ಕೋಶ ಓದು, ಇಲ್ಲಾ ದೇಶ ಸುತ್ತು

 ಕೋಶ ಓದು ಇಲ್ಲಾ ದೇಶ ಬಿಡು….ಹಾಂ, ಇದೇನಿದು, ನನ್ನ ಕಣ್ಣುಗಳು ನನ್ನನ್ನು ಮೋಸ ಮಾಡುತ್ತಿಲ್ಲವಷ್ಟೇ? ಶೀರ್ಷಿಕೆ ಯಲ್ಲಿ “ಕೋಶ ಓದು, ದೇಶ ಸುತ್ತು” ಎಂದಿರುವಾಗ ಲೇಖನದ ಆರಂಭದಲ್ಲೇ ಅದ್ಹೇಗೆ ಬದಲಾಗಿ ಬಿಟ್ಟಿತು ಶೀಷಿಕೆ? ರಾಜಕಾರಣಿ ತನ್ನ ಮಾತುಗಳನ್ನು ಪಲ್ಟಾಯಿಸುವ ರೀತಿ ಎಂದು ಯೋಚಿಸಿದಿರಾ?

ಬ್ಲಾಗ್ ಒಂದರಲ್ಲಿ ಬಂದ ಲೇಖನದಲ್ಲಿ ಈ ಕುರಿತು ಓದಿದೆ. ಕೋಲಾರದಲ್ಲಿ, ಸಮಾರಂಭ ವೊಂದರಲ್ಲಿ ಮಾನ್ಯ ಸಚಿವರು “ಭಗವದ್ಗೀತೆ ಬೇಡವಾದವರು ಭಾರತ ಬಿಟ್ಟು ತೊಲಗಿ” ಎಂದು ಗುಡುಗಿದರು ಎಂದು ಬರೆದಿದ್ದರು. ಸನ್ಮಾನ್ಯ ಶಿಕ್ಷಣ ಮಂತ್ರಿಗಳೇ ಹೀಗೆ ಹೇಳಿದಾಗ ಸಮಾಜ ಯಾವ ರೀತಿ ಪ್ರತಿಸ್ಪಂದಿಸಬಹುದು. ಸಮಾಜದಲ್ಲಿ ವಿಷಬೀಜ ಬಿತ್ತಲೆಂದೇ ಹುಟ್ಟಿ ಕೊಂಡ ಮಾಧ್ಯಮಗಳು ಸಚಿವರ ಈ rhetoric ನ ಎಳೆ ಹಿಡಿದು ಕೊಂಡು ಸಮಾಜದಲ್ಲಿ ಮತ್ತಷ್ಟು ಗದ್ದಲ ಗೊಂದಲಕ್ಕೆ ಕಾರಣರಾಗಲಾರರೆ? ಅತ್ಯಂತ ಜವಾಬ್ದಾರೀ ಹುದ್ದೆಯಲ್ಲಿರುವವರು, ಅದರಲ್ಲೂ ಜನರಿಂದ ನೇರವಾಗಿ ಆರಿಸಲ್ಪಟ್ಟವರ ಬಾಯಲ್ಲೇ ಇಂಥ ಮಾತುಗಳು ಉದುರಿದರೆ ಜನಸಾಮಾನ್ಯರ ಪಾಡೇನು?

