ತಾಲಿಬಾನಿಗಳ ಅಟ್ಟಹಾಸಕ್ಕೆ ಕೊನೆ ಎಂದು?

ಮಲಾಲಾ. ನಾನು, ನೀವು ದಿನವೂ ನೋಡುವ, ಪುಸ್ತಕಗಳ ಹೊರೆಯೊಂದಿಗೆ ಕಣ್ಣುಗಳಲ್ಲಿ  ಕನಸನ್ನು ಹೊತ್ತು ಶಾಲೆಯ ಕಡೆ ದೃಢ ಹೆಜ್ಜೆ ಇಡುವ ಬಾಲಕಿಯರ ಹಾಗೆ ೧೫ ವರ್ಷದ ಓರ್ವ ಹೆಣ್ಣು ಮಗಳು.

ಪಾಕಿಸ್ತಾನದ ರಮಣೀಯ ನಿಸರ್ಗ ಪ್ರಾಂತ್ಯ ‘ಸ್ವಾತ್’ ಕಣಿವೆ ಪ್ರದೇಶವನ್ನು ವಶಪಡಿಸಿ ಕೊಂಡಿದ್ದ ತಾಲಿಬಾನ್ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ ನಾಲ್ಕು ನೂರು ಮೈಲು ಗಳ ವರೆಗೆ ತಲುಪಿದ್ದರು. ಭಾರೀ ಹೋರಾಟದ ನಂತರ ಪಾಕಿ ಸೈನ್ಯ ತಾಲಿಬಾನಿಗಳನ್ನು ಹಿಮ್ಮೆಟ್ಟಿ ಕಣಿವೆಯನ್ನು ವಶ ಪಡಿಸಿಕೊಂಡಿದ್ದರು. ಆದರೂ ತಾಲಿಬಾನಿಗಳ ಪ್ರಭಾವ ಕಡಿಮೆಯಾಗಲಿಲ್ಲ. ಕಾದಾಟ ತಾಲಿಬಾನಿಗಳ ಕಸುಬು, ಅಸ್ತ್ರ ಶಸ್ತ್ರಗಳು ಇವರ ಆಹಾರ, ಮಾನವ ಸಂಸ್ಕಾರಕ್ಕೆ ವಿರುದ್ಧವಾದ ನಡವಳಿಕೆ ಇವರ ಉಸಿರು. ಇವೆಲ್ಲವೂ ಮಿಳಿತವಾದಾಗ ವಿಶ್ವಕ್ಕೆ ಲಭ್ಯ ಅರಾಜಕತೆ, ಕ್ರೌರ್ಯ, ಅಟ್ಟಹಾಸ. ಇವರನ್ನು ಬಲಿ ಹಾಕಲು ಪಾಕಿಸ್ತಾನದಿಂದ ಹಿಡಿದು ಅಂತಾರಾಷ್ಟ್ರೀಯ ಸಮುದಾಯದರೆಗೆ ಯಾರಿಗೂ ಇಚ್ಛೆಯಿಲ್ಲ. ಇದೂ ಒಂದು ರೀತಿಯ ರಾಜಕಾರಣ. ತಾನೇ ಪೋಷಿಸಿದ ಶಿಶು ರಾಕ್ಷಸನಾಗಿ ವರ್ತಿಸಲು ತೊಡಗಿದಾಗ ಅಮೇರಿಕಾ ಎಚ್ಚೆತ್ತು ಅವರನ್ನು ಹದ್ದು ಬಸ್ತಿಗೆ ತರಲು ಯತ್ನಿಸಿತು. ಇದರ ನಡುವೆ ತಾಲಿಬಾನಿಗಳೊಂದಿಗೆ ಚರ್ಚೆ ಕೂಡಾ. ಏಕೆಂದರೆ ಇವರನ್ನು ಸಂಪೂರ್ಣ ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕೆಗೆ ಇತಿಹಾಸದ ಪಾಠಗಳು ನೆನಪು ಮಾಡುತ್ತವೆ. ಈ ದ್ವಂದ್ವಗಳ ನಡುವೆ ತಾಲಿಬಾನ್ ತನಗೆ ತೋಚಿದ ರೀತಿಯಲ್ಲಿ ವರ್ತಿಸುತ್ತದೆ. ಇವರಿಗೆ ಹೆಣ್ಣುಮಗಳು ಎಂದರೆ ಮನೆಯ ನಾಲ್ಕು ಗೋಡೆಗಳ ಮಧ್ಯೆ, ಶಿಕ್ಷಣ ಪಡೆಯದೇ ಬದುಕಬೇಕಾದ ಹೆರುವ ಯಂತ್ರಗಳು. ಯಾರಾದರೂ ಧೈರ್ಯ  ಮಾಡಿ ಶಾಲೆಗೆ ಹೋಗುತ್ತೇವೆ ಎಂದರೆ ಮೊದಲು ಬೆದರಿಕೆ, ನಂತರ ಬಂದೂಕು. ಮಲಾಲಾ ಎನ್ನುವ ಪೋರಿಗೆ ಸಿಕ್ಕಿದ್ದು ಇವೆರಡು. ಬೆದರಿಕೆಗೆ ಸೊಪ್ಪು ಹಾಕದೆ ಶಾಲೆಯ ಕಡೆ ನಡೆಯುತ್ತಿದ್ದ ಈಕೆ ತಾಲಿಬಾನಿಗಳಿಗೆ ಕಣ್ಣುರಿ ತರುತ್ತಿದ್ದಳು. ಇಷ್ಟೊಂದು ಚಿಕ್ಕ ಹುಡುಗಿ ತಮ್ಮಂಥ ರಾಕ್ಷಸರನ್ನು ಎದುರಿಸುತ್ತಿದ್ದಾಳಲ್ಲ ಎಂದು. ಬೆದರಿಕೆ ಫಲಿಸದಾದಾಗ ಬಂದೂಕು ಚಲಾಯಿಸಿದರು. ತಲೆಯನ್ನ  ಹೊಕ್ಕು ಹೊರಬಂದ ಗುಂಡು ಸಹ ಮಲಾಲಾ ಳನ್ನು ಕೊಲ್ಲಲು ನಿರಾಕರಿಸಿತು. ಅದ್ಭುತವಾಗಿ ಸಾವಿನಿಂದ ಪಾರಾದ ಮಲಾಲಾ ಹೆಚ್ಚುವರಿ ಚಿಕಿತ್ಸೆಗಾಗಿ ಲಂಡನ್ ಗೆ ಹೋಗಲು ಅರಬ್ ಸಂಯುಕ್ತ ಸಂಸ್ಥಾನಗಳ ಆಳುವ ಕುಟುಂಬದ ಕಡೆಯಿಂದ ‘ಏರ್ ಅಂಬುಲೆನ್ಸ್’ ನ ನೆರವು ಸಿಕ್ಕಿತು. ಈಕೆಯ ಚಿಕತ್ಸೆ ಫಲಕಾರಿಯಾಗಲು ಇಡೀ ವಿಶ್ವ ದೇವರನ್ನು ಬೇಡುತ್ತಿದೆ.

