ನಗ್ನ ‘ಪ್ರದರ್ಶನ’, ಎಷ್ಟು ಸರಿ, ಏಕೆ ತಪ್ಪು?

nude protest
ಉಕ್ರೇನ್ ಒಂದು ದೇಶ, ಅಲ್ಲೊಂದು ಸಂಘಟನೆ. ಸ್ತ್ರೀ ಸ್ವಾತಂತ್ರ್ಯವಾದೀ ಸಂಘಟನೆ ಎಂದುಕೊಳ್ಳಿ. ಇವರು ಪ್ರದರ್ಶನ ಮಾಡೋದು ಅರೆ ನಗ್ನರಾಗಿ. ಅಂದರೆ ತಮ್ಮ ಸ್ತನಗಳ ಪ್ರದರ್ಶನದ ಮೂಲಕ. ‘ಫೆಮೆನ್’ ಹೆಸರಿನ ಈ ಸಂಘಟನೆ ಚಿಕ್ಕದಾದರೂ ಮೊಲೆಗಳಷ್ಟೇ ಪರಿಣಾಮಕಾರೀ ಇವರ ಚೇಷ್ಟೆ. (‘ಮೊಲೆ’ ಎನ್ನುವ ಪದ ಕೆಲವರಿಗೆ ಇಷ್ಟವಲ್ಲ. ಆದರೆ ಪಿ. ಲಂಕೇಶ್ ರವರ ಒಂದು ಪುಸ್ತಕದಲ್ಲಿ ಹೆಣ್ಣಿನ ಈ ಅವಯವಗಳನ್ನು ಆಡು ಭಾಷೆಯಲ್ಲಿ ಕರೆದಿದ್ದು ನನ್ನ ಧೈರ್ಯಕ್ಕೆ ಕಾರಣ).

ಹೆಣ್ಣನ್ನು ಎಗ್ಗಿಲ್ಲದೆ ಲೈಂಗಿಕ ವಾಗಿ ಚಿತ್ರಿಸುವುದನ್ನು, ಆಕೆ ಒಂದು ಭೋಗದ ವಸ್ತು ಎಂದು ಮಾತ್ರ ಬಗೆಯುವ ಲಜ್ಜೆಗೆಟ್ಟ “ಸುಸಂಸ್ಕೃತ’ರ ವಿರುದ್ಧ ಇವರ ಯುದ್ದ. ಯುಕ್ರೇನ್ ದೇಶವನ್ನು ‘ಲೈಂಗಿಕ ಪ್ರವಾಸ’ ತಾಣವಾಗಿ ಬಿಂಬಿಸುವ ಪ್ರಯತ್ನದ ವಿರುದ್ಧವೂ, ನ್ಯೂ ಜೀಲೆಂಡ್ ನ ರೇಡಿಯೋ ಕಾರ್ಯಕ್ರಮದಲ್ಲಿ ನಡೆದ ಸ್ಪರ್ದೆಯೊಂದರಲ್ಲಿ ವಿಜೇತನಿಗೆ ಸಿಕ್ಕ ಬಹುಮಾನ ಯುಕ್ರೇನ್ ಗೆ ಹೋಗಿ ಹೆಂಡತಿಯೊಬ್ಬ ಳನ್ನು ಪಡೆದುಕೊಳ್ಳುವ ‘ಆಫರ್’ ಬಗ್ಗೆ ಕೇಳಿದ ಕೆಲವು ಯುವತಿಯರು ವ್ಯಗ್ರರಾಗಿ ಯುಕ್ರೇನ್ ಒಂದು ವೇಶ್ಯೆಯರ ಕೋಣೆಯಲ್ಲ ಎಂದು ಪ್ರತಿಭಟಿಸಿ ಅ ಪ್ರತಿಭಟನೆಗೆ ಮೂರ್ತರೂಪವಾಗಿ ಫೆಮೆನ್ ಸಂಘಟನೆ ಆರಂಭಿಸಿದರು. ಇದರ ಸಂಸ್ಥಾಪಕಿ ೨೮ ರ ಪ್ರಾಯದ ಅನ್ನಾ ಹಟ್ಸೋಲ್. ಆಕೆಯೊಂದಿಗೆ ಅಲೆಕ್ಸಾಂಡ್ರ ಶೇವ್ಚೆನ್ಕೋ ಎನ್ನುವ ೨೫ ರ ತರುಣಿ.

ಇವರ ಬತ್ತಳಿಕೆಯಲ್ಲಿನ ಪರಿಣಾಮಕಾರಿಯಾದ ಅಸ್ತ್ರ ಎಂದರೆ ಡೈನಾಮೈಟು. ಅಂದರೆ, ಮೊಲೆಗಳು. ಇವುಗಳ ಪ್ರದರ್ಶನದ ಮೂಲಕ ಜನರಲ್ಲಿ ಇರುಸು ಮುರುಸು (ಸ್ತನ ಕಂಡರೆ ಇರುಸು ಮೂರುಸಾ?) ಮತ್ತು ಅವರನ್ನು embarrass ಮಾಡೋದು.
ಫೆಮೆನ್ ಸಂಘಟನೆಯ ಪರಿಧಿ ಬರೀ ಮಹಿಳೆಯರ ಬಗ್ಗೆ ಮಾತ್ರವಲ್ಲ. ಧರ್ಮದ ವಿರುದ್ಧ, ಮತ್ತು ಭ್ರಷ್ಟಾಚಾರದ ವಿರುದ್ಧ ಕೂಡಾ. ಯುಕ್ರೇನ್ ರಾಜಧಾನಿಯ ಹೊರಗೆ ೧೩ ಅಡಿ ಎತ್ತರದ ಮರದ ಶಿಲುಬೆಯನ್ನು ಗರಗಸದಿಂದ ಕತ್ತರಿಸಿ ಹಾಕಿ ಧರ್ಮದ ವಿರುದ್ಧದ ಕಳಹೆ ಊದಿದಳು ಫೆಮೆನ್ ಸದಸ್ಯೆ ಯೊಬ್ಬಳು.