ಕೋಶ ಓದು, ದೇಶ ಸುತ್ತು ಹಳೇ ಕಾಲದ ಮುತ್ಸದ್ದಿಗಳು, ಹಿರಿಯರು ಹೇಳಿದ್ದು. ಈ ಮಾತುಗಳಲ್ಲಿ ಅನುಭವ ತುಂಬಿ ತುಳುಕುತ್ತದೆ. ಕೋಶ ಓದು ಇಲ್ಲಾ ದೇಶ ಬಿಡು ಎನ್ನುವುದು ಆಧುನಿಕ ಮನೋಭಾವದ ಹಿರಿಯರು. ಇಂಟರ್ನೆಟ್ ಯುಗದ ಪ್ರಾಡಕ್ಟ್ ಗಳು. ಒಂದರಲ್ಲಿ ಅನುಭವ ತುಂಬಿ ತುಳುಕುತ್ತಿದ್ದರೆ, ಮತ್ತೊಂದರಲ್ಲಿ ಅಸಹನೆಯ ಕೊಡ ತುಂಬಿ ತುಳುಕುತ್ತಿರುತ್ತದೆ. ನಮ್ಮ ಪ್ರಯಾಣ ಯಾವ ಕಡೆ ಎಂದು ಅರಿಯದೆ ಜನ ಸಾಮಾನ್ಯ ಕಕ್ಕಾಬಿಕ್ಕಿಯಾಗುತ್ತಾನೆ ಈ ಮಾತುಗಳನ್ನು ಕೇಳಿ. ಇನ್ನು ಶಾಲೆಗೆ ಹೋಗುವ ಮಕ್ಕಳ ಸ್ಥಿತಿ? ವಿದ್ಯಾರ್ಥಿಯೊಬ್ಬ ಶಿಕ್ಷಕನಲ್ಲಿ ತನ್ನ ಅಳಲನ್ನು ತೋಡಿ ಕೊಳ್ಳುತ್ತಾನೆ. ತನಗೆ ಆಂಗ್ಲ ಬಾಷೆ ತುಂಬಾ ಕಷ್ಟ ಆಗ್ತಾಯಿದೆ, ತಲೆಗೆ ಏನೂ ಹೋಗೋದಿಲ್ಲ ಎಂದು. ಅದಕ್ಕೆ ಶಿಕ್ಷಕ ತಲೆಗೆ ಹೋಗದಿದ್ದರೆ ಶಾಲೆ ಬಿಡು ಅಥವಾ ಊರು ಬಿಡು ಎಂದು terrorize ಮಾಡಬಾರದು. ಅಸಹಾಯಕನಾಗಿ ಬಂದ ಶಿಷ್ಯನ ತಲೆ ನೇವರಿಸಿ ಇನ್ನಷ್ಟು ಶ್ರಮ ಪಡಲು ಹೇಳಬೇಕು ಅಥವಾ ಬೇರಾವುದಾದರೂ ಪರಿಹಾರ ಸೂಚಿಸಿ ಅವನಲ್ಲಿ ವಿದ್ಯೆ ಬಗ್ಗೆ ಆಸಕ್ತಿ ಮೂಡಿಸಬೇಕು. ಅದು ಬಿಟ್ಟು ಅವನನ್ನು ಗದರಿಸಿ ಬೆದರಿಸಿ ದಾರಿಗೆ ತರಲು ನೋಡಿದರೆ ಆಗದ ಮಾತು. ಶಿಕ್ಷಕ ರಿಯಾಕ್ಟಿವ್ ಆಗಬಾರದು. compassionate ಆಗಬೇಕು.

“ಈ ಲೋಕದಲ್ಲಾಗಲೀ, ಬೇರೆಲ್ಲೇ ಆಗಲಿ ಸಂಶಯ ಪಡುವವನಿಗೆ ಸಂತೋಷ ಸಿಗದು”

“ಕೋಪದ ಕಾರಣ ಭ್ರಮೆ ಹುಟ್ಟುತ್ತದೆ. ಭ್ರಮೆಯ ಕಾರಣ ಮನಸ್ಸು ಗೊಂದಲಗೊಳ್ಳುತ್ತದೆ. ಮನಸ್ಸು ಗೊಂದಲ ಗೊಂಡಾಗ ತರ್ಕ ನಾಶವಾಗುತ್ತದೆ. ತರ್ಕ ನಾಶವಾದಾಗ ಮನುಷ್ಯ ಬೀಳುತ್ತಾನೆ”

ಇಂಥ ನುಡಿ ಮುತ್ತುಗಳನ್ನು ನೀಡಿದ ಭಗವದ್ಗೀತೆಯ ಅಧ್ಯಯನಕ್ಕೆ ಈ ರೀತಿಯ ಧಮಕಿ ಕೂಡಿದ “ಉತ್ತೇಜನ” ವೇ ಹಿರಿಯರಿಂದ? – ಗೀತೆ ಗೀತೆಯಲ್ಲಿರುವ ಇಂಥ ಸಂದೇಶಗಳನ್ನು ಜನರಿಗೆ ತಿಳಿ ಹೇಳುವುದು ತರವೋ ಅಥವಾ ಇದನ್ನು ಬೇಡ ಎನ್ನುವವರು ದೇಶ ಬಿಟ್ಟು ತೊಲಗಲಿ ಎಂದು ಗೀತೆಯಿಂದ ಜನರನ್ನು ದೂರ ಓಡಿಸುವುದು ತರವೋ? ಸಚಿವರ ಈ ಹೇಳಿಕೆಯ ಔಚಿತ್ಯವನ್ನು ಜನರು ಪ್ರಶ್ನಿಸಬೇಕು. ಶಾಲೆಗಳಲ್ಲಿ ಗೀತೆ, ಕುರಾನ್, ಬೈಬಲ್, ಗುರುಗ್ರಂಥ್ ಸಾಹಿಬ್, ಬುದ್ಧರ ತ್ರಿಪಿಟಕ, ಪಾರ್ಸಿಗಳ ‘ಜೆಂದ್ ಅವೆಸ್ತಾ’, ಯಹೂದ್ಯರ ‘ತೋರಾ’ ಹೀಗೆ ಹೇಳಿಕೊಡುತ್ತಾ ಕೂತರೆ ಗಣಿತ, ವಿಜ್ಞಾನ, ಸಮಾಜ ಶಾಸ್ತ್ರಗಳನ್ನು ಹೇಳಿಕೊಡಲು ಸಮಯ ಇರುವುದೇ ಎಂದು ಪ್ರಶ್ನಿಸುವವರಿದ್ದಾರೆ. ಪರಿಹಾರವಾಗಿ ಎಲ್ಲಾ ಧರ್ಮಗಳ ಸಾರವನ್ನು ಹೇಳಿಕೊಡುವ ಒಂದು ಪುಸ್ತಕದ ರಚನೆಯಾಗಲಿ. ಗೀತೆ, ಕುರಾನ್, ಬೈಬಲ್ ಮುಂತಾದವುಗಳ ಸುವರ್ಣ ವಾಕ್ಯಗಳು ಅದರಲ್ಲಿ ಸೇರಿರಲಿ. ವಿದ್ಯಾರ್ಥಿಗಳು ನಾವೆಂಥ ಸೊಗಸಾದ ಬಹು ಸಂಸ್ಕೃತಿ ಸಮಾಜದಲ್ಲಿ ಬದುಕುತ್ತಿದ್ದೇವೆ ಎನ್ನೋ ಭಾವನೆ ಬೆಳೆಸಿಕೊಳ್ಳಲಿ.

