ಮೊಬೈಲ್ ಕಂಪೆನಿಗಳ ಮೋಸದ ವ್ಯಾಪಾರ

ನಮ್ಮ ದೇಶ ಮೊಸಗಾರಿಕೆಗೆ ಹೆಸರುವಾಸಿ. ಇದನ್ನು ಹೇಳುವುದಕ್ಕೋ, ಒಪ್ಪಿಕೊಳ್ಳುವುದಕ್ಕೋ ಯಾವ ಡೋಂಗಿ  ಅಭಿಮಾನವೂ ಅಡ್ಡ ಬರಬೇಕಿಲ್ಲ. ಭಾರತದಿಂದ ಹೊರಗಿರುವ, ವಿದೇಶದಲ್ಲಿ ದುಡಿಯುವ ಜನಕ್ಕೆ ಇಲ್ಲಿನ ಮೋಸ ಬಹಳ ಬೇಗನೆ ತಿಳಿಯುತ್ತದೆ. mobile ಬಗ್ಗೆ ಹೇಳಿದರೆ roaming, std, incoming charge, outgoing, charge, pulse rate, minute rate ತರಾವರಿ ಟೋಪಿಗಳು. ಕೆಲವೊಮ್ಮೆ ನಿಮಗೆ ತಿಳಿಯದಂತೆ ನಿಮ್ಮ ಖಾತೆಯಿಂದ ಹಣ ಮಾಯ. ನಮ್ಮ ಭೂ ಸಂಪತ್ತು, ಖನಿಜ ಸಂಪತ್ತು, ವನ ಸಂಪತ್ತು ಹೀಗೇ ಕಣ್ಣಿಗೆ ಕಂಡ ಸಂಪತ್ತೆನ್ನೆಲ್ಲಾ ರಾಜಕಾರಣಿಗಳ ಜೊತೆ ಸೇರಿ ಹಗಲು ದರೋಡೆ ಮಾಡಿದ ಮಹನೀಯರುಗಳು ನಮ್ಮ ಜೇಬಿನಲ್ಲೋ, ಮೊಬೈಲ್ ನಲ್ಲೋ ಅಳಿದುಳಿದ ಚಿಕಾಸುಗಳಿಗೂ ಕೈ ಹಾಕುತ್ತಿದ್ದಾರೆ ಎಂದರೆ ನಾಚಿಕೆ ಆಗುತ್ತದೆ.

ಯೋಚಿಸಿ, ಸುಮಾರು ೬೦ -೭೦ ಕೋಟಿ ಮೊಬೈಲ್ ಕನೆಕ್ಷನ್ ಗಳಿಂದ ದಿನಕ್ಕೆ ಐದೋ ಹತ್ತು ಪೈಸೆಯೂ ಕದ್ದರೂ ಸಾಕಲ್ಲವೇ? ರಿಂಗ್ ಟೋನ್ ವ್ಯಾಪಾರದ ಜೊತೆಗೇ ಹಾದರ ಬೇರೆ. ಹುಡಗಿಯರ ಮಾತನ್ನಾಡಿಸುವ ಸೌಕರ್ಯ ಕೂಡಾ.

ಈಗ ದೇಶವನ್ನು ೨೨ ವೃತ್ತಗಳನ್ನಾಗಿ ವಿಂಗಡಿಸಿ ರೋಮಿಂಗ್ ಅನ್ವಯ ಮಾಡಿದ್ದರು. ಅದನ್ನು ತೆಗೆದು ಹಾಕಿ ಇಡೀ ದೇಶವೇ ಒಂದು ವಲಯವನ್ನಾಗಿ ಘೋಷಿಸುತ್ತಾರಂತೆ. ಅಥವಾ ಧನಪಿಶಾಚಿ ಕಂಪೆನಿಗಳ ಧನ ದಾಹ ತಣಿಸಲು ಕನಿಷ್ಠ ದೇಶವನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸುತ್ತಾರಂತೆ.  ಇನ್ನು ಇದರ ವಿರುದ್ಧ ಮೊಬೈಲ್ ಕಂಪೆನಿಗಳು, ಅವರ ಚೇಲಾಗಳು ನ್ಯಾಯಾಲಯದ ಕಟ್ಟೆ ಹತ್ತಿ ಈ ನಿಯಮ ನೆನೆಗುದಿಗೆ ಬೀಳುವಂತೆ  ಮಾಡುತ್ತಾರೋ ಏನೋ.

