ಮಾಯಾ, ಮಾಯ

ಉತ್ತರ ಪ್ರದೇಶದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಮಾಯಾವತಿಯ ಸೊಕ್ಕಿದ ಆನೆಗೆ ಜನ ಖೆಡ್ಡಾ ತೋಡಿ ಉರುಳಿಸಿದರು ಏರಿದ ಮದ ಇಳಿಯಲಿ ಎಂದು. ಕಳೆದ ಚುನಾವಣೆಯಲ್ಲಿ ಮುಸ್ಲಿಮರು ಮತ್ತು ಬ್ರಾಹ್ಮಣ ರನ್ನು ಒಂದುಗೂಡಿಸಿ ಒಂದು ಹೊಸ ರೀತಿಯ “ಸೋಷಲ್ ಇಂಜಿನಿಯರಿಂಗ್” ಪ್ರಯೋಗದ ಮೂಲಕ ಅಧಿಕಾರ ಕ್ಕೆ ಏರಿದ್ದ ದಲಿತ ನಾಯಕಿ ಮಾಯಾವತಿಗೆ ಜನ ಏನು ಬಯಸುತ್ತಾರೆ ಎನ್ನುವುದು ಅರಿಯದೆ ಹೋಯಿತು. ಈ ಸಲ ಸೋಷಲ್ ಇಂಜಿನಿಯರಿಂಗ್” ಬದಲು ಸಿಂಪಲ್ ಇಂಜಿನಿಯರಿಂಗ್ ಕೆಲಸ ಮಾಡಿತು. ಖೆಡ್ಡಾ ಇಂಜಿನಿಯರಿಂಗ್. ಮಾಯಾವತಿಯ ಅರಿವುಗೇಡಿತನಕ್ಕೆ ಜನ ತಕ್ಕ ಶಿಕ್ಷೆ ದಯಪಾಲಿಸಿದರು. ಅಧಿಕಾರ ಎನ್ನುವುದು ತನ್ನ ಸ್ವಾರ್ಥ ಸಾಧಿಸಲು, ತನ್ನ ಪ್ರತಿಮೆಗಳನ್ನು ಎಲ್ಲೆಂದರಲ್ಲಿ ಪ್ರತಿಷ್ಠಾಪಿಸಲು ಎಂದು ತಪ್ಪಾಗಿ ತಿಳಿದ ಮಾಯಾವತಿ ಈಗ ಕನಿಷ್ಠ ಐದು ವರ್ಷಗಳ ಕಾಲ ಉ. ಪ್ರದೇಶದ ರಾಜಕೀಯದಿಂದ ಮಾಯ. ಮುಲಾಯಂ ಸಿಂಗ್ ಯಾದವ್ ರ ಸಮಾಜವಾದಿ ಪಕ್ಷ ತಮ್ಮ ಮಗ ಅಖಿಲೇಶ್ ನ energetic ಪ್ರಚಾರದ ಕಾರಣ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು.

crown prince ರಾಹುಲ್ ಗಾಂಧಿಯ ಚಮತ್ಕಾರ ಕಾಂಗ್ರೆಸ್ಸಿಗೆ ಹೆಚ್ಚು ಸ್ಥಾನ ತಂದು ಕೊಡಲಿಲ್ಲ. ಭಾರತದ ರಾಜಕೀಯ ಕ್ಷಿತಿಜಕ್ಕೆ ಮತ್ತೊಂದು crown prince ನ ಆಗಮನ ಅಖಿಲೇಶ್ ಯಾದವ್ ನ ಯಶಸ್ವೀ ಪ್ರಚಾರದ ಕಾರಣ.