ಮಲಾಲಳ ಮೇಲಿನ ಹಲ್ಲೆಯನ್ನು ಖಂಡಿಸುತ್ತಾ ಪಾಕಿಸ್ತಾನದ ರಾಜಕಾರಣಿ ಹೇಳಿದ್ದು, ತಾಲಿಬಾನ್ ಕರಾಳ ಶಕ್ತಿಗಳ ಗುಂಪಾಗಿದ್ದು, ಧರ್ಮ ಸಂಸ್ಕಾರ ವಿಹೀನರು ಎಂದು ಕಟುವಾಗಿ ಟೀಕಿಸಿದರು. ಮಲಾಲಾಳ ಮೇಲಿನ ಹಲ್ಲೆಕೋರರನ್ನು ಹಿಡಿದು ಕೊಟ್ಟವರಿಗೆ ಒಂದು ಕೋಟಿ ರೂಪಾಯಿಯ ಬಹುಮನವನ್ನು ಪಾಕ್ ಘೋಷಿಸಿದೆ.

ಮಹಿಳೆಯರಿಗೆ ಶಿಕ್ಷಣ ಕೂಡದು ಎನ್ನುವ ಐಡಿಯಾ ತಾಲಿಬಾನ್ ಗೆ ಕೊಟ್ಟವರಾರು ಎನ್ನುವುದು ತಿಳಿಯುತ್ತಿಲ್ಲ. ವೇಷದ ಸಹಾಯದಿಂದ ಮುಸ್ಲಿಮರ ಥರ ಕಾಣುತ್ತಾ ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸುವ ದುಷ್ಟ ಶಕ್ತಿಗಳ ಸಂಗಮ ‘ತಾಲಿಬಾನ್’ ವರ್ತನೆಗೂ ಇಸ್ಲಾಂ ನ ಜನ್ಮ ಸ್ಥಳ ಸೌದಿ ಅರೇಬಿಯಾದ ನೀತಿಗೂ ಇರುವ ವ್ಯತ್ಯಾಸ ನೋಡಿ. ಇಸ್ಲಾಂ ನ  ತವರೂರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಗರದ  ರಾಜಕುಮಾರಿ ‘ನೂರಾ ಬಿಂತ್ ಅಬ್ದುಲ್ ರಹಮಾನ್’ ಮಹಿಳಾ ವಿಶ್ವವಿದ್ಯಾಲಯ ವಿಶ್ವದಲ್ಲೇ ಅತಿ ದೊಡ್ಡದು. 30 ಲಕ್ಷ ಚದರ ಮೀಟರುಗಳ ವಿಸ್ತೀರ್ಣದ ಈ ವಿಶ್ವ ವಿದ್ಯಾಲಯದಲ್ಲಿ ೨೬,೦೦೦ ವಿದ್ಯಾರ್ಥಿನಿಯರು ಕಲಿಯಬಹುದು. ವಿಶ್ವದ ಪ್ರತಿಭಾವಂತ ಪ್ರೊಫೆಸರ್ ಗಳನ್ನ ಆಕರ್ಷಿಸಲು ಸೌದಿ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡುತ್ತಿದೆ. ಈಗಿನ ರಾಜ ಅಬ್ದುಲ್ಲಾ ರ ಕನಸಿನ ಪ್ರಾಜೆಕ್ಟ್ ಈ ವಿಶ್ವವಿದ್ಯಾಲಯ.

