ಕೆಲವೊಂದು ಮಾತುಗಳು ಎಂದಿಗೂ ಕಿವಿಗಳಲ್ಲಿ ರಿಣ ಗುಟ್ಟು ತ್ತಿರುತ್ತವೆ. ಅವು ಕುಹಕವಾಗಿರಬಹುದು, ಪ್ರಶಂಸೆ ಆಗಿರಬಹುದು, ತಮಾಷೆ ಅಥವಾ ಗೇಲಿಗಾಗಿ ಇರಬಹುದು. ಕೆಳಗಿದೆ ಒಂದಿಷ್ಟು ಮಾತುಗಳು ನನ್ನ ನೆನಪಿನ ಮೂಸೆಯಿಂದ ಹೊರಬಂದವು.
ಸೋಮನಾಥ್ ಚಟರ್ಜೀ ದೊಡ್ಡ ಮಾತುಗಾರ, ವಾಗ್ಮಿ. ಭಾಜಪ ಸೋತ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರಕಾರ ಸೋಮನಾಥರನ್ನು ಲೋಕಸಭೆಯ ಸಭಾಪತಿ ಆಗಿ ನೇಮಿಸಿತು. ಚಟರ್ಜಿ ಯವರನ್ನು ಅಭಿನಂದಿಸುತ್ತಾ, ಸೋಮನಾಥ ಚಟರ್ಜಿ ಮಟ್ಟದ ವಾಗ್ಮಿಯಲ್ಲದಿದ್ದರೂ ಒಳ್ಳೆಯ ಭಾಷಣಕಾರರಾದ ವಾಜಪೇಯಿ “ಇಷ್ಟು ಕಾಲ ತಾವು ಹೇಳಿದ್ದನ್ನು ನಾವು ಕೇಳುತ್ತಿದ್ದೆವು, ಈಗ ನಾವು ಹೇಳಿದ್ದನ್ನು ಕೇಳುತ್ತಾ ಕೂರುವ ಸರದಿ ತಮ್ಮದು ಎಂದು ಹಾಸ್ಯದ ಚಟಾಕಿ ಹಾರಿಸಿದ್ದರು. ಸಭಾಪತಿಯ ಕೆಲಸ ಸದಸ್ಯರು ಮಾತನಾಡುವುದನ್ನು ಕೇಳುತ್ತಾ ಕೂರುವುದು ತಾನೇ?
ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಯಾವುದೇ ಗಲಭೆಗಳು ದೇಶದಲ್ಲಿ ನಡೆದರೂ ಮೂರಕ್ಷರದ ಸಂಘಟನೆ ಯೊಂದನ್ನು ಯಾವಾಗಲೂ ದೂರುತ್ತಿದ್ದರು. ಹಾಗೆಯೇ ವಿದೇಶೀ ಕೈವಾಡದ ಮಾತು ಬಂದಾಗ ನೆರೆಯ ಪಾಕಿಸ್ತಾನದ ಕೈವಾಡ ಇದೆ ಎಂದು ಆರೋಪಿಸುತ್ತಿದ್ದರು. ಪದೇ ಪದೇ ಈ ಮಾತನ್ನು ಕೇಳಿ ಬೇಸತ್ತಿದ್ದ ವಿರೋಧಪಕ್ಷದ ನಾಯಕರಲ್ಲಿ ಒಬ್ಬರಾದ ಸುಬ್ರಮಣ್ಯಮ್ ಸ್ವಾಮೀ ಭಾಷಣ ವೊಂದರಲ್ಲಿ ಹೇಳಿದ್ದು. “ ನಾನು ಲೋಕಸಭೆಯ ಕಲಾಪಗಳಲ್ಲಿ ಪಾಲುಗೊಂಡಾಗ ವಿದೇಶೀ ಸಮಸ್ಯೆಗಳಿಗೆ ಇಂದಿರಾ ಪಾಕಿನ ಕೈವಾಡ ಇದೆ ಎಂದು ಹೇಳುವುದನ್ನು ಹಲವು ಬಾರಿ ಕೇಳಿದ್ದೇನೆ. ಭಾರತದಲ್ಲಿ ಜನಸಂಖ್ಯೆ ವಿಪರೀತ ಏರುತ್ತಿದೆ, ಇದರಲ್ಲೂ ಪಾಕಿಸ್ತಾನದ ಕೈವಾಡ ಇರಬಹುದೇ ಎಂದು ನನ್ನ ಸಂಶಯ ಎಂದು ತಮಾಷೆ ಮಾಡಿದರು.