ಸುನ್ನತಿ ಕೂಡದು ಎನ್ನುವ ಸ್ಯಾನ್ ಫ್ರಾನ್ಸಿಸ್ಕೋ

ಅಮೆರಿಕೆಯ ಸ್ಯಾನ್ ಫ್ರಾನ್ಸಿಸ್ಕೋ ನಗರ ದಲ್ಲಿ ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ “ಸುನ್ನತಿ” ಯನ್ನು ನಿಷೇಧಿಸುವ ಕುರಿತು ಜನಾಭಿಪ್ರಾಯ ಕೇಳಲಾಗುತ್ತದೆ. ಪುರುಷರ ಗುಪ್ತಾಂಗದ ತುದಿಯ ಚರ್ಮವನ್ನು ಕಳೆಯುವ ಈ ಆಚರಣೆ ಕ್ರೈಸ್ತರಲ್ಲಿ ವ್ಯಾಪಕವಾಗಿಯೂ, ಯಹೂದ್ಯ ಮತ್ತು ಇಸ್ಲಾಂ ಧರ್ಮೀಯರಲ್ಲಿ ಕಡ್ದಾ ಯವಾಗಿಯೂ ಆಚರಿಸಲ್ಪಡುತ್ತದೆ.

ಅಮೆರಿಕೆಯಲ್ಲಿ ಶೇಕಡ ಎಂಭತ್ತು ಅಮೆರಿಕನ್ನರು ಸುನ್ನತಿ ಮಾಡಿಸಿಕೊಂಡಿರುತ್ತಾರೆ. ಕ್ರೈಸ್ತ ಧರ್ಮ ಪಾಲಿಸಲ್ಪಡುವ ಫಿಲಿಪ್ಪೀನ್ಸ್ ನಂಥ ದೇಶಗಳಲ್ಲಿ ಎಲ್ಲಾ ಪುರುಷರೂ ಸುನ್ನತಿ ಮಾಡಿಸಿ ಕೊಂಡಿರುತ್ತಾರೆ. ಮತ್ತು ಸುನ್ನತಿ ಮಾಡಿಸಿಕೊಂಡವ ಪರಿಪೂರ್ಣ ಪುರುಷ ಎಂದು ಹೆಮ್ಮೆ ಪಡುತ್ತಾರೆ. ಇಸ್ಲಾಂ ಧರ್ಮದ ಪ್ರಭಾವದ ಕಾರಣ ಫಿಲಿಪ್ಪಿನ್ಸ್ ನಲ್ಲಿ ಸುನ್ನತಿ ಪದ್ಧತಿ ಜಾರಿಗೆ ಬಂದಿತು ಎಂದು ಅಲ್ಲಿನ ಇತಿಹಾಸಕಾರರೊಬ್ಬರ ಅಭಿಪ್ರಾಯ.

ಇಸ್ಲಾಂನ ಪವಿತ್ರ ಗ್ರಂಥ ‘ದಿವ್ಯ ಕುರಾನ್’ ನಲ್ಲಿ ಇದರ ಉಲ್ಲೇಖವಿಲ್ಲದಿದ್ದರೂ ಇಸ್ಲಾಂ ಧರ್ಮ ಕ್ರೈಸ್ತ ಮತ್ತು ಯಹೂದ್ಯ ಧರ್ಮಗಳ ತರಹ ಅಬ್ರಹಾಮಿಕ್ ಧರ್ಮವಾದ್ದರಿಂದ ಮತ್ತು ಪ್ರವಾದಿ ಇಬ್ರಾಹಿಂ (ಅಬ್ರಹಾಂ) ಈ ಮೂರೂ ಧರ್ಮಗಳವರ ಪಿತಾಮಹರಾದ್ದರಿಂದ ಮುಸ್ಲಿಮರೂ ಕಡ್ಡಾಯವಾಗಿ ಸುನ್ನತಿ ಮಾಡಿಸಿ ಕೊಳ್ಳುತ್ತಾರೆ. ಅಷ್ಟೇ ಅಲ್ಲ, ಕುರಾನಿನಲ್ಲಿ ಆ ಪ್ರಸ್ತಾಪ ಇಲ್ಲದಿದ್ದರೂ ಪ್ರವಾದಿಗಳು ವಿಶ್ವಾಸಿಗಳಿಗೆ ಇರಲೇ ಬೇಕಾದ “ಫಿತ್ರ” ಎಂದು ಕರೆಯಲ್ಪಡುವ ಶುಚಿತ್ವಕ್ಕೆ ಸಂಬಂಧಿಸಿದ “ನೈಜ” (natural) ಅಭ್ಯಾಸ  ಅನುಸರಿಸಲೇಬೇಕು ಎಂದು ನಿರ್ದೇಶಿಸಿದ್ದಾರೆ. ಅವು, ೧. ಸುನ್ನತಿ ೨. ಗುಪ್ತಾಂಗದ ಸುತ್ತ ಶುಚಿ ೩. ಮೀಸೆ ಚಿಕ್ಕದಾಗಿ ಕತ್ತರಿಸುವುದು, ೪. ಉಗುರು ಕತ್ತರಿಸುವುದು ಮತ್ತು ೫. ಕಂಕುಳಿನ ಭಾಗದ ಕೂದಲನ್ನು ತೆಗೆಯುವುದು.     

