ಇಂಡಿಯನ್ ಎಕ್ಸ್ಪ್ರೆಸ್ಸ್ ಪತ್ರಿಕೆ ಸೈನ್ಯದ ಬಗ್ಗೆ ವರದಿಯೊಂದನ್ನು ಪ್ರಕಟಿಸಿ ಕೋಲಾಹಲವನ್ನು ಸೃಷ್ಟಿಸಿದೆ. ಈ ವರ್ಷದ ಜನವರಿ ೧೬-೧೭ ರ ರಾತ್ರಿ ಭೂಸೇನೆಯ ಎರಡು ಪ್ರಮುಖ ತುಕಡಿಗಳು ದೇಶದ ರಾಜಧಾನಿಯ ಪರಿಸರಕ್ಕೆ ರಕ್ಷಣಾ ಇಲಾಖೆಯ ಅನುಮತಿಯಿಲ್ಲದೆ ಬಂದಿದ್ದು ಏಕೆ? ಸೈನ್ಯದ ಈ ಕ್ರಮ ಸರಕಾರದ ಉನ್ನತ ಸ್ತರದಲ್ಲಿ ಕಂಪನವನ್ನೇಕೆ ತಂದಿತು, ಪ್ರವಾಸದಲ್ಲಿದ್ದ ರಕ್ಷಣಾ ಕಾರ್ಯದರ್ಶಿಯನ್ನು ಮಲೇಷ್ಯಾದಿಂದ ಏಕಾಯೇಕಿ ಹಿಂದಕ್ಕೆ ಕರೆಸಿ ಕೊಂಡಿದ್ದು ಏಕೆ, ಎನ್ನುವ ಹಲವು ಪ್ರಶ್ನೆ ಸಂಶಯಗಳಿಗೆ ಅನುವು ಮಾಡಿ ಕೊಟ್ಟಿದೆ. ಪತ್ರಿಕೆಯ ಈ ವರದಿ ನೋಡಿ ಪ್ರಧಾನಿ, ರಕ್ಷಣಾ ಸಚಿವರು ಸೈನ್ಯದ ಬಗ್ಗೆ ಭರವಸೆಯ ಮಾತುಗಳನ್ನು ಹೇಳಿದ್ದಾರೆಯೇ ಹೊರತು ಪತ್ರಿಕೆ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ. ಭಾರತ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಚಲ ವಿಶ್ವಾಸ ಇರಿಸಿ ಕೊಂಡಿರುವ ದೇಶ. ನಮ್ಮ ವ್ಯವಸ್ಥೆಯಲ್ಲಿ ಅದ್ಯಾವ ಕುಂದು ಕೊರತೆಗಳೇ ಇರಲಿ ಇಲ್ಲಿ ಪ್ರಜೆಯೇ ಪ್ರಭು. ಜನರಿಂದ ಚುನಾಯಿತನಾದ ಮಂತ್ರಿ ಎಂಥ ಹುಂಬನೇ ಆದರೂ ಅವನ ಆದೇಶದ ಅಡಿ ಅಧಿಕಾರಿಶಾಹಿ ಕೆಲಸ ಮಾಡಬೇಕು. ನಮ್ಮ ಸೈನ್ಯದ ಮಹಾ ದಂಡನಾಯಕ ಜನರಲ್ V.K.Singh ರಿಗೂ ಸರಕಾರಕ್ಕೂ ವೈಮನಸ್ಸಿರುವುದು ಎಲ್ಲರಿಗೂ ತಿಳಿದದ್ದೇ. ನಿವೃತ್ತಿಯಾಗುವ ವಯಸ್ಸಿನ ಕುರಿತು ಶುರುವಾದ ತಗಾದೆ ಸೈನ್ಯದಲ್ಲಿ ಭ್ರಷ್ಟಾಚಾರ ಇರುವ ವಿಷಯದವರೆಗೆ ಮುಂದುವರೆಯಿತು. ಸೈನ್ಯಾಧಿಕಾರಿ ರಿಪೋರ್ಟ್ ಕೊಡಬೇಕಿರುವುದು ರಕ್ಷಣಾ ಸಚಿವರಿಗೆ. ಸಿಂಗ್ ಈ ಕೆಲಸ ಮಾಡದೇ ನೇರವಾಗಿ ಪ್ರಧಾನಿಗೆ ಪತ್ರ ಬರೆದು protocol ಉಲ್ಲಂಘಿಸಿದರು. ಅವರು ಬರೆದ ಪತ್ರ ಸೋರಿಕೆ ಆಗಿ ಮತ್ತೊಂದು ಅನಾಹುತ ಕ್ಕೆ ಎಡೆಯಾಯಿಯಿತು. ಪತ್ರವನ್ನ ಯಾರು ಸೋರಿಸಿದರು ಎನ್ನುವ ಬಗ್ಗೆ ಯಾರಿಗೂ ಗೊತ್ತಿಲ್ಲ. ಈ ಘಟನೆಗಳ ಬೆನ್ನಲ್ಲೇ ಸೈನ್ಯದ ತುಕಡಿಯ ರಾಜಧಾನಿ ಭೇಟಿ. ಸೈನ್ಯ ಸರಕಾರದ ಮಧ್ಯೆಯ ಜಟಾಪಟಿ ದೇಶಕ್ಕೆ ಒಳ್ಳೆಯದಲ್ಲ. ಕೋಲಾ ಹಲಕ್ಕೆ ಕಾರಣವಾದ ಹಲವು ಜಟಾಪಟಿಗಳನ್ನು ದೇಶ ಕಂಡಾಗಿದೆ. ಇಂದಿರಾ ಗಾಂಧೀ – ಅಲಹಾ ಬಾದ್ ನ್ಯಾಯಾಲಯದ ನಡುವಿನ ಜಗಳ, ರಾಜೀವ್ ಗಾಂಧಿ – ಜೆಲ್ ಸಿಂಗರ ನಡುವಿನ ಕದನ, ಕೇಂದ್ರ ಸರಕಾರ – ಶೇಷನ್ ನಡುವಿನ ಗಲಾಟೆಗಳನ್ನು ಕಂಡ ದೇಶಕ್ಕೆ ಸೈನ್ಯ ಮತ್ತು ಸರಕಾರದ ನಡುವಿನ ಇರುಸು ಮುರುಸು ಹೊಸತಾಗಿ ಕಾಣುತ್ತಿದೆ. ಏಕೆಂದರೆ ನಮ್ಮ ದೃಷ್ಟಿಯಲ್ಲಿ ಸೇನೆ ಎಂದಿಗೂ ದೇಶಕ್ಕೂ, ಸರಕಾರಕ್ಕೂ ವಿಧೇಯವಾಗಿದ್ದ ಸಂಸ್ಥೆ. ಏಕಾ ಏಕಿ ಈ ತೆರನಾದ ಸಮಸ್ಯೆ ಬರಲು ಕಾರಣ ವೇನು, ನಿಜವಾಗಿಯೂ ನಡೆಯುತ್ತಿರುವುದು ಏನು ಎಂದು ತಿಳಿಯುವ ಹಕ್ಕು ದೇಶಕ್ಕಿದೆ. ಕೂಡಲೇ ಪ್ರಧಾನಿ, ರಕ್ಷಣಾ ಸಚಿವರು ಸಂಶಯ ನಿವಾರಣೆಯ ಕಡೆ ಗಮನ ಹರಿಸುವುದು ಒಳ್ಳೆಯದು.
