get a haircut and get a real job ಎನ್ನೋ ಒಂದು ಆಂಗ್ಲ ಹಾಡನ್ನು ಕೇಳಿರಬಹುದು. ಹರಿಯಾಣದ ಹಳ್ಳಿಯೊಂದರಲ್ಲಿ ಒಬ್ಬ ವ್ಯಕ್ತಿಯನ್ನು ಹಿಡಿದು ತಲೆಬೋಳಿಸಿದರು. ಕೆಲಸಕಾಗಿ ಅಲ್ಲ, ಮಾಡಬೇಕಾದ ಕೆಲಸವನ್ನು ಸರಿಯಾಗಿ ಮಾಡಲಿಲ್ಲ ಎಂದು. ಒಬ್ಬನಿಗೆ ಅಂದರೆ ಉಚ್ಚ ಜಾತಿಗೆ ಸೇರಿದ ವ್ಯಕ್ತಿಗೆ ನಂಬರ್ ತಪ್ಪಿ ಒಬ್ಬ ದಲಿತ ಫೋನ್ ಮಾಡಿದ್ದಕ್ಕೆ ಅವನನ್ನು ಮಾರನೆ ದಿನ ಹಿಡಿದು ತಲೆಬೋಳಿಸಿ ಒದ್ದು ಬುದ್ಧಿ ಕಲಿಸಲಾಯಿತು. ತಪ್ಪು ಅರಿತ ನಂತರ ಈ ದಲಿತ ಎಷ್ಟೇ ಕ್ಷಮೆ ಕೇಳಿದರೂ ಕೇಳಲೊಲ್ಲದ ಸವರ್ಣೀಯರು ಅವನ ತಲೆ ಬೋಳಿಸಿ, ಚೆನ್ನಾಗಿ ಥಳಿಸಿ ಮೋಟರ್ ಸೈಕಲಿಗೆ ಅವನನ್ನು ಕಟ್ಟಿ ಮೆರವಣಿಗೆ ಮಾಡಿ ಪೊಲೀಸರಿಗೆ ಸುದ್ದಿ ಮುಟ್ಟಿಸದಂತೆ ತಾಕೀತು ಮಾಡಿ ಕಳಿಸಿದರು.
ಇತ್ತೀಚಿಗೆ ತಮಿಳು ನಾಡಿನಲ್ಲಿ ದಲಿತನೊಬ್ಬ ತನ್ನದೇ ಸೈಕಲನ್ನು ಓಡಿಸಿದ್ದಕ್ಕೆ ಚೆನ್ನಾಗಿ ಗೂಸಾ ತಿಂದ ಸವರ್ಣೀಯರಿಂದ.
ದಲಿತ ಗರ್ಭಿಣಿ ಮಹಿಳೆ ಆಸ್ಪತ್ರೆಯಲ್ಲಿ ವೈದ್ಯರ ನಿರಾಕರಣೆಯಿಂದ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದಳು. ಈಗ ಯಾವ ಮುಖ ಇಟ್ಟುಕೊಂಡು ನಮ್ಮ ಸಂಸ್ಕೃತಿಯ ಬಗ್ಗೆ ಪಾಶ್ಚಾತ್ಯರಿಗೆ ಪಾಠ ಹೇಳುವುದೋ ಏನೋ?
ಎರ್ರಾಬಿರ್ರಿ GDP ಗ್ರೋತು, ಸಾಫ್ಟ್ ವೇರ್ ಲೀಡರ್ರು, ಒಂದಿಷ್ಟು ಫ್ಲೈ ಓವರ್ರು ಸಾಕೆ ನಾವು ಮುಂದುವರಿದು ಅಮೇರಿಕೆಗೆ ಭುಜಕ್ಕೆ ಭುಜ ಕೊಟ್ಟು ನಿಲ್ಲುವಂತಾಗಿದ್ದೇವೆ ಎಂದು ಕೊಚ್ಚಿಕೊಳ್ಳಲು? ಎಲ್ಲಿಯವರೆಗೆ ಜಾತಿ ಪಾತಿ, ಹಣ ಅಂತಸ್ತನ್ನು ಮೀರಿ ಮಾನವೀಯತೆ ಮೆರೆಯುವುದಿಲ್ಲವೋ ಅಲ್ಲಿಯವರೆಗೆ ಒಂದು ರಾಷ್ಟ್ರ ತಾನು ಪ್ರಗತಿ ಕಡೆ ದಾಪುಗಾಲು ಹಾಕುತ್ತಿದ್ದೇನೆ ಎಂದು ಹೇಳಿಕೊಳ್ಳುವ ಅರ್ಹತೆ ಕಳೆದುಕೊಳ್ಳುತ್ತದೆ.