ತಾಲಿಬಾನಿಗಳ ಅಟ್ಟಹಾಸಕ್ಕೆ ಕೊನೆ ಎಂದು?

ಮಲಾಲಾ. ನಾನು, ನೀವು ದಿನವೂ ನೋಡುವ, ಪುಸ್ತಕಗಳ ಹೊರೆಯೊಂದಿಗೆ ಕಣ್ಣುಗಳಲ್ಲಿ  ಕನಸನ್ನು ಹೊತ್ತು ಶಾಲೆಯ ಕಡೆ ದೃಢ ಹೆಜ್ಜೆ ಇಡುವ ಬಾಲಕಿಯರ ಹಾಗೆ ೧೫ ವರ್ಷದ ಓರ್ವ ಹೆಣ್ಣು ಮಗಳು.

ಪಾಕಿಸ್ತಾನದ ರಮಣೀಯ ನಿಸರ್ಗ ಪ್ರಾಂತ್ಯ ‘ಸ್ವಾತ್’ ಕಣಿವೆ ಪ್ರದೇಶವನ್ನು ವಶಪಡಿಸಿ ಕೊಂಡಿದ್ದ ತಾಲಿಬಾನ್ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ ನಾಲ್ಕು ನೂರು ಮೈಲು ಗಳ ವರೆಗೆ ತಲುಪಿದ್ದರು. ಭಾರೀ ಹೋರಾಟದ ನಂತರ ಪಾಕಿ ಸೈನ್ಯ ತಾಲಿಬಾನಿಗಳನ್ನು ಹಿಮ್ಮೆಟ್ಟಿ ಕಣಿವೆಯನ್ನು ವಶ ಪಡಿಸಿಕೊಂಡಿದ್ದರು. ಆದರೂ ತಾಲಿಬಾನಿಗಳ ಪ್ರಭಾವ ಕಡಿಮೆಯಾಗಲಿಲ್ಲ. ಕಾದಾಟ ತಾಲಿಬಾನಿಗಳ ಕಸುಬು, ಅಸ್ತ್ರ ಶಸ್ತ್ರಗಳು ಇವರ ಆಹಾರ, ಮಾನವ ಸಂಸ್ಕಾರಕ್ಕೆ ವಿರುದ್ಧವಾದ ನಡವಳಿಕೆ ಇವರ ಉಸಿರು. ಇವೆಲ್ಲವೂ ಮಿಳಿತವಾದಾಗ ವಿಶ್ವಕ್ಕೆ ಲಭ್ಯ ಅರಾಜಕತೆ, ಕ್ರೌರ್ಯ, ಅಟ್ಟಹಾಸ. ಇವರನ್ನು ಬಲಿ ಹಾಕಲು ಪಾಕಿಸ್ತಾನದಿಂದ ಹಿಡಿದು ಅಂತಾರಾಷ್ಟ್ರೀಯ ಸಮುದಾಯದರೆಗೆ ಯಾರಿಗೂ ಇಚ್ಛೆಯಿಲ್ಲ. ಇದೂ ಒಂದು ರೀತಿಯ ರಾಜಕಾರಣ. ತಾನೇ ಪೋಷಿಸಿದ ಶಿಶು ರಾಕ್ಷಸನಾಗಿ ವರ್ತಿಸಲು ತೊಡಗಿದಾಗ ಅಮೇರಿಕಾ ಎಚ್ಚೆತ್ತು ಅವರನ್ನು ಹದ್ದು ಬಸ್ತಿಗೆ ತರಲು ಯತ್ನಿಸಿತು. ಇದರ ನಡುವೆ ತಾಲಿಬಾನಿಗಳೊಂದಿಗೆ ಚರ್ಚೆ ಕೂಡಾ. ಏಕೆಂದರೆ ಇವರನ್ನು ಸಂಪೂರ್ಣ ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕೆಗೆ ಇತಿಹಾಸದ ಪಾಠಗಳು ನೆನಪು ಮಾಡುತ್ತವೆ. ಈ ದ್ವಂದ್ವಗಳ ನಡುವೆ ತಾಲಿಬಾನ್ ತನಗೆ ತೋಚಿದ ರೀತಿಯಲ್ಲಿ ವರ್ತಿಸುತ್ತದೆ. ಇವರಿಗೆ ಹೆಣ್ಣುಮಗಳು ಎಂದರೆ ಮನೆಯ ನಾಲ್ಕು ಗೋಡೆಗಳ ಮಧ್ಯೆ, ಶಿಕ್ಷಣ ಪಡೆಯದೇ ಬದುಕಬೇಕಾದ ಹೆರುವ ಯಂತ್ರಗಳು. ಯಾರಾದರೂ ಧೈರ್ಯ  ಮಾಡಿ ಶಾಲೆಗೆ ಹೋಗುತ್ತೇವೆ ಎಂದರೆ ಮೊದಲು ಬೆದರಿಕೆ, ನಂತರ ಬಂದೂಕು. ಮಲಾಲಾ ಎನ್ನುವ ಪೋರಿಗೆ ಸಿಕ್ಕಿದ್ದು ಇವೆರಡು. ಬೆದರಿಕೆಗೆ ಸೊಪ್ಪು ಹಾಕದೆ ಶಾಲೆಯ ಕಡೆ ನಡೆಯುತ್ತಿದ್ದ ಈಕೆ ತಾಲಿಬಾನಿಗಳಿಗೆ ಕಣ್ಣುರಿ ತರುತ್ತಿದ್ದಳು. ಇಷ್ಟೊಂದು ಚಿಕ್ಕ ಹುಡುಗಿ ತಮ್ಮಂಥ ರಾಕ್ಷಸರನ್ನು ಎದುರಿಸುತ್ತಿದ್ದಾಳಲ್ಲ ಎಂದು. ಬೆದರಿಕೆ ಫಲಿಸದಾದಾಗ ಬಂದೂಕು ಚಲಾಯಿಸಿದರು. ತಲೆಯನ್ನ  ಹೊಕ್ಕು ಹೊರಬಂದ ಗುಂಡು ಸಹ ಮಲಾಲಾ ಳನ್ನು ಕೊಲ್ಲಲು ನಿರಾಕರಿಸಿತು. ಅದ್ಭುತವಾಗಿ ಸಾವಿನಿಂದ ಪಾರಾದ ಮಲಾಲಾ ಹೆಚ್ಚುವರಿ ಚಿಕಿತ್ಸೆಗಾಗಿ ಲಂಡನ್ ಗೆ ಹೋಗಲು ಅರಬ್ ಸಂಯುಕ್ತ ಸಂಸ್ಥಾನಗಳ ಆಳುವ ಕುಟುಂಬದ ಕಡೆಯಿಂದ ‘ಏರ್ ಅಂಬುಲೆನ್ಸ್’ ನ ನೆರವು ಸಿಕ್ಕಿತು. ಈಕೆಯ ಚಿಕತ್ಸೆ ಫಲಕಾರಿಯಾಗಲು ಇಡೀ ವಿಶ್ವ ದೇವರನ್ನು ಬೇಡುತ್ತಿದೆ.

