ಓಹ್, ನಿನ್ನ ಛಲವೇ

                                                      

ದಕ್ಷಿಣ ಕೊರಿಯಾದ ಮಹಿಳೆ ವಿಶ್ವದ ೧೪ ಶಿಖರಗಳನ್ನು ಮಣಿಸಿದ ಪರ್ವತ ನಾರಿ. 

ಧರೆಯ ಮೇಲಿನ ಹುಲು ಮಾನವರನ್ನು ಅಣಕಿಸುತ್ತಾ ಆಗಸಕ್ಕೂ ಸವಾಲಾದ ಗಿರಿ ಶಿಖರಗಳು ಈ ಮಹಿಳೆಯ ಅಸಾಧಾರಣ ವಿಶ್ವಾಸ, ಧೈರ್ಯಕ್ಕೆ ಮರುತ್ತರ ನೀಡದೆ ಶರಣಾದವು.  ೧೩ ಶಿಖರಗಳನ್ನು ಗೆದ್ದ ಈ ಮಹಿಳೆ ಕೊನೆಯದಾದ ೨೬,೨೪೭ ಅಡಿ ಎತ್ತರದ ಅನ್ನಪೂರ್ಣ ಶಿಖರವನ್ನು ಮೊಣಕಾಲೂರಿ ಜಯಿಸಿದಳು. ಮೊಣ ಕಾಲೂರಿದ್ದು ಈ ಕೆಚ್ಚ್ಚೆದೆಯ ನಾರಿಯಾದರೂ ವಾಸ್ತವವಾಗಿ ಮೊಣಕಾಲೂರಿ ಶರಣಾಗಿದ್ದು ಅನ್ನಪೂರ್ಣೆಯೇ.

ಓಹ್. ನಮ್ಮ ತೆಂಡೂಲ್ಕರ್ ಒಂದೊಂದೇ ದಾಖಲೆಗಳನ್ನ ಬೆನ್ನತ್ತುವಂತೆ 14 ಶಿಖರಗಳ ಮಣಿಸಿದ ಈಕೆಯ ಹೆಸರು “ಓಹ್ ಯೂನ್ ಸುನ್”. ಬಹುಶಃ ಅತ್ಯುತ್ಸಾಹದ, ಚಿಮ್ಮುವ ಹದಿಹರೆಯದ ಹೆಣ್ಣೋ, ಇಪ್ಪತ್ತರ ತಾರುಣ್ಯವೋ, ಮೂವತ್ತರ ಯೌವ್ವನವೋ ಅಲ್ಲ ಈಕೆಗೆ. ೪೪ ವರ್ಷ ವಯಸ್ಸಿನ ಕೊರಿಯಾದ ಈ ಮಹಿಳೆ ಇದೆ ಆಸುಪಾಸಿನ ವಯಸ್ಸಿನ ಜನರು ನಾಚುವಂಥ ಸಾಧನೆ ಮಾಡಿದಳು. ನಮ್ಮಲ್ಲಿ ೪೦ ಅಂದರೆ ಮುಗಿಯಿತು, ಅದರಲ್ಲೂ ನಮ್ಮ ಹೆಣ್ಣು ಮಕ್ಕಳಿಗಂತೂ ಮದುವೆಯಾಗಿ ಒಂದೆರಡು ಮಕ್ಕಳಾದ ಕೂಡಲೇ ವೈರಾಗ್ಯ ಆವರಿಸಿ ಬಿಡುತ್ತದೆ. ಇನ್ನು ಏನಾದರೂ ಧೈರ್ಯ ಮಾಡಿ ಮನಸ್ಸಿನ ಆಸೆಗಳನ್ನು ಪೂರೈಸುವತ್ತ ಯಾವುದಾದರೂ ಹೊಸ ಚಟುವಟಿಕೆ  ಆರಂಭಿಸಿದರಂತೂ ನೋಡುವವರಿಗೆ ಹೆಚ್ಚು ಕನಿಕರ. ಈ ವಯಸ್ಸಿನಲ್ಲಿ ಇದೆಲ್ಲಾ ಯಾಕೆ ಎಂದು ಉತ್ಸಾಹಕ್ಕೆ ತಣ್ಣೀರೆರೆಚಿ ಮೂಲೆ ತೋರಿಸುತ್ತಾರೆ ಕೂರಲು. ಆದರೆ ಈ ಡಬ್ಬಲ್ ನಾಲ್ಕು (೪೪) ಸಂಖ್ಯೆ ಈಕೆಯ ಉತ್ಸಾಹವನ್ನು ಕುಗ್ಗಿಸುವ ಬದಲು ಎತ್ತರ ಏರಲು ಪ್ರೇರೇಪಿಸಿತು. ಎತ್ತರ ಎಂದರೆ ಸಾವಿರಾರು ಅಡಿಗಳ ಎತ್ತರ. ಹಿಮಾಲಯ ಪರ್ವತ ಶ್ರೇಣಿ ಎಂಥವರ ಎದೆಯನ್ನೂ ನಡುಗಿಸುವಂಥದ್ದು. ಸಾವಿರಾರು ಜನ ಶಿಖರ ಏರಲು ಹೋಗಿ ಪ್ರಾಣ ಕಳೆದುಕೊಂಡವರು. ಅದರ ಮೇಲೆ ಏತಿ ಇದೆ, ಗೀತಿ ಇದೆ ಎಂದು ಭಯ ಹುಟ್ಟಿಸುವವರು ಬೇರೆ. ಆದರೆ ಸಾಧಿದಬೇಕು ಎಂದು ಛಲವಿರುವವರಿಗೆ ಛಲವೇ ಅವರ ಸಂಗಾತಿ, ನೆರಳಿನಂತೆ ಹಿಂಬಾಲಿಸುತ್ತದೆ.

