ಸೊಕ್ಕಿದ ಪ್ರವಾಸಿ

ಭಾರತ ಇಂಗ್ಲೆಂಡ್ ಪ್ರವಾಸದಲ್ಲಿದೆ. ನಾಲ್ಕು ಟೆಸ್ಟ್ ಮತ್ತು ಇತರೆ ಪಂದ್ಯಗಳಲ್ಲಿ ಭಾಗವಹಿಸಲು ಬಂದ ಭಾರತ ಬರುತ್ತಲೇ ವಿವಾದದ ಕಂಬಳಿಯ ಮೇಲೆ ಕಾಲಿಟ್ಟಿತು. ಹೊಸ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಲು ಒಲ್ಲದ ಸೊಕ್ಕಿದ ಪ್ರವಾಸಿಗರು ಎಂದು ಇಂಗ್ಲೆಂಡ್ ನ ಪತ್ರಿಕೆಯೊಂದು ನಮ್ಮನ್ನು ಜರೆಯಿತು. ಅತಿಥಿಗಳನ್ನು ಆದರಿಸುವ ಪರಿ ಇದು. ಹೊಸ ತಂತ್ರ ಜ್ಞಾನ ( lbw verdicts under the Decision Review System ) ವನ್ನು ನಾವು ತಿರಸ್ಕರಿಸಿದ್ದಿದ್ದರೆ ಅದಕ್ಕೆ ಉತ್ತರಿಸ ಬೇಕಾದ ರೀತಿ ಇದಲ್ಲ.

ಹೌದು ಕ್ರಿಕೆಟ್ ಇಂಗ್ಲೆಂಡಿನ ಹುಲ್ಲುಗಾವಲಿನಲ್ಲಿ ಕುರಿ ಮೇಯಿಸುತ್ತಿದ್ದ ಕುರುಬರಿಂದ ಬಂದಿರಬಹುದು. ಆದರೆ ಆ ಕ್ರೀಡೆಗೆ ಮಾನ್ಯತೆ, ಜನಪ್ರಿಯತೆ, ರಂಗು, ಸ್ಪರ್ದೆ ಎಲ್ಲವನ್ನೂ ಒದಗಿಸಿದ್ದು ಏಷ್ಯಾದ ತಂಡಗಳು. ಕ್ರಿಕೆಟ್ ಇಂದು ವಿಶ್ವ ಮಾನ್ಯ ಕ್ರೀಡೆಯಾಗಿ ಕಂಗೊಳಿಸಿದರೆ ಅದರ ಕೀರ್ತಿಗೆ ಭಾರತ, ಶ್ರೀಲಂಕಾ, ಪಾಕಿಸ್ತಾನ ಭಾಜನರು. ಅದರಲ್ಲೂ ಭಾರತೀಯರ ಅಭೂತಪೂರ್ವ ಬೆಂಬಲ ಇಂದು ಕ್ರಿಕೆಟ್ ಶ್ರೀಮಂತ ಕ್ರೀಡೆಯಾಗಿ ಹೊರ ಹೊಮ್ಮಲು ಕಾರಣ. ಭಾರತ ವಿಶ್ವದ ನಂಬರ್ ವನ್ ಕ್ರಿಕೆಟ್ ರಾಷ್ಟ್ರವಾಗದೆ ಬರೀ ಒಂದು “ಆಮ್ಲೆಟ್” ಆಗಿದ್ದಿದ್ದರೆ ಸರಿಯಾಗಿ ಬೆಂದಿಲ್ಲ ಎಂದು ಅಡುಗೆ ಕೋಣೆಗೆ ಕಳಿಸಬಹುದಿತ್ತು. ಈ ಮಾತಿನ ಧಾಟಿ ನೋಡಿ. ನಮ್ಮ ನಡತೆ ಸರಿಯಿಲ್ಲ ಎಂದು ಅವರ ಭಾವನೆ. ಭಾರತದ ನಿರ್ಧಾರದ ವಿರುದ್ಧ ICC ಮೊರೆ ಹೋಗೋ ಬದಲು ಮಾಧ್ಯಮದ ಮೊರೆ ಏಕೆ ಹೋದರೋ ಅವರಿಗೇ ಗೊತ್ತು. ಈ ಸರಣಿಯಲ್ಲಿ ಯಾರ ಕಾನೂನಿಗೆ ಮಾನ್ಯತೆ ಎಂದು ಎಂಬುದನ್ನು ಭಾರತ ತೋರಿಸಿ ಕೊಟ್ಟಿತು ತನ್ನ ರೂಪಾಯಿಯ ಶಕ್ತಿ (“rupee-pile of influence” ) ಮೂಲಕ ಎಂದು ದೂರಿತು ಪತ್ರಿಕೆ.