ಮಲಾಲಳ ಮೇಲಿನ ಹಲ್ಲೆಯನ್ನು ಖಂಡಿಸುತ್ತಾ ಪಾಕಿಸ್ತಾನದ ರಾಜಕಾರಣಿ ಹೇಳಿದ್ದು, ತಾಲಿಬಾನ್ ಕರಾಳ ಶಕ್ತಿಗಳ ಗುಂಪಾಗಿದ್ದು, ಧರ್ಮ ಸಂಸ್ಕಾರ ವಿಹೀನರು ಎಂದು ಕಟುವಾಗಿ ಟೀಕಿಸಿದರು. ಮಲಾಲಾಳ ಮೇಲಿನ ಹಲ್ಲೆಕೋರರನ್ನು ಹಿಡಿದು ಕೊಟ್ಟವರಿಗೆ ಒಂದು ಕೋಟಿ ರೂಪಾಯಿಯ ಬಹುಮನವನ್ನು ಪಾಕ್ ಘೋಷಿಸಿದೆ.

ಮಹಿಳೆಯರಿಗೆ ಶಿಕ್ಷಣ ಕೂಡದು ಎನ್ನುವ ಐಡಿಯಾ ತಾಲಿಬಾನ್ ಗೆ ಕೊಟ್ಟವರಾರು ಎನ್ನುವುದು ತಿಳಿಯುತ್ತಿಲ್ಲ. ವೇಷದ ಸಹಾಯದಿಂದ ಮುಸ್ಲಿಮರ ಥರ ಕಾಣುತ್ತಾ ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸುವ ದುಷ್ಟ ಶಕ್ತಿಗಳ ಸಂಗಮ ‘ತಾಲಿಬಾನ್’ ವರ್ತನೆಗೂ ಇಸ್ಲಾಂ ನ ಜನ್ಮ ಸ್ಥಳ ಸೌದಿ ಅರೇಬಿಯಾದ ನೀತಿಗೂ ಇರುವ ವ್ಯತ್ಯಾಸ ನೋಡಿ. ಇಸ್ಲಾಂ ನ  ತವರೂರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಗರದ  ರಾಜಕುಮಾರಿ ‘ನೂರಾ ಬಿಂತ್ ಅಬ್ದುಲ್ ರಹಮಾನ್’ ಮಹಿಳಾ ವಿಶ್ವವಿದ್ಯಾಲಯ ವಿಶ್ವದಲ್ಲೇ ಅತಿ ದೊಡ್ಡದು. 30 ಲಕ್ಷ ಚದರ ಮೀಟರುಗಳ ವಿಸ್ತೀರ್ಣದ ಈ ವಿಶ್ವ ವಿದ್ಯಾಲಯದಲ್ಲಿ ೨೬,೦೦೦ ವಿದ್ಯಾರ್ಥಿನಿಯರು ಕಲಿಯಬಹುದು. ವಿಶ್ವದ ಪ್ರತಿಭಾವಂತ ಪ್ರೊಫೆಸರ್ ಗಳನ್ನ ಆಕರ್ಷಿಸಲು ಸೌದಿ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡುತ್ತಿದೆ. ಈಗಿನ ರಾಜ ಅಬ್ದುಲ್ಲಾ ರ ಕನಸಿನ ಪ್ರಾಜೆಕ್ಟ್ ಈ ವಿಶ್ವವಿದ್ಯಾಲಯ.