ರಕ್ಷಣೆ
ಅವರು ಹಾಗೆ, ನಾವ್ಯಾಕೆ ಹೀಗೆ?
ಜಾರ್ಜ್ ಬುಶ್ ತನ್ನ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಅತ್ಯಾಧುನಿಕ ದುರ್ಬೀನು ಹಿಡಿದು ಗುಡ್ಡ ಕಣಿವೆ, ಹಳ್ಳ ಕೊಳ್ಳ ಬಿಡದೆ ಹುಡುಕಾಡಿದರೂ ಸಿಗದ ಒಸಾಮಾ ಬಿನ್ ಲಾದೆನ್ ನನ್ನು ತನ್ನ ಅಧಿಕಾರಾವಧಿಯ ಉತ್ತರಾರ್ಧದಲ್ಲೇ ಕೆಡವಿ ಬೀಳಿಸಿದ ಕೀರ್ತಿ ಒಬಾಮಾರದು. “ನನ್ನ” ನಿರ್ದೇಶನದ ಮೇರೆಗೆ “ನಾವಿಕ ಸೀಲ್ – ೬” ರ ವಿಶೇಷ ಪಡೆಗಳು ಒಸಾಮಾನನ್ನು ಬಲಿ ಹಾಕಿ ಜಲಸಮಾಧಿ ಮಾಡಿದರು ಎನ್ನುವ ಮಾತಿನಲ್ಲಿ “ನನ್ನ” ಎನ್ನುವ narcissistic ಮಾತೊಂದು ಬಿಟ್ಟರೆ ಒಬಾಮಾ ಬೇರಾವುದೇ ಶೌರ್ಯ ಪ್ರದರ್ಶನ ಮಾಡಲಿಲ್ಲ. ಒಸಾಮಾನನ್ನು ಬಲಿ ಹಾಕಿದ ಕೂಡಲೇ ಜಾರ್ಜ್ ಬುಶ್ ರಿಗೆ ಫೋನಾಯಿಸಿ ಇನ್ನು ಈ ಭೂಮಿಯ ಮೇಲೆ ಒಸಾಮಾ ನಡೆಯುವುದನ್ನು ನೋಡಲಾರಿರಿ ಎನ್ನುವ ಸಂದೇಶ ನೀಡಿದರು ಅಧ್ಯಕ್ಷ ಒಬಾಮ. ದೇಶಕ್ಕೆ, ವಿಶ್ವಕ್ಕೆ ಈ ವಿಷಯವನ್ನ ಹೊರಗೆಡಹುವ ಮೊದಲೇ ತನ್ನ ಪಕ್ಷದವನಲ್ಲದ ರಿಪಬ್ಲಿಕನ್ ಪಕ್ಷದ ಹಿಂದಿನ ಅಧ್ಯಕ್ಷ ಬುಶ್ ನಿಗೆ ಈ ಸಂದೇಶ ರವಾನೆ ಮಾಡಿದ್ದು ಏಕೆ? ಈ ರಾಜಕಾರಣಕ್ಕೆ ನಿಷ್ಕೃಷ್ಟವಾಗಿ bipartisan politics ಎಂದು ಕರೆಯುತ್ತಾರೆ ಅಮೆರಿಕೆಯಲ್ಲಿ. ದೇಶದ ಭದ್ರತೆ, ಸಮಗ್ರತೆ, ಮುಂತಾದ ಗಂಭೀರ ವಿಚಾರಗಳು ಬಂದಾಗ ಅಮೆರಿಕೆಯಲ್ಲಿ ಎಲ್ಲಾ ಪಕ್ಷಗಳೂ ಒಂದು. ಅವರೆಲ್ಲರ ಪಕ್ಷ ಒಂದೇ. ಅದುವೇ ಅಮೇರಿಕನ್. put america first, ಅಮೆರಿಕೆಯ ರಾಜಕಾರಣಿಗಳ ಧ್ಯೇಯ ವಾಕ್ಯ. ಅವರುಗಳ ಏಕೋದ್ದೇಶ. ದೇಶ ಉರಿಯುವಾಗ ಬಾಣಲೆ ಎತ್ತಿ ಕೊಂಡು ಬಂದು ಕಜ್ಜಾಯ ಹುರಿಯಲು ಮುಂದಾಗೋಲ್ಲ ಅಲ್ಲಿನ ರಾಜಕಾರಣಿಗಳು. ಹಾಗೇನಾದರೂ ಮಾಡಿದರೆ ಇ- ಮೇಲ್ ಮೂಲಕ ಬರುತ್ತವೆ ಎಕ್ಕಡಗಳು. ಮುಂದಿನ ಬಾರಿ ಆರಿಸಿ ಬರುವ ಆಸೆ ಕನಸಾಗುತ್ತದೆ.
ಈಗ ಬನ್ನಿ ಭಾರತಕ್ಕೆ. “ನಿನ್ನ ತಲೆ ಹೋದರೂ ಪರವಾಗಿಲ್ಲ ನನ್ನ ತಲೆಯ ಮೇಲಿನ ಪೇಟ intact ಆಗಿದ್ದರೆ ಸಾಕು” ಎನ್ನುವ ರಾಜಕಾರಣಕ್ಕೆ ಸುಸ್ವಾಗತ. ೨೦೦೮ ನವೆಂಬರ್ ೨೬ ಕ್ಕೆ ವಿಶ್ವವನ್ನೇ ನಡುಗಿಸಿದ, ಪಾಕಿಸ್ತಾನದ ಭಯೋತ್ಪಾದಕರು ಮುಂಬೈಯಲ್ಲಿ ನಡೆಸಿದ ಮಾರಣ ಹೋಮ ಎರಡೂ ದೇಶಗಳು ಯುದ್ಧ ತಯಾರಿ ನಡೆಸುವಷ್ಟು ತೀವ್ರ ಪರಿಣಾಮ ಬೀರಿತು. ಮೂರು ದಿನಗಳ ಕಾಲ ಮುಂಬೈ ನಗರವನ್ನು ಒತ್ತೆಯಾಗಿರಿಸಿಕೊಂಡಿದ್ದ ಕೊಲೆಗಡುಕರು ನಮ್ಮ ಯೋಧರ ಗುಂಡುಗಳಿಗೆ ಒಬ್ಬೊಬ್ಬರಾಗಿ ಉರುಳಿದರು. ಎಲ್ಲಾ ಭಯೋತ್ಪಾದಕರೂ ಹತರಾಗಿ ಮುಂಬೈ ಮತ್ತೊಮೆ ಸುರಕ್ಷಿತ ಸ್ಥಿತಿಗೆ ಮರಳಿದಾಗ ನಮ್ಮ ಪ್ರಧಾನಿಗಳೂ, ವಿರೋಧ ಪಕ್ಷದ ನಾಯಕರೂ ಮುಂಬೈಗೆ ಧಾವಿಸಿ ಬಂದರು. ಬಂದಿದ್ದು ದೊಡ್ಡ ವಿಷಯವಲ್ಲ. ಅವರು ಬಂದ ರೀತಿ ಮಾತ್ರ ವಿಶೇಷವಾದದ್ದು. ಇಡೀ ವಿಶ್ವಕ್ಕೆ ನಾವು ಯಾವ ಪಕ್ಷಗಳಿಗೆ ಸೇರಿದ್ದರೂ ನಾವು ಭಾರತೀಯರು ಒಂದು ಎಂದು ತೋರಿಸಲು ಈ ಮಹನೀಯರುಗಳು ಒಟ್ಟಿಗೆ ಬರಲಿಲ್ಲ. ಬೇರೆ ಬೇರೆ ವಿಮಾನಗಳಲ್ಲಿ ಆಗಮಿಸಿದರು. ಈ ಇಬ್ಬರೂ ನಾಯಕರು ತಮ್ಮ ಹೇಳಿಕೆಗಳಲ್ಲಿ ದೇಶ ಒಗ್ಗಟ್ಟಾಗಿದೆ ಎಂದು ಸಾರಿದರೂ ಕೆಲವೊಂದು ಸಂದರ್ಭಗಳಲ್ಲಿ ಚಿಕ್ಕ ಪುಟ್ಟ ಸಂಗತಿಗಳು ಬೃಹದಾಕಾರವಾಗಿ ಗೋಚರಿಸುತ್ತವೆ. ಮುಂಬೈ ಮಾರಣ ಹೋಮಕ್ಕೆ ಮೊದಲು ಕಂದಹಾರಕ್ಕೆ ಅಪಹರಿಸಿಕೊಂಡು ಹೋದ ನಮ್ಮ ವಿಮಾನ, ಸಂಸತ್ ಭವನದ ಮೇಲೆ ನಡೆದ ಧಾಳಿ ಹೀಗೆ ಹಲವು ಯಾತನಾಮಯ ಸಂದರ್ಭಗಳಲ್ಲಿ ನಮ್ಮ ಒಗ್ಗಟು ಸಾಕಾಗಲಿಲ್ಲವೇನೋ ಎನ್ನುವಷ್ಟು ಐಕ್ಯತೆಯಿಂದ ಕೂಡಿರಲಿಲ್ಲ.
