ಹೊಟ್ಟೆ ಪಕ್ಷದ ರಂಗ ಸ್ವಾಮೀ ಮತ್ತು ಮೋದಿ

ಚುನಾವಣೆಯ ಬಿಸಿ ತಾರಕಕ್ಕೇರುತ್ತಿದ್ದಂತೆ ದಿಗ್ಗಜರು ಮತ್ತು ನಾಟ್ ಸೋ ದಿಗ್ಗಜರು ಎಲ್ಲಿಂದ ಸ್ಪರ್ದಿಸುತ್ತಾರೆ ಎನ್ನುವ ಕಡೆ ಎಲ್ಲರ ಕುತೂಹಲ. ಎಲ್ರಿಗೂ ಬೇಕು ಸೇಫ್ ಸೀಟು. ಕೆಲಸ ಮಾಡಬೇಕಾದ ಸಮಯದಲ್ಲಿ, ಮತದಾರನಿಗೆ ನೀಡಿದ ಆಶ್ವಾಸನೆ ನೆರವೇರಿಸುವ ನಿಟ್ಟಿನಲ್ಲಿ ಸೋತಾಗ ಈ ಅಲೆದಾಟ ಸೇಫ್ ಸೀಟ್ ಗಾಗಿ. ರಾಜಕಾರಣಿ ದಿಕ್ಕೆಟ್ಟು ಅಲೆಯುವ ಹಲವು ಸನ್ನಿವೇಶಗಳಲ್ಲಿ ಇದೂ ಒಂದು. 

ನರೇಂದ್ರ ಮೋದಿ ವಾರಾಣಸಿ ಯಿಂದ ಸ್ಪರ್ದಿಸುವ ಕುರಿತು ಅವರ ಭಕ್ತರಲ್ಲಿ ಒಂದು ತೆರನಾದ ರೋಮಾಂಚನ. ಪವಿತ್ರ ಕ್ಷೇತ್ರದಿಂದ ಸ್ಪರ್ದಿಸೋದು ಯಾರಿಗೂ ಮುದ ಕೊಡುವ ವಿಷಯವೇ. ಖ್ಯಾತ ಶಹನಾಯ್ ವಾದಕ ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನರೂ ಈ ನಗರದಲ್ಲಿ ತಮ್ಮ ಪ್ರತಿಭೆ ಮೆರೆದಿದ್ದರಂತೆ. ಉಸ್ತಾದ್ ರ ಹೃದಯವೈಶಾಲ್ಯತೆ, ಮತೀಯ ಸಾಮರಸ್ಯ ವಾರಣಾಸಿಯಿಂದ ಸ್ಪರ್ದಿಸುವ ಎಲ್ಲರಿಗೂ ಮಾದರಿಯಾಗಲೀ ಎನ್ನುವುದು ಮತದಾರರ ಆಶಯ. ಮತ್ತೊಂದು ಸುದ್ದಿ ಏನೆಂದರೆ ಭಾಜಪ ದ ಪ್ರಧಾನಿ ಅಭ್ಯರ್ಥಿ ವಾರಣಾಸಿ ಜೊತೆಗೆ ತನ್ನ ರಾಜ್ಯ ಗುಜರಾತ್ ನ ವಡೋದರ ದಿಂದಲೂ ಸ್ಪರ್ದಿಸುವ ತೀರ್ಮಾನ ಮಾಡಿದ್ದು. ಅರರೆ ಏನಿದು. ಮೋದಿ ಅಲೆ, ಮೋದಿ ಸೆಲೆ ಎಂದೆಲ್ಲಾ ಎದೆ ಉಬ್ಬಿಸಿಕೊಂಡು ನಡೆಯುತ್ತಿದ್ದ ಜನರಿ ಮೇಲೆ ಈ ಸುದ್ದಿ ಯಾವ ಪ್ರಭಾವ ಬೀರಬಹುದು, ಎಂದು ಕೊಳ್ಳಬೇಡಿ. ಕಳ್ಳನಿಗೊಂದು ಪಿಳ್ಳೆ ನೆವ ಎಂದು ಕೇಳಿದ್ದೀರಾ ತಾನೇ, ಸಾಕಷ್ಟು ಅಬ್ಯೂಸ್ ಮಾಡಿಸಿ ಕೊಂಡ ಮಾತಿದು. ಎಲ್ಲಾ ನಾಣ್ಣುಡಿಗಳೂ ಹೀಗೆಯೇ. ಸುದ್ದಿ ಸೃಷ್ಟಿ ಮಾಡಿದ ಹಾಗೆ ಪ್ರಾವರ್ಬ್ಸ್ ಗಳನ್ನ ಸೃಷ್ಟಿ ಮಾಡೋಕೆ ಆಗುತ್ಯೇ? ಅದಕ್ಕೇ ಅಬ್ಯೂಸು. take it or leave it. ಅಲೆಯ ಮೇಲೆ ಸವಾರಿ ಮಾಡುತ್ತಿದ್ದ ನಾಯಕನಿಗೆ ಇದು ತರವೇ ಎಂದು ಪ್ರಶ್ನಿಸಿದ ಕೂಡಲೇ ಧುಮ್ಮಿಕ್ಕಿತು ಉತ್ತರ. ಯಾಕೆ, ತಪ್ಪೇನು? ಹೊಟ್ಟೆ ಪಕ್ಷದ ರಂಗ ಸ್ವಾಮೀ ಗಳು ಐದು ಕಡೆಗಳಿಂದ ನಿಂತಿಲ್ಲವೇ, ಇನ್ನೂ ಮೂರು ಬಾಕಿ ಇದೆಯಲ್ಲಾ ಎಂದು ಮೀಸೆಯ ಮರೆಯಲ್ಲಿ ನಗು. ವಾಹ್, ಕಂಪ್ಯಾರಿಸನ್ ಎಂದರೆ ಹೀಗಿರಬೇಕು. ಎತ್ತರದಿಂದ ಬೀಳುವ ಬೆಕ್ಕು ಲ್ಯಾಂಡ್ ಆಗೋದು ಹೇಗೆ ಅಂತ ಗೊತ್ತು ತಾನೇ?