ಹಲವು ಮುಸ್ಲಿಂ ದೇಶಗಳ ಪ್ರಧಾನಿಗಳಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮುಸ್ಲಿಂ ಮಹಿಳೆಯರಿಗೆ ತಮ್ಮ ದೇಶಗಳಲ್ಲಿ ಧಾರ್ಮಿಕ ಪಂಡಿತರಿಂದ ಯಾವುದೇ ತೊಡಕಾಗಲೀ, ಫತ್ವಾ ಗಳಾಗಲೀ ಎದುರಾಗಲಿಲ್ಲ. ಸುಮಾರು ಎಂಟು ನೂರು ವರ್ಷಗಳ ಹಿಂದೆಯೇ ಈಜಿಪ್ಟ್ ದೇಶದ ಆಡಳಿತಗಾರ್ತಿಯಾಗಿ  ರಾಣಿ ‘ಶಜರ್ ಅಲ್-ದುರ್’ ಯಶಸ್ವಿಯಾಗಿದ್ದಳು. ವಿಧವೆಯಾಗಿದ್ದ ಈಕೆ ಕ್ರೈಸ್ತರ ಏಳನೆ ಧರ್ಮಯುದ್ಧ (ಕ್ರುಸೇಡ್) ದ ಮೇಲೆ ವಿಜಯ ಸಾಧಿಸಿದ್ದಳು.

ಪ್ರವಾದಿ ಮುಹಮ್ಮದರ ಪತ್ನಿ ‘ಆಯಿಷಾ’ ರಿಂದ ಪ್ರವಾದಿ ಅನುಚರರು ಅತೀ ಹೆಚ್ಚಿನ ಪ್ರವಾದಿ ವಚನಗಳನ್ನು ಸಂಗ್ರಹಿಸಿದ್ದರು. ಧರ್ಮದ ಅಥವಾ ರಾಜಕಾರಣದ ಯಾವುದೇ ವಿಷಯದಲ್ಲೂ ಅನುಮಾನ ಗಳು ತಲೆದೋರಿದಾಗ ಪ್ರವಾದೀ ಅನುವರ್ತಿಗಳು ಆಯಿಷಾ ರ ಗುಡಿಸಿಲಿನ ಕಡೆ ಧಾವಿಸುತ್ತಿದ್ದರು. ತನ್ನ ಮನೆಯ ಅಂಗಳದಲ್ಲಿ ಧರ್ಮ ಬೋಧನೆ ನಡೆಸುತ್ತಿದ್ದ ಆಯಿಷಾ ರಿಗೆ ವಿಶ್ವದ ಮೊಟ್ಟ ಮೊದಲ ‘ಮದ್ರಸಾ’ ದ ಸ್ಥಾಪಕರು ಎನ್ನುವ ಖ್ಯಾತಿ.

ಪ್ರವಾದಿಗಳ ನಿಧನಾ ನಂತರ ‘ಖಲೀಫಾ ಉಸ್ಮಾನ್’ ಪವಿತ್ರ ಕುರ್’ಆನ್ ಗ್ರಂಥವನ್ನು ಬರಹದ ರೂಪದಲ್ಲಿ ತರಲು ತೀರ್ಮಾನಿಸಿ ಪ್ರಥಮ ಆವೃತ್ತಿಯನ್ನು ದಿವಂಗತ ಖಲೀಫಾ ಉಮರ್ ರವರ ಪುತ್ರಿಗೆ ಗ್ರಂಥವನ್ನು ಸುರಕ್ಷಿತವಾಗಿ ಇಡುವ ಜವಾಬ್ದಾರೀ ನೀಡಿದ್ದರು. ಮಹಿಳೆಯರಿಗೆ ಈ ಜವಾಬ್ದಾರೀ ನೀಡಬಾರದು ಎನ್ನುವ ಪರಿಕಲ್ಪನೆ ಅವರಲ್ಲಿರಲಿಲ್ಲ. ಮಹಿಳೆಯ ‘ವಧುದಕ್ಷಿಣೆ’ ವಿಷಯದಲ್ಲಿ ಖಲೀಫಾ ಉಮರ್ ತಪ್ಪಾದ ನಿರ್ಣಯ ನೀಡುವುದನ್ನು ಗಮನಿಸಿದ ಮಹಿಳೆಯೊಬ್ಬಾಕೆ ಕುರ್’ಆನ್ ಗ್ರಂಥದ ಆಧಾರದಲ್ಲಿ ಆ ತಪ್ಪನ್ನು ತಿದ್ದಿದಾಗ ಒಪ್ಪಿಕೊಂಡ ಖಲೀಫಾ ಉಮರ್ ಹೇಳಿದ್ದು, ಈ ಮಹಿಳೆ ಖಲೀಫಾನ ಮೇಲೆ ಗೆಲುವು ಸಾಧಿಸಿದಳು ಎಂದು.