ಅಮೇರಿಕೆಯಿಂದ ನಾವು ಕಲಿಯುವುದು ಬಹಳಷ್ಟಿದೆ. ದೇಶ ಒಗ್ಗಟ್ಟಾಗಿದ್ದರೆ ನಾವು ಯಾರಿಗೂ ಭಯ ಪಡುವ ಅವಶ್ಯಕತೆ ಇಲ್ಲ, ಯಾರ ಬೆಂಬಲವನ್ನೂ ನಿರೀಕ್ಷಿಸುವ ಗತಿಗೇಡು ಸಹ ಬರುವುದಿಲ್ಲ. ನಮಗೆ ಸರಿ ಎನಿಸಿದ್ದನ್ನು ನಿರ್ಭಯವಾಗಿ, ನಿರ್ಭಿಡೆಯಿಂದ ಮಾಡಬಹದು ದೇಶದ ರಕ್ಷಣೆಯನ್ನು.
ಜಿಹಾದ್ ಎಂದರೇನು?
ನಮ್ಮಲ್ಲಿ ಧಾರ್ಮಿಕ ವಿದ್ಯೆಗಾಗಿ “ಮದ್ರಸಾ” ಗಳಿಗೆ ಮಕ್ಕಳನ್ನು ಕಳಿಸುವುದಿದೆ. ಅಲ್ಲಿ ಕುರಾನ್ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಮದರಸಾ ಶಿಕ್ಷಣ ಪಡೆದ ನಾನು ಜಿಹಾದ್ ಪದದ ಕುರಿತು ಯಾರ ಬಾಯಲ್ಲೂ ಕೇಳಿರಲಿಲ್ಲ. ಪ್ರಪ್ರಥಮವಾಗಿ ಜಿಹಾದ್ ಎನ್ನುವ ಪದ ಕೇಳಿದ್ದು ೨೦೦೧ ರಲ್ಲಿ. ಅಮೆರಿಕೆಯ ಮೇಲೆ ನಡೆದ ಧಾಳಿಯಲ್ಲಿ ಅಮೇರಿಕಾ ಮತ್ತು ಇತರೆ ಪಾಶ್ಚಾತ್ಯ ರಾಷ್ಟ್ರಗಳ ರಾಜಕೀಯ ಪಂಡಿತರುಗಳು ಉಪಯೋಗಿಸಿದ ಪದದಿಂದ ನನಗೆ ಪ್ರಥಮವಾಗಿ ಜಿಹಾದ್ ಪದದ ಪರಿಚಯವಾಯಿತು. ಇನ್ನು ಮುಸ್ಲಿಮರಿಗೆ ಧಾರ್ಮಿಕ ಆಚರಣೆಗಳ ರೀತಿ ಜಿಹಾದ್ ಅನ್ನೂ ಹೇಳಿ ಕೊಟ್ಟು, ಜಿಹಾದ್ ಅಂದರೆ ಯುದ್ಧ, ಸಿಕ್ಕ ಸಿಕ್ಕವರನ್ನು ಕೊಲ್ಲುವುದು ಎಂದಿದ್ದರೆ ವಿಶ್ವ ಈ ರೀತಿಯಲ್ಲಿ ಖಂಡಿತಾ ಇರುತ್ತಿರಲಿಲ್ಲ. ನನಗೂ ಈ ಪದದ ಬಗ್ಗೆ ಅರಿಯಲು ಇಷ್ಟೊಂದು ವರ್ಷಗಳು ಬೇಕಿರಲಿಲ್ಲ. ೧೭೦ ಕೋಟಿ ಮುಸ್ಲಿಮ್ ಜನಸಂಖ್ಯೆಯಿರುವ ಪ್ರಪಂಚದಲ್ಲಿ ಈ ತೆರನಾದ ನಿರರ್ಥಕ ಹಿಂಸೆಯಲ್ಲಿ ತೊಡಗಿಸಿಕೊಂಡವರು ಕೆಲವೇ ಲಕ್ಷಗಳಷ್ಟು ದುರುಳರು, ಧರ್ಮ ದ್ರೋಹಿಗಳು. ಬಹುಪಾಲು ಮುಸ್ಲಿಮರು ಎಲ್ಲರಂತೆ ದುಡಿಯುತ್ತಾ, ತಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಶ್ರಮ ಪಡುತ್ತಿರುವವರು. ಅವರಿಗೆ ಹಿಂಸೆ ಬೇಕಿಲ್ಲ. ಅವರಿಗೆ ಬೇಕಿರುವುದು ರೋಟಿ, ಕಪಡಾ, ಔರ್ ಮಕಾನ್. ತಿನ್ನಲು ಆಹಾರ, ಉಡಲು ಬಟ್ಟೆ, ಮತ್ತು ತಲೆಯ ಮೇಲೊಂದು ಸೂರು.
