ಮೂರು ವರ್ಷಕ್ಕೇ ಮುಪ್ಪಾದ ‘ಬ್ಲ್ಯಾಕ್ ಬ್ಯೂಟಿ’

ನನ್ನ LG ಲ್ಯಾಪ್ ಟಾಪ್, a thing of beauty is a joy forever ಆಗಬಹುದು ಎನ್ನುವ ನಿರೀಕ್ಷೆಯೊಂದಿಗೆ ಸುಮಾರು ೪೨ ಸಾವಿರ ರೂಪಾಯಿ ಪೀಕಿ ಮೂರು ವರ್ಷಗಳ ಹಿಂದೆ ಕೊಂಡು ಕೊಂಡೆ. 13.3 ಇಂಚು ಪರದೆಯ (ನನಗೆ ಚಿಕ್ಕ ಸೈಜ್ ಇಷ್ಟ, ಕಡಿಮೆ ತೂಕ ವಾದ್ದರಿಂದ) ಕೋರ್ 2 DUO, ೨ GB RAM ೧೬೦ GB ಹಾರ್ಡ್ ಡಿಸ್ಕ್, ಅದೂ – ಇದೂ, ಹಾಳೂ – ಮೂಳೂ, ಇರೋ ಚೆಂದದ ಯಂತ್ರ. ಹಾಂ, ಇದಕ್ಕೆ ನೀಲಿ ಹಲ್ಲೂ (BLUE TOOTH) ಸಹ ಇತ್ತು. ಒಟ್ಟಿನಲ್ಲಿ OWNER’S PRIDE ಎಂದು ಸಲೀಸಾಗಿ ಹೇಳಬಹುದು. ಹೊಸತರಲ್ಲಿ ಅಗಸ ಎತ್ತೆತ್ತಿ ಒಗೆದ ಎನ್ನುವ ರೀತಿಯಲ್ಲಿ ತಂದ ಹೊಸತರಲ್ಲಿ ಜೋಪಾನವಾಗಿ ಇಟ್ಟುಕೊಂಡೆ. ಈ ಪಾಪಿ ಮೆಶೀನ್ ತರುವ ಬದಲಾವಣೆಯ ಅರಿವಿಲ್ಲದೆ ನನ್ನ ಮಡದಿಯೂ ಹುರುಪಿನಿಂದ ಸ್ವಾಗತಿಸಿದಳು. ಮೊಬೈಲ್ ನ ಹುಚ್ಚು ಅಂಟಿಸಿಕೊಂಡು ನನ್ನ ಬೆಲೆಬಾಳುವ N8 ಮೊಬೈಲ್ ನಲ್ಲಿ ಸಂಗೀತ ಕೇಳುತ್ತಾ ಫೋನನ್ನು TOILET ಗುಂಡಿಯಲ್ಲಿ ಸಮಾಧಿ ಮಾಡಿದ್ದ ನನ್ನ (ಆಗ ೪ ವರ್ಷ ಪ್ರಾಯದ) ಮಗನ ಕಣ್ಣಿನಿಂದ ದೂರ ಇಟ್ಟುಕೊಂಡು ಸಾಕುತ್ತಿದ್ದೆ. ಅವನ ಕಣ್ಣು ತಪ್ಪಿಸಿದರೂ ನನ್ನ ಪುಟ್ಟ ೯ ತಿಂಗಳ ಪೋ(ಕ)ರಿಯ ಕಿತಾಪತಿಯಿಂದ ನನ್ನ ಲ್ಯಾಪ್ ಟಾಪ್ ಅನ್ನು ಉಳಿಸಲು ಆಗಲಿಲ್ಲ ನನಗೆ. ಸೋಫಾದ ಮೇಲೆ ಇಟ್ಟು ಊಟಕ್ಕೆಂದು ಕೂತಾಗ ಯಾವಾಗ ಪ್ರತ್ಯಕ್ಷ ಳಾದಳೋ ಸೋಫಾದ ಹತ್ತಿರ, ಎಳೆದು ನೆಲದ ಮೇಲೆ ಕೆಡವಿದಳು. ಅಯ್ಯೋ ನನ್ನ ನಲವತ್ತೆರಡು ಸಾವಿರ ಭಸ್ಮ ಮಾಡಿದಳಲ್ಲಾ ಎಂದು ಹೋಗಿ ನೋಡಿದರೆ ಮೇಲಿನ ಎರಡು, ಕೆಳಗಿನ ಎರಡು ಹಲ್ಲುಗಳನ್ನು ಬಿಟ್ಟು ಸವಾಲೆಸೆಯುವಂತೆ ನನ್ನತ್ತ ನೋಡಿದಳು. ಲ್ಯಾಪ್ ಟಾಪ್ ನ ಸ್ಕ್ರೀನ್ ಸುತ್ತ ಇರುವ ಪ್ಲಾಸ್ಟಿಕ್ ಫ್ರೇಂ ಕ್ರ್ಯಾಕ್. ಇಷ್ಟು ಚಿಕ್ಕ ಪ್ರಾಣಿಯನ್ನು ಬಡಿಯುವುದಾದರೂ ಹೇಗೆ ಎಂದು ಬರೀ ಕೆಂಗಣ್ಣಿನಿಂದ ಅವಳತ್ತ ನೋಡಿ ಲ್ಯಾಪ್ಟಾಪ್ ಅವಳ ಕೈಗೆ ಸಿಗದ ರೀತಿಯಲ್ಲಿ ಇಟ್ಟು ಮರಳಿ ಡಿನ್ನರ್ ಟೇಬಲ್ ಗೆ ಬಂದಾಗ ಅರ್ಧಾಂಗಿನಿ ಗೆ ಸಂತೋಷವಾದ ಸುಳಿವು ಸಿಕ್ಕಿತು. ನಾನು ಲ್ಯಾಪ್ ಟಾಪ್ ಮೇಲೆ ಕುಳಿತು ಆನ್ ಮಾಡುವುದರ ಒಳಗೆ ಅವಳಲ್ಲಿ ಭೂತ ಆವರಿಸಿ ಬಿಡುತ್ತೆ. ಹಗಲಿಡೀ ಆಫೀಸು, ಸಂಜೆಯಾದರೆ ಲ್ಯಾಪ್ ಟಾಪ್ ಎಂದು ಗೊಣಗುತ್ತಿದ್ದಳು. ಈಗ ಲ್ಯಾಪ್ ಟಾಪ್ ಬಿದ್ದ ಸದ್ದು ಕೇಳಿದಾಗ ಅವಳಿಗೆ ಸಂತಸ, ಹಾಳಾಗಿ ಹೋಯಿತು ಎಂದು. ನನ್ನ ಲ್ಯಾಪ್ ಟಾಪ್ ಅವಳಿಗೆ ಸವತಿಯಂತೆ ಕಾಣಲು ಶುರು ಮಾಡಿತು.

