ನನ್ನ ತಂದೆಯವರಿಗೆ ಮೀನೆಂದರೆ ಪ್ರಾಣ. ದಿನವೂ ಬೇಕೇ ಬೇಕು ಮೀನು. ಮನೆಗೆ ಮೀನು ಬಂದ ಕೂಡಲೇ ಅದರೊಂದಿಗೆ ಬರುತ್ತವೆ ಒಂದೆರಡು ಬೆಕ್ಕುಗಳು. ಮೀನಿನ ರೆಕ್ಕೆ, ಬಾಲ ಇನ್ನೇನಾದರೂ ಉಳಿದ ತುಂಡುಗಳನ್ನು ತಿನ್ನಲು. ಇಂದು ಬಹಳ ಆಸೆಯಿಂದ ೬೦೦ ಗ್ರಾಂ ತೂಕದ ಒಂದು ಮೀನನ್ನು ಮನೆಗೆ ತಂದು ತಾಯಿಗೆ ನೀಡಿದರು. ಸ್ವಲ್ಪ ಸಮಯದ ನಂತರ ಕತ್ತಿರಿಸೋಣ ಅಂತ ಮೀನನ್ನು ತಟ್ಟೆಯ ಮೇಲಿಟ್ಟು ಫ್ರಿಜ್ನ ಮೇಲಿಟ್ಟು ಸೀರಿಯಲ್ ನೋಡಲು ಕೂತರು. ಒಂದರ್ಧ ಘಂಟೆಯ ನಂತರ ಮೀನನ್ನು ಕ್ಲೀನ್ ಮಾಡಲು ಫ್ರಿಜ್ನ ಮೇಲಿನ ತಟ್ಟೆಯನ್ನು ತೆಗೆದರೆ ತಟ್ಟೆ ಮಾತ್ರ ಇತ್ತು, ಮೀನು ಇರಲಿಲ್ಲ. ಅರ್ರ್ರೆ, ಇದೇನು ಈಗತಾನೇ ಇತ್ತ ಮೀನು ಎಲ್ಲಿ ಹೋಯಿತು ಎಂದು
ಹುಡ್ಕಿದರೆ ಸಿಗುವುದಾದರೂ ಎಲ್ಲಿ. ಬೆಕ್ಕಿನ ಉದರ ಸೇರಿತ್ತು ಮೀನು. ಕಳ್ಳ ಬೆಕ್ಕು ಅಮ್ಮ ಸೀರಿಯಲ್ಲಿನಲ್ಲಿ ಮಗ್ನರಾಗಿದ್ದನ್ನು ನೋಡಿ ಸದ್ದಿಲ್ಲದೆ ಅಷ್ಟೆತ್ತರದ ಫ್ರಿಜ್ಜಿನ ಮೇಲೆ ನೆಗೆದು ತನ್ನ ಮಿಕವನ್ನು ಎಗರಿಸಿ ಓಟ ಕಿತ್ತಿತ್ತು. ಮತ್ಸ್ಯಾ ಅಪಹರಣದ ಸುದ್ದಿಯನ್ನು ಅಮ್ಮ ಅಪ್ಪನಿಗೆ ಮುಟ್ಟಿಸಿದಾಗ ತಂದೆಗೆ ಎಲ್ಲಿಲ್ಲದ ಕೋಪ. ಬೆಳಿಗ್ಗೆ ಹನ್ನೊಂದಕ್ಕೆ ಮೀನನ್ನು ಎಗರಿಸಿಕೊಂಡು ಹೋದ ಬೆಕ್ಕು ಚೆನ್ನಾಗಿ ತಿಂದು ಒಂದು ಗಡದ್ದಾಗಿ ನಿದ್ದೆ ಹೊಡೆದು ಬಂತು ಸುಮಾರು ನಾಲ್ಕರ ಸಮಯಕ್ಕೆ ಕಳ್ಳ ನಗೆ ಬೀರುತ್ತಾ.