋಭಾವದವರೂ ಆದ ಚೆಂದುಳ್ಳಿ ಹೆಣ್ಣುಗಳು. ಇವರ ಉಪಯೋಗ ಬರೀ “ವೀಕೆಂಡ್” ಗಾಗಿಯೋ ಅಥವಾ boredom ಕಳೆಯಲಿಕ್ಕೋ ಅಲ್ಲ. ಇವರು ತಮ್ಮ ಪುರುಷರೊಂದಿಗೆ business meeting ಗಳಲ್ಲಿ ಪಾಲುಗೊಳ್ಳುತ್ತಾರೆ. ಇವರನ್ನು ನೋಡಿ business partner ಗಳು ಪ್ರಭಾವಿತರಾಗುತ್ತಾರೆ. ಗಟ್ಟಿ ಕುಳ ಎಂದುಕೊಳ್ಳುತ್ತಾರೆ. ಒಂದು ರೀತಿಯ ಷೋ ಪೀಸು. ಕೆಲವರು louis vuitton ಬ್ರೀಫ್ ಕೇಸು, “ಗುಚ್ಚಿ” ಪರ್ಫ್ಯೂಮು, “ಫ್ಲೋರ್ ಶೈಮ್” ಶೂ ಹಾಕಿಕೊಂಡು ಕ್ಲಯಂಟ್ ಗಳನ್ನು ಇಂಪ್ರೆಸ್ಸ್ ಮಾಡಲು ಹೊರಟರೆ ಇವರದು ಬೇರೆಯದೇ ಆದ ವಿಧಾನ. ತಮ್ಮ ಮಡದಿಯರ ಉದರಕ್ಕೆ ಬೆಂಕಿ ಹಾಕಿ ಇಂಪ್ರೆಸ್ ಮಾಡೋ ವಿಧಾನ.

ವಿವಾಹದ ಬಗ್ಗೆ ಚೀನಿಯರದು ಟೇಕ್ ಇಟ್ ಈಜಿ attitude. ರೋಷದಿಂದ ಸಂಪತ್ತಿನ ಹಿಂದೆ ಬಿದ್ದ ಪರಿಣಾಮವಿರಬೇಕು. ಒಬ್ಬ ಪಾಶ್ಯಾತ್ಯ ವ್ಯಕ್ತಿಯ ಪ್ರಕಾರ ಇಲ್ಲಿ ಚೀನಾದಲ್ಲಿ ವಿವಾಹ ಎನ್ನುವುದು ಎರಡು ಹೃದಯಗಳ ಬೆಸುಗೆ ಅಲ್ಲ. ಒಂದು ರೀತಿಯ ಎರಡು ಕುಟುಂಬಗಳ ಮಧ್ಯೆಯ ಒಪ್ಪಂದ. ಅದರ ಮೇಲೆ ಬೇರೆ ದೇಶಗಳ ರೀತಿ ಚೀನಾದಲ್ಲಿ ಮಾನವೀಯ ಕ್ರಾಂತಿ (humanist revolution) ಆಗಿಲ್ಲವಂತೆ. ಹಾಗಾಗಿ ವಿವಾಹ ತಲೆ ಕೆಡಿಸಿ ಕೊಳ್ಳುವಂಥ ವ್ಯವಸ್ಥೆಯಲ್ಲ. ವ್ಯವಸ್ಥೆ ಹೀಗಿರುವಾಗ ಜಾಣ, ಚೆಂದುಳ್ಳಿ ಹೆಣ್ಣುಗಳು “ಎರ್ ನಾಯ್” ಪಟ್ಟಕ್ಕೆ ಮೋಹಿತರಾಗುತ್ತಾರೆ. ಇರುವವನು ತಾನೇ ಈ ರೀತಿಯ ಎರಡನೇ ಹೆಣ್ಣನ್ನು ಇಟ್ಟು ಕೊಳ್ಳಲು ಸಾಧ್ಯ? ಮುಂದುವರಿದ ನಗರ ಗಳಲ್ಲಂತೂ ಶೇಕಡ ೮೦ ಶ್ರೀಮಂತ ಪುರುಷರಿಗೆ ಈ ತೆರನಾದ ಸಂಗಾತಿಗಳಿರುತ್ತಾರಂತೆ. ಮಹಿಳೆಯರೂ ಸಹ ಧನದ ಹಿಂದೆ ಓಡುವುದರಿಂದ ಯಾವುದೇ arrangement (ವಿವಾಹ ಅಥವಾ ಎರ್ ನಾಯ್) ನಲ್ಲಿ ಧನವಂತನನ್ನೇ ಇಷ್ಟ ಪಡುತ್ತಾಳೆ. ಈ ಧೋರಣೆಯ ಹಿಂದೆ economic interest ಸಹ ಇದೆ. ಒಬ್ಬ ಮಹಿಳೆಯ ಈ ಮಾತನ್ನು ಕೇಳಿ; “ ನಾನು ನನ್ನವನಿಂದ ತ್ಯಜಿಸಲ್ಪಟ್ಟಾಗ ಸೈಕಲ್ಲಿನ ಮೇಲೆ ಕೂತು ಕಣ್ಣೀರು ಹಾಕುವುದಕ್ಕಿಂತ BMW ಕಾರಿನಲ್ಲಿ ಕೂತು ಕಣ್ಣೀರು ಹಾಕಲು ಇಷ್ಟಪಡುತ್ತೇನೆ”. ಅಂದರೆ ಅವನು ನನ್ನನ್ನು ಬಿಟ್ಟರೂ BMW ನನ್ನ ಪಾಲಾದರೆ ಸಾಕು ಎಂದು. ‘crass materialism’ ತರುವ ಧೋರಣೆ ಇದು.