ಹಲವು ಮುಸ್ಲಿಂ ದೇಶಗಳ ಪ್ರಧಾನಿಗಳಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮುಸ್ಲಿಂ ಮಹಿಳೆಯರಿಗೆ ತಮ್ಮ ದೇಶಗಳಲ್ಲಿ ಧಾರ್ಮಿಕ ಪಂಡಿತರಿಂದ ಯಾವುದೇ ತೊಡಕಾಗಲೀ, ಫತ್ವಾ ಗಳಾಗಲೀ ಎದುರಾಗಲಿಲ್ಲ. ಸುಮಾರು ಎಂಟು ನೂರು ವರ್ಷಗಳ ಹಿಂದೆಯೇ ಈಜಿಪ್ಟ್ ದೇಶದ ಆಡಳಿತಗಾರ್ತಿಯಾಗಿ  ರಾಣಿ ‘ಶಜರ್ ಅಲ್-ದುರ್’ ಯಶಸ್ವಿಯಾಗಿದ್ದಳು. ವಿಧವೆಯಾಗಿದ್ದ ಈಕೆ ಕ್ರೈಸ್ತರ ಏಳನೆ ಧರ್ಮಯುದ್ಧ (ಕ್ರುಸೇಡ್) ದ ಮೇಲೆ ವಿಜಯ ಸಾಧಿಸಿದ್ದಳು.

ಪ್ರವಾದಿ ಮುಹಮ್ಮದರ ಪತ್ನಿ ‘ಆಯಿಷಾ’ ರಿಂದ ಪ್ರವಾದಿ ಅನುಚರರು ಅತೀ ಹೆಚ್ಚಿನ ಪ್ರವಾದಿ ವಚನಗಳನ್ನು ಸಂಗ್ರಹಿಸಿದ್ದರು. ಧರ್ಮದ ಅಥವಾ ರಾಜಕಾರಣದ ಯಾವುದೇ ವಿಷಯದಲ್ಲೂ ಅನುಮಾನ ಗಳು ತಲೆದೋರಿದಾಗ ಪ್ರವಾದೀ ಅನುವರ್ತಿಗಳು ಆಯಿಷಾ ರ ಗುಡಿಸಿಲಿನ ಕಡೆ ಧಾವಿಸುತ್ತಿದ್ದರು. ತನ್ನ ಮನೆಯ ಅಂಗಳದಲ್ಲಿ ಧರ್ಮ ಬೋಧನೆ ನಡೆಸುತ್ತಿದ್ದ ಆಯಿಷಾ ರಿಗೆ ವಿಶ್ವದ ಮೊಟ್ಟ ಮೊದಲ ‘ಮದ್ರಸಾ’ ದ ಸ್ಥಾಪಕರು ಎನ್ನುವ ಖ್ಯಾತಿ.

ಪ್ರವಾದಿಗಳ ನಿಧನಾ ನಂತರ ‘ಖಲೀಫಾ ಉಸ್ಮಾನ್’ ಪವಿತ್ರ ಕುರ್’ಆನ್ ಗ್ರಂಥವನ್ನು ಬರಹದ ರೂಪದಲ್ಲಿ ತರಲು ತೀರ್ಮಾನಿಸಿ ಪ್ರಥಮ ಆವೃತ್ತಿಯನ್ನು ದಿವಂಗತ ಖಲೀಫಾ ಉಮರ್ ರವರ ಪುತ್ರಿಗೆ ಗ್ರಂಥವನ್ನು ಸುರಕ್ಷಿತವಾಗಿ ಇಡುವ ಜವಾಬ್ದಾರೀ ನೀಡಿದ್ದರು. ಮಹಿಳೆಯರಿಗೆ ಈ ಜವಾಬ್ದಾರೀ ನೀಡಬಾರದು ಎನ್ನುವ ಪರಿಕಲ್ಪನೆ ಅವರಲ್ಲಿರಲಿಲ್ಲ. ಮಹಿಳೆಯ ‘ವಧುದಕ್ಷಿಣೆ’ ವಿಷಯದಲ್ಲಿ ಖಲೀಫಾ ಉಮರ್ ತಪ್ಪಾದ ನಿರ್ಣಯ ನೀಡುವುದನ್ನು ಗಮನಿಸಿದ ಮಹಿಳೆಯೊಬ್ಬಾಕೆ ಕುರ್’ಆನ್ ಗ್ರಂಥದ ಆಧಾರದಲ್ಲಿ ಆ ತಪ್ಪನ್ನು ತಿದ್ದಿದಾಗ ಒಪ್ಪಿಕೊಂಡ ಖಲೀಫಾ ಉಮರ್ ಹೇಳಿದ್ದು, ಈ ಮಹಿಳೆ ಖಲೀಫಾನ ಮೇಲೆ ಗೆಲುವು ಸಾಧಿಸಿದಳು ಎಂದು.