ಹೀಗೊಂದು ಸಂಭಾಷಣೆ

ಫೋನಿನಲ್ಲಿ ಸಂಭಾಷಣಾ ನಿರತ ಜನ ತಮ್ಮ ಸುತ್ತ ಮುತ್ತ ಇತರೆ ಜನರಿರುತ್ತಾರೆ, ತಮ್ಮನ್ನು ಗಮನಿಸುತ್ತಿರುತ್ತಾರೆ, ನಮ್ಮ ಮಾತುಗಳನ್ನು ಕೇಳುತ್ತಿರುತ್ತಾರೆ ಎನ್ನುವ ಯಾವುದೇ ಪರಿವೆಯಿಲ್ಲದೆ ಸ್ವರ ಏರಿಸಿ ಬಡ ಬಡಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ಸೌಜನ್ಯಗಳ ಬಗ್ಗೆ ಜನರಿಗೆ ಅರಿವನ್ನು ಹೇಗೆ ಮೂಡಿಸ ಬಹುದೋ ಗೊತ್ತಿಲ್ಲ. ಮೊನ್ನೆ ಒಂದು ಚೆಕ್ಕಿನ ಬಗ್ಗೆ ವಿಚಾರಿಸಲು ಸೌದಿ ಅಮೇರಿಕನ್ ಬ್ಯಾಂಕ್ ಗೆ ಹೋದೆ. ಚೆಕ್ vip ವಿಭಾಗಕ್ಕೆ ಸೇರಿದ್ದರಿಂದ ವಿಶಾಲವಾದ, ಸುಸಜ್ಜಿತ vip lounge ನಲ್ಲಿ ಆಸೀನನಾದೆ. ನನ್ನ ಪಕ್ಕದಲ್ಲಿ ಸುಮಾರು ನಲವತ್ತು ನಲವತ್ತೈದರ ಸೌದಿ ಯೊಬ್ಬ ಬರ್ಮುಡಾ ಚಡ್ಡಿ, ಬೇಸ್ ಬಾಲ್ ಟೋಪಿ ಧರಿಸಿ ಫೋನಿನಲ್ಲಿ ಹರಟುತ್ತಿದ್ದ. ಆತನ ಮಾತಿನಿಂದ ತಿಳಿಯಿತು ಅವನೊಬ್ಬ ಅತ್ಯಾಧುನಿಕ, ಸ್ಪೋರ್ಟ್ಸ್ ಮಾಡೆಲ್ ಕಾರುಗಳ ಡೀಲರ್, ಮತ್ತು ಆತನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದವನು ಅಮೆರಿಕೆಯವನು ಎಂದು. ಸೌದಿ ಅವನಿಗೆ ಹೇಳಿದ ಹೌದು ನೀನು ಕೇಳುತ್ತಿರುವ ಕಾರು ನನ್ನ ಹತ್ತಿರ ಇದೆ, ನಾನು ನಾಳೆ ರಿಯಾಧ್ ಗೆ ಬರುತ್ತಿದ್ದೇನೆ, ಬರುವುದು ವಿಮಾನದಲ್ಲಲ್ಲ ನನ್ನ porsche ಕಾರಿನಲ್ಲಿ, ನನಗೆ ಸುಮಾರು ೧೦ ಘಂಟೆಗಳ ಸಮಯ ಹಿಡಿಯಬಹುದು ಎಂದು ಹೇಳುತ್ತಿದ್ದ. ಜೆಡ್ಡಾ ದಿಂದ ರಿಯಾಧ್ ಸುಮಾರು ೧೪೦೦ ಕಿ.