ಈ ಮೇಲಿನ ಉದಾಹರಣೆಗಳೊಂದಿಗೆ ಇಸ್ಲಾಂ ಮಹಿಳೆಗೆ ಕೊಡಮಾಡಿದ ಹಕ್ಕುಗಳನ್ನು ನೋಡಿದಾಗ ತಾಲಿಬಾನ್ ಯಾವುದೇ ರೀತಿಯಲ್ಲಿ ಇಸ್ಲಾಂ ನ ಆದರ್ಶಗಳಿಗೆ ಪ್ರತಿ ಸ್ಪಂದಿಸದೆ ಕೇವಲ ಸ್ತ್ರೀ ಧ್ವೇಷಿ ಮತ್ತು ನರಸಂಹಾರಕ ಸ್ಯಾಡಿಸ್ಟ್ ಗಳ ಒಂದು ರಾಕ್ಷಸೀ ಸಂಘಟನೆ ಎಂದು ಹೇಳಬಹುದು. ಆಫ್ಘಾನಿಸ್ಥಾನ ದ ರಷ್ಯನ್ ಸೈನ್ಯವನ್ನು, ಕಮ್ಯುನಿಸ್ಟ್ ಪ್ರಭಾವವನ್ನು ಮಟ್ಟ ಹಾಕಲು, ತಾಲಿಬಾನ್ ನ ಸಹಾಯ ಪಡೆದ ಅಮೇರಿಕಾ ತಾಲಿಬಾನ್ ನ ಶಕ್ತಿಗೆ ಬೆನ್ನೆಲುಬಾಗಿ ನಿಂತಿದ್ದೆ ಒಂದು ಅನಾಹುತಕ್ಕೆ ಎಡೆ ಮಾಡಿಕೊಟ್ಟಿತು. ಕಮ್ಯುನಿಷ್ಟ್ ನ ನಿರ್ನಾಮದೊಂದಿಗೆ ‘ಇಸ್ಲಾಮಿಸ್ಟ್’ ಎನ್ನುವ ಭಸ್ಮಾಸುರ ನ ಸೃಷ್ಟಿಗೂ ಅಮೇರಿಕಾ ಕಾರಣಕರ್ತವಾಯಿತು. ತಾಲಿಬಾನ್ ಶಕ್ತಿಗಳ ನಿಗ್ರಹ ಮತ್ತು ಸಂಪೂರ್ಣ ನಿರ್ಮೂಲನೆ ನಾಗರೀಕ ಸಮಾಜದ ಆದ್ಯ ಕರ್ತವ್ಯ ವಾಗಬೇಕು. ಮಲಾಲಾ ಳ ಮೇಲೆ ನಡೆದ ವಿವೇಚನಾ ರಹಿತ ಕ್ರೂರ ಹಲ್ಲೆ ವಿಶ್ವದಾದ್ಯಂತ ನಾಗರೀಕ ಸಮಾಜವನ್ನು ಭೀತ ಗೊಳಿಸಿದರೂ ಸ್ವಾತ್ ಕಣಿವೆಯ ಹೆಣ್ಣು ಮಕ್ಕಳು ಮಾತ್ರ ತಾವು ತಾಲಿಬಾನ್ ಸೈತಾನಕ್ಕೆ ಬೆದರುವ ಹೆಣ್ಣುಮಕ್ಕಳಲ್ಲ ಎಂದು ಈ ಹೇಳಿಕೆಯೊಂದಿಗೆ ಸಾರಿದರು – “ಸ್ವಾತ್” ಕಣಿವೆಯ ಪ್ರತಿಯೊಬ್ಬ ಹೆಣ್ಣು ಮಗಳೂ ಓರ್ವ ಮಲಾಲಾ, ನಾವು ವಿದ್ಯೆ ಪಡೆದೇ ಸಿದ್ಧ, ಅವರು ನಮ್ಮನ್ನು ಸೋಲಿಸಲಾರರು” – ದಿಟ್ಟ ಮಾತುಗಳು ಮಲಾಲಾ ಳ ಗೆಳತಿಯರಿಂದ.