ಚೀನಾದ ಮಾಜಿ ಅಧ್ಯಕ್ಷ Jiang Zemin ಗೂ ಒಬ್ಬ ‘ಎರ್ ನಾಯ್’ ಇತ್ತಂತೆ. ಆಕೆ ಹಾಡುಗಾರ್ತಿ ಕೂಡಾ.

ನಮ್ಮ ದೇಶದ ಧೋರಣೆ ಏನು?

ನಮ್ಮ ದೇಶದಲ್ಲಿ ಈ ರೀತಿಯಾಗಿ ಪತ್ನಿಯಿದ್ದೂ ಮತ್ತೊಬ್ಬ ಸ್ತ್ರೀಯನ್ನು ಸಂಗಾತಿಯಾಗಿ ಇಟ್ಟುಕೊಳ್ಳುವುದಕ್ಕೆ ಇಟ್ಟು ಕೊಂಡವಳು, ಎಂದೂ ಸ್ವಲ್ಪ ತುಂಟ ತಮಾಷೆಯಾಗಿ “ಕೀಪ್” ಮತ್ತು “ಸ್ಟೆಪ್ನಿ” ಎಂದೂ ಕರೆಯುತ್ತಾರೆ. ಈ ರೀತಿಯಾಗಿ ವಿವಾಹದ ಹೊರಗೆ ಸಂಬಂಧ ಇಟ್ಟುಕೊಂಡ ಪುರುಷನನ್ನು ಸಮಾಜ ಅಸೂಯೆ ಮಿಶ್ರಿತ ಮೆಚ್ಚುಗೆಯಿಂದ ನೋಡಿದರೆ ಆ ಸೌಲಭ್ಯ ಮಹಿಳೆಗೆ ಇಲ್ಲ. ಇಟ್ಟು ಕೊಂಡವಳು, ಕೀಪ್ ಅಥವಾ ಸ್ಟೆಪ್ನಿ ಎಂದು ಕರೆಯುವುದರ ಬಗ್ಗೆಯೂ ಜನರಲ್ಲಿ ವಿಶೇಷವಾಗಿ ಫೆಮಿನಿಸ್ಟ್ ಪೈಕಿಯವರಿಗೆ ಭಾರೀ ವಿರೋಧವಿದೆ. ಈ ರೀತಿಯಾಗಿ ಕರೆಯುವುದು ಹೆಣ್ಣನ್ನು ನಿಕೃಷ್ಟವಾಗಿ ಕಂಡಂತೆ ಎನ್ನುವುದು ಇವರ ಅಭಿಪ್ರಾಯ. ದಾರಿ ಹೋಕರು ಸ್ಟೆಪ್ನಿ ಎಂತಲೋ, ಇಟ್ಟುಕೊಂಡವಳು ಎಂತಲೋ ಕರೆದುಕೊಳ್ಳಲಿ, ಆದರೆ ನಮ್ಮ ಸರ್ವೋಚ್ಚ ನ್ಯಾಯಾಲಯವೇ ಹಾಗೆ ಸಂಬೋಧಿಸಿದರೆ ಹೇಗಿರಬಹುದು?