ಮಿ. porsche (ಪೋರ್ಷೆ) ಅತಿ ವೇಗವಾಗಿ ಸರಾಗವಾಗಿ ಚಲಿಸಬಲ್ಲ ಕಾರು. ಈ ಸೌದಿ ೧೦ ಘಂಟೆಗಳು ಸಾಕು ರಿಯಾದ್ ತಲುಪಲು ಸಾಕು ಎಂದಾಗ ಅಮೆರಿಕೆಯವ ಹೇಳಿದ ನಿಧಾನವಾಗಿ ಓಡಿಸು ಕಾರನ್ನು, express way ರಸ್ತೆಯಲ್ಲಿ ಅಪಘಾತ ಹೆಚ್ಚು ಎಂದು ಎಚ್ಚರಿಸಿದ. ಅದಕ್ಕೆ ಸೌದಿ ಹೇಳಿದ, ಹೇಯ್ ನೀನೇನು ಭಯ ಪಡಬೇಡ. ನಾನು ಸಣಕಲು ವ್ಯಕ್ತಿ, ಅಪಘಾತವಾದರೂ ಎಲ್ಲಾದರೂ ಮರುಭೂಮಿಯಲ್ಲಿ ಹಾರಿ ಬಿದ್ದಿರುತ್ತೇನೆ, ಆದರೆ ದೊಡ್ಡ ಹೊಟ್ಟೆಯ ಸ್ಥೂಲಕಾಯದವರಾದರೆ ಚಿಂದಿ ಚಿಂದಿ ಆಗುತ್ತಾರೆ (they will go smithereens) ಅಪಘಾತವಾದಾಗ ಎಂದು ಹೇಳುತ್ತಿದ್ದ. ನಮ್ಮ ಮುಂದಿನ ಸೋಫಾದಲ್ಲಿ ಸೂಟು ಬೂಟು ತೊಟ್ಟ ಲೆಬನಾನ್ ದೇಶದವನ ಥರ ಕಾಣುತ್ತಿದ್ದ ಸ್ಥೂಲ ಕಾಯದ ವ್ಯಕ್ತಿಯೊಬ್ಬ ಕುಳಿತಿದ್ದ. ಈಗಾಗಲೇ ಈ ಜೋರಾದ ಸಂಭಾಷಣೆಯಿಂದ ಬೇಸತ್ತಿದ್ದ ಆ ವ್ಯಕ್ತಿ ಈ ಸ್ಥೂಲ ಕಾಯದವರ ಬಗ್ಗೆ ಸೌದಿ ಆಡಿದ ಮಾತಿನಿಂದ ಕುಳಿತಲ್ಲಿಂದಲೇ ಮಿಸುಕಾಡುತ್ತಿದ್ದ. ಹೀಗೆ ಹೇಳಿದ ವ್ಯಕ್ತಿ ಸೌದಿ ಅಲ್ಲದಿದ್ದರೆ ಸರಿಯಾದ ಉತ್ತರ ಕೊಡುತ್ತಿದ್ದನೇನೋ ಪಾಪ ಆ ಡುಮ್ಮ, ಆದರೆ ಈ ಮಾತುಗಳನ್ನ ಕೇಳಿ ಅವನಿಗೆ ಅಲ್ಲಿ ಕೂತಿರಲು ಆಗದೆ ನಿಧಾನವಾಗಿ ತನ್ನ ಶರೀರವನ್ನು ಸೋಫಾದಿಂದ ಆರೋಹಣ ಮಾಡಿ ಕಾಲ್ತೆಗೆದ. ಈ ಸನ್ನಿವೇಶ ನೋಡಿ ನನಗೆ ನಗು ತಡೆಯಲಾಗಲಿಲ್ಲ. ಇಲ್ಲಿಗೆ ನಿಲ್ಲಲಿಲ್ಲ ಪುಕ್ಕಟೆ ಮನರಂಜನೆ, ಸೌದಿಯ ಮಾತು ಇನ್ನೂ ಮುಂದುವರೆದಿತ್ತು. ಅಮೆರಿಕೆಯವ ಹೇಳಿದ ನಾನು feeling lonely in riyadh ಎಂದು, ಅದಕ್ಕೆ ಥಟ್ಟನೆ ಈ ಸೌದಿ ಅವನಿಗೆ ಹೇಳಿದ your lonliness and my kindness might prompt you to do something (ನಿನ್ನ ಒಂಟಿತನ ಮತ್ತು ನನ್ನ ಒಳ್ಳೆಯತನ “ಬೇಡದ್ದನ್ನು” ಮಾಡಲು ನಿನ್ನನ್ನು ಪ್ರೇರೇಪಿಸಬಹುದು) ಹ ಹ ಹಾ ಎಂದು ನಕ್ಕ.

