ಚಿತ್ರ, ಘನ ಘೋರ

ಚಿತ್ರಗಳು ನೋಡುವವರ ಮೇಲೆ ಗಾಢ, ಗಂಭೀರ ಪರಿಣಾಮ ಬೀರುತ್ತವೆ. ಆಂಗ್ಲ ಭಾಷೆಯಲ್ಲಿ a picture speaks a thousand words ಮತ್ತು  a picture is worth of thousand words ಎಂತಲೂ ಹೇಳುತ್ತಾರೆ. ಚಿತ್ರಗಳು ಬರೀ ಭಾವನೆಗಳನ್ನ ರೂಪಿಸುವುದಕ್ಕೆ, ಕೆರಳಿಸುವುದಕ್ಕೆ ಮಾತ್ರವಲ್ಲ, ಹೇಳಿದ ವಿಷಯ ಸರಿಯಾಗಿ ಅರ್ಥವಾಗಿ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಲೂ ಸಹಕಾರಿಯಾಗುತ್ತವೆ.

ಒಸಾಮಾನನ್ನು ಬಲಿ ತೆಗೆದುಕೊಂಡ ವಿಷಯವನ್ನು ಒಬಾಮಾ ಅಮೆರಿಕೆಗೂ, ವಿಶ್ವಕ್ಕೂ ಹೇಳಿದ ಕೂಡಲೇ ಎಲ್ಲರೂ ಕೇಳಿದ್ದು ಓಕೆ, ಎಲ್ಲಿದೆ ಚಿತ್ರ? ಎಂದು. ಹತ್ತು ವರ್ಷಗಳಿಂದ ಪ್ರಪಂಚ ಪೂರ್ತಿ ಜಾಲಾಡಿಯೂ ಸಿಗದ, ಈ ಹುಡುಕಾಟಕ್ಕೆ ಸುಮಾರು ಒಂದು ಟ್ರಿಲ್ಲಿಯನ್ ಡಾಲರ್ (೧೦೦ ಶತ ಕೋಟಿ ಡಾಲರ್) ಖರ್ಚು ಮಾಡಿಯೂ ಕೈಗೆ ಸಿಗದ ಒಸಾಮಾ ಏಕಾಏಕಿ ಸಿಕ್ಕಿ ಬಿದ್ದಿದ್ದು ಮಾತ್ರವಲ್ಲ ಸತ್ತೂ ಬಿದ್ದ ಎಂದರೆ? picture please, ಎಂದಿತು ಅಮೇರಿಕಾ ಮತ್ತು ವಿಶ್ವ. ಚಿತ್ರ ಘೋರವಾದ ದೃಶ್ಯದಿಂದ ಕೂಡಿದ್ದರಿಂದ ನಾವು ಕೊಡೋಲ್ಲ ಅಂತ ಶ್ವೇತ ಭವನ. gruemsome picture ತೋರಿಸಿ ಒಸಾಮಾನ ಬೆಂಬಲಿಗರನ್ನು ಮತ್ತಷ್ಟು ಹಿಂಸೆಗೆ ಪ್ರಚೋದಿಸಲು ನಾವು ತಯಾರಿಲ್ಲ, ಮಾತ್ರವಲ್ಲ “You know, that’s not who we are.”, ಎಂದರು ಅಮೆರಿಕೆಯ ಅಧ್ಯಕ್ಷರು.

ತನ್ನ ಬದುಕಿನ ಒಂದು ಘಟ್ಟದ ನಂತರ ಘೋರವಾಗಿ ಪ್ರಪಂಚವನ್ನು ಕಾಡಿದ ಒಸಾಮಾ ತನ್ನ ಸಾವಿನಲ್ಲೂ ಘನ ಘೋರನಾದ. ಈ ಶುಕ್ರವಾರ ಹೇಳಿಕೆಯೊಂದರಲ್ಲಿ ತಮ್ಮ ನಾಯಕ ಸತ್ತಿರುವುದನ್ನು ಅಲ್ಕೈದಾ ಖಚಿತಪಡಿಸಿ ಚಿತ್ರಕ್ಕಾಗಿ ಗೋಗರೆಯುತ್ತ್ತಿದ್ದ ಜನರ ಬಾಯನ್ನು ಶಾಶ್ವತವಾಗಿ ಮುಚ್ಚಿಸಿತು.