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಒಂದು ತಗಾದೆ ಸರ್ವೋಚ್ಚ ನ್ಯಾಯಾಲಯದ ಕಟ್ಟೆ ಹತ್ತಿತು. ಇಟ್ಟು ಕೊಂಡ ವಳು ಖರ್ಚು ವೆಚ್ಚಕ್ಕೆ ಅರ್ಹಳೋ ಎಂದು. ಆ ಸಂದರ್ಭದಲ್ಲಿ ನ್ಯಾಯಾಲಯ “ಕೀಪ್” ಜೀವನಾಂಶಕ್ಕೆ ಅರ್ಹಳಲ್ಲ ಎನ್ನುವ ತೀರ್ಪು ನೀಡಿತು. ಕೀಪ್ ಪದವನ್ನು ಸಾಕ್ಷಾತ್ ನ್ಯಾಯ ಮೂರ್ತಿಗಳ ಬಾಯಲ್ಲಿ ಕೇಳಿದ ‘ಸೋಲಿಸಿಟರ್ ಜನರಲ್’ ಇಂದಿರಾ ಜೈಸಿಂಗ್ ತಮ್ಮ ಕಿವಿಗಳನ್ನೇ ನಂಬಲಾಗಲಿಲ್ಲ. ಈ ೨೧ ನೆ ಶತಮಾನದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಗೆ ತಾನೇ ಓರ್ವ ಮಹಿಳೆಗೆ ಈ ಪದವನ್ನ ಉಪಯೋಗಿಸಬಲ್ಲುದು ಎಂದು ಗುಡುಗಿದರು. ಈ ಪದವನ್ನು ಕಡತದಿಂದ ತೆಗೆದು ಹಾಕಲು ನಾನು ಅರ್ಜಿ ಸಲ್ಲಿಸುತ್ತೇನೆ, ಅಲ್ಲಿಯವರೆಗೆ ಈ ನ್ಯಾಯಾಲಯದ ಕಲಾಪದಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರತಿಭಟಿಸಿದರು. ಕೊನೆಗೆ keep ಬದಲಿಗೆ concubine ಪದ ಆಗಬಹುದೋ ಎಂದು ಕೇಳಿ ಜೈಸಿಂಗ್ ರನ್ನು ಸಮಾಧಾನ ಪಡಿಸಿತು ನ್ಯಾಯಾಲಯ. ಸುಪ್ರೀಂ ಕೋರ್ಟೇ ಈ ರೀತಿ ಪದ ಪ್ರಯೋಗ ಮಾಡಿರುವಾಗ ನಾವು ಯಾವ ಲೆಕ್ಕ ಎನ್ನುತ್ತೀರೋ? ಸಂಬಂಧ ಇಟ್ಟು ಕೊಂಡ ಹೆಣ್ಣಿಗೆ ಜೀವನಾಂಶ ಇಲ್ಲ, ಅದರಲ್ಲೂ “ಒಂದು ರಾತ್ರಿಯ ನಿಲುಗಡೆ” (one night stand) ಯವರಿಗಂತೂ ಈ ಸೌಲಭ್ಯ ಇಲ್ಲವೇ ಇಲ್ಲ ಎಂದು ತೀರ್ಪ ಹೊರಬಿದ್ದಿತು ಸರ್ವೋಚ್ಚ ನ್ಯಾಯಾಲಯದಿಂದ.

ಜಿಜ್ಞಾಸೆ: ಎರಡನೆಯ, ಅನಧಿಕೃತ ಹೆಣ್ಣು “ಕೀಪ್” ಆಗುವುದಾದರೆ, ಮೊದಲನೆಯವಳು ಗಂಡಿನ ಮೇಲೆ “ಹೇರಲ್ಪಟವಳು” ಎಂದೋ?

ನಮಗೆ “ಹುಬ್ಬು” ಗಳೇಕಪ್ಪಾ ?

ಎಲ್ಲಾ ಮಕ್ಕಳೂ ಚಂದಿರನೇಕೆ ಓಡುವನಮ್ಮಾ ಎಂದು ಕೌತುಕದಿಂದ ಕೇಳಿದರೆ ನನ್ನ ಮಗನಿಗೆ ಬೇರೆಯದೇ ಆದ ಒಂದು ಚಿಂತೆ.