rabble rouser ವರುಣ ಗಾಂಧೀ ಯಂಥವರು ಭಾಜಪಕ್ಕೆ liability ಎನ್ನುವುದನ್ನು ಭಾಜಪ ಶೀಘ್ರವೇ ಅರಿತು ಕೊಂಡರೆ ಮುಂದಿನ ಚುನಾವಣೆಗೆ ಒಳ್ಳೆಯದು. ಸಮಾಜವನ್ನು ಒಗ್ಗೂಡಿಸಿ ಕೊಂಡು ಹೋಗುವ ನಾಯಕರ ಅವಶ್ಯಕತೆ ಭಾಜಪಕ್ಕಿದೆ. rabble rouser ಗಳ ಅವಶ್ಯಕತೆ ಭಾರತೀಯ ರಾಜಕಾರಣಕ್ಕೆ ಇಲ್ಲ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾರೆ ಎಂದು ಕಾಂಗ್ರೆಸ್ಸನ್ನು ಹಳಿಯುವ ಭಾಜಪ ತಾನು ಮಾಡುತ್ತಿರುವುದು ಏನು ಎನ್ನುವುದರ ಕಡೆ ಸ್ವಲ್ಪ ನೋಟ ಹರಿಸಿದರೆ ಚೆನ್ನ. ತನಗೊಂದು ನ್ಯಾಯ, ಪರರಿಗೊಂದು ನ್ಯಾಯ ಎನ್ನುವ ನೀತಿ ಭಾರತೀಯ ಮತದಾರನೊಂದಿಗೆ ನಡೆಯುವುದಿಲ್ಲ. ಅದನ್ನು ಅರಿತುಕೊಳ್ಳಲಾಗಷ್ಟು ಮೂರ್ಖನಲ್ಲ ವೋಟರ್. ಒಟ್ಟಿನಲ್ಲಿ ಮುಂದಿನ ಮಹಾ ಚುನಾವಣೆಗೆ prelude ಆಗಿ ನಡೆದ ಈ ಚುನಾವಣೆ ಮುಂದಿನ ಸಲವೂ ಕಾಂಗ್ರೆಸ್ ಪಕ್ಷಕ್ಕೇ ಕೇಂದ್ರ ಸರಕಾರದ ಉಸ್ತುವಾರಿ ಎಂದು ನಿಚ್ಚಳವಾಗುತ್ತಿದೆ.