ಆರೋಹಣ ಮಾಡಿದ ಕೂಡಲೇ ತನ್ನ ದೇಶದ ಬಾವುಟವನ್ನು ಬೀಸಿ ಹಿಡಿದ ಈಕೆಗೆ ದಕ್ಷಿಣ ಕೊರಿಯಾದ ಅಧ್ಯಕ್ಷರು ಅಭಿನಂದಿಸುತ್ತಾ ಹೇಳಿದ್ದು,

“She is really great and I’m proud of her,”  

ಈ ಮಹಿಳೆ ೨೦೦೪ ರಲ್ಲಿ ಎವೆರೆಸ್ಟ್ ಪರ್ವತವನ್ನು ಆರೋಹಣ ಮಾಡಿದ್ದಳು.  

ಚಿತ್ರ ಕೃಪೆ: ಯಾಹೂ

ಹೀಗೊಂದು ಜಾಹೀರಾತು

ಸೌದಿ ಅರೇಬಿಯಾದ ಜೆಡ್ಡಾ  ದ ನಗರದಲ್ಲಿ ಕಾಣ ಸಿಕ್ಕಿದ ಜಾಹೀರಾತು. ಡ್ರೈವ್ ಮಾಡುತ್ತಾ ಹೋಗುತ್ತಿದ್ದಾಗ ಈ ಚಿತ್ರ ನೋಡಿದ ಕೂಡಲೇ ನನಗನ್ನಿಸಿದು ಇದೇನೋ ಅಪ್ಪಿ ತಪ್ಪಿ ಅರಿವಿಲ್ಲದೆ ಬಂದು ಬಿಟ್ಟಿದೆ, ಯಾವುದೋ ಹಳೆಯ ಮಲಿನವಾದ ಚಿತ್ರವಿರಬೇಕು ಎಂದು. ನನ್ನ ಗ್ರಹಿಕೆ ಸುಳ್ಳಾಯಿತು ಎಂದು ಸ್ವಲ್ಪ ದೂರ ಒಂದು ರೌಂಡ್ ಅಬೌಟ್ (ಸರ್ಕಲ್) ಸಿಕ್ಕ ಕೂಡಲೇ ತಿಳಿಯಿತು. ಅಲ್ಲೂ ಹಿಂದಿನದಕ್ಕಿಂತ ದೊಡ್ಡ ಜಾಹೀರಾತು. ಇದನ್ನು ಸೃಷ್ಟಿಸಿದ ವ್ಯಕ್ತಿಯ ಕಲೆ, ತಲೆ ಬಗ್ಗೆ ವಿಪರೀತ ಅಭಿಮಾನ ಉಂಟಾಗಿ ಸೌದಿ ಅರೇಬಿಯಾದ ಪ್ರಸಿದ್ಧ ಕೇಕ್ ಕಂಪೆನಿ ನಗರದ ತುಂಬಾ ಜಾಹೀರಾತಿನ ಮೆರವಣಿಗೆಯನ್ನೇ ಶುರು ಮಾಡಿದ್ದರು. 

