ಅಂಬಾನಿ ಸಂಪತ್ತಿಗೆ ಟಾ ಟಾ ಸವಾಲ್

ಉಪ್ಪಿನಿಂದ ಹಿಡಿದು ಬೆಲೆಬಾಳುವ ಜಾಗ್ವಾರ್ ಕಾರುಗಳ ತನಕ ಉತ್ಪಾದಿಸುವ ಬೃಹತ್ ಕೈಗಾರಿಕೋದ್ಯಮಿ ರತನ್ ಲಾಲ್ ಟಾ ಟಾ (ಕೆಲವರು ತಾ ತಾ ಎಂತಲೂ ಬರೆಯುತ್ತಾರೆ) ಇಂಗ್ಲೆಂಡಿನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಿಲಯನ್ಸ್ ಕೈಗಾರಿಕಾ ಸಮುಚ್ಚಯಗಳ ಮಾಲೀಕ ಮುಕೇಶ್ ಅಂಬಾನಿಯ ಶ್ರೀಮಂತಿಕೆ ಬಗ್ಗೆ ಮಾತನಾಡಿ ವಿವಾದಕ್ಕೆ ಒಳಗಾಗಿದ್ದಾರೆ.

ವಿಶ್ವ ನಿಬ್ಬೆರಗಾದ, ಶ್ರೀಮಂತಿಕೆಯ ನಗ್ನ ಪ್ರದರ್ಶನ ನೀಡಿದ ಅಂಬಾನಿ ವಾಸದ ಮನೆ ಭಾರತದಂಥ ಬಡ ದೇಶದಲ್ಲಿ ಭಾರತೀಯನೊಬ್ಬನಿಂದ ಬೇಕಿತ್ತೆ ಎಂದು ಸಾಮಾನ್ಯ ಜನ ಕೇಳಿದರೆ ವಕ್ರ ನೋಟ ಎದುರಿಸಬೇಕಾಗುತ್ತದೆ ಆದರೆ ಅದೇ ಮತೊಬ್ಬ ಆಗರ್ಭ ಶ್ರೀಮಂತ ಟಾ ಟಾ ಹೇಳಿದಾಗ  ಆ ಮಾತಿಗೆ ತೂಕ ಸೇರಿ ದೊಡ್ಡ ಸುದ್ದಿಯಾಯಿತು.

ಅಂಬಾನಿ ಕಟ್ಟಿದ ೧೦ ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ, ೩೯೮,೦೦೦ ಸಾವಿರ ಚದರಡಿಯ, ಏಳು ವರ್ಷಗಳ ಕಾಲ ಸಮಯ ತೆಗೆದು ಕೊಂಡ, ೧೬೦ ಕಾರುಗಳನ್ನು, ಮೂರು ಹೆಲಿಕಾಪ್ಟರ್ ಗಳನ್ನು ಪಾರ್ಕ್ ಮಾಡಬಹುದಾದ  ೨೭ ಮಹಡಿಯ ಕಟ್ಟಡ ದ ಉದ್ಘಾಟನೆ ಗೇ  ವಿಶ್ವದ ವಿವಿಧ  ಕಡೆಗಳಿಂದ ಬರುವ ಅತಿಥಿಗಳು ಮೈಲುಗಟ್ಟಲೆ ಉದ್ದ ಚಾಚಿ ಕೊಂಡ ಕೊಳೆಗೇರಿಗಳನ್ನು ದಾಟಿ ಕೊಂಡು ಬರಬೇಕಂತೆ. ಭಾರತದ ಸುಮಾರು ಎಂಭತ್ತು ಕೋಟಿ ಗೂ ಅಧಿಕ ಜನ ದಿನಕ್ಕೆ ನೂರು ರೂಪಾಯಿಗಿಂತ ಕಡಿಮೆ ಸಂಪಾದನೆ ಮಾಡುವಾಗ ಈ ಆಗರ್ಭ ಶ್ರೀಮಂತ ಇಂಥ ದುಂದು ವೆಚ್ಚ ಮಾಡೋ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸುವವರೂ ಇದ್ದಾರೆ.

ಶ್ರೀಮಂತಿಕೆಯ ಮೇಲಿನ ಉದಾಹರಣೆ ದೇಶೀಯ ದಾದರೆ ಕೆಳಗಿದೆ ನೋಡಿ ವಿದೇಶೀ ಶ್ರೀಮಂತನ ಕಥೆ.

