ಮುಂಗಾರು ಮಳೆಯ ಆರ್ಭಟ ಜನರನ್ನು ಕಂಗೆಡಿಸಿದೆ. ಬೆಂಬಿಡದ ಭೂತದಂತೆ ಬೆನ್ನು ಬಿದ್ದಿರುವ ಮಳೆಯಿಂದ ಸಾವು ನೋವು ಮಾತ್ರವಲ್ಲ ಕೋಟ್ಯಾಂತರ ರೂಪಾಯಿಗಳ ನಷ್ಟ ಬೇರೆ. ಮಳೆರಾಯನನ್ನು ಒಲಿಸಲು ಕಪ್ಪೆಗಳಿಗೂ ಕತ್ತೆಗಳಿಗೂ ಮದುವೆ ಸೀಮಂತ ಮಾಡಿದ ನಾವು ಈಗ ಮಳೆ ನಿಲ್ಲಿಸುವಂತೆ ವರುಣನ ಕಾಲಿಗೆ ಬೀಳಲು ತಯಾರಾಗಿದ್ದೇವೆ. ಬತ್ತಿದ ನದಿಗಳೆಲ್ಲ ಮೈ ತುಂಬಿಕೊಂಡಿದ್ದನ್ನು ನೋಡಿ ನಲಿದ ನಮಗೆ ಈಗ ಮಳೆರಾಯನ ಕೃಪೆ ಅವಶ್ಯಕತೆಗಿಂತ ಹೆಚ್ಚಾದಾಗ ಆಜೀರ್ಣವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ೩೯ ವರ್ಷಗಳಲ್ಲಿ ಆಗದ ಮಳೆ ಈಗ ಆಗುತ್ತಿದ್ದು ರೈತರ ಪೈರು ನೀರು ಪಾಲಾಗಿ ಹಲುಬುವಂತೆ ಮಾಡಿದೆ. ಮಳೆಯಿಂದ ನಿಸರ್ಗ ಕಂಗೊಳಿಸುತ್ತಿದ್ದರೂ ಜನ ಕಂಗಾಲಾಗುವಂತೆ ಮಾಡಿದೆ ಈ ಮಳೆ. ಹೀಗೆ ಪ್ರಕೃತಿಯ ವಿಕೋಪ ನಮ್ಮ ಮೇಲೆ ಎರಗಲು ನಾವು ಮಾಡಿದ ಪಾಪಗಳೇ ಕಾರಣ. ಈ ಮಾತು ಅತಿಶಯೋಕ್ತಿಯಲ್ಲ. ಅತಿಯಾಸೆಯಿಂದ ಪ್ರಕೃತಿಯ ಮೇಲೆ ಧಾಳಿ ಮಾಡಿದ ನಮಗೆ ಪ್ರಕೃತಿಯ ಕೃಪೆ ಸಿಗುವುದಾದರೂ ಹೇಗೆ? ಕಾಡನ್ನು ಬೋಳಿಸುವುದು, ಗುಡ್ಡಗಳನ್ನು ನೆಲಸಮ ಮಾಡುವುದು, ಭೂ ಸವೆತ, ಎರ್ರಾಬಿರ್ರಿ ಕಾರ್ಖಾನೆಗಳ ಸ್ಥಾಪನೆಯಿಂದ ವಿಷಾನಿಲವನ್ನು ಆಗಸಕ್ಕೂ, ಕಲ್ಮಶಗಳನ್ನು ನದೀ ಸಮುದ್ರಗಳಿಗೆ ಬಿಡುವುದೂ ಮಾಡಿದ್ದರಿಂದ ನಿಸರ್ಗದ ಲೆಕ್ಕಾಚಾರದಲ್ಲಿ ಏರುಪೆರುಂಟಾಗಿ ಈ ರೀತಿಯ ಸಮಸ್ಯೆಗಳು ತಲೆದೋರುತ್ತಿವೆ. ನಿಸರ್ಗವನ್ನು ಗೌರವಿಸದ, ಆದರಿಸದ ನಮಗೆ ನಿಸರ್ಗ ನಮ್ಮ ಮೇಲೆ ಕರುಣೆಯನ್ನು ಹೇಗೆ ತೋರಬಹುದು?