ಜರ್ಮನಿ ದೇಶದ ಪ್ರವಾಸದ ಮೇಲಿದ್ದ ರಷ್ಯಾದ ಅಧ್ಯಕ್ಷ ಪುತಿನ್ ರನ್ನು ಅನ್ನಾ ಹಟ್ಸೋಲ್ ಅರೆ ನಗ್ನಳಾಗಿ ಪುತಿನ್ ರನ್ನು ಎದುರು ಗೊಂಡ ಈಕೆಯ ಶರೀರದ ಮೇಲೆ fuck dictator, fuck off putin, ಸಂದೇಶ ರಾರಾಜಿಸುತ್ತಿತ್ತು. ಇಂಥ ಮತ್ತು ಇತರೆ daring antics ಈಗಾಗಲೇ ಎಪ್ಪತ್ತು ಬಾರಿ ಬಂಧನಕ್ಕೆ ಒಳಗಾಗಿದ್ದಾಳೆ ಈಕೆ.

ಯುಕ್ರೇನ್ ನಲ್ಲಿ ಹುಟ್ಟಿದ ‘ಫೆಮೆನ್’ ಸಂಘಟನೆ ಜರ್ಮನಿ ಫ್ರಾನ್ಸ್ ದೇಶಗಳಲ್ಲೂ ಜನಪ್ರಿಯ. ಬ್ರೆಜಿಲ್ ಮತ್ತು ಫಿಲಿಪ್ಪೀನ್ಸ್ ದೇಶಗಳ ವರೆಗೆ ಇವರ ಪ್ರಭಾವ ಹರಡಿದೆ.

ಫೆಮೆನ್ ಸಂಘಟನೆಯ ಈ ಪ್ರದರ್ಶನದ ವೈಖರಿಯ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. ಮಹಿಳೆ ಯಾವುದರ ಪ್ರದರ್ಶನ ಮತ್ತು ದುರುಪಯೋಗದ ವಿರುದ್ದ ಧ್ವನಿ ಎತ್ತುತ್ತಿದ್ದಾ ಳೋ ಅವುಗಳದೇ ಪ್ರದರ್ಶನದ ಮೂಲಕ ಮತ್ತಷ್ಟು ಶೋಷಣೆಗೆ ಒಳಗಾಗಲು ಸಹಕರಿಸುತ್ತಿದ್ದಾಳೆ ಎಂದು ಕೆಲವರ ವಾದ. ಈ ಮಹಿಳೆಯರ ನಗ್ನ ಪ್ರದರ್ಶನದ ಬಗ್ಗೆ ತಕರಾರು ಎತ್ತುವ ಮಡಿವಂತರು ನಗ್ನವಾದ ‘ಡಬಲ್ ಸ್ಟಾಂಡರ್ಡ್’ ಪ್ರದರ್ಶನ ಮಾಡುತ್ತಿದ್ದಾರೆ. ಹೇಗೆಂದರೆ, ಮಹಿಳೆಯ ನಗ್ನ ಶರೀರವನ್ನು, ಅಥವಾ ಅರೆಬರೆ ಶರೀರವನ್ನು ವಾಚುಗಳನ್ನು ಮಾರಲೂ, ಕಾರಿನ ಟೈರುಗಳನ್ನು ಮಾರಲೂ, ಪುರುಷರ ಒಳ ಉಡುಪುಗಳನ್ನು ಬಿಕರಿ ಮಾಡಲೂ ಉಪಯೋಗಿಸಲು ಇಲ್ಲದ ಮಡಿವಂತಿಕೆ, ಆ ಚಿತ್ರಗಳನ್ನ ಜೊಲ್ಲು ಸುರಿಸುತ್ತಾ ನೋಡಿ ಆನಂದಿಸುವಾಗ ಎಲ್ಲಿ ಮೇಯಲು ಹೋಗಿರುತ್ತದೆ…?

ಸ್ತನಗಳು ಬಿಲ್ ಬೋರ್ಡ್ ಗಳ ಮೇಲೆ ಸಲ್ಲುವುದಾದರೆ ರಾಜ ಬೀದಿಗಳಲ್ಲೂ ಸಲ್ಲಲಿ ಅವುಗಳ ದರ್ಶನ.
‘ಫೆಮೆನ್’ ನ ಈ ಸಂದೇಶಕ್ಕೆ ಹೂಂ ಗುಟ್ಟ ಬಾರದೇ?