ಅಜ್ಜಿಯ ನೆನಪು

ಗೋರ್ಬಚೋಫ್ ೮೦ ನೆ ಜನ್ಮದಿನಾಚರಣೆಯ ಹುಮ್ಮಸ್ಸಿನಲ್ಲಿದ್ದಾರೆ. ವಿಶ್ವದ ಅತ್ಯಂತ VISIBLE LEADER ಗಳಲ್ಲಿ ಒಬ್ಬರಾಗಿದ್ದರು ಗೋರ್ಬಚೋಫ್. ೮೦ ರ ದಶಕದಲ್ಲಿ ಅಮೆರಿಕೆಯ ರೊನಾಲ್ಡ್ ರೇಗನ್, ರಷ್ಯದ ಗೋರ್ಬಚೋಫ್ ಸುದ್ದಿ ಮಾಡಿದ್ದೆ ಮಾಡಿದ್ದು. ರೊನಾಲ್ಡ್ ರೇಗನ್ ಒಬ್ಬ ಹಾಲಿವುಡ್ ನಟ. ಕೋಟಿಗಟ್ಟಲೆ ಜನರನ್ನು ತನ್ನ ಚಿತ್ರಗಳ ಮೂಲಕ ರಂಜಿಸಿದ ರೇಗನ್ ರಾಜಕಾರಣದಲ್ಲೂ ತಮ್ಮದೇ ಆದ ಛಾಪನ್ನು ಒತ್ತಿದ್ದರು. ರೇಗನ್ ಮತ್ತು ಗೋರ್ಬಚೋಫ್ ಮಧ್ಯೆ ಇದ್ದುದು ಒಂದು ಕಾಲದ ಧರ್ಮೇಂದ್ರ – ಹೇಮಾ ಮಾಲಿನಿ, ಸಲ್ಮಾನ್ – ಐಶ್ವರ್ಯ ನಡುವಿನ “ಕೆಮಿಸ್ಟ್ರಿ”. ಇವರುಗಳು ನಾಯಕರಾಗಿದ್ದ ಎರಡೂ ದೇಶಗಳೂ ಅಪನಂಬಿಕೆಯಿಂದ ತೊಳಲುತ್ತಿದ್ದರೆ ಇವರೀರ್ವರು ಮಾತ್ರ ಒಬ್ಬರನ್ನೊಬ್ಬರ ಕಾರ್ಯಶೈಲಿಯನ್ನು ಮೆಚ್ಚುತ್ತಾ ಒಂದು ಅಪೂರ್ವವಾದ ಸ್ನೇಹವನ್ನು ಹೆಣೆದಿದ್ದರು. ರೇಗನ್ ರವರು ಗೋರ್ಬಚೋಫ್ ರನ್ನು ಉದ್ದೇಶಿಸಿ Mr. Gorbachev, tear down this wall. ಬರ್ಲಿನ್ ಗೋಡೆ ಬಗ್ಗೆ ಅಮೆರಿಕೆಯ ಅಧ್ಯಕ್ಷ ನೊಬ್ಬ ಸೋವಿಯೆಟ್ ನಾಯಕನಿಗೆ ಈ ರೀತಿ ಸಂಬೋಧಿಸಿ ಹೇಳಬೇಕೆಂದರೆ ಮಾಮೂಲಿ ಕೆಲಸವಲ್ಲ. ಸಿನಿಮಾದ ಡಯಲಾಗ್ ಥರ ಹೊಡೆದೇ ಬಿಟ್ಟರು ರೇಗನ್ ವಿಶ್ವ ದಂಗಾಗುವಂತೆ.