 ಲ್ಯಾಪ್ ಟಾಪ್ ಕೊಂಡ ಈ ಮೂರು ವರ್ಷಗಳ ಅವಧಿಯಲ್ಲಿ ನನ್ನ ಮಗ ಅದರ ಮೇಲೆ ಪೂರ್ಣ ಅಧಿಕಾರ ಸ್ಥಾಪಿಸಿದ, ಮಗಳು ಅದರ ನಾಲ್ಕಾರು ಕೀಲಿಗಳನ್ನು ಕಿತ್ತು ಕೈಗೆ ಕೊಟ್ಟಳು,  ನಾನು ಸಾಕಷ್ಟು ಹುರುಪಿನಿಂದ ನನ್ನ  ಹಳೇ ಸೇತುವೆ ಬ್ಲಾಗಿನಲ್ಲಿ ಬ್ಲಾಗಿಸಿದೆ, ನನ್ನ literary sojourn ಗೆ ಸಂಗಾತಿಯಾಗಿ, ಪ್ರೋತ್ಸಾಹಿಸಿದ ನನ್ನ ಪ್ರೀತಿಯ ಆನ್ ಲೈನ್ ಸಾಹಿತಿಗಳ ತಾಣ ಸಂಪದ ದೊಂದಿಗಿನ ನಂಟು ಇನ್ನಷ್ಟು ಗಾಢವಾಯಿತು, ನನ್ನ ನಿರಂತರ ಟ್ವೀಟ್ಗಳಿಂದ twitter ಶ್ರೀಮಂತ ವಾಯಿತು, ನನ್ನ ಮಡದಿಯ ಕೆಂಗಣ್ಣಿಗೆ ತುತ್ತಾಗಿ ಮಿರ ಮಿರ ಮಿಂಚುತ್ತಿದ್ದ ಅದರ ಕಪ್ಪು ಬಣ್ಣದ ಹೊಳಪು ಕಾಂತಿ ಹೀನವಾಯಿತು…… ಇಷ್ಟೆಲ್ಲಾ ಆದ ನಂತರ ಸಿಸ್ಟಮ್ ಸಹ ೬೦ ರ ದಶಕದ ಅಂಬಾಸಿಡರ್ ಕಾರಿನ ರೀತಿ ವರ್ತಿಸಲು ಶುರು ಮಾಡಿತು. laptop ನ ಆಯುಷ್ಯ ಬರೀ ಮೂರು ಅಥವಾ ನಾಲ್ಕು ವರ್ಷ ಗಳೋ? ನಿಮಗೂ ಇದರ ಅನುಭವ ಆಗಿದೆಯೇ? ಪ್ರತೀ ಮೂರು ನಾಲ್ಕು ಅಥವಾ ಹೆಚ್ಚೆಂದರೆ ಐದು ವರ್ಷಗಳಿಗೊಮ್ಮೆ ಹತ್ತಾರು ಸಾವಿರ ರೂಪಾಯಿ ಹಾಕಿ ಲ್ಯಾಪ್ ಟಾಪ್ ಕೊಳ್ಳಲು ಸಾಧ್ಯವೋ?