ಚಿತ್ರ ದಲ್ಲಿರುವವನ ತಲೆ ಕೂದಲು, ಆ ದಾಡಿ, ಅವನ ಅವತಾರ ನೋಡಿದರೆ ತಿನ್ನುವ ಚಪಲ ಬಿಡಿ ವಾಕರಿಕೆ ಶುರುವಾಗುತ್ತದೆ.   

western bakeries “lusine” ಬ್ರಾಂಡ್  ಅಡಿಯಲ್ಲಿ ಸ್ವಾದಿಷ್ಟಕರವಾದ ತಿನಿಸುಗಳನ್ನು ಸೊಗಸಾಗಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ಬಿಡುತ್ತದೆ. ಸೌದಿಯಲ್ಲಿರುವ  ಅತೀ ದೊಡ್ಡ ಏಕೀಕೃತ ಡಯರಿ ಫಾರ್ಮ್ ಗಳಲ್ಲಿ ಒಂದಾದ “ಅಲ್-ಮರೈ” ಒಡೆತನದ ಈ ಕೇಕ್ ಕಂಪೆನಿ ಜಾಹೀರಾತು ವಿಭಾಗದಲ್ಲಿ ಎಂಥ ಹೆಡ್ಡ ರನ್ನು ಕೆಲಸಕ್ಕಿಟ್ಟುಗೊಂಡಿದ್ದಾರೆಂದು ತಿಳಿಯಲಿ ಎಂದು ಕಂಪೆನಿಗೆ ಫೋನಾಯಿಸಿದೆ. ಗ್ರಾಹಕ ಸಂಪರ್ಕ ವಿಭಾಗದಿಂದ ಒಬ್ಬ ತರುಣಿ ಉತ್ತರಿಸಿದಳು. ಸ್ವರಮಾಧುರ್ಯ ಕೇಳಿ ಪುಳಕವಾಗಿ ನನ್ನನ್ನು ಬಾಧಿಸಿದ ವಿಷಯ ಹೇಳಿದೆ. ಈ ಜಾಹೀರಾತು sick looking, ಅಷ್ಟೇ ಅಲ್ಲ ಇದನ್ನು ನೋಡಿದ ಯಾವನೂ ನಿಮ್ಮ ಕೇಕ್ ತಿನ್ನಲಿಕ್ಕಿಲ್ಲ, ನೀನು ಮಹಿಳೆ ಆದ್ದರಿಂದ ಆ ಚಿತ್ರ ನಿಜಕ್ಕೂ ಹೇಗೆ ಕಾಣುತ್ತಿದೆ ಎಂದು ಹೇಳಲು ಆಗುತ್ತಿಲ್ಲ, ಎಂದು ಹೇಳಿದಾಗ ಅತ್ಯಂತ ಗಮನ ಕೊಟ್ಟು ಆಲಿಸಿದ ಲಲನಾ ಮಣಿ ತನಗೂ ಆ ಜಾಹೀರಾತು ಅಷ್ಟು ಚೆನ್ನಾಗಿ ಕಾಣಲಿಲ್ಲ, ಆದರೆ ನೌಕರಳಾಗಿ ನಾನೇನೂ ಹೇಳುವಂತಿಲ್ಲವಲ್ಲ, ನಿಮ್ಮ ದೂರನ್ನು ನಾನು ಮುಖ್ಯಸ್ಥರಿಗೆ ತಲುಪಿಸುತ್ತೇನೆ ಎಂದು ನನ್ನ ಹೆಸರು, ಮೊಬೈಲ್ ನಂಬರ್ ತೆಗೆದುಕೊಂಡಳು. ಸುಂದರ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿದ್ದ ಆಕೆಯನ್ನು ಕೇಳಿದೆ ಯಾವ ದೇಶದವಳೆಂದು. ಹೇಳಿಯೇ ಬಿಟ್ಟಳು, ನಮ್ಮ ಪರಮ ಮಿತ್ರ, ಆಪತ್ಕಾಲವನ್ನು ಆಗಾಗ ನಮ್ಮ ಹೊಸ್ತಿಲಿಗೆ ತಂದು ನಿಲ್ಲಿಸುವ ದೇಶದವಳು, ಪಾಕಿಸ್ತಾನ ಎಂದು.