ಅಮೆರಿಕೆಯ ಆಗರ್ಭ ಶ್ರೀಮಂತ ನಿಕೊಲಸ್ ಬರ್ಗ್ರೆವಿನ್ ಎಲ್ಲ ಧನವಂತರ ಹಾಗೆ ಧನಪಿಶಾಚಿ ಅಲ್ಲ. ಈತ ಒಬ್ಬ ಮಹಾ ಸಾತ್ವಿಕ.  ತನ್ನ ಧನದ ಮದದಿಂದ ಓಲಾಡದೇ ಬಡವರಿಗೆ ದಾನ ಮಾಡುವ, ಕಾಳಜಿ ಇರುವ ಶ್ರೀಮಂತ.

ಕಾಂಬೋಡಿಯದಲ್ಲಿ ಕೃಷಿಕರಿಗೆ ಸಹಾಯ ಮತ್ತು ಬಡ ರಾಷ್ಟ್ರಗಳಲ್ಲಿ ಗಗನಚುಂಬಿ ಕಟ್ಟಡಗಳ ನಿರ್ಮಾಣ ಹೀಗೆ ಹತ್ತು ಹಲವು ದಾರಿದ್ರ್ಯ ನಿವಾರಣಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಿಕೊಲಸ್ ಇತರ ಧನವಂತರಿಗೆ ಮಾದರಿಯಾಗಿದ್ದಾರೆ.

ಷೇರುಮಾರುಕಟ್ಟೆಯಲ್ಲಿ ಅಗಾಧವಾಗಿ ಸಂಪಾದಿಸಿದ ನಿಕೊಲಸ್ ಹಣದೊಂದಿಗೆ ಬರುವ ಎಲ್ಲಾ ಸೌಕರ್ಯಗಳನ್ನೂ ಪಡೆದರು. ಫ್ಲೋರಿಡಾದ ಖಾಸಗಿ ದ್ವೀಪವೊಂದರಲ್ಲಿ ಬಂಗಲೆ, ನ್ಯೂಯಾರ್ಕಿನಲ್ಲಿ ಅತಿ ದುಬಾರಿ ಮನೆ, ಇವೆಲ್ಲವನ್ನೂ ಮಾರಿ ಹೋಟೆಲ್ನಲ್ಲಿ ಬಾಡಿಗೆಗಿದ್ದು,  ತಮ್ಮ ಸಂಪತ್ತನ್ನು ಬಡವರ ಏಳಿಗೆಗಾಗಿ ಇಟ್ಟಿದ್ದಾರೆ ನಿಕೊಲಸ್.

“ಥಳಕು ಬೆಳಕಿನ ಜೀವನ ಮತ್ತು ಜನರಿಗೆ ಪ್ರದರ್ಶಿಸುವ ತೋರಿಕೆಯ ಬದುಕು ಶೂನ್ಯ, ನನ್ನ ಹತ್ತಿರ ಇರುವುದೆಲ್ಲವೂ ಕ್ಷಣಿಕ, ನಾವೀ ಜಗತ್ತಿನಲ್ಲಿರುವುದು ಅಲ್ಪ ಸಮಯ ಮಾತ್ರ. ಶಾಶ್ವತವಾಗಿ ನಿಲ್ಲುವ ನಮ್ಮ ನಡವಳಿಕೆಗಳೇ ನಿಜವಾದ ಮೌಲ್ಯ” ಇವು ನಿಕೊಲಸ್ ಅವರ ನುಡಿಮುತ್ತುಗಳು.

ಪ್ರಚಾರಗಳಿಂದ ಯಾವಾಗಲೂ ದೂರವಿರುವ ಈ ಯುವ ಶ್ರೀಮಂತ ಅನೇಕರಿಗೆ ದೊಡ್ಡ ಒಗಟು. ಕೆಲ ವರ್ಷಗಳ ಹಿಂದೆ ಡಚ್ ಪತ್ರಿಕೆಯೊಂದು ಅವರ ಬಗ್ಗೆ  ಬರೆದಾಗ ಪತ್ರಿಕೆಯ ಎಲ್ಲ ಪ್ರತಿಗಳನು ಖರೀದಿಸಿ ಬಿಸಾಕಿದರು.