ಪ್ರಶ್ನೆ ಏನೆಂದರೆ, ವಾರಣಾಸಿಯಿಂದ ಸ್ಪರ್ದಿಸಲಿರುವ ಅರವಿಂದ ಕೇಜರಿವಾಲ ಗೆಲ್ಲುವ ಸಾಧ್ಯತೆ ಕಾರಣ ನಯವಾಗಿ ವಡೋದರ ದ ಕಡೆ ಹೆಜ್ಜೆ ಹಾಕಿರಬಹುದೇ, ಮೋದಿ? ಈ ಅರವಿಂದ್ ಕೇಜರಿ ವಾಲ್ ಬಹುತ್ ಚಾಲಾಕ್ ಆದ್ಮಿ. ಬಯೋ ಡೇಟಾ ದಲ್ಲಿ ಒಬ್ಬರು ಸಿಕ್ಕಾಪಟ್ಟೆ ಬರೆದು ಬಿಟ್ಟರು, ಇದು ನಿಜವೇ ಎಂದು ನೋಡಲು ಗುಜರಾತ್ ಗೆ ಧಾವಿಸಿ ಬಿಟ್ಟರು. ೧೬ ಪ್ರಶ್ನೆಗಳ ಶಾಪಿಂಗ್ ಲಿಸ್ಟ್ ಹಿಡಿದು ಕೊಂಡು. ಪಾಪ, ಈತನ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ಆದರೆ ಶತ್ರು ಪಾಳಯದಲ್ಲಿ ನಡುಕವಂತೂ ತರಿಸಿಬಿಟ್ಟಿತು ಈತನ gate crash ಯಾತ್ರೆ. ಹಾಗಾಗಿ ಈ ಎರಡನೇ ಕ್ಷೇತ್ರದಿಂದ ಸ್ಪರ್ದಿಸುವ ತೀರ್ಮಾನ.

