ವಯಸ್ಸೇ, ರಿಲಾಕ್ಸ್ ಪ್ಲೀಸ್

ಕಲಿಕೆಗೆ ವಯಸ್ಸೆನ್ನುವ ಕಾಲಮಾಪನ ಬೇಡ. ನಮಗೆ ಬೇಕಿರುವುದು ಕಲಿಯಲು ಬೇಕಾದ ಉತ್ಕರ್ಷೆ ಮಾತ್ರ. ಕೆಲವರಿಗೆ ಅದೇನೋ ಒಂದು ರೀತಿಯ ಸಂಶಯ, ನಾನಗೆ ಮೂವತ್ತಯ್ದಾಯ್ತು, ಐವತ್ತಾಯ್ತು, ನನ್ನಿಂದ ಇದು ಮಾಡಲು ಸಾಧ್ಯವೇ, ಜನ ಏನೆಂದು ಕೊಂಡಾರು…ಹೀಗೆ ಹತ್ತು ಹಲವು ನಮ್ಮನ್ನು ಹಿಂದಕ್ಕಟ್ಟುವ ವಿಚಾರಗಳು ಹಿಂಬಾಲಿಸುತ್ತವೆ ನಮ್ಮ ಮನಸ್ಸಿನ ಆಸೆಗಳಿಗೆ ತಣ್ಣೀರೆರೆಚಲು. ಜನ ಏನನ್ನಾದರೂ ಅಂದು ಕೊಳ್ಳಲಿ, ನೀವು ಮಾಡೋದು ನಿಮ್ಮ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ತಾನೇ? ಮತ್ತೇಕೆ ಜಗದ ಹಂಗು? ಕೆಳಗಿನ ಕೊಂಡಿಗಳನ್ನು ನೋಡಿ ಮತ್ತು ಸಿದ್ಧರಾಗಿ ಕಲಿಯಬೇಕಾದ್ದನ್ನು ಕಲಿಯಲೂ, ಹಿಮಾಲಯವನ್ನು ಮಣಿಸಲೂ.

http://www.dailymail.co.uk/news/article-1036526/91-year-old-war-veteran-oldest-person-collect-PhD-Cambridge-University.html

http://ibnlive.in.com/news/100yearold-indian-freedom-fighter-pursues-phd/133246-3.html

ಒಂದು ಎರಡು ಬಾಳೆಲೆ ಹರಡು..