ತಿಳಿವಳಿಕೆಗೆ ಮತ್ತೊಂದಿಷ್ಟು ತಿಳಿಸಾರು

ಬದುಕಿನಲ್ಲಿ ಮನೆಯವರಿಂದ , ನೆಂಟರಿಂದ , ಮಿತ್ರರಿಂದ, ಸಹೋದ್ಯೋಗಿಗಳಿಂದ ಬಹಳಷ್ಟು ಕುಹಕಗಳನ್ನು, ಕಟು ಮಾತುಗಳನ್ನ ಕೇಳಿರುತ್ತೇವೆ. ನಿನ್ನ ಕೈಯ್ಯಿಂದ ಏನೇನೂ ಆಗದು, ನೀನು ದಡ್ಡ, ಮೂರ್ಖ, ಕೋಪಿಷ್ಠ, ನಿನ್ನನ್ನು ಕಂಡರೆ ಯಾರಿಗೂ ಆಗೋದಿಲ್ಲ್ಲ, ನಿನ್ನ ಮುಖ ನೋಡು, ಇನ್ನೂ ಸ್ವಲ್ಪ ಚೆನ್ನಾಗಿ, ನೋಡುವಂತಿದ್ದರೆ ಏನು ಮಾಡುತ್ತಿದ್ದೆಯೋ, ನೀನ್ಯಾಕೆ ಹೀಗೇ, ನೀನು “ಸ್ಟ್ರೇಂಜ್”,  “ವೀರ್ಡ್” ಹೀಗೇ ಸಾಗುತ್ತವೆ ಗುಣಗಾನಗಳು. ಇವನ್ನು ಒದರುವವರಿಗೆ ತಿಳಿದಿರುವುದಿಲ್ಲ ಈ ಮಾತುಗಳು ಮನಸ್ಸಿಗೆ ಮಾತ್ರವಲ್ಲ ನಮ್ಮ self worth ಮೇಲೂ ಯಾವ ಪರಿಣಾಮ ಬೀರುತ್ತವೆ ಎಂದು. ಕೆಲವರಿಗೆ ಟೀಕಿಸೋದರಲ್ಲೇ ಏನೋ ಒಂದು ಸುಖ, ನೆಮ್ಮದಿ. ಯಾರನ್ನಾದರೂ ಕಟು ಮಾತುಗಳಲ್ಲಿ ಹಳಿದ ಮೇಲೆ ಏನನ್ನೋ ಸಾಧಿಸಿದ ಹಾಗೆ. ಚೆನ್ನಾಗಿ ಉರ್ಕೊಂಡ ಎಂದು ಒಳಗೊಳಗೇ ಸಂತಸ. ಇನ್ನು ಕೆಲವರಿಗೆ ತಮ್ಮ ಕುಟುಕು ಮಾತು ಜನರಿಗೆ ನೋವುಂಟು ಮಾಡುತ್ತದೆ ಎನ್ನುವ ಪರಿವೆಯೂ ಇರುವುದಿಲ್ಲ. ಚೆನ್ನಾಗಿ ಬೊಗಳಿದ ನಂತರ ಬಾಲವನ್ನು ಕುಂಡೆ ಯಡಿಗೆ ಸೇರಿಸಿ ನಡೆಯುವ ನಾಯಿಯಂತೆ ಜಾಗ ಖಾಲಿ ಮಾಡುತ್ತಾರೆ.  