ನೀವೂ ಮರೆಗುಳಿಯೋ?

ಎಂದಿನಂತೆ ಇಂದೂ ಬೆಳಿಗ್ಗೆ ತಡಬಡಿಸಿ ಎದ್ದೆ. ಸ್ನಾನಕ್ಕೆ ಮತ್ತು ತಯಾರಾಗಲು ಬೇಕಾದ ಸಮಯ ಇಟ್ಟುಕೊಂಡು ಮಾತ್ರ ನಾನು ಏಳೋದು. ಸರಿ ಎದ್ದು ತಯಾರಾಗಿ ರಕ್ತದೊತ್ತಡದ ಮಾತ್ರೆ ತೆಗೆದುಕೊಳ್ಳೋಣ ಎಂದು ಸ್ವಲ್ಪ ನೀರನ್ನು ಕುಡಿದು ಪ್ಯಾಕೆಟ್ ತೆರೆಯುತ್ತಿದಂತೆ ನನಗೊಂದು ಸಂಶಯ. ನಾನು ಆಗಲೇ ಮಾತ್ರೆ ತೆಗೆದು ಕೊಂಡೆನೋ ಎಂದು. ಕೇವಲ ಕೆಲವೇ ಸೆಕೆಂಡುಗಳ ಅಂತರದಲ್ಲಿ ಸಂಶಯ ಪಿಶಾಚಿಯ ಆಗಮನ. ಈ ತೆರನಾದ ಮರೆಗುಳಿಗಳಿಗೆ ಔಷಧಿ ಕಂಪೆನಿಯವರು tablet strip ಹಿಂದುಗಡೆ ವಾರದ ಹೆಸರುಗಳನ್ನ ಹಾಕಿರುತ್ತಾರೆ. ಆದರೆ ದುರದೃಷ್ಟಕ್ಕೆ ನನ್ನ concor strip ಮೇಲೆ ಆ ಸೌಲಭ್ಯ ಇಲ್ಲ. ಥುತ್ ಹಾಳಾದ್ದು, ಸಂಶಯವೇ ಬೇಡ ಎಂದು ಮಾತ್ರೆ ತೆಗೆದುಕೊಳ್ಳದೆ ಕಾರಿನ ಕೀಲಿಗಳನ್ನು ತೆಗೆದಕೊಂಡು ಹೊರನಡೆಯ ಬೇಕು ಎನ್ನುವಷ್ಟರಲ್ಲಿ ಮತ್ತೊಂದು ಸಂಶಯ. ಲೇ, ನಾನು ತಲೆ ಬಾಚಿ ಕೊಂಡಿದ್ದೀನಾ, ಸ್ವಲ್ಪ ನೋಡು ಎಂದೆ. ಈಗಾಗಲೇ ನನ್ನನ್ನು ಗಮನಿಸುತ್ತಿದ್ದ ಪತ್ನಿ ಕೇಳಿದಳು, ಏನಾಗಿದೆರೀ ನಿಮಗೆ ಇವತ್ತು ಎಂದು ನನ್ನನ್ನೇ ಅಚ್ಚರಿಯಿಂದ ನೋಡಿ ಹೇಳಿದಳು ಬಾಚಿದ್ದೀರಾ ಹೋಗಿ ಎಂದು. ಮತ್ತೊಂದು ದಿನವೂ ಹೀಗೆಯೇ. ಆಫೀಸಿಗೆ ಹೊರಟೆ, ಮೊಬೈಲ್, ಕಾರಿನ ಕೀಲಿ, ವಾಲೆಟ್, ಎಲ್ಲಾ ಹಿಂದೆ ಬಿಟ್ಟು. ಕಾರಿನ ಕೀಲಿ ಬಿಟ್ಟು ಆಫೀಸಿಗೆ ಹೇಗೇ ಹೋಗುತ್ತೀರಾ, ನಡೆದುಕೊಂಡಾ ಎಂದು ನಾನು ಬಿಟ್ಟ ಎಲ್ಲಾ ವಸ್ತುಗಳನ್ನ ನನ್ನ ಕೈಗೆ ತುರುಕಿ ಬೀಳ್ಕೊಟ್ಟಳು. ಈ ರೀತಿಯ ಮರೆಗುಳಿತನದಿಂದ ಮೈ ಪರಚಿ ಕೊಳ್ಳುವಂತಾದರೂ ಚರ್ಮದ ಮೇಲೆ ಗೆರೆಗಳು ಉಳಿಯುತ್ತವೆಯೇ ಹೊರತು ಬೇರೆ ಪ್ರಯೋಜನ ಕಾಣದು.  ಆಶ್ಚರ್ಯ ಏನೆಂದರೆ ನಾವು ತೀರಾ ಅವಲಂಬಿತರಾಗಿರುವ ಮೊಬೈಲ್ ಅನ್ನು ಸಹಾ ಬಿಟ್ಟು ಹೋಗುತ್ತೇವೆ. ನನ್ನದು ಆನೆಯ ರೀತಿಯ ತೀಕ್ಷ್ಣ ಜ್ಞಾಪಕ ಶಕ್ತಿ ಎಂದು ಹೆಮ್ಮೆ ಪಡುವ ನಮ್ಮ ಬಾಸ್ ಸಹ ಹಲವು ಸಲ ಮೊಬೈಲ್ ಮನೆಯಲ್ಲಿ ಬಿಟ್ಟು ಬಂದಿರುತ್ತಾರೆ.     

