ಚೀನಾದ ಪಿಕ್ನಿಕ್

ಮೂರು ವಾರಗಳ ಕಾಲ ಬಿಡಾರ ಹೂಡಿ ಅದೇನನ್ನು ಮಾಡಬೇಕು ಎಂದು ಬಯಸಿದ್ದರೋ ಅದನ್ನು ಮಾಡಿಯೋ, ಅಥವಾ ಮಾಡದೆ ಬಿಟ್ಟೋ, ಅಂತೂ ಚೀನೀಯರು ನಮ್ಮ ನೆಲದಿಂದ ಕಾಲ್ಕಿತ್ತರು. ೧೯ ಕಿಲೋ ಮೀಟರು ಗಳಷ್ಟು ಒಳಬಂದು ಠಿಕಾಣಿ ಹಾಕಿದ್ದರು ಚೀನೀಯರು.
ಬದುಕಿನಲ್ಲಿ ಮಿತ್ರರನ್ನು ಬದಲಾಯಿಸಬಹುದು, ನೆರೆಹೊರೆಯವರನ್ನೂ ಬೇಕಾದರೆ ಬದಲಾಯಿಸಬಹುದು, ಆದರೆ ದೇಶದ ವಿಷಯದಲ್ಲಿ ಮಾತ್ರ ಮಿತ್ರರನ್ನು ಚೇಂಜ್ ಮಾಡಬಹುದು, ನಿನ್ನೆ ರಷ್ಯಾ, ಇವತ್ತು ಅಮೇರಿಕಾ, ನಾಳೆ ಇಥಿಯೋಪಿಯಾ. ಆದರೆ ನೆರೆಹೊರೆಯವರನ್ನು ಬದಲಾಯಿಸಲು ಬರುವುದಿಲ್ಲ. ಅದು ಪರ್ಮನೆಂಟ್ ಫಿಕ್ಸ್ಚರ್ರು. ಎಡದಲ್ಲಿ ಪಾಕಿಸ್ತಾನ, ಬಲದಲ್ಲಿ ಚೀನಾ, ಇವೆರಡು ಶನಿಗಳ ಮಧ್ಯೆ ನಾವು, ಫಲಿತಾಂಶ, ಆಗಾಗ ಶತ್ರು ನಮ್ಮ ಗಡಿಯೊಳಕ್ಕೆ ಬಂದು ನಮ್ಮ ಸಹನೆಯ ಮಟ್ಟ ಪರೀಕ್ಷಿಸೋದು.

ಮೂರು ವಾರಗಳ ಕಾಲ ನಮ್ಮ ಸಹನೆ ಪರೀಕ್ಷಿಸಿ, ನಮ್ಮ ಮಾತುಕತೆಯ ಧಾಟಿ ನೋಡಿ, ಚೀನೀಯರು ಜಾಗ ಖಾಲಿ ಮಾಡಿದರು. ಚೀನೀಯರು ಈ ರೀತಿ ಮಾಡಲು, ತಮಗೆ ಬೇಕಾದಾಗ ನಮ್ಮ ದೇಶದೊಳಕ್ಕೆ ನುಗ್ಗಲು, ಅರುಣಾ ಛಲ ಪ್ರದೇಶ ನನ್ನದು ಎನ್ನಲು, ನಮ್ಮ ಪ್ರಧಾನಿ ತನ್ನ ದೇಶದೊಳಕ್ಕೆ ಪ್ರವಾಸ ಮಾಡ ಹೊರಟಾಗ ತಗಾದೆ ತೆಗೆಯಲು ಕಾರಣ ನಾವೇ. ನಮ್ಮ ಸೈನ್ಯ ಅವರಷ್ಟು ಬಲಿಷ್ಠವಾಗಿ ಹೊರಹೊಮ್ಮಲು ನಮಗಿಲ್ಲದ ಇರಾದೆ. ನಮ್ಮ ಗಮನ, ಆಸಕ್ತಿ ಎಲ್ಲಾ ವೈಯಕ್ತಿಕ ಆಕಾಂಕ್ಷೆ ಕಡೆ ನೆಟ್ಟಿರುವ ಕಾರಣ ನಾವು ಪದೇ ಪ ದೇ ಇಂಥ ಸನ್ನಿವೇಶಗಳನ್ನು, ಮುಜುಗುರಗಳನ್ನು ಎದುರಿಸುವ ದೌರ್ಭಾಗ್ಯ ಬರುತ್ತದೆ. ಮಾತ್ರವಲ್ಲ ಓರ್ವ ದೂರ ದೃಷ್ಟಿ ಯುಳ್ಳ ನಾಯಕನ ಕೊರತೆ ಸಹ ಎದ್ದು ಕಾಣುತ್ತದೆ.