ಅರವಿಂದ ಕೇಜರಿವಾಲ್ ಧಿಡೀರನೆ ಹೆಸರು ಮಾಡಿಬಿಟ್ಟರು. ನಮ್ಮ ಪ್ರಜಾಪ್ರಭುತ್ವ ವಿಶ್ವ ಅಂದು ಕೊಂಡಂತಹ ಅಂಗವಿಕಲ ಪ್ರಜಾಪ್ರಭುತ್ವ ಅಲ್ಲ ಎಂದು ಸೊಗಸಾಗಿ ತೋರಿಸಿ ಕೊಟ್ಟರು. ಈತನ ಪಕ್ಷದ ಹೆಸರು ಆಮ್ ಆದ್ಮಿ ಪಾರ್ಟಿ. ಗುರುತು, ಪರ್ಕೆ, ಪರಕೆ..ಪೊರಕೆ. ಕಾಕ್ಟೇಲ್ ಪಾರ್ಟಿಯಲ್ಲಿ ಸಿಗುವ ಎಲ್ಲಾ ಮನರಂಜನೆಯೂ ಈ ಪಕ್ಷ ಕೊಡುತ್ತಿದೆ ಹಲವು ರಾಜಕಾರಣಿಗಳಿಗೆ.

ಮೋದಿ ವಾರಣಾಸಿ ಜೊತೆಗೆ ವಡೋದರ ಕೂಡಾ ಇರಲಿ ಎಂದು ತೀರ್ಮಾನಿಸಿದ ಕಾರಣದ ಬಗೆಗಿನ ನನ್ನ take ಇದು.        