ಮರೆಗುಳಿತನದ ಅನುಭವಗಳು baffling. Absent minded professor ಕಥೆ ನಮಗೆ ತಿಳಿದೇ ಇದೆ. ಯಾವಾಗಲೂ ತನ್ನ ಊರುಗೋಲನ್ನು ಹಿಡಿದು ಹೊರ ಹೋಗುತ್ತಿದ್ದ ಪ್ರೊಫೆಸರ್ ಮನೆಗೆ ಬಂದ ನಂತರ ಊರುಗೋಲನ್ನು ಬಾಗಿಲಿನ ಹಿಂದೆ ಇಟ್ಟು ಸೋಫಾದ ಮೇಲೆ ಕೂರುತ್ತಿದ್ದ. ಒಂದು ದಿನ ಅದೇನನ್ನೂ ಆಲೋಚಿಸುತ್ತಾ ಮನೆಗೆ ಬಂದ ಅವನು ಊರು ಗೋಲನ್ನು ಸೋಫಾದ ಮೇಲೆ ಕೂರಿಸಿ, ತಾನು ಹೋಗಿ ಬಾಗಿಲಿನ ಹಿಂದೆ ನಿಂತನಂತೆ. ಒಂದು ದಿನ ನಾನು ಸಾಕ್ಸ್ ಇಲ್ಲದೆ ಶೂ ಧರಿಸಿ, ಸಾಕ್ಸನ್ನು ಶೂಗೆ ತೊಡಿಸಲು ನೋಡಿದ್ದನ್ನು ನನ್ನ ಹೆಂಡತಿ ನೋಡಿ ಹೊಟ್ಟೆ ತುಂಬಾ ನಕ್ಕಿದ್ದಳು. alzheimer ಖಾಯಿಲೆ ಹತ್ತಿ ಕೊಂಡರೆ ಮರೆವು ಹೆಚ್ಚಂತೆ. ಮರೆವೇ ಈ ರೋಗದ ಮುಖ್ಯ ಲಕ್ಷಣ ಕೂಡಾ. 