ಸುನ್ನತಿಯನ್ನು ಕೇವಲ ಧಾರ್ಮಿಕ ಕಟ್ಟಳೆಯಾಗಿ ಮಾತ್ರ ಮಾಡಿಸಿ ಕೊಳ್ಳದೆ ಶುಚಿತ್ವ ಮತ್ತು ಲೈಂಗಿಕ ಆರೋಗ್ಯದ ದೃಷ್ಟಿಯಿಂದಲೂ ಮಾಡಿಸಿಕೊಳ್ಳಲಾಗುತ್ತದೆ. ಇಸ್ಲಾಂ ಧರ್ಮೀಯರಿಗೆ ಪ್ರತೀದಿನ ಕಡ್ಡಾಯವಾದ ಐದು ಹೊತ್ತಿನ ಆರಾಧನಾ ನಿರ್ವಹಣೆಗೆ ದೈಹಿಕ ಶುಚಿತ್ವದೊಂದಿಗೆ “ಶೌಚ” ಶುಚಿತ್ವ ಇರುವುದೂ ಅತೀ ಅವಶ್ಯ. ಮೂತ್ರ ವಿಸರ್ಜನೆ ನಂತರ ನೀರಿನೊಂದಿಗೆ ಶುಚಿ ಮಾಡಿಕೊಳ್ಳಲೇ ಬೇಕು, ಹಾಗೆ ಯಾವುದಾದರೂ ಕಾರಣಕ್ಕೆ ಶುಚಿ ಮಾಡಿ ಕೊಳ್ಳಲು ಆಗದ ಸಂದರ್ಭದಲ್ಲಿ ಮಸ್ಜಿದ್ ಒಳಗೆ ಪ್ರವೇಶಿಸುವಂತಿಲ್ಲ. ಹಾಗೆಯೆ ಸುನ್ನತಿ ಮಾಡಿಸಿಕೊಳ್ಳದಿದ್ದವರು ನಮಾಜ್ ಮಾಡುವುದಾಗಲೀ, ಮಸ್ಜಿದ್ ಒಳಗೆ ಪ್ರವೇಶಿಸುವುದಾಗಲೀ ಕೂಡದು. ಸುನ್ನತಿ ಮಾಡಿಕೊಳ್ಳದ, ಶೌಚ ಶುಚಿತ್ವ ಅನುಸರಿಸದವರು ಪವಿತ್ರ ಕುರಾನ್ ಸಹ ಮುಟ್ಟುವಂತಿಲ್ಲ ಎಂದು ಸಂಪ್ರದಾಯವಾದಿಗಳ ನಿಲುವು.

ಈಗ ಇದಕ್ಕೆ ಚ್ಯುತಿ ಅಮೆರಿಕೆಯ ರಾಜ್ಯವೊಂದರಲ್ಲಿ. ಮುಸ್ಲಿಂ ವಿರೋಧಿ ಅಥವಾ Islamophobia ಕಾರಣ ಈ ನಿಯಮವನ್ನು ಜಾರಿಗೊಳಿಸುತ್ತಿಲ್ಲವಾದರೂ ಬಹಳಷ್ಟು ಸಂಖ್ಯೆಯಲ್ಲಿರುವ ಮುಸ್ಲಿಮರ ವಿರೋಧ ಈ ನಿಯಮಕ್ಕೆ ಬರುತ್ತಿದೆ. ಕ್ರೈಸ್ತರೂ ಮತ್ತು ಯಹೂದ್ಯರೂ ಈ ಕ್ರಮವನ್ನು ಟೀಕಿಸಿ ಇದು ಅಮೆರಿಕೆಯ first amendment ನಲ್ಲಿ ನೀಡಲಾಗಿರುವ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ವಾದಿಸುತ್ತಿದ್ದಾರೆ.  

