ಬೆಂಗಳೂರು ನಗರ ಕಾತುರದಿಂದ ಕಾಯುತ್ತಿದ್ದ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿಯ ಭಾರತ ಇಂಗ್ಲೆಂಡ್ ನಡುವಿನ ಹಣಾಹಣಿ ರೋಮಾಂಚಕಾರಿಯಾಗಿ ಕೊನೆಗೊಂಡಿತು. ಗೆಲ್ಲಲು ೩೩೮ ರ ಗುರಿಯನ್ನು ಕೆಚ್ಚೆಯಿಂದ ಸ್ವೀಕರಿಸಿದ ಅಂಡ್ರೂ ಸ್ಟ್ರಾಸ್ ನ ಬಂಟರು ಗೆಲುವಿನ ಹೊಸ್ತಿಲಿನವರೆಗೂ ಬಂದು ಬರಿಗೈಲಿ ಹೋದರು. ಬರಿಗೈಲಿ ಹೋದರು ಆದ್ರೆ ಹೋಗಿದ್ದು ಮಾತ್ರ ಹಿಗ್ಗುತ್ತಾ, ಮುಗುಳ್ನಗುತ್ತಾ. ಭಾರತೀಯರ ಹೃದಯಗಳು ಅವರ ಬಾಯಿಗಳಿಗೆ ಬರುವಂತೆ ಮಾಡಿದ ನಮ್ಮ ಮಾಜಿ ಯಜಮಾನರುಗಳು ತಾವೆಂಥಾ ಆಟಗಾರರೆಂದು ವಿಸ್ಮಯಕಾರಕವಾಗಿ ತೋರಿಸಿದರು. ವಿಪರೀತ ಕೇಕೆ ಹಾಕುವ ಬೆಂಗಳೂರಿನ ಜನರ ಸದ್ದಡಗಿಸುತ್ತೇವೆ ಎನ್ನುವಂಥ ಸ್ಪಿನ್ನೆರ್ “ಸ್ವಾನ್” ನ ಹೇಳಿಕೆಗೆ ನ್ಯಾಯ ಒದಗಿಸುವಂತೆ ಆಡಿದ ಇಂಗ್ಲೆಂಡ್ ನಾಯಕ ತನ್ನ ಜೀವನದ ಅತ್ಯುತ್ತಮ ಇನ್ನಿಂಗ್ಸ್ ಅನ್ನು ಬೆಂಗಳೂರಿಗರಿಗೆ ಉಣಬಡಿಸಿದ.
ಆದರೆ ೩೩೯ ಮಾಡಿದ್ದು ನಮ್ಮ ಸಾಹಸವಲ್ಲವೇ? ಅಷ್ಟೇ ಅಲ್ಲ ಆ ಗುರಿ ಮುಟ್ಟದಂತೆ ತಡೆಯುವಲ್ಲಿ ನಾವು ಯಶಸ್ವಿಯಾಗಲಿಲ್ಲವೇ? no. a resounding NO. ೩೩೯ ಮಾಡಿ ಮುನ್ನೂರರ ಒಳಗೆ ಅವರ ಇನ್ನಿಂಗ್ಸ್ ಅನ್ನು ಕವುಚಿ ಬಿಟ್ಟಿದ್ದರೆ ನಾವು ಹೆಮ್ಮೆ ಪಡಬಹುದಿತ್ತು. ಆ ರೀತಿ ಮಾಡದೆ ಶತ್ರು ನಮ್ಮ ಅಡುಗೆ ಮನೆ ತನಕ ನುಸುಳಲು ಬಿಟ್ಟಿದ್ದು ನಮ್ಮ ಸೋಲು. ಇಲ್ಲಿ ನಮ್ಮ ಬೌಲಿಂಗ್ ನ ಬಂಡವಾಳ ಬಟಾ ಬಯಲಾಯಿತು. mediocre bowling ಎನ್ನುವ ಹಣೆ ಪಟ್ಟಿ ಸಿಗುವಂತೆ ಮಾಡಿತು. ಹೌದು ಜಹೀರ್ ಖಾನ್ ಆಟದ ಗತಿಯನ್ನೇ ಬದಲಿಸಿದ ಆ ಅದ್ಭುತ ಓವರ್ ಅನ್ನು unleash ಮಾಡದೆ ಇದ್ದಿದ್ದರೆ ಇಂಗ್ಲೆಂಡ್ ಆಟಗಾರರು ಚಿನ್ನಸ್ವಾಮಿ ಮೈದಾನದ ಪ್ರದಕ್ಷಿಣೆ ಹಾಕುತ್ತಿದ್ದರು ಕೇಕೆ ಹಾಕುತ್ತಾ. ತನ್ನ ವಯಸ್ಸು ನಾಚುವಂತೆ ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ತೆಂಡೂಲ್ಕರ್ ಅವರ ಈ ಶತಕವೂ ಮತ್ತೊಂದು ಅಂಕಿ ಅಂಶವಾಗಿ ಉಳಿಯಿತೇ ವಿನಃ “ಅಂತಿಮ ನಗು” ವಿನ ರೋಮಾಂಚನವನ್ನು ನೀಡಲಿಲ್ಲ.