ಗೋರ್ಬಚೋಫ್ ಮಾತು ಬಂತೆಂದರೆ ಗತಿಸಿಹೋದ ನನ್ನ ಪ್ರೀತಿಯ ಅಜ್ಜಿಯ ನೆನಪು ಬರುತ್ತದೆ. ಕನ್ನಡ ಭಾಷೆಯನ್ನ ಬಹು ಚೆನ್ನಾಗಿ ಮಾತನಾಡುತ್ತಿದ್ದ ಅವರು ತುಷಾರ, ಕಸ್ತೂರಿ, ಮಲ್ಲಿಗೆ, ಮಯೂರ, ಸುಧಾ ಮುಂತಾದ ಪತ್ರಿಕೆಗಳನ್ನು ತಪ್ಪದೆ ಓದುತ್ತಿದ್ದರು. ನನ್ನ ಅಜ್ಜಿಗೂ ನನ್ನ ಹಾಗೆಯೇ ವಿಶ್ವದ ಆಗುಹೋಗುಗಳ ಮೇಲೆ ಆಸಕ್ತಿ ಹೆಚ್ಚು. ಟೀವೀ ಪರದೆ ಮೇಲೆ ಗೋರ್ಬಚೋಫ್ ಕಾಣಿಸಿದ್ದೇ ತಡ ಕೇಳುತ್ತಿದ್ದರು, ಏನೋ ಅದು, ಅವನ ತಲೆ ಮೇಲೆ ಅದ್ಯಾವಾಗ ಕಾಗೆ ಕಕ್ಕ ಮಾಡಿತು ಎಂದು. ಗೋರ್ಬಚೋಫ್ ಅವರ ಕೂದಲಿಲ್ಲದ ನುಣ್ಣಗಿನ ತಲೆ ಮೇಲೆ ದೊಡ್ಡದಾದ ಮಚ್ಚೆ ಇತ್ತು. ಈ ಮಚ್ಚೆ world famous. ನೋಡಿದವರಿಗೆ ನನ್ನ ಅಜ್ಜಿಗೆ ತೋಚಿದಂತೆಯೇ ಕಾಗೆ ಕಕ್ಕ ಉದುರಿಸಿದ ಹಾಗೆ ಕಾಣುತ್ತಿತ್ತು. ಗೋರ್ಬಚೋಫ್ ರ ನೆನಪಾದಾಗ ಎರಡು ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಹೋದ ಅಜ್ಜಿಯ ನೆನಪೂ ಸಹ ಬರುತ್ತದೆ.

ಹುಲ್ಲಾಗು ಬೆಟ್ಟದಡಿ,, ಸಿಹಿಯಾಗು ಮಾತಿನಲ್ಲಿ

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು — ಮಂಕುತಿಮ್ಮ ।।

ಸಿಹಿಯಾಗು ಮಾತಿನಲ್ಲಿ, ಬೆಳಕಾಗು ಬಾಳಿನಲ್ಲಿ

ರೋಷಾ….ಬಿಡೂ, ಬಿಡೂ, ಸಾಕೂ….   

ಸಂಪದದಲ್ಲಿ ಸಿಕ್ಕ ಈ ಡೀ ವೀ ಜೀ ಯವರ ಸಾಲುಗಳು ಇಷ್ಟವಾದವು, ಹಾಗೆಯೇ ಅದನ್ನು ಓದುತ್ತಿರುವಾಗ “ಸಿಹಿಯಾಗು ಮಾತಿನಲ್ಲಿ…..” ಹಾಡು ನೆನಪಿಗೆ ಬಂತು.

ಈ ಮೇಲಿನ ಮಾತುಗಳು ಬಹುಶಃ ಹಗೆ ವರ್ತಕರಿಗೆ ಇಷ್ಟವಾಗದಿರಬಹುದು. ಆದರೂ ಒಂದಲ್ಲ ಒಂದು ದಿನ ತಮ್ಮ “ವ್ಯಾಪಾರ” ಬಿಟ್ಟು ಮಾನವೀಯ ಮೌಲ್ಯಗಳ ಕಡೆ ಗಮನ ಕೊಡುವರೆಂಬ ಆಶಯ ಮನದ ಮೂಲೆಯಲ್ಲಿ.