ಅಮೆರಿಕೆಯಲ್ಲಿ ಸುನ್ನತಿಗೆ ವಿರೋಧ ಏಕೆಂದರೆ ಅದು ಅಪಾಯಕಾರಿ ಎಂದು. ಮುಂದೊಗಲನ್ನು ಕತ್ತರಿಸುವ ಸಮಯ ಶರೀರಕ್ಕೆ ಅಪಾಯ ಸಂಭವಿಸಬಹುದು, ಸೋಂಕು ತಗುಲಬಹುದು ಎನ್ನುವ ಭಯ. ಸುನ್ನಿ ಮಾಡಿಸಿ ಕೊಂಡ ಪುರುಷರಿಗೆ ಲೈಂಗಿಕ ರೋಗಗಳು ತಗಲುವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ಅಧ್ಯಯನಗಳ ಅಭಿಪ್ರಾಯ. ಹಾಗೆಯೇ ಸ್ತ್ರೀಯರಿಗೂ ಲೈಂಗಿಕ ರೋಗ ತಗಲುವ ಅಪಾಯ ಇರುವುದಿಲ್ಲ. ಕೆಲವು ತೆರನಾದ ಕ್ಯಾನ್ಸರ್ ರೋಗಗಳಿಂದಲೂ ಪುರುಷರೂ ಮತ್ತು ಸ್ತ್ರೀಯರು ಸುರಕ್ಷಿತ ಎನ್ನುವುದು  ವೈದ್ಯರುಗಳ ಅಭಿಪ್ರಾಯ.

ಸುನ್ನತಿ ಶಸ್ತ್ರ ಚಿಕಿತ್ಸೆ ಅತ್ಯಂತ ವೇದನೆಯಿಂದ ಕೂಡಿದ್ದು, ಎಳೇ ಮಕ್ಕಳ ಮೇಲೆ ಇದನ್ನು ಅವರ ಸಮ್ಮತಿಯಿಲ್ಲದೆ ಹೇರಲಾಗುವುದರಿಂದ ಇದು ಕೂಡದು ಎನ್ನುವುದು ವಿರೋಧಿಗಳ ನಿಲುವು. ಸುನ್ನತಿ ಸಹಿಸಲಾಗದ  ನೋವನ್ನು ನೀಡುವುದಿಲ್ಲ ಎಂದು ಇದನ್ನು ಮಾಡಿಸಿ ಕೊಂಡ ಕೋಟ್ಯಂತರ ಜನರ ಅಭಿಪ್ರಾಯ. ಹದಿನೈದು ಇಪ್ಪತ್ತು ವರ್ಷಗಳ ಮೊದಲು ಅರಿವಳಿಕೆ ನೀಡದೆ ಹೆಚ್ಚಾಗಿ ಕ್ಷೌರಿಕರು ಸುನ್ನತಿ ಮಾಡುತ್ತಿದ್ದರು. ಈಗ ವೈದ್ಯಕೀಯವಾಗಿ ಅರಿವಳಿಕೆ ನೀಡಿ ಯಾವುದೇ ತೆರನಾದ ಸೊಂಕಾಗಲೀ, ನೋವಾಗಲೀ ಆಗದಂತೆ ಸುನ್ನತಿಯನ್ನು ಮಾಡುತ್ತಾರೆ.

ಯಹೂದ್ಯರಲ್ಲಿ ಸುನ್ನತಿ ಮಾಡಿಸಿ ಕೊಳ್ಳುವುದು ದೇವರ ಮತ್ತು ಅಬ್ರಹಾಮರ ನಡುವಿನ ಒಪ್ಪಂದದ ಆಚರಣೆಯಾಗಿ. ಯಹೂದ್ಯರು ಗಂಡು ಮಗು ಜನಿಸಿದ ಎಂಟನೆ ದಿನ ಸುನ್ನತಿ ಮಾಡುತ್ತಾರೆ. ಇಸ್ಲಾಂ ಧರ್ಮದಲ್ಲಿ ಮಗು ಹುಟ್ಟಿದ ಕೂಡಲೇ ಮಾಡುವುದಾದರೂ, ಅವರವರ ಅನುಕೂಲಕ್ಕೆ ತಕ್ಕಂತೆ ೧೦-೧೨ ವರ್ಷಗಳ ಒಳಗೆ ಮಾಡುತ್ತಾರೆ.