ಮಲಾಲಾ ಹೆಸರಿನ ಆರ್ಥ ಶೌರ್ಯ, ಧೈರ್ಯ, ‘ಪುಷ್ತು’ ಭಾಷೆಯಲ್ಲಿ. ರಾಕ್ಷಸರಿಗೆ ಹೆದರದೆ ಹೆಸರಿಗೆ ತಕ್ಕಂತೆ ನಡೆದುಕೊಂಡ ಮಾಲಾಲಾಳಿಗೆ ಅವಳ ದಿಟ್ಟ ಹೋರಾಟಕ್ಕೆ ಶುಭ ಹಾರೈಸೋಣ.

 

 

ವ್ರತಾಚರಣೆಯ ಮಾಸ

ರಮದಾನ್, (ರಂಜಾನ್ ಎಂದೂ ಕರೆಯಲ್ಪಡುತ್ತದೆ, ramzan) ಇಸ್ಲಾಮೀ ಪಂಚಾಂಗದ ಒಂಭತ್ತನೆ ತಿಂಗಳು ಮತ್ತು ಇಸ್ಲಾಮಿನ ಐದು ಸ್ಥಂಭಗಳಲ್ಲಿ ಮೂರನೆಯ ಸ್ಥಂಭವಾದ ರಮದಾನ್ ತಿಂಗಳಿನಲ್ಲಿ ಜಗತ್ತಿನ ಮುಸ್ಲಿಮರು ದಿನವಿಡೀ ಉಪವಾಸವಿದ್ದು ವಿಶೇಷ ಆರಾಧನೆಯಲ್ಲೂ, ಪವಿತ್ರ ಕುರಾನ್ ಪಾರಾಯಣದಲ್ಲೂ ತಮ್ಮ ಸಮಯ ಕಳೆಯುತ್ತಾರೆ. ಈ ಕಾರಣಕ್ಕಾಗಿ ಈ ಮಾಸವನ್ನು ದಾನದ, ಧ್ಯಾನದ ಮತ್ತು ಚಿಂತನೆಯ ಮಾಸವೆಂದು ಕರೆಯುತ್ತಾರೆ (month of charity, contemplation, and reflection). ಚಂದ್ರ ದರ್ಶನದೊಂದಿಗೆ ಆರಂಭವಾಗುವ ೩೦ ದಿನಗಳ ಈ ಉಪವಾಸ ವ್ರತ ಮುಸ್ಲಿಮ್ ಜಗತ್ತಿಗೆ ಹೊಸ ಚೈತನ್ಯವನ್ನೂ, ಧಾರ್ಮಿಕತೆಯನ್ನೂ ತುಂಬುತ್ತದೆ.

ನಮ್ಮನ್ನು ಸೃಷ್ಟಿಸಿದ ದೇವರಿಗೆ ಆರಾಧನೆ ಸಲ್ಲಿಸುವುದಕ್ಕೆ, ಪ್ರಾಮುಖ್ಯತೆ ಹೆಚ್ಚು. ಯಾವುದೇ ಪರಿಸ್ಥಿತಿಯಲ್ಲೂ ಐದು ಹೊತ್ತಿನ ನಮಾಜನ್ನು ನಿರ್ವಹಿಸಲೇಬೇಕು. ನಮಾಜ್ ಜೊತೆಗೆ ಕುರಾನ್ ಸೂಕ್ತಗಳನ್ನು ಪಠಿಸುವುದು, ಹಜ್ ಯಾತ್ರೆ, ಇವೂ ಸಹ ಆರಾಧನೆಯಲ್ಲೇ ಒಳಗೊಳ್ಳುತ್ತದೆ. ಆದರೆ ನಮಾಜ್, ಕುರಾನ್ ಪಠಣ, ಹಜ್ ಇತ್ಯಾದಿಗಳು  ತೋರಿಕೆಯ ಆರಾಧನೆಯಾಗಿಯೂ ಮಾರ್ಪಡಬಹುದು. ನಾನು ಧರ್ಮಿಷ್ಠ ಎಂದು ತೋರಿಸಲು ಎಲ್ಲರಿಗೂ ಕಾಣುವಂತೆ ಮಸ್ಜಿದ್ ಗೆ ಹೋಗುವುದು, ಹಜ್ ಯಾತ್ರೆ ಮಾಡುವುದು ಹೀಗೆ. ಆದರೆ ವ್ರತಾಚಾರಣೆ ಹಾಗಲ್ಲ. ಇದೊಂದು ರಹಸ್ಯ ಆರಾಧನೆ. ಉಪವಾಸವಿರುವವನ ಮತ್ತು ಅವನ ಪ್ರಭುವಿಗೆ ಮಾತ್ರ ತಿಳಿಯುವ ಆರಾಧನೆ. ಮೂರನೆಯ ವ್ಯಕ್ತಿಗೆ ಇದರ ಅರಿವಿರುವುದಿಲ್ಲ; ಹಾಗಾಗಿ ವ್ರತಾಚರಣೆಗೆ ಹೆಚ್ಚು ಮಹತ್ವ.    

ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗೆ ಉಪವಾಸದ ಅವಧಿ. ಅರುಣೋದಯದ “ಪ್ರಾರ್ಥನೆಯ ಕರೆ” ( “ಅದಾನ್” ) ಕಿವಿಗೆ ಬಿದ್ದ ಕೂಡಲೇ ಆಹಾರ, ಪಾನೀಯಗಳು ನಿಷಿದ್ಧವಾಗುತ್ತವೆ. ಅದೇ ರೀತಿ ಸೂರ್ಯಾಸ್ತದ ಪ್ರಾರ್ಥನೆಯ ಕರೆ ಕೇಳಿದ ಕೂಡಲೇ ಸ್ವಲ್ಪ ನೀರು ಮತ್ತು ಖರ್ಜೂರದ ಸಹಾಯದಿಂದ ಉಪವಾಸವನ್ನು ಕೊನೆಗೊಳಿಸಲಾಗುತ್ತದೆ. ಇಡೀ ದಿನದ ಉಪವಾಸದಿಂದ ಶರೀರದ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಆಗಬಾರದು ಎಂದು ಮಧ್ಯ ರಾತ್ರಿಯ ನಂತರ ಅಥವಾ ಅರುಣೋದಯದ ಸ್ವಲ್ಪ ಮೊದಲು ಸ್ವಲ್ಪವಾದರೂ ಆಹಾರ (ಇದಕ್ಕೆ “ಸುಹೂರ್” ಎಂದು ಕರೆಯುತ್ತಾರೆ) ತೆಗೆದು ಕೊಳ್ಳಲೇಬೇಕು. ಅದೇ ರೀತಿ ದಿನವಿಡೀ ಒಂದು ತೊಟ್ಟೂ ನೀರಿಲ್ಲದೆ, ತಮ್ಮ ದಿನಚರಿಗೆ ಯಾವುದೇ ಧಕ್ಕೆ ಬಾರದಂತೆ ತಮ್ಮ ಕೆಲಸ, ಧಂಧೆ ಮಾಡುತ್ತಾ ಉಪವಾಸವಿದ್ದು ಸೂರ್ಯಾಸ್ತಕ್ಕೆ ಒಂದು ಗುಟುಕು ನೀರು ಮತ್ತು ಒಂದು ತುಂಡು ಖರ್ಜೂರದ ಸಹಾಯದಿಂದ ಉಪವಾಸ ಕೊನೆಗೊಳಿಸುವುದಕ್ಕೆ  “ಇಫ್ತಾರ್” ಎಂದು ಕರೆಯುತ್ತಾರೆ. ಇಫ್ತಾರ್ ಪದವನ್ನು ತಾವು ಕೇಳಿರಲೇಬೇಕು, ನಮ್ಮ ರಾಜಕಾರಣಿಗಳು ಮುಸ್ಲಿಂ ಗೆಳೆಯರಿಗೆ ಏರ್ಪಡಿಸುವ ಔತಣ. ಪ್ರಾಯಕ್ಕೆ ಬಂದ ಪ್ರತೀ ಮುಸ್ಲಿಮ್ ಉಪವಾಸ ವ್ರತ ಆಚರಿಸಲೇಬೇಕು ಎಂದು ಕಡ್ಡಾಯವಾದ ನಿಯಮ. ಖಾಯಿಲೆಯಿಂದ ಬಳಲುವವರಿಗೆ ಮತ್ತು ಯಾತ್ರಿಗಳಿಗೆ ಇದರಿಂದ ವಿನಾಯಿತಿ ಇದ್ದು ಯಾತ್ರೆ ಮುಗಿದ ನಂತರ, ಮತ್ತು ಖಾಯಿಲೆಯಿಂದ ಗುಣಮಮುಖರಾದ ನಂತರ ತಪ್ಪಿಹೋದ ಉಪವಾಸ ದಿನಗಳನ್ನು ಉಪವಾಸ ಇರುವ ಮೂಲಕ ತೀರಿಸಬೇಕು,ಅದೂ ಸಾಧ್ಯವಾಗದಿದ್ದರೆ ತಪ್ಪಿ ಹೋದ ದಿನಗಳಿಗೆ ಪ್ರಾಯಶ್ಚಿತ್ತವಾಗಿ ಬಡ ಬಗ್ಗರಿಗೆ ಅನ್ನದಾನ ಮಾಡಬೇಕು.