ನಮ್ಮಲ್ಲಿನ ಶ್ರೀಮಂತರಾದ ಅಂಬಾನಿಯಂಥವರು, ಮೈಮಾಟ ಪ್ರದರ್ಶಿಸಿ ಹಣಗಳಿಸುವ ಬಾಲಿವುಡ್ನ ನರ್ತಕ ನರ್ತಕಿಯರು ಮತ್ತು ಇತರೆ ಹತ್ತು ಹಲವು ಕೃತ್ರಿಮ ಗಳ ಮೂಲಕ ಸಂಪಾದಿಸಿದ ಹಣವಂತರು ನಿಕೊಲಸ್ ಬರ್ಗ್ರೆವಿನ್ ಅವರಿಂದ ಕಲಿಯಲು ಬಹಳಷ್ಟಿದೆ.

ಈಗಿನ ಕಾಲದ ಹಣವಂತರ ಅಹಂಕಾರ, ಧಿಮಾಕನ್ನು ಕಂಡ ನಮಗೆ ನಿಕೊಲಸ್ ಒಂದು ಕಾರಂಜಿ ಇದ್ದಂತೆ. ಒಂದು ಆಹ್ಲಾದಕರ ತಂಗಾಳಿ.

* ಫೇಸ್ ಬುಕ್ ಮುಸ್ಲಿಂ ವಿರೋಧಿ ?

ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಇದು. ಈಜಿಪ್ಟ್ ದೇಶದ ಮುಸ್ಲಿಂ ಧರ್ಮ ಗುರು ನೀಡಿದ “ಫತ್ವ” ವನ್ನು ತಪ್ಪಾಗಿ  (ಉದ್ದೇಶಪೂರ್ವಕ?) ಅರ್ಥೈಸಿ ಬರೆದಾಗ ಮೇಲೆ ತೋರಿಸಿದ ತಲೆ ಬರಹ ಎಲ್ಲರ ಗಮನ ಸೆಳೆಯುತ್ತದೆ. ಮೈಸೂರು ಪ್ರಕಾಶನದ ಈ ಪತ್ರಿಕೆ ಸಾಧಾರಣವಾಗಿ ಯಾರಿಗೂ ನೋವಾಗದಂಥ, ಅನಾವಶ್ಯಕ ಕುತೂಹಲ ಕೆರಳಿಸದಂಥ ಸುದ್ದಿಗಳನ್ನು ಪ್ರಕಟಿಸುತ್ತದೆ. ಆದರೆ ಕೆಲವೊಮ್ಮೆ “ಫ್ಯಾಷೆನ್ ಟ್ರೆಂಡ್” ಅನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ನೋಡಿ. ಆದರೆ ಇಂಥ ವರದಿಗಳನ್ನು ಮುದ್ರಿಸಿ ಪತ್ರಿಕೆ ತನ್ನ ಆತ್ಮವನ್ನು ಕಳೆದುಕೊಳ್ಳಬಹುದು ಎನ್ನುವ ಸಾಮಾನ್ಯ ಜ್ಞಾನ ಸಂಪಾದಕನಿಗೆ ಇದ್ದರೆ ಆತ ಜಾಗರೂಕತೆ ತೋರಿಸುತ್ತಾನೆ. 

ಈಜಿಪ್ಟ್ ದೇಶದ ಈ ಧರ್ಮ ಗುರು ಫೇಸ್ ಬುಕ್ ಮುಸ್ಲಿಂ ವಿರೋಧಿ ಅಂದ ಕೂಡಲೇ ನಾನಾಗಲಿ, ಲಕ್ಷಾಂತರ ಮುಸ್ಲಿಮರಾಗಲಿ ಫೇಸ್ ಬುಕ್ ನಿಂದ ಹೊರನಡೆಯುವಷ್ಟು ಬಾಲಿಶರಲ್ಲ. ಅಷ್ಟಕ್ಕೂ ಆ ಧರ್ಮ ಗುರು ನೀಡಿದ ವಿವರಣೆ ಸ್ವಲ್ಪ ನೋಡೋಣ. ಫೇಸ್ ಬುಕ್ ಮೂಲಕ ಅನೈತಿಕ ಸಂಬಂಧ ಅರಸಿ ವೈವಾಹಿಕ ಸಂಬಂಧವನ್ನು ಹಾಳುಗೆಡವುವರ ಬಗ್ಗೆ ಮಾತ್ರ ಈ ಎಚ್ಚರಿಕೆ. ಧರ್ಮ ಸಂದೇಶಗಳನ್ನೂ ಸಾರಲೂ, ವ್ಯಾವಹಾರಿಕವಾಗಿಯೋ, ಬರೀ ಸ್ನೇಹಕ್ಕಾಗಿಯೋ ಉಪಯೋಗಿಸುವವರ ವಿರುದ್ಧ ಅಲ್ಲ ಈ  “ಫತ್ವ”. 