ಬಿಹಾರದ “ನೀತಿ” ಪಾಠ

ಬಿಹಾರದ ವಿಧಾನ ಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಜನತಾ ದಳ (ಸಂಯುಕ್ತ) ಮತ್ತು ಭಾಜಪ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಆಶ್ಚರ್ಯ ತರದಿದ್ದರೂ ವಿಜಯದ ಪ್ರಮಾಣ ಮತ್ತು ಕಾಂಗ್ರೆಸ್, ಲಾಲೂ ಪಕ್ಷಗಳ ಧೂಳೀಪಟ ಎಲ್ಲರನ್ನೂ ದಂಗು ಬಡಿಸಿದ್ದಂತೂ ನಿಜ. ಬಹುಶಃ ಇಂದಿರಾ ವಧೆಯ ನಂತರ ನಡೆದ ಚುನಾವಣೆಯಲ್ಲಿನ ಕಾಂಗ್ರೆಸ್ ಜಯಭೇರಿಯ ಪ್ರಮಾಣವನ್ನೂ ಮೀರಿಸುವ ಗೆಲುವಾಗಿರಬಹುದು ನೀತೀಶರದು. ಅಷ್ಟೇ ಅಲ್ಲ ರಾಹುಲ್ ಗಾಂಧಿಯವರ ವರ್ಚಸ್ಸನ್ನು ಉಪಯೋಗಿಸಿ ಉತ್ತರ ಪ್ರದೇಶದ ರೀತಿಯ ಫಲಿತಾಂಶ ನಿರೀಕ್ಷಿಸಿದ್ದ ಕಾಂಗ್ರೆಸ್ಸಿಗರಿಗೆ ಈ ಚುನಾವಣೆ ಒಂದು ಕಹಿ ಅನುಭವ. ಬಿಹಾರದ ಚುನಾವಣೆಯ ಮತ್ತೊಂದು ಸ್ವಾರಸ್ಯ ಮತ್ತು positive outcome ಏನೆಂದರೆ ಈ ಗೆಲುವಿನೊಂದಿಗೆ ಜನತಾ ದಳ ದ ಮೈತ್ರಿ ಪಕ್ಷಕ್ಕೆ “ನೀತಿ” ಪಾಠ ಸಹ ಸಿಕ್ಕಿದ್ದು. ಅತ್ಯಂತ ಸಂಕುಚಿತ, ‘ಹೇಟ್’ ಅಜೆಂಡಾದೊಂದಿಗೆ ಚುನಾವಣೆಯಲ್ಲಿ ಸ್ಪರ್ದಿಸುವ ಪಕ್ಷಗಳಿಗೆ ಮಂದಿರವೊಂದೇ ಮಂತ್ರವಲ್ಲ, “ಸರ್ವೇ ಜನಃ ಸುಖಿನೋಭವಂತು” ವೇ ನನ್ನ ತಂತ್ರ ಎಂದು ಸ್ಪಷ್ಟವಾಗಿಸಿದ ನೀತೀಶ್ ಕುಮಾರ್, ಕೇವಲ ಅಭಿವೃದ್ದಿ, ಹಿಂದುಳಿದವರ, ಬಡ ಜನರ ಏಳಿಗೆಯ ಮಂತ್ರದೊಂದಿಗೆ ಚುನಾವಣೆ ಗೆಲ್ಲಲು ಸಾಧ್ಯ ಎನ್ನುವ ಸಾಮಾನ್ಯ ಸತ್ಯದ ಪರಿಚಯ ಮಾಡಿಸಿದರು. ಹೀಗೆ ಅಭಿವೃದ್ದಿಯ ಏಕ ಮಾತ್ರ ಅಜೆಂಡಾ ಇಟ್ಟುಕೊಂಡು ಬಿಹಾರದ ಚುನಾವಣೆಯಲ್ಲಿ ಸೆಣಸಿದ ನೀತೀಶ್ ಕುಮಾರ್ ಅಭೂತಪೂರ್ವವಾದ ವಿಜಯವನ್ನೂ ಸಾಧಿಸಿದರು. ಚುನಾವಣೆಯ ಪ್ರಚಾರದ ವೇಳೆ ದಿಗ್ಗಜರನ್ನು ಪ್ರಚಾರಕ್ಕೆ ಇಳಿಸುವುದು ವಾಡಿಕೆ. ಹಿಂದುತ್ವದ ಪೋಸ್ಟರ್ ಬಾಯ್ ಗಳೆಂದೇ ಗುರುತಿಸಿಕೊಳ್ಳುವ ನರೇಂದ್ರ ಮೋದಿ ಮತ್ತು ವರುಣ್ ಗಾಂಧೀ ಯನ್ನ ಪ್ರಚಾರಕ್ಕೆ ಇಳಿಸಲು ಭಾಜಪ ಶ್ರಮ ಪಟ್ಟರೂ ನೀತೀಶ್ ಮಾತ್ರ ಪಟ್ಟು ಬಿಡದೆ ಯಾವುದೇ ಕಾರಣಕ್ಕೂ ಈ ಈರ್ವರು ವ್ಯಕ್ತಿಗಳು ಬಿಹಾರದಲ್ಲಿ ಕಾಲಿಡಕೂಡದು ಎಂದು ಸ್ಪಷ್ಟವಾಗಿ ತಾಕೀತು ಮಾಡಿದ್ದರು. ಈ ತಾಕೀತಿನ ತಾಕತ್ತಿನಿಂದ ಮತ್ತು ಸರ್ವರನ್ನೂ ಸಮಾನವಾಗಿ ನಡೆಸಿಕೊಳ್ಳುವ ತಮ್ಮ ಇರಾದೆಯಿಂದ ಸಮಾಜದ ಎಲ್ಲ ವರ್ಗಗಳ ಬೆಂಬಲ ಪಡೆದು ದೇಶದಲ್ಲಿ ಒಂದು ಹೊಸ ಸಾಮಾಜಿಕ ರಾಜಕೀಯ ಸಮೀಕರಣದ ನಿರ್ಮಾಣಕ್ಕೆ ನೀತೀಶ್ ಕಾರಣಕರ್ತರಾದರು. ಸ್ವಜನ ಪಕ್ಷಪಾತ, ಹಗರಣ, ಮತೀಯವಾದ, ಜಾತೀವಾದ ಮುಂತಾದ ಹಲವು ರೋಗಗಳಿಂದ ಬಳಲುತ್ತಿರುವ ಭಾರತೀಯ ರಾಜಕಾರಣಕ್ಕೆ ನೀತೀಶರಂಥ ರಾಜಕಾರಣಿಗಳು ತುಂಬಾ ಅವಶ್ಯಕ. ತೀರಾ ಹಿಂದುಳಿದ ರಾಜ್ಯವೆಂದು ಗೇಲಿಗೆ ಒಳಗಾಗಿದ್ದ ಬಿಹಾರಕ್ಕೆ ಒಂದು ಸುಂದರವಾದ ಆಡಳಿತವನ್ನು ನೀತೀಶರು ಕೊಡುವಂತಾಗಲಿ ಎಂದು ಹಾರೈಸೋಣ.