ಕೆಲವರು ಕೋಣೆಗೆ ಹೋಗುತ್ತಾರೆ ಏನನ್ನೋ ತರಲು ಎಂದು, ಕೋಣೆ ತಲುಪಿದ ಕೂಡಲೇ ಮರೆತು ಬಿಡುತ್ತಾರೆ ಏನನ್ನು ತರಲು ಕೋಣೆಗೆ ನುಗ್ಗಿದ್ದು ಎಂದು. ಈ ರೀತಿಯ ಮರೆವಿಗೆ ಪ್ರಾಣಿಗಳೂ ಹೊರತಲ್ಲ, ಕೆಳಗಿದೆ ನೋಡಿ ಒಂದು ಉದಾಹರಣೆ.

ಹಾವುರಾಣಿ ಎನ್ನುವ ಜೀವಿಯೂ ಮರೆಗುಳಿಯಂತೆ. ಕಚ್ಚ ಬೇಕೆಂದು ಓಡಿ ಬರುವ ಅದಕ್ಕೆ ಹತ್ತಿರ ಬರುತ್ತಲೇ ಕಚ್ಚಬೇಕೆನ್ನುವುದು ಮರೆತುಬಿಡುತ್ತದಂತೆ. ಈ ಕಾರಣಕ್ಕಾಗಿಯೇ ಹಾವು ರಾಣಿ ಕಚ್ಚುವುದಿಲ್ಲ.

ನಾವೆಲ್ಲಾದರೂ ಏನನ್ನಾದರೂ ಮರೆತರೆ ನಮ್ಮ ಬಾಸ್ ಹೇಳುತ್ತಾರೆ, i know what I had asked you to do, I dont forget. My memory is like elephant’s. ಅಂದರೆ ಆನೆ ತೀಕ್ಷ್ಣ ಮತಿ ಅಂತ, ಅಲ್ವರ?  

ಕೆಲವೊಮ್ಮೆ ADHD ಇದ್ದರೂ ರೀತಿಯ ಮರೆವಿನ ತೊಡಕುಗಳು ಎದುರಾಗುತ್ತವೆ. attention deficit hyperactivity disorder ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಬಹುದು. ಇದಕ್ಕೆ ವೈದ್ಯಕೀಯ ನಿವಾರಣೆ ಇದೆ.  

ಗರ್ಭಿಣಿಯರಿಗೆ ಮರೆವು ಜಾಸ್ತಿ. ಇದಕ್ಕೆ pregnancy-induced brain fog ಎನ್ನುತ್ತಾರೆ. ಆದರೆ ಇದು ತಾತ್ಕಾಲಿಕ. ಹಾರ್ಮೋನುಗಳ ಏರು ಪೇರಿನಿಂದ ಆಗುತ್ತದೆ ಎಂದು ಹೇಳುತ್ತದೆ ವೈದ್ಯ ಶಾಸ್ತ್ರ.