ನಮಗೆ “ಹುಬ್ಬು” ಗಳೇಕಪ್ಪಾ ? ಹುಬ್ಬು ಹಾರಿಸುತ್ತಾ ಕೇಳಿದ ನನ್ನ ಮಗ ನಿನ್ನೆ ರಾತ್ರಿ ಅವನ ಬೆಡ್ ಟೈಮ್ ಸ್ಟೋರಿ ಸೆಶನ್ ಸಮಯ. ನಾನು ಹೇಳುತ್ತಿದ್ದ ಕಥೆಯ ಬಗ್ಗೆ ಅವನು ಪ್ರಶ್ನೆ ಕೇಳಿದ್ದರೆ ಕಥೆಯಲ್ಲಿ ಪ್ರಶ್ನೆಯಿಲ್ಲ ಎಂದು ಅವನ ಪುಟ್ಟ ಬಾಯಿ ಮುಚ್ಚಿಸಬಹುದಿತ್ತು. ಆದರೆ ಕೇಳುತ್ತಿರುವುದು ಲಾಜಿಕ್ ಆದ ಪ್ರಶ್ನೆಯಾದ್ದರಿಂದ ಒಂದು ಕ್ಷಣ ಮೇಲೆ ಏರಿದ ನನ್ನ ಹುಬ್ಬುಅಲ್ಲೇ ನಿಂತಿತು ನನ್ನ ಸಮಜಾಯಷಿಗಾಗಿ ಕಾಯುತ್ತಾ. ಹೌದೇ, ಸುಂದರ ಮೊಗದ ಮೇಲೆ, ಬೊಗಸೆ ಕಣ್ಣುಗಳ ಮೇಲೆ ಹುಬ್ಬುಗಳೆಂಬ “ಛಾವಣಿ” ಯ ಅವಶ್ಯಕತೆ ಏನಿತ್ತೋ? ಕಣ್ಣುಗಳನ್ನು ರಕ್ಷಿಸಲು ರೆಪ್ಪೆಗಳಿದ್ದೆ ಇವೆಯಲ್ಲಾ? ಓಹ್, ಬಹುಶಃ ಡಬ್ಬಲ್ ಪ್ರೊಟೆಕ್ಷನ್ ಆಗಿ ಇರಬೇಕು ಹುಬ್ಬುಗಳು ಬಡಿಯುವ ರೆಪ್ಪೆಗಳಿಗೆ ಸಂಗಾತಿಯಾಗಿ.  

ಹುಬ್ಬು ಮತ್ತು ಮೂಗಿನ ರೂಪ, ಅಂಕು ಡೊಂಕಿನ ಬಗ್ಗೆಯೂ ಸಾಕಷ್ಟು ಕುತೂಹಲ ಇದ್ದಿದ್ದೇ.

ಮಹಿಳೆಯರಿಗೆ ಕರಡಿಗಿರುವಂಥ ಹುಬ್ಬಿದ್ದರೆ ಅದನ್ನು ರೆಪೇರಿ ಮಾಡಿಸಿಕೊಳ್ಳುತ್ತಾರೆ. ಅದಕ್ಕೆ ಆಂಗ್ಲ ಭಾಷೆಯಲ್ಲಿ blepharoptosis ಎಂದು ಕರೆಯುತ್ತಾರೆ.  ಕಾಲುಗುರು ಸ್ವಲ್ಪ ಡೊಂಕಾದಾಗ toe nail repair ಇರುವಂತೆ ಮುಖಕ್ಕೆ ಕಿರೀಟ ಪ್ರಾಯವಾಗಿ ಕಂಗೊಳಿಸುವ ಹುಬ್ಬಿಗೆ ಇಲ್ಲದೆ ಇರುತ್ತದೆಯೇ ಒಂದು ರೆಪೇರಿ? ಹಾಂ, ಈ ಹುಬ್ಬಿನ ರೆಪೆರಿಯೊಂದಿಗೆ ಅದಕ್ಕೊಂದು ಚೆಂದದ ರಿಂಗ್ ಇದ್ದರೆ ಇನ್ನೂ ಚೆಂದ ಅಲ್ಲವೇ? ಮೂಗಿಗೆ, ಕಾಲುಂಗುರಕ್ಕೆ, ಹೊಕ್ಕುಳಿಗೆ ಒಂದೊಂದು ರಿಂಗ್ ಇರುವಾಗ ಹುಬ್ಬಿಗೆ ಬೇಕೇ ಬೇಕು ಮಾರಾಯ್ರೆ ಒಂದು ರಿಂಗು.         