ಈ ಮೇಲಿನ ಉದಾಹರಣೆಗಳೊಂದಿಗೆ ಇಸ್ಲಾಂ ಮಹಿಳೆಗೆ ಕೊಡಮಾಡಿದ ಹಕ್ಕುಗಳನ್ನು ನೋಡಿದಾಗ ತಾಲಿಬಾನ್ ಯಾವುದೇ ರೀತಿಯಲ್ಲಿ ಇಸ್ಲಾಂ ನ ಆದರ್ಶಗಳಿಗೆ ಪ್ರತಿ ಸ್ಪಂದಿಸದೆ ಕೇವಲ ಸ್ತ್ರೀ ಧ್ವೇಷಿ ಮತ್ತು ನರಸಂಹಾರಕ ಸ್ಯಾಡಿಸ್ಟ್ ಗಳ ಒಂದು ರಾಕ್ಷಸೀ ಸಂಘಟನೆ ಎಂದು ಹೇಳಬಹುದು. ಆಫ್ಘಾನಿಸ್ಥಾನ ದ ರಷ್ಯನ್ ಸೈನ್ಯವನ್ನು, ಕಮ್ಯುನಿಸ್ಟ್ ಪ್ರಭಾವವನ್ನು ಮಟ್ಟ ಹಾಕಲು, ತಾಲಿಬಾನ್ ನ ಸಹಾಯ ಪಡೆದ ಅಮೇರಿಕಾ ತಾಲಿಬಾನ್ ನ ಶಕ್ತಿಗೆ ಬೆನ್ನೆಲುಬಾಗಿ ನಿಂತಿದ್ದೆ ಒಂದು ಅನಾಹುತಕ್ಕೆ ಎಡೆ ಮಾಡಿಕೊಟ್ಟಿತು. ಕಮ್ಯುನಿಷ್ಟ್ ನ ನಿರ್ನಾಮದೊಂದಿಗೆ ‘ಇಸ್ಲಾಮಿಸ್ಟ್’ ಎನ್ನುವ ಭಸ್ಮಾಸುರ ನ ಸೃಷ್ಟಿಗೂ ಅಮೇರಿಕಾ ಕಾರಣಕರ್ತವಾಯಿತು. ತಾಲಿಬಾನ್ ಶಕ್ತಿಗಳ ನಿಗ್ರಹ ಮತ್ತು ಸಂಪೂರ್ಣ ನಿರ್ಮೂಲನೆ ನಾಗರೀಕ ಸಮಾಜದ ಆದ್ಯ ಕರ್ತವ್ಯ ವಾಗಬೇಕು. ಮಲಾಲಾ ಳ ಮೇಲೆ ನಡೆದ ವಿವೇಚನಾ ರಹಿತ ಕ್ರೂರ ಹಲ್ಲೆ ವಿಶ್ವದಾದ್ಯಂತ ನಾಗರೀಕ ಸಮಾಜವನ್ನು ಭೀತ ಗೊಳಿಸಿದರೂ ಸ್ವಾತ್ ಕಣಿವೆಯ ಹೆಣ್ಣು ಮಕ್ಕಳು ಮಾತ್ರ ತಾವು ತಾಲಿಬಾನ್ ಸೈತಾನಕ್ಕೆ ಬೆದರುವ ಹೆಣ್ಣುಮಕ್ಕಳಲ್ಲ ಎಂದು ಈ ಹೇಳಿಕೆಯೊಂದಿಗೆ ಸಾರಿದರು – “ಸ್ವಾತ್” ಕಣಿವೆಯ ಪ್ರತಿಯೊಬ್ಬ ಹೆಣ್ಣು ಮಗಳೂ ಓರ್ವ ಮಲಾಲಾ, ನಾವು ವಿದ್ಯೆ ಪಡೆದೇ ಸಿದ್ಧ, ಅವರು ನಮ್ಮನ್ನು ಸೋಲಿಸಲಾರರು” – ದಿಟ್ಟ ಮಾತುಗಳು ಮಲಾಲಾ ಳ ಗೆಳತಿಯರಿಂದ.