ಬಾಟ್ಲಿಂಗ್ ಹಗರಣದ ಸಮಯ ಅಂದಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗ್ಡೆ ವಿಚಾರಣೆಗೆ ಆದೇಶ ನೀಡಿದರು. ಕುಂಬ್ಳೆ ಕಾಯಿ ಕಳ್ಳ ಅಂದ್ರೆ ಹೆಗಲನ್ನು ಯಾಕೆ ಮುಟ್ಟಿ ನೋಡ್ ಕೊಳ್ತೀರಾ ಎಂದು ವಿರೋಧ ಪಕ್ಷ ಕೆಣಕಿದಾಗ ಹೆಗ್ಡೆ ಹೇಳಿದ್ದು, “… ಹೆಗಲು ಮುಟ್ಟಿ ನೋಡಿಕೊಂಡಾಗ ಬೂದಿ ಮೆತ್ತಿ ಕೊಂಡಿತ್ತು” ಸಂಶಯ ನಿವಾರಣೆಯಾಗಲಿ ಎಂದು ತನಿಖೆಗೆ ಆದೇಶ ನೀಡಿದೆ ಎಂದರು.
ಬಹಳ ವರ್ಷಗಳ ಹಿಂದಿನ ಮಾತು. ಲೋಕಸಭೆಯಲ್ಲಿ ಒಮ್ಮೆ ಸದಸ್ಯರೊಬ್ಬರು ಕೇರಳದ ಬಗ್ಗೆ ಚರ್ಚೆ ನಡೆದಾಗ “ಕೇರಳದ ಹೆಣ್ಣು ಮಕ್ಕಳು ಬೆಳದಿಂಗಳಿನಲ್ಲಿ ನೋಡಲು ಬಲು ಚೆಂದ” ಎಂದು ಪ್ರಶಂಸಾತ್ಮಕವಾಗಿ ಹೇಳಿದ್ದೆ ತಡ ಕೇರಳದ ಸದಸ್ಯರೆಲ್ಲ ತೀವ್ರವಾಗಿ ಪ್ರತಿಭಟಿಸಿ ಆ ಬಡಪಾಯಿ ಸದಸ್ಯ ಕ್ಷಮೆ ಕೇಳುವಂತೆ ಮಾಡಿದರು.
ನಮ್ಮ ಕರ್ನಾಟಕದ ವಿಧಾನ ಪರಿಷತ್ ಸದಸ್ಯ A.K. ಸುಬ್ಬಯ್ಯ ಒಂದು ರೀತಿಯ AK 47 ತುಪಾಕಿಯಂತೆ. ಅವರ ಯಾವುದೇ ಮಾತುಗಳು ನೆನಪಿಗೆ ಬರದಿದ್ದರೂ ಇಬ್ರಾಹೀಮರ ROLEX WATCH ನ ಹಿಂದೆ ಬಿದ್ದು ಸಾಕಷ್ಟು ಸತಾಯಿಸಿದ್ದು ಮಾತ್ರ ಇನ್ನೂ ನೆನಪಿದೆ.
ತನ್ನ rabble rousing ಭಾಷಣದಿಂದ ದೇಶದ ವಿವಿದೆಡೆ ದೊಡ್ಡ ತಲೆನೋವು ತರುತ್ತಿದ್ದ ತೊಗಾಡಿಯಾ ಬಿಹಾರ ಪ್ರವಾಸದ ಮೇಲೆ ಪಾಟ್ನಾ ನಗರದಲ್ಲಿ ಬಂದಿಳಿದಾಗ ವಿಮಾನ ನಿಲ್ದಾಣ ದಿಂದಲೇ ಆತನನ್ನು ಆತ ಬಂದ ಊರಿಗೆ ರವಾನಿಸಿ ಆದೇಶ ಹೊರಡಿಸಿದ ಲಾಲೂ ಪ್ರಸಾದ ಯಾದವ್ ಪತ್ರಕರ್ತರಿಗೆ ಹೇಳಿದ್ದು “ ತೊಗಾಡಿಯಾ ನಿಗೆ ಎಂಥ ಲಾತ (kick) ಕೊಟ್ಟಿದ್ದೇವೆ ಎಂದರೆ ಆತ land ಆಗೋದು ದೆಹಲಿಯಲ್ಲೇ (we have kicked him like a football and he will land only in delhi) ಎಂದು ತಮ್ಮ ಎಂದಿನ ಚಮತ್ಕಾರದ ನಗುವಿನೊಂದಿಗೆ ಹೇಳಿದರು. ರಾಜಕಾರಣಿಗಳು ಬರೀ ರಾಜಕೀಯ ಮಾತ್ರವಲ್ಲ ತಮ್ಮನ್ನು ಆರಿಸಿದ ಜನರಿಗೆ ಆಗಾಗ ಪುಕ್ಕಟೆ ಮನರಂಜನೆಯನ್ನೂ ಕೊಡುತ್ತಾರೆ.