ಮತ್ತೊಂದು ಮಾತು, ಹೆಂಡತಿ ಪಕ್ಕದಲ್ಲಿಲ್ಲ. ಅರಬ್ ಮಹಿಳೆಯರ ಹುಬ್ಬಿಗೆ ಅದೇನು ಸೌಂದರ್ಯವೋ ಏನೋ? ಕಾಮನ ಬಿಲ್ಲುಗಳು ಮೋಡಗಳೊಳಗೆ ಅವಿತು ಕೊಳ್ಳುತ್ತವೆ ಇವರ ಹುಬ್ಬುಗಳ ಸೌಂದರ್ಯವನ್ನು ನೋಡಿ. ಬುರ್ಖಾ ಧರಿಸಿ, ಆದರ ಮೇಲೆ ಮೂಗನ್ನು ಮುಚ್ಚುವ “ನಿಕಾಬ್” ಎನ್ನುವ  ತೆಳು ಪರದೆಯನ್ನು ಧರಿಸಿದಾಗ ಹುಬ್ಬುಗಳು ಪ್ರಾಮುಖ್ಯತೆ ಪಡೆಯುತ್ತವೆ ಇವರ ಸೌಂದರ್ಯ ಪ್ರದರ್ಶನದಲ್ಲಿ. ಕೆಲವೊಮ್ಮೆ ಅನ್ನಿಸುವುದಿದೆ ಇಷ್ಟೆಲ್ಲಾ ಮೈ ಮುಚ್ಚಿ ಕೊಂಡು, ಈ ಪರಿಯಾಗಿ ಹುಬ್ಬುಗಳನ್ನು ರೆಪೇರಿ ಮಾಡಿಸಿಕೊಂಡು ಪುರುಷರ ಅಲೆಯುವ ಕಣ್ಣುಗಳಿಗೆ ಏಕೆ ಇವರು torment ಮಾಡುತ್ತಾರೋ ಎಂದು. ಇಸ್ಲಾಂ ಹುಬ್ಬನ್ನು ರೆಪೇರಿ ಮಾಡಿಸಿ ಕೊಳ್ಳುವ ಗೀಳಿಗೆ ಹುಬ್ಬುಗಂಟಿಕ್ಕಿ ಅಸಮ್ಮತಿ ಸೂಚಿಸಿದರೂ ಅರಬ್ ಲಲನಾ ಮಣಿಗಳಿಗೆ ಅದರ ಪರಿವೆ ಇಲ್ಲ. ಈ ವಿಷಯದಲ್ಲಿ ಇನ್ನೂ ಯಾವುದೇ ಫತ್ವ ಬಂದ ನೆನಪಿಲ್ಲ.     

ಈಗ ನನ್ನ ಮಗನ ಪ್ರಶ್ನೆಗೆ ಎಲ್ಲಿದೆ ಉತ್ತರ? ಇಗೋ ಇಲ್ಲಿ. ತಲೆಯ ಮೇಲಿನಿಂದ ಮಳೆ ಹನಿ, ಹೇನು, ಹೊಟ್ಟು ಇತ್ಯಾದಿಗಳು ಕಣ್ಣಿನೊಳಗೆ ಬೀಳದೆ ಇರಲು ಇರುವ ಸಿಸ್ಟಂ ಹುಬ್ಬು. ಅಷ್ಟೇ ಅಲ್ಲ ಸೂರ್ಯನ ಪ್ರಖರ ಶಾಖ ನೇರವಾಗಿ ಕಣ್ಣಿಗೆ ಬೀಳದಂತೆ ತಡೆಯುತ್ತದೆ ಕೂಡಾ ನಮ್ಮ ಹುಬ್ಬುಗಳು.  

ರಾತ್ರಿ ತರಗತಿ

ರಾಮನ್ ಮತ್ತು ನಾರಾಯಣ್ ಆಫೀಸಿನಲ್ಲಿ ಹರಟುತ್ತಿದ್ದರು.

ರಾಮನ್:  ನಾರಾಯಣ, ನಾನು ಕಳೆದ ಐದು ತಿಂಗಳುಗಳಿಂದ ರಾತ್ರಿ ತರಗತಿಗಳಿಗೆ ಹೋಗುತ್ತಿದ್ದೇನೆ, ಮುಂದಿನ ವಾರ ನನ್ನ ಪರೀಕ್ಷೆ ಇದೆ.

ನಾರಯಣ್: ಓಹ್

ರಾಮನ್: ಉದಾಹರಣೆಗೆ ಗ್ರಹಾಮ್ ಬೆಲ್ ಯಾರೆಂದು ನಿನಗೆ ಗೊತ್ತಾ?

ನಾರಾಯಣ್: ಇಲ್ಲ.

ರಾಮನ್: ಗ್ರಹಾಮ ಬೆಲ್ ಅಲ್ಲವೇ ೧೮೭೬ ರಲ್ಲಿ ಟೆಲಿ ಫೋನ್ ಕಂಡುಹಿಡಿದವನು? ನೀನು ರಾತ್ರಿ ತರಗತಿಗೆ ಹೋದರೆ ಇವೆಲ್ಲಾ ತಿಳಿಯುತ್ತವೆ.