ಈ ಕ್ಲಿಷ್ಟಕರ ಸನ್ನಿವೇಶ ವನ್ನು ನಾವು ಎದುರಿಸಿದ್ದು “ಮಾರ್ಷಲ್ ಆರ್ಟ್ಸ್” ವೀರರ ಥರ. ಮಾರ್ಷಲ್ ಆರ್ಟ್ಸ್ ನಲ್ಲಿ ವಿರೋಧಿಯ ಮೇಲೆ ಒಮ್ಮೆಗೆ ಎರಗೋಲ್ಲ. non-resistance ತಂತ್ರ ಉಪಯೋಗಿಸಿ ಶತ್ರುವಿನ ಶಕ್ತಿಯನ್ನ ನಮ್ಮ ಉಪಯೋಗಕ್ಕೆ ತಂದು ಸೋಲಿಸೋದು. ಚೀನೀಯರು ಒಳಬಂದಾಗ ನಾವು ಪ್ರತಿರೋಧ ಒಡ್ಡಲಿಲ್ಲ. ನೋಡೋಣ ಏನು ಮಾಡುತ್ತಾರೆ ಎಂದು ಕಾದು ನೋಡಿದೆವು. ಶತ್ರು ತನ್ನ ಶಕ್ತಿಯನ್ನ ವೃಥಾ ವಿನಿಯೋಗಿಸಿ ನಿತ್ರಾಣಗೊಂಡ. ಲಡಾಖ್ ಯಾವುದೇ ಲಡಾಯಿ ಇಲ್ಲದೆ ಶಾಂತವಾಗಿ ನಿದ್ರಾದೇವಿಯ ತೋಳ್ತೆಕ್ಕೆಗೆ ಜಾರಿತು.

MARSHAL LAW IN KANPUR

ರಾಜನ್ ಬಾಲ ಅವರ ಅಕಾಲಿಕ ಮರಣ ಕ್ರಿಕೆಟ್ ಪ್ರೇಮಿಗಳಿಗೆ ದುಃಖಕರ ಸುದ್ದಿ. ಕ್ರಿಕೆಟ್ನಷ್ಟೇ  ಮನೋಹರ ಅವರ ವರ್ಣನಾ ಶೈಲಿ. ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಬರೆಯುತ್ತಿದ್ದ ಅವರು ಕ್ರಿಕೆಟ್ ಆಟವನ್ನು ಮನೋಜ್ಞವಾಗಿ ವರ್ಣಿಸಿ ನಮ್ಮನ್ನು ರಂಜಿಸುತ್ತಿದ್ದರು. ಭಾರತ ೧೯೮೩ ರ prudential world cup ಗೆದ್ದ ಹೊಸತು. ಕ್ರಿಕೆಟ್ ವಿಶ್ವವೇ ದಿಗ್ಭ್ರಾಂತವಾಗಿಸಿದ ಗೆಲುವು ಭಾರತದ್ದು. ಫೈನಲ್ ಪಂದ್ಯದಲ್ಲಿ ಬಲಿಷ್ಟ ವೆಸ್ಟ್ ಇಂಡೀಸ್ ತಂಡವನ್ನು ೪೩ ರನ್ನುಗಳಿಂದ ಸೋಲಿಸಿದ ಭಾರತ ಹೊಸ world champion. ಈ ಸೋಲಿನಿಂದ ಕಂಗೆಟ್ಟ ವೆಸ್ಟ್ ಇಂಡೀಸ್ ಭಾರತಕ್ಕೆ ತಕ್ಕ ಪಾಠ ಕಲಿಸಲು ಭಾರತ ಪ್ರಯಾಣ ಮಾಡಿ ೬ ಟೆಸ್ಟ್ ಮತ್ತು ೬ ಏಕ ದಿನ ಪಂದ್ಯಗಳಲ್ಲಿ ಭಾರತವನ್ನು ಹಿಗ್ಗಾ ಮುಗ್ಗಾ ಬಡಿದು ತೃಪ್ತಿ ಪಟ್ಟುಕೊಂಡಿತು. ಈ ಸರಣಿಯ ಪ್ರಥಮ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ. ವೆಸ್ಟ್ ಇಂಡೀಸ್ ನ ಮಾರಕ ವೇಗಿ ಮಾಲ್ಕಂ ಮಾರ್ಷಲ್ ಚೊಚ್ಚಲ ಓವರಿನ ೨ ಚೆಂಡುಗಳಲ್ಲಿ ಭಾರತದ ದಾಂಡಿಗರನ್ನು ಉರುಳಿಸಿ ಭಾರತ ಚೇತರಿಸಿಕೊಳ್ಳದಂತೆ ಮಾಡಿದರು. ದಿನದ ಆಟ ಮುಗಿದಾಗ ಭಾರತದ ಸ್ಥಿತಿ ಶೋಚನೀಯ. ಮಾರನೆ ದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ  ರಾಜನ್ ಬಾಲ ಮಾರ್ಷಲ್ ಅವರ ಬೌಲಿಂಗ್ ಬಣ್ಣಿಸಿದ್ದು ಹೀಗೆ:

MARSHAL LAW IN KANPUR

ಈ ವರದಿ ಬರೆದು ೨೬ ವರ್ಷಗಳು ಸಂದರೂ ರಾಜನ್ ಬಾಲ ಎಂದ ಕೂಡಲೇ MARSHAL LAW ನೆನಪಾಗುತ್ತದೆ.