ಮೂರು ವರ್ಷಗಳಲ್ಲೇ ಮುಪ್ಪಾದ ಯಂತ್ರವನ್ನು ನನ್ನ ಏಳು ವರ್ಷದ ಮಗನಿಗೆ ಕೊಟ್ಟು ಮ್ಯಾಕ್ ಅಥವಾ vaio ಕೊಳ್ಳುವ ಆಸೆ ಈಗ. ಮಡದಿ ಸಹ ಈಗ ಮತ್ತಷ್ಟು matured ಆಗಿರೋದ್ರಿಂದ ಹಳೇ ಲ್ಯಾಪ್ ಟಾಪ್ ಗೆ ಬಂದ ದುಃಸ್ಥಿತಿ ಹೊಸ ಮೆಶೀನಿಗೆ ಬರಲಾರದು ಎನ್ನೋ ಭರವಸೆ ಇದೆ. ರಾಜಕಾರಣಿಯ ಆಶ್ವಾಸನೆಯ ರೀತಿ ಹುಸಿಯಾಗದಿದ್ದರೆ ಸಾಕು ನನ್ನ ಭರವಸೆ.      

 

ಶುಂಠಿ, ನೊಬೆಲ್, “ಸಪ್ಲೈ ಮತ್ತು ಡಿಮಾಂಡ್”