ಮಾರನೆ ದಿನ…

ರಾಮನ್: ಹೋಗಲಿ ನಿನಗೆ ಅಲೆಕ್ಸಾಂಡರ್ ಡೂಮ ಯಾರೂಂತ ಗೊತ್ತಾ?

ನಾರಾಯಣ್: ಇಲ್ಲ

ರಾಮನ್: ಅವನು ಸುಪ್ರಸಿದ್ಧ ಕಾದಂಬರಿಕಾರ. ಅವನೇ three musketeers ಪುಸ್ತಕ ಬರೆದದ್ದು.

ಹೀಗೆ ಪ್ರತೀ ದಿನ ರಾಮನ್ ತನ್ನ ಜ್ಞಾನದ ಬಗ್ಗೆ ನಾರಾಯಣನಲ್ಲಿ ಕೊಚ್ಚುತ್ತಿದ್ದ. ಬೇಸತ್ತಿದ ನಾರಾಯಣ್ ಕೇಳ್ದ, ರಾಮನ್, ನಿನಗೆ ಬಾಲಕೃಷ್ಣನ್ ಕುಪ್ಪುಸ್ವಾಮಿ ಯಾರೂಂತ ಗೊತ್ತಾ?

ರಾಮನ್: ಇಲ್ಲ, ಗೊತ್ತಿಲ್ಲ.

ನಾರಾಯಣ್: ಅಯ್ಯೋ, ಅವನೇ ಇಲ್ಲವೇ ನಿನ್ನ ಹೆಂಡತಿಯ ಜೊತೆ ರಾತ್ರಿಯಲ್ಲಿ ತಿರುಗುತ್ತಾ ಇರೋದು. ನೀನು ಈ ರಾತ್ರಿ ತರಗತಿಗಳನ್ನು ನಿಲ್ಲಿಸಿದರೆ ಇದು ನಿನಗೆ ತಿಳಿಯಬಹುದು” ಎಂದು ಹೇಳಿದ.

moral of the story:

ಜೀವನದಲ್ಲಿ ಸಾಮಾನ್ಯ ಜ್ಞಾನಕ್ಕಿಂತ ಅರಿಯಬೇಕಾದ ಬೇರೆ ಸಂಗತಿಗಳೂ ಇವೆ

ಕಟುಕನಿಗಾಗಿ ಕಾಯುತಿಹ ಕುರಿಗಳು ಮತ್ತು ಕುವರಿಯರು

                                            

ನಾಗರೀಕ ಸಮಾಜಕ್ಕೆ ಕಳಂಕವಾಗಿರುವ ವೇಶ್ಯಾವಾಟಿಕೆ ಬಗ್ಗೆ ಸನ್ಮನಸ್ಸಿನ ಕನ್ನಡಿಗರೊಬ್ಬರು “ಸಂಪದ” ದದಲ್ಲಿ ಚರ್ಚೆ ಇಟ್ಟು ತಾವು ಬೆಂಗಳೂರಿನಲ್ಲಿ ಕಂಡ ದೃಶ್ಯದ ಬಗ್ಗೆ ಓದುಗರ ಗಮನ ಸೆಳೆದರು.

ಮೈಮಾರುವ, ವೇಶ್ಯಾವಾಟಿಕೆ, ಹಾದರ, ಹೀಗೆಲ್ಲಾ ವಿವಿಧ ನಾಮಾವಳಿಗಳಿಂದ ಗುರುತಿಸಲ್ಪಡುವ flesh trade ಇಂದು ನಿನ್ನೆಯದಲ್ಲ. ಇದು world’s oldest profession ಅಂತೆ. ಈ ವೃತ್ತಿಗೆ profession ಅಂತ ಕರೆದು ದಾರ್ಶನಿಕ ಅಥವಾ ಸಮಾಜ ಶಾಸ್ತ್ರಜ್ಞ ಈ ವೃತ್ತಿಗೆ ಒಂದು definition ಕೊಟ್ಟು ಮನುಷ್ಯನ ನೂರಾರು ವೃತ್ತಿಗಳಲ್ಲಿ ಇದೂ ಒಂದು ಎಂದು ಪ್ರತಿಬಿಂಬಿಸಿ ಪರೋಕ್ಷವಾಗಿ ಪ್ರೋತ್ಸಾಹಿಸಿದ್ದಾನೆ. ಮತ್ತೊಂದು ಕಡೆ ನಮ್ಮ ಹೆಣ್ಣು ಮನೆಯ ಹೆಣ್ಣು ಮಕ್ಕಳು ಮಾನವಾಗಿ ಓಡಾಡಲು ಪರರ ಹೆಣ್ಣು ಮಕ್ಕಳು ಮಾನ ಬಿಟ್ಟು ಮೆಜೆಸ್ಟಿಕ್ ನಲ್ಲೋ ಇನ್ಯಾವುದಾದರೂ ರೆಡ್ ಲೈಟ್ ಏರಿಯಾದಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಗಿರಾಕಿಗೆ ಕಾಯಬೇಕು. ಹೇಗಿದೆ ವ್ಯವಸ್ಥೆ? ಈ ವ್ಯವಸ್ಥೆ ಸರಿ ಎಂದು ಹೇಳುವ ಮಹಿಳೆಯರೂ ಇದ್ದಾರೆ.