ಸುನ್ನತಿ ವಿರುದ್ಧ ವಾದಿಸುವವರು ಯಾವುದೇ ರೀತಿಯ ಕಾರಣಗಳನ್ನು ನೀಡಿದರೂ ವಿವೇಚನೆಗೆ  ನಿಲುಕುವ ಯಾವುದೇ ಧಾರ್ಮಿಕ  ಆಚರಣೆಗಳಿಗೆ ಯಾರದೇ ಶಿಫಾರಸ್ಸಿನ ಅಥವಾ ವಿರೋಧದ ಪರಿವೆ ಇರಕೂಡದು. ಧಾರ್ಮಿಕ ಆಚರಣೆಗಳನ್ನು ವಿರೋಧಿಸುವುದು, ಧರ್ಮಗಳಿಗೆ ಸಂಬಂಧಿಸಿದ ಪ್ರತಿಯೊಂದನ್ನು ಟೀಕಿಸುವುದು ಕೆಲವರ ಜಾಯಮಾನ ಸರಿಯಲ್ಲ. ಆಚರಣೆಗಳನ್ನು ವಿರೋಧಿಸುವವರಿಗೆ ವಿರೋಧಿಸಳು ಇರುವ ಹಕ್ಕಿನಂತೆಯೇ ಅದರ ಪರವಾಗಿ ನಿಲ್ಲುವವರಿಗೂ ಅದೇ ತೆರನಾದ ಹಕ್ಕಿದೆ ಎನ್ನುವದನ್ನು ಮನಗಾಣಬೇಕು.

ಸುನ್ನತಿ ಬಗ್ಗೆ ಒಂದು ಜೋಕು: ಒಮ್ಮೆ ಒಬ್ಬ ಹುಡುಗನಿಗೆ ಸುನ್ನತಿ ಮಾಡಿಸಲು ಮನೆಯವರು ನಿರ್ಧರಿಸುತಾರೆ. ಅವನು ವಯಸ್ಸಿನಲ್ಲಿ ಸ್ವಲ್ಪ ದೊಡ್ಡವನಾಗಿರುತ್ತಾನೆ. ಅವನ ಮಿತ್ರರುಗಳು ತುಂಬಾ ನೋವಾಗುತ್ತೆ ಈ ವಯಸ್ಸಿನಲ್ಲಿ ಕತ್ತರಿಸಿಕೊಂಡಾಗ ಎಂದು ಹೆದರಿಸಿದ ಕಾರಣ ಅವನು ರಂಪಾಟ ಮಾಡುತ್ತಾನೆ. ಒಂದೇ ಸಮನೆ ಅಳುತ್ತಾ ನನ್ನನ್ನು ಬಿಟ್ಟು ಬಿಡಿ ಎಂದು ಬೇಡುತ್ತಿದ್ದ ಅವನನ್ನು ಕಂಡು ಅವನ ತಾಯಿಗೆ ಮರುಕ ತೋರುತ್ತದೆ. ಆಕೆ ಕೂಗಿ ಹೇಳುತ್ತಾಳೆ, ಪಾಪ ಆ ಹುಡುನನ್ನು ಯಾಕೆ ಹಾಗೆ ಎಳೆದು ಕೊಂಡು ಹೋಗ್ತೀರಾ, ಮೊದಲು ಅವನ ಅಪ್ಪನಿಗೆ ಸುನ್ನತಿ ಮಾಡಿಸಿ, ನಂತರ ಮಗನಿಗೆ ಮಾಡಿಸುವಿರಂತೆ ಎಂದು ಹೇಳಿ ಎಲ್ಲರನ್ನೂ ದಂಗು ಬಡಿಸುತ್ತಾಳೆ. ಹುಡುಗನ ಬದಲಿಗೆ ಈಗ ಹರಕೆ ಕುರಿಯಾಗುವ ಸರತಿ ಅಪ್ಪನದಾಗುತ್ತದೆ.