ವೆಸ್ಟ್ ಇಂಡೀಸ್ ನಲ್ಲಿ ಭಾರತದ ನಾಯಕ ಹೇಳಿದ ಮಾತನ್ನೂ ಈ ಲೇಖನದಲ್ಲಿ ಉದ್ಧರಿಸಲಾಯಿತು; ಆತ್ಮ ಸಾಕ್ಷಿಯಿಲ್ಲದೆ ಬಿಳಿ ಕೋಟ್ (ಅಂಪೈರ್) ಧರಿಸಿದವರ ಮೇಲೆ ಒತ್ತಡ ಹೇರಲಾಯಿತಂತೆ.

“ಆಧುನಿಕ ತಂತ್ರಜ್ಞಾನ ಉಪಯೋಗಿಸಲು ಒಪ್ಪದಿರುವುದು ಪ್ರವಾಸಿಗಳು ಮಾಡಿದ ವಿಧ್ವಂಸಕ ಕೃತ್ಯ” ಎನ್ನುವ ಶೀರ್ಷಿಕೆಯಡಿ ಬಂದ ಉದ್ದನಾದ ಲೇಖನ ಟೀಕೆ ಮಾಡಬೇಕೆಂದೇ ಬರೆದಿದ್ದು. ಕ್ರೀಡೆಯಲ್ಲೇ ಆಗಲೀ, ಸಂಸ್ಕಾರದಲ್ಲೇ ಆಗಲೀ, ವಾಣಿಜ್ಯವಹಿವಾಹಿಟಿನಲ್ಲೇ ಆಗಲೀ ಭಾರತದ ಉನ್ನತಿ ವಿದೇಶೀಯರಿಗೆ ಜೀರ್ಣಿಸಿಕೊಳ್ಳಲಾಗದ ಬೆಳವಣಿಗೆ. ಹೀಗೆ ಅಜೀರ್ಣದಿಂದ ನರಳುವಾಗ ದೇಶವೊಂದು “ಮೊಟ್ಟೆ ದೋಸೆ” ( ಆಮ್ಲೆಟ್ ) ಆಗಿ ಕಾಣುತ್ತದೆ. ಪ್ರವಾಸಿಗಳು ಸೊಕ್ಕಿದವರಂತೆ ಕಾಣುತ್ತಾರೆ.

http://www.independent.co.uk/sport/cricket/james-lawton-arrogant-tourists-refusal-to-embrace-technology-was-nothing-short-of-sabotage-2318950.html