ರಮದಾನ್ ಮಾಸದ ಮಹತ್ವದ ಬಗ್ಗೆ ಹೇಳುತ್ತಾ ಪ್ರವಾದಿಗಳು ಹೇಳಿದ್ದು, ರಮದಾನ್ ಮಾಸ ೭೦,೦೦೦ ತಿಂಗಳು ಗಳಿಗೆ ಸಮಾನ ಎಂದು. ಅದೂ ಅಲ್ಲದೆ ಇದೇ ತಿಂಗಳಿನಲ್ಲಿ ಪವಿತ್ರ ಕುರಾನ್ ನ ಸೂಕ್ತಗಳು ಅವತೀರ್ಣವಾಗಿದ್ದು.  ಈ ಕಾರಣಕ್ಕಾಗಿ ಜಗದಾದ್ಯಂತ ಮುಸ್ಲಿಮರು ಈ ತಿಂಗಳ ತಮ್ಮ ಬಿಡುವಿನ ವೇಳೆಯಲ್ಲಿ ಮತ್ತು ಹೆಚ್ಚು ಸಮಯ ಕುರಾನ್ ಪಾರಾಯಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹಾಗೆಯೆ ಈ ತಿಂಗಳಿನಲ್ಲಿ ರಾತ್ರಿಯಲ್ಲಿ “ತರಾವೀಹ್” ಎಂದು ಕರೆಯಲ್ಪಡುವ ವಿಶೇಷ ಪ್ರಾರ್ಥನೆಗಳು ಸಹ ನಡೆಯುತ್ತವೆ. ಪ್ರತೀ ಆರಾಧನೆ, ದಾನ, ಒಳ್ಳೆಯ ಮಾತು, ಕೃತಿ ಇವುಗಳಿಗೆ ಪ್ರತಿಫಲ ಸಹ ೭೦,೦೦೦ ಪ್ರತಿಫಲದ ರೀತಿಯಲ್ಲಿ ದೇವರು ಕೊಡುವನೆಂದೂ ಮುಸ್ಲಿಮ್ ವಿಧ್ವಾಂಸರು ಹೇಳುತ್ತಾರೆ.      

ರಮದಾನ್ ತಿಂಗಳಿನಲ್ಲಿ ನಾವು ಮಾಡುವ ಪ್ರತೀ ಕೆಲಸವೂ ಇಸ್ಲಾಮೀ ಆದರ್ಶಗಳಿಗೆ ಪೂರಕವಾಗಿರಬೇಕೆಂದು ವಿಧ್ವಾಂಸರುಗಳು ಎಚ್ಚರಿಸುತ್ತಾರೆ. ಈ ಮಾಸದಲ್ಲಿ ಉದ್ರೇಕ ಪಡುವುದಾಗಲೀ,ಕೆರಳುವುದಾಗಲೀ ಮಾಡಬಾರದು. ಹಾಗೇನಾದರೂ ಯಾರಾದರೂ ಉದ್ರೇಕಿಸಿದರೆ “ನಾನು ವ್ರತಾಚರಣೆ ಮಾಡುತ್ತಿದ್ದೇನೆ” ಎಂದು ಹೇಳಿ ಮೌನವಾಗಿರಬೇಕು ಎಂದು ಸಲಹೆ ನೀಡುತ್ತಾರೆ. ಜ್ಞಾನಾರ್ಜನೆ, ಮತ್ತು ಸಂಯಮ ಪಾಲನೆ ರಮದಾನ್ ತಿಂಗಳ ವೈಶಿಷ್ಟ್ಯ ಎನ್ನಬಹುದು. ವ್ರತಾಚರಣೆಯ ಮೂಲಕ ರಮದಾನ್ ತಿಂಗಳು ನಮಗೆ “ಸ್ವ ನಿಗ್ರಹ” ದ ಗುಣವನ್ನೂ, ಸಂಯಮ ಶೀಲತೆಯನ್ನೂ ಕಲಿಸುತ್ತದೆ. ಈ ತೆರನಾದ ನಡವಳಿಕೆ ಮುಸ್ಲಿಮರು ಬರೀ ರಮದಾನ್ ಮಾಸಕ್ಕೆ ಸೀಮಿತಗೊಳಿಸದೆ ತಮ್ಮ ಬದುಕಿನ ಪ್ರತೀ ಘಳಿಗೆಯಲ್ಲೂ ಪಾಲಿಸಿದರೆ ದೇವರು ಯಶಸ್ಸನ್ನು ದಯಪಾಲಿಸುತ್ತಾನೆ ಸಮಾಜಕ್ಕೆ ಆದರ್ಶಪ್ರಾಯನಾಗಿ ಬದುಕುತ್ತಾನೆ.  