ಪ್ರಳಯವಂತೆ, ಇದೇ ತಿಂಗಳಂತೆ, ಸತ್ಯವಾಗ್ಲೂ ಅಂತೆ

ಪ್ರಳಯದ ಬಗ್ಗೆ ಆಗಾಗ ನಾವು ಓದುತ್ತಲೇ ಇರುತ್ತೇವೆ, ಓದಿ ಗಾಭರಿಯಾಗಿ ಸಿಕ್ಕ ಸಿಕ್ಕವರನ್ನು ವಿಚಾರಿಸುತ್ತೇವೆ. ವರ್ಷಗಳ ಹಿಂದೆ ದಕ್ಷಿಣ ಕನ್ನಡ ಮೂಲದ ಖ್ಯಾತ ವಾರಪತ್ರಿಕೆ ಪ್ರಳಯದ ಬಗ್ಗೆ ಒಂದು ಲೇಖನ ಹಾಕಿ ಅದು ಎಷ್ಟು ಜನಪ್ರಿಯ ಆಯಿತು ಎಂದರೆ ಆ ಲೇಖನದ ಪುಸ್ತಿಕೆ ಸಹ ಮಾರಾಟಕ್ಕೆ ಬಂದು ಲಕ್ಷ ಗಟ್ಟಲೆ ಜನ ಕೊಂಡು ಓದಿದರು. ಇಂಥ ಜನರಲ್ಲಿ, ಗಾಭರಿ, ಭಯ, ಹುಟ್ಟಿಸಿ ಹಣ ಮಾಡಿಕೊಳ್ಳುವ ದಂಧೆ ಬಹಳ ಹಳತು. ಈಗ ಅಮೆರಿಕೆಯ ಕ್ಯಾಲಿಫೋರ್ನಿಯಾದ ಧರ್ಮ ಬೋಧಕ ಹೆರಾಲ್ಡ್ ಕ್ಯಾಂಪಿಂಗ್  ಗುಲ್ಲೆಬ್ಬಿಸಿದ್ದಾನೆ ಇದೇ ತಿಂಗಳು ೨೧ ಕ್ಕೆ ಅದೂ ಆರು ಘಂಟೆಗೆ ಸರಿಯಾಗಿ ಪ್ರಳಯವಾಗಲಿದೆ ಅಂತ. ಪವಿತ್ರ ಬೈಬಲ್ ಗ್ರಂಥವನ್ನು ಅವನೂ ಅವನ ಮಿತ್ರರೂ decipher ಮಾಡಿದ್ದಾರಂತೆ. 89 ವರ್ಷ ಪ್ರಾಯದ ಈ ವ್ಯಕ್ತಿ ೭೦ ವರ್ಷಗಳ ಅವಿರತ ಬೈಬಲ್ ಅಧ್ಯಯನದಿಂದ ಪ್ರಳಯದ ಬಗ್ಗೆ ಪವಿತ್ರ ಗ್ರಂಥದಲ್ಲಿರುವುದನ್ನು ಜಗತ್ತಿಗೆ ಸಾರುತ್ತಿದ್ದಾನೆ. ಅದರಲ್ಲಿ ಪ್ರಳಯದ ವಿಷಯ ಸಿಕ್ಕಿತಂತೆ. ದೇವ ವಾಣಿ ಇರುವುದು ಮನುಷ್ಯರಿಗೆ ದಾರಿ ದೀಪವಾಗಿ. ಅದರ ಸಂದೇಶ ನೇರವಾದ ಭಾಷೆಯಲ್ಲಿ ಇರಬೇಕು.  ಯಾವುದೇ ಒಂದು ಉಪಕರಣ ಕೊಂಡಾಗ ಅದರೊಂದಿಗೆ ಬರುವ catalogue  ರೀತಿ. ಅದನ್ನು decipher ಮಾಡೋ ಅವಶ್ಯಕತೆ ಬರಕೂಡದು. ಏಕೆಂದರೆ decipher ಮನುಷ್ಯನಿಂದ ಮನುಷ್ಯನಿಗೆ ಬದಲಾಗುತ್ತಾ ಹೋಗುತ್ತದೆ. ಅದರೊಂದಿಗೆ decipher ಮಾಡಲ್ಪಟ್ಟ ಸಂದೇಶವೂ ಕೂಡಾ. ಅವರವರ ಬುದ್ಧಿ ಮತ್ತೆಗೆ ಅನುಸಾರ decipher ಕೆಲಸ ನಡೆಯುತ್ತದೆ.

ಹಿಂದೂ ಶಾಸ್ತ್ರಗಳಲ್ಲಿ ಪ್ರಳಯದ ಬಗ್ಗೆ ಉಲ್ಲೇಖ ಇರುವುದನ್ನು ಕಾಣಬಹುದು. ಕಲಿಯುಗದ ಅವಸಾನದಲ್ಲಿ ಪ್ರಳಯ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ. ಅದೇ ರೀತಿ “ಏಕದೇವೋಪಾಸನೆ” ಗೆ ಒತ್ತು ನೀಡುವ ಅಬ್ರಾಹಾಮಿಕ್ ಧರ್ಮಗಳಾದ ಯಹೂದ್ಯ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಲ್ಲೂ ಇದರ ಪ್ರಸ್ತಾಪ ಇದೆ. ಇಸ್ಲಾಂ ಧರ್ಮದಲ್ಲಿ ಪ್ರಳಯವನ್ನು “ಯೌಮ್ ಅಲ್ ಕಿಯಾಮ” (ಅಂತ್ಯ ದಿನ) ಎಂದು ಕರೆಯುತ್ತಾರೆ.