ನನ್ನ ಮಗಳು “ಇಸ್ರಾ” ಈಗ ಎರಡು ವರ್ಷದ ಪುಟಾಣಿ. ಪುಟು ಪುಟು ಮನೆತುಂಬಾ ಓಡಾಡುತ್ತಾ ತನ್ನ ಅಣ್ಣನನ್ನು ಕೆಣಕಿ ಸತಾಯಿಸುತ್ತಾ ಕಾಲ ಕಳೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನೆಯ ಹೊರಗೆ ಕಾರಿನ ಶಬ್ದ ಕೇಳುತ್ತಲೇ ತಾನೇ ಬಾಗಿಲು ತೆರೆದು ಜಿಗಿದುಬಂದು ಗೇಟಿನ ಹತ್ತಿರ ನಿಂತು ನನ್ನನ್ನು ಬರಮಾಡಿಕೊಂಡಾಗ ಎಲ್ಲಾ ಆಯಾಸವೂ ಮಾಯ. ಮಕ್ಕಳು ಮನೆಯಲ್ಲಿ ಸಡಗರವನ್ನೂ, ನಮ್ಮ ಮನದಲ್ಲಿ ಸಂತಸವನ್ನೂ ತುಂಬಿ ನಮ್ಮನ್ನು ನಮ್ಮ ಕೆಳೆದುಹೋದ ಬಾಲ್ಯದ ಕಡೆ ನೆನಪುಗಳು ಹರಿಯುವಂತೆ ಮಾಡುತ್ತಾರೆ. ಮಕ್ಕಳೊಂದಿಗೆ ಮಗುವಾಗಿ ಆಡದವರು ಯಾರು? ಒಮ್ಮೆ ಪ್ರವಾದಿಗಳು ಮಕ್ಕಳೊಂದಿಗೆ ನಗುತ್ತಾ ಮಾತನಾಡುತ್ತಾ ಅವರೊಂದಿಗೆ ಮಕ್ಕಳಂತೆ ಬೆರೆತಿದ್ದನ್ನು ನೋಡಿ ಒಬ್ಬರು ಹೇಳಿದರು, ಪ್ರವಾದಿಗಳೇ ನನಗಂತೂ ಮಕ್ಕಳೊಂದಿಗೆ ಹೀಗೆ ಇರುವುದು ಬಿಡಿ ಅವರೊಂದಿಗೆ ತಾಳ್ಮೆಯೊಂದಿಗೆ ಇರಲೂ ಸಾಧ್ಯವಿಲ್ಲ ಎಂದು. ಅದಕ್ಕೆ ಪ್ರವಾದಿಗಳು ಆ ಕರುಣಾಮಯನಾದ ಅಲ್ಲಾಹನೇ ನಿಮ್ಮ ಮನಸ್ಸಿನಲ್ಲಿ ಕರುಣೆಯನ್ನು ಹಾಕದಿದ್ದರೆ ನನ್ನಿಂದೇನು ಮಾಡಲು ಸಾಧ್ಯ ಎಂದುತ್ತರಿಸಿದರು. ನನ್ನ ಮಗಳು ಮಾತಿನಲ್ಲಿ ಸ್ವಲ್ಪ ಹಿಂದೆಯೇ ಎನ್ನಬಹುದು. ಅವಳಿಗಿಂತ ಕೇವಲ ಎರಡು ವಾರಗಳ ಹಿರಿಯನಾದ ನನ್ನ ತಂಗಿಯ ಮಗ “ಅಹ್ಮದ್” ಮಾತಿನ ಗಣಿ. ಮನೆಯಲ್ಲಿ ಕೆಲಸಕ್ಕಿರುವ ಇಂಡೊನೆಷ್ಯಾ ದೇಶದ ಮೇಡ್ ಒಂದಿಗೆ ಸೇರಿ ಅರಬ್ಬೀ ಭಾಷೆಯನ್ನೂ ಉಲಿಯುತ್ತಾನೆ. ನನ್ನ ತಂಗಿಗೆ ತನ್ನ ಮಕ್ಕಳಿಗೆ ಕನ್ನಡದ ಚಿಕ್ಕ ಪುಟ್ಟ ಕವನ ಹೇಳಿಕೊಡುವ ಚಪಲ. ತನ್ನ ಮೊದಲ ಮಗ ” ಅಯ್ಮನ್” ಒಂದು ಎರಡು ಬಾಳೆಲೆ ಹರಡು ಎಂದು ಹಾಡುವುದನ್ನು ನಮಗೆಲ್ಲಾ ಕೇಳಿಸಿ ಸಂತಸ ಪಡುತ್ತಿದ್ದಳು. ಹಾಗೆಯೇ ಅಹ್ಮದ್ ನಿಗೂ ಒಂದು ಪದ್ಯ ಹೇಳಿಕೊಟ್ಟಾಗ ಅದನ್ನು ಬಹಳ ಬೇಗ ತನ್ನ ಅಣ್ಣನಂತೆಯೇ ಕರಗತ ಮಾಡಿಕೊಂಡ. ಮೊನ್ನೆ ಅವನ ಮನೆಗೆ ಹೋದಾಗ ಅವನ ಕವನ ಗೋಷ್ಠಿ ಜೋರಾಗಿ ನಡೆಯುತ್ತಿತ್ತು… ಡಮ್ಮರೆ ಡಮ್ಮಮ್ಮ,

ಮನೆ ಸುಟ್ಟೋಯ್ತು

ಯಾರ ಮಾನೆ

ಪೂಜಾರಿ ಮಾನೆ

ಯಾವ ಪೂಜಾರಿ

ಜುಟ್ಟು ಪೂಜಾರಿ

ಯಾವ ಜುಟ್ಟು

ಕೋಳಿ ಜುಟ್ಟು

ಯಾವ ಕೋಳಿ

ಬಾತು ಕೋಳಿ

ಯಾವ ಬಾತು

ಕೇಸರಿ ಬಾತು

ಯಾವ ಕೇಸರಿ

ತಿನ್ನೋ ಕೇಸರಿ

ಯಾವ ತಿನ್ನೋದು

ಹೊಡ್ತ ತಿನ್ನೋದು…. ಹಹಹಾ ಎಂದು ಚಪ್ಪಾಳೆ ತಟ್ಟಿಕೊಂಡು ತನಗೆ ತಾನೇ ಅಭಿನಂದಿಸಿಕೊಂಡ. ನನ್ನ ಮಗಳೋ, ಇನ್ನೂ johnny johnny yes pappa ಹೇಳಲು ಒದ್ದಾಡುತ್ತಿದ್ದಾಳೆ.

ಇತ್ತೀಚೆಗೆ ಭಾರತಕ್ಕೆ ಬಂದಿದ್ದಾಗ ಒಂದು ಲಾರಿಯ ಮೇಲೆ ತೆಲುಗುವಿನಲ್ಲಿ ಇದನ್ನು ಬರೆದಿದ್ದನ್ನು ಕಂಡೆ, ” ನಿಧಾನಮು ಪ್ರಧಾನಮು” ಎಂದು. ಅವಳ ವೇಗದ ಮಿತಿಯಲ್ಲೇ ಹೋಗಲಿ ಅಲ್ಲವೇ? ತಾಳಿದವನು ಬಾಳಿಯಾನು. ನನಗಂತೂ ತಾಳ್ಮೆ ಮಂಕರಿ ತುಂಬಾ ಇದೆ… ಕೃಪೆ ನನ್ನ ಮುದ್ದಿನ ಮಗಳು.