ಯಾವ ಹೆಣ್ಣೂ ತನ್ನ ಸ್ವ ಇಚ್ಚೆಯಿಂದ ಈ ದಂಧೆಗೆ ಇಳಿಯುವುದಿಲ್ಲ. ಹೌದು ಶಾಪಿಂಗ್ ಗೀಳು ಹಚ್ಚಿಕೊಂಡ ಕೆಲವರು ಶೋಕಿಗಾಗಿ, (ಇದರಲ್ಲಿ ಗೃಹಿಣಿಯರೂ ಸೇರಿದ್ದಾರೆ ಎನ್ನುವುದನ್ನು ಮರೆಯಬಾರದು) ಈ ಕೆಲಸಕ್ಕೆ ಇಳಿಯುತ್ತಾರೆ. ಈ ದಂಧೆಯ ಬಗ್ಗೆ ಕೂಲಂಕುಷವಾಗಿ ನೋಡಿದಾಗ ನಮಗೆ ಸಿಗುವ ಕಾರಣಗಳು ಹಲವು. ಬಳಕೆದಾರ ಸಂಸ್ಕೃತಿ, ಕೊಳ್ಳಲು ಪ್ರೇರೇಪಿಸುವ ಜಾಹೀರಾತುಗಳು, ಸಂಪತ್ತನ್ನು ವೈಭವೀಕರಿಸುವ ಸೀರಿಯಲ್ಲುಗಳು. ಇದಲ್ಲದೆ ಸಂಪತ್ತಿನ ಬಗೆಗಿನ ಸಮಾಜದ ದೃಷ್ಟಿಕೋನ. ಯಶಸ್ವೀ ವ್ಯಕ್ತಿ ಬಳಿ ದೊಡ್ಡ ಕಾರು, ಬಂಗಲೆ ಇದ್ದರೆ ಅವನಿಗೆ ಮನ್ನಣೆ. ಆ ಬಂಗಲೆ, ಕಾರು, ಸಂಪತ್ತು ಹೇಗೆ ಬಂತು ಎಂದು ಕೇಳುವ ಅರಿಯುವ ಹಂಬಲ ಸಮಾಜಕ್ಕಿದೆಯೇ? ಯಾವುದಾದರೂ upscale neighbourhood ಕಡೆ ನಡೆದರೆ ತಿಳಿಯುತ್ತೆ. ನೋಡಪ್ಪಾ, ಅಲ್ಲಿರೋ ಬಂಗಲೆ forest conservator ಅವರದು. ಅಲ್ಲಿ ನಿಂತಿದೆಯಲ್ಲಾ ದೊಡ್ಡ ಕಾರು,ಅದು pwd engineer ಅವರದು, ಅಲ್ಲಿ ಯಮಾಹಾ ಬೈಕಿನಲ್ಲಿ ಹೋಗ್ತಾ ಇದ್ದಾನಲ್ಲ ಅವನು ಕೆಎಸ್ಸಾರ್ಟೀಸಿ ಬಸ್ಸಿನ ಕಂಡಕ್ಟರನ ಮಗ, MBBS ಮಾಡ್ತಾ ಇದ್ದಾನೆ……….ಹೀಗೆ ಸಾಗುತ್ತದೆ ಗುಣಗಾನ, ಪ್ರಶಂಸೆ, ಭಕ್ತಿ ಭಾವ. ನಾವೆಂದಾದರೂ ಯೋಚಿಸಿದ್ದೇವೆಯೇ ಈ ವ್ಯಕ್ತಿಗಳು ಪಡೆಯುವ ಸಂಬಳದಲ್ಲಿ ಈ ಸೌಕರ್ಯಗಳನ್ನು ತಮದಾಗಿಸಿಕೊಳ್ಳಲು ಅವರಿಂದ ಸಾಧ್ಯವೇ ಎಂದು? ಮಾನ ಬಿಟ್ಟು ಸಂಪಾದನೆ ಮಾಡಿದರೆ ಸಂಪಾದನೆ ಮಾನವನ್ನು ತಂದು ಕೊಡುತ್ತದಂತೆ. ಎಷ್ಟು ಸೊಗಸಾಗಿ ಮರಳಿ ಬಂತು ನೋಡಿ ಮಾನ ಇಲ್ಲಿ. ಈಗ ವೇಶ್ಯಾವಾಟಿಕೆಗೂ ಇಲ್ಲಿ ಬರೆದಿರುವುದಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ ತಾನೇ?