ಮಲಾಲಾ ಹೆಸರಿನ ಆರ್ಥ ಶೌರ್ಯ, ಧೈರ್ಯ, ‘ಪುಷ್ತು’ ಭಾಷೆಯಲ್ಲಿ. ರಾಕ್ಷಸರಿಗೆ ಹೆದರದೆ ಹೆಸರಿಗೆ ತಕ್ಕಂತೆ ನಡೆದುಕೊಂಡ ಮಾಲಾಲಾಳಿಗೆ ಅವಳ ದಿಟ್ಟ ಹೋರಾಟಕ್ಕೆ ಶುಭ ಹಾರೈಸೋಣ.

 

 

ಕಣ್ಣು ಹೋಗಿ, ಬಂತು ಕಾರಂಜಿ

ಈ ವಾರಾಂತ್ಯ ದ ಬಿಡುವಿನಲ್ಲಿ ಜೆಡ್ಡಾ ದ ಬಿಸಿಲ ಉರಿಯಿಂದ ರೋಸಿ ಹೋಗಿ ಎಲ್ಲಾದರೂ ತಂಪಾದ ಸ್ಥಳಕ್ಕೆ ಹೋಗಿ ಎರಡು ದಿನ ಕಳೆಯೋಣ ಎನ್ನಿಸಿತು. ಇಲ್ಲಿಂದ ಸುಮಾರು ೨೦೦ ಕಿ, ಮೀ ದೂರದಲ್ಲಿರುವ ತಾಯಿಫ್ ಒಂದು ಪ್ರವಾಸಿ ತಾಣ, ನಮ್ಮ ಕೆಮ್ಮಣ್ಣು ಗುಂಡಿಯ ಹಾಗೆ. ಮಳೆ, ಚಳಿ ಎಲ್ಲವೂ ಇದೆ ಇಲ್ಲಿ. ಆದರೆ ತಾಯಿಫ್ ಗೆ ಹಲವು ಸಾರಿ ಹೋಗಿದ್ದರಿಂದ ತಾಯಿಫ್ ನಂಥದ್ದೆ ಮತ್ತೊಂದು ತಾಣ “ಅಲ್-ಬಾಹ” ಎನ್ನುವ ಸ್ಥಳವಿದೆ ಎಂದು ಕೇಳಿದ್ದರಿಂದ ಅಲ್ಲಿಗೆ ಹೊರಟೆವು.

ಜೆಡ್ಡಾ ದಿಂದ ೪೦೦ ಕಿ ಮೀ ದೂರ ಅಲ್-ಬಾಹಾ. ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದಲ್ಲಿರುವ ಈ ಚಿಕ್ಕ ನಗರ ಸುಡು ಬಿಸಿಲಿನಲ್ಲಿ ಬೆಂದ ಶರೀರಕ್ಕೆ ತಂಪನ್ನೀಯುವ ತಾಣ. ಸೌದಿಯಿಂದ ಮಾತ್ರವಲ್ಲದೆ ನೆರೆಯ ಕತಾರ್, ಒಮಾನ್, ಕುವೈತ್, ಬಹರೇನ್ ದೇಶಗಳಿಂದಲೂ ರಜೆಗೆ ಜನ ಇಲ್ಲಿಗೆ ಬರುತ್ತಾರೆ. ಜೆಡ್ಡಾ ಬಿಟ್ಟು ಸುಮಾರು ೨೦೦ ಕಿ ಮೀ ಕ್ರಮಿಸುತ್ತಿದ್ದಂತೆಯೇ ಭೌಗೋಳಿಕ ಬದಲಾವಣೆಗಳು ಗೋಚರಿಸ ತೊಡಗಿತು. ಅಗಾಧ ಸಾಗರದಂತೆ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಮರಳೋ ಮರಳು. ಮಟ್ಟಸವಾದ, ಸಮನಾದ ಮರುಭೂಮಿ, ಆಗಾಗ sand storm area, ಮತ್ತು ಒಂಟೆಗಳ ಪ್ರದೇಶ ಎಂದು ಸೂಚಿಸುವ ಫಲಕಗಳು. ಸೂರ್ಯನ ಅಟ್ಟಹಾಸಕ್ಕೆ ಬೆಚ್ಚಿದ ಮರಳು ರಾಶಿ ರಹದಾರಿಯ ಮೇಲೆ ಪಲಾಯಾನ ಮಾಡುವ ಸುಂದರ ದೃಶ್ಯ ನೋಡುತ್ತಾ ಹೋದಂತೆ ಸುಂದರ ಬೆಟ್ಟಗಳ ಶ್ರೇಣಿ ಗೋಚರಿಸಿತು. ಹವಾನಿಯಂತ್ರಿತ ಕಾರಿನೊಳಕ್ಕೆ ಕೂತು ನೋಡಲು ಬಹು ಸುಂದರ ದೃಶ್ಯ. ಆದರೆ ಬಟಾ ಬೆತ್ತಲೆಯಾದ (ಹಸಿರಿನ ಸುಳಿವೂ ಇಲ್ಲದ) ಬೆಟ್ಟಗಳನ್ನು ಕಾರಿನಿಂದ ಇಳಿದು ನೋಡಿದರೆ ನರಕ ಸದೃಶ ಅನುಭವ. ಅಂಥ ಬೇಗೆ. ಅಲ್-ಬಾಹಾ ಸಮೀಪಿಸುತ್ತಿದ್ದಂತೆ ಅಲ್ಲಲ್ಲಿ ಗಿಡ ಮರಗಳಿಂದ ತುಂಬಿದ ಚಿಕ್ಕ ಚಿಕ್ಕ ಬಯಲುಗಳು. ಈ ಪ್ರದೇಶದಲ್ಲಿ ಆಗಾಗ ಸಣ್ಣ ಪ್ರಮಾಣದಲ್ಲಿ ಮಳೆ ಆಗುವುದರಿಂದ ಹಸಿರು ತೊಡುವ ಭಾಗ್ಯ ಈ ಪ್ರದೇಶದ ನೆಲಕ್ಕೆ.

ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದ ಲ್ಲಿರುವ ಅಲ್-ಬಾಹಾ ತಲುಪಲು ಮಾಡಬೇಕು ಶಿಖರಾರೋಹಣ. ಆಗುಂಬೆ, ಚಾರ್ಮಾಡಿ, ಬಾಬಾ ಬುಡನ್ ಗಿರಿಗಳನ್ನು ನೋಡಿದ್ದ ನನಗೆ ಈ ಬೆಟ್ಟ ಇನ್ನೂ ಎತ್ತರ ಎಂದು ತೋರಿತು. ಸುತ್ತಲೂ ಆವರಿಸಿ ಕೊಂಡ ಎತ್ತರದ ಬೆಟ್ಟಗಳಿಗೆ ರಸ್ತೆ ಜೋಡಣೆ ನಿಸ್ಸಂಶಯವಾಗಿಯೂ  engineering marvel ಎನ್ನಬಹುದು. two way ರಸ್ತೆಯಾದ್ದರಿಂದಲೂ, ರಸ್ತೆಗಳ ಮಧ್ಯೆ ಯಾವುದೇ barrier ಇಲ್ಲದಿದ್ದರಿಂದಲೂ ನಿಧಾನವಾಗಿ ಚಲಿಸಿ ಎನ್ನುವ ಫಲಕಗಳು, ಮಾತ್ರವಲ್ಲ ರಸ್ತೆಯ ಒಂದು ಕಡೆ ಬೆಟ್ಟದ ಆಸರೆ ಇದ್ದರೆ ಮತ್ತೊಂದು ಕಡೆ ವಾಹನ ಕೆಳಗುರುಳದಂತೆ ಭಾರೀ ಗಾತ್ರದ ಮೂರಡಿ ಎತ್ತರದ ಕಾಂಕ್ರೀಟ್ ಗೋಡೆಗಳು. ಹತ್ತಾರು ಬೆಟ್ಟಗಳನ್ನು ಬಳಸಿ ಹೋಗುವ ರಸ್ತೆಗೆ ೨೫ ಸುರಂಗಗಳು, ಅಲ್ಲಲ್ಲಿ ಕಣಿವೆಯಿಂದ ಕಣಿವೆಗೆ ಕಟ್ಟಿದ ಸೇತುವೆಗಳು. ತೈಲ ಸಂಪತ್ತು ತನ್ನ ಕಾರ್ಯ ಕ್ಷಮತೆಯನ್ನು ತೋರಿಸುವುದು ಇಂಥ ಸ್ಥಳಗಳಲ್ಲಿ.