ಚಂದ್ರ ಮತ್ತಷ್ಟು ಹತ್ತಿರ, ಆಪ್ತ

ಚಂದ್ರ ಮತ್ತಷ್ಟು ಹತ್ತಿರ, ಆಪ್ತ. ೧೯ ವರ್ಷಗಳ ನಂತರ ಇಂದು ಚಂದ್ರ ನಮಗೆ ಹತ್ತಿರ ಬಂದಿದ್ದಾನಂತೆ. ಭೂವಾಸಿಗಳಲ್ಲಿ ಅದ್ಯಾವ ಹೆಗ್ಗಳಿಕೆ ನೋಡಿ ಬಂದನೋ ಇನ್ನಷ್ಟು ಸಮೀಪ ನನಗೆ ತಿಳೀದು, ಆದರೆ ಸೂಪರ್ ಮೂನ್, ಮೆಗಾ ಮೂನ್, ಡಬ್ಬಲ್ ಮೂನ್ ಹಾಗೆ ಹೀಗೆ ಎಂದು ಕೆಲದಿನಗಳಿಂದ ಕೇಳುತ್ತಾ ಇದ್ದುದರಿಂದ ಸಂಜೆಯ ದೂರದ ನೆಂಟನಿಗಾಗಿ ಕಾದು ಕೂತೆ. ಮಧ್ಯಾಹ್ನದ ಉರಿ ಸೂರ್ಯ, ಸಂಜೆಯಾಗುತ್ತಾ ಬೆಳ್ಳಿ ಬಣ್ಣ ಪಡೆದುಕೊಂಡು, ಸ್ವಲ್ಪ ನಂತರ ತನ್ನ ಮೈಯ್ಯನ್ನು ಕಿತ್ತಳೆ ಬಣ್ಣಕ್ಕೆ ಬದಲಿಸಿಕೊಂಡು ತನ್ನ ವಧು ಕೆಂಪು ಸಮುದ್ರದ ತೆಕ್ಕೆಗೆ ಜಾರಿದ ಕೆಲ ಹೊತ್ತಿನಲ್ಲೇ ಕಳ್ಳ ನಗೆ ಬೀರುತ್ತಾ ಬಂದ ನಮ್ಮ ಮಾಮ. ಚಂದಾಮಾಮ. ಅರೆ, ಇದೇನಿದು,  ೧೯ ವರ್ಷಗಳ ನಂತರ ಹತ್ತಿರ ಬಂದ ಈ ಮಾಮ ಥೇಟ್ ಹಿಂದಿನ ಮಾಮನ ಥರವೇ ಇದ್ದ. ಮುಖದಲ್ಲಿ ಸ್ವಲ್ಪ ಹೆಚ್ಚು ಮಾಂಸ ತುಂಬಿಕೊಂಡು ನಳನಳಿಸುತ್ತಾ ಬರಬಹುದು ಎಂದೆಣಿಸಿದ್ದ ನನಗೆ ಕಾಣಲು ಸಿಕ್ಕಿದ್ದು ಅದೇ age old ಮಾಮ. (ಅಂಕಲ್ ಅಂತ ಅವನನ್ನು ಕರೆಯಲು ನನಗೆ ಇಷ್ಟವಿಲ್ಲ. ಬಸ್ ಸ್ಟಾಂಡ್ ನಲ್ಲಿ ಕೈ ಚಾಚಿ ಬೇಡುವವನೂ, ಬಸ್ಸಿನ ಸೀಟಿಗಾಗಿ ಜಗಳ ಕಾಯುವವರೆಲ್ಲಾ ಅಂಕಲ್ ಗಳೇ ಆದ್ದರಿಂದ ನಮ್ಮ ಚಂದಾ ಮಾಮನಿಗೆ ಆಂಗ್ಲ ಪ್ರಯೋಗ ಬೇಡ.). ನನ್ನ ಬರಿಗಣ್ಣಿಗೆ ಇವನು ಅದೇ ಗಾತ್ರದ ಮಾಮ. ಮುಖದ ತುಂಬಾ freckles ಇದ್ದರೂ ತನ್ನ ಕಾಂತಿಯನ್ನು ತನ್ನನ್ನು ಸುತ್ತುವರೆದ ಮೋಡಗಳಿಗೂ ನೀಡುತ್ತಾ aloof ಆಗಿ ಆಗಸಕ್ಕೆ ಅಂಟಿ ಕೊಂಡ ಮಾಮ. ಬಹುಶಃ ಇವನ ನಿಖರವಾದ ಅಳತೆಗೆ ಸ್ಟೆತಾಸ್ಕೋಪು, ಪೆರಿಸ್ಕೋಪು, ಟೆಲಿಸ್ಕೋಪು ಇವ್ಯಾವುದೂ ನನ್ನಲ್ಲಿಲ್ಲದೆ ಇರೋದ್ರಿಂದ ನನಗೆ ಹಳೇ ಮಾಮನ ದರ್ಶನದ ಭಾಗ್ಯ ಮಾತ್ರಾ.  ಸೂಪರ್ ಮೂನ್ ವಿದ್ಯಮಾನದಲ್ಲಿ ಸೂರ್ಯ , ಭೂಮಿ ಮತ್ತು ಚಂದಿರರು ಒಂದೇ ರೇಖೆಯಲ್ಲಿ ಇದ್ದು ಚಂದ್ರ ಮತ್ತು ಭೂಮಿಗಳು ಸ್ವಲ್ಪ ಸಮೀಪಕ್ಕೆ ಬರುತ್ತವಂತೆ. ಸೂಪರ್ ಮೂನ್ ಕಾರಣ, ಪ್ರವಾಹ, ಭೂಕಂಪ, ಜ್ವಾಲಾ ಮುಖಿ, ಬಿರುಗಾಳಿಗಳೂ ಸಂಭವಿಸಬಹುದಂತೆ. ಬ್ರೇಕಿಂಗ್ ನ್ಯೂಸ್ ನಲ್ಲಿ ಇದುವರೆಗೂ ಯಾವುದೇ ಅಹಿತಕರ ನೈಸರ್ಗಿಕ ಅವಘಡ ಸಂಭವಿಸಿಲ್ಲ.

ಒಂದೇ ಒಂದು ಅವಘಡ ಏನೆಂದರೆ ಕಳೆದ ಹಲವು “ವಿಶ್ವಕಪ್ ಪಂದ್ಯಾವಳಿ” ಯ ೩೫ ಪಂದ್ಯಗಳಲ್ಲಿ ಮೊಟ್ಟ ಮೊದಲ ಬಾರಿಗೆ ಆಸ್ಟ್ರೇಲಿಯಾ ಸೋಲನ್ನು ಕಂಡಿದ್ದು ಅದೂ ದುರ್ಬಲ, ಪಾಕ್ ತಂಡದ ಕೈಯ್ಯಲ್ಲಿ.     

ಹೀಗೇ ಸುಮ್ಮನೆ: ಸೂಪರ್ ಮೂನ್ ಎನ್ನುವ ಪದವನ್ನು ಶುರು ಮಾಡಿದ್ದು HOROSCOPE ಪತ್ರಿಕೆಯ ಜ್ಯೋತಿಷ್ಯಕಾರ Richard Nolle.