ಇಂಥ ತಿಳಿಗೇಡಿಗಳು, ಮತಿಹೀನರು, ಹೇಳಿದ್ದನ್ನು ಮನಸ್ಸಿಗೆ ತೆಗೆದುಕೊಳ್ಳದೆ ಇರುವುದೂ ಕೆಲವೊಮ್ಮೆ ಅಸಾಧ್ಯವೇ. ಹಾಗಾದ್ರೆ ಕೊರಗಿ ಕೊರಗಿ ಮನಸ್ಸು ಕೆಡಿಸಿಕೊಳ್ಳ ಬೇಕೋ? ಬೇಡ, ಅಂಥ ವ್ಯಕ್ತಿಗಳ ಸಹವಾಸವನ್ನು ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಮೊದಲನೆಯದಾಗಿ ಮಾಡಬೇಕಾದ ಕೆಲಸ. ಸ್ವತಃ ಮನೆಯವರೇ ಆದರೆ? ಅವರಿಗೆ ತಿಳಿ ಹೇಳೋದು ಕಷ್ಟವಾದರೂ ಜಾಣ್ಮೆಯಿಂದ, ನಾಜೂಕಿನಿಂದ ವಿವರಿಸಬೇಕು. ಆದರೆ ಆಗೊಮ್ಮೆ ಈಗೊಮ್ಮೆ ಸನ್ನಡತೆಯ, ಸ್ವೀಟ್ ನೇಚರ್ ನ ಜನರನ್ನೂ ನಾವು ಕಾಣುತ್ತೇವೆ. ಮುಕ್ತ ಕಂಠದಿಂದ ಹೊಗಳುವ, ಮೆಚ್ಚುಗೆ ವ್ಯಕ್ತಪಡಿಸುವ, ಒಳ್ಳೆಯ ಮಾತನ್ನಾಡುವ, ನಮ್ಮ ಮೇಲೆ ನಮಗೇ ಅಭಿಮಾನ ಮೂಡುವಂತೆ  ಮಾಡುವ ಜನರೂ ಇಲ್ಲದ್ದಿಲ್ಲ. ಅಂಥವರ ಸಹವಾಸ ಮನಸ್ಸಿಗೆ ಮುದ ನೀಡುತ್ತದೆ, ಅಂಥವರು ಆದರ್ಶ ಸಂಗಾತಿಗಳು. ಒಬ್ಬ ವ್ಯಕ್ತಿ ವ್ಯಾಯಾಮ ನಿರತನಾಗಿದ್ದಾಗ ಅವನ ಲಾಕರ್ ನಲ್ಲಿ ಅವನ ಸ್ನೇಹಿತ ಒಂದು ಚಿಕ್ಕ ಚೀಟಿಯನ್ನು ಇಟ್ಟು ಹೋಗಿರುತ್ತಾನೆ, ತೆರೆದು ನೋಡಿದಾಗ ಅದರಲ್ಲಿ ಹೀಗೇ ಬರೆದಿರುತ್ತದೆ;

“ಯಾವುದನ್ನೂ ಮನಸ್ಸಿಗೆ ಹಚ್ಚಿಕೊಂಡು ಕೊರಗಬೇಡ, ನೀನು ಜ್ಞಾನದಲ್ಲಾಗಲಿ, ಅನುಭವದಲ್ಲಾಗಲಿ ಕಡಿಮೆಯಲ್ಲ. ನೀನು ನಿಷ್ಠುರವಾಗಿ ಮಾತನಾಡಿದರೂ ಸತ್ಯವನ್ನೇ ನುಡಿಯುವೆ, ಕ್ರಿಯಾಶೀಲತೆ ಇದೆ ನಿನ್ನಲ್ಲಿ, ನೀನು ಮಾತಿಗೆ ತಪ್ಪುವವನಲ್ಲ, ನಿನ್ನಿಂದಾದ ಸಹಾಯ ಮಾಡಲು ನೀನು ಯಾವಾಗಲೂ ತಯಾರು. ನಿನ್ನದು ನಿನಗೇ ತಿಳಿಯದಷ್ಟು ಉನ್ನತ ಮೌಲ್ಯಗಳುಳ್ಳ ವ್ಯಕ್ತಿತ್ವ, ಇಂದಲ್ಲ ನಾಳೆ ಯಶಸ್ಸು ನಿನ್ನನ್ನು ಹುಡುಕಿಕೊಂಡು ಬಂದೆ ಬರುತ್ತದೆ”. ನಾವೆಂದಾದರೂ ನೊಂದ ಆತ್ಮಗಳಿಗೆ ಇಂಥ ಸಾಂತ್ವನದ ನುಡಿಗಳನ್ನು ಹೇಳಿದ್ದೇವೆಯೇ, ಬರೆದಿದ್ದೇವೆಯೇ?