 
ಈಗ ಸೌದಿ ಅರೇಬಿಯಾದಲ್ಲಿ ಬಹುತೇಕ ಕಂಪೆನಿಗಳು ಮಹಿಳೆಯರನ್ನು ಕೆಲಸಕ್ಕಿಟ್ಟುಕೊಂಡಿವೆ, ನಮ್ಮ ಕಂಪೆನಿಯನ್ನು ಹೊರತು ಪಡಿಸಿ. ಅದಕ್ಕೇ ಇರಬೇಕು ನಮ್ಮ ಕಂಪೆನಿ ಎಂದರೆ ನನ್ನ ಶ್ರೀಮತಿಗೆ ಪ್ರೀತಿ ಸ್ವಲ್ಪ ಜಾಸ್ತಿ, ನನ್ನ ದಾರಿಗೆ distraction ತಂದು ಒಡ್ಡುತ್ತಿಲ್ಲವಲ್ಲ ಎಂದು.                   
 
ಜಾಹೀರಾತಿನ ಎಡ ತುದಿಯಲ್ಲಿ ಅರಬಿಯಲ್ಲಿ ಬರೆದಿರುವುದು “ಎಚ್ಚರಿಕೆ, ಕೇಕ್ನಲ್ಲಿ ಕ್ರೀಮ್ ಹೆಚ್ಚಾಗಿ ತುಂಬಲ್ಪಟ್ಟಿದೆ” ಎಂದು. ನಿಮಗೆ ಹೇಗೆ ಕಾಣುತ್ತದೆ, ಈ ಜಾಹೀರಾತಿನ ಚಿತ್ರ ನೋಡಿ?