ಅಲ್-ಬಾಹ ದಲ್ಲಿ ಸುತ್ತಾಡುತ್ತಿದ್ದಾಗ  “ಥೀ ಐನ್” ಎಂದು ಸಾರಿಗೆ ಫಲಕಗಳಲ್ಲಿ ಕಾಣುತ್ತಿತ್ತು. ಈ ಹೆಸರು ನನಗೆ ವಿಚಿತ್ರವಾಗಿ ಕಂಡಿತು. ಇದೂ ಯಾವುದಾದರೂ ಒಂದು ವಿಶೇಷವಾದ ಚಿಕ್ಕ ಪಟ್ಟಣವಿರಬೇಕು, ಅದರ ಬಗ್ಗೆ ಯಾರಿಗಾದರೂ ಕೇಳೋಣ ಅಂದರೆ ಇಲ್ಲಿ ಇಂಥ ವಿಷಯಗಳಲ್ಲಿ, ಅದರಲ್ಲೂ ಚಾರಿತ್ರಿಕ ವಿಷಯಗಳಲ್ಲಿ ಜನರಿಗೆ ಒಲವು, ಆಸಕ್ತಿ ಕಡಿಮೆಯೇ. ಸರಿ ಶುಕ್ರವಾರದ ಪ್ರಾರ್ಥನೆ ಮುಗಿಸಿದ ಕೂಡಲೇ ಹೊರಟೆವು ಜೆದ್ದಾದ ಕಡೆ ಹೋಗುವ ಸ್ಥಳಗಲ್ಲಿ ಇನ್ಯಾವುದಾದರೂ ಪ್ರೇಕ್ಷಣೀಯ ಸ್ಥಳವಿದ್ದರೆ ಕತ್ತಲಾಗುವ ಮುನ್ನ ನೋಡಿಕೊಂಡು ಜೆಡ್ಡಾ ಸೇರಬಹುದು ಎನ್ನುವ ಎಣಿಕೆಯೊಂದಿಗೆ. ಮತ್ತದೇ ೨೫ ಸುರಂಗಗಳನ್ನು ತೂರಿಕೊಂಡು, ಚುಮು ಚುಮು ಮಳೆಗೆ ಹಿತವಾಗಿ, ನಗ್ನವಾಗಿ ಬಿದ್ದು ಕೊಂಡಿದ್ದ ಬೆಟ್ಟಗಳ ಸಾಲನ್ನೂ, ಒದ್ದೆಯಾದ ರಸ್ತೆಗಳ ಮೇಲೆ ವಾಹನಗಳು ಹೊರಡಿಸುವ ಕಾರಂಜಿ ಗಳನ್ನು ನೋಡುತ್ತಾ ಘಾಟಿ ಇಳಿದು ಒಂದ್ಹತ್ತು ಕಿ ಮೀ ದೂರ ಬರುತ್ತಿದ್ದಂತೆಯೇ ಮತ್ತದೇ ಫಲಕ ಕಾಣಿಸಿತು “ಧೀ ಐನ್”. ಈ ಸ್ಥಳ ಎಡಕ್ಕೆ ಎನ್ನುವ ನಿರ್ದೇಶನ ಕಂಡಿದ್ದೇ ಕುತೂಹಲದಿಂದ ಗಾಡಿಯನ್ನು ರಹ ದಾರಿಯಿಂದ ಚಿಕ್ಕ ಕಡಿದಾದ ರಸ್ತೆಗೆ ನಡೆಸಿ ಸ್ವಲ್ಪ ಮುಂದೆ ಬರುತ್ತಿದ್ದಂತೆ ಧುತ್ತೆಂದು ಎದುರಾಯಿತು ಒಂದು ಬೆಟ್ಟ, ಅದರ ತುಂಬಾ ಶಿಥಿಲಗೊಂಡ ಮನೆಗಳು. ಇದೇನಪ್ಪಾ, “ಹರಪ್ಪಾ”, “ಮೊಹೆಂಜೋದಾರೋ” ತಲುಪಿ ಬಿಟ್ಟೆನಾ ಎಂದು ಕೌತುಕದಿಂದ ಹತ್ತಿರ ಬಂದಾಗ ಬೇಲಿ. ಅಲ್ಲಿಂದಲೇ ಒಂದು ಫೋಟೋ ಕ್ಲಿಕ್ಕಿಸಿದಾಗ ನನ್ನಾಕೆಗೆ ಇನ್ನೂ ಮುಂದಕ್ಕೆ ಹೋಗಿ ಅದೇನೆಂದು ನೋಡೋಣ ಎನ್ನುವ ಆಸೆ. ಮತ್ತಷ್ಟು ದೂರ ಹೋದಾಗ ಒಂದು ಟೋಲ್ ಗೇಟ್. ವಿಚಾರಿಸಿದಾಗ ಒಳ ಹೋಗಲು ತಲೆಗೆ ೧೦ ರಿಯಾಲ್ (೧೨೫ ರೂ) ಎಂದ. ಹಣ ತೆತ್ತು ಪಾಸ್ ಪಡೆದು ಹತ್ತಿರ ಹೋದಾಗ ಎಲ್ಲಾ ಹಳೆ ಕಾಲದ ಮನೆಗಳು, ಗುಡ್ಡದ ತುಂಬಾ ಅಚ್ಚುಕಟ್ಟಾಗಿ ಖಾಲಿ ಸಿಗರೆಟ್ ಪ್ಯಾಕ್ ಗಳನ್ನು ಜೋಡಿಸಿದಂತೆ ಕಾಣುತ್ತಿತ್ತು. ಅರ್ಧ ಗುಡ್ಡ ಹತ್ತಿ ಒಂದೇ ನಮೂನೆಯ ಮನೆಗಳನ್ನು ನೋಡುತ್ತಾ ಕೆಳಗಿಳಿದಾಗ ಝರಿಯ ಸಪ್ಪಳ. ಹಾಂ, ಮರಳುಗಾಡಿನಲ್ಲಿ ಝರಿಯೇ ಎಂದು ಹೋಗಿ ನೋಡಿದಾಗ ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಚಿಕ್ಕದಾದರೂ ಅರೇಬಿಯಾದಲ್ಲಿ ಝರಿ, ಕಾಲುವೆ, ಕಾರಂಜಿಗಳು, ಅಪರೂಪವೇ. ಹಾಗಾಗಿ ಇದೊಂದು ರೀತಿಯ welcome change. ತಂಪಾದ ಝರಿಯ ನೀರನ್ನು ಮುಖಕ್ಕೆ ಸಿಂಪಡಿಸಿ ಕೊಂಡು ಝರಿಯ ಮತ್ತು ಈ ಬೆಟ್ಟದ ಮೇಲೆ ವಾಸವಿದ್ದವರ ಕುರಿತು ವಿಚಾರಿಸಿದೆ.