ನೆನಪಿನಲ್ಲಿಡಬೇಕಾದ್ದನ್ನು ಬರೆದಿಟ್ಟು ಕೊಂಡರೆ ಒಳ್ಳೆಯದಂತೆ. ಈಗಂತೂ ಆಧುನಿಕ gadget ಗಳ ಯುಗ. black berry, laptop ಹೀಗೆ ಹಲವು ಉಪಕರಣಗಳು ನಮ್ಮ ಸಹಾಯಕ್ಕೆ. ಎಲ್ಲವನ್ನೂ ನಮ್ಮ ನೆನಪಿನ ಸುಪರ್ದಿಗೆ ಬಿಡದೆ ಬರೆದಿಟ್ಟು ಕೊಳ್ಳುವುದು ಒಳ್ಳೆಯದು ಎನ್ನುವುದಕ್ಕೆ ಒಂದು ಚೀನೀ ಗಾದೆಯೂ ಇದೆ, The palest ink is better than the best memory. ಅತ್ಯುತ್ತಮ ಜ್ಞಾಪಕಶಕ್ತಿಗಿಂತ ಮಬ್ಬಾದ ಮಸಿ ಒಳ್ಳೆಯದು.

ದೊಡ್ಡ embarrassing ಮರೆವು ಎಂದರೆ ನಾವು ಭೇಟಿ ಮಾಡಿದವರ, ಹೆಸರುಗಳನ್ನ ಮರೆಯೋದು. ನನಗಂತೂ ನನ್ನ ನಾದಿನಿಯ ಹೆಸರೂ ನೆನಪಿನಲ್ಲಿ ಇರುವುದಿಲ್ಲ, ಈ ಕಾರಣ ಹೆಂಡತಿಯಿಂದ ತಿವಿಸಿಕೊಂಡಿದ್ದೂ ಇದೆ.      

ನನಗೆ ತಿಳಿದ ಮಟ್ಟಿಗೆ ಈ ರೋಗಕ್ಕೆ ಕಾರಣ ನಮ್ಮ mind. ನಾನು ಮರೆಗುಳಿ, ನನ್ನ ತಲೆಯಲ್ಲಿ ಏನೂ ಉಳಿಯೋದಿಲ್ಲ, ಒಂದು ರೀತಿಯ ಜರಡೆಯಂತೆ ನನ್ನ ಜ್ಞಾಪಕ ಶಕ್ತಿ ಎಂದು ನಿಮ್ಮ ತಲೆಯನ್ನು  ನೀವೇ ಕೀಳರಿಮೆಯಿಂದ ನಡೆಸಿ ಕೊಂಡರೆ ಫಲಿತಾಂಶ ಮರೆಗುಳಿತನ. ಅದೇ ಸಮಯ ಆತ್ಮ ವಿಶ್ವಾಸದಿಂದ ನಾನು ನೆನಪಿಟ್ಟು ಕೊಳ್ಳ ಬಲ್ಲೆ ಎಂದು ನೆನಪಿಟ್ಟುಕೊಳ್ಳ ಬೇಕಾದ್ದನ್ನು ಶ್ರದ್ಧೆಯಿಂದ, ಗಮನವಿಟ್ಟು ಕೇಳಿ, ಓದಿದರೆ ಖಂಡಿತಾ ನಿಮ್ಮ ನೆನಪು ನಿಮಗೆ ಕೈಗೆ ಕೊಡುವುದಿಲ್ಲ.

ಇದನ್ನು ಬರೆಯುತ್ತಿದ್ದಂತೆ ನನ್ನ ಹೆಂಡತಿಯ ಫೋನ್ ಬಂತು. ಯಾಕೆ ಫೋನ್ ಮಾಡಿದ್ದು ಎಂದು ಕೇಳಿದ್ದಕ್ಕೆ ಅವಳು ಕೊಟ್ಟ ಉತ್ತರ, ಅಯ್ಯೋ ಮರೆತೆ ಹೋಯಿತು ಯಾಕೆ ಕರೆದಿದ್ದು ಅಂತ, ನೀವು ಫೋನ್ ಇಡಿ, ನೆನಪಾದಾಗ ಆಮೇಲೆ ಮಾಡುತ್ತೇನೆ ಎಂದಳು. ಅಂದರೆ ಈ ಮರೆವು universal, ನನಗೆ ಮಾತ್ರ ತಗುಲಿ ಕೊಂಡ ಪ್ರಾರಬ್ದ ಅಲ್ಲ.