* ಜಂಭದ ಬ್ಯಾಗ್

ವ್ಯಾನಿಟಿ ಬ್ಯಾಗ್ ಬಗ್ಗೆ ಒಂದು ಸ್ವಾರಸ್ಯಕರವಾದ ಲೇಖನ ಸಂಪದದಲ್ಲಿ ಪ್ರಕಟವಾಯಿತು. ವ್ಯಾನಿಟಿ ಬ್ಯಾಗ್ ಒಳಗೆ ಏನಿದೆ ಎಂದು ಕೇಳುವುದೂ, ಚೋಲಿ ಕೆ ಪೀಛೆ ಕ್ಯಾ ಹೈ ಎಂದು ಕೇಳುವುದೂ ಒಂದೇ ಎಂದು ನನ್ನ ಅಭಿಪ್ರಾಯ. ಹೆಂಗಳೆಯರು ತಮ್ಮ ಬ್ಯಾಗ್ ಬಗ್ಗೆ ತುಂಬಾ protective. ಅದರಲ್ಲೇನು ಬದನೆ ಕಾಯಿ ಇದ್ದರೂ ಗುಟ್ಟನ್ನು ಮಾತ್ರ ಬಿಟ್ಟು ಕೊಡುವುದಿಲ್ಲ. ಹೆಣ್ಣೇ ರಹಸ್ಯ ಅಲ್ಲವೇ? ಇನ್ನು ಬ್ಯಾಗ್ ತಾನೇ ಹೇಗೆ ಭಿನ್ನವಾದೀತು? ನಾನು ಪ್ರೌಢ ಶಾಲೆಯಲ್ಲಿದ್ದಾಗ ಕನ್ನಡ ಪಂಡಿತರೊಬ್ಬರು ಹೇಳಿದ್ದು ನೆನಪಿಗೆ ಬಂತು; ವ್ಯಾನಿಟಿ ಬ್ಯಾಗ್ ಅಂದ್ರೆ ಏನು ಗೊತ್ತೇನ್ರೋ, “ಜಂಭದ ಬ್ಯಾಗ್” ಅಂತ. ಅದನ್ನು ಹಿಡ್ಕೊಂಡು ಕಾಡು ಕುದ್ರೆ ಥರ ಹೋಗೋ ಹೆಂಗಸರನ್ನು ನೋಡಿದ್ದೀರಾ ಎಂದು ತಮಾಷೆಯಾಗಿ ಹೇಳಿದ್ದರು. ಅದೇನೇ ಇರಲಿ ನನಗಂತೂ ವ್ಯಾನಿಟಿ ಬ್ಯಾಗು ಮಹಿಳೆಯರಷ್ಟೇ ಸಂಕೀರ್ಣ. ಅದರೊಳಗೆ ಏನಿದೆ ಎಂದು ಕೇಳಿದರೆ ನಿಮ್ಮ ವಯಸ್ಸೆಷ್ಟು ಎಂದು ಕೇಳಿದರೆ ಎಷ್ಟು ಕೋಪ ಬರುತ್ತೋ ಅದಕ್ಕಿಂತ ಹೆಚ್ಚು ಕೋಪ ಬರುತ್ತದೆ. ಪಾಶ್ಚಾತ್ಯ ಮಹಿಳೆಯರ ಬ್ಯಾಗಿನಲ್ಲಿ ಟೂತ್ ಬ್ರಶ್ ಮತ್ತು ಕಾಂಡೋಮ್, ಪಿಲ್ಸ್ ಇರುತ್ತದೆ ಎಂದು ಎಲ್ಲೋ ಓದಿದ ನೆನಪು. ನಮ್ಮ ಮಹಿಳೆಯರ ಬ್ಯಾಗ್ನಲ್ಲಿ ನನಗೆ ತಿಳಿದಂತೆ ಬಾಯಿ ವಾಸನೆ ಹೋಗಲಾಡಿಸುವ “ಮಿಂಟ್” ಗಳು, ಕುಂಕುಮದ ಡಬ್ಬಿ, ಒಂದಿಷ್ಟು ಪೌಡರ್ರು, ಪುಟಾಣಿ ಮಗು ಇದ್ದರೆ diapers ಇತ್ಯಾದಿ. ಊಪ್ಸ್, ಮರೆತೆ. ತಮ್ಮ ಗಂಡಂದಿರ ಜೇಬಿನಿಂದ ಕದ್ದ ಹಣ? ಓಹ್, ಅದು ಬ್ಯಾಗ್ನಲ್ಲಿರೋಲ್ಲ, ಬದಲಿಗೆ ಕುಪ್ಪುಸದ ಒಳಗೆ ಇರುತ್ತೆ.
ನನಗಂತೂ ನಮ್ಮ ಹಳೆ ಕಾಲದ ಸಾಮಾನ್ಯವಾಗಿ ಅಜ್ಜಿಯರು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಳ್ಳುವ ಪುಟಾಣಿ, embroidery ಮಾಡಿದ ಬಟ್ಟೆಯ ಚೀಲ (pouch) ಇದೆಯಲ್ಲ, ಅದೇ ಇಷ್ಟ. ಅದರಲ್ಲಿ ಒಂದೆರಡು ಅಡಿಕೆಯ ತುಂಡುಗಳು, ಒಣಗಿದ ವೀಳ್ಯ, ಒಂದಿಷ್ಟು ಪುಡಿಗಾಸು… pouch ನಷ್ಟೇ ನೇರ, ಸರಳ.