ಅನೈತಿಕ ಸಂಪಾದನೆಯನ್ನು ಕಂಡು ಹಿಗ್ಗಿ, ಹೊಗಳುವ ಸಮಾಜ ಒಳಗೊಳಗೇ ಅದೇ ರೀತಿ ತಾನೂ ಆಗಬೇಕೆಂದು ಬಯಸುತ್ತದೆ. ಈ ಸಂಪತ್ತನ್ನು ನೋಡಿದ ಸಾಮಾನ್ಯ ಗೃಹಿಣಿ ತನ್ನ ಗಂಡನನ್ನು ಪ್ರೇರೇಪಿಸುತ್ತಾಳೆ ಅಡ್ಡ ದಾರಿ ಹಿಡಿ ದು ಸಂಪಾದಿಸಲು. ಅಬಲೆ ಬಯಸುತ್ತಾಳೆ ತನ್ನ ಮೈ ಮಾಟವನ್ನು ಶ್ರೀಮಂತನಿಗೆ ಉಣಿಸಿದರೆ ಅವನಂತೆಯೇ ತಾನೂ ಸುಖವಾಗಿ ಇರಬಹುದು ಎಂದು. ಲಂಚ ಪಡೆಯುವ ವ್ಯಕ್ತಿ ಒಂದು ರೀತಿಯ ಹಾದರ ಮಾಡಿದರೆ ಏರು ಜವ್ವನೆ ಮತ್ತೊಂದು ರೀತಿಯ ಹಾದರಕ್ಕೆ ಇಳಿಯುತ್ತಾಳೆ. ಇಬ್ಬರ ಉದ್ದೇಶ ಸ್ಪಷ್ಟ. ಭರ್ಜರಿಯಾಗಿ ಬಾಳುವುದು.

ಶೀಲ ಮತ್ತು ಅಶ್ಲೀಲದ ಮಧ್ಯೆ ಇರುವ ಪರದೆ ಬಹು ತೆಳುವಾದುದು. ಯಾವುದೋ ಒಂದು ಘಳಿಗೆಯಲ್ಲಿ, ಯಾವುದೋ ಒಂದು ಕಾರಣಕ್ಕೆ ಆ ಪರದೆ ಸರಿಯಿತೋ ಪಯಣ ಶುರು ಅನೀತಿಯೆಡೆಗೆ. ಚಿಕ್ಕ ಪುಟ್ಟ, ಒಂದು ಸಲ, ಎರಡು ಸಲ, ಎಂದು ತಮಗರಿವಿಲ್ಲದೆಯೇ ಅನೈತಿಕತೆಯ ಪ್ರಪಾತಕ್ಕೆ ಜಾರುತ್ತಾರೆ. ಟೀವೀ ಆನ್ ಮಾಡಿದರೆ ಸೀರಿಯಲ್ಲುಗಳಲ್ಲಿ ಸಾವಿರ ಕೋಟಿಗಳ ಮಾತು, ಬೀದಿಯಲ್ಲಿ ಹೋದರೆ ಭರ್ರ್ ಎಂದು ಹೋಗುವ ಮಾರುತಿ, ಹೊಂಡಾ, ಮರ್ಸಿಡೀಸ್ ಗಳು. ಪರಿಣಾಮ? ಈ ಮೇಲೆ ಹೇಳಿದ ಸಂಪತ್ತನ್ನು ಕಂಡು ಜೊಲ್ಲು ಸುರಿಸಿ ನೋಡುತ್ತಾ ಮೆಜೆಸ್ಟಿಕ್ನಲ್ಲಿ ನಿಲ್ಲುವ ನೀರೆಯರು.