ಪ್ರತೀ ಮುಸ್ಲಿಂ ಮನೆಯಲ್ಲೂ ರಮದಾನ್ ಒಂದು ವಿಶೇಷ ತಿಂಗಳಾಗಿರುತ್ತದೆ. ಅದರಲ್ಲೂ ಮಕ್ಕಳಿಗೆ ಒಂದು ರೀತಿಯ ಸಂತಸ. ಐದು ವರ್ಷದ ಮೇಲ್ಪಟ್ಟ ಮಕ್ಕಳೂ ಸಹ ಪೂರ್ತಿ ತಿಂಗಳಲ್ಲದಿದ್ದರೂ ಸಾಧ್ಯವಾದಷ್ಟು ದಿಂದ ಉಪವಾಸ ಆಚರಿಸಲು ಯತ್ನಿಸುತ್ತಾರೆ. ನನ್ನ ಆರು ವರ್ಷದ ಮಗ ಕಳೆದ ಎರಡು ವರ್ಷಗಳಿಂದ ೮ – ೧೦ ದಿನ ಉಪವಾಸವಿದ್ದನು. ಸಂಜೆಯಾಗುತ್ತಿದ್ದಂತೆ ಮಕ್ಕಳು ಕಾತುರದಿಂದ ಮಸ್ಜಿದ್ ಗಳ ಗೋಪುರಗಳು ಹೊರಡಿಸುವ ಅದಾನ್ ಗಾಗಿ ಕಾದು ನಿಂತು “ಅಲಾಹು ಅಕ್ಬರ್” (ದೇವರು ಸರ್ವಶ್ರೇಷ್ಠ ) ಎನ್ನುವುದನ್ನು ಕೇಳುತ್ತಲೇ ಓಡಿ ಬಂದು ಅಮ್ಮಾ, ಅಪ್ಪಾ, ಅದಾನ್ ಆಗುತ್ತಿದೆ, ಬೇಗ ನೀರು ಕುಡಿಯಿರಿ ಎಂದು ಉತ್ತೇಜಿಸುತ್ತಾರೆ.

೩೦ ದಿನಗಳ ಉಪವಾಸ ಮುಗಿದ ನಂತರ ಚಂದ್ರ ದರ್ಶನ ವಾಗುತ್ತಲೇ “ಈದ್” ಸಂಭ್ರಮ ಎಲ್ಲೆಡೆ. ಚಂದ್ರ ದರ್ಶನ ಆಗುತ್ತಲೇ ಮಾರನೆ ದಿನದ ಈದ್ ನಂದು ಯಾರೂ ತಿನ್ನಲು ಇಲ್ಲದೆ ಬಳಲಬಾರದು ಎಂದು ಬಡಬಗ್ಗರಿಗೆ ಅಕ್ಕಿ ದಾನ ಮಾಡುತ್ತಾರೆ. ಈ ದಾನದಿಂದಾಗಿಯೇ ಈದ್ ಹಬ್ಬಕ್ಕೆ “ಈದ್ ಅಲ್ ಫಿತ್ರ್” ಎಂದು ಹೆಸರು.         

ಸೌದಿ ಅರೇಬಿಯಾದಲ್ಲಿ ರಮದಾನ್ ತುಂಬಾ ಸೊಗಸು. ಇಡೀ ತಿಂಗಳು ಮತ್ತು ಅದರ ನಂತರ ಬರುವ ಸುಮಾರು ಹತ್ತು ದಿನಗಳ ಈದ್ ಸಂಭ್ರಮ. ಇಡೀ ನಗರವೇ ಅಲಂಕಾರದಲ್ಲಿ ಮುಳುಗಿರುತ್ತದೆ. ಎಲ್ಲೆಲ್ಲೂ ವಿಶೇಷ offer ಗಳು, ಬಹುಮಾನಗಳು, ರಸ್ತೆ ಬದಿಯಲ್ಲಿ ಉಪವಾಸವಿಟ್ಟುಕೊಂಡು ಪ್ರಯಾಣ ಮಾಡುವವರಿಗೆ ಪುಕ್ಕಟೆ ತಿಂಡಿ ತೀರ್ಥಗಳ ವಿತರಣೆ, ನಿರ್ಗತಿಕರಿಗೆ, ಕೆಳಸ್ತರದ ಉದ್ಯೋಗ ಮಾಡುವವರಿಗೆ ದಾನ ಮಾಡುವಲ್ಲಿ ಪೈಪೋಟಿ, ಹೀಗೆ ನಾನಾ ರೀತಿಯ ಚಟುವಟಿಕೆಗಳನ್ನು ಕಾಣಬಹುದು. ಕೆಲಸದ ಸಮಯವೂ ನಾಲ್ಕು ಅಥವಾ ಐದು ಘಂಟೆಗಳು. ಹಾಗಾಗಿ ಉಪವಾಸವಿರುವುದು ಬಹಳ ಸುಲಭ ಅರೇಬಿಯಾದಲ್ಲಿ.