ಕೋಪ ಬಂದಾಗ ಒಂದು ಮೊಳೆ

ಒಬ್ಬ ಹುಡುಗ ಮಹಾ ಕೋಪಿಷ್ಟ. ಸುಲಭವಾಗಿ ಕೆರಳುತ್ತಿದ್ದ. ಇದನ್ನು ಕಂಡು ರೋಸಿದ ತಂದೆ ತನ್ನ ಮಗನಿಗೆ ಒಂದು ಚೀಲ ತುಂಬಾ ಮೊಳೆಗಳನ್ನು ಕೊಟ್ಟು ಪ್ರತೀ ಸಲ ಕೋಪ ಬಂದಾಗ ಮನೆಯ ಹಿಂದಿನ ಗೋಡೆಗೆ ಒಂದು ಮೊಳೆ ಹೊಡೆಯಲು ಹೇಳುತ್ತಾನೆ. ಉತ್ಸಾಹದಿಂದ ಹೋಗುವ ಹುಡುಗ ಮೊದಲ ದಿನವೇ ೩೭ ಮೊಳೆಗಳನ್ನು ಹೊಡೆದು ಹಾಕುತ್ತಾನೆ ಗೋಡೆಗೆ.  ಒಂದೆರಡು ವಾರಗಳಲ್ಲಿ ತನ್ನ ಕೋಪ ತಾಪ ಎಲ್ಲಾ ತಹಬಂದಿಗೆ ಬಂದು ಗೋಡೆಗೆ ಹೊಡೆಯಬೇಕಾದ ಮೊಳೆಗಳು ಸಂಖ್ಯೆಯಲ್ಲಿ ಕಡಿಮೆಯಾಗುತ್ತವೆ. ತನ್ನ ಅಪ್ಪ ಹೇಳಿದ ಹಾಗೆ ಮೊಳೆ ಹೊಡೆಯುವುದಕ್ಕಿಂತ ಸುಲಭ ತನ್ನ ಕೋಪವನ್ನು ನಿಯಂತ್ರಿಸುವುದು ಎಂದು ಈ ಹೊತ್ತಿಗಾಗಲೇ ಹುಡುಗ ಅರಿತು ಕೊಳ್ಳುತ್ತಾನೆ. ಕೊನೆಗೊಂದು ದಿನ ಹುಡುಗ ಮೊದಲಿನ ಥರ ಕೋಪಿಷ್ಠನಾಗದೇ ಮಂದಸ್ಮಿತನಾಗುತ್ತಾನೆ, ಸಂಯಮಿಯಾಗುತ್ತಾನೆ, ಮೊಳೆಯ ಚೀಲ ಬರಿದಾಗುತ್ತದೆ. ಈ ವಿಷಯವನ್ನು ತನ್ನ ತಂದೆಗೆ ಬಂದು ಹೇಳಿದಾಗ ತಂದೆ ಹೇಳುತ್ತಾನೆ, ಮಗನೇ, ಈಗ ಹೋಗಿ ನೀನು ಹೊಡೆದ ಮೊಳೆಗಳನ್ನೆಲ್ಲಾ ದಿನಕ್ಕೊಂದರಂತೆ ಕೀಳು ಎಂದು. ಮತ್ತೊಮ್ಮೆ ಗೋಡೆ ಕಡೆ ಮರಳಿದ ಹುಡುಗ ಸಾವಧಾನದಿಂದ ದಿನಕ್ಕೊಂದರಂತೆ  ಒಂದೊಂದೇ ಮೊಳೆ ಗಳನ್ನು ಕೀಳುತ್ತಾನೆ. ಒಂದೆರಡು ವಾರಗಳ ತರುವಾಯ ಹುಡುಗ ಬಂದು ತಾನು ಎಲ್ಲಾ ಮೊಳೆಗಳನ್ನು ಕಿತ್ತ ವಿಷಯ ಹಿಗ್ಗುತ್ತಾ ತಂದೆಗೆ ತಿಳಿಸುತ್ತಾನೆ. ಮಗನನ್ನು ನೋಡಿ ಮುಗುಳ್ನಗುತ್ತಾ ಅವನ ಕೈ ಹಿಡಿದು ಕೊಂಡು ಹಿತ್ತಲಿನ ಗೋಡೆಗೆ ಬಂದ ತಂದೆ ಮಗನ ತಲೆ ತಡವುತ್ತಾ ಹೇಳುತ್ತಾನೆ, ಮಗೂ, ಎಷ್ಟು ಸುಂದರ ಕೆಲಸ ನೀನು ಮಾಡಿದೆ, ಆದರೆ ನೋಡು ಒಮ್ಮೆ ಗೋಡೆಯನ್ನು. ಮೊದಲಿನ ಹಾಗಿದೆಯೇ ಗೋಡೆ? ಎಷ್ಟೊಂದು ತೂತುಗಳು ಬಿದ್ದಿವೆ ನೋಡು ಗೋಡೆಯ ಮೇಲೆ. ಈ ಗೋಡೆ ಮೊದಲಿನ ಹಾಗೆ ಆಗಲು ಸಾಧ್ಯವೆ?  ಎಂದಿಗೂ ಇಲ್ಲ. ನೀನು ಕೋಪದಲ್ಲಿ ಆಡಿದ ಮಾತುಗಳೂ ಸಹ ಹಾಗೆಯೇ. ನಿನ್ನ ಕೋಪದ ಮಾತುಗಳು, ಜನರಿಗೆ ಮಾಡಿದ ನೋವು ನೀನು ಮೊಳೆಗಳಿಂದ ಗೋಡೆಗೆ ಮಾಡಿದ ತೂತುಗಳಂತೆ.  ಅವೆಂದೂ ಮಾಸಲಾರವು. ಒಬ್ಬನಿಗೆ ಚೂರಿ ಇರಿದು ಆ ಚೂರಿಯನ್ನು ಹಿಂದಕ್ಕೆ ಎಳೆಯಬಹುದು, ಆದರೆ ಆ ಚೂರಿ ಮಾಡಿದ ಗಾಯ? ಆ ಗಾಯ ಮಾಸುವುದೇ? ನೀನೆಷ್ಟೇ ಕ್ಷಮೆ ಕೋರಿದರೂ ಆ ಗಾಯ ಅಲ್ಲೇ ಇರುತ್ತದೆ.

ಅನರ್ಘ್ಯ ರತ್ನಗಳಂಥ ಮಾತುಗಳನ್ನು ತನ್ನ ಪ್ರೀತಿಯ ತಂದೆಯ ಬಾಯಿಂದ ಆಲಿಸಿದ ಹುಡುಗ ದಂಗುಬಡಿದವನಂತೆ, ತಟಸ್ಥನಾಗಿ ನಿಂತು ತನ್ನ ತಂದೆಯನ್ನೇ ನೋಡುತ್ತಾ ನಿಂತ ಕಣ್ಣೀರು ಹರಿಸುತ್ತಾ.