ಇಸ್ಲಾಂ ಧರ್ಮದಲ್ಲಿ ಶೋಷಣೆಗೆ ಎಡೆ ಮಾಡುವ ಪುರೋಹಿತಶಾಹಿ ಇಲ್ಲ. ಹಾಗೂ  ಫತ್ವ ಹೊರಡಿಸುವ ಅಧಿಕಾರ ಪ್ರತಿ ಮುಲ್ಲಾಗೂ ಇಲ್ಲ. ಪ್ರಪಂಚದ ಯಾವುದಾದರೂ ಮೂಲೆಯಲ್ಲಿ ಕೂತು ಯಾರಾದರೂ ತಮಗಿಷ್ಟ ಬಂದಂತೆ ಧರ್ಮದ ಬಗ್ಗೆ ಹೇಳಿಕೆ ನೀಡಿದ ಕೂಡಲೇ ಅದನ್ನು ವಿಶೇಷ ವರದಿಯನ್ನಾಗಿ ಪ್ರಕಟಿಸಿ ಬೊಬ್ಬೆ ಹೊಡೆಯುವ ಪತ್ರಿಕೆಗಳಿಗೆ ಮಾಡಲು ಬೇಕಷ್ಟು ಕೆಲಸಗಳಿವೆ. ಸಾಮಾಜಿಕ ಸಂಪರ್ಕ ಮಾಧ್ಯಮಗಳ ಸಂಕೀರ್ಣ ವ್ಯವಸ್ಥೆಗೆ ಬಳಿ ಬಿದ್ದು ತಮ್ಮ ವೈಯಕ್ತಿಕ ಜೀವನವನ್ನು ಹಾಳು  ಮಾಡಿಕೊಂಡವರು ಹಲವರು. ವಿವಾಹಿತರಾಗಿಯೂ ಸಂಬಂಧಗಳನ್ನು ಹುಡುಕಿಕೊಂಡು ನಡೆಯುವ, ಸುಳ್ಳು ಪ್ರೊಫೈಲ್ ಗಳನ್ನು ನಂಬಿ ತಮ್ಮ ಬದುಕನ್ನು ಕೆಡಿಸಿ ಕೊಂಡವರೂ ಇದ್ದಾರೆ. ಟೀವೀ ಬಂದ ಹೊಸತರಲ್ಲೂ ಕೆಲವು ಧರ್ಮ ಗುರುಗಳು ಈ “ಶನಿ ಪೆಟ್ಟಿಗೆ” ಸಮಾಜವನ್ನು ಕಲುಷಿತಗೊಳಿಸಬಹುದು ಎಂದು ಎಚ್ಚರಿಸಿದ್ದರು. ಹಾಗೆ ಸಂಭವಿಸಿತೂ ಕೂಡಾ. ೮ – ೧೦ ವರ್ಷದ ಮಕ್ಕಳು ಅಶ್ಲೀಲ ಸೀರ್ಯಲ್ಲುಗಳನ್ನು, ಮೂವಿಗಳನ್ನು ನೋಡಿ ಪ್ರೇಮ ಪತ್ರ ಬರೆಯಲು ತೊಡಗಿದರು.  ಹದಿಹರೆಯದ ಹೊತ್ತಿಗೆ ಎಲ್ಲ ರೀತಿಯ ಅನುಭವಗಳನ್ನು ಪಡೆಯಲು ತೊಡಗಿದರು. ಹಿಂಸಾಪ್ರಿಯರೂ ಆದರು. 

ಹಾಗೆಂದು ತಂತ್ರ ಜ್ಞಾನಕ್ಕೆ ಬೆನ್ನು ತಿರುಗಿಸಿ ಬದುಕಬೇಕೆಂದಲ್ಲ. ಮಿತಿಯನ್ನು ಅರಿತು ಪ್ರಜ್ಞಾ ಶೀಲತೆ ಮೆರೆದರೆ ಅದೇ ಚೆಂದ.