ಆಸ್ಟ್ರೇಲಿಯಾದಲ್ಲಿ ಜಿಹಾದ್ ನ ಬಗ್ಗೆ ಒಂದು ಸಮ್ಮೇಳನದಲ್ಲಿ ಮಾತನಾಡಿದ ಇಸ್ಲಾಮೀ ವಿಧ್ವಾಂಸರು ಹೇಳಿದ್ದು, ಜಿಹಾದ್ ಎಂದರೆ ಶ್ರಮ ಎಂದು ಹೇಳುತ್ತಾ ಒಂದು ಒಳ್ಳೆಯ ಸುಸಂಸ್ಕೃತ ಸಮಾಜ ಕಟ್ಟಲು ವಿಶ್ವದ ಎಲ್ಲಾ ದೇಶಗಳ ಥರಾ ಆಸ್ಟ್ರೇಲಿಯಾ ದೇಶದ ಸರಕಾರ ಸಹ ಜಿಹಾದ್ ಇಲಾಖೆಗಳನ್ನು ಹೊಂದಿದೆ, ಅದೆಂದರೆ ಗೃಹ ಅಥವಾ ರಕ್ಷಣಾ ಇಲಾಖೆ, ಕುಟುಂಬ ಕಲ್ಯಾಣ ಇಲಾಖೆ ಮತ್ತು ವಿದ್ಯಾ ಇಲಾಖೆ. ಅದರ ಅರ್ಥ ಸಮಾಜದ ರಕ್ಷಣೆ, ಒಳಿತು ಮತ್ತು ಉನ್ನತಿಗಾಗಿ ಜನ ನೇಮಿಸಿದ, ಆರಿಸಿದ ಸರಕಾರ ಪರಿಶ್ರಮ ಪಡುವುದು ಎಂದು.
ಜಿಹಾದ್ ಪದದ ಮೂಲ “ಜಹ್ದ್” ಎನ್ನುವ ಅರಬ್ ಪದದಿಂದ. ಅದರ ಅರ್ಥ ಶ್ರಮ ವಹಿಸುವುದು. ಒಬ್ಬ ದುಶ್ಚಟ ಬಿಡಲು, ಕುಡಿತ ನ್=ಬಿಡಲು , ಜೂಜಾಟ ಬಿಡಲು ಪರಿಶ್ರಮಿಸುವ ಹಾಗೆಯೇ ಜಿಹಾದ್ ಎನ್ನುವುದು ಸಹ ಒಳ್ಳೆಯ ನಡತೆಗೆ ಒಬ್ಬ ಮಾಡುವ ಪರಿಶ್ರಮ. ಮೇಲೆ ಹೇಳಿದ ಮೂಲ ಪದದಿಂದ ಬಂದ ಮತ್ತೆರಡು ಪದಗಳೆಂದರೆ ಇಜ್ತಿಹಾದ್, ಮತ್ತು ತಹಜ್ಜುದ್.
ಇಜ್ತಿಹಾದ್ ಎಂದರೆ ಜ್ಞಾನಾರ್ಜನೆ ಎಂದು. ಈ ಇಜ್ತಿಹಾದ್ ನ ಪರಿಣಾಮವೇ ಒಂದು ಸಾವಿರ ವರ್ಷಗಳಿಗೂ ಮೊದಲು ಬಾಗ್ದಾದ್, ಕೈರೋ ಮತ್ತು ಡಮಾಸ್ಕಸ್ ನಗರಗಳಲ್ಲಿ ವಿಶ್ವವಿಖ್ಯಾತ ವಿಶ್ವ ವಿದ್ಯಾಲಯಗಳು ಸ್ಥಾಪಿತ ಗೊಂಡಿದ್ದು ಮತ್ತು ಅಲ್ಲಿಂದಲೆ ಅಂಧಕಾರದಲ್ಲಿದ್ದ ಅಇರೋಪ್ಯ ದೇಶಗಳಿಗೆ ಜ್ಞಾನ ಹರಡಿದ್ದು.
“ಇಜ್ತಿಹಾದ್” ನ ಪರಿಣಾಮವೇ ಇರಬೇಕು ಹಿಂದೂ ವೇದಗಳನ್ನು ಮುಘಲ್ ಚಕ್ರವರ್ತಿ ಷಾಜಹಾನನ ಮಗ “ದಾರಾ ಶಿಕೋ” ಸಂಸ್ಕೃತದಿಂದ ಪರ್ಷಿಯನ್ ಭಾಷೆಗೆ ಭಾಷಾಂತರಿಸಿ ವಿಶ್ವಕ್ಕೆ ಪರಿಚಯಿಸಿದ್ದು. ಆಗಲೇ ವೇದಗಳ ಸೊಗಸು ವಿಶ್ವಕ್ಕೆ ತಿಳಿದಿದ್ದು, ಅದರ ಕಂಪು ಪಸರಿದ್ದು.
“ತಹಜ್ಜುದ್: ಎಂದರೆ ಏಕಾಂತದ ಆರಾಧನೆ: ಗಾಢ ನಿದ್ದೆಯಿಂದ ರಾತ್ರಿ ಎಚ್ಚರವಾದರೆ ಕೂಡಲೇ ಎದ್ದು ನಮಾಜ್ ಮಾಡಬೇಕೆಂದು ನಿಯಮವಿದೆ. ಆ ನಮಾಜ್ ಕಡ್ಡಾಯವಲ್ಲ, ಆದರೆ ಬಹಳಷ್ಟು ಜನ ಈ ತಹಜ್ಜುದ್ ನಮಾಜ್ ಮಾಡುತ್ತಾರೆ. ಏಕೆಂದರೆ ನೀರವ ರಾತ್ರಿಯಲ್ಲಿ ಇಡೀ ವಿಶ್ವ ಗಾಢ ನಿದ್ದೆಯಲ್ಲಿರುವಾಗ ತನ್ನನ್ನು ಸೃಷ್ಟಿಸಿದ ಪ್ರಭುವನ್ನು ನೆನೆದು ಸಾಷ್ಟಾಂಗ ಮಾಡಿದರೆ ಅವನ ಪ್ರಾರ್ಥನೆಗೆ ಉತ್ತರ ಸಿಗುವುದಲ್ಲದೆ ಅವನು ದೇವರಿಗೆ ತೀರಾ ಹತ್ತಿರದವನಾಗುತ್ತಾನೆ ಎನ್ನುವ ನಂಬಿಕೆಯಿಂದ.
ಈಗ ನನ್ನ ಈ ಬರಹವನ್ನ ಅತ್ಯಂತ ಸಂಯಮದಿಂದ ಯಾವುದೇ ಆವೇಶಕ್ಕೆ ಒಳಗಾಗದೆ ನೀವು ಓದುತ್ತಿದ್ದರೆ ನೀವು ಜಿಹಾದ್ ಮಾಡುತ್ತಿದ್ದೀರಿ ಎಂದರ್ಥ. ಅಂದರೆ ಕಾತುರತೆಯನ್ನು ಹತ್ತಿಕ್ಕಿ ಶಾಂತರಾಗಿ ಸಂಯಮದಿಂದ ಮುಂದೆ ಬರೆದಿದ್ದನ್ನು ಓದುವ, ನೀವು ಮಾಡುವ ಯತ್ನ ಅಥವಾ ಪರಿಶ್ರಮ, ಇದೇ ನಿಜವಾದ ಜಿಹಾದ್ ನ ಅರ್ಥ.
ಈ ಮೇಲಿನ ವಿಶ್ಲೇಷಣೆ ನೋಡಿದಾಗ ಜಿಹಾದ್ ಪದಕ್ಕೂ ಹಿಂಸೆ, ಭಯೋತ್ಪಾದನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ನಮಗೆ ತಿಳಿಯುತ್ತದೆ. “ಜುಹ್ದ್” ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವವನ್ನೂ ಕೌಶಲ್ಯವನ್ನೂ, ಉತ್ತಮ ಪಡಿಸಿ ಕೊಳ್ಳಲು ಮಾಡುವ ಪ್ರಾಮಾಣಿಕ ಯತ್ನ, “ಇಜ್ತಿಹಾದ್” ಎಂದರೆ ಆ ಪ್ರಾಮಾಣಿಕ ಯತ್ನದ ಕಡೆ ಜ್ಞಾನದ ಸಹಾಯ ಪಡೆಯುವುದು ಮತ್ತು ತನ್ನ ಪರಿಶ್ರಮ ಮತ್ತು ಜ್ಞಾನಾರ್ಜನೆಯ ಅನ್ವೇಷಣೆಯಲ್ಲಿ ತನ್ನನ್ನು ಸೃಷ್ಟಿಸಿದ ತನ್ನ ಭಗವಂತನ ಸಹಾಯ ಯಾಚಿಸುವುದು ಏಕಾಂತದ ಆರಾಧನೆಯಾದ ” ತಹಜ್ಜುದ್” ಮೂಲಕ. ಹಾಗಾದರೆ ಯುದ್ಧಕ್ಕೆ, ಹೋರಾಟಕ್ಕೆ ಅರಬ್ಬೀ ಏನೆಂದು ಕರೆಯುತ್ತಾರೆ?
ಜಿಹಾದ್ ಎಂದರೆ ಯುದ್ಧ ಹಿಂಸೆ ಮಾತ್ರ ಅಲ್ಲ ಎಂದಾದರೆ ಯುದ್ಧ ಮತ್ತು ಈ ತೆರನಾದ ಸ್ವರಕ್ಷಣೆಯ ಹೋರಾಟಕ್ಕೆ “ಹರ್ಬ್” ಮತ್ತು “ಕತ್ಲ್” ಎಂತಲೂ ಕರೆಯತ್ತಾರೆ. “ಹರ್ಬ್” ಎಂದರೆ ಯುದ್ಧ. “ಕತ್ಲ್” ಎಂದರೆ ಕೊಲೆ ಎಂದು. (ಹಿಂದೀ ಮತ್ತು ಉರ್ದು ಭಾಷೆಯಲ್ಲಿ ಕೂಡಾ ಕತ್ಲ್ ಅಂದರೆ ಕೊಲೆ ಎಂದೂ, ಕಾತಿಲ್ ಎಂದರೆ ಕೊಲೆಗಾರ ಎಂದೂ ಕರೆಯುತ್ತಾರೆ).
ಹಾಗಾದರೆ ಮಾಧ್ಯಮಗಳು ಮತ್ತು ಇಸ್ಲಾಂ ಟೀಕಾಕಾರ ರಿಗೆ ಈ ವಿವರಣೆ ಆಗಲಿ, ಅರಬ್ಬೀ ವ್ಯಾಕರಣದ ಈ ಅಂಶಗಳಾಗಲಿ ತಿಳಿದಿಲ್ಲ ಎಂದಲ್ಲ. ಇಸ್ಲಾಮನ್ನು ದೂಷಿಸುವ ಪರಿಪಾಠ ಇಂದು ನಿನ್ನೆಯದಲ್ಲ. ಕ್ರೈಸ್ತರ ಮೊದಲ ಧರ್ಮ ಯುದ್ಧ ದ (crusade) ನಂತರ ಮತ್ತು ಎರಡನೇ ಧರ್ಮ ಯುದ್ಧದಲ್ಲಿ ಇಂಗ್ಲೆಂಡಿನ ರಾಜ richard the lion heart ಮುಸ್ಲಿಮರ ವಿರುದ್ಧ ನಡೆದ ಜೆರುಸಲೆಂ ಕದನದಲ್ಲಿ ಸೋತ ನಂತರ ಆರಂಭ ಗೊಂಡ ಈ wittch hunting and slandering campaign ನಿರಂತರವಾಗಿ ನಡೆದುಕೊಂಡು ಬಂದು ಸೆಪ್ಟಂಬರ್ ಧಾಳಿಯ ನಂತರ ಆಧುನಿಕ ರೂಪ ಪಡೆದುಕೊಂಡಿತು.
ಜಿಹಾದ್ ಅಂದರೆ ಯುದ್ಧ ಅಲ್ಲವೇ ಅಲ್ಲ ಎಂತಲೋ? ಸ್ವರಕ್ಷಣೆಗೆ ರಾಷ್ಟ್ರಗಳು ಯುದ್ಧ ಸಾರಿವೆ, ಅವನ್ನು ಜಿಹಾದ್ ಎಂದೂ ಕರೆಯಲಾಗಿದೆ. ಆದರೆ ಕಂದಹಾರದ, ಪಾಕಿಸ್ತಾನದ ಗುಡ್ಡ ಗಾಡಿನಲ್ಲಿ ಅವಿತುಕೊಂಡು ನಮ್ಮ ಮೇಲೆ ಮತ್ತು ಅಲ್ಲಿನ ಮುಗ್ಧ ಜನರ ಮೇಲೆ ಆಕ್ರಮಣ ನಡೆಸಿ ರಕ್ತ ಪಾತ ಎಸಗುವ ಮತಾಂಧರು ಜಿಹಾದ್ ಅಲ್ಲ ಮಾಡುತ್ತಿರುವುದು. ಧರ್ಮದ್ರೋಹದ, ಅಮಾನವೀಯ ಕೃತ್ಯ.
ಇಸ್ಲಾಮೀ ರಾಜಕೀಯ ಶಾಸ್ತ್ರದಲ್ಲಿ ಎರಡು ರೀತಿಯ ರಾಷ್ಟ್ರ ಸಮೂಹಗಳ ಉಲ್ಲೇಖವಿದೆ. ಒಂದು, “ದಾರುಲ್ ಹರ್ಬ್”, ಮತ್ತೊಂದು “ದಾರುಲ್ ಇಸ್ಲಾಮ್”. ದಾರುಲ್ ಹರ್ಬ್ ಎಂದರೆ ಶತ್ರು ರಾಷ್ಟ್ರ. ಕಾರಣವಿಲ್ಲದೆ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಪಾಕಿಸ್ತಾನ ಮತ್ತು ಚೀನಾ ದೇಶಗಳಂತೆ. ಇಂಥ ರಾಷ್ಟ್ರಗಳು ದಾರುಲ್ ಹರ್ಬ್ ವ್ಯಾಖ್ಯಾನಕ್ಕೆ ಬರುತ್ತವೆ. ದಾರುಲ್ ಇಸ್ಲಾಂ ಎಂದರೆ ಮುಸ್ಲಿಂ ರಾಷ್ಟ್ರ. ಮುಸ್ಲಿಂ ರಾಷ್ಟ್ರ ಮಾತ್ರವಲ್ಲ ಇಸ್ಲಾಮನ್ನು ಗೌರವಿಸಿ, ಆದರಿಸಿ ಮುಸ್ಲಿಮರ ಆರಾಧನೆಗೆ ಅನುಕೂಲ ಮಾಡಿಕೊಡುವ, ಮಸೀದಿ, ಮದ್ರಸಗಳನ್ನು ಕಟ್ಟಲು ಸಹಾಯ ಮಾಡುವ, ಸರಿಸಮನಾದ ಹಕ್ಕುಗಳನ್ನೂ ನೀಡಿ ಕಾಳಜಿ ವಹಿಸುವ ಮುಸ್ಲಿಮೇತರ ರಾಷ್ಟ್ರವೂ ದಾರುಲ್ ಇಸ್ಲಾಂ ವ್ಯಾಖ್ಯಾನದ ಅಡಿಗೆ ಬರುತ್ತದೆ. ನಮ್ಮ ಭವ್ಯ ಭಾರತ ಈ ರಾಷ್ಟ್ರದ ವ್ಯಾಖ್ಯಾನಕ್ಕೆ ಒಳಪಡುತ್ತದೆ. ಇಲ್ಲಿ ಬಹುಸಂಖ್ಯಾತ ಹಿಂದೂಗಳು ಮುಸ್ಲಿಮರನ್ನು, ಅವರ ಸಂಸ್ಕೃತಿಯನ್ನು ಆದರಿಸುವ ರೀತಿ ನೋಡಿ ಜಗತ್ತಿನ ಇತರೆ ಇಸ್ಲಾಮೀ ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಅಮೋಘ ಭಾರತೀಯ ಸಂಸ್ಕಾರವನ್ನು, ಹೃದಯ ವೈಶಾಲ್ಯತೆಯನ್ನು ಕೊಂಡಾಡಿವೆ. ಹೀಗಿರುವಾಗ ಈ ದೇಶದ ಮೇಲೆ ಶಸ್ತ್ರ ಪ್ರಯೋಗ ಮಾಡುವುದು, ಅಮಾಯಕರನ್ನು ಕೊಲ್ಲುವುದು ಅಕ್ಷಮ್ಯ ಅಪರಾಧ ಮಾತ್ರವಲ್ಲ ಅಂಥ ವಿದ್ರೋಹಿಗಳನ್ನು ನೇರ ಮಾಡಲು ಸಾಧ್ಯವಿಲ್ಲದಿದ್ದರೆ ನೇರವಾಗಿ ನೇಣಿಗೆ ಕಳಿಸಬೇಕಾದ್ದು ನಾಗರೀಕ ಸಮಾಜ ಮಾಡಬೇಕಾದ ಪ್ರಥಮ ಕೆಲಸ.
ಪ್ರಪಂಚದಲ್ಲಿ ಎಲ್ಲಾ ಧರ್ಮಕ್ಕೆ ಸೇರಿದ ಜನರು ಒಂದಲ್ಲ ಒಂದು ರೀತಿಯ ಹೋರಾಟದಲ್ಲಿ ನಿರತರಾಗಿದ್ದನ್ನು ನಾವು ಕಂಡಿದ್ದೇವೆ. ಯೂರೋಪ್ ಖಂಡದಲ್ಲಿ ೬೦ ಲಕ್ಷ ಯೂಹೂದ್ಯರನ್ನು ಕೊಂದಿದ್ದು, gas chamber ಗಳಿಗೆ ಕಳಿಸಿ ನಿರ್ನಾಮ ಮಾಡಿದ್ದು “ನಾಜಿಗಳು”. ನಾಜಿಗಳು ಯಾವ ಧರ್ಮೀಯರೆಂದು ಯಾರಿಗಾದರೂ ತಿಳಿದಿದೆಯೇ? ಬೋಸ್ನಿಯಾದಲ್ಲಿ ೮೦ ಸಾವಿರಕ್ಕೂ ಮುಸ್ಲಿಮರನ್ನು ಕೊಂದವರು “ಸರ್ಬಿಯನ್ನರು”. ಸರ್ಬಿಯನ್ನರು ಯಾವ ಧರ್ಮೀಯರೆಂದು ಎಲ್ಲೂ ಉಲ್ಲೇಖವಿಲ್ಲ. ಶ್ರೀಲಂಕೆಯಲ್ಲಿ ಅಮಾಯಕ ತಮಿಳರ ಹಿಂಸೆ, ಕೊಲೆ ನಡೆಸಿದ್ದು “JVP” ಯವರು, JVP ಯವರು ಯಾವ ಧರ್ಮದರೆಂದು ಉಲ್ಲೇಖವಿಲ್ಲ. ಅದೇ ಶ್ರೀಲಂಕೆಯಲ್ಲಿ ೨೫ ವರ್ಷಗಳಿಗೂ ಹೆಚ್ಚು ಕಾಲ ಬೌದ್ಧರನ್ನೂ, ಅಲ್ಲಿನ ದೊಡ್ಡ ದೊಡ್ಡ ನಾಯಕರನ್ನೂ ಕೊಂದವರು “ವ್ಯಾಘ್ರರು”. ವ್ಯಾಘ್ರರು ಯಾವ ಧರ್ಮೀಯರೆಂದು ಉಲ್ಲೇಖವಿಲ್ಲ. ಇತ್ತೀಚೆಗೆ ಅಮೆರಿಕೆಯಲ್ಲಿ ಅಪಾರ ಆಯುಧ ಶೇಖರಿಸಿ ದೊಡ್ಡ ರೀತಿಯ ಹಿಂಸೆಗೆ ಅಣಿಯಾಗುತ್ತಿದ್ದ ಜನರು “ಹುಟಾರಿ” ಪಂಗಡದವರು. “ಹುಟಾರಿ” ಗಳು ನಂಬಿದ ಧರ್ಮ ಯಾವುದು ಎಂದು ಯಾರಿಗೂ ತಿಳಿದಿಲ್ಲ. ಆದರೆ ಈ ಮಾನದಂಡ ಮುಸ್ಲಿಮರೆಂದು ಕರೆದುಕೊಂಡು ಧರ್ಮಕ್ಕೆ ಕಳಂಕ ತರುವ ಜನರಿಗೆ ನೀಡಲು ಮಾಧ್ಯಮ, ಕುಬುದ್ಧಿಯ ಪಂಡಿತರು ತಯಾರಿಲ್ಲ. ಸಿಕ್ಕಿ ಹಾಕಿಕೊಂಡವನ ಹೆಸರು ಮುಸ್ಲಿಂ ಆದರೆ ಸಾಕು ಟಾಮ್ ಟಾಮ್ ಶುರು; ಮುಸ್ಲಿಮ್ ಭಯೋತ್ಪಾದಕ, ಶಂಕಿತ ಮುಸ್ಲಿಂ ತೀವ್ರವಾದಿ, ಮುಸ್ಲಿಂ ಮೂಲಭೂತವಾದಿ, islamic activist, muslim radical, muslim fundamentalist…………………ಯಾವ ರೀತಿಯ ಲೇಬಲ್ಲುಗಳು ಬೇಕು ನಿಮಗೆ, ಆ ರೀತಿಯ ಲೇಬಲ್ಲುಗಳು ತಯಾರು. ಹಾಗಾದರೆ ಮೇಲೆ ನಾನು ಉದ್ಧರಿಸಿದ ಹತ್ಯಾಕಾಂಡಗಳ ಕರ್ತೃಗಳು ಯಾರು? “ಹುಟಾರಿ”, “ನಾಜಿ” ಎಂದರೆ ಮಂಗಳ ಗ್ರಹದಿಂದಲೋ ಅಥವಾ ಬೇರಾವುದು ಗ್ರಹದಿಂದ ಬಂದಪ್ಪಳಿಸಿದ ಅನರ್ಥವೋ? ವ್ಯಾಘ್ರ ಅಂದರೆ ಒಂದು ರೀತಿಯ ಸೊಂಕೋ, ರೋಗವೋ? JVP ಎಂದರೆ AIDS ರೀತಿಯ ಬ್ಯಾನೆಯೋ? ಸರ್ಬಿಯನ್ ಎಂದರೆ ಪ್ರಳಯವೋ, ಜ್ವಾಲಾಮುಖಿಯೋ? ಏಕೀ ಇಬ್ಬಂದಿತನ? ಲೇಖನಿಗೆ ದ್ರೋಹ ಬಗೆಯುವ ಪರಿಪಾಠ? ಲೇಖನಿ ಹುತಾತ್ಮನ ರಕ್ತಕ್ಕಿಂತಲೂ ಪವಿತ್ರ ಅಂತಾರೆ. ಆದರೆ ಮೇಲೆ ಹೇಳಿದ ಉದಾಹರಣೆಗಳಲ್ಲಿ ಎಷ್ಟೊಂದು ಪಾವಿತ್ರ್ಯ ಅವಿತುಕೊಂಡಿದೆ ನೋಡಿ.
ಜನರನ್ನು ಲೇಬಲ್ ಅಡಿಯಲ್ಲಿ ವ್ಯಾಖ್ಯಾನಿಸಿ ದೂರ ಮಾಡುವುದಕ್ಕಿಂತ ಒಳ್ಳೆಯ ಕೆಲಸ ಸಂವಾದದ ಪ್ರಕ್ರಿಯೆ ಶುರು ಮಾಡುವುದು. ಜನರ ಮಧ್ಯೆ ಕಂದಕ ತೋಡಲೆಂದೇ ಅವತರಿಸಿದ ಸಮೂಹವನ್ನು ನಾಗರೀಕ ಸಮಾಜ ದೂರ ಮಾಡಿ ಎಲ್ಲರೂ ಮೇಲೆ ಕೂತ ಭಗವಂತನ ಮಕ್ಕಳು, ಎಲ್ಲರಿಗೂ ಸರಿಸಮನವಾಗಿ ವಿಶಾಲವಾದ ಭೂಮಿಯನ್ನು ಹರಡಿ ತಾರತಮ್ಯ ಮಾಡದೆ ಗಾಳಿ ಬೆಳಕು ನೀರು ಒದಗಿಸುತ್ತಿರುವ ಮಹಾ ಪ್ರಭುವಿನ ಮಕ್ಕಳೆಂದು ಭಾವಿಸಿ ಬದುಕನ್ನು ಸಾಗಿಸುವುದು. ಹಕ್ಕಿಯಂತೆ ಹಾರಲು ಕಲಿತ, ಮೀನಿನನಂತೆ ಈಜಲು ಕಲಿತ ಮನುಷ್ಯ ಮನುಷ್ಯನ ರೀತಿ ಬಾಳಲು ಕಲಿಯುವುದನ್ನು ಕಲಿಯುವುದು ಅತ್ಯವಶ್ಯಕ. man should “relearn” how to live like a man.
ಹಸಿರು, ಬಿಳಿ, ಕೇಸರಿ
ನಮ್ಮ ಹೆಮ್ಮೆಯ ಧ್ವಜದ ವರ್ಣಗಳು ಕೇಸರಿ ಬಿಳಿ ಹಸಿರು. ಈ ವರ್ಣಗಳು ತನ್ನೊಡಲಲ್ಲಿ ಕಾಣುವಂತೆ ಇಟ್ಟುಕೊಂಡ ನೀಲಿ ಚಕ್ರ ನಮ್ಮ ಪ್ರಗತಿಗೆ ಸಾಕ್ಷಿ. ಹೀಗೆ ಕೇಸರಿ ಬಿಳಿ ಹಸಿರು ತಲೆಕೆಳಗಾಗಿ ಹಸಿರು ಬಿಳಿ ಕೇಸರಿಯಾದಾಗ ವರ್ಣಗಳು ಕಂಗೆಡದಿದ್ದರೂ ನಾವಂತೂ ಖಂಡಿತಾ ಒಂದು ಕ್ಷಣ ಗರ ಬಡಿ ದವರಂತೆ ನಿಂತು ಬಿಡುತ್ತೇವೆ ಲೆಕ್ಕಾಚಾರ ಹಾಕುತ್ತಾ ಇದು ಶತ್ರುವಿನ ಹುನ್ನಾರವೋ, ಕುಹಕವೋ ಅಥವಾ ಎಂದಿಗೂ ಆಗಬಾರದ ಪ್ರಮಾದವೋ ಎಂದು. ಮೊನ್ನೆ ನಮ್ಮ ಗೃಹ ಮಂತ್ರಿಗಳು ಪಾಕಿಸ್ತಾನಕ್ಕೆ ಹೋಗಿ ಬಂದರು. ನಮ್ಮ ಆಂತರಿಕ ವಿಷಯಗಳಲ್ಲಿ ತಲೆ ಹಾಕಬೇಡಿ, ನಮ್ಮ ಬೀದಿ, ಹೋಟೆಲ್, ರೈಲು ನಿಲ್ದಾಣಗಳಲ್ಲಿ ನೆತ್ತರ ಹರಿಸಬೇಡಿ ಎಂದು ಎಷ್ಟೇ ಕೂಗಿಕೊಂಡರೂ ಕೇಳಿಸದಂತೆ ನಟಿಸುವ ಪಾಕಿಗೆ ಅವರಿರುವ ಅಡ್ಡಾ ಕ್ಕೆ ಹೋಗಿ ಬುದ್ಧಿವಾದ ಹೇಳಲು ಚಿದಂಬರಮ್ ಸಾಹೇಬರು ಇಸ್ಲಾಮಾಬಾದ್ ತಲುಪಿದರು ಅಲ್ಲಿನ ಗೃಹ ಮಂತ್ರಿ ರೆಹಮಾನ್ ಮಲಿಕ್ ರೊಂದಿಗೆ ಮಾತುಕತೆಗೆಂದು. ಮಾತುಕತೆಗೆ ಕೂತ ಕೂಡಲೇ ಪತಾಕೆ ಉಲ್ಟಾ ಆದದ್ದನ್ನು ಗಮನಿಸಿದ ಚಿದಂಬರಮ್ ಅದನ್ನು ಸರಿಪಡಿಸಿದರು. ಆದರೆ ಮಾಧ್ಯಮಗಳ ಕಣ್ಣಿಗೆ ಅದಾಗಲೇ ಬಿದ್ದಾಗಿತ್ತು. ಮಾಧ್ಯಮಗಳಿಗೂ ಬೇಕಿದ್ದು ಇಂಥ ಎಡವಟ್ಟು ಗಳೇ. ಪಾಕ್ ಏನು ಮಾಡಿದರೂ ಸುದ್ದಿಯೇ. ಅದರಲ್ಲೂ ಭಾರತೀಯರು ಒಳಗೊಂಡ ಯಾವುದೇ ವಿಷಯಾದರೂ, ಭೇಟಿಯಾದರೂ ಹೆಚ್ಚು ಹೇಳುವುದು ಬೇಕಿಲ್ಲ. ಅಷ್ಟು ಚೆಂದ ನಮ್ಮೀರ್ವರ ಸಂಬಂಧ. ಮೂರು ದಶಕಗಳ ನಂತರ ಭಾರತದ ಗೃಹ ಮಂತ್ರಿ ಪಾಕ್ ನೆಲದ ಮೇಲೆ ಎಂದಾಗಲೇ ತಿಳಿಯುತ್ತದೆ ಸಂಬಂಧ ಎಷ್ಟು ತಿಳಿಯಾಗಿದೆ ಎಂದು. ಪಾಕ್ ಅದೇನು ಮಾಡಿದರೂ ತಪ್ಪೇ ಏಕಾಗುತ್ತದೆ ಎನ್ನುವುದೇ ಕಾಡುವ ಪ್ರಶ್ನೆ.
ಸರಿ ರಾಜಕೀಯ ಬದಿಗಿಟ್ಟು ಬಾವುಟಕ್ಕೆ ಬರೋಣ. ಬಾವುಟ ಲಾಗ ಹಾಕಿ ಉಲ್ಟಾ ಆಗುವ ಪರಿಸ್ಥಿತಿ ಇದೇ ಮೊದಲಲ್ಲ. ಶಿಕಾಗೋ ನಗರದ ಡೇಲಿ ಪ್ಲಾಜ ದಲ್ಲೂ ಒಮ್ಮೆ ಇದು ಸಂಭವಿಸಿತು.
೨೦೦೮ ರಲ್ಲಿ ಭಾರತ ಆಸ್ಟ್ರೇಲಿಯಾ ನಡುವಿನ ಮೊಹಾಲಿಯಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆಯೂ ಇದೇ ತೆರನಾದ ಪ್ರಮಾದ.
ಭಯೋತ್ಪಾದನೆಯ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ತಾರೆ ಕಿಂ ಶರ್ಮಾ ಉಲ್ಟಾ ಆದ ಬಾವುಟದ ಚಿತ್ರ ತನ್ನ ಅಂಗಿ ಮೇಲೆ ಪ್ರದರ್ಶಿಸಿದ್ದರು.
ದಿಲ್ಲಿ ಪಬ್ಲಿಕ್ ಶಾಲೆಯಲ್ಲೂ ಇಂಥದ್ದೇ ಒಂದು ಘಟನೆ ನಡೆದು ಗಮನಕ್ಕೆ ತಂದವನ ಮೇಲೆಯೇ ಹರಿಹಾಯ್ದರು ಅಲ್ಲಿನ ಪ್ರಾಂಶುಪಾಲೆ. ನಿನ್ನಂಥ ದೇಶಭಕ್ತರನ್ನು ಬಹಳ ಕಂಡಿದ್ದೇನೆ ಎಂದು ತಮ್ಮ ಕಛೇರಿಯಿಂದ ಅಟ್ಟಿದರು ಬಡಪಾಯಿಯನ್ನು. ಆತ ಕೋರ್ಟು ಕಛೇರಿ ಎಂದು ಒಂದೆರಡು ದಿನ ಅಲೆದಾಡಿ ಸುಮ್ಮನಾದ.
ನನ್ನ ನೆನಪು ಸರಿಯಿದ್ದರೆ ೧೯೮೮ ರಲ್ಲಿ ಇಂಥದ್ದೇ ಒಂದು ಘಟನೆ ನಮ್ಮ ದೇಶದಲ್ಲೂ, ಅದರಲ್ಲೂ ಕರ್ನಾಟಕದಲ್ಲಿ. ನಮ್ಮ ಖಾದಿ ಪ್ರಭುಗಳು ಕೂರುವ, ರಾಜ್ಯದ ಹಿತಾಸಕ್ತಿಗೆಂದು ಪರಸ್ಪರ ಕಚ್ಚಾಡುವ ವಿಧಾನ ಸೌಧದ ಮೇಲೆ ಸ್ವಾತಂತ್ರ್ಯ ದಿನಾಚರಣೆ ದಿನ ಏರಿತು ಹಾರಿತು ನೋಡು ನಮ್ಮ ಬಾವುಟ, ಅದೂ ತಲೆಕೆಳಗಾಗಿ. ತಮಾಷೆಯಲ್ಲ, ಸತ್ಯ ಘಟನೆ ಇದು. ಇದನ್ನು ಗಮನಿಸಿದ ಯಾರೋ ಒಬ್ಬರು ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಫೋನಾಯಿಸಿ ನಿಮಗೊಂದು ಬಿಸಿ ಬಿಸಿ ಮಸಾಲೆ ದೋಸೆಯಂಥ ಸುದ್ದಿ ಇದೆ ಬನ್ನಿ ಕ್ಯಾಮರಾದೊಂದಿಗೆ ಎಂದು ಆಹ್ವಾನ ಕಳಿಸಿದರು. ದೌಡಾಯಿಸಿ ಬಂದ ಪತ್ರಕರ್ತನಿಗೆ ತನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಪ್ರಭುಗಳು ಕೂರುವ ಸ್ಥಳದಲ್ಲಿ ಪ್ರಮಾದವೇ, ಹ ಹಾ ಎನ್ನುತ್ತ ಮನ ಬಂದಂತೆ ಕ್ಲಿಕ್ಕಿಸಿ ಹಾಕಿ ಬಿಟ್ಟ ಮಾರನೆ ದಿನದ ಪತ್ರಿಕೆಯ ಮುಖ ಪುಟದಲ್ಲಿ. ಅದರ ಕೆಳಗೆ ಒಂದು ಶೀರ್ಷಿಕೆ. ಇದು ನಮ್ಮ ಬಾವುಟವೇ, ಸಂಶಯ ಬೇಡ, ಸ್ವಲ್ಪ ಉಲ್ಟಾ ಆಗಿದೆ ಅಷ್ಟೇ ಎಂದು. ಸರಕಾರೀ ನೌಕರನ ಕಛೇರಿಯಲ್ಲಿ ಇಂಥದ್ದು ನಡೆದಿದ್ದರೆ ಸಂಬಂಧಿಸಿ ದವನನ್ನು ಎತ್ತಂಗಡಿ ಮಾಡಬಹುದಿತ್ತು, ಎತ್ತಂಗಡಿ ಮಾಡುವವನ ಕಛೇರಿಯಲ್ಲೇ ಇಂಥ ಘಟನೆ ನಡೆದರೆ ಏನು ಶಿಕ್ಷೆ? ಭಾರತ ಖಂಡದ ಚಕ್ರವರ್ತಿ ಅಕ್ಬರನ ಗಡ್ಡ ಎಳೆದವನಿಗೆ ಸಿಕ್ಕ ಶಿಕ್ಷೆಯೇ?
ಬಾವುಟ ಹಾರಿಸುವ ಬಗ್ಗೆ ಹೀಗೆಂದು ನಮ್ಮ ನಿಯಮ. “the flag shall not be intentionally displayed with the ‘saffron’ down.”