ಎಲ್ಲಾ ಮಕ್ಕಳೂ ಚಂದಿರನೇಕೆ ಓಡುವನಮ್ಮಾ ಎಂದು ಕೌತುಕದಿಂದ ಕೇಳಿದರೆ ನನ್ನ ಮಗನಿಗೆ ಬೇರೆಯದೇ ಆದ ಒಂದು ಚಿಂತೆ.
ನಮಗೆ “ಹುಬ್ಬು” ಗಳೇಕಪ್ಪಾ ? ಹುಬ್ಬು ಹಾರಿಸುತ್ತಾ ಕೇಳಿದ ನನ್ನ ಮಗ ನಿನ್ನೆ ರಾತ್ರಿ ಅವನ ಬೆಡ್ ಟೈಮ್ ಸ್ಟೋರಿ ಸೆಶನ್ ಸಮಯ. ನಾನು ಹೇಳುತ್ತಿದ್ದ ಕಥೆಯ ಬಗ್ಗೆ ಅವನು ಪ್ರಶ್ನೆ ಕೇಳಿದ್ದರೆ ಕಥೆಯಲ್ಲಿ ಪ್ರಶ್ನೆಯಿಲ್ಲ ಎಂದು ಅವನ ಪುಟ್ಟ ಬಾಯಿ ಮುಚ್ಚಿಸಬಹುದಿತ್ತು. ಆದರೆ ಕೇಳುತ್ತಿರುವುದು ಲಾಜಿಕ್ ಆದ ಪ್ರಶ್ನೆಯಾದ್ದರಿಂದ ಒಂದು ಕ್ಷಣ ಮೇಲೆ ಏರಿದ ನನ್ನ ಹುಬ್ಬುಅಲ್ಲೇ ನಿಂತಿತು ನನ್ನ ಸಮಜಾಯಷಿಗಾಗಿ ಕಾಯುತ್ತಾ. ಹೌದೇ, ಸುಂದರ ಮೊಗದ ಮೇಲೆ, ಬೊಗಸೆ ಕಣ್ಣುಗಳ ಮೇಲೆ ಹುಬ್ಬುಗಳೆಂಬ “ಛಾವಣಿ” ಯ ಅವಶ್ಯಕತೆ ಏನಿತ್ತೋ? ಕಣ್ಣುಗಳನ್ನು ರಕ್ಷಿಸಲು ರೆಪ್ಪೆಗಳಿದ್ದೆ ಇವೆಯಲ್ಲಾ? ಓಹ್, ಬಹುಶಃ ಡಬ್ಬಲ್ ಪ್ರೊಟೆಕ್ಷನ್ ಆಗಿ ಇರಬೇಕು ಹುಬ್ಬುಗಳು ಬಡಿಯುವ ರೆಪ್ಪೆಗಳಿಗೆ ಸಂಗಾತಿಯಾಗಿ.
ಹುಬ್ಬು ಮತ್ತು ಮೂಗಿನ ರೂಪ, ಅಂಕು ಡೊಂಕಿನ ಬಗ್ಗೆಯೂ ಸಾಕಷ್ಟು ಕುತೂಹಲ ಇದ್ದಿದ್ದೇ.