ಸುಮಾರು ೪೦೦ ವರ್ಷಗಳ ಹಿಂದೆ ಜನ ವಾಸವಿದ್ದ ಒಂದು ಹಳ್ಳಿ “ಥೀ ಐನ್”. ಇದರ ಅರ್ಥ “ಝರಿ ಇರುವ ಹಳ್ಳಿ” ಎಂದು. ಮತ್ತೊಂದು ಅರ್ಥ “ಒಕ್ಕಣ್ಣಿನ ಮನುಷ್ಯ” ಎಂದೂ ಇದೆ. ಇದರ ಹಿನ್ನೆಲೆ ಹೀಗಿದೆ ನೋಡಿ. ನೂರಾರು ವರ್ಷಗಳ ಹಿಂದೆ ಯೆಮನ್ ದೇಶದ ಮುದುಕನ ಹತ್ತಿರ ಮಾಂತ್ರಿಕ ದಂಡ ಇತ್ತಂತೆ, ಅಲ್ಲಾವುದ್ದೀನನ ಹತ್ತಿರ ಮಾಂತ್ರಿಕ ದೀಪ ಇದ್ದಂತೆ. ಅದನ್ನು ಉಪಯೋಗಿಸಿ ನೀರನ್ನು ಕಂಡು ಹಿಡಿಯಲು ಹಳ್ಳಿಯ ಜನ ಹೇಳಿದಾಗ ಆ ಮುದುಕ ತನ್ನ ದಂಡ ದಿಂದ ನೆಲಕ್ಕೆ ಬಡಿಯುತ್ತಾನೆ. ಕೂಡಲೇ ಚಿಮ್ಮುತ್ತದೆ ನೀರಿನ ಚಿಲುಮೆ. ನೀರೆನೋ ಚಿಮ್ಮಿತು, ಆದರೆ ಅದಕ್ಕೆ ಬೆಲೆಯನ್ನೂ ತೆತ್ತ ಪಾಪದ ಮುದುಕ; ನೆಲಕ್ಕೆ ಬಡಿದ ದಂಡ ಅವನ ಕಣ್ಣಿನ ಮೇಲೆ ಬಿದ್ದು  ತನ್ನ ಒಂದು ಕಣ್ಣನ್ನು ಕಳೆದು ಕೊಳ್ಳುತ್ತಾನೆ. ಜನರಿಗೆ ಉಪಕಾರ ಮಾಡಲು ಹೋಗಿ ಒಂದು ಕಣ್ಣನ್ನು ಕಳೆದುಕೊಂಡ ಯೆಮನ್ ದೇಶದ ವೃದ್ಧನ ಕತೆಯನ್ನು ಮೆಲುಕು ಹಾಕುತ್ತಾ ಜೆಡ್ಡಾ ಕಡೆ ಪ್ರಯಾಣ ಬೆಳೆಸಿದೆ.

ಪ್ರಯಾಣದ ವೇಳೆ ತೆಗೆದ ಕೆಲವು ಚಿತ್ರಗಳನ್ನು ಲಗತ್ತಿಸಿದ್ದೇನೆ. ನೋಡಿ, ಏನಾದರೂ ಅರ್ಥ ಆಗುತ್ತಾ ಅಂತ. ಏಕೆಂದರೆ ಹೇಳಿಕೊಳ್ಳುವಂಥದ್ದಲ್ಲದ ಕ್ಯಾಮರ ಮತ್ತು ಬೆನ್ನು ತಟ್ಟಿ ಕೊಳ್ಳುವಂಥ “ಕಲೆ”ಯಿಲ್ಲದೆ ತೆಗೆದ ಚಿತ್ರಗಳಿವು. ಇಂಥ ಚಿತ್ರಗಳನ್ನ ನೋಡಲು ಬಲವಂತ ಪಡಿಸಿದ್ದಕ್ಕೆ ಕ್ಷಮೆಯಿರಲಿ.