ಅರ್ಥಶಾಸ್ತ್ರದಲ್ಲಿ ಈ ವರುಷದ ನೊಬೆಲ್ ಪ್ರಶಸ್ತಿ ಮೂರು ಜನರಿಗೆ. Massachusetts Institute of Technology ಯ ಪೀಟರ್ ಡಯಮಂಡ್, Northwestern University ಯ ಡೇಲ್ ಮಾರ್ಟನ್ಸನ್, ಮತ್ತು London School of Economics ನ ಕ್ರಿಸ್ಟಾಫರ್ ಪಿಸ್ಸಾರಿಡ್ಸ್, ಪ್ರಶಸ್ತಿ ಯನ್ನು ಮೂರು ಪಾಲು ಮಾಡಿಕೊಂಡ ಅರ್ಥಶಾಸ್ತ್ರಜ್ಞರು ತಮ್ಮ ಪ್ರತಿಭೆಯ ಆಧಾರದ ಮೇಲೆ. ಏಕೆ ಸಿಕ್ಕಿತು ಈ ತ್ರಿಮೂರ್ತಿಗಳಿಗೆ ನೊಬೆಲ್? ಪೂರೈಕೆ ಮತ್ತು ಬೇಡಿಕೆ – supply and demand – ಮೇಲಿನ ಅಧ್ಯಯನಕ್ಕೆ ಲಭಿಸಿತು ಇವರುಗಳಿಗೆ ವಿಶ್ವದ ಅತ್ಯುನ್ನತ ಪ್ರಶಸ್ತಿ ನೊಬೆಲ್. ೧೯೭೦ ರ ದಶಕದಲ್ಲಿ ಮುಂದುವರಿದ ರಾಷ್ಟ್ರಗಳಿಗೆ “ತೈಲ ಸಂಕಷ್ಟ” ದ ನಂತರ ಎದುರಾದ ಮತ್ತೊಂದು ಸಮಸ್ಯೆ ನಿರುದ್ಯೋಗ. ನಿರುದ್ಯೋಗ, ಉದ್ಯೋಗದ ಲಭಿಕೆ ಮತ್ತು ವೇತನ, ಈ ಮೂರು ಅಂಶಗಳು ಒಂದಕ್ಕೊಂದು ತಳುಕು ಹಾಕಿಕೊಂಡು ವಿಶ್ವದ ಸರಕಾರಗಳಿಗೆ ಒಂದು ಸವಾಲಾಗಿತ್ತು. ಈ ಸಮಸ್ಯೆ ಹೇಗೆಂದರೆ ಕೆಲಸ ಕೊಡುವ ಧಣಿಗೆ ಕೆಲಸಗಾರರು ಸಿಗುವುದಿಲ್ಲ, ಕೆಲಸಗಾರಿಗೆ ಕೆಲಸ ಕೊಡುವ ಧಣಿ ಸಿಗುವುದಿಲ್ಲ. ಒಂದು ರೀತಿಯ catch 22 ಪರಿಸ್ಥಿತಿ. ಈ ಪರಿಸ್ಥಿತಿಯಿಂದ ಹೇಗೆ ಹೊರಬರಬಹುದು ಎಂದು ತೋರಿಸಿ ಕೊಟ್ಟರು ಈ ತ್ರಿಮೂರ್ತಿ ವಿಧ್ವಾಂಸರುಗಳು. “ಉದ್ಯೋಗಗಳಿದ್ದೂ ನಿರೋದ್ಯೋಗ” ಸಮಸ್ಯೆಗೆ ಪರಿಹಾರ ಕಾಣುವ ನಿಟ್ಟಿನಲ್ಲಿ ನಡೆಸಿದ ಇವರುಗಳ ಅಧ್ಯಯನ ಮತ್ತು ಪರಿಹಾರ ವಿಶ್ವ ಸರಕಾರಗಳಿಗೆ ನೆರವಾಗುತ್ತದಂತೆ.

“ಸಪ್ಲೈ ಮತ್ತು ಡಿಮಾಂಡ್”ಎಂದರೇನು? ಬಹುತೇಕ ಜನರಿಗೆ ತಿಳಿದದ್ದೇ ಇದು, ಆದರೂ ದಿನ ನಿತ್ಯ ನಮಗೆ ಕಾಣ ಸಿಗುವ ಉದಾಹರಣೆಗಳ ಮೂಲಕ ಅರ್ಥೈಸಿ ಕೊಳ್ಳೋಣ ಈ phenomenon ಅನ್ನು. ಮೇಲೆ ಹೇಳಿದ “ಉದ್ಯೋಗಗಳಿದ್ದೂ ನಿರೋದ್ಯೋಗ” ಗೆ ಸಂಬಂಧಿಸಿದ ಅನುಭವವಲ್ಲ ಕೆಳಗಿನದು. ಇದು ೧೯೮೪ ರ ಮಾತು.