ಮಹಿಳೆಯರಿಗೆ ಕರಡಿಗಿರುವಂಥ ಹುಬ್ಬಿದ್ದರೆ ಅದನ್ನು ರೆಪೇರಿ ಮಾಡಿಸಿಕೊಳ್ಳುತ್ತಾರೆ. ಅದಕ್ಕೆ ಆಂಗ್ಲ ಭಾಷೆಯಲ್ಲಿ blepharoptosis ಎಂದು ಕರೆಯುತ್ತಾರೆ. ಕಾಲುಗುರು ಸ್ವಲ್ಪ ಡೊಂಕಾದಾಗ toe nail repair ಇರುವಂತೆ ಮುಖಕ್ಕೆ ಕಿರೀಟ ಪ್ರಾಯವಾಗಿ ಕಂಗೊಳಿಸುವ ಹುಬ್ಬಿಗೆ ಇಲ್ಲದೆ ಇರುತ್ತದೆಯೇ ಒಂದು ರೆಪೇರಿ? ಹಾಂ, ಈ ಹುಬ್ಬಿನ ರೆಪೆರಿಯೊಂದಿಗೆ ಅದಕ್ಕೊಂದು ಚೆಂದದ ರಿಂಗ್ ಇದ್ದರೆ ಇನ್ನೂ ಚೆಂದ ಅಲ್ಲವೇ? ಮೂಗಿಗೆ, ಕಾಲುಂಗುರಕ್ಕೆ, ಹೊಕ್ಕುಳಿಗೆ ಒಂದೊಂದು ರಿಂಗ್ ಇರುವಾಗ ಹುಬ್ಬಿಗೆ ಬೇಕೇ ಬೇಕು ಮಾರಾಯ್ರೆ ಒಂದು ರಿಂಗು.
ಮತ್ತೊಂದು ಮಾತು, ಹೆಂಡತಿ ಪಕ್ಕದಲ್ಲಿಲ್ಲ. ಅರಬ್ ಮಹಿಳೆಯರ ಹುಬ್ಬಿಗೆ ಅದೇನು ಸೌಂದರ್ಯವೋ ಏನೋ? ಕಾಮನ ಬಿಲ್ಲುಗಳು ಮೋಡಗಳೊಳಗೆ ಅವಿತು ಕೊಳ್ಳುತ್ತವೆ ಇವರ ಹುಬ್ಬುಗಳ ಸೌಂದರ್ಯವನ್ನು ನೋಡಿ. ಬುರ್ಖಾ ಧರಿಸಿ, ಆದರ ಮೇಲೆ ಮೂಗನ್ನು ಮುಚ್ಚುವ “ನಿಕಾಬ್” ಎನ್ನುವ ತೆಳು ಪರದೆಯನ್ನು ಧರಿಸಿದಾಗ ಹುಬ್ಬುಗಳು ಪ್ರಾಮುಖ್ಯತೆ ಪಡೆಯುತ್ತವೆ ಇವರ ಸೌಂದರ್ಯ ಪ್ರದರ್ಶನದಲ್ಲಿ. ಕೆಲವೊಮ್ಮೆ ಅನ್ನಿಸುವುದಿದೆ ಇಷ್ಟೆಲ್ಲಾ ಮೈ ಮುಚ್ಚಿ ಕೊಂಡು, ಈ ಪರಿಯಾಗಿ ಹುಬ್ಬುಗಳನ್ನು ರೆಪೇರಿ ಮಾಡಿಸಿಕೊಂಡು ಪುರುಷರ ಅಲೆಯುವ ಕಣ್ಣುಗಳಿಗೆ ಏಕೆ ಇವರು torment ಮಾಡುತ್ತಾರೋ ಎಂದು. ಇಸ್ಲಾಂ ಹುಬ್ಬನ್ನು ರೆಪೇರಿ ಮಾಡಿಸಿ ಕೊಳ್ಳುವ ಗೀಳಿಗೆ ಹುಬ್ಬುಗಂಟಿಕ್ಕಿ ಅಸಮ್ಮತಿ ಸೂಚಿಸಿದರೂ ಅರಬ್ ಲಲನಾ ಮಣಿಗಳಿಗೆ ಅದರ ಪರಿವೆ ಇಲ್ಲ. ಈ ವಿಷಯದಲ್ಲಿ ಇನ್ನೂ ಯಾವುದೇ ಫತ್ವ ಬಂದ ನೆನಪಿಲ್ಲ.
ಈಗ ನನ್ನ ಮಗನ ಪ್ರಶ್ನೆಗೆ ಎಲ್ಲಿದೆ ಉತ್ತರ? ಇಗೋ ಇಲ್ಲಿ. ತಲೆಯ ಮೇಲಿನಿಂದ ಮಳೆ ಹನಿ, ಹೇನು, ಹೊಟ್ಟು ಇತ್ಯಾದಿಗಳು ಕಣ್ಣಿನೊಳಗೆ ಬೀಳದೆ ಇರಲು ಇರುವ ಸಿಸ್ಟಂ ಹುಬ್ಬು. ಅಷ್ಟೇ ಅಲ್ಲ ಸೂರ್ಯನ ಪ್ರಖರ ಶಾಖ ನೇರವಾಗಿ ಕಣ್ಣಿಗೆ ಬೀಳದಂತೆ ತಡೆಯುತ್ತದೆ ಕೂಡಾ ನಮ್ಮ ಹುಬ್ಬುಗಳು.