ಭಾಜಪದ ಅಧಿಕಾರಾವಧಿಯಲ್ಲಿ ವಾಜಪೇಯೀ ಪ್ರಧಾನಿಯಾದರೂ ತೆರೆಮರೆಯ ಚುಕ್ಕಾಣಿ ಅದ್ವಾನಿ ಕೈಯ್ಯಲ್ಲಿ ಎಂದು ಕೆಲವರ ಅಭಿಮತವಾಗಿತ್ತು. ಹಾಗೆಂದ ಮೇಲೆ ಯಾರದಾದರೂ ಬಾಯಲ್ಲಿ ಉದುರಲೇ ಬೇಕಲ್ಲವೇ ಅಣಿ ಮುತ್ತುಗಳು? ಉದುರಿದವು ನೋಡಿ ಆವರದೇ ಪಕ್ಷದ ಮುಖಂಡ ಶೇಷಾದ್ರಿ ಬಾಯಿಂದ. ವಾಜಪೇಯೀ ಭಾಜಪ ಸರಕಾರದ ಮುಖವಾಡ ಮಾತ್ರ ಎಂದು ಹಾಕಿದರು ಬಾಂಬನ್ನು. ಹಿಂದಿಯಲ್ಲಿ “ಮುಖೋಟ” ಕನ್ನಡದಲ್ಲಿ ಮುಖವಾಡ. ರಾಜಧಾನಿ ಸೇರಿ ದೇಶವೇ ನಲುಗಿತು ಈ ಬಾಂಬಿಗೆ. ಈ ಮಾತಿನ ಕಾರಣ ದೊಡ್ಡ ಗಲಾಟೆ ಎದ್ದ ಕೂಡಲೇ ತಡಬಡಿಸಿ ಅವರು ಹೇಳಿದ್ದು “ನಾನು ಹೇಳಿದ್ದು ಮುಖೋಟಾ ಅಲ್ಲ, “ಮುಕುಟ್” (ಕಿರೀಟ) ಹೇ ಹೇ ಹೇ ಎಂದು ಸೋತ ನಗುವಿನೊಂದಿಗೆ ತಮ್ಮ ಮತ್ತು ಸರಕಾರದ ಮಾನ ಉಳಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದರು. ಕೆಲವೊಮ್ಮೆ ರಾಜಕಾರಣಿಗಳು ತಾವು ಮೊದಲು ರಾಜಕಾರಣಿ ನಂತರ ಎಲ್ಲರಂತೆಯೇ “ಮನುಷ್ಯ” ಎಂದು ಸಾಬೀತು ಪಡಿಸುತ್ತಾರೆ ತಮ್ಮ ಮಾತುಗಳಿಂದ.
೧೯೯೦ ರಲ್ಲಿ ಇರಾಕ್ ನ ಅಧ್ಯಕ್ಷರಾದ ಸದ್ದಾಮ್ ಹುಸೇನರು ಕುವೈತ್ ದೇಶವನ್ನು ವಶಪಡಿಸಿಕೊಂಡದ್ದಕ್ಕೆ ಅಮೆರಿಕಾದ ಅಧ್ಯಕ್ಷ ಬುಶ್ ಸೀನಿಯರ್ ಇರಾಕಿನ ಮೇಲೆ ಆಕ್ರಮಣ ಎಸಗಲು ಮೀನಾ ಮೇಷ ಎಣಿಸುತ್ತಿದ್ದಾಗ ಅಂದಿನ ಬ್ರಿಟಿಶ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಹೇಳಿದ್ದು “dont wobble, george” ಅಂತ. ಅಂದರೆ ಹೆದರಬೇಡ ಜಾರ್ಜ್, ನಾನಿದ್ದೇನೆ ನಿನ್ನ ಸಾಮೂಹಿಕ ನರಹತ್ಯೆಗೆ ಸಾಕ್ಷಿಯಾಗಿ ಮತ್ತು ಬೆಂಬಲವಾಗಿ, ಸಾಂಗವಾಗಿ ಸಾಗಲಿ ನಿನ್ನ ಅಮಾಯಕರ ಮೇಲಿನ ಆಕ್ರಮಣ ಎಂದು. ಒಳ್ಳೆಯ ಕೆಲಸಕ್ಕೆ ಮಿತ್ರರು ಸಿಗುವುದು ಸ್ವಲ್ಪ ವಿರಳವೇ, ಆದರೆ ಮನೆ ಹಾಳು ಕೆಲಸಕ್ಕೆ ಸದಾ ಜನರ ಬೆಂಬಲ ಇರುತ್ತದೆ ಎನ್ನುವುದಕ್ಕೆ ಬ್ರಿಟನ್ನಿನ “ಉಕ್ಕಿನ ಮಹಿಳೆ” ಸಾಕ್ಷಿಯಾದರು.