ಒಮ್ಮೆ ತರಕಾರಿಗೆಂದು ಭದ್ರಾವತಿಯ ಪುರಸಭೆ ಒಡೆತನದ (ನಿಜವಾದ ಒಡೆಯ ರೈಲ್ವೆ ಅಂತೆ, ಈಗ ಅದನ್ನು ನೆಲಸಮಗೊಳಿಸಿದ್ದಾರೆ ರಸ್ತೆ ಅಗಲೀಕರಣದ ಕಾರಣ ಒಡ್ಡಿ ) ಮಾರುಕಟ್ಟೆಗೆ ಹೋಗಿದ್ದೆ. ಪರಿಚಯದ ಕೇರಳ ಮೂಲದ ಅಂಗಡಿಯವ ಹೇಳಿದ ಹೇ, ಶುಂಠಿ ತಗೊಂಡು ಹೋಗು, ಈ ಶುಂಠಿ ಮಾರಿಯೇ ನಿನ್ನ ಮಾವನಿಗೆ ವರದಕ್ಷಿಣೆ ಕೊಟ್ಟಿದ್ದು ಹೆಣ್ಣಿನ ಕಡೆಯವರು ಎಂದು. ನನಗೆ ಅರ್ಥವಾಗಲಿಲ್ಲ, ಆತ ಬಿಡಿಸಿ ಹೇಳಿದ. ಆ ಸಮಯದಲ್ಲಿ ರಾಜ್ಯದಲ್ಲಿ ಶುಂಠಿಗೆ ಬಂತು ಬರ, ಶುಂಠಿ ಬೆಳೆದು ಗುಡ್ಡ ಹಾಕಿದವನೇ ಶ್ರೀಮಂತ. ಲಾಟರಿ ಹೊಡೆದಂತೆ. ನನ್ನ ಅತ್ತೆಯ ಮನೆಯವರು ಜಮೀನ್ದಾರರು. ಅವರ ಲಕ್ ಖುಲಾಯಿಸಿದ್ದರಿಂದ ಎಲ್ಲಾ ಬಿಟ್ಟು ಅಂಕು ಡೊಂಕಾಗಿ ತರಕಾರಿಯಲ್ಲಿ ಶುದ್ಧ ಕುರೂಪಿಯಾದ ಶುಂಠಿಯನ್ನು ಬೆಳೆದರು ತಮ್ಮ ಹೊಲದ ತುಂಬಾ. ಬಂತು ಒಳ್ಳೆ ಬೆಲೆ, ಮಾರಿದ್ದೇ ಮಾರಿದ್ದು. ಶುಂಠಿ ಇಲ್ಲದ ಮಾರುಕಟ್ಟೆಯಲ್ಲಿ ಶುಂಠಿ ಇಟ್ಟುಕೊಂಡವನೇ “ಶಾಣ”. ಶುಂಠಿ ಬೆಳೆದವ ವಿಜಯದ ನಗೆ ಬೀರಿದ. ಜೇಬು ತುಂಬಿಸಿಕೊಂಡ. ಈಗಲೂ ನೋಡಿ, ಆ ಪಕ್ಷದಿಂದ ಈ ಪಕ್ಷ ಎಂದು ನೆಗೆಯುವ ನಾಚಿಕೆಗೆಟ್ಟ ಶಾಸಕ, ರಾಜಕಾರಣಿಯಂತೆ ನಮ್ಮ ರೈತರೂ ಒಲಾಡುತ್ತಾರೆ, ಒಮ್ಮೆ ಕಬ್ಬು ಎಂದರೆ, ಮತ್ತೊಮ್ಮೆ ಅಡಿಕೆ, ಮಗುದೊಮ್ಮೆ ರೇಶಿಮೆ, ಬಾಳೆ ಹೀಗೇ. ಯಾವುದಕ್ಕೆ ಮಾರುಕಟ್ಟೆಯಲ್ಲಿ ಕ್ಷಾಮವಿರುತ್ತದೋ ಅದನ್ನು ಪೂರೈಸಿದಾಗ ಸಿಗುವ ಲಾಭದ ಮೇಲೆ ಕಣ್ಣಿಟ್ಟು ಬೆಳೆಯುತ್ತಾರೆ ಉತ್ಪನ್ನಗಳನ್ನು.

ಇದು ನಾನು ಅರ್ಥೈಸಿ ಕೊಂಡ supply demand story.