ಇಸ್ಲಾಮಿನಲ್ಲಿ ಪ್ರಳಯದ ದಿನದ ಬಗ್ಗೆ ಉಲ್ಲೇಖ ಕೆಲವೊಂದು ದೃಷ್ಟಾಂತ ಗಳೊಂದಿಗೆ ಕೊಡಲಾಗಿದೆ. ಏಕಾ ಏಕಿ ಪ್ರಳಯ ಆರಂಭ ಆಗೋಲ್ಲ. ತಂದೆ ಮಗನನ್ನು ಕೊಲ್ಲುವುದು, ತಾಯಿ ಮಗನ, ತಂದೆ ಮಗಳ ನಡುವಿನ ಲೈಂಗಿಕ ಸಂಬಂಧ, ಅನ್ಯಾಯಗಳು, ಬಡ್ಡಿ, ಮೋಸ, ವಂಚನೆ, ಕೊಲೆ ಸುಲಿಗೆ, ಕುಡಿತ,  ದಿನನಿತ್ಯದ ಪ್ರತಿಯೊಬ್ಬರ ಧಂಧೆಯಾಗಿ, ಜೀವನ ರೀತಿಯಾಗಿ ಮಾರ್ಪಟ್ಟು ಇಂಥ ಕೃತ್ಯಗಳಲ್ಲಿ ತೊಡಗಿಸಿ ಕೊಂಡವರು ಇದನ್ನು ಸ್ವಾಭಾವಿಕ ಎಂದು ಪರಿಗಣಿಸಿ ಉಡಾಫೆಯಿಂದ ಬದುಕುವುದು. ಆಳುವವರು ಅತಿ ಕ್ರೂರಿಗಳಾಗಿ ಮಾರ್ಪಡುವುದು. ಬಡವರಿಗೆ ಸಲ್ಲಬೇಕಾದ ಪಾಲನ್ನು ಕೊಡದೆ ಸ್ವತಃ ಸ್ವಾಹಾ ಮಾಡುವುದು. ಹೀಗೆ ಅನ್ಯಾಯ, ಅಕ್ರಮ, ಕ್ರೌರ್ಯಗಳು ಮುಗಿಲು ಮುಟ್ಟಿದಾಗ ಇನ್ನೂ ಗಂಭೀರವಾದ ಕೆಲವು ಘಟನೆಗಳು ಜರುಗುವುದು ಪ್ರಳಯಕ್ಕೆ ಮುನ್ನ.

ಪ್ರಥಮವಾಗಿ ಪವಿತ್ರ ಮಕ್ಕಾ ನಗರದಲ್ಲಿರುವ ಕಪ್ಪು ಚೌಕಾಕಾರದ “ಕಾಬಾ” ಭವನ ವನ್ನು ನಾಶ ಮಾಡ ಲಾಗುವುದು.

ಒಂದು ವಿಚಿತ್ರ, ಭೀಕರ ಜಂತುವಿನ ದರ್ಶನ ವಿಶ್ವಕ್ಕೆ ಆಗುವುದು.

ಭಯಂಕರ ಚಂಡಮಾರುತ ಬೀಸಿ ಬೆಟ್ಟ ಗುಡ್ಡಗಳು, ಪರ್ವತಗಳು ಹತ್ತಿಯ ಉಂಡೆಗಳಾಗಿ ಹಾರುವುವು.

ಅಂತಿಮವಾಗಿ, ಪೂರ್ವ ದಿಕ್ಕಿನಲ್ಲಿ ಹುಟ್ಟುವ ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಹುಟ್ಟುವನು. ಈ ಬೆಳವಣಿಗೆಯೊಂದಿಗೆ ಮನುಷ್ಯನ ಎಲ್ಲಾ ಲೆಕ್ಕಾಚಾರಗಳ ಕಡತವನ್ನು ಮುಚ್ಚಲಾಗುವುದು.( end of year accounting ಥರ).

ಮೇಲೆ ಹೇಳಿದ ವರ್ಣನೆ ಇಸ್ಲಾಂ ಗ್ರಂಥ ಗಳಲ್ಲಿರುವ ನೂರಾರು ದೃಷ್ಟಾಂತ ಗಳಿಂದ ಆರಿಸಿದ್ದು.         

ಪ್ರಳಯದ ಬಗ್ಗೆ ಕನ್ನಡದ ನ್ಯೂಸ್ ಚಾನಲ್ ನವರು ದುಗುಡ, ಭಯ ಮಿಶ್ರಿತ ಧ್ವನಿಯಲ್ಲಿ ವಿವರಣೆ, ವರ್ಣನೆ ನೀಡುವುದನ್ನು ಕೇಳಿದವರು ಕಂಪಿಸುವುದರಲ್ಲಿ ಅನುಮಾನವಿಲ್ಲ. ಒಂದು ಆಂಗ್ಲ ಚಿತ್ರದ ತುಣುಕೊಂದನ್ನು ತೋರಿಸುತ್ತಾ ಪ್ರಳಯವಂತೆ, ಹಾಗಾಗುತಂತೆ, ಹೀಗಾಗುತ್ತಂತೆ ಎಂದು ಅಂತೆ ಕಂತೆಗಳನ್ನು ಪುಂಖಾನು ಪುಂಖವಾಗಿ ಬಿಡುತ್ತಾ ಜನರಲ್ಲಿ ಗಾಭರಿ ಹುಟ್ಟಿಸುವ ಇವರ ನಡವಳಿಕೆಗೆ ಏನನ್ನಬೇಕೋ? ಈ ವರದಿಗಳನ್ನು ನೋಡಿದ ಜನ ಗಾಭರಿಯಾಗೋ ಬದಲು ಆ ಚಾನಲ್ ಗಳಿಗೆ ಇ –ಮೇಲ್ ಮೂಲಕ ಛೀಮಾರಿ ಹಾಕಿ ಇಂಥ ಬೊಗಳೆ ಗಳನ್ನು ಜನ ಸಹಿಸರು ಎನ್ನುವ ಸಂದೇಶವನ್